ಕೆ ನಲ್ಲತಂಬಿ ಸರಣಿ- ಎವರೆಸ್ಟ್ ಎಂಬುದು ಪರ್ವತವಲ್ಲ!..

ಮೂಲ: ಎಸ್ ರಾಮಕೃಷ್ಣ 

ಕನ್ನಡಕ್ಕೆ : ಕೆ ನಲ್ಲತಂಬಿ 

ಭಾರತದ ನಕ್ಷೆಯನ್ನು ನೋಡುವಾಗ ನನಗೆ ಬಹಳಷ್ಟು ಪ್ರಶ್ನೆಗಳು ಉದ್ಭವಿಸುತ್ತವೆ. ಭಾರತದ ನಕ್ಷೆಯನ್ನು ಹೇಗೆ, ಯಾರಿಂದ ರಚಿಸಲಾಯಿತು? ಹೇಗೆ ನದಿಗಳನ್ನೂ, ಭೂಮಿಯನ್ನೂ ಬೇರ್ಪಡಿಸಿ ವಿಂಗಡಿಸಿದರು? ಯಾರು ಮೊಟ್ಟಮೊದಲು ಭಾರತದ ನಕ್ಷೆಯನ್ನು ಮುದ್ರಿಸಿದ್ದು? ಇಂದಿರುವ ನಕ್ಷೆಯೂ ಅಶೋಕನ ಕಾಲದ ಭಾರತದ ನಕ್ಷೆಯೂ ಯಾಕೆ ಭಿನ್ನವಾಗಿವೆ? ಹೀಗೆ ಪ್ರಶ್ನೆಗಳು ಏಳುತ್ತಲೇ ಇರುತ್ತವೆ. 

ಹಲವು ಶತಮಾನಗಳ ಕಾಲದ ಸತ್ಯಗಳು ಹೂತುಹೋಗಿವೆ. ಆ ಸತ್ಯಗಳನ್ನು ತಿಳಿದುಕೊಳ್ಳುವ ಮೊದಲು ಉಪಪ್ರಶ್ನೆ ಇದೆ. 

ಚೆನ್ನೈಯಲ್ಲಿರುವ ಪರಂಗಿಮಲೈಗೂ ಉತ್ತರದಲ್ಲಿರುವ ಹಿಮಾಲಯಕ್ಕೂ ನಡುವೆ ಯಾವ ಸಂಬಂಧ? 

ಎರಡೂ ಬೇರೆಬೇರೆ ಎತ್ತರವಾದ ಬೆಟ್ಟಗಳು ಎಂಬುದನ್ನು ಹೊರತು, ಬೇರೇನು ಇರಲು ಸಾಧ್ಯ ಎಂದೆ ಸಾಮಾನ್ಯವಾಗಿ  ಆಲೋಚಿಸುತ್ತೇವೆ.  ಆದರೆ ಅದು ಹಾಗಲ್ಲ. ಸಂಬಂಧವಿಲ್ಲದ ಈ ಎರಡು ಚುಕ್ಕೆಗಳನ್ನು ಒಂದೇ ಕೊಂಡಿಯಲ್ಲಿ ಹೆಣೆಯಲಾಗಿದೆ. ಹಾಗೆ ಒಂದು ಗೂಡಿಸಲು ಕೇಂದ್ರವಾಗಿ ಇದ್ದದ್ದು, ಭಾರತದಲ್ಲಿ ನಡೆದ ಭೂ ಮಾಪನ ಯೋಜನೆ. ಭಾರತದ ಭೂಪಟವನ್ನು ರಚಿಸಿದ ಹಿನ್ನೆಲೆಯಲ್ಲಿ ರಾಜಕೀಯವೂ ವಿಜ್ಞಾನವೂ ಒಂದಾಗಿ ಕಲೆತಿವೆ.  ಇಂದು ನಾವು ನೋಡುವ ನಕ್ಷೆ ಭಾರತ ಕ್ರಮಿಸಿ ಬಂದ ಇತಿಹಾಸದ ಹಾದಿಯ ಒಂದು ಗುರುತು. 

ಭಾರತದಲ್ಲಿ ಆರ್ಯಭಟನ ಕಾಲದಲ್ಲೇ ಸಾಂಪ್ರದಾಯಿಕ ಗಣಿತ ಪದ್ಧತಿಯಂತೆ ಭೂಮಿಯ ವಿಸ್ತೀರ್ಣವನ್ನು ಹೇಳಲಾಗಿದೆ. ದೂರವನ್ನು ಗಣಿಸುವ ಪದ್ಧತಿಗಳು ಕಾರ್ಯಾಚರಣೆಯಲ್ಲಿ ಇದ್ದವು. ಆದರೂ ಭೂಗೋಳದ ಪ್ರಕೃತಿಯ ಕುರಿತು ಸಂಪೂರ್ಣವಾಗಿ ಅರಿತಿರಲಿಲ್ಲ. ಆದ್ದರಿಂದ, ರಾಜರ ಕಾಲದಲ್ಲಿ ಕ್ರಮವಾದ ಭೂಗೋಳದ ನಕ್ಷೆ ಯಾವುದನ್ನೂ ರಚಿಸಲಿಲ್ಲ. ಕಾರಣ, ಛಿದ್ರವಾಗಿ ಬಿಡಿಬಿಡಿಯಾಗಿದ್ದ ರಾಜ್ಯಗಳೂ ಅದರ ಸೀಮೆಗಳೂ ನಿರ್ಧರಿಸಲಾಗದಿದ್ದದ್ದೇ ಕಾರಣ. 

ಸಂಪೂರ್ಣ ಭಾರತ ಎಷ್ಟು ವಿಶಾಲ ಎಂಬ ನಿಖರವಾದ ಲೆಕ್ಕ ಯಾವ ಸಾಮ್ರಾಟರ ಬಳಿಯೂ ಇರಲಿಲ್ಲ. ಅವರು ಪಯಣದ ದೂರವನ್ನು ಲೆಕ್ಕವಿಟ್ಟುಕೊಂಡು ಭೂಮಿಯನ್ನು ಅಳೆದರು. ಆದ್ದರಿಂದ, ಒಂದು ಊರು ಕಡಲ ಮಟ್ಟದಿಂದ ಎಷ್ಟು ಎತ್ತರದಲ್ಲಿದೆ ಎಂಬ ವಿವರವನ್ನು ಅವರಿಂದ ನಿಖರವಾಗಿ ಅರಿತುಕೊಳ್ಳಲು ಆಗಲಿಲ್ಲ. ಆಕ್ರಮಣ ಮಾಡಲು ಹೋಗುವ  ಸಮಯಗಳಲ್ಲಿ ಅವರಿಗಿದ್ದ ದೊಡ್ಡ ಸಮಸ್ಯೆ… ಸೈನ್ಯಗಳು ಯಾವ ಹಾದಿಯಲ್ಲಿ ಹೋಗಬೇಕು? ಎಷ್ಟು ಎತ್ತರದಲ್ಲಿ ಆ ಊರಿದೆ? ಎಲ್ಲಿ ಅಡಗಿಕೊಂಡು ಯುದ್ಧ ಮಾಡುವುದು ಎಂಬುದಾಗಿತ್ತು. ಅದಕ್ಕೆ ಬಹಳಷ್ಟು ರಹಸ್ಯವಾದ ನಕ್ಷೆಗಳನ್ನು ತಯಾರು ಮಾಡಲಾಯಿತು. ಆದರೆ ಯಾವುದೂ ನಿಖರವಾದುವಲ್ಲ. 

ಅದರ ಕಾರಣ ಒಂದು ಊರಿನ ವಿಸ್ತೀರ್ಣ ಎಷ್ಟು ದೊಡ್ಡದು? ಅದರಲ್ಲಿ ಕಾಡು, ಬೆಟ್ಟಗಳಿವೆಯೇ? ನದಿ ಯಾವ ದಿಕ್ಕಿನಲ್ಲಿ ಹರಿಯುತ್ತಿದೆ? ಎರಡು ನಗರಗಳ ನಡುವಿನ ಭೂಭಾಗ ಎಷ್ಟು ಉದ್ದವಾಗಿದೆ? ಬೆಟ್ಟವನ್ನು ಹೇಗೆ ದಾಟಿ ಹೋಗುವುದು? ಮುಂತಾದ ಮೂಲ ವಿವರಗಳೂ ಸಹ ಗೊಂದಲವಾಗಿದ್ದವು. 

ಇಂದು ನಾವು ಬಳಸುವಂತೆ ಎಲ್ಲರೂ ಭೂಗೋಳದ ನಕ್ಷೆಯನ್ನು ಉಪಯೋಗಿಸಲು ಅನುಮತಿ ಇರಲಿಲ್ಲ. ಭೂಪಟ ಎಂಬುದು ಬಹಳ ರಹಸ್ಯವಾದದ್ದು. ಅದನ್ನು  ಖಜಾನೆಯಲ್ಲಿ ಭದ್ರವಾಗಿ ಇಡಲಾಗುತ್ತಿತ್ತು. ಯುದ್ಧದ ಸಮಯದಲ್ಲಿ ಮಾತ್ರವೇ ಅದನ್ನು ಹೊರಗೆ ತೆಗೆಯುತ್ತಿದ್ದರು. ಉಳಿದ ಸಮಯಗಳಲ್ಲಿ ದಿಕ್ಕನ್ನು ಆಧರಿಸಿ, ಸೂರ್ಯನನ್ನು ನೋಡಿ ದೂರವನ್ನು ಲೆಕ್ಕ ಹಾಕುತ್ತಿದ್ದರು. ನೆಲಮಾಳಿಗೆಯ ಪಟ ರಚಿಸುವ ವಿಜ್ಞಾನದ ವಿಶೇಷ ಅರಿವಿನ ಕ್ಷೇತ್ರ ಬೆಳೆಯಲೇ ಇಲ್ಲ. 

11ನೇಯ ಶತಮಾನದಲ್ಲಿ ಪರ್ಷಿಯಾಗೆ ಸೇರಿದ ಅಲ್ಬೆರುನಿ (Alberuni) ಭಾರತಕ್ಕೆ ಬಂದು ಅಂದಿದ್ದ ರಾಜ್ಯಗಳನ್ನು ಮಾದರಿಯಾಗಿಸಿ ಒಂದು ಪ್ರತ್ಯೇಕ ನಕ್ಷೆಯನ್ನು ರಚಿಸಿದ್ದಾನೆ. ಆದರೆ ಆ ಭೂಪಟ ಪೂರ್ಣವಾದುದಲ್ಲ. 

ಮೊಗಲರ ಕಾಲದ ನಕ್ಷೆಗಳ ಬಗ್ಗೆ, ಅಕ್ಬರಿನ ‘ಆಯಿನಿ ಅಕ್ಬರಿ’ ಎಂಬ ಕೃತಿ ವಿಸ್ತಾರವಾಗಿ ಹೇಳುತ್ತದೆ. ಅವು, ಅಲಿ ಕಾಶ್ಮೀರಿ ಇಬಿನ್ ಲುಮಾನ್ (Ali Kashmiri ibn Luqman)  ಎಂಬುವರಿಂದ ರಚಿಸಿದ್ದು ಎಂದು ಹೇಳಲ್ಪಡುತ್ತದೆ. ಅದೂ ಸಹ ನಿಖರವಾದುದಲ್ಲ. 

ಮೂಲತಃ ಭೂಶಾಸ್ತ್ರದ ವಿವರಗಳು ಇಲ್ಲದ ಕಾರಣ ಪಯಣ ಹೋಗುವುದು, ವ್ಯಾಪಾರ ಸಂತೆ ನಡೆಸುವುದು, ನಿರ್ವಹಣೆಯನ್ನು ವಿಂಗಡಿಸಿ ತೆರಿಗೆ ವಸೂಲಿ ಮಾಡುವುದು, ಸೈನ್ಯವನ್ನು ನಡೆಸಿಕೊಂಡು ಹೋಗುವಾಗ ವಾಸ್ತವಿಕ ಸಮಸ್ಯೆ ಮುಂತಾದವುಗಳಿದ್ದವು. ಅದೇ ಭಾರತವನ್ನು ಆಳಿದ ಬ್ರಿಟೀಷ್ ಸರಕಾರಕ್ಕೆ ಪ್ರಮುಖವಾದ ಸಮಸ್ಯೆಯಾಗಿತ್ತು. 

ಬ್ರಿಟೀಷರು ಭಾರತಕ್ಕೆ ಒಳಿತು ಮಾಡುವ ಏನನ್ನೇ ಮಾಡಿದರೂ, ಅದರಲ್ಲಿ ಅವರ ಸ್ವಾರ್ಥವೇ ಅವಿತು ಕೊಂಡಿರುತ್ತಿತ್ತು. ಹಾಗೆ, ಒಳಿತೂ, ಸ್ವಾರ್ಥವೂ ಕಲೆತು ಸೃಷ್ಟಿಯಾದದ್ದೇ ಭಾರತದ ಲ್ಯಾಂಡ್ ಸರ್ವೇವಿಶೇಷವಾಗಿ, ಗ್ರೇಟ್ ಇಂಡಿಯನ್ ಟ್ರಿಗ್ನೋಮೀಟ್ರಿಕಲ್  ಸರ್ವೇ ಎಂಬ ಭೂ ಮಾಪನ ಯೋಜನೆ.  

ಈ ಭೂಮಾಪನ ಯೋಜನೆಯ ಜವಾಬ್ಧಾರಿಯನ್ನು ಹೊತ್ತು ನಡೆಸಿಕೊಟ್ಟವರು ಕಲೋನಿಯಲ್ ವಿಲಿಯಮ್ ಲಾಂಬ್ಟನ್ (Col. William Lambton) ಎಂಬ ಬ್ರಿಟೀಷ್ ಅಧಿಕಾರಿ. ತ್ರಿಕೋನ ಪದ್ಧತಿಯ ಮೂಲಕ ಗ್ರೇಟ್ ಆರ್ಕ್ ಎಂಬ ಮಾಯ ತಿರುವನ್ನು ರಚಿಸಿ ಅದರಲ್ಲಿ ಎರಡು ಕೇಂದ್ರಗಳ ನಡುವಿನ ದೂರವನ್ನು ಗಣಿಸಿದರು. ಈ ಕೆಲಸಕ್ಕೆ ‘ಥಿಯೋಡಲೈಟ್’ (Theodolite – ಅಂತರಕೋನ ಮಾಪಕ) ಎಂಬ ಉಪಕರಣ ಬಳಸಿದರು. 

ನನ್ನ ‘ಯಾಮಂ’ ಕಾದಂಬರಿಯನ್ನು ಲಾಂಬ್ಟನ್ ಸರ್ವೇಯನ್ನು ಕೇಂದ್ರವಾಗಿಸಿ ಬರೆದಿರುವೆ. ಅದರಲ್ಲಿ, ಈ ಭೂಮಾಪನ ಕೆಲಸದ ಬಗ್ಗೆ ವಿಸ್ತಾರವಾಗಿ ಹೇಳಿರುವೆ. ಭಾರತವನ್ನು ಅಳೆಯುವ ಈ ಮಹಾಯೋಜನೆ ಮದರಾಸಿನಿಂದಲೇ ಮೊದಲಾಯಿತು. ಅದೂ ಸಹ ಪರಂಗಿಮಲೈಯಿಂದ ತೊಡಗಿತು.  ಈ ಭೂಮಾಪನದ ಅಂತ್ಯದಲ್ಲಿ, ಜಗತ್ತಿನ ಬಹಳ ಎತ್ತರವಾದ ಶಿಖರ ಎವರೆಸ್ಟ್  ಎಂದು ಕಂಡುಹಿಡಿಯಲಾಯಿತು.  ಈಗ ಹೇಳಿ,  ಎಲ್ಲೋ ಇರುವ ಎವರೆಸ್ಟಿಗೂ ಚೆನ್ನೈನಲ್ಲಿರುವ ಪರಂಗಿಮಲೈಗೂ ಸಂಬಂಧ ಇದೆಯಲ್ಲವೇ! 

ಪರಂಗಿಮಲೈಯಲ್ಲಿ ಇರುವ ಪವಿತ್ರ ಥಾಮಸ್ ದೇವಾಲಯವನ್ನು ಬಹಳ ಜನ ಅರಿತಿರಬಹುದು. ಆ ದೇವಾಲಯದ ಸಮೀಪದಲ್ಲೇ ಲಾಂಬ್ಟನ್ ತನ್ನ ಭೂಮಾಪನ ಕೆಲಸವನ್ನು ಪ್ರಾರಂಭಿಸಿದ ಸ್ಥಳ ಇದೆ. ಅಲ್ಲಿ ಒಂದು ಸ್ಮಾರಕವೂ ನಿರ್ಮಾಣಿಸಲಾಗಿದೆ. 

ದೇವಾಲಯದ ಪೂರ್ವ ಭಾಗದಲ್ಲಿ ಭಾರತದ ಸರ್ವೇ ಇಲಾಖೆಯವರಿಂದ ಲಾಂಬ್ಟನ್ ಸ್ಮಾರಕವನ್ನು ನಿರ್ಮಾಣ ಮಾಡಲಾಯಿತು. ಈಸ್ಟ್ ಇಂಡಿಯಾ ಕಂಪನಿ 1797ನೇಯ ಇಸವಿ ಜೇಮ್ಸ್ ರೆನ್ನೆಲ್ (James Rennell)  ಅವರನ್ನು ಸರ್ವೇಯರ್ ಜನರಲ್ ಆಗಿ ನೇಮಕ ಮಾಡಿ, ಸರ್ವೇ ಆಫ್ ಇಂಡಿಯಾವನ್ನು ಬಂಗಾಳದಲ್ಲಿ ತೊಡಗಿತು. 1783ರಲ್ಲಿ ಹಿಂದುಸ್ಥಾನ್ ಭೂಪಟ ಎಂದು ಒಂದು ಭಾರತದ ನಕ್ಷೆ ಇಂಗ್ಲೆಂಡಿನಲ್ಲಿ ಮುದ್ರಣವಾಗಿ ಕಂಪನಿಯ ವಾಣಿಜ್ಯ ವ್ಯವಹಾರಗಳಿಗಾಗಿ ವಿನಿಯೋಗ ಮಾಡಲಾಯಿತು. 

1798ನೇಯ ಇಸವಿಯಲ್ಲಿ ಮೈಸೂರನ್ನು ಆಳಿದ ಟಿಪ್ಪುಸುಲ್ತಾನನ್ನು ಸದೆಬಡಿಯಲು ದಾಳಿ ಮಾಡಿದ ಈಸ್ಟ್ ಇಂಡಿಯಾ ಕಂಪನಿಯ ಸೇನಾ ವಿಭಾಗ ತನ್ನ ಒಟ್ಟು ಮೊತ್ತ ಸೈನ್ಯದೊಂದಿಗೆ ಹೋರಾಡಿದರೂ ಟಿಪ್ಪುವನ್ನು ಸೆರೆ ಹಿಡಿಯಲಾಗದೆ ತಿಣುಕಿತು. ಟಿಪ್ಪುಸುಲ್ತಾನ್ ಯುದ್ಧದಲ್ಲಿ ಮೊಟ್ಟಮೊದಲು ರಾಕೆಟನ್ನು ಬಳಸಿದ. ಸ್ವದೇಶದಲ್ಲಿ ತಯಾರು ಮಾಡಿದ ರಾಕೆಟ್ಟುಗಳನ್ನು ರಣರಂಗದಲ್ಲಿ ಹಾರಿಸಲು 5000 ಜನ ಇದ್ದರು ಎಂದು ಕೂರ್ಲ್ಯಾಂಡ್ ಕೇನ್ಬೈ (Kurland Canby) ಪುಸ್ತಕ ಹೇಳುತ್ತದೆ. 

ಎದುರು ನಿಂತು ಗೆಲ್ಲಲಾಗದ ಟಿಪ್ಪುಸುಲ್ತಾನನ್ನು ವಂಚನೆಯಿಂದ ಸೋಲಿಸಲು ಆಲೋಚಿಸಿದ ಈಸ್ಟ್ ಇಂಡಿಯಾ ಕಂಪನಿ, ಅವನ ಮಂತ್ರಿಯಾದ ಮೀರ್ ಸಾದಕನನ್ನು ಒಲಿಸಿ, ಟಿಪ್ಪುವಿನ ಸೈನ್ಯವನ್ನು ಬಲಹೀನಗೊಳಿಸಿ, ಅವನನ್ನು  ಕೊಂದರು. 

ಟಿಪ್ಪುವಿನ ನಂತರ ಅವರ ಕೈವಶವಾದ ಮೈಸೂರು ಭಾಗವನ್ನು ಹೇಗೆ ಆಡಳಿತ ಮಾಡುವುದು ಎಂಬುದಕ್ಕೆ ಕ್ರಮವಾದ ನಕ್ಷೆಗಳನ್ನೂ, ಕಾಡುಗಳ ವಿಸ್ತೀರ್ಣ ಮುಂತಾದುವನ್ನು ಅರಿತುಕೊಳ್ಳಬೇಕಾದ ಕಡ್ಡಾಯ ಉಂಟಾಯಿತು. ಆ ಕೆಲಸಕ್ಕಾಗಿ ಹೊಸ ಸರ್ವೇ ಒಂದನ್ನು ತೊಡಗಲು ಈಸ್ಟ್ ಇಂಡಿಯಾ ಕಂಪನಿ ನಿರ್ಧಾರ ಮಾಡಿತು. ಅದಕ್ಕಾಗಿ ಕರ್ನಲ್ ವಿಲಿಯಮ್ ಲಾಂಬ್ಟನ್ ನೇತೃತ್ವದಲ್ಲಿ 18ನೇಯ ಇಸವಿ ಭೂಮಾಪನವನ್ನು ಕೈಗೊಳ್ಳಲಾಯಿತು. ಅದಕ್ಕೆ ಅಂದಿನ ಮದರಾಸ್ ಗವರ್ನರ್ ಜನರಲಾಗಿದ್ದ ಆರ್ಥರ್ ವೆಲ್ಲಸ್ಲಿ (Arthur Wellesley) ಅನುಮತಿ ನೀಡಿದರು. ಲಾಂಬ್ಟನ್ ಜತೆಯಲ್ಲಿಯೇ ಫ್ರಾನ್ಸಿಸ್ ಬುಕಾನಿನ್ (Francis Bakunin) ಎಂಬ ಸಸ್ಯಶಾಸ್ತ್ರ ಅಧ್ಯಯನಕಾರ ಮೈಸೂರು ಪ್ರದೇಶದಲ್ಲಿರುವ ಸಸ್ಯಗಳನ್ನು ಕ್ರಮವಾಗಿ ಪಟ್ಟಿಮಾಡಿ ವಿಂಗಡಿಸಿ ಕಳುಹಿಸಿಕೊಟ್ಟರು. ಈ ಯೋಜನೆಯನ್ನು ಪ್ರಸ್ತಾಪಿಸಿದವರು ಕಾಲಿನ್ ಮೆಕನ್ಜಿ (Colin Mackenzie) 

ಒಟ್ಟು ಭೂ ವಿಸ್ತೀರ್ಣವನ್ನು ಮಾಪನ ಮಾಡುವುದು ಅಷ್ಟು ಸುಲಭವಲ್ಲ. ಅದಕ್ಕೆ ವಿಶೇಷ ಉಪಕರಣಗಳು ಯಾವುದೂ ಭಾರತಲ್ಲಿ ಇರಲಿಲ್ಲ. ಹೆಚ್ಚಾಗಿ ಹೇಗೆ ಮಾಹಿತಿಗಳನ್ನು ದಾಖಲು ಮಾಡುವುದು? ಯಾವ ರೀತಿಯಲ್ಲಿ ಲೆಕ್ಕ ಮಾಡುವುದು? ಅವನ್ನು ಹೇಗೆ ಸಂಕಲಿಸಿ ಭೂಪಟವಾಗಿ ರಚಿಸುವುದು? ಎಂಬ ಸಮಸ್ಯೆಗಳು ಬಂದವು. ಆ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸಲು ಗಣಿತ, ಎಂಜಿನೀಯರಿಂಗ್ ಇಲಾಖೆಗಳಿಗೆ ಸೇರಿದವರನ್ನು ಕೆಲಸಕ್ಕೆ ಸೇರಿಸಲಾಯಿತು. 2000ಕ್ಕೂ  ಹೆಚ್ಚಿನ ಕೂಲಿಗಳನ್ನು ಸರ್ವೇ ಕೆಲಸದಲ್ಲಿ ತೊಡಗಿಸಲಾಯಿತು. 12 ಆನೆಗಳು, 30 ಕುದುರೆಗಳು, 42 ಒಂಟೆಗಳು ಹೊರೆಗಳನ್ನು ಹೊತ್ತುಕೊಂಡು ಹೋಗಲು ಬಳಸಲಾಯಿತು.

| ಇನ್ನು ನಾಳೆಗೆ |

‍ಲೇಖಕರು Admin

July 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: