ಚೈತ್ರ ಹೊಸ ಕವಿತೆ: ನಮ್ಮ ಬ್ರಾಂಡಿನ ಈ ಹಕ್ಕಿಯನ್ನ ನಿಮ್ಮ ಕೈಗೆ ತೆಗೆದುಕೊಳ್ಳಿ

ಚೈತ್ರ

ಯಾರೂ ಯಾರಿಗೂ ಇಲ್ಲದ ಪರಿಸ್ಥಿತಿಯೇ? ನಿಜಕ್ಕೂ ದಿನ

ಇಷ್ಟು ಕೆಟ್ಟಿದೆಯೇ? ಬರೀ ಬೇಡದ ದಿನಗಳೇ ಬರುತ್ತಿವೆಯೇ?

ಹಾಗಿದ್ದರೆ ನಮ್ಮ ಬ್ರಾಂಡಿನ ಈ ಹಕ್ಕಿಯನ್ನ ನಿಮ್ಮ ಕೈಗೆ ತೆಗೆದುಕೊಳ್ಳಿ

ಬರೀ ಒಣದಿನವೇ, ಬೇಡದ ವಿಚಾರಗಳೇ ತಲೆಗೆ ಬರುತ್ತಿವೆಯೇ?

ಹಾಗಿದ್ದರೆ ಇಲ್ಲಿದೆ ಈ ಮರ, ನಿಮಗಾಗಿ. ಕಡಿಯಿರಿ, ಬೇಕಿದ್ದರೆ

ಒಣ ಆರಾಮ ಕುರ್ಚಿಯಾಗಿಸಿ ಪವಡಿಸಿ, ಆರಾಮಿಸಿ, ನಿದ್ರಿಸಿ

ಕೇವಲ ನಿಮಗಾಗಿ, ಇಂದಿಗೆ, ಇಂದಿಗೆ ಮಾತ್ರ. ನಾಳೆ ಬೇರೆಲ್ಲೋ

ಅಮೆಝಾನ್‌ ಕಾಡಿನಲ್ಲಿ ಸೋಯಾ ಬೆಳೆಸಿ ನಿಮಗಾಗಿ, ನಿಮ್ಮ

ಹಸುಗೂಸಿಗಾಗಿ, ತರುತ್ತೇವೆ ನಾವು, ನಾವು, ನಿಮ್ಮವರೇ.

ನೋಡಿಲ್ಲವೇ ಟೀವಿಯಲ್ಲಿ, ಅಲ್ಲಿ, ಇಲ್ಲಿ, ಎಲ್ಲೆಲ್ಲೂ

ನಿಮಗಾಗಿ ಎಳೆ ಹುಡುಗಿಯರನ್ನೂ, ಪ್ರಬುದ್ಧರನ್ನೂ

ಹಿಂಡಿ ಹಿಪ್ಪೆಯಾಗಿಸಿ, ಜಗಳವಾಡಿಸಿ, ನಿಮಗಾಗಿ ತಂದುಕೊಟ್ಟಿದ್ದೇವೆ.

ತಿಂದುಕೊಟ್ಟಿದ್ದೆವೆ, ಉಣಬಡಿಸಿದ್ದೇವೆ ಹಕ್ಕಿಯಂತೆ. ತೊಡೆಮಾಂಸ

ತಲೆ, ಕೈಕಾಲು, ಮೊಲೆ ಪೃಷ್ಠ, ಎಲ್ಲ. ಬೇಡವೇ

ನಿಮಗೆ ಈ ಎಳೆಮಗು, ಈಗ ಮಾತ್ರ ರುವಾಂಡಾದಿಂದ ತಂದಿದ್ದು.

ಇಲ್ಲ ನಿಮ್ಮ ಮನೆಯ ಪಕ್ಕದ್ದೂ ಆಗಿರಬಹುದು, ನಿಮ್ಮದೂ….

ಹೇಗಿದೆ, ಈ ವೈಖರಿ, ಈ ಹೀರೋಯಿನ್ನಿನ ಪೋಸು, ಹೀರೋನ

ಈ ಬೈಕು, ಅಂಗಸೌಷ್ಠವ? ಬೇಡವೇ ನಿಮಗೇ ಈ ಎಲ್ಲದೂ?

ಬನ್ನಿ ಬನ್ನಿ, ಬೇಗ ಬೇಗ, ಸೀಟುಗಳೂ ಇವೆ, ಎಂಜಿನಿಯರಿಂಗು

ಮದ್ರಾಸು, ಬೆಂಗಳೂರಿನದು. ಮೆಡಿಕಲ್ಲು, ವೆಲ್ಲೂರಿನದು. ಬೇಡವೇ?

ನೀವು ಇಸ್ರೋದಲ್ಲೋ, ದೇಶಕ್ಕಾಗಿಯೋ ಕೈಜೋಡಿಸಿ ಕೆಲಸಮಾಡಿ

ತಂದುಕೊಟ್ಟಿದ್ದೀರಿ ನಮಗೆ ಈ ರೊಕ್ಕ, ನಾವದನ್ನ ಹಾಳು ಮಾಡಿಯೇವೇ?

ಕೊಡುವೆವು ನಿಮಗೆ ಎಲ್ಲವನ್ನೂ. ನೀವು ಸಾಫ್ಟ್ವೇರ್ನವರಾದರೂ ಸರಿ.

ನಿಮ್ಮ ಮನೆಯ ಮುಂದಿನ ಆ ಮರ, ಕೊಟ್ಟುಬಿಡಿ ಅದನ್ನ ನಮಗೆ

ತೆಗೆದುಕೊಳ್ಳುವರು ಕಾರ್ಪೋರೇಶನ್ನಿನವರು ಇಲ್ಲದಿದ್ದರೆ

ದೇಶಸೇವೆಗೆ ಉಪಯೋಗವಾಗಲಿ ಅದೂ, ಪ್ರಧಾನಮಂತ್ರಿಗಳ ಕುರ್ಚಿಯೂ

ಆದೀತು ಅದೂ.

ಎಲೆಗಳು- ಗುಡಿಸಿ ಹಾಕುವರು ಅವನ್ನ, ಇರುವೆಗಳು ತೆಗೆದುಕೊಂಡು

ಹೋಗುವ ಮೊದಲೇ, ಅವುಗಳ ಜೊತೆಗೇ. ನೀರಿನ ಹೊಂಡ ಪಕ್ಕದ್ದು-

ಮುಚ್ಚಿ ಹಾಕಲಾಗುತ್ತದೆ ಅದನ್ನೂ- ಸುಮ್ಮನೇ ಸೊಳ್ಳೆಗಳ ವಾಸಸ್ಥಾನ.

ಕಪ್ಪೆಗಳಿಗೆ ವಟರ್ಗುಡಲು ಯಾವ ಜಾಗವೂ ಇಲ್ಲ. ಯಾಕೆ ಬೇಕು ಅದೆಲ್ಲ?

ದೇಶದ ಪ್ರಗತಿಯಾಗುತ್ತಿಲ್ಲವೇ? ಮತ್ತೆ? ಅರ್ಬನ್‌ ನಕ್ಸಲರಂತೆ ಮಾತಾಡಬೇಡಿ.

ನಕ್ಸಲರಂತೂ ಮಾತಾಡರು. ಆದಿವಾಸಿಗಳಂತೂ ಮೊದಲೇ ಇಲ್ಲ.

ಬಹುಬೇಗ ಗದ್ದೆ, ಬಯಲುಗಳು ಸೋಲಾರ್‌ ಫಾರ್ಮುಗಳಾಗಲಿವೆ.

ಮನೆ ಮನೆಗೆ ಬೆಳಕು, ಬಿಸಿ, ಚಳಿ ಎಲ್ಲ ಅದರಿಂದಲೇ. ಕಪ್ಪೆ, ಇರುವೆ,

ಮಿಡತೆ, ಗಿಡ, ಹೂವುಗಳು ಮ್ಯೂಸಿಯಂ ಸೇರಲಿವೆ.

ಪುಸ್ತಕಗಳಲ್ಲಿ ಪ್ರೀತಿ-ಪ್ರೇಮಗಳ ಜೊತೆ ನಿಸರ್ಗ, ಕಪ್ಪೆ-ಮಿಡತೆಗಳೂ ಸಿಗಲಿವೆ.

ಆಗ ನೀವು ಮನೆಯಿಂದ ಹೊರಬಂದು ನಿಮ್ಮ ಗಂಡ-ಹೆಂಡತಿಯ ಜೊತೆ

ಕ್ಯಾಟ್ ವಾಕ್‌ ಮಾಡಬಹುದು ರೋಡಿನ ಮೇಲೆ.

ಬೆಕ್ಕು-ನಾಯಿಗಳು ಮನೆಯಲ್ಲಿ ಸರಪಳಿಯಿಂದ ಕಟ್ಟಲ್ಪಟ್ಟ ಮೇಲೆ.

ಆಗ ಜಗತ್ತು ನಿಜಕ್ಕೂ ನಿಮ್ಮದೇ.

ಆಕಾಶ, ನೀರು, ನೊರೆ-ತೆರೆ ಎಲ್ಲ ನಿಮ್ಮದೇ, ಪ್ರೀತಿ ಪ್ರೇಮಗಳಂತೆ.

ನೀವು ಹಾರುವ ಬಾವಿಯೂ ನಿಮ್ಮದಾದಾಗ ಸಿಗುವ ಸಂತೋಷವೇ ಬೇರೆ.

‍ಲೇಖಕರು avadhi

July 19, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: