ಜಯಲಕ್ಷ್ಮಿ ಪಾಟೀಲ್ ಅಂಕಣ – ಬದುಕುವ ಭರವಸೆ ಉಳಿದಿಲ್ಲ ಎಂದೆನಿಸಿದಾಗ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

42

ಮಾವನವರು ತಮ್ಮ ಎರಡನೇ ರೇಡಿಯೇಷನ್ ತೆಗೆದುಕೊಳ್ಳಲು ಪುಣೆಗೆ ಬಂದಾಗ ಆಗಷ್ಟೇ ನಾನು ಗರ್ಭಿಣಿ ಎಂದು ಗೊತ್ತಾಗಿತ್ತು. ವೈದ್ಯರು, “ಈ ಸಲದ ರೇಡಿಯೇಷನ್ ನಂತರ ನೀವು ಪೂರ್ತಿ ಹುಶಾರಾಗ್ತೀರಿ. ಮತ್ತೆ ಬರುವ ಅಗತ್ಯವಿಲ್ಲ.” ಎಂದು ಹೇಳಿಕಳಿಸುವ ಮಟ್ಟಿಗೆ ಮಾವನವರ ಆರೋಗ್ಯ ಸರಿಹೋಗಿತ್ತು. ಆದರೂ ಮಾವನವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟು ರಜೆಗಳು ಇವರಿಗಿರಲಿಲ್ಲವಾದ್ದರಿಂದ, ಇವರಿಗೆ ಸಾಧ್ಯವಾಗದಿದ್ದಾಗಲೆಲ್ಲ ನಾನೇ ಕರೆದುಕೊಂಡು ಹೋಗುತ್ತಿದ್ದೆ.

ಮಾಮಾರಿಗೆ ಇದು ಬಲು ಮುಜುಗರದ ವಿಷಯವಾಗಿತ್ತು. “ನಾ ಒಬ್ಬನ ಹೋಗಿಬರ್ತೀನಿ ಬಿಡು ಗೌಡತಿ, ನೀ ಬರಬ್ಯಾಡ” ಎಂದು ಅವರು ಹೇಳುತ್ತಿದ್ದರಾದರೂ ಅವರೊಬ್ಬರನ್ನೇ ಕಳಿಸುವುದು ನನಗೆ ಯಾವುದೇ ರೀತಿಯಲ್ಲೂ ಸರಿ ಅನಿಸದ ಕಾರಣ, “ವಾಪಸ್ ಬಂದ ಮ್ಯಾಲೆ ರೆಸ್ಟ್ ಮಾಡ್ತೀನಿ ಬಿಡ್ರಿ ಮಾಮಾರ. ಏನಾಗಂಗಿಲ್ಲ” ಎಂದು ಅವರ ಜೊತೆಗೆ ಹೋಗುತ್ತಿದ್ದೆ. ಚಿಕಿತ್ಸೆ ಮುಗಿದು ಮಾಮಾರು ಊರಿಗೆ ಹೋದರು. ಮನೆಯವರಿಗೆಲ್ಲ ಕ್ಯಾನ್ಸರ್ ಗುಣವಾಗಿದೆ ಅನ್ನುವ ಸುದ್ದಿ ಅಪಾರ ನೆಮ್ಮದಿ ತಂದಿತ್ತು.

ಮುಂದೆ ತಿಂಗಳ ನಂತರ ಇನ್ನೂ ಮೂರು ತಿಂಗಳು ತುಂಬಿರಲಿಲ್ಲ, ನನ್ನ ಮೈಮೇಲೆ ತುಸು ಕೆಂಪು ಹೋದಂತಾಗಿ, ಹೆದರಿ ಈ ಮೊದಲು ತೋರಿಸಿದ ವೈದ್ಯೆಯ ಆಸ್ಪತ್ರೆಗೆ ಧಾವಿಸಿದೆವು. ಅವರು ಸ್ಕ್ಯಾನಿಂಗ್ ಮಾಡಿ ನನಗೆ ಅವಳಿ ಮಕ್ಕಳಿರುವುದಾಗಿಯೂ, ಕಳೆದ ಬಾರಿ ಮಿಸ್ ಕ್ಯಾರೇಜ್ ಆಗಿತ್ತಾದ್ದರಿಂದ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದೂ ಹೇಳಿ, ನನ್ನ ಗರ್ಭಾಶಯದ ಬಾಯಿಗೆ ಹೊಲಿಗೆ ಹಾಕಿ ಒಂದು ದಿನ ಆಸ್ಪತ್ರೆಯಲ್ಲಿ ಉಳಿಸಿಕೊಂಡು, ಜಾಗ್ರತೆಯಿಂದಿದ್ದು ಕಡ್ಡಾಯವಾಗಿ ಸಂಪೂರ್ಣ ಬೆಡ್ ರೆಸ್ಟ್ ಮಾಡಲೇಬೇಕು ಎಂದು ಹೇಳಿ ಕಳಿಸಿದರು. ಒಂದೆಡೆ ರಿಸ್ಕಿನ ಭಯವಾದರೆ ಇನ್ನೊಂದೆಡೆ ನನ್ನೊಡಲಲ್ಲಿ ಅವಳಿ ಮಕ್ಕಳಿವೆ ಎನ್ನುವ ಸಂಭ್ರಮ. ನಮ್ಮನೆಯಲ್ಲಿ ಅಲ್ಲಿಯವರೆಗೆ ಯಾರಿಗೂ ಅವಳಿ ಮಕ್ಕಳಿರಲಿಲ್ಲ.

ಹೀಗಾಗಿ ನನ್ನದು ಸ್ಪೆಷಲ್ ಕೇಸ್ ಎನ್ನುವಂಥ ಖುಷಿ. ಆದರೆ ಆ ಸಮಯದಲ್ಲಿ ಬಹುತೇಕ ಹೆಣ್ಣುಮಕ್ಕಳಿಗೆ ಆಗುವಂತೆ ಒಗ್ಗರಣೆಯ ವಾಸನೆಯಂತೂ ದೂರದ ಮಾತು, ಒಲೆಯ ಮೇಲಿನ ಕುಕ್ಕರ್ ಸೀಟಿ ಹೊಡೆದಾಗ ಅದರೊಳಗಿನ ಬೆಂದ ಅನ್ನದ ವಾಸನೆ ಬರುತ್ತಲ್ಲ ಅದೂ ಆಗದಂಥಾ ಉಬ್ಬಳಿಕೆ, ತಲೆಸುತ್ತು, ಸುಸ್ತು. ಊಟ ಸೇರುತ್ತಲೇ ಇರಲಿಲ್ಲ. ಹೀಗಾಗಿ ಬಿಜಾಪುರಕ್ಕೆ ಹೋಗಿ ಅಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳುವುದೇ ಸೂಕ್ತ ಎಂದು ನಿರ್ಧರಿಸಿ ಹೊರಟೆವು. ರಿಸ್ಕ್ ಬೇಡ ಅನ್ನುವ ಕಾರಣಕ್ಕೆ ಇವರು ಟ್ರೇನಿನ ಟಿಕೆಟ್ ತೆಗೆಸಿದ್ದರು. ಅದು ನಮ್ಮಿಬ್ಬರ ಫ಼ಸ್ಟ್ ಕ್ಲಾಸ್ ಕಂಪಾರ್ಟ್ಮೆಂಟ್ ನ ಮೊದಲ ಜರ್ನಿಯಾಗಿತ್ತು. ನಿಜ ಹೇಳ್ತೀನಿ, ಟ್ರೇನ್ ಹತ್ತುವಾಗ ಇದ್ದ ಹುರುಪು ಆ ಕಂಪಾರ್ಟ್ಮೆಂಟ್ ಹೊಕ್ಕ ಎರಡು ತಾಸಿಗೆಲ್ಲ ಠುಸ್ ಅಂದಿತ್ತು. ಯಾವುದೋ ಇಕ್ಕಟ್ಟಿನ ಜಾಗದಲ್ಲಿ ನಮ್ಮನ್ನು ಕೂಡಿ ಹಾಕಿದಂತಹ ಅನುಭವ ನನಗೆ. ಪುಣೆಯಿಂದ ಸೊಲಾಪುರದವರೆಗೆ ಟ್ರೇನ್. ಅಲ್ಲಿಂದ ಟ್ಯಾಕ್ಸಿ ಮಾಡಿಕೊಂಡು ಬಿಜಾಪುರಕ್ಕೆ ಬಂದೆವು. ನಾವು ಬರುವುದು ಗೊತ್ತಿತ್ತಲ್ಲ ಮನೆಯಲ್ಲಿ, ಅವ್ವ ನನಗೇನು ಬೇಕೆಂದು ಕೇಳಿ ಸರಿಯಾಗಿ ನಾವು ಮನೆ ತಲುಪುವ ಹೊತ್ತಿಗೆ ರೊಟ್ಟಿಗೆ ಹಂಚಿಟ್ಟು ಬಿಸಿ ಬಿಸಿ ರೊಟ್ಟಿ ಮಾಡುತ್ತಿದ್ದಳು. ನಾನು, “ಬಿಸಿರೊಟ್ಟಿ, ಬೆಣ್ಣಿ ಮತ್ತು ಕಲ್ಲಾನ ಚಟ್ನಿ (ಕಲ್ಬತ್ತದಲ್ಲಿ ಅರೆದ ಕೆಂಪು ಮೆಣಸಿನಕಾಯಿ ಚಟ್ನಿ) ತಿನಬೇಕ್ ಅನ್ಸಾಕತ್ತತಿ ಬೇ” ಅಂದಿದ್ದೆ. ಅವ್ವ ತಾಜಾ ಬೆಣ್ಣೆ ಕಡೆದು, ಚಟ್ನಿ ಅರೆದಿಟ್ಟು ರೊಟ್ಟಿ ಮಾಡುತ್ತಿದ್ದಳು. ಹೋಗಿದ್ದೇ ಕೈಕಾಲು ಮುಖ ತೊಳೆದು ಸೀದಾ ರೊಟ್ಟಿಬುಟ್ಟಿಗೆ ಕೈ ಹಾಕಿದ್ದೆ ನಾನು. ಅಂದು ನಾನು ಅಡ್ರಾಶಿ ತಿಂದ ಬಗೆ ಇದೆಯಲ್ಲ ಅದಿವತ್ತಿಗೂ ನನಗೆ ಈಗಷ್ಟೇ ಉಂಡು ಕೈತೊಳೆದಷ್ಟು ಸ್ಪಷ್ಟವಾಗಿ ನೆನಪಿದೆ. ತುಂಬಾ ತೃಪ್ತಿಯಿಂದ ಉಂಡಿದ್ದೆ. ಅಷ್ಟು ಬಯಕೆ ಕಾಡಿತ್ತು. ಅದೇ ಕೊನೆ ಮುಂದೆ ಹೆರಿಗೆಯಾಗುವವರೆಗೆ ಆ ಥರದ ಬಯಕೆ ಬೇರೆ ಯಾವ ಆಹಾರದ ಮೇಲೂ ಹುಟ್ಟಲಿಲ್ಲ! ಅದೇ ರೊಟ್ಟಿ ಬೆಣ್ಣೆ ಚಟ್ನಿಯ ಮೇಲೂ ಸಹ.

ಎಲ್ಲ ಸರಿಹೋಗಿದೆ ಅನ್ನುವ ಹುಮ್ಮಸಿನಲ್ಲಿ ನಮ್ಮ ಮಾವನವರು ಎಡಗೈಯಿಂದ ಮೇಲೆ ಭಾರ ಹೊತ್ತ ಸಂದೂಕಕೊಂದನ್ನು ಎತ್ತಿದ್ದೇ ನೆಪವಾಗಿ ಮಾಯುತ್ತಿದ್ದ ಒಳಗಿನ ಗಾಯ ಮತ್ತೆ ಹಸಿಯಾಗಿ ಕ್ಯಾನ್ಸರ್, ‘ನಾನಿನ್ನೂ ಸಂಪೂರ್ಣ ಮಾಯವಾಗಿಲ್ಲ ಇಲ್ಲೇ ಇದ್ದೇನೆ’ ಎಂದು ತನ್ನ ಕೋರೆಹಲ್ಲುಗಳನ್ನು ಝಳಪಿಸಿತು… ಈ ಬಾರಿ ಎಷ್ಟು ಹೇಳಿದರೂ ಪುಣೆಗೆ ತೋರಿಸಿಕೊಳ್ಳಲು ಹೋಗಲೊಪ್ಪದ ಮಾವನವರನ್ನು ಹುಬ್ಬಳ್ಳಿಯಲ್ಲಿ ತೋರಿಸಲೆಂದು ಕರೆದುಕೊಂಡು ಹೋಗಲು ಇವರು ಪುಣೆಯಿಂದ ಬಂದರು. ಬಿಜಾಪುರದವರೆಗೆ ಬಂದವರು, ನಾವಲ್ಲಾ ಎಷ್ಟೇ ಕೇಳಿಕೊಂಡರೂ ಒಪ್ಪದೆ, ಮನಸು ಬದಲಿಸಿ ಮಾವನವರು ಮರಳಿ ಕಲಕೇರಿಗೆ ಹೊರಟುಹೋದರು. ಊರಲ್ಲಿ ಟ್ಯಾಕ್ಸಿ ಬಂದುದನ್ನು ಕಂಡು ಪರಿಚಿತ ಜನರೆಲ್ಲ ಧಾವಿಸಿ ಬಂದಿದ್ದಾರೆ. ಈ ಮೊದಲೂ ಹೇಳಿದ್ದೆನ್ನಲ್ಲ, ಆಗ ಹಳ್ಳಿಗಳಲ್ಲಿ ಕಾರು ಬಲು ಅಪರೂಪ. ಯಾರಾದರೂ ಕೆಟ್ಟರೆ ಸತ್ತರೆ ಮಾತ್ರ ಕಾರು. ಹೀಗಾಗಿ ಧಾವಿಸಿ ಬಂದ ಎಲ್ಲರದ್ದೂ ಒಂದೇ ಪ್ರಶ್ನೆ,”ಹಿಂಗ್ಯಾಕ ಮಾಡಿದ್ರಿ ಸರ, ಹುಬ್ಬಳ್ಳಿಗೆ ತೋರಸ್ಕೊಳ್ಳಾಕಂತ ಹೋದೋರು ಹೊಡಮಳ್ಳಿ ಮಂದ್ರಿ? ಯಾಕ್ರಿ ಸೊಸಿ ನೊಡ್ಕೊಳ್ಳಂಗಿಲ್ಲ ಅಂದ್ಲೇನ್ರಿ? ಎಂಥಾಕ್ರಿ ಅಕಿ…” ಹಾಗೆಲ್ಲ ತಲೆಗೊಬ್ಬರಂತೆ ಮಾತಾಡ್ತಿರೋವಾಗ ನಮ್ಮಾವನವರು ಅವರೆಲ್ಲರಿಗೂ ಕೈಮುಗಿದು, “ದಯಮಾಡಿ ಕೈಮುಗೀತೀನಿ ನನ್ನ ಸೊಸಿಗೆ ಯಾರೂ ಏನೂ ಅನಬ್ಯಾಡ್ರಿ. ಅಕಿ ನನ್ನ ಸೊಸಿ ಅಲ್ಲ ನನ್ನ ತಾಯಿ ರೀ ಅಕಿ. ನನಗ ಒಲ್ಲ್ಯಾಗಿ ವಾಪಸ್ ಬಂದೆ.” ಎಂದರಂತೆ.

ಮುಂದೆ ಮಾವನವರು ಸಂಪೂರ್ಣ ಹಾಸಿಗೆ ಹಿಡಿದರು. ಕೆಲಸದ ಅನಿವಾರ್ಯತೆಯಿಂದಾಗಿ ಇವರು ಪುಣೆಗೆ ಮರಳಿದರು. ಕಲಕೇರಿಗೆ ಹತ್ತಿರದಲ್ಲೆ ಇರುವ ನನ್ನ ಎರಡನೇ ನಾದಿನಿ ಮತ್ತವರ ಪತಿ(ಸುಂದರಾಬಾಯಿ,ರಾಮನಗೌಡ) ಕಲಕೇರಿಗೆ ಬಂದು ಮನೆಯವರ ಜೊತೆಗೆ ನಿಂತರು. ಮಾವನವರಿಗೆ ಕಣ್ಣು ತೆರೆಯುವುದು, ಎದ್ದು ಕುಳಿತು ಉಣ್ಣುವುದೂ, ಶೌಚಕ್ಕೆ ಹೋಗುವುದೂ ಕಷ್ಟವಾಗತೊಡಗಿತು. ಆಗೆಲ್ಲ ಅವರಿಗೆ ಹೇಗಾದರೂ ನಾಲ್ಕು ತುತ್ತು ತಿನ್ನಿಸಬೇಕೆಂದು “ಇಗಾ ಗೌಡಣ್ಣ(ನನ್ನ ಪತಿ ನಿಂಗನಗೌಡ) ಬಂದ ನೋಡ್ರಿ, ಜಯಲಕ್ಷ್ಮಿ ಬಂದಾಳ ಮಾತಾಡ್ರಿಲ್ಲೆ” ಎಂದೆಲ್ಲಾ ಮಕ್ಕಳನ್ನು ಪುಸಲಾಯಿಸುವಂತೆ ಪುಸುಲಾಯಿಸಿ ಮನೆಯವರು ಊಟ ಮಾಡಿಸಿದ್ದಾರೆ. ಒಂಚೂರೂ ಬೇಸರಿಸದೇ ತೊಳೆಯುವುದು ಬಳಿಯುವುದು ಮೊದಲು ಮಾಡಿ ಅವರ ಸೇವೆಯನ್ನು ಮಾಡಿದ್ದು, ಅಕ್ಷರಶಃ ಮಗುವಿನಂತೆ ನೋಡಿಕೊಂಡಿದ್ದು ನನ್ನ ಮೂರನೇ ನಾದಿನಿ ಮಲ್ಲಮ್ಮ. ಇನ್ನು ಬದುಕುವ ಭರವಸೆ ಉಳಿದಿಲ್ಲ ಎಂದೆನಿಸಿದಾಗ ಇವರಿಗೆ ಬರಲು ಫೋನ್ ಮಾಡಿದರು.

ಪುಣೆಯಿಂದ ಬಂದ ಇವರೊಡನೆ ಯಾರೆಷ್ಟು ಹೇಳಿದರೂ ಕೇಳದೆ ನಾನೂ ಹೊರಟುನಿಂತೆ. ಅವ್ವ, ‘’ಹೋಗಿ ಬರ್ಲಿ ಬಿಡ್ರಿ ಏನಾಗಲ್ಲ, ನಿಧಾನಕ್ಕ ಕಾರ್ ಓಡ್ಸು ಅಂದ್ರಾತು ಡ್ರೈವರಗ’’ ಅಂದ್ಳು. ನಾವು ಕಲಕೇರಿಯ ಮನೆ ತಲುಪಿ ಮಾವನವರನ್ನು ಕಂಡಾಗ ಕರುಳು ಹಿಂಡಿದಂತಾಗಿಹೋಯ್ತು. ಹಾಸಿಗೆಯಲ್ಲಿ ಮಾಮಾರೆಲ್ಲಿ ಎಂದು ಹುಡುಕುವಷ್ಟು ಸೊರಗಿಬಿಟ್ಟಿದ್ದರು. ಕಣ್ಣು ಬಿಡಲಾಗುತ್ತಿರಲಿಲ್ಲ ಅವರಿಗೆ. ಮಲ್ಲಮ್ಮ, “ಯಪ್ಪಾ, ಅಣ್ಣ ವೈನಿ ಬಂದಾರ ನೋಡು” ಎಂದು ಕಿವಿಯ ಹತ್ತಿರ ಹೋಗಿ ಮತ್ತೆ ಮತ್ತೆ ಕೂಗಿದರೂ ಕೇಳದವರಂತೆ ತುಟಿಯೊಳಗೇ ಗೊಣಗುತ್ತಾ ಮಲಗಿದ್ದರು. ದಿನವೂ ಹೀಗೇ ಹೇಳಿ ಕಣ್ಣುಬಿಡಿಸುವ, ಉಣಿಸುವ ಯತ್ನಗಳು ನಡೆದಿದ್ದವಾದ್ದರಿಂದ ಇವರೆಲ್ಲ ಸುಳ್ಳು ಹೇಳುತ್ತಿದ್ದಾರೆಂದೇ ಅನಿಸಿರಬೇಕು ಅವರಿಗೆ. ಕೊನೆಗೆ ನಮ್ಮತ್ತೆಯವರು, “ಇಗಾರೀ, ಜಯಲಕ್ಷ್ಮಿ ಬಂದಾಳ ನೋಡ್ರಿಲ್ಲಿ” ಎಂದಾಗ ನಾನು, “ಮಾಮಾರ ಖರೇನ ಬಂದೀವ್ರಿ ನಾವು. ನೋಡ್ರಿಲ್ಲಿ ನಾರೀ ಜಯಲಕ್ಷ್ಮಿ”. ಎಂದು ಕೂಗಿ ಹೇಳಿದೆ. ಎರಡನೇ ಬಾರಿ ನಾನು ಹಾಗೆ ಹೇಳಿದ ಮೇಲೆ ಅವರಿಗೆ ನಂಬಿಕೆ ಬಂದು ಎದ್ದು ಕೂರಿಸಲು ಹೇಳಿದರಾದರೂ ಏಳಲಾಗಲಿಲ್ಲ.. ನಾಲ್ಕೇ ನಾಲ್ಕು ಚಮಚದಷ್ಟು ಸಜ್ಜಕ ತಿನ್ನಿಸಿದೆ ನಾನು. ಅಷ್ಟಕ್ಕೇ ಸಾಕೆನ್ನುವಂತೆ ತಲೆ ಅಲುಗಿಸಿ ಮುಕ್ಕಾಳು ನೀರು ಕುಡಿದರು. ಅಲ್ಲಿದ್ದವರೆಲ್ಲರಿಗೂ ಅಷ್ಟಾದರೂ ತಿಂದರಲ್ಲ ಅನ್ನುವ ಸಮಾಧಾನ.

ನನ್ನ ಪತಿಗೆ ಇತ್ತ ಧರಿ ಅತ್ತ ಪುಲಿ ಅನ್ನುವ ಸ್ಥಿತಿ. ನನ್ನನ್ನು ಬಿಜಾಪುರದಲ್ಲಿ ಬಿಟ್ಟು, ಮಾವನವರನ್ನು ಹುಬ್ಬಳ್ಳಿಯಲ್ಲಿನ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲು ನಿರ್ಧರಿಸಿ ಮರಳಿ ಕಲಕೇರಿ ಬಾಡಿಗೆ ಕಾರು ಮಾಡಿಕೊಂಡು ಹೋದರು. ಇವರ ಜೊತೆಗೆ ನನ್ನ ಅವ್ವ ಹೋಗಿ, ಅಲ್ಲಿಂದ ಮಾವನವರನ್ನು ಹುಬ್ಬಳ್ಳಿಗೆಂದು ಕರೆದುಕೊಂಡು ಬರುವಾಗ ಬಿಜಾಪುರ ತಲುಪುವಷ್ಟರಲ್ಲಿ, ತೀರಾ ಅಸ್ವಸ್ಥರಾಗಿ ಬಿ ಎಲ್ ಡಿ ಇ ಆಸ್ಪತ್ರೆಗೆ ಧಾವಿಸಿ ಆವರಣ ಪ್ರವೇಶಿಸಿದ ಐದು ನಿಮಿಷದಲ್ಲಿ ಮಾವನವರು ನಮ್ಮನ್ನೆಲ್ಲ ಅಗಲಿದರು…

ಹೀಗೆ ನಮ್ಮನೆಯ ಹಿರಿಯ ದೀಪವೊಂದು ತನ್ನ ಮಕ್ಕಳಿಗೆ ಅಕ್ಷರದೀಪ ಸೋಕಿಸಿ, ಬಾಳು ಬೆಳಗುವಂತೆ ಮಾಡಿ ತಾನು ದೇವರ ಜಗುಲಿ ಏರಿ ಕುಳಿತಿತು…

‍ಲೇಖಕರು Admin

August 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: