ತೇಜಾವತಿ ಎಚ್ ಡಿ ಓದಿದ ‘ದಂಡಿ’

ತೇಜಾವತಿ ಎಚ್ ಡಿ

ಕವಿಗಳಾದ ರಾಗಂ (ರಾಜಶೇಖರ ಮಠಪತಿ) ಅವರ ‘ದಂಡಿ’ ಕಾದಂಬರಿಯು ಸಮುದ್ರದೆಡೆ ಸಾಗುವ ಸಾವಿರ ಹೆಜ್ಜೆಗಳ ಗುರುತು, ಸತ್ಯಾಗ್ರಹ, ಹೋರಾಟಗಳನ್ನು ನೆನಪಿಸುತ್ತದೆ. ಇದುವರೆಗೆ ದಂಡಿಯನ್ನು ಒಂದು ಸತ್ಯಾಗ್ರಹವಾಗಿ ನೋಡಿದ್ದ ನಾವೆಲ್ಲ ಕಾದಂಬರಿಯ ಪುಟ ತೆರೆದಾಗ ಅದೊಂದು ಪಾತ್ರವಾಗಿ ನಮ್ಮನ್ನು ಆವಾಹಿಸಿಕೊಳ್ಳುತ್ತ ಇಡೀ ಕರಾವಳಿ ಕರ್ನಾಟಕದ ಉಪ್ಪಿನ ಸತ್ಯಾಗ್ರಹದ ಸುತ್ತಲಿನ ಚರಿತ್ರೆಯನ್ನು ಹೇಳುತ್ತದೆ.

1930 ಜನವರಿ 26 ರಂದು ಗುಜರಾತಿನ ‘ದಂಡಿ’ಯಲ್ಲಿ ಗಾಂಧೀಜಿಯವರ ನೇತೃತ್ವದಲ್ಲಿ ನಡೆಯುವ ‘ಉಪ್ಪಿನ ಸತ್ಯಾಗ್ರಹ’ ಅದೇ ವೇಳೆ ಅವರಿಂದ ಪ್ರಭಾವಿತವಾಗಿ ಕರಾವಳಿ ಕರ್ನಾಟಕದ ಅಂಕೋಲೆಯಲ್ಲಿ 1930 ಏಪ್ರಿಲ್ 13 ರಂದು ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ನೆನಪಿಗಾಗಿ ಸಮುದ್ರದ ದಂಡೆಯಲ್ಲಿ ಉಪ್ಪು ತಯಾರಿಸುವುದರ ಮೂಲಕ ರಾಷ್ಟ್ರೀಯ ಆಂದೋಲನವಾಗಿ ಇಡೀ ದೇಶದ ಗಮನ ಸೆಳೆಯುತ್ತದೆ. ಈ ಮಹತ್ವದ ಸಂದರ್ಭದಲ್ಲಿ ರೂಪುಗೊಂಡ ಕಾದಂಬರಿಯ ನಾಯಕ ‘ದಂಡಿ’ ಉಪ್ಪಿನ ಬೆವರು, ಮಲ್ಲಿಗೆಯ ಎದೆಯನ್ನು ದಕ್ಕಿಸಿಕೊಂಡವ. ದಂಡಿಯ ತಾಯಿ ನತ್ಲಳು ಶಂಕರ ಎಂದಿದ್ದ ಮಗನ ಹೆಸರನ್ನು ಸತ್ಯಾಗ್ರಹದ ಉಪ್ಪನ್ನು ಸೆರಗಲ್ಲಿ ತಂದು ದಂಡಿಯ ಪ್ರಸಾದವೆಂದು ಬಾಯಿಗೆ ಹಾಕಿ ‘ದಂಡಿ’ ಎಂದು ಕರೆದವಳು. ಅಲ್ಲಿಂದ ಶಂಕರ ದಂಡಿಯಾಗುತ್ತಾನೆ. 

ಪತ್ತೇದಾರಿಯ ಜಾಡು ಹಿಡಿದು ಆರಂಭವಾಗುವ ಈ ಕತೆಯಲ್ಲಿ ಮಾಸ್ತಿಕಟ್ಟೆಯ ರಾಕ ಪೋಲೀಸ್ ನ ಹೆಣ ನೋಡಿದ ಗಾಬರಿ, ಭಯದೊಂದಿಗೆ ಪರಿಚಯವಾಗುತ್ತಾನೆ. ದಾರಿಯಲ್ಲಿ ಎದುರಾಗುವ ಪೋಸ್ಟಮ್ಯಾನ್ ವೆಂಕಟಪ್ಪನ ಅಸಹಾಯಕತೆ ಜೊತೆಗೆ ಫರಂಗಿಗಳು ನಮ್ಮವರನ್ನೇ ನಮ್ಮ ಮೇಲೆ ಛೂ ಬಿಟ್ಟು ಚಳುವಳಿಕಾರರನ್ನು ದಾರಿತಪ್ಪಿಸಿ, ಅಪರಾಧ ಮಾಡಿಸಿ ನಡೆಸುತ್ತಿದ್ದ ಕುತಂತ್ರಗಳಿಂದ ಏನು ಲಾಭ? ಎಂಬುದು ಅವನ ಪ್ರಾಜ್ಞಪ್ರಶ್ನೆ.

ಗಾಂಧೀಜಿಯವರು ಸತ್ಯಾಗ್ರಹಕ್ಕೆ ಕರೆಕೊಟ್ಟು ಸತ್ಯ, ಅಹಿಂಸೆಯಿಂದ ಸಹಕಾರ ಬೇಡಿದರು ಆದರೆ ಚಳುವಳಿಗಳು ಜನರ ಸಂಕಷ್ಟಕ್ಕೆ ಎಡೆಮಾಡಿಕೊಟ್ಟು ಸತ್ಯಾಗ್ರಹಿಗಳು ದಾರಿತಪ್ಪಿದ್ದು ಬೇಸರದ ಸಂಗತಿ. ಫರಂಗಿಯವರ ಕುಮ್ಮಕ್ಕಿಗೆ ಒಳಗಾಗಿ ಲತೀಫಖಾನ್, ಬಹಾದ್ದೂರ್ ಖಾನ್ ರು ಎಂಜಲಿಗೆ ಆಶಿಸುವ ದಾಸರಾಗಿ ಅದೆಷ್ಟೋ ಕುಟುಂಬಗಳು ಬೀದಿಗೆ ಬರಲು ಕಾರಣರಾಗುತ್ತಾರೆ.

ಶಾನುಭಾಗರ ಕರಿ ಹೆಣ್ಣು ನಾಯಿ ಕುಮ್ರಿಯ ಪ್ರೀತಿ ಗಮನ ಸೆಳೆದು ಮಗ ವಸಂತ ಶಾನುಭಾಗನನ್ನು ಸರಿದಾರಿಯಲ್ಲಿ ನಿರ್ದೇಶಿಸಿ ಪ್ರೀತಿ ಮತ್ತು ಕಾಳಜಿಯಿಂದ ಪೊರೆಯುವ ಪಾತ್ರವಾಗಿ ಎದುರಾಗುವ ರುಕ್ಮಿಣಿಯಮ್ಮಳ ಹಿನ್ನೆಲೆ, ಕಣಗಿಲದಲ್ಲಿ ಹೆಂಗಸರೆಲ್ಲ ಒಂದುಗೂಡಿ ‘ಕರ ಕೊಟ್ಟು ಉಪ್ಪು ತರೋದಿಲ್ಲ, ಸ್ವರಾಜ್ಯ ಬರೋವರೆಗೂ ಹೋರಾಟ ನಿಲ್ಲಿಸೋದಿಲ್ಲ’ ಎಂಬ ಘೋಷಣೆಗಳೊಂದಿಗೆ ಸತ್ಯಾಗ್ರಹಿಗಳಾಗಿದ್ದು, ರಾಣಿ ಬೊಮ್ಮಕ್ಕ ಕಾರವಾರಕ್ಕೆ ಹೋಗಿ ‘ಗವರ್ನರ್ ಗೋ ಬ್ಯಾಕ್’ ಎನ್ನುತ್ತಾ ಫರಂಗಿಯವರ ವಿರುದ್ಧ ಕಪ್ಪುಬಾವುಟ ಪ್ರದರ್ಶಿಸಿದ್ದು, ಗೆಳತಿ ತಿಪ್ಪಕ್ಕ ತಿಂಗಳ ಎಳೆಗೂಸನ್ನು ಬಗಲಲ್ಲಿ ಹಿಡಿದು ‘ಬ್ರಿಟಿಷರ ಚಾಕರಿ ಮಾಡೋ ಪೊಲೀಸರೆಲ್ಲ ನಿಜವಾದ ಗಂಡಸರೇ ಆಗಿದ್ದರೆ, ಭಿಕ್ಷೆಗಾಗಿ ದೇಶ ಮಾರೋ ಕೆಲಸ ಬಿಟ್ಟು ನಮ್ಮೊಂದಿಗೆ ಚಳುವಳಿಗೆ ಬರ್ರೋ’ ಎಂದು ಕರೆ ನೀಡುವಲ್ಲಿ ಅಲ್ಲಿನ ಹೆಣ್ಣುಮಕ್ಕಳ ದೇಶಪ್ರೇಮ, ಗಂಡು ಗುಂಡಿಗೆಯನ್ನು ನೋಡಿ ಹೆಮ್ಮೆಪಡುವಂತಹ ರೋಮಾಂಚನ ಉಂಟಾಗುತ್ತದೆ.

ಒಂದು ರಾತ್ರಿ ಇದ್ದಕ್ಕಿದ್ದಂತೆ ಶಾನುಭಾಗರ ಮನೆ ಬಾಗಿಲು ತಟ್ಟಿದ ದಂಡಿ ರುಕ್ಮಿಣಿಯಮ್ಮನ ಅಪ್ಪಣೆ ಮೇರೆಗೆ ಒಳಬಂದಾಗ ತನ್ನ ಸಂಸಾರ ಬೀದಿಗೆ ಬಂದು ತಾಯಿ ನತ್ಲಳ ಸ್ಥಿತಿಗೆ ಕಾರಣವಾದ ಲತೀಫಖಾನನನ್ನು ದ್ವೇಷದಿಂದ ಕೊಂದು ಬಂದ ವಿಷಯ ತಿಳಿದ ಗಾಂಧಿವಾದಿಯಾಗಿದ್ದ ರುಕ್ಮಿಣಿಯಮ್ಮ ತಪ್ಪಿದ ದಾರಿಯನ್ನು ಸರಿಪಡಿಸಲು ಮಾಡುವ ಹಲವು ಯೋಜನೆಗಳು, ಬಿಸಿರಕ್ತ ಕುದಿಯುವಾಗ ತಾನು ನಡೆಯುವ ದಾರಿಯೇ ಸರಿ ಎಂದುಕೊಂಡಿದ್ದ ದಂಡಿಗೆ ಲತೀಫಖಾನ್ ನ ಕೊಲೆಯ ನಂತರ ಭವಿಷ್ಯದ ದಾರಿ ಕಾಣದೆ ಭೂತ ವರ್ತಮಾನದ ನಡುವೆ ನಿಂತು ಅನುಭವಿಸುವ ದ್ವಂದ್ವತೆ, ತಳಮಳಗಳೊಂದಿಗೆ ಕಣ್ಮುಂದೆ ಹಾದು ಹೋಗುವ ತನ್ನೂರು, ತನ್ನವರು, ಬಾಲ್ಯದ ಗೆಳತಿ ವಸುಧೆ ಅವನ ನೆತ್ತರ ದಾರಿಯಲ್ಲಿ ಹೂದಂಡೆ ಅರಳಿದಂತಾಗುತ್ತದೆ.

ಸತ್ಯಾಗ್ರಹಿಗಳ ಉದ್ದೇಶ ತಮ್ಮ ಹಕ್ಕುಗಳಿಗಾಗಿ ಹೋರಾಟ, ಸ್ವಾತಂತ್ರ್ಯವಾಗಿತ್ತು. ಸೂರ್ವೆ ನಾರಾಯಣ ನಾಯಕರು ತಮ್ಮ ಯಕ್ಷಗಾನ ಕಲೆಯ ಮೂಲಕ ‘ಶನಿ ಮಹಾತ್ಮೆ’ ಪ್ರಸಂಗದ ಶನಿಯ ಪಾತ್ರಧಾರಿಯಾಗಿ ಚಳುವಳಿಕಾರರ ಫೋರ್ ಫೀಟ್ ಆದ ಜಮೀನನ್ನು ಕೊಂಡಲ್ಲಿ ಅವರನ್ನು ಸಾವಿಗೆ ದೂಡುವುದಾಗಿ ಹೆದರಿಸಿ ಅಲ್ಲಿಂದ ಮುಂದೆ ಆ ಸೀಮೆಯಲ್ಲಿ ಅನ್ಯಾಯ ತಪ್ಪಿ ಬಡವರ ಜಮೀನು ಉಳಿಸಲು ಕಾರಣವಾಗುತ್ತದೆ.

ಹಾಗೆಯೇ ಹಮ್ಮಣ್ಣ ನಾಯಕ ಕೂಡ ದೆವ್ವ ಮೈಮೇಲೆ ಬಂದಂತೆ ನಟಿಸಿ ಪೋಲೀಸರ ಕ್ಯಾಂಪ್ಗಳನ್ನು ಅಲ್ಲಿಂದ ಸ್ಥಳಾನ್ತರಿಸುತ್ತಾರೆ. ಆಗ ಪೋಲೀಸರ ಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿ ಒಂದೆಡೆ ದೈವ ಮತ್ತೊಂದೆಡೆ ಫರಂಗಿಗಳ ಒತ್ತಡ. ಕೊನೆಗೆ ಪೊಲೀಸರು ನಮ್ಮವರೇ ಆದ್ದರಿಂದ ಧಾರ್ಮಿಕ ನಂಬಿಕೆಯಿಂದಾಗಿ ದೈವಕ್ಕೆ ಶರಣಾಗುತ್ತಾರೆ. ಹೀಗೆ ‘ನಮ್ಮ ಹೋರಾಟ ಅಹಿಂಸೆಯಿಂದ ಕೂಡಿರಬೇಕು, ರಕ್ತಪಾತಕ್ಕೆ ಎಡೆ ಮಾಡಿಕೊಡಬಾರದು’ ಎಂಬ ರುಕ್ಮಿಣಿಯಮ್ಮನ ಮಾತು ದಂಡಿಯಲ್ಲಿ ನೂರಾರು ಹೊಸ ಆಲೋಚನೆಗಳಿಗೆ ದಾರಿ ಮಾಡಿಕೊಡುತ್ತದೆ.

ಮುಂದುವರೆದು ರಾಕನ ಮುಗ್ಧತೆಯ ಜೊತೆಗೆ ಅವನ ಬುದ್ಧಿವಂತಿಕೆ, ಮಾತಿನ ವೈಖರಿಗಳು ಆಪ್ತವಾಗಿ ಅವನು ಹೇಳುವ ಅಬಸಿ ದೇವರ ಪೂರ್ವ ಇತಿಹಾಸ, ಅಬಸಿ ದೇವರ ಶಕ್ತಿಯನ್ನು ಪರೀಕ್ಷಿಸಲು ಮುಂದಾಗುವ ದಂಡಿಯ ಮನದ ಗೆಳತಿಯ ಕೋರಿಕೆ ಮುಂದೆ ಒಂದು ದಿನ ಈಡೇರಿದಾಗ ಕಾಕತಾಳೀಯವೊ, ಅಬಸಿ ದೇವರ ಅನುಗ್ರಹವೋ ಅವನ ಮನಸ್ಸು ದೈವವನ್ನು ನೆನೆಯುತ್ತದೆ. ಜೊತೆ ಜೊತೆಗೆ ಹಾಲಕ್ಕಿ ಒಕ್ಕಲಿಗರ ಸಂಪ್ರದಾಯ, ಅವರ ನೋವಿಗೂ ನಲಿವಿಗೂ ಅರಳುವ ಹಾಡು – ಪಾಡು, ಕಾಡುಗಳ ಒಡನಾಟ, ಚೌಡನಾಯ್ಕನ ನಿಸ್ವಾರ್ಥ ಸೇವೆ ಇವೆಲ್ಲವನ್ನೂ ತಿಳಿಸುವ ರಾಯಗೌಡ, ಅವನ ಮಡದಿ ಸೋಮ್ನಿ, ಗುಡಿಸಲುಗಳು ಫರಂಗಿ ಸರ್ಕಾರದ ಅಟ್ಟಹಾಸಕ್ಕೆ ಅದೆಷ್ಟೋ ಸಮುದಾಯಗಳ ನಾಯಕರು ಭೂಗತರಾದ ಚಿತ್ರಣಗಳು ಸ್ಮೃತಿಪಟಲದಲ್ಲಿ ನೆಲೆಯೂರುತ್ತವೆ. ‘ಕಾರ್ವಿ, ಮೊಗೇರರಿಗೆ ಕಡಲು ಎಷ್ಟು ಮುಖ್ಯವೋ, ಅಗೇರರಿಗೆ ಉಪ್ಪಿನ ಕಟ್ಟೆಗಳು ಹೇಗೋ, ನಾಡವರಿಗೆ ಜಮೀನುಗಳು ಹೇಗೋ ಹಾಗೇ ಹಾಲಕ್ಕಿಗಳಿಗೆ ಕಾಡು’ ಈ ಸಾಲು ಪ್ರತಿಯೊಬ್ಬರ ವೃತ್ತಿ ಅವರವರ ತಾಯ್ನೆಲಗಳು ಎಲ್ಲರಿಗೂ ಶ್ರೇಷ್ಠವೇ ಆಗಿರುವ ಮಾತೃ ಹೃದಯದ ಸೆಳೆತವನ್ನೂ ಸಾರುತ್ತದೆ.

ದೇಶಾವರಿಗಳ ವೇಷತೊಟ್ಟು ‘ಕ್ವಿಟ್ ಇಂಡಿಯಾ ಚಳುವಳಿ’ಗೆ ಅಣಿಗೊಳಿಸಲು ಹಳ್ಳಿ ಹಳ್ಳಿಗಳ ತಿರುಗಿ ಕ್ರಾಂತಿಗೀತೆಗಳ ಹಾಡುತ್ತ ಯುವಶಕ್ತಿಯನ್ನು ಒಗ್ಗೂಡಿಸುತ್ತ ಹಾಲಕ್ಕಿಗಳ ಕಾಡಿಗೆ ಬರುವ ಬ್ರಾಹ್ಮಣ ವಿನಾಯಕ ಭಟ್ಟರು ದೇಶಭಕ್ತಿ ಸಮಾಜ ರಕ್ಷೆಯ ಪ್ರತೀಕವಾಗಿ ಕಾಣುತ್ತಾರೆ. ಅದೇ ಗುಂಪಿನಲ್ಲಿ ದಂಡಿಗೆ ಸಿಗುವ ತಾನು ಇಲ್ಲಿಯವರೆಗೂ ಹಂಬಲಿಸುತ್ತಿದ್ದ ಬದುಕು ವಸುಧೆ ಸಿಕ್ಕಾಗ ಅವನಲ್ಲಿ ಸಾವಿರ ರೆಕ್ಕೆಗಳು ಮೂಡುತ್ತವೆ. ಅಲ್ಲಿಂದ ವಿನಾಯಕ ಭಟ್ಟರ ಮಾರ್ಗದರ್ಶನದಲ್ಲಿ ಮತ್ತೊಂದು ಬದುಕಿನ ತಿರುವು ದೊರೆತು ಕಣಗಿಲಕ್ಕೆ ಸತ್ಯಾಗ್ರಹಿಯಾಗಿ ತಾಯಿಯ ಕನಸನ್ನು ನನಸು ಮಾಡಲು ಯುವಕರ ದಂಡಿನ ನಾಯಕನಾಗಿ ಹೊರಡುವ ದಂಡಿ ತಾನು ಇಲ್ಲಿಯವರೆಗೆ ಕಾತರಿಸಿದ್ದಾ ಕ್ಷಣಗಳಿಗಾಗಿ ಎದುರು ನೋಡುತ್ತಿದ್ದಾಗ ವಸುಧೆಯೇ ಬೆಳಕಾಗುವ ಮೂಲಕ ಅವನ ಭಾರವೆಲ್ಲ ಇಳಿದಂತಾಗಿ ಹಗುರಗುತ್ತಾನೆ.

ಬಾಲ್ಯದ ಗೆಳತಿ ವಸುಧೆಯ ಜೀವನ ವೃತ್ತಾoತವನ್ನು ತಿಳಿದಮೇಲೆ ಅವನೊಳಗೆ ಮೂಡಿದ ಪ್ರಶ್ನೆಗೆ ಉತ್ತರವಾಗಿ ಗಾಂಧೀಜಿಯ ಪ್ರಭಾವಕ್ಕೆ ಒಳಗಾಗಿದ್ದ ವಸುಧೆ ತಾನೂ ಒಬ್ಬ ಉಪ್ಪಿನ ಋಣ ತೀರಿಸಿದ ಮಹಾತ್ಮರಿಂದ ಅಭಿನಂದಿಸಿಕೊಂಡ ‘ಹಸಲರದೇವಿ’ಯಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿ ದಂಡಿ ದಂಡಿಯಾಗಲು ಸ್ಫೂರ್ತಿಯಾಗುತ್ತಾಳೆ.

ಇಡೀ ಕಾದಂಬರಿ ಫರಂಗಿಗಳ ಅಧೀನದಲ್ಲಿ ನಲುಗಿದ ಸಮುದಾಯಗಳು, ಸತ್ಯಾಗ್ರಹಗಳು ದಾರಿತಪ್ಪಿ ಎದುರಾದ ಸಂಕಷ್ಟಗಳು, ಆಮಿಷಗಳ ದಾಸರಾಗಿ ಲತೀಫಖಾನರಂತ ದೌರ್ಜನ್ಯ ಮೆರೆದ ಅಧಿಕಾರಿಗಳಿಂದ ಬೀದಿಪಾಲಾದ ಕುಟುಂಬಗಳ ಧಾರುಣ ಅಂತ್ಯ, ನತ್ಲ, ರುಕ್ಮಿಣಿಯಮ್ಮ, ಬೊಮ್ಮಕ್ಕ, ತಿಪ್ಪಕ್ಕ, ಮಾಣುದೇವಿ, ಸಾತಮ್ಮ, ಶಾರಕ್ಕ, ಇಂಕಜ್ಜಿಯರಂತಹ ಮಹಿಳಾ ಸತ್ಯಾಗ್ರಹಿಗಳ ದಿಟ್ಟ ಹೋರಾಟ, ರಾಕ ಬೊಮ್ಮರ ಪೂರ್ವ ಕತೆಗಳು, ನಿಸ್ವಾರ್ಥ ಪ್ರತಿಮೆ ಗಾಂಧಿ ಎನ್ನುವ ಶಕ್ತಿಗೆ ಒಗ್ಗೂಡುತ್ತಿದ್ದ ಸತ್ಯಾಗ್ರಹಿಗಳ ದಂಡು, ಉಪ್ಪಿನ ಮಹತ್ವ, ಕಾಬಾಳಮ್ಮ, ವಿನಾಯಕ ಭಟ್ಟರಂತಹ ಅಪರೂಪದ ಸಂಬಂಧಗಳು, ಸ್ವಾತಂತ್ರ್ಯದ ಹಿಂದಿನ ಸಹಸ್ರ ಮೆಟ್ಟಿಲ ಕಥೆ -ವ್ಯಥೆ ಮುಂತಾದವುಗಳ ನೈಜ ನಿರೂಪಣೆಯೊಂದಿಗೆ ಸಮಾಯೋಚಿತವಾಗಿ ಬಳಸಿರುವ ಕ್ರಾಂತಿಯ ಸಾಲುಗಳು, ನುಡಿಗಟ್ಟುಗಳು ಓದುಗರ ಮನಸ್ಸಿನ ಒಳಹೊಕ್ಕ ಕಾದಂಬರಿಯ ಪಾತ್ರಗಳು ನಮಗರಿವಿಲ್ಲದೆಯೇ ಗುನುಗುವಂತೆ ಮಾಡುತ್ತವೆ.

‍ಲೇಖಕರು Admin

October 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: