ಜಯಲಕ್ಷ್ಮಿ ಪಾಟೀಲ್ ಅಂಕಣ – ನನಗೆ ‘ಶಾಲಿನಿ’ ಎಂದು ನಾಮಕರಣ ಮಾಡಲಾಯಿತು

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯಲಿದ್ದಾರೆ.

‘ಮಾಸ್ತರ್ರೀ, ನಿಮಗೊಂದು ತಾರ್ ಬಂದೈತ್ರಿ ಬರ್ರಿ’

-ನಿಂಬಾಳದಲ್ಲಿ ನಮ್ಮ ಮನೆ ತಲಬಾಗಿಲಿಗೆ ನಿಂತು ಪೋಸ್ಟ್ ಮ್ಯಾನ್ ಹೀಗೆ ಕರೆದಾಗ ನಮ್ಮುತ್ತ್ಯಾರು (ನನ್ನ ತಂದೆಯ ತಂದೆ – ಶ್ರೀ. ಲಕ್ಷ್ಮಣ. ಎಸ್ ಅವರಾದಿ) ಮತ್ತು ಮನೆಯವರೆಲ್ಲ ಗಾಬರಿಯಿಂದ ಓಡು ನಡಿಗೆಯಲ್ಲಿ ಬಾಗಿಲಿಗೆ ಬಂದಿರಲೂ ಸಾಕು. ಆಗೆಲ್ಲ ಟೆಲಿಗ್ರಾಂ ಎಂದರೆ ಹೆಚ್ಚಾಗಿ ಸತ್ತ ಸುದ್ದಿಗಳನ್ನೇ ಹೊತ್ತು ತರುತ್ತವೆ ಎನ್ನುವಷ್ಟು ಅಂಥ ಸುದ್ದಿಗಳೇ ಹೆಚ್ಚಾಗಿರುತ್ತಿದ್ದವು.

ಪೋಸ್ಟ್ ಮ್ಯಾನ್ ಕೊಟ್ಟ ಸುದ್ದಿ ಓದಿ ನನ್ನ ಗಂಡ್ಮುತ್ತ್ಯಾ ನಗತೊಡಗಿದರಂತೆ. ಕಾರಣ ಇದಕ್ಕೂ ಮೊದಲು ಸೊಸೆಯ ಕುಬಸದ ವೇಳೆಯಲ್ಲಿ ಅವರು ಮತ್ತು ಅವರ ಬೀಗರ ನಡುವೆ ನಗೆಚಾಟಿಕೆಯಲ್ಲೇ ಪುಟ್ಟದೊಂದು ವಾದ ಹುಟ್ಟಿಕೊಂಡಿತ್ತಂತೆ. ಹುಟ್ಟುವ ಮಗು ಹೆಣ್ಣೋ ಗಂಡೋ ಎಂದು.

‘ನಮ್ಮನೇಲಿ ಇಲ್ಲಿಯವರೆಗೆ ಎಲ್ಲರಿಗೂ ಚೊಚ್ಚಿಲ ಮಗು ಗಂಡೇ ಹುಟ್ಟಿರೋದ್ರಿಂದ, ಈಗಲೂ ಗಂಡೇ ಹುಟ್ಟೋದು’ ಅಂತ ಮುತ್ತ್ಯಾ. ‘ಆದ್ರೆ ಈ ಸಲ ಮಾತ್ರ ಹಾಗಾಗೊ ಚಾನ್ಸೇ ಇಲ್ಲ ಬಿಡಿ. ಹುಟ್ಟೋದು ಹೆಣ್ಣೇ, ಬರ್ದಿಟ್ಕೊಳ್ಳಿ’, ಅಂತ ಬೀಗರು. ‘ಯಾರ ಮಾತು ನಿಜವಾಗುತ್ತೆ ನೋಡೋಣ ನನ್ನ ಮಾತೇ ನಿಜ ಆಗೋದು’ ಅಂತ ಅವ್ರು, ‘ನನ್ನ ಮಾತೇ ನಿಜ ಆಗೋದು’ ಅಂತ ಇವ್ರು!

ಕೊನೆಗೆ ‘ಹೆಣ್ಣು ಹುಟ್ಟಿದ್ರ ಟೆಲಿಗ್ರಾಂ ಮಾಡ್ತೀನಿ, ಗಂಡು ಹುಟ್ಟಿದ್ರ ಅಂತರ್ದೇಶಿ ಹಾಕ್ತೀನಿ’ ಎಂಬ ಬೀಗರ ಮಾತಿಗೆ, ‘ನೋಡೂನಂತ ಯಾರ ಮಾತ್ ಖರೆ ಆಕ್ಕತಿ’ ಎಂದು ನಗುತ್ತಾ ಮುತ್ತ್ಯಾ ನಿಂಬಾಳಕ್ಕೆ ಮರಳಿ ಬಂದಿದ್ದರಂತೆ. ಬೀಗರ ಮಾತಿನಂತೆ ಯಾದಗಿರಿಯಿಂದ ತಾರು ಬಂದಿತ್ತು. ಅದರಲ್ಲಿ ನಾನು ಹುಟ್ಟಿದ ಸುದ್ದಿ ಇತ್ತು!

ಯಾದಗಿರಿಯಲ್ಲಿ ನನ್ನ ಹೆಣ್ಮುತ್ತ್ಯಾ (ತಾಯಿಯ ತಂದೆ) ಶ್ರೀ. ರುದ್ರಗೌಡ. ವಿ. ಬಾದರದಿನ್ನಿ ಅವರು ಕೃಷಿ ಇಲಾಖೆಯ ಸಹಾಯಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಸಮಯವದು. ಆಗ ಯಾದಗಿರಿ ಅಂದರೆ ಇಂದಿನ ಕಲಬುರಗಿ ಜಿಲ್ಲೆಯ ಒಂದು ತಾಲ್ಲೂಕಾಗಿತ್ತು. ಈಗದು ಜಿಲ್ಲೆಯಾಗಿದೆ. ಕರ್ನಾಟಕದಲ್ಲೇ ಅತಿ ದೊಡ್ಡ ಕೋಟೆ ಯಾದಗಿರಿಯಲ್ಲಿದೆಯಂತೆ. ಹಾಗೇ ರಾಜ್ಯದಲ್ಲೇ ಅಧಿಕ ಬೇಳೆ ಕಾಳುಗಳನ್ನು ಬೆಳೆಯುವ ಜಿಲ್ಲೆ ಇದಾಗಿದೆಯಂತೆ. ನನಗೆ ಯಾದಗಿರಿಯ ನೆನಪು ಎಳ್ಳಷ್ಟೂ ಇಲ್ಲ. ಒಮ್ಮೆಯಾದರೂ ಅಲ್ಲಿಗೆ ಹೋಗಿಬರಬೇಕೆಂಬ ಆಸೆ ಇನ್ನೂವರೆಗೆ ಈಡೇರಿಲ್ಲ.

ನಾನು ಹುಟ್ಟಿದಾಗ ಯಾದಗಿರಿಯ ಅಂದಿನ ಅಲ್ಲಿನ ಎಂಎಲ್ಎ, ದಿ. ಲಿಂಗೇರಿ ಕೋನಪ್ಪನವರ ದೊಡ್ಡ ಬಂಗ್ಲೊ ಒಂದರಲ್ಲಿ ನನ್ನಜ್ಜ ಅಜ್ಜಿ ತಮ್ಮ ಏಳು ಜನ ಮಕ್ಕಳೊಂದಿಗೆ ಬಾಡಿಗೆ ಇದ್ದರಂತೆ. ಅವರ ಹಿರಿಯ ಮಗಳು ನನ್ನ ತಾಯಿ ಸರೋಜಿನಿ. ತಂದೆಯ ಮುದ್ದಿನ ಮಗಳು. ಅತ್ಯಂತ ಸೂಕ್ಷ್ಮ ಸ್ವಭಾವ ನನ್ನವ್ವನದು. ಮನೆಯವರೆಲ್ಲ ‘ಸರಿದು ಕೂಡು’ ಎನ್ನಲೂ ಅಳುಕುವಷ್ಟು ಸೂಕ್ಷ್ಮ.

ಅಂಥ ಮಗಳು ಹೆರಿಗೆ ನೋವಿಂದ ಅಳುತ್ತಿದ್ದರೆ ನಮ್ಮಮ್ಮ ಮತ್ತು ಮುತ್ತ್ಯಾನ ಹಾಲತ್ ಹೇಗಿದ್ದಿರಬಹುದು ಎಂದು ಊಹಿಸಿಕೊಳ್ಳಬಲ್ಲೆ ನಾನು. ರಾತ್ರಿ ಹನ್ನೆರಡಕ್ಕೆ ಶುರುವಾದ ನೋವು ಬೆಳಗಿನ ಜಾವ ೫.೨೦ಕ್ಕೆ ನಾನು ಹುಟ್ಟುವ ಮೂಲಕ ಕೊನೆಗೊಂಡಿತ್ತು. ಅಂದು ೦೮ ಜೂನ್ ೧೯೬೮. ಹುಟ್ಟಿದಾಗ ಪೂರ್ತಿ ಎಂಟು ಪೌಂಡ್ ತೂಕವಿದ್ದೆನಂತೆ! ತಾಮ್ರದ ಚೊಂಬಿನಂತೆ ಹೊಳೆವ ಒಂದೇ ಒಂದು ಕೂದಲೂ ಇರದ ತಲೆ, ಮೂಗೇ ಕಾಣದಷ್ಟು ತುಂಬುಗೆನ್ನೆಯ ಕೂಸು ನಾನು ಹುಟ್ಟಿದಾಗ.

‘ಸರೂ, ಪಡೂಲ್ಕಾಯಿ ಉದ್ದ ಬೆಳ್ಯಾಕ ಅದಕ್ಕ ದಾರ ಕಟ್ಟಿ ಕಲ್ಲ ತೂಗಿ ಬಿಡ್ತಾರ ನೋಡು, ಹಂಗ ನಿನ್ನ ಮಗಳ ಮೂಗಿಗೆ ದಾರಾ ಕಟ್ಟಿ ಕಲ್ಲ ತೂಗಿಬಿಡ್ತೀನಿ ಏನವಾ. ಆಗರ ನಿನ್ನ ಮಗಳ ಮೂಗು ಉದ್ದಾಕ್ಕತೇನ್ ನೋಡೂನು’ ಎಂದು ಮುತ್ತ್ಯಾ ಅವ್ವನಿಗೆ ತಮಾಷೆ ಮಾಡ್ತಿದ್ದರಂತೆ. ನಮ್ಮುತ್ತ್ಯಾ ಈಗಿರಬೇಕಿತ್ತು, ಫೇಸ್ಬುಕ್ ನಲ್ಲಿ ನನ್ನ ಮೂಗಿನ ಕುರಿತ ಹೊಗಳಿಕೆಯ ಕಮೆಂಟ್ಸ್ ತೋರಿಸಿ, ‘ಈಗೇನಂತಿ?’ ಎಂದು ಕಣ್ಣು ಮಿಟುಕಿಸಿ ಕೇಳಿರುತ್ತಿದ್ದೆ ಅವರನ್ನ.

ಆಗಿನ ಕಾಲದ ಜನರ ಮನೋಧರ್ಮದಂತೆ, ನನ್ನ ತಾಯಿಗೆ ಚೊಚ್ಚಿಲ ಮಗು ಗಂಡಾಗದೆ, ಹೆಣ್ಣುಮಗು ಅಂದರೆ ನಾನು ಹುಟ್ಟಿದ್ದಕ್ಕೆ ಎರಡೂ ಕಡೆಯವರಿಗೆ ಬೇಸರವಾಗಿರಲೂಬಹುದು ಎನ್ನುವುದು ನನ್ನ ಊಹೆಯಾಗಿತ್ತು. ಅದರಲ್ಲೂ ಗಂಡಿನ ಮನೆಯವರು ಸೊಸೆಯನ್ನು ಕೂತರೆ ನಿಂತರೆ ಹಂಗಿಸಿ ಆಡಿಕೊಳ್ಳುತ್ತಾರೆ ಎನ್ನುವುದನ್ನು ಬೇಕಾದಷ್ಟು ಕೇಳಿದ್ದೇವೆ ನಾವೆಲ್ಲ. ಆದರೆ ನನ್ನ ಅಜ್ಜನಾಗಲಿ, ಅಜ್ಜಿಯಾಗಲಿ ಇಲ್ಲವೇ ಸೋದರತ್ತೆಯಂದಿರೇ ಆಗಲಿ ಆ ಕುರಿತು ನನ್ನವ್ವನನ್ನು ಏನನ್ನಾದರೂ ಅನ್ನುವುದು ದೂರದ ಮಾತು, ತುಂಬಾ ಸಂಭ್ರಮದಿಂದ ನನ್ನ ಬರುವನ್ನು ಇದುರುಗೊಂಡರಂತೆ. ಯಾರ ಮನದಲ್ಲೂ ಚೊಚ್ಚಿಲು ಹೆಣ್ಣಾಗಬಾರದಿತ್ತು ಎಂದು ಬರಲೇ ಇಲ್ಲವಂತೆ. ಅವ್ವ ಸ್ಪಷ್ಟವಾಗಿ ನನ್ನ ಊಹೆಯನ್ನು ಅಲ್ಲಗಳೆಯುತ್ತಾ ತನ್ನ ಗಂಡನ ಮನೆಯವರ ಆಗಿನ ಸಂಭ್ರಮವನ್ನು ವಿವರಿಸಿದಳು. ಆಗ ಮಾತ್ರವಲ್ಲ ಯಾವತ್ತೂ ನನ್ನ ತಾಯಿಯ ಗೌರವಕ್ಕೆ ಧಕ್ಕೆ ತರುವಂಥ ಮಾತುಗಳನ್ನಾಡಿದವರಲ್ಲ ಅವರುಗಳು ಅನ್ನುವುದು ನನ್ನ ಅನುಭವದ ಮಾತು.

ನನ್ನ ತಾಯಿಯ ತವರಿನಲ್ಲಂತೂ ಸಡಗರವೋ ಸಡಗರ. ಎರಡೂ ಮನೆಗಳಲ್ಲಿ ಚೊಚ್ಚಿಲ ಮಗು ನಾನು. ಹೀಗಾಗಿ ಎರಡೂ ಮನೆಗಳಿಂದ ಎಲ್ಲರ ಅಚ್ಚಅಚ್ಚು, ಅಕ್ಕರೆ, ಉಡುಗೊರೆ ಎಲ್ಲವೂ ರಾಶಿ ರಾಶಿ ನನ್ನ ಪಾಲಿಗೆ.

ನಾನು ಹುಟ್ಟಿದಾಗ ಒಂದು ತಮಾಷೆಯ ಪ್ರಸಂಗ ನಡೆಯಿತಂತೆ. ನನ್ನ ತಾಯಿಯ ಕೊನೆಯ ತಮ್ಮ ಉಮೇಶ (ಚಲನಚಿತ್ರ ನಿರ್ದೇಶಕ; ಉಮೇಶ್ ಬಾದರದಿನ್ನಿ),

‘ಅಕ್ಕನ ಪಾಪೂನ್ನ ನಾನೂ ನೋಡ್ತೀನಿ ನನ್ನೂ ದವಾಖಾನಿಗೆ ಕರ್ಕೊಂಡು ಹೋಗ ಬೇ’

ಎಂದು ಅಮ್ಮನ ದುಂಬಾಲು ಬಿದ್ದು ಆಸ್ಪತ್ರೆಗೆ ಬಂದವನು, ಬಲು ಪ್ರೀತಿಯಿಂದ ತೊಟ್ಟಿಲಲ್ಲಿದ್ದ ನನ್ನನ್ನು ನೋಡಲು ಬಾಗಿದ್ದಾನೆ. ಅವನ ಮೇಲೆ ಅದ್ಯಾವ ಜನ್ಮದ ಸೇಡಿಟ್ಟುಕೊಂಡು ಹುಟ್ಟಿದ್ದೇನೊ ಏನೋ (ಇದು ಅವನದೇ ಡೈಲಾಗ್!), ಹಾಗೆ ಅವನು ನನ್ನನ್ನು ನೋಡಲು ಬಾಗಿದ್ದೇ, ದೊಡ್ಡದಾಗಿ ಕಣ್ಣುಬಿಟ್ಟು ಅವನನ್ನು ನೋಡಿದ್ದೆನಂತೆ. ಅಷ್ಟಕ್ಕೇ ಆಸಾಮಿ ಹೆದರಿ ತಲೆಸುತ್ತು ಬಂದು ದಬಕ್ ಎಂದು ಬಿದ್ದುಬಿಟ್ಟಿದ್ದಾನೆ!

ಬಹುಶಃ ಅವನು ಹಾಗೆ ತೊಟ್ಟಿಲೊಳಗೆ ಹತ್ತಿರಕ್ಕೆ ಬಾಗಿದ್ದ ಕಾರಣಕ್ಕೇ ನಾನು ಹೆದರಿಕೆಯಿಂದ ಕಣ್ಣು ಅಗಲ ಮಾಡಿದ್ದಿರಬಹುದು. ಅದನ್ನೋಡಿ ತಾನೂ ಹೆದರಿ ಹಾಗೆ ತಲೆ ಸುತ್ತಿ ಬಿದ್ದಿರುವ ಸಾಧ್ಯತೆಯೇ ಹೆಚ್ಚು ಎನ್ನುವುದು ನನ್ನ ವಾದ. ಏನೇ ಅನ್ನಿ, ಎಳೆ ಮಗುವೊಂದನ್ನ ನೋಡಿ, ಹೆದರಿ ತಲೆ ಸುತ್ತು ಬಂದು ಬಿದ್ದಿದ್ದು ಜಗತ್ತಿನ ಇತಿಹಾಸದಲ್ಲೇ ಇದೇ ಮೊದಲು ಮತ್ತು ಕೊನೆಯದ್ದಾಗಿರಬೇಕು!

ಈಗಲೂ ಅವಕಾಶ ಸಿಕ್ಕಾಗಲೆಲ್ಲ ಇದನ್ನು ಉದಾಹರಣೆಯಾಗಿ ಹೇಳುತ್ತಾ, ‘ಹುಟ್ಟುತ್ಲೇ ರಾಕ್ಷಸಿ ನೀನು!’ ಎಂದೆನ್ನುತ್ತಾ ಸತಾಯಿಸುತ್ತಿರುತ್ತಾನೆ ಉಮೇಶ್ ಮಾಮಾ. ಪ್ರತಿಯಾಗಿ, ‘ನೀನೆಷ್ಟು ಪುಕ್ಕಲ ಅದಿ ಅನ್ನೂದು ಇದರಿಂದಾನ ಗೊತ್ತಾಕ್ಕತಿ ನೋಡ. ಎಳೇ ಕೂಶಿನ್ ನೋಡಿನೂ ಅಂಜು ಮಂದಿ ಇರ್ತಾರಂತ ಅಂದ್ರ ಏನನಬೇಕ್ ಆ ಧೈರ್ಯಾಕ್ಕ!’ ಎಂದು ನಾನವನ ಕಾಲೆಳೆಯುತ್ತೇನೆ. ಉಮೇಶ್ ಮಾಮಾ ನನಗಿಂತ ಕೇವಲ ಐದು ವರ್ಷಕ್ಕೆ ದೊಡ್ಡವನು. ಹೀಗಾಗಿ ಅವನಲ್ಲಿ ಸಲುಗೆ ಹೆಚ್ಚು ನನಗೆ.

ನಾನು ಶಾಲೆಗೆ ಹೋಗುವಷ್ಟು ದೊಡ್ಡವಳಾದ ಮೇಲೆ, ರಾತ್ರಿ ಪಲ್ಲಂಗದ ಗೋಡೆ ಬದಿಯ ಅಮ್ಮಮ್ಮನ ತೋಳದಿಂಬಿನ ಮೇಲೆ ಮಲಗುವುದಕ್ಕಾಗಿ (ಉರುಳಿ ಕೆಳಗೆ ಬೀಳುವುದಿಲ್ಲ ಎನ್ನುವ ಭದ್ರತೆಗಾಗಿ) ಹಮೇಶಾ ನನ್ನ ಅವನ ನಡುವೆ ಜಗಳವಾಗುತ್ತಿತ್ತು. ‘ನಾನು ಸಣ್ಣವಳು ಮತ್ತು ಅವ್ವಾ ಅಪ್ಪನಿಂದ ದೂರ ಇರುವವಳು. ಹೀಗಾಗಿ ನನಗೆ ಆ ಜಾಗ’ ಎನ್ನುವ ಅಮ್ಮನ ತೀರ್ಪಿನಿಂದ ಜಗಳ ಅಂತ್ಯಗೊಂಡು, ಗೋಡೆ ಬದಿಯ ಅಮ್ಮನ ತೋಳು ನನ್ನದಾಗುತ್ತಿತ್ತು. ಸಾಮ್ರಾಜ್ಯ ಗೆದ್ದ ನೆಮ್ಮದಿಯಿಂದ ಆ ತೋಳ ಮೇಲೆ ತಲೆ ಇಟ್ಟು, ಅಮ್ಮನನ್ನು ಅಪ್ಪಿ ನಿದ್ದೆ ಹೋಗುತ್ತಿದ್ದೆ.

ಅಂದ ಹಾಗೆ ಅಮ್ಮಮ್ಮನನ್ನು ನಾವೆಲ್ಲ ‘ಅಮ್ಮ’ ಎಂದೂ, ಅಜ್ಜಿ ಅಂದರೆ ತಂದೆಯ ತಾಯಿಯನ್ನು ‘ಆಯಿ’ ಎಂದೂ ಕರೆಯುವುದು ವಾಡಿಕೆ. ಹಾಗೆಯೇ ಅಜ್ಜ ಎನ್ನಲು ‘ಮುತ್ತ್ಯಾ’ ಎನ್ನುತ್ತೇವೆ. ಪೂರ್ತಿ ಬಿಜಾಪುರ ಜಿಲ್ಲೆಯಲ್ಲಿ ಮತ್ತು ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಅಮ್ಮ ಮತ್ತು ಆಯಿ ಎರಡೂ ಪದಗಳು ಎರಡೂ ಕಡೆಯ ಅಜ್ಜಿಯಂದಿರನ್ನು, ಮುತ್ತ್ಯಾ ಎಂದು ಅಜ್ಜನನ್ನು ಸಂಬೋಧಿಸಲು ಬಳಸಲ್ಪಡುತ್ತವೆ. ಅಜ್ಜ ಅಜ್ಜಿ ಎಂದು ಇತ್ತೀಚಿನ ೪೦ ವರ್ಷಗಳಲ್ಲಿ ಎಲ್ಲರೂ ಬಳಸತೊಡಗಿರುವುದು.

ನಾನು ಹುಟ್ಟಿದಾಗ ಅಪ್ಪಾ ತುರವಿಹಾಳದಲ್ಲಿ ಕೆಲಸ ಮಾಡುತ್ತಿದ್ದರು. ಈಗಿ ಕೊಪ್ಪಳ ಜಿಲ್ಲೆಯಲ್ಲಿರುವ ತುರವಿಹಾಳ ಆಗ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನಲ್ಲಿತ್ತು. ನನ್ನಜ್ಜ ನನ್ನ ಜನನದ ಸುದ್ದಿಯನ್ನು ತಿಳಿಸುತ್ತಾ, ಮಗುವಿಗೆ ಏನೆಂದು ನಾಮಕರಣ ಮಾಡಬೇಕು ಎಂದು ಕೇಳಿ ಪತ್ರ ಬರೆದಿದ್ದರಂತೆ. ಅಪ್ಪ ತಮ್ಮ ಸಂತೋಷವನ್ನು ವ್ಯಕ್ತಪಡಿಸಿ, ‘ಶಾಲಿನಿ’ ಎಂದು ಹೆಸರಿಡಲು ಸೂಚಿಸಿ ಮರುಪತ್ರ ಬರೆದರಂತೆ.  ಅಪ್ಪಾ ಹೇಳಿದಂತೆ ನನಗೆ ‘ಶಾಲಿನಿ’ ಎಂದು ನಾಮಕರಣ ಮಾಡಲಾಯಿತು.

‍ಲೇಖಕರು Avadhi

June 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ವಿಶ್ವನಾಥ ಎನ್ ನೇರಳಕಟ್ಟೆ

    ನಮಸ್ತೆ ಮೇಡಮ್. ನಿಮ್ಮ ಜನನದ ಸಂದರ್ಭವನ್ನು ತಿಳಿಹಾಸ್ಯದ ಮೂಲಕ ನಿರೂಪಿಸಿದ್ದೀರಿ. ಚೆನ್ನಾಗಿದೆ ಬರಹ.

    ಪ್ರತಿಕ್ರಿಯೆ
  2. Mudgal Venkatesh

    ಶಾಲಿನಿ/ಜೆಪಿ,,,,ನವಿರು ಹಾಸ್ಯದ ಕಥನದ ಭಾಷೆಗೆ ನಾ ಮನಸೋತೆ. ನೀವಿನ್ನು ಹುಟ್ಟೂರು ಯಾದಗಿರಿ ನೋಡಿಲ್ಲ ಅಂತಾ ತಿಳಿದು ಬಂತು. ಯಾದಗಿರಿಯ ಮಂಡಾಳ ಒಗ್ಗರಣಿ-ಪುಗ್ಗಿ ತಿನ್ಲಿಕ್ಕರ ನೀವು ಬರ್ಲೇ ಬೇಕು. ಆಮ್ಯಾಲ ಒಂದ್ಹೆಜ್ಜಿ ಕಲಬರಗಿಗೆ. ಶರಣಬಸಪ್ಪನ ದಶ೯ನ, ಕಲಾಕನ್, ಮಾಲ್ಪುರಿ ತಿಂದು,,,,ಹಿಂಗ ರೈಲಿಗೆ ಬಂದು ಹಂಗ ವಿಮಾನ್ದಾಗ ಹಾರ್ಕೊಂಡ ಹೋಗುವಿರಂತೆ

    ಪ್ರತಿಕ್ರಿಯೆ
  3. Akshata Deshpande

    ಓಹೋ ಶಾಲಿನಿ ನನಗೆ ಗೊತ್ತೇ ಇರಲಿಲ್ಲ
    ಈ ಹೆಸರೂ ಇಷ್ಟ ಆಯ್ತು. ಮತ್ತೆ ಜಯಲಕ್ಷ್ಮಿ ಆಗಿದ್ದು ಹೇಗೆ? ಮುಂದಿನ ಕಂತಿನಲ್ಲಿ ಹೇಳುತ್ತೀರಾ? ಓಕೇ.. ಕಾಯುವೆ.. ಮಸ್ತ್ ಬರ್ದೇರಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: