ಜಯಲಕ್ಷ್ಮಿ ಪಾಟೀಲ್ ಅಂಕಣ- ನನ್ನ ಹೈಸ್ಕೂಲಿನಲ್ಲಿ ಸಿಕ್ಕ ಒಳ್ಳೊಳ್ಳೆ ಮೇಷ್ಟ್ರು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯಲಿದ್ದಾರೆ.

20

ನಾನು ಕಲಿಯುತ್ತಿದ್ದ ಸರಕಾರಿ ಹೈಸ್ಕೂಲಿನಲ್ಲಿ ನಿಜಕ್ಕೂ ಒಳ್ಳೊಳ್ಳೆ ಮೇಷ್ಟ್ರುಗಳಿದ್ದರು. ಆದರೆ ನನ್ನ ಸಿನಿಯರ್ ಬ್ಯಾಚ್ ಮತ್ತು ಜ್ಯೂನಿಯರ್ ಬ್ಯಾಚುಗಳನ್ನು ಹೋಲಿಸಿದರೆ ಕಲಿಕೆಯಲ್ಲಿ ನಮ್ಮ ಬ್ಯಾಚೇ ಸ್ವಲ್ಪ ಸಾಧಾರಣ ಎನ್ನುವಂಥದ್ದು. ಮೇಷ್ಟ್ರುಗಳು ಹೇಳಿದ್ದರಲ್ಲಿ ಅರ್ಧದಷ್ಟೇ ನಮ್ಮ ತಲೆಗೆ ಹೋಗುತ್ತಿತ್ತು ಎನ್ನಬಹುದು. ಜೊತೆಗೆ ಸಮಾಜ ಪಾಠ ಹೇಳುತ್ತಿದ್ದ ಶಂಕ್ರಪ್ಪ ಮೇಷ್ಟ್ರಿಗೆ ಇನ್ನೇನು ನಿವೃತ್ತಿ ಜೀವನ ಹತ್ತಿರದಲ್ಲಿತ್ತಾದ್ದರಿಂದ ಅವರು ಬೇಂದ್ರ ಅಜ್ಜನ ‘ಗುರುದೇವ’ ಕವನದ ‘ನುಡಿದು ಬೇಸತ್ತಾಗ, ದುಡಿದುಡಿದು ಸತ್ತಾಗ’ ಎಂಬ ಸಾಲಿಗೆ ಹೋಲಿಕೆ ಎಂಬಂತೆ ಯಾಂತ್ರಿಕವಾಗಿ ಪಾಠ ಮಾಡುತ್ತಿದ್ದರು.

ನೀರಸ ಅವಧಿ ಅದು. ಆದರೆ ಅದರಿಂದಲೇ ನನಗೆ ಕಾದಂಬರಿಗಳನ್ನು ಓದಲು ಅನುಕೂಲವಾಗಿದ್ದು ಅನ್ನೋದೂ ಅಷ್ಟೇ ಸತ್ಯ. ವಿಜ್ಞಾನ ಪಾಠಗಳನ್ನು ಪಾಟೀಲ್ ಸರ್ ಹೇಳಿಕೊಡುತ್ತಿದ್ದರು. ಸಿಟ್ಟೇ ಬರುವುದಿಲ್ಲ ಇವರಿಗೆ ಅನ್ನುವಷ್ಟು ಸಮಾಧಾನಿ. ಲಕ್ಷ್ಮಿಬಾಯಿ ಕಿರಗಿ ಟೀಚರ್ ಹಿಂದಿ ಪಾಠ ಮಾಡುತ್ತಿದ್ದರು. ಹೈಸ್ಕೂಲು ಹೊಸತಾಗಿದ್ದರಿಂದ ಮಾಧ್ಯಮಿಕ ಶಾಲೆಯಲ್ಲಿ ನಮಗೆ ಪಿಟಿ ಟೀಚರ್ ಆಗಿದ್ದ ಶಿವಶಂಕರ ರೆಡ್ಡಿ ಸರ್, ಡ್ರಾಯಿಂಗ್ ಹೇಳಿಕೊಡುತ್ತಿದ್ದ ಸರಗಣಾಚಾರಿ ಸರ್ ಇಲ್ಲೂ ಗುರುಗಳಾಗಿದ್ದರು. 

ಹೈಸ್ಕೂಲಿನಲ್ಲಿಯೂ ಒಬ್ಬ ಶಿವಶಂಕರಪ್ಪ ಮೇಷ್ಟ್ರಿದ್ದರು. ಇವರು ಗಣಿತದ ಮೇಷ್ಟ್ರು. ತುಂಬಾ ಚೆನ್ನಾಗಿ ಪಾಠ ಮಾಡುತ್ತಿದ್ದರು, ಸಂಭಾವಿತ ಜನ. ನಾನು ಒಂಬತ್ತು ಮತ್ತು ಹತ್ತನೇ ತರಗತಿಯಲ್ಲಿದ್ದಾಗ ಇವರ ಬಳಿ ಟ್ಯೂಶನ್ ಗೆ ಹೋಗುತ್ತಿದೆ. ಹತ್ತನೇ ತರಗತಿ ಅನ್ನುವ ಕಾರಣಕ್ಕೆ ನಾನೇನಾದ್ರು ಟ್ಯೂಶನ್ನಿಗೆ ಹೋಗಿದ್ದರೆ ಅದು ಗಣಿತ ಪಾಠಕ್ಕಾಗಿ ಇವರ ಬಳಿ ಮಾತ್ರ. ಇದನ್ನು ಬಿಟ್ಟರೆ ಇಂಗ್ಲಿಷಿಗೆ ನಮಗೆಲ್ಲ ಹೆಚ್ಚಿನ ಅಭ್ಯಾಸದ ಅಗತ್ಯವಿತ್ತಾದರೂ ಇಂಗ್ಲಿಷ್ ಪಾಠ ಮಾಡುವ ಬಿ.ಎಸ್ ಪಾಟೀಲ್ ಸರ್ ಬೇರೆ ಊರಿಂದ ಪಾಠ ಹೇಳಲು ಶಾಲೆಗೆ ಬರುತ್ತಿದ್ದರಾದ್ದರಿಂದ ನಮಗೆಲ್ಲ ಶಾಲೆಯಲ್ಲಿನ ಪಾಠವೆಷ್ಟೋ ಅಷ್ಟೆ ಲಭ್ಯವಾಗಿದ್ದು. ತುಂಬಾ ಹಿಂದುಳಿದ ಊರುಗಳಿಂದ ಮತ್ತು ವರ್ಗದ ವಿದ್ಯಾರ್ಥಿಗಳು ತುಂಬಾ ಜನ ನಮ್ಮ ಕ್ಲಾಸಿನಲ್ಲಿದ್ದರು. ಪಾಪ ಅವರಿಗೆಲ್ಲ ಇಂಗ್ಲಿಷು ನಮಗಿಂತ ಕಠಿಣವಾಗಿತ್ತು.

ಜೊತೆಗೆ ಊರು ಮತ್ತು ವರ್ಗದಿಂದಾಗಿ ಹುಟ್ಟಿಕೊಳ್ಳುವ ಸಹಜ ಸಂಕೋಚ, ಹಿಂಜರಿಕೆ ಸ್ವಭಾವ ಅವರನ್ನು ಅದೆಷ್ಟು ಕುಗ್ಗಿಸಿತ್ತೆಂದರೆ, ‘ನನಗಿದು ಅರ್ಥವಾಗಿಲ್ಲ, ದಯವಿಟ್ಟು ಮತ್ತೊಮ್ಮೆ ಹೇಳಿಕೊಡಿ’ ಎಂದು ಕೇಳುವುದೂ ಸಾಧ್ಯವಿರಲಿಲ್ಲ ಅವರಿಂದ. ಆ ವಯಸ್ಸಿನಲ್ಲಿ ನನಗೆ ಅವರ ಸಂಕೋಚ ಅರ್ಥವಾಗುತ್ತಿತ್ತೇ ವಿನಹ, ಹೇಗೆ ಸಹಾಯ ಮಾಡಬಹುದು ಎಂದು ತಿಳಿದಿರಲಿಲ್ಲ. ಅಟ್ಲೀಸ್ಟ್ ಅಪ್ಪಾರಿಗೆ ಹೇಳಿ ಅವರಿಗೆ ಮನೆಪಾಠಗಳಿಗೆ ಅನುಕೂಲ ಮಾಡಿಕೊಡಬಹುದಿತ್ತು.

ಈಗ ಈ ಬಗ್ಗೆ ಪಶ್ಚಾತಾಪವಾಗುತ್ತಿದೆ ನನಗೆ. ಆದರೆ ಪ್ರಯೋಜನವಿಲ್ಲ. ಯಾಕೆ ಇಷ್ಟು ಧೈರ್ಯದಿಂದ ‘ಅಪ್ಪಾರಿಗೆ ಹೇಳಿ’ ಎಂದೆನ್ನುತ್ತಿದ್ದೇನೆಂದರೆ, ಆಗೆಲ್ಲ ನಾನು ಯಾವುದರಲ್ಲಾದರೂ ಬಹುಮಾನ ಪಡೆದು, ಬಹುಮಾನದ ರೂಪದಲ್ಲಿ ಬಂದ ಹಣವನ್ನು ಅಪ್ಪಾ ಯಾವತ್ತೂ ಮನೆಗೆ ತರಗೊಡುತ್ತಿರಲಿಲ್ಲ. ಅದನ್ನಲ್ಲಿಯೇ ಬಡಮಕ್ಕಳ ಶಿಕ್ಷಣಕ್ಕಾಗಿ ಬಳಸಿಕೊಳ್ಳಿ ಎಂದು ಆಯೋಜಕರಿಗೆ ತಿಳಿಸಿ ಮರಳಿಸುವಂತೆ ಹೇಳುತ್ತಿದ್ದರಲ್ಲದೇ, ನನ್ನದೇ ಕ್ಲಾಸಿನಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಿಬ್ಬರ ಕುಟುಂಬಕ್ಕೆ ಆಗಾಗ ಆರ್ಥಿಕವಾಗಿ ನೆರವಾಗುತ್ತಿದ್ದರು. ಮತ್ತು ನಾವಲ್ಲಿದ್ದಾಗಿನಿಂದ ಅವಧೂತ ಶುಕಮುನಿ ತಾತನ ಜಾತ್ರೆಯಲ್ಲಿ ನಡೆವ ವಾಲಿಬಾಲ್ ಟೂರ್ನಾಮೆಂಟಿನಲ್ಲಿ ಗೆದ್ದ ತಂಡಕ್ಕೆ ಬಹುಮಾನದ ಮೊತ್ತ ಇಂದಿಗೂ ಅಪ್ಪಾ ಇಟ್ಟ ಡಿಪಾಸಿಟ್ ನಿಂದ ಸಲ್ಲುತ್ತದೆ. ಇಂಥ ನನ್ನಪ್ಪ ನಾನು ಕೇಳಿದ್ದರೆ ಆ ವಿದ್ಯಾರ್ಥಿಗಳಿಗೂ ಸಹಾಯ ಮಾಡುತ್ತಿದ್ದರೋ ಏನೋ, ನನಗೆ ಹಾಗೆ ಕೇಳಬೇಕೆಂದು ತೋಚಿರಲಿಲ್ಲ. 

ಈ ಹಿಂದೆಯೇ ಹೇಳಿದಂತೆ ಶಿವರಾತ್ರಿಯಂದು ಅವಧೂತ ಶುಕಮುನಿ ತಾತನ ಜಾತ್ರೆ ದೋಟಿಹಾಳದಲ್ಲಿ. ಹತ್ತನೇ ತರಗತಿಯ ಪರೀಕ್ಷೆಗಳೂ ಹತ್ತಿರವಿರುವ ಸಮಯ. ಶಿವರಾತ್ರಿಗೂ ಒಂದು ವಾರ ಮೊದಲು ಸಪ್ತಾಹ ಶುರುವಾಗುತ್ತದೆ. ಆಗ ಅಹೋರಾತ್ರಿ ‘ಓಂ ನಮಃ ಶಿವಾಯ, ಶಿವಾಯ ನಮಃ ಓಂ’  ಎಂದು ಶಿವನಾಮ ಸ್ಮರಣೆ ಭಕ್ತರಿಂದ. ದೇವಸ್ಥಾನದ ಪ್ರಾಂಗಣದ ನಟ್ಟ ನಡುವೆ ಮೈಕ್ ಒಂದನ್ನು ನೇತು ಹಾಕಿ, ಅದರ ಸುತ್ತಲೂ ಶಿವನಾಮ ಸ್ಮರಣೆ ಮಾಡುತ್ತ ಏಳೂ ದಿನ ಭಕ್ತರು ಸುತ್ತುತ್ತಿದ್ದರು. ಈಗ ಆ ವ್ಯವಸ್ಥೆ ಹಾಗೇ ಇದೆಯೋ ಇಲ್ಲವೋ ತಿಳಿದಿಲ್ಲ ನನಗೆ.

ನಮ್ಮ ಮನೆಯಲ್ಲಿ ನಾವು ಎಂಟೂ ಜನ ಮಕ್ಕಳು ದಿನವೂ ಗಂಟೆ ಅರ್ಧ ಗಂಟೆ ಈ ಭಜನೆಯಲ್ಲಿ ಪಾಲ್ಗೊಳ್ಳುತ್ತಿದ್ದೆವು. ನಿತ್ಯ ಬೆಳಗೂ ಬೈಗೂ ಗುಡಿಯಿಂದ ಲೌಡ್ ಸ್ಪೀಕರಿನಲ್ಲಿ ಹಾಕುವ, ‘ಗಜಮುಖನೆ ಗಣಪತಿಯೆ ನಿನಗೆ ವಂದನೆ’, ‘ಶರಣು ಶರಣಯ್ಯ ಶರಣು ಬೆನಕ’, ‘ಹಸಿವಾದಡೆ ಭಿಕ್ಷಾನುಗಳುಂಟು’ ಎಂಬ ಅಕ್ಕನ ವಚನ ಇತ್ಯಾದಿ ಹಾಡುಗಳು ಊರಿಗೆಲ್ಲ ಕೇಳಿಸುತ್ತಿತ್ತು. ನಮ್ಮನೆ ಗುಡಿಯ ಹಿಂದೆ ಒಂದೈವತ್ತು ಮೀಟರಿನಷ್ಟೇ ಸಮೀಪದಲ್ಲಿತ್ತಾದ್ದರಿಂದ, ಕೆಲವೊಮ್ಮೆ ನಾವು ಬೆಳಗಿನ ಸಿಹಿನಿದ್ದೆಯ ಮೂಡಲ್ಲಿದ್ದಾಗ ಯಾಕಾದರೂ ಬೆಳ್ಬೆಳಿಗ್ಗೆ ಹಾಡುಗಳನ್ನು ಹಾಕುತ್ತಾರೋ ಅನಿಸುತ್ತಿತ್ತಾದರೂ ಈಗ ಆ ಹಾಡುಗಳನ್ನು ಕೇಳಿದಾಗ ಇಲ್ಲವೇ ನೆನೆದಾಗ ಅತ್ಯಂತ ಆಪ್ತ ಭಾವ ಮನದಲ್ಲಿ ಮೂಡಿ ಮನಸಿಗೆ ಸುಖ ಎನಿಸುತ್ತದೆ. ಎಲ್ಲ ಅವಧೂತರ ಕುರಿತು ಪವಾಡಗಳಿರುವಂತೆ ಶುಕಮುನಿ ತಾತ ಪವಾಡಗಳೂ ಸುತ್ತಲ ಊರುಗಳಲ್ಲಿ ಪ್ರಸಿದ್ಧವಾಗಿವೆ.

ಬ್ರಿಟಿಷರು ತಾತನನ್ನು ಹುಚ್ಚ ಎಂದು ಪರಿಗಣಿಸಿ, ಜೈಲಲ್ಲಿ ಹಾಕಿದ್ದರೂ ಅಲ್ಲಿಂದ ಮಾಯವಾಗಿ ಮರಳಿ ದೋಟಿಹಾಳದಲ್ಲಿ ಪ್ರತ್ಯಕ್ಷವಾದ ಎಂದು, ಕೊಟ್ಟ ವಿಷವನ್ನು ಕುಡಿದೂ ಬದುಕಿ ಆರಾಮಾಗಿದ್ದ ಎಂದು, ಯಾರೋ ಇಳಕಲ್ಲಿನ ವ್ಯಾಪಾರಿ ತಾತನನ್ನು ಅವಮಾನಿಸಿದ್ದಕ್ಕೆ ಆ ಮನೆ ನಾಶವಾಯಿತೆಂದೂ ಇನ್ನ್ಯಾರದೋ ಕಟ್ಟೆಯ ಮೇಲೆ ತಾತ ಕುಳಿತು ವಿಶ್ರಾಂತಿ ತೆಗೆದುಕೊಂಡಿದ್ದಕ್ಕೆ ಆ ಮನೆತನವೇ ಉದ್ಧಾರವಾಯಿತೆಂದೂ ಹೀಗೆ ಶುಕಮುನಿ ಜೀವಂತವಿದ್ದ ಸಮಯದ ನೂರಾರು ಪವಾಡಗಳಿವೆ. ಐಕ್ಯನಾದ ನಂತರದಲ್ಲಿ ಜಾತ್ರೆಯ ಮುನ್ನ ನಡೆವ ಸಪ್ತಾಹದಲ್ಲಿ ದಿನಕ್ಕೆರಡು ಬಾರಿ ತಾತನ ಪಲ್ಲಕಿ ಉತ್ಸವ ನಡೆಯುತ್ತದೆ. ಆಗ ನೋಡಬೇಕು ದೋಟಿಹಾಳ ಮತ್ತು ಕೇಸೂರು ಅವಳಿ ಊರಗಳನ್ನು.

ಊರಿಗೆ ಊರೇ ಸಿಂಗಸರಿಸಿಕೊಂಡು ನಿಂತಂತೆ ಬೆಳಿಗ್ಗೆ ಸಂಜೆ ಎರಡೂ ಹೊತ್ತು ಮನೆಗಳ ಮುಂದೆ ಚೆಂದ ಚೆಂದದ ರಂಗೋಲಿಗಳು, ಅವರ ಪಡಸಾಲೆಗಳಲ್ಲಿ ತುಂಬಿದ ಕೊಡ, ಕಂಬಳಿ ಮತ್ತು ಆರತಿಯ ಸನ್ನದ್ದು ಬೆಳಿಗ್ಗೆ, ಸಂಜೆ ಕಾಣಸಿಗುತ್ತದೆ. ಪಲ್ಲಕ್ಕಿ ಉತ್ಸವದ ಸಮಯದಲ್ಲಿ ಪಲ್ಲಕ್ಕಿಯನ್ನು ಹೊತ್ತವರ ಅಂಕೆಯಲ್ಲಿ ಪಲ್ಲಕ್ಕಿ ಇರುವುದಿಲ್ಲ ಎನ್ನುತ್ತಾರೆ. ಪಲ್ಲಕ್ಕಿ ಎಳೆದುಕೊಂಡು ಹೋದತ್ತ ಅದನ್ನು ಹೊತ್ತವರು ಹೆಜ್ಜೆ ಹಾಕಬೇಕು. ಒಮ್ಮೊಮ್ಮೆ ಕಲ್ಲುಮುಳ್ಳುಗಳನ್ನೂ ಲೆಕ್ಕಿಸದೇ ಮುಳ್ಳುಕಂಟಿಗಳತ್ತ ಪಲ್ಲಕ್ಕಿ ಚಲಿಸುತ್ತದೆ. ಇಂಥವರ ಮನೆ ಎದುರೇ ನಿಲ್ಲುತ್ತದೆ ಎಂದು ಯಾವ ಪೂರ್ವ ಸೂಚನೆಯೂ ಇರುವುದಿಲ್ಲ.

ಪಲ್ಲಕ್ಕಿ ಬಂದು ನಿಂತು ಇಲ್ಲವೇ ಕುಳಿತು ಪೂಜೆ ಮಾಡಿಸಿಕೊಂಡ ಮನೆಯವರ ಆ ದಿನದ ಖುಷಿ ಹೇಳತೀರದು. ತಪ್ಪಿ ಯಾರದ್ದಾದರೂ ಮನೆಯ ಗೋಡೆಗೆ ಇಲ್ಲವೇ ಬಾಗಿಲಿಗೆ ಗುದ್ದಿದಲ್ಲಿ ಆ ಮನೆಯವರ ಆತಂಕವೂ ಅಷ್ಟೇ ತೀವ್ರವಾಗಿರುತ್ತದೆ. ಕಾರಣ ಹಾಗೆ ಗುದ್ದುವುದು ಅಪಶಕುನ ಎಂದು ಭಾವಿಸಲಾಗುತ್ತದೆ. ಬಹುಶಃ ಕಾಲ ಉರುಳಿದಂತೆ ಎಲ್ಲ ನಂಬಿಕೆಗಳೂ ಮೂಢನಂಬಿಕೆ ಅಥವಾ ಬರೀ ಆಚರಣೆಯಾಗಿ ಬದಲಾಗುತ್ತವೆಯೋ ಏನೋ… ಕಳೆದ ವರ್ಷ ಇದೇ ಪಲ್ಲಕ್ಕಿ ಉತ್ಸವದ ಸಮಯದಲ್ಲಿ, ಪಲ್ಲಕ್ಕಿಯನ್ನು ಹೊತ್ತವರು ಕುಡಿದು ಹುಚ್ಚಾಟ ಮಾಡಿದರು ಎನ್ನುವ ಕಾರಣಕ್ಕೆ ಅವರನ್ನು ಪೋಲಿಸರು ಬಂಧಿಸಿದರು ಎನ್ನುವುದು ಪತ್ರಿಕೆಗಳಲ್ಲಿ ಹಾಗೂ ಟಿವಿ ಚಾನಲ್ಲುಗಳಲ್ಲಿ ದೊಡ್ಡ ಸುದ್ದಿಯಾಯಿತು. ಕೆಲ ಭಕ್ತರು ಈ ಬಂಧನವನ್ನು ವಿರೋಧಿಸಿದರಂತೆ. 

ಶುಕುಮುನಿ ತಾತನ ಪವಾಡಗಳ ಬಗ್ಗೆ ಹೇಳುತ್ತಿರುವಾಗಲೇ ನನಗೆ ಮೋರಟಗಿ ಹತ್ತಿರವಿರುವ ಘತ್ತರಗಿ ಭಾಗೀರತಿಯ ಸಿಡಿ ನೆನಪಾಗುತ್ತದೆ. ಘತ್ತರಗಿ ಕಲಬುರಗಿ ಜಿಲ್ಲೆ, ಅಫಜಲಪುರ ತಾಲ್ಲೂಕಿನ ಒಂದು ಹಳ್ಳಿ. ಭೀಮಾ ನದಿಯ ದಂಡೆಯ ಮೇಲಿದೆ. ವಿಜಯಪುರ (ಬಿಜಾಪುರ) ಜಿಲ್ಲೆಯ ಮೋರಟಗಿಗೆ ಹತ್ತಿರ ಈ ಊರು. ನಾವು ಮೋರಟಗಿಯಲ್ಲಿದ್ದಾಗ ಬಾಡಿಗೆಯ ಬಂಡಿ ಕಟ್ಟಿಸಿಕೊಂಡು ಎರಡು ಮೂರು ಸಲ ಘತ್ತರಗಿಗೆ ಹೋಗಿದ್ದು ನೆನಪಿದೆ ನನಗೆ. ಭಾಗಮ್ಮನಿಗೆ ಹರಕೆ ಹೊತ್ತವರು, ತಮ್ಮ ಹರಕೆ ನೆರವೇರಿದ ನಂತರ ಘತ್ತರಗಿಗೆ ಬಂದು ಸಿಡಿ ಆಡುತ್ತಾರೆ. ಸಿಡಿ ಆಡುವುದು ಎಂದರೆ ಬೆನ್ನ ಹುರಿಗೆ ಕಿರುಬೆರಳ ಗಾತ್ರ ದಪ್ಪಗಿರುವ, ಎರಡು ಕಬ್ಬಿಣದ ಕೊಕ್ಕೆಗಳನ್ನು ಬೆನ್ನ ಹುರಿಗೆ ಚುಚ್ಚಿಸಿಕೊಂಡು ಅದಕ್ಕೆ ಹಗ್ಗ ಕಟ್ಟಿ, ಆ ಹಗ್ಗವನ್ನು ಬಂಡಿಯ ಹಿಂಭಾಗದಲ್ಲಿ ಎರಡು ಕಂಬಗಳ ಆಸರೆಯ ನಡುವೆ ಹೊಂದಿಸಿರುವ ತುಂಬಾ ಉದ್ದದ (ಬಹುಶಃ ೨೫-೩೦ ಫ಼ೂಟು) ಬಂಡಿಯ ನೊಗಕ್ಕೆ ಕಟ್ಟಿ, ನಂತರ ಆ ಬಂಡಿಯ ಮುಂದಿನ ಮಾಮೂಲು ನೊಗವನ್ನು ಒಂದಿಷ್ಟು ಜನರು ಸೇರಿ ಮೇಲೆತ್ತುತ್ತಾರೆ.

ಬಂಡಿಯಲ್ಲಿ ಸೀರೆಯಿಂದ ಮಾಡಿದ ಪುಟ್ಟ ಕೋಣೆಯೊಳಗೆ ಮಹಿಳೆಯೊಬ್ಬಳು ಆರತಿ ತಟ್ಟೆಯೊಂದಿಗೆ ಕುಳಿತುಕೊಳ್ಳುತ್ತಾಳೆ. ಆಕೆ ಸಿಡಿ ಆಡುವವರ ಸಂಬಂಧಿಯಾಗಿರುತ್ತಾಳೆ. ಸಿಡಿಯು ಗುಡಿ ತಲುವವರೆಗೂ ಕುತೂಹಲಕ್ಕೂ ಆಕೆ ತಲೆ ಎತ್ತಿ ಮೇಲೆ ನೋಡುವಂತಿಲ್ಲ. ನೋಡಿದರೆ ಸಿಡಿಯಾಡುವವರು ಕೆಳಗೆ ಬೀಳುತ್ತಾರೆ ಎಂದು ಪ್ರತೀತಿ. ಈಗ ಸಿಡಿ ಆಡುವವರು ಅಷ್ಟೆತ್ತರದಲ್ಲಿ ನೇತಾಡತೊಡಗುತ್ತಾರೆ. ಅವರ ಎದುರಿಗೆ ಆಸರೆಗೆಂದು ಹಿಡಿಯಲು ಒಂದು ಹಗ್ಗವನ್ನು ನೇತು ಹಾಕಿರುತ್ತಾರೆ. ಜಯಕಾರಗಳೊಂದಿಗೆ ನೊಗ ಹಿಡಿದವರು ಬಂದಿಯನ್ನು ಎಳೆಯುತ್ತಾ ನಡೆಯುತ್ತಾರೆ.

ಭಾಜಾ ಭಜಂತ್ರಿಗಳ ಆವೇಶದ ಬಡಿತಗಳೊಂದಿಗೆ ಬಂಡಿ ಗುಡಿಯ ಕಡೆಗೆ ಸಾಗತೊಡಗುತ್ತದೆ. ಪಾದಗಟ್ಟಿಯಿಂದ ಹೊರಟು ಭಾಗಮ್ಮನ ಗುಡಿ ತಲುಪುವವರೆಗೆ ಸಿಡಿ ಆಡುತ್ತಿರುವವರು, ಎಡಗೈಯಿಂದ ಎದುರಿಗಿರುವ ಹಗ್ಗವನ್ನು ಹಿಡಿದು, ಬಲಗೈಯಿಂದ ಉಡಿಯಲ್ಲಿ ಕಟ್ಟಿಕೊಂಡ ಚುರುಮುರಿಯನ್ನು ಮುಷ್ಟಿಯಲ್ಲಿ ತೆಗೆದುಕೊಂಡು ಭಾಗಮ್ಮನ ಹೆಸರು ಜಪಿಸುತ್ತಾ ಹಣೆಗೆ ಮುಟ್ಟಿಸಿಕೊಂಡು ಗಾಳಿಯಲ್ಲಿ ತೂರುತ್ತಿರುತ್ತಾರೆ. ಕೆಳಗೆ ಅವರ ಜೊತೆಗೆ ಬಂದವರೂ ಉಳಿದ ಭಕ್ತರೂ ಭಾಗಮ್ಮನ ಜಯಘೋಷ ಮಾಡುತ್ತಾ ಬಂಡಿಯೊಡನೆ ಸಾಗುತ್ತಾರೆ. ಗುಡಿ ತಲುಪಿದ ಮೇಲೆ ನಿಧಾನವಾಗಿ ನೊಗವನ್ನು ಕೆಳಗಿಳಿಸಿ, ಕೊಕ್ಕೆಗಳನ್ನು ತೆಗೆದು ಅಲ್ಲಿ ಭಸ್ಮ ಸವರುತ್ತಾರೆ. ಹರಕೆ ಹೊತ್ತವರು ಭಾಗಮ್ಮನಿಗೆ ನಮಸ್ಕರಿಸಿದ ಮೇಲೆ ಹರಕೆ ಸಂಪನ್ನಗೊಳ್ಳುತ್ತದೆ. 

ಮಕ್ಕಳು ಬೇಕೆಂದು ಭಾಗಮ್ಮನಿಗೆ ಹರಕೆ ಹೊತ್ತ ಕೆಲವರು ಮಗುವಾದ ಮೇಲೆ, ಕೂಸುಗಳನ್ನು ಉಡಿಯಲ್ಲಿ ಕಟ್ಟಿಕೊಂಡು ಸಿಡಿಯಾಡುತ್ತಾರೆ. ಒಂದಿಷ್ಟು ಜನ ಆಕಳ ಕರುವನ್ನು ಕಟ್ಟಿಕೊಂಡು ಸಿಡಿಯಾಡಿದ್ದಾರೆ ಎಂದೂ ಕೇಳಿರುವೆ, ಆದರದನ್ನು ಕಣ್ಣಾರೆ ಕಂಡಿಲ್ಲ ನಾನು. 

ಘತ್ತರಗಿ ಭಾಗೀರತಿಗೆ ಹೊತ್ತ ಒಂದು ಹರಕೆ ಆಗ ತುಂಬ ಜನಜನಿತವಾಗಿತ್ತು. ಒಬ್ಬಾಕೆ ಹರಕೆ ತೀರಿಸಲೆಂದು ತನ್ನ ಗಂಡ ಮತ್ತು ಸಂಬಂಧಿಕರೊಂದಿಗೆ ಬಂದಿದ್ದಳಂತೆ. ಭಾಗಮ್ಮನಿಗೆ ನಮಸ್ಕರಿಗೆ ಡೊಳ್ಳಿನವರೊಂದಿಗೆ ಗುಡಿಗೆ ಪ್ರದಕ್ಷಣೆ ಹಾಕಿ ಗುಡಿಯ ಹಿಂಭಾಗದ ಅಂಗಳಲ್ಲಿ ಬೆನ್ನ ಹುರಿಗೆ ಕೊಕ್ಕೆಗಳನ್ನು ಚುಚ್ಚಿಸಿಕೊಳ್ಳಲು ಡೊಳ್ಳೊಂದಕ್ಕೆ ಹಣೆ ಹಚ್ಚಿ ಬಾಗಿದ್ದಾಳೆ (ಇದು ಸಿಡಿಯಾಡುವ ಎಲ್ಲರೂ ಮಾಡುವ ವಿಧಾನ). ಹಾಗೆ ಬಾಗಿದ ಮೇಲೆ ತಾವು ಏನು ಹರಕೆ ಹೊತ್ತಿದ್ದೆವು ಎಂದು ಬಾಯಿಬಿಟ್ಟು ಹೇಳಬೇಕು. ಈಕೆ ಹೇಳಲಿಲ್ಲ. ಅವರಾಗೇ ಹೇಳದೆ ಕೇಳುವುದು ಉಚಿತವಲ್ಲ ಎಂದುಕೊಂಡರೇನೋ ಕೊಕ್ಕೆ ಹಾಕುವವರು, ಬೆನ್ನ ಹುರಿಗೆ ವಿಭೂತಿ ಸವರಿ ಕೊಕ್ಕೆ ಚುಚ್ಚಲು ನೋಡಿದರೆ ಕೊಕ್ಕೆ ಚರ್ಮದೊಳಗೆ ಹೋಗುತ್ತಲೇ ಇರಲಿಲ್ಲವಂತೆ.

ನಂತರ ಆಕೆ ತನ್ನ ಹರಕೆಯನ್ನು ಹೇಳಲೇಬೇಕು ಎಂದು ಖಂಡಿಸಿ ಕೇಳಿದಾಗ ಆಕೆ, ‘ಅಕ್ಕ ಸಾಯ್ಲಿ, ಅಕ್ಕನ ಗಂಡ ನನ್ನ ಮದುವೆ ಆಗ್ಲಿ’ ಎಂದು ತಾನು ಬೇಡಿಕೊಂಡಿದ್ದಾಗಿ, ಅದು ಫಲಿಸಿ ತಾನೀಗ ಹರಕೆ ತೀರಿಸಲೆಂದು ಬಂದಿರುವುದಾಗಿ ಹೇಳಿದಳಂತೆ! ಹಾಗೆ ಆಕೆ ಸತ್ಯ ನುಡಿದ ಮೇಲೆಯೇ ಕೊಕ್ಕೆ ಚುಚ್ಚಲು ಸಾಧ್ಯವಾಯಿತಂತೆ. ಕೂಡಿದ ಭಕ್ತರ ಛೀಮಾರಿಯ ನಡುವೆ ಆಕೆ ತನ್ನ ಹರಕೆ ತೀರಿಸಿದಳಂತೆ. ಇದನ್ನು ಕೇಳಿದಾಗ ಆಕೆಯ ಮೇಲೆ ಹುಟ್ಟಿಕೊಂಡ ಅಸಹ್ಯ ಇನ್ನೂ ಅಳಿದಿಲ್ಲ. ಆಕೆ ನನಗೆ ಯಾರೋ ಏನೋ ಆದರೂ ಮನುಷ್ಯತ್ವವನ್ನು ಮರೆವ ಬಯಕೆಗಳು, ಅವುಗಳನ್ನು ತೀರಿಸಿಕೊಳ್ಳುವ ಹುಕಿ, ಅದರಿಂದ ಅನುಭವಿಸುವ ಸುಖ ಯಾವ ಕಾಲಕ್ಕೂ ಅಸಹ್ಯವೇ ಸೈ. ಕೇವಲ ಘತ್ತರಗಿಯಲ್ಲಿ ಮಾತ್ರವಲ್ಲ, ಇನ್ನೂ ಕೆಲವೆಡೆ ಸಿಡಿಯಾಡುವ ಪದ್ದತಿ ಇದೆ. ಮತ್ತು ಹೆಣ್ಣು ದೇವರ ಹೆಸರಿನಲ್ಲಿಯೇ ಸಿಡಿ ಆಡಲಾಗುತ್ತದೆ. ಅಮಾನವೀಯ ಮತ್ತು ಅಪಾಯಕಾರಿ ಎನ್ನುವ ಕಾರಣಕ್ಕೆ ಸರಕಾರ ಸಿಡಿ ಆಡುವುದನ್ನು ನಿಷೇಧಿಸಿದೆಯಾದರೂ ಜನ ಈಗಲೂ ಸಿಡಿ ಆಡುವುದನ್ನು ಅನೇಕ ಕಡೆಗಳಲ್ಲಿ ನಿಲ್ಲಿಸಿಲ್ಲ!

ಮನುಷ್ಯ ತನ್ನಲ್ಲಿನ ನಂಬಿಕೆಯನ್ನು ಬಲಗೊಳ್ಳಿಸಿಕೊಳ್ಳಲು, ಕಾರ್ಯ ಸಿದ್ಧಿಗಾಗಿ, ತನ್ನನ್ನೇ ಹಿಂಸಿಸಿಕೊಳ್ಳಬಲ್ಲ, ಅದರಿಂದ ಎಂಥದ್ದೇ ಅಪಾಯವನ್ನೂ ಎಳೆದುಕೊಳ್ಳಬಲ್ಲ ಅನ್ನುವುದನ್ನು ನೆನೆದರೆ ಅದೆಂಥಾ ಅತಂತ್ರತೆ ತುಂಬಿಕೊಂಡಿದೆ ಮನುಷ್ಯರೊಳಗೆ ಅನಿಸಿ ಸೋಜಿಗವಾಗುತ್ತದೆ. ಸಿಡಿ ಆಡುವುದು, ಅಗ್ಗಿ (ಅಗ್ನಿ/ಕೆಂಡ) ಹಾಯುವುದು, ಕೆನ್ನೆ, ಕೈ, ಕಣ್ಣುಗಳಿಗೆ ಶಸ್ತ್ರ ಹಾಕಿಕೊಳ್ಳುವುದು, ಮುದ್ರೆ ಒತ್ತಿಸಿಕೊಳ್ಳುವುದು, ಮುಳ್ಳಾವುಗೆಯ ಮೇಲೆ ನಿಲ್ಲುವುದು ಇತ್ಯಾದಿಗಳೆಲ್ಲ ಮನುಷ್ಯ ತನ್ನನ್ನು ತಾನು ಹಿಂಸಿಸಿಕೊಂಡು ಆತ್ಮಸ್ಥೈರ್ಯಕ್ಕೊಂದು ದಾರಿ ಎಂದುಕೊಳ್ಳುವ ಮೂಢ ಆಸರೆಗಳು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

October 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: