‘ದಿಲ್ಲಿಯ ಜನಸಾಗರದಲ್ಲೊಂದಾಗುತ್ತಾ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ಭಾರತದ ಜನಸಂಖ್ಯೆಯೆಂದರೆ ಹೊರದೇಶಗಳ ಬಹಳಷ್ಟು ಮಂದಿಗೆ ಅಚ್ಚರಿಯ ಸಂಗತಿಗಳಲ್ಲೊಂದು. 

ಖ್ಯಾತ ಮ್ಯೂಸಿಕ್ ಬ್ಯಾಂಡ್ ಆಗಿದ್ದ ಬೀಟಲ್ಸ್ ತಂಡವು ದಿಲ್ಲಿಗೆ ಬಂದಿಳಿದಿದ್ದಾಗ ಇಲ್ಲಿಯ ಜನಸಂಖ್ಯೆಯನ್ನು ಕಂಡು ಹೌಹಾರಿದ್ದರಂತೆ. ನನ್ನದೇ ಕೆಲವು ಪೋರ್ಚುಗಲ್ ಮೂಲದ ಸಹೋದ್ಯೋಗಿಗಳು ಈ ಬಗ್ಗೆ ಆಗಾಗ ನೆನಪಿಸಿಕೊಳ್ಳುವುದುಂಟು. ಇವರಿಗೆ ಭಾರತವೆಂದರೇನೇ ಒಂದು ಜನಜಂಗುಳಿಯ ನಿತ್ಯಜಾತ್ರೆ. ಎತ್ತ ನೋಡಿದರೂ ಸಾಗರದಂತೆ ಕಾಣುವ ಇಲ್ಲಿಯ ಜನಸಂಖ್ಯೆಯು ಅವರಿಗೆ ನಿತ್ಯವೂ ಸಿಗದ ನೋಟವಂತೆ. ಹೀಗಾಗಿ ಇವರುಗಳಿಗೆ ಸಹಜವಾಗಿಯೇ ಇದೊಂದು ಸೋಜಿಗ.

ಹಲವು ದೇಶಗಳಲ್ಲಿ ಓಡಾಡಿದ್ದ ನನ್ನ ಹಿರಿಯ ಸಹೋದ್ಯೋಗಿಯೊಬ್ಬರೊಂದಿಗೆ ನೀವು ಕಂಡ ಅತ್ಯಂತ ಕೆಟ್ಟ ಟ್ರಾಫಿಕ್ ಉಳ್ಳ ನಗರದ ಬಗ್ಗೆ ಹೇಳಿ ಅಂದಿದ್ದೆ. ಅದಕ್ಕವರು ಢಾಕಾ ಎಂದಿದ್ದರು. ಬಾಂಗ್ಲಾದೇಶದಲ್ಲಿರುವ ಢಾಕಾ ನಗರದ ಟ್ರಾಫಿಕ್ ವ್ಯವಸ್ಥೆಯು ಸಹಿಸಲಾಗದಷ್ಟು ಕಿರಿಕಿರಿಯದ್ದಂತೆ. ಹಾಗೆ ನೋಡಿದರೆ ದಿಲ್ಲಿಯಲ್ಲಿ ಸತತವಾಗಿ ಏರುಮುಖವಾಗಿರುವ ಜನಸಂಖ್ಯೆಯ ಮಟ್ಟಿಗೆ, ಇಲ್ಲಿನ ಟ್ರಾಫಿಕ್ ವ್ಯವಸ್ಥೆಯು ಅದ್ಯಾವತ್ತೋ ಒಂದು ದೊಡ್ಡ ಗೋಜಲಾಗಬೇಕಿತ್ತು. ಆದರೆ ಈ ಸಾಧ್ಯತೆಯನ್ನು ಸಾಕಷ್ಟು ಇಲ್ಲವಾಗಿಸಿದ ನಿಜವಾದ ಕೀರ್ತಿಯು ಸಲ್ಲಬೇಕಾಗಿರುವುದು ಇಲ್ಲಿರುವ ಸಂಕೀರ್ಣ ಮತ್ತು ವ್ಯವಸ್ಥಿತ ಮೆಟ್ರೋ ಜಾಲಕ್ಕೆ. 

ಅಪಾರವೆನ್ನಿಸುವ ಭಾರತದ ಮಹಾನಗರಿಗಳ ಜನಸಂಖ್ಯೆಯು ಆಯಾ ಶಹರಗಳಿಗೆ ತರುವ ನೋಟವೇ ವಿಶಿಷ್ಟ ಬಗೆಯದ್ದು. ಉದಾಹರಣೆಗೆ ಮುಂಬೈ ಲೋಕಲ್ ಟ್ರೇನುಗಳು ಇಂದು ಕೇವಲ ಸಂಚಾರ ವ್ಯವಸ್ಥೆಯಷ್ಟೇ ಅಲ್ಲದೆ, ಮುಂಬೈ ಮಹಾನಗರಿಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಲೋಕದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಎಲ್ಲವೂ ನಿಧಾನಗತಿಯಲ್ಲಿ ಸಾಗುವ ಕಾರಣಕ್ಕಾಗಿಯೇ ಕೋಲ್ಕತ್ತಾ ಹೆಸರಾಗಿದೆ. ಈ ಮಧ್ಯೆ ಇತಿಹಾಸ ಮತ್ತು ಭವಿಷ್ಯಗಳೆರಡನ್ನೂ ಸಮರೀತಿಯಲ್ಲಿ ತೂಗಿಸಿಕೊಂಡು ಸಾಗುತ್ತಿರುವ ದಿಲ್ಲಿಯು ವಿಶೇಷವೆನಿಸುವುದು ತನ್ನಲ್ಲಿ ಹೊಂದಿರುವ ಅಪ್ಪಟ ಕಾಸ್ಮೋಪಾಲಿಟನ್ ಜನಸಂಖ್ಯೆ ಮತ್ತು ವಾತಾವರಣಕ್ಕಾಗಿ. 

ಭಾರತದ ಎಲ್ಲಾ ಮಹಾನಗರಿಗಳಂತೆ ಬೆಳಗ್ಗಿನ ಮತ್ತು ಸಂಜೆಯ ಹೊತ್ತಿಗೆ ದಿಲ್ಲಿಯೂ ಉಸಿರುಗಟ್ಟುವಷ್ಟು ಗಿಜಿಗುಡುತ್ತದೆ. ಅಗಲವಾಗಿರುವ ರಸ್ತೆಗಳೂ ಕೂಡ ವಾಹನಗಳ ಸಂಖ್ಯೆಗಳನ್ನು ತಡೆಯಲಾರದೆ ಕುಗ್ಗಿಹೋದಂತೆ ಭಾಸವಾಗುತ್ತವೆ. ಹೇಗಾದರೂ ಆದಷ್ಟು ಬೇಗ ತಲುಪಿದರೆ ಸಾಕಪ್ಪಾ ಎಂಬ ಗಡಿಬಿಡಿಯಲ್ಲಿರುವ ಸಾವಿರಾರು ಮಂದಿ ಮೆಟ್ರೋ ಮತ್ತು ಬಸ್ಸುಗಳಲ್ಲಿ ಏದುಸಿರು ಬಿಡುತ್ತಾ ಸಾಗುವ ದೃಶ್ಯಗಳು ನಮಗೆ ಕಾಣಸಿಗುತ್ತವೆ. ಇದು ದಿಲ್ಲಿಯ ಮೆಟ್ರೋಪಾಲಿಟನ್ ಮುಖ. 

ರಾಜೀವ್ ಚೌಕ್ ದಿಲ್ಲಿಯ ಜನನಿನಿಡ ಮೆಟ್ರೋ ಸ್ಟೇಷನ್ನುಗಳಲ್ಲೊಂದು. ದಿಲ್ಲಿಯ ಹೃದಯದಂತಿರುವ ಕನ್ನಾಟ್ ಪ್ಲೇಸ್ (ಸಿ.ಪಿ) ತಾಣದ ಬಳಿಯಿರುವ ಈ ಮೆಟ್ರೋ ಸ್ಟೇಷನ್ನು ಒಂದು ರೀತಿಯಲ್ಲಿ ಹಲವು ಮೆಟ್ರೋಗಳನ್ನು ಒಂದಕ್ಕೊಂದು ಬೆಸೆಯುವ ಬಿಂದುವಿದ್ದಂತೆ. ಹೀಗಾಗಿ ಮೆಟ್ರೋ ರೈಲುಗಳು ಇಲ್ಲಿ ಖಾಲಿಯಾದಷ್ಟೇ ಸಂಖ್ಯೆಯಲ್ಲಿ ಅಥವಾ ಅದರ ಒಂದೆರಡು ಪಟ್ಟು ಹೆಚ್ಚಿನ ಜನಸಂಖ್ಯೆಯನ್ನು ಮತ್ತೆ ತನ್ನೊಳಗೆ ಎಳೆದುಕೊಳ್ಳುತ್ತವೆ. ಅಸಲಿಗೆ ರಾಜೀವ್ ಚೌಕಿನಿಂದ ಯಾವ ಕಡೆಗೆ ಸಾಗುವ ಮೆಟ್ರೋ ಹಿಡಿದರೂ ಇದರಲ್ಲಿ ಹೆಚ್ಚಿನ ವ್ಯತ್ಯಾಸವೇನಿಲ್ಲ. ಅದರಲ್ಲೂ ಜನಸಾಮಾನ್ಯರ ಓಡಾಟದ ಉತ್ತುಂಗದ ಅವಧಿಯಲ್ಲಿ ಇದು ನಿತ್ಯದ ಮಾತೆಂದು ತಳ್ಳಿಹಾಕುವಷ್ಟು ಸರ್ವೇಸಾಮಾನ್ಯ.

ಜಪಾನಿನ ಟೋಕಿಯೋಗಳಂತಹ ನಗರಗಳ ಶಿಸ್ತಿನ ಮಂದಿ ದಿಲ್ಲಿಯ ರಾಜೀವ್ ಚೌಕಿನಂತಹ ಮೆಟ್ರೋ ಸ್ಟೇಷನ್ನುಗಳಲ್ಲಿ ಜನಸಾಮಾನ್ಯರು ವ್ಯವಹರಿಸುವ ರೀತಿಯನ್ನು ಕಂಡರೆ ಬೆಚ್ಚಿಬೀಳಬಹುದೇನೋ. ಆಯಾ ನಿಲ್ದಾಣಗಳಲ್ಲಿ ಮೆಟ್ರೋ ಒಳಗಿನಿಂದ ಪ್ರಯಾಣಿಕರು ಹೊರಬರುವ ಮುನ್ನವೇ, ದೊಡ್ಡಿಯೊಳಗೆ ನುಗ್ಗುವ ಜಾನುವಾರುಗಳಂತೆ ಒಳನುಗ್ಗುವ ಮಂದಿ, ಸೂಚನಾ ಫಲಕಗಳಲ್ಲಿ ಸ್ಪಷ್ಟವಾಗಿ ನೀಡಲಾಗಿರುವ ಸೂಚನೆಗಳನ್ನು ಬೇಕಾಬಿಟ್ಟಿ ನಿರ್ಲಕ್ಷಿಸುವ ಪರಿ, ಅತ್ಯಾಧುನಿಕ ಮೆಟ್ರೋ ವ್ಯವಸ್ಥೆಯನ್ನೂ ಮೀನುಮಾರ್ಕೆಟ್ಟಿನಂತೆ ಅವ್ಯವಸ್ಥೆಯ ತಾಣವಾಗಿ ಬದಲಿಸುವ ಮಂದಿ… ಹೀಗೆ ತಮ್ಮ ಪುಟ್ಟ ನಡೆಗಳಿಂದಾಗಿ ದಿಲ್ಲಿಯ ಇಮೇಜಿಗೆ ದೊಡ್ಡ ಧಕ್ಕೆಯಾಗುವ ಸಾಧ್ಯತೆಗಳನ್ನು ಇಲ್ಲಿಯ ನಿವಾಸಿಗಳೇ ಸೂಕ್ಷ್ಮವಾಗಿ ಗಮನಿಸಬೇಕಾಗಿರುವುದು ಮಹಾನಗರಿಯ ಇಂದಿನ ತುರ್ತುಗಳಲ್ಲೊಂದು.  

ಒಂದು ಹಂತದಲ್ಲಿ ಇದು ಯಾವ ಮಟ್ಟಿಗೆ ಹೋಗಿತ್ತೆಂದರೆ ಮೆಟ್ರೋದ ಪ್ರತೀ ಬಾಗಿಲಿನಲ್ಲೂ ಪ್ಯಾರಾಮಿಲಿಟರಿ ಪಡೆಯ ಯೋಧರನ್ನು ಪ್ರಯಾಣಿಕರ ನಿಯಂತ್ರಣಕ್ಕೆಂದು ನೇಮಿಸುವುದು ಸಾಮಾನ್ಯವಾಗಿತ್ತು. ಅದರಲ್ಲೂ ರಾಜೀವ್ ಚೌಕಿನಂತಹ ಜನನಿಬಿಡ ಮೆಟ್ರೋ ಸ್ಟೇಷನ್ನುಗಳಲ್ಲಿ ಇದು ಕ್ರಮೇಣ ಸಾಮಾನ್ಯ ದೃಶ್ಯವಾಗಿ ಹೋಯಿತು. ಇನ್ನೇನು ಬರಲಿರುವ ರೈಲನ್ನು ಹತ್ತಲು ಬರುವ ಪ್ರಯಾಣಿಕರು ಸಾಲಾಗಿ ನಿಂತು ಕಾಯಲು, ನುಗ್ಗುವಿಕೆ-ಜಗ್ಗುವಿಕೆಗಳ ಭರದಲ್ಲಿ ಮೆಟ್ರೋ ಟ್ರ್ಯಾಕುಗಳ ಮೇಲೆ ಆಯತಪ್ಪಿ ಬೀಳದಿರಲು, ಅಶಿಸ್ತಿನ ಪ್ರಯಾಣಿಕರಿಗೊಂದು ಬಿಸಿ ಮುಟ್ಟಿಸಲು… ಹೀಗೆ ಎಲ್ಲದಕ್ಕೂ ಈ ಶಿಸ್ತಿನ ಸೈನಿಕರು ಜವಾಬ್ದಾರರಾಗಿಬಿಟ್ಟರು. ಒಟ್ಟಿನಲ್ಲಿ ಇಂತಹ ನಡೆಗಳಿಂದ ಲಕ್ಷಾಂತರ ಮಂದಿ ಪ್ರಯಾಣಿಕರಿಗೆ ದಿಲ್ಲಿ ಮೆಟ್ರೋ ವ್ಯವಸ್ಥೆಯು ಸಹನೀಯವೆನಿಸಿದ್ದು ಅತಿಶಯೋಕ್ತಿಯೇನಲ್ಲ.

ರಾಜೀವ್ ಚೌಕ್ ಮೆಟ್ರೋ ಸ್ಟೇಷನ್ನಿನ ಮೂಲೆಯೊಂದರಲ್ಲಿ ಕುಳಿತು ಅಲ್ಲಿ ಓಡಾಡುತ್ತಿರುವ ಜನರನ್ನು ಸುಮ್ಮನೆ ನೋಡುವುದೇ ಒಂದು ವಿಚಿತ್ರ ಧ್ಯಾನಸ್ಥ ಸ್ಥಿತಿ. ಕೆಲ ವರ್ಷಗಳ ಹಿಂದೆ, ದಿಲ್ಲಿಯ ಇಂದ್ರಪ್ರಸ್ಥ ಪಾರ್ಕಿನಲ್ಲಿ ಆಯೋಜಿಸಲ್ಪಟ್ಟಿದ್ದ ಇಂಡೋ-ಜರ್ಮನ್ ಸಾಂಸ್ಕøತಿಕ ಮೇಳದಲ್ಲಿ ನನಗೆ ಪರಿಚಯವಾಗಿದ್ದ ಖ್ಯಾತ ಜರ್ಮನ್ ಚಿತ್ರಕಲಾವಿದೆಯೊಬ್ಬರು ದಿಲ್ಲಿಯ ಇಂತಹ ಆಯಾಮಗಳನ್ನೇ ತನ್ನ ರೇಖೆಗಳಲ್ಲಿ ಹಿಡಿದಿಡುತ್ತಿದ್ದರು. ಮುಂದೆ ಈ ಕಲಾಕೃತಿಗಳ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು. ಅದ್ಯಾವುದೋ ಮಹಾಗಡಿಬಿಡಿಯಲ್ಲಿರುವ ಇರುವೆಗಳ ರಾಶಿಯಂತೆ ಏಕಕಾಲದಲ್ಲಿ ಇಲ್ಲಿ ಸಾವಿರಾರು ಮಂದಿ ಸತತವಾಗಿ ಹೋಗಿಬರುತ್ತಿರುತ್ತಾರೆ. ಇಂತಹ ವಿಶಿಷ್ಟ ಘಳಿಗೆಗಳಲ್ಲಿ ನಾನು ಸಿನೆಮಾಗಳಲ್ಲಿ ಕಂಡಿರುವ ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ ಮತ್ತು ಕಣ್ಣೆದುರಿಗಿರುವ ದಿಲ್ಲಿಯ ಕನ್ನಾಟ್ ಪ್ಲೇಸ್ ನನಗೆ ಅಷ್ಟಾಗಿ ಭಿನ್ನವೆನಿಸುವುದಿಲ್ಲ.   

ಪರಿಸ್ಥಿತಿಯು ಹೀಗಿರುವಾಗ ಮಹಾನಗರಿಯೊಂದರ ಇಂತಹ ಅಂಶಗಳು ಹಲವರಲ್ಲಿ ತರುವ ಅನಾಮಿಕತೆಯ ಭಾವವು ಸಹಜವೂ ಹೌದು. ಹಲವರಲ್ಲಿ ಇದು ಜನಜಂಗುಳಿಯೊಳಗಿದ್ದೂ ಏಕಾಂಗಿತನವನ್ನು ಹುಟ್ಟಿಸಿದರೆ, ಮತ್ತೆ ಕೆಲವರಿಗೆ ಹಲವು ಧೂರ್ತ ಅವಕಾಶಗಳಿಗೆ ರಹದಾರಿಯಾಗಬಹುದು. ಇದೊಂಥರಾ ಅಂತರ್ಜಾಲದ ಸೋಶಿಯಲ್ ಮೀಡಿಯಾ ಲೋಕದಲ್ಲಿ ಫೇಕ್ ಅಕೌಂಟುಗಳನ್ನು ಸೃಷ್ಟಿಸಿ, ಬೇಕಾಬಿಟ್ಟಿ ಸರ್ಕಸ್ಸುಗಳನ್ನು ಮಾಡುವ ಕಿಲಾಡಿಗಳ ಕಿತಾಪತಿಗಳಂತೆ. ಈ ಮಂದಿಯ ಅಸಲಿ ಶಕ್ತಿಯಿರುವುದೇ ಇಂಟರ್ನೆಟ್ ಜಾಲವು ಬಳಕೆದಾರರಿಗೆ ಒದಗಿಸಿಕೊಡುವ ಅನಾಮಿಕತೆಯಲ್ಲಿ. ದಿಲ್ಲಿಯಂತಹ ನಗರಗಳಲ್ಲಿರುವ ಜನಸಂಖ್ಯೆಯ ಮಹಾಸಾಗರದಲ್ಲಿ ನಂಬಲಸಾಧ್ಯವೆನಿಸುವ ರೀತಿಯಲ್ಲಿ ಕುಳಗಳು ಸೇರಿಹೋಗುವುದು ಹೀಗೆ.  

ಕುಖ್ಯಾತ ಮುಂಬೈ 26/11 ದಾಳಿಯ ರೂವಾರಿಯಾಗಿದ್ದ ಡೇವಿಡ್ ಹೆಡ್ಲಿ ಬಗ್ಗೆ ಬರೆಯುವ ಲೇಖಕರಾದ ಹುಸೇನ್ ಝಾಯ್ದಿಯವರು ಈತ ಬಾಂಬ್ ದಾಳಿಗೆಂದು ನಿರ್ದಿಷ್ಟವಾಗಿ ಮುಂಬೈಯನ್ನೇ ಏಕೆ ಆರಿಸಿದ್ದ ಎಂಬ ಬಗ್ಗೆ ತಮ್ಮ ಕೃತಿಯಲ್ಲಿ ವಿವರವಾಗಿ ಬರೆಯುತ್ತಾರೆ. ಝಾಯ್ದಿ ದಾಖಲಿಸಿರುವ ಪ್ರಕಾರ ಹೆಡ್ಲಿ ದಿಲ್ಲಿಗೂ ಬಂದಿದ್ದ. ದಿಲ್ಲಿಯ ಹಲವು ಪ್ರಮುಖ ಸ್ಥಳಗಳನ್ನು ಪರಿಶೀಲಿಸಿ ದಾಳಿಯ ಸಾಧ್ಯತೆಗಳನ್ನು ಲೆಕ್ಕಹಾಕಿದ್ದ. ಆದರೆ ದಿಲ್ಲಿಯಲ್ಲಿ ತನ್ನ ಕೆಲಸವು ತಾನಂದುಕೊಂಡಷ್ಟು ಸುಲಭವಲ್ಲ ಎಂಬುದು ಆತನಿಗೆ ಮನವರಿಕೆಯಾಗಿತ್ತು. 

ಅತ್ತ ಪುಣೆಯಲ್ಲಿನ ಓಶೋ ಆಶ್ರಮದಲ್ಲೂ ಆತನದ್ದು ಇದೇ ಅನುಭವವಾಗಿತ್ತು. ಕೊನೆಗೂ ಡೇವಿಡ್ ಹೆಡ್ಲಿ ಎಂಬ ರಕ್ತಪಿಪಾಸುವೊಬ್ಬ ಮುಂದೆ ಶಹರದ ಜನಸಾಗರದಲ್ಲಿ ಸಲೀಸಾಗಿ ಸೇರಿಹೋಗಿದ್ದು, ನಕಲಿ ಆಫೀಸೊಂದರ ಸೋಗಿನಲ್ಲಿ ಅಲ್ಲೇ ಕೆಲ ಕಾಲ ನೆಲೆಯಾಗಿದ್ದು, ಅಮಾನುಷ ದಾಳಿಯೊಂದರ ನೀಲನಕ್ಷೆಯೊಂದನ್ನು ಸಿದ್ಧಪಡಿಸಿ ಯಶಸ್ವಿಯಾಗಿ ಮರಳಿದ್ದು… ಹೀಗೆ ಎಲ್ಲವೂ ನಡೆದಿದ್ದು ಕರಾವಳಿ ತೀರದ ಮಹಾನಗರಿ ಮುಂಬೈಯಲ್ಲಿ.    

ಮಹಾನಗರಿಯು ಒದಗಿಸುವ ಇಂಥದ್ದೊಂದು ಅನಾಮಿಕತೆಯ ಕಾರಣದಿಂದಲೇ ಹಲವು ಅಪರಾಧಗಳು ರಾಜಾರೋಷವಾಗಿ ನಡೆದುಹೋಗುತ್ತವೆ. ಉದಾಹರಣೆಗೆ ದಿಲ್ಲಿಯ ಮೆಟ್ರೋ ಸ್ಟೇಷನ್ನುಗಳಲ್ಲಿ ಅಳವಡಿಸಲಾಗಿರುವ ಅಷ್ಟು ಸಿಸಿಟಿವಿ ಕ್ಯಾಮೆರಾಗಳ ಹೊರತಾಗಿಯೂ ಅಲ್ಲೊಮ್ಮೆ, ಇಲ್ಲೊಮ್ಮೆ ಜೇಬುಗಳ್ಳತನಗಳು ನಡೆಯುತ್ತಿರುತ್ತವೆ. ಇದು ಸಾಲದ್ದೆಂಬಂತೆ 2017 ರಲ್ಲಿ ಪ್ರಕಟವಾಗಿದ್ದ ಹಿಂದೂಸ್ತಾನ್ ಟೈಮ್ಸ್ ವರದಿಯೊಂದರ ಪ್ರಕಾರ, ದಿಲ್ಲಿಯ ಮೆಟ್ರೋ ಸ್ಟೇಷನ್ನುಗಳಲ್ಲಿ ನಡೆಯುತ್ತಿದ್ದ ಇಂತಹ ತೊಂಭತ್ತು ಪ್ರತಿಶತ ಪ್ರಕರಣಗಳಲ್ಲಿ ಮಹಿಳಾ ಅಪರಾಧಿಗಳ ಕೈವಾಡವಿತ್ತು. ಇತ್ತ ದಿಲ್ಲಿಯ ರಾಜೀವ್ ಚೌಕ್ ಸೇರಿದಂತೆ ಕೀರ್ತಿ ನಗರ್, ಶಹಾದರಾ, ತುಘಲಕಾಬಾದ್, ಕಶ್ಮೀರಿ ಗೇಟ್, ಚಾಂದನೀ ಚೌಕ್ ನಂತಹ ಮೆಟ್ರೋ ನಿಲ್ದಾಣಗಳನ್ನು ಇಲ್ಲಿ ಮುಖ್ಯವಾಗಿ ಹೆಸರಿಸಲಾಗಿತ್ತು. 

ಕಾನ್ ಪ್ರಕರಣಗಳ ಬಗ್ಗೆ ವಿಶೇಷ ಒಲವುಳ್ಳ ನಾನು ಹಲವು ಕಾನ್ ಮ್ಯಾನ್ ಗಳನ್ನು ದಿಲ್ಲಿಯ ಮೆಟ್ರೋ ಸ್ಟೇಷನ್ನುಗಳಲ್ಲಿ ಸ್ವತಃ ಕಂಡಿದ್ದೇನೆ. ಆಗಂತುಕನೊಬ್ಬ ಅಸಹಾಯಕನಂತೆ ಆವರಣದಲ್ಲಿ ಅಡ್ಡಾಡುವುದು, ತನ್ನ ಪರ್ಸ್ ಕಳೆದು ಹೋಯಿತೆಂಬ (ಜನಪ್ರಿಯ?) ದುರಂತಕತೆಯನ್ನು ಹೇಳುವುದು, ಹೀಗನ್ನುತ್ತಾ ಒಂದಷ್ಟು ಕಾಸಿಗೆ ಕೈಯೊಡ್ಡುವುದು, ತಾನು ತಲುಪಬೇಕಾದ ಜಾಗವನ್ನು ತಲುಪಿದ ಕೂಡಲೇ ಹಣವನ್ನು ಮರಳಿಸುವೆನೆಂಬ ಪೊಳ್ಳು ಭರವಸೆಯನ್ನು ನೀಡುವುದು, ಈ ಮಾತನ್ನು ಅನುಮೋದಿಸುವಂತೆ ಹಣವನ್ನು ದಾನವಾಗಿ ನೀಡಿದವನ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡು, ತಲುಪಿದ ತರುವಾಯ ಖಂಡಿತ ಕರೆ ಮಾಡುವೆನೆಂದು ಸಜ್ಜನರಂತೆ ಸೋಗುಹಾಗುವುದು… ಹೀಗೆ! ಬಹಳಷ್ಟು ಬಾರಿ ಕತೆಗಳು ಸಾಮಾನ್ಯವಾದಂತೆ ಕಾನ್ ಮ್ಯಾನ್ ಗಳು ತಾವಿರುವ ಪ್ರದೇಶದಿಂದ ಕಾಲ್ಕೀಳುವುದು ಅನಿವಾರ್ಯವಾಗುತ್ತದೆ. ಹೀಗಿರುವಾಗ ಈ ಬಗೆಯ ಮಹಾಬುದ್ಧಿವಂತರ ಓಡಾಟಗಳನ್ನು ನಿಖರವಾಗಿ ಪತ್ತೆಹಚ್ಚುವುದು ಕಷ್ಟ. 

ಇತ್ತ ದಿಲ್ಲಿಯ ಸಾಗರದಂತಹ ಜನಜಂಗುಳಿಯನ್ನು ಹಲವೆಡೆಗಳಲ್ಲಿ, ಹಲವು ರೂಪಗಳಲ್ಲಿ ಕಂಡಿರುವ ನನಗೆ ಯಾವುದೋ ಅಗೋಚರ ಶಕ್ತಿಯೊಂದು ಇವೆಲ್ಲವನ್ನು ನಿಯಂತ್ರಿಸುತ್ತಿರುವಂತೆ ಒಮ್ಮೊಮ್ಮೆ ಭಾಸವಾಗುತ್ತದೆ. ಎಲ್ಲರೂ ಸದಾ ವ್ಯಸ್ತರಾಗಿರುವಂತೆ ಕಂಡರೂ, ಬಹುತೇಕರ ಡೆಡ್ಲೈನುಗಳು ಗುರಿ ತಲುಪುವುದಿಲ್ಲ. ಮುಂಜಾನೆ-ಸಂಜೆಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಲ್ಲಿ ಸಾಗುವ ಮಂದಿ ತಮ್ಮ ಬಿಡುವಿಲ್ಲದ ದಿನಚರಿ / ಉದ್ಯೋಗದ ಬಗ್ಗೆ ಗೊಣಗುತ್ತಲೂ, ಸ್ವಂತ ವಾಹನಗಳಲ್ಲಿ ಡ್ರೈವ್ ಮಾಡುವ ಮಂದಿ ಟ್ರಾಫಿಕ್ಕನ್ನು ಶಪಿಸುತ್ತಲೋ ಸಾಗುತ್ತಿರುತ್ತಾರೆ. ಈ ಚಕ್ರವು ನಿತ್ಯವೂ ಪುನರಾವರ್ತನೆಯಾಗಿ ಬದುಕು ಆಟೋಪೈಲಟ್ ಮೋಡಿನಲ್ಲಿ ಸಾಗುತ್ತಿರುವಂತೆ ಅನಿಸತೊಡಗುತ್ತದೆ. 

ಸ್ಥಳೀಯ ಮಾರುಕಟ್ಟೆಯೊಂದರಲ್ಲಿ ಶಾಪಿಂಗಿಗೆಂದು ಹೋದರೆ ಯಾವುದೋ ವಿದೇಶಿ ಬ್ರಾಂಡುಗಳು ನಮ್ಮ ಆಯ್ಕೆಗಳೊಂದಿಗೆ, ನಮಗರಿವಿಲ್ಲದಂತೆಯೇ ಆಟವಾಡುತ್ತಿರುತ್ತವೆ. ಮಹಾನಗರಿಯು ಮತ್ತಷ್ಟು ದೊಡ್ಡದಾಗುತ್ತಿದೆಯೆಂಬ ಆಸೆ ತೋರಿಸಿ ಬಿಲ್ಡರುಗಳು ಗಾಳ ಹಾಕುತ್ತಾರೆ.

ಕಣ್ಣೆದುರಿಗಿರುವ ಬಂಜರುಭೂಮಿಯ ದೃಶ್ಯಕ್ಕೆ ಅತಿರಂಜಿತ ಕನಸುಗಳನ್ನು ಲೇಪಿಸಿ, ತುಂಡುಭೂಮಿಗೆ ಚಿನ್ನದ ರೇಟು ಹೇಳುತ್ತಾರೆ. ನಾಯಿಕೊಡೆಗಳಂತೆ ತಲೆಯೆತ್ತುತ್ತಿರುವ ದುಬಾರಿ ರೆಸ್ಟೊರೆಂಟುಗಳು, ಶಾಪಿಂಗ್ ಮಾಲ್ ಗಳು, ವಿಲಾಸಿ ವಿದ್ಯಾಸಂಸ್ಥೆಗಳು ನಮ್ಮ ಸಾಮಾಜಿಕ ಸ್ಥಾನಮಾನಗಳಿಗೆ ಲೇಬಲ್ಲು ಹಚ್ಚುತ್ತವೆ. ಇನ್ನು ಬಿಡುವಿಲ್ಲದ ದಿನಚರಿಗಳ ಭರದಲ್ಲಂತೂ ನಾವು ನಿಜವಾದ ಅರ್ಥದಲ್ಲಿ ಬದುಕುವುದು ವಾರಾಂತ್ಯಗಳಲ್ಲಷ್ಟೇ ಎಂದನಿಸತೊಡಗುತ್ತದೆ. 

ನಮ್ಮ ಕೈಗಳಲ್ಲಿ ಸ್ಮಾರ್ಟ್‍ಫೋನುಗಳು ಬಂದಾಗಿವೆ. ನಮ್ಮ ಹಳ್ಳಿಗಳು, ಪುಟ್ಟ ಪಟ್ಟಣಗಳು ಇಂದು ಸ್ಮಾರ್ಟ್‍ಸಿಟಿಗಳಾಗುವ ಕನಸು ಕಾಣುತ್ತಿವೆ. ಎಲ್ಲರೊಳಗೊಂದಾಗು ಮಂಕುತಿಮ್ಮ ಎಂದಿದ್ದರು ಡಿವಿಜಿ. ನಮ್ಮ ದಿನಗಳು ಹೀಗಿರುವಾಗ ಎಲ್ಲರೊಳಗೊಂದಾಗುವುದು ಹೇಗೆ? ಒಂದಾಗಿಯೂ ತನ್ನತನವನ್ನು ಉಳಿಸಿಕೊಳ್ಳುವುದು ಹೇಗೆ? ಹೇಳಿಕೊಳ್ಳಲು ಇವೆಲ್ಲಾ ಸ್ಮಾರ್ಟ್ ಪ್ರಶ್ನೆಗಳೇ. ಸದ್ಯ ನಾನಂತೂ ಉತ್ತರದ ತಲಾಶೆಯಲ್ಲಿದ್ದೇನೆ!

**********

‍ಲೇಖಕರು Admin

July 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: