ಜಯಲಕ್ಷ್ಮಿ ಪಾಟೀಲ್ ಅಂಕಣ- ನನ್ನಜ್ಜಿಯನ್ನು ನೆನೆದು ಸೈಲೆಂಟಾಗಿ ಅತ್ತ ದಿನಗಳೂ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯಲಿದ್ದಾರೆ.

10

ಈ ‘ಹೊರಳು ನೋಟ’ದ ಏಳನೇ ಕಂತಿನಲ್ಲಿ ನಾನು ಬರೆದ ಮೊದಲ ಪತ್ರದ ಭಾಗದಲ್ಲಿ ಬಳಸಿದ, ‘ಅಮ್ಮ’, ‘ಅವ್ವ’ ಗಳ ಬಗ್ಗೆ ಸಾಕಷ್ಟು ಜನ ಗೊಂದಲಗೊಂಡಿರುವುದಾಗಿ message ಮಾಡಿ, ಫೋನ್ ಮಾಡಿ ತಿಳಿಸಿರುವುದರಿಂದ ಇನ್ನು ಮುಂದೆ ನನ್ನಜ್ಜಿಯನ್ನು (ಅಮ್ಮಮ್ಮ) ‘ಅಮ್ಮಾ, ಯಮ್ಮಾ’ ಎಂದೂ, ತಂದೆಯ ತಾಯಿಯನ್ನು ‘ಆಯಿ’ ಎಂದೂ ಸಂಬೋಧಿಸುವ ಸಮಯದಲ್ಲಿ ಮಾತ್ರ ಬರೆವೆ. ಆಗ ಈ ಗೊಂದಲಗಳಿರದು.

‘ಸರೂ, ಹುಡ್ಗೂರೆದ್ರೀಗೆ ಹಂಗೆಲ್ಲಾ ಮಾತಾಡಬಾರ್ದವಾ. ಅವ್ರು ಹೊರಗ ಆಡೂಮುಂದ ಇಲ್ಲಾ ಹೊರಗ ಕಳಿಸಿ ಮಾತಾಡ್ರಿ. ನೋಡದು ಕೂಸು ಎಷ್ಟ್ ಅಂಜೇತಿ’ ನನ್ನಜ್ಜಿ ಗೌರಮ್ಮ ಹೀಗೆ ಹೇಳಿದಾಗ ನನ್ನ ತಾಯಿಗೆ ಯಾವ ವಿಷಯದ ಬಗ್ಗೆ ತನ್ನವ್ವ ಹೀಗೆ ಹೇಳುತ್ತಿರೋದು ಎಂದು ತಿಳಿದಿರಲಿಕ್ಕಿಲ್ಲ. 

‘ಡಾಕ್ಟರ್ರು (ನನ್ನ ತಂದೆಯನ್ನು ಹೀಗೇ ಕರೆಯುತ್ತಿದ್ದರು ಅವರು) ಯಾರ ಮುಂದೋ, ‘ನಮ್ಮತ್ತಿಯವ್ರು ಇನ್ನಾರು ತಿಂಗ್ಳು ಬದಕಿದ್ರ ಹೆಚ್ಚು, ಕ್ಯಾನ್ಸರ್ ಬೆಳದೈತಿ ಅವ್ರ ಗರ್ಭಕೋಶದಾಗ’ ಅಂತಂದ್ರಂತ. ಅದನ್ನ ಕೇಳಿ ಪಪ್ಪಿ ಅಂಜೇತಿ.’

ಹೀಗೆ ತಾವಿನ್ನು ಆರೇ ತಿಂಗಳ ಕಾಲ ಬದುಕಿರುವುದು ಎಂದು ಈ ಮಾತಿನ ಮೂಲಕ ಗೊತ್ತಾದ ಮೇಲೂ ಸಹ ನನ್ನಜ್ಜಿ ಆ ಕುರಿತು ಹೆದರದೇ, ನನ್ನ ಬಗ್ಗೆ ಕಾಳಜಿ ತೋರಿದ್ದು ನಾನೆಂದಿಗೂ ಮರೆಯಲಾರದ ಮಾತು ಮತ್ತು ಪಾಠವೂ ಹೌದು.

ಅಪ್ಪಾ ಹಾಗೆ ತಮ್ಮ ಸ್ನೇಹಿತರ ಮುಂದೆ ಹೇಳಿದ್ದನ್ನು ಕೇಳಿ, ಬಿಜಾಪುರಕ್ಕೆ ಬಂದಾಗ ನಾನು ನನ್ನಜ್ಜಿಯನ್ನು ಅಪ್ಪಿಕೊಂಡು, ‘ಯಮ್ಮಾ, ನೀ ಸಾಯ್ತಿ ಅಂತ ಹೌದಾ? ಅಪ್ಪಾ ಅನ್ನಾಕತ್ತಿದ್ದ. ಪ್ಲೀಸ್ ಸಾಯಬ್ಯಾಡ’ ಎಂದು ಅತ್ತಿದ್ದೆ. ತೀರ ಚಿಕ್ಕವಳೇನೂ ಆಗಿರಲಿಲ್ಲ ನಾನಾಗ. ಹತ್ತು ವರ್ಷದವಳಾಗಿದ್ದೆನಾದರೂ ಹೀಗೆಲ್ಲ ಕೇಳಬಾರದು ಎನ್ನುವ ಸೂಕ್ಷ್ಮ ಅರಿತಿರಲಿಲ್ಲ ನಾನು ಎನ್ನುವುದನ್ನು ತಿಳುವಳಿಕೆ ಬಂದಾಗಿನಿಂದ ನೆನೆದಾಗಲೆಲ್ಲ ಲಜ್ಜೆಗೊಳ್ಳುತ್ತೇನೆ. ಹೊರಗೆ ಜನ ತಮ್ಮ ಸಾವಿನ ಕುರಿತು ಮಾತಾಡುತ್ತಿದ್ದಾರೆ ಎನ್ನುವುದನ್ನು ತಿಳಿದ ಮೇಲೂ, ಅದನ್ನು ಹೇಳಿ ಅಳುತ್ತಿದ್ದ ನನ್ನನ್ನು, 

‘ಹುಚ್ಚಿ! ಯಾರು ಹಂಗಂದೋರು? ನನಗೇನಾಗೇತಿ ಸಾಯಾಕ? ನಾ ನಿನ್ನ ಬಿಟ್ಟು ಎಲ್ಲೂ ಹೋಗೂದಿಲ್ಲ, ಸುಮ್ನಾಗು’ ಎಂದು ಸಮಾಧಾನ ಮಾಡಿದ್ದರು. ತಾವು ಹೇಳಿದ ಹಾಗೆ ಇವತ್ತಿಗೂ ನನ್ನೊಳಗೆ ದಯೆಯ ರೂಪದಲ್ಲಿ, ಆಪ್ತತೆಯಾಗಿ, ಬಂಧು ಪ್ರೀತಿಯ ಕರುಳಾಗಿ ಮಿಡಿಯುತ್ತ ಜೊತೆಗಿದ್ದಾರೆ. ಅನೇಕಾನೇಕ ಸಲ ಅವರ ಏಳು ಜನ ಮಕ್ಕಳಲ್ಲಿ ಯಾರಿಗಾದರು ಕಷ್ಟ ಎದುರಾದಾಗ ಇಲ್ಲವೇ ದೊಡ್ಡದೊಂದು ಸಂಭ್ರಮ ಅಪ್ಪಿದಾಗಲೆಲ್ಲ, ನನ್ನ ಕನಸಿನಲ್ಲಿ ಬಂದು ಆ ಕುರಿತು ವೇದನೆ, ಹರುಷ ವ್ಯಕ್ತಪಡಿಸುವ ಮೂಲಕ ಇಂಥವರೊಡನೆ ಏನೋ ನಡೆದಿದೆ ಎನ್ನುವ ಸೂಚನೆ ನೀಡುತ್ತಿದ್ದರು ತೀರ ಇತ್ತೀಚಿನ ೫-೬ ವರ್ಷಗಳ ಹಿಂದಿನವರೆಗೂ. ಹಾಗಾದಾಗೆಲ್ಲ ನಾನು ಬೆಳಿಗ್ಗೆ ಎದ್ದ ಕೂಡಲೇ ನನ್ನ ತಾಯಿಗೆ ಫೋನ್ ಮಾಡಿ ಕನಸನ್ನು ವಿವರಿಸಿದರೆ, ಆ ಕಡೆಯಿಂದ ಅವ್ವ ಅಚ್ಚರಿಗೊಳ್ಳುತ್ತಾ, ಹೌದು ಅವರೊಂದಿಗೆ ಹೀಗಾಯ್ತು, ಇವರೊಂದಿಗೆ ಹಾಗಾಯ್ತು ಎಂದು ನಡೆದ ಘಟನೆಗಳನ್ನು ವಿವರಿಸುತ್ತಿದ್ದಳು. ಅವು ಕನಸಿನಲ್ಲಿ ನನ್ನಜ್ಜಿ ವೇದನೆ ಪಡುತ್ತಿದ್ದ ರೀತಿಗೆ ಸರಿಯಾಗಿ ಹೊಂದಿಕೆಯಾಗುತ್ತಿದ್ದವು! ಅವ್ವ ಹೇಳುವವರೆಗೆ ನನಗೆ ಅತ್ತಲಿನ ಯಾವೊಂದು ಘಟನೆಯ ಕುರಿತೂ ಮುಂಚೆ ಗೊತ್ತಿರುತ್ತಿರಲಿಲ್ಲ.

ಅಜ್ಜಿ ಕನಸಿನಲ್ಲಿ ಸೂಚಿಸುವುದು, ನಾನದನ್ನು ಅವ್ವನೆದುರು ಹೇಳಿದಾಗ ಅವ್ವ ಹೀಗೀಗಾಯಿತು/ಆಗಿದೆಯಂತೆ ಎಂದು ವಿವರಿಸಿದಾಗಲೇ ಗೊತ್ತಾಗುತ್ತಿತ್ತು. ಕನಸುಗಳ ಈ ನಿಗೂಢತೆಯ ಬಗ್ಗೆ ನನಗೆ ಈಗಲೂ ಅಚ್ಚರಿ! ಹೀಗೆ ನನ್ನ ಕನಸಿನಲ್ಲಿ ನನ್ನಜ್ಜಿ ಬರಲು ಆರಂಭಿಸಿದ್ದು ಅವರು ತೀರಿಹೋದ ರಾತ್ರಿ.

ಅದು ೧೯೭೯ರ ಡಿಸೆಂಬರ್ ೯ರ ರಾತ್ರಿ. ಅಪ್ಪ ತಮ್ಮ ಆಫೀಸಿನದ್ದು ಯಾವುದೋ ಮೀಟಿಂಗಿಗೆಂದೋ ಇಲ್ಲಾ ಬೇರೆ ಯಾವುದೋ ಕೆಲಸಕ್ಕೋ ಬಿಜಾಪುರಕ್ಕೆ ಹೋಗಿದ್ದರು. ಮೋರಟಗಿಯಲ್ಲಿ ಮನೆಯಲ್ಲಿ ನಾವು ಎಂಟು ಜನ ಮಕ್ಕಳು (ಒಡಹುಟ್ಟಿದವರು ಐದು ಜನ ಮತ್ತು ನನ್ನ ಮೂರು ಜನ ಕಸಿನ್ಸ್) ಮತ್ತು ಅವ್ವ ಮಾತ್ರ ಇದ್ದೆವು. 

ಬಾಬು ಮಾಮಾ (ನನ್ನ ಎರಡನೇ ಸೋದರಮಾವ) ತಿಂಗಳ ಹಿಂದೆಯಷ್ಟೇ ಆರಂಭಿಸಿದ್ದ ಕಿರಾಣಿ ಅಂಗಡಿಯನ್ನು ತೋರಿಸಲೆಂದು ನನ್ನ ಮೂರನೇ ಸೋದರಮಾವ ಈರಣ್ಣ ಮಾಮಾ, ನನ್ನಜ್ಜಿಯ ಕೈಹಿಡಿದುಕೊಂಡು ನಡೆಸಿಕೊಂಡು ಹೊರಟಿದ್ದಾನೆ. ಮನೆಯ ಗೇಟಿನೆದುರು ನಾನು, ಅನಸೂಯತ್ತಿ (ಅಶೋಕ ಮಾಮಾನ ಶ್ರೀಮತಿ) ಮತ್ತು ಬಾಬು ಮಾಮಾ, ಅವರು ಹೋಗುವುದನ್ನು ನೋಡುತ್ತಾ ನಿಂತಿದ್ದೇವೆ. ಚಿತ್ತವಾಡಗಿ ಅವರ ಮನೆಯವರೆಗೆ ನಿಧಾನಕ್ಕೆ ನಡೆದ ನನ್ನಜ್ಜಿ ತಿರುಗಿ ನಿಂತು, 

‘ಅನ್ನೂ, ಬಾಬು, ಪಪ್ಪಿ, ಮನಿ ಕಡೆ ಜ್ವಾಕಿ’ ಎಂದರು.

ಬಾಬು ಮಾಮಾ ನಗತೊಡಗಿದ. ‘ಇಲ್ಲೇ ಅಂಗಡಿಗೆ ಹೊಂಟೀದಿ. ಅಷ್ಟಕ್ಕ ಎಷ್ಟರ ಕಾಳ್ಜಿ ಬೇ ನಿನಗ ಮನಿ ಕಡೆ. ಹೋಗಿ ಬಾ ನೀ ಸಾವ್ಕಾಸ್’ ಎಂದವನು ಮೆತ್ತಗೆ ಅನಸೂಯತ್ತಿಗೆ ‘ನಮ್ಮವ್ವ, ಪಪ್ಪಿಗೆ ಮನಿ ಕಡೆ ಜ್ವಾಕಿ ಅನ್ನಾಕತ್ತಾಳ ನೋಡು ಅನ್ನು. ಏನ್ ಮಾಹಾ ಹಿರೇಮನಷ್ಯಾಳಿಕಿ ಅನ್ನಂಗ!’ ಎಂದು ನಕ್ಕ. ಅತ್ತಿಯೂ ನಗುತ್ತಿದ್ದಾಳೆ ಬಾಬುಮಾಮಾನೊಂದಿಗೆ. ಬಾಗಿಲು ಬಡಿದ ಸದ್ದು.

‘ಅಕ್ಕಾರ, ನಾ ಪೋಸ್ಟ್ ಮಾಸ್ಟರ್ ರ್ರೀ. ಬಾಗ್ಲಾ ತಗೀರಿ.’

ಅವ್ವ ಬಾಗಿಲು ತೆಗೆಯುತ್ತಿದ್ದಂತೆಯೇ ನಾನು ಕಣ್ಣುಬಿಟ್ಟೆ. ಬೆಳಗಿನ ಐದೂವರೆ ಐದೂ ಮುಕ್ಕಾಲರ ಸಮಯ. ಬಾಗಿಲಲ್ಲಿ ನಿಂತ ಪೋಸ್ಟ್ ಮಾಸ್ಟರ್ ಹೇಳುತ್ತಿದ್ದರು,

‘ನಿಮ್ಮವ್ವಾರು ರಾತ್ರಿ ಎಕ್ಸ್ಪೈರ್ ಆದ್ರಂತ್ರಿ. ಡಾಕ್ಟರ್ ಸಾಹೇಬ್ರು (ನನ್ನ ತಂದೆ) ಫೋನ್ ಮಾಡಿ ನಿಮಗ ತಿಳಸಂದ್ರು…’

ಅಂದು ಕನಸಿಗೂ ವಾಸ್ತವಕ್ಕೂ ತಾಳೆಯಾಗದೆ ಅಂದು ಗಲಿಬಿಲಿಗೊಂಡಿದ್ದೆ. ಆದರೆ ನನ್ನಜ್ಜಿ ತಾನು ಸಾಯುವ ಮುಂಚೆ ಕನಸಲ್ಲಿ ಬಂದು ಹಾಗೆ ಹೇಳಿದ್ದ್ಯಾಕೆ ಎನ್ನುವುದರ ಅರ್ಥ ನನಗೆ ತಿಳಿಯುವಷ್ಟರಲ್ಲಿ ತುಂಬಾ ತಡವಾಗಿತ್ತು. ಆ ವಯಸ್ಸಲ್ಲಿ ನನ್ನಜ್ಜಿ ತಾನು ಸಾಯುವ ಮೊದಲು ನನ್ನ ಕನಸಲ್ಲಿ ತನ್ನ ನಿರ್ಗಮನವನ್ನು ತಿಳಿಸಿಹೋದಳು ಅನ್ನುವುದಷ್ಟೇ ಮುಖ್ಯವಾಗಿತ್ತು. ನನ್ನಂತೆಯೇ ಅಂದು ಇನ್ನೂ ಕೆಲವು ಬಂಧುಗಳ ಕನಸಲ್ಲಿಯೂ ಬಂದಿದ್ದರು ಎನ್ನುವುದು, ಮಣ್ಣಿಗೆ ಬಂದ ಅವರೆಲ್ಲರ ಮಾತಿನಿಂದ ಗೊತ್ತಾಯಿತು. ನನ್ನಜ್ಜಿ ತೀರಿಕೊಂಡಾಗ ಅವರ ವಯಸ್ಸು ೪೬. ನನಗೆ ೧೧.

ಗೌರಮ್ಮ ಬಾದರದಿನ್ನಿ ಗೌರಕ್ಕಾರು ಎಂದರೆ ಎಲ್ಲರಿಗೂ ಆದರ ಗೌರವ. ನನ್ನಜ್ಜಿ ಜನರನ್ನು ಹಚ್ಚಿಕೊಳ್ಳುತ್ತಿದ್ದ ಪರಿ ಹಾಗಿತ್ತು. ಎಷ್ಟೋ ಜನ ತಾಯಿಲ್ಲದ ಮಕ್ಕಳಿಗೆ ತಾಯಕ್ಕರೆಯನ್ನು ಧಾರೆ ಎರೆದವರು ಅವರು. ನನಗೆ ಅವರ ಎಡ ಗಲ್ಲದ ಮೇಲೆ ಇದ್ದ ನರುಲಿ ಎಂದರೆ ಬಲು ಇಷ್ಟ. ಆಗಾಗ ಅವರ ತೊಡೆ ಮೇಲೋ, ಪಕ್ಕದಲ್ಲಿ ಕುಳಿತೋ ಆ ನರುಲಿಯನ್ನು ಮುಟ್ಟುತ್ತಾ ಕೆಲವೊಮ್ಮೆ ತಿಳಿಯದೇ ಒತ್ತಿ ಹಿಡಿದಾಗ, ‘ಬಿಡ ಪಪ್ಪಣ್ಣಿ, ಬ್ಯಾನ್ಯಾಕ್ಕತಿ’ ಎಂದು ಪ್ರೀತಿಯಿಂದಲೇ ಬಿಡಿಸುತ್ತಿದ್ದರು. ಮತ್ತೆ ಸ್ವಲ್ಪ ಹೊತ್ತಿಗೆಲ್ಲ ನನ್ನ ಕೈ ಅವರ ಕೆನ್ನೆಯ ಮೇಲಿರುತ್ತಿತ್ತು. ನಾನು ನನ್ನಜಿ ಮನೆಯಿಂದ ಅಪ್ಪ ಅವ್ವನ ಬಳಿ ಶಿಫ್ಟ್ ಆದಾಗ ಎಷ್ಟೋ ದಿನ, ಬಿಜಾಪುರದ ಮನೆ ನನ್ನದು, ನಾನಿಲ್ಲಿ ಪರಕೀಯಳು ಎಂದೇ ಅನಿಸುತ್ತಿತ್ತು. ಆಗ ನನ್ನಜ್ಜಿಯನ್ನು ನೆನೆದು ಸೈಲೆಂಟಾಗಿ ಅತ್ತ ದಿನಗಳೂ ಇವೆ.

ನನ್ನಜ್ಜಿ ಗಂಡನ ಮೆಚ್ಚಿನ ಮಡದಿ. ನಮ್ಮುತ್ಯಾ ತಮ್ಮ ಮದುವೆ ನಿಶ್ಚಯವಾದ ನಂತರ ಭಾವಿ ಪತ್ನಿಯನ್ನು ನೋಡುವ ಆಸೆಯಾಗಿ, ಆಗ ನನ್ನಜ್ಜಿಯಿದ್ದ ಬಸ್ಸುಗಳಿಲ್ಲದ ಊರು ತಿಳಗುಳಕ್ಕೆ ಎಷ್ಟೋ ಮೈಲಿ ನಡೆದೇಹೋಗಿ ಬಂದಿದ್ದು ಆಗ ಅವರೂರಲ್ಲಿ (ಅಚನೂರು. ಈಗ ಬಾಗಲಕೋಟೆ ಜಿಲ್ಲೆಗೆ ಸೇರಿದೆ) ದೊಡ್ಡ ಸುದ್ದಿಯಾಗಿ ಎಲ್ಲರೂ ರೇಗಿಸುವಂತಾಗಿತ್ತಂತೆ. ನಾನು ಕಾಲೇಜಿಗೆ ಹೋಗುವ ಸಮಯದಲ್ಲೂ ಈ ವಿಷಯವನ್ನು ಅಚನೂರಿನಿಂದ ಬಂದವರೊಬ್ಬರು ಹೇಳಿ ನಕ್ಕಿದ್ದು ನನಗೆ ನೆನಪಿದೆ. ನನ್ನಜ್ಜಿ ಹದಿಮೂರು ವರ್ಷದವರಿದ್ದಾಗ ಮದುವೆಯಾಯಿತಂತೆ. ಅವರ ಹನದಿನೈದನೇ ವಯಸ್ಸಿನಲ್ಲಿಯೇ ನನ್ನ ತಾಯಿಗೆ ಜನ್ಮವಿತ್ತು ತಾಯಿಯೂ ಆದವರು. ತುಂಬಾ ಅನ್ಯೋನ್ಯ ದಾಂಪತ್ಯವಾಗಿತ್ತು ಅವರದು. 

ಅದೊಮ್ಮೆ ಯಾರೋ ತುಂಬಾ ಶ್ರೀಮಂತರೊಬ್ಬರ ಮನೆಗೆ ಇವರಿಬ್ಬರೂ ಹೋದಾಗ, ಆ ಮನೆಯ ಒಡತಿ ಮನೆಯಲ್ಲಿ ರೇಶಿಮೆ ಸೀರೆ ಉಟ್ಟಿದ್ದರಂತೆ. ಅದನ್ನು ಕಂಡ ನನ್ನಜ್ಜಿ ಬೆರಗಾಗಿ ಮನೆಯಲ್ಲಿ ಹೆಣ್ಣುಮಕ್ಕಳೊಡನೆ, ‘ಮನ್ಯಾಗೂ ರೇಶ್ಮಿ ಸೀರಿ ಉಟಗೋತಾರಂದ್ರ ಎಷ್ಟರ ಪುಣ್ಯಾ ಮಾಡ್ಯಾಳಕಿ!’ ಅನ್ನುವುದನ್ನು ಕೇಳಿಸಿಕೊಂಡ ನಮ್ಮುತ್ತ್ಯಾ ಸೀದಾ ಬಟ್ಟೆ ಅಂಗಡಿಗೆ ಹೋಗಿ ಜೋಡು ರೇಶಿಮೆ ಸೀರೆಗಳನ್ನು ತಂದು ನನ್ನಜ್ಜಿ ಎದುರಿಗೆ ಹಿಡಿದು,

‘ಇಗಾ, ಇವನ್ನ ಇನ್ನ ಮ್ಯಾಲೆ ನೀನೂ ದಿನಾ ಉಡು. ಇನ್ನೊಮ್ಮೆ ಬ್ಯಾರೆಯವ್ರ ಮನ್ಯಾನ ವಸ್ತು ನೋಡಿ ಬಾಯಿಬಿಡಬ್ಯಾಡ. ಏನ್ ಬೇಕ್ಕಾದ ಕೇಳು, ನಿನ್ನ ಗಂಡಗ ತಂದುಕೊಡು ತಾಕತ್ತೈತಿ. ತಂದುಕೊಡ್ತೀನಿ’ ಎಂದರಂತೆ. 

‘ಅಯ್ಯ ಶಿವನ! ನಾ ಎಲ್ಲೆ ಆಸೆ ಪಟ್ಟೀನ್ರಿ?! ನೀವು ನನಗೇನ್ ಕಮ್ಮಿ ಮಾಡೀರೆಂತ ನಾ ಆಸೆಪಡ್ಲಿ? ಮಂದಿ ಮನ್ಯಾಗೂ ರೇಶ್ಮಿ ಉಟ್ಕೊಂಡು ಇರೂದು ಮದ್ಲೆ ಸರ್ತಿ ನೋಡಿ ಹಂಗಂದೆ’ ಎನ್ನುತ್ತಾ ಆ ಸೀರೆಗಳನ್ನು ಅಂಗಡಿಯವರಿಗೆ ಮರಳಿಸಲು ಹೇಳಿದರೂ ನಮ್ಮುತ್ತ್ಯಾ ಹಾಗೇ ಮಾಡದೇ ನಿತ್ಯವ ಉಅಲು ಹೇಳಿದರೂ ನನ್ನಜ್ಜಿ ಅವುಗಳನ್ನೆತ್ತಿ ಟ್ರಂಕಲ್ಲಿಟ್ಟರಂತೆ. ಈಗಲೂ ಆ ಎರಡೂ ಸೀರೆಗಳಿವೆ.

ನಮ್ಮುತ್ತ್ಯಾ ೧೯೭೩ರಲ್ಲಿ ಕ್ಯಾನ್ಸರ್ ಆಗಿ ತೀರಿಕೊಂಡ ಆಘಾತಕ್ಕೆ ನನ್ನಜ್ಜಿಗೆ ಮೈಲ್ಡ್ ಹಾರ್ಟ್ ಅಟ್ಯಾಕ್ ಆಯಿತು. ಆಗ ನನ್ನಜ್ಜಿಯ ವಯಸ್ಸು ೪೦! ಅಷ್ಟರಲ್ಲಾಗಲೇ ಅವರು ಏಳು ಮಕ್ಕಳ ತಾಯಿ. ಮೂರು ಮೊಮ್ಮಕ್ಕಳ ಅಜ್ಜಿ. ಅದಾಗಲೇ ನನ್ನ ತಾಯಿ ಮತ್ತು ಮಂಜುಚಿಕ್ಕಮ್ಮನ ಮದುವೆಯಾಗಿತ್ತು ಅನ್ನುವುದು ಬಿಟ್ಟರೆ ಉಳಿದವರೆಲ್ಲ ಇನ್ನೂ ಶಾಲೆ ಕಾಲೇಜಿಗೆ ಹೋಗುತ್ತಿದ್ದವರು. ಮನೆಯ ಆಧಾರಸ್ಥಂಬವೇ ಕಳಚಿಬಿದ್ದ ಹೊತ್ತದು. ನಮ್ಮುತ್ತ್ಯಾರ ಸ್ನೇಹಿತರು ಆಗ ಮಾಡಿದ ಸಹಾಯವನ್ನು ನನ್ನಜ್ಜಿ ಕೊನೆಯವರೆಗೂ ನೆನೆಯುತ್ತಿದ್ದರು.

ಇದೇ ಸಮಯದಲ್ಲಿ ಅವರಿಗೆ ಮೋಸ ಮಾಡಲು ನೋಡಿದವರೂ ಇದ್ದರು. ಕೇವಲ ಎರಡನೇ ಇಯತ್ತೆವರೆಗೆ ಓದಿದ್ದ ನನ್ನಜ್ಜಿಗೆ ಸಾಹಿತ್ಯದಲ್ಲಾಸಕ್ತಿ ಇತ್ತು. ಕತೆ ಕಾದಂಬರಿಗಳನ್ನು ಅಕ್ಷರಗಳನ್ನು ಕೂಡಿಸಿಕೊಂಡು ಓದುತ್ತಿದ್ದರು. ಎಷ್ಟೋ ಸಲ ಮಂಜು ಚಿಕ್ಕಮ್ಮ ಗಂಡನ ಮನೆಯಿಂದ ಬಿಜಾಪುರಕ್ಕೆ ಬಂದಾಗ, ಅಜ್ಜಿಯ ಎದುರು ಕುಳಿತು ಜೋರಾಗಿ ಕಾದಂಬರಿಗಳನ್ನು ಓದಿ ಅವರಿಗೆ ಕೇಳಿಸುತ್ತಿದ್ದುದನ್ನು ನಾನು ಕಂಡಿದ್ದೇನೆ. ಸಾಹಿತ್ಯ ಇಷ್ಟವಾಗುವ ಹಾಗೆಯೇ ಸಿನಿಮಾಗಳು ಸಹ ಇಷ್ಟವಾಗುತ್ತಿದ್ದವು ನನ್ನಜ್ಜಿಗೆ. ಬಂಗಾರದ ಮನುಷ್ಯ ಹಾಗು ಇನ್ನು ಕೆಲವು ಸಿನಿಮಾಗಳನ್ನು ನಾನು ನನ್ನಜ್ಜಿಯ ಜೊತೆಗೆ ನೋಡಿದ್ದೇನೆ.

ನಾನು ಲಿಬರಲ್ ಸ್ಕೂಲಲ್ಲಿ ಓದುವಾಗ ಸ್ಕೂಲ್ ಗ್ಯಾದರಿಂಗ್ ಇದ್ದಾಗಲೆಲ್ಲ ನನ್ನಜ್ಜಿ ಬಂದು, ನನ್ನ ಡಾನ್ಸ್ ನೋಡಿದ್ದಾರೆ. ಮರಳಿ ಮನೆಗೆ ಬರುವಾಗ ರಾತ್ರಿ ೧೦-೧೧ ಆಗುತ್ತಿತ್ತೇನೋ. ನಡೆದುಕೊಂಡೇ ಮನೆಗೆ ಹೋಗಬೇಕಿತ್ತು. ಟಾಂಗಾ ಆಗಲಿ ಸೈಕಲ್ ರಿಕ್ಷಾ ಆಗಲಿ ಹೊತ್ತಲ್ಲಿ ಸಿಗುವುದು ಸಾಧ್ಯವಿರಲಿಲ್ಲ. ಹಾಗಿದ್ದರೂ ಮನೆಯ ಎಲ್ಲರೂ ಬರುತ್ತಿದ್ದರು.

‘ಭಾಗ್ಯವಂತರು’ ಸಿನಿಮಾ ಬಂದಾಗದಾಗಲೇ ನನ್ನಜ್ಜಿಯನ್ನೂ ಕ್ಯಾನ್ಸರ್ ಆವರಿಸಿಕೊಂಡಿತ್ತು. ಭಾಗ್ಯವಂತರು ಸಿನಿಮಾವನ್ನು ನೋಡಿ ಬಂದ ಮೇಲೆ ಪರಿಚಿತರಿಗೆಲ್ಲ ಭಾಗ್ಯವಂತರು ಸಿನಿಮಾ ನೋಡಿ ತುಂಬಾ ಚೆನ್ನಾಗಿದೆ ಎನ್ನುತ್ತಾ ಅದರ ಕತೆ ಹೇಳುತ್ತಿದ್ದರು. ಈ ಸಿನಿಮಾದಲ್ಲಿ ಡಾ. ರಾಜಕುಮಾರ್ ಮತ್ತು ಬಿ. ಸರೋಜಾದೇವಿ ತಮ್ಮ ಬದುಕನ್ನೇ ಅಭಿನಯಿಸಿ ತೋರಿಸಿದ್ದಾರೆ ಅನಿಸುತ್ತಿತ್ತು ಅವರಿಗೆ. ಹೀಗಾಗಿ ನಮ್ಮುತ್ತ್ಯಾರನ್ನು ನೆನೆದು ಅದೆಷ್ಟು ಅಳುತ್ತಿದ್ದರೆಂದು ನೆನೆದಾಗಲೆಲ್ಲ ನನ್ನ ಕಣ್ಣು ಒದ್ದೆಯಾಗುತ್ತವೆ. 

 | ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Akshata Deshpande

    ಅಯ್ಯೋ ತುಂಬಾ ಚಿಕ್ಕ ವಯಸ್ಸು ರೀ ಅಜ್ಜಿ ತೀರಿಕೊಂಡಾಗ.. ಅಜ್ಜಿಯ ಪ್ರೀತಿಯೇ ಹಾಗಲ್ಲವೇ? ಸಾಕು ಅನಿಸುವುದೇ ಇಲ್ಲ.. ನಿಮ್ಮ ಬರವಣಿಗೆಯಿಂದ ನಿಮ್ಮ ಅಜ್ಜಿ ಕಣ್ಣೆದುರು ನಿಂತಂತಾಯ್ತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: