ಜಯಲಕ್ಷ್ಮಿ ಪಾಟೀಲ್ ಅಂಕಣ- ಜಸ್ಟ್ ಫಸ್ಟ್ ಕ್ಲಾಸ್ ಅಷ್ಟೆ!…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

22

ಬಾಗಿಲಿಗೆ ಬೆನ್ನು ಮಾಡಿ ಕುಳಿತುಕೊಳ್ಳುವಂತೆ ಬೆಂಚುಗಳನ್ನು ಹಾಕಿದ್ದರು. ಒಂದು ಬೆಂಚಿಗೆ ಒಬ್ಬ ವಿದ್ಯಾರ್ಥಿ ಮಾತ್ರ. ಇಡೀ ಬೆಂಚು ನನ್ನೊಬ್ಬಳದೇ! ಎಲ್ಲಾ ವಿದಾರ್ಥಿಗಳಿಗೂ ಪ್ರತ್ಯೇಕ ಬೆಂಚುಗಳೇ ಆದರೂ ಹೀಗೆ ಒಬ್ಬಳೇ ಕೂರುವುದು ಎಷ್ಟು ಆರಾಮದಾಯಕ ಅನಿಸಿ ಖುಷಿಯಾಯಿತು. ಪರೀಕ್ಷೆಯ ಮೊದಲ ದಿನ, ಸಹಜವಾಗಿಯೇ ಎದೆ ಡವ ಡವ ಅನ್ನುತ್ತಿತ್ತು. ಜೊತೆಗೆ ಯಾವತ್ತೂ ಇಲ್ಲದ ಪಿನ್ ಡ್ರಾಪ್ ಸೈಲನ್ಸ್ ಬೇರೆ. ಒಮ್ಮೆಲೆ ಮೂರು ಜನ ಕೋಣೆಯೊಳಗೆ ಬಂದಿದ್ದು ಅವರ ಧ್ವನಿಯಿಂದ ಗೊತ್ತಾಗಿ ಎಲ್ಲರೂ ಅತ್ತ ತಿರುಗಿ ನೋಡಿದೆವು.

ಒಬ್ಬರ ಕೈಗಳಲ್ಲಿ ಪ್ರಶ್ನೆಪತ್ರಿಕೆ, ಇನ್ನೊಬ್ಬರ ಬಳಿ ಖಾಲಿ ಉತ್ತರ ಪತ್ರಿಕೆಗಳು, ಮತ್ತೊಬ್ಬರು ನಮ್ಮ ಅಟೆಂಡೆನ್ಸ್ ತೆಗೆದುಕೊಳ್ಳಲು ನಮ್ಮ ಹಾಲ್ ಟಿಕೆಟ್ ಸಂಖ್ಯೆಗಳೊಂದಿಗೆ ಒಳಗಡಿ ಇಟ್ಟಿದ್ದರು. ಹಾಲ್ ಟಿಕೆಟ್ ಪರೀಕ್ಷಿಸಿ ಟಿಕ್ ಮಾಡಿಕೊಂಡು ಅವರು ಮುಂದೆ ಹೋದಂತೆಯೇ ಉತ್ತರ ಪತ್ರಿಕೆಗಳು ಎಲ್ಲರಿಗೂ ಹಂಚಲಾಯಿತು. ಸಪ್ಲಿಮೆಂಟ್ ಬೇಕಿದ್ದರೆ ಕೇಳಿ ಪಡೆಯಿರಿ ಎಂದರವರು. ಇನ್ನು ಪ್ರಶ್ನೆ ಪತ್ರಿಕೆಗಳ ಸರದಿ. ನನ್ನ ಎದೆ ಬಡಿತ ಜೋರಾಗಿತ್ತು. ಅಕಸ್ಮಾತ್ ಎಲ್ಲವೂ ನಾನು ಓದದೇ ಇದ್ದಿದ್ದೇ ಪರೀಕ್ಷೆಯಲ್ಲಿ ಬಂದುಬಿಟ್ಟರೆ ಗತಿ ಏನು!? ‘ಶುಕಮುನಿ ತಾತ ನೀನೇ ಕಾಪಾಡಪ್ಪಾ’ ಎಂದುಕೊಳ್ಳುತ್ತಾ ಪತ್ರಿಕೆಯನ್ನು ಪಡೆದುಕೊಂಡೆ. ಅವ್ವ ಅಪ್ಪ ಊರಿಂದ ಹೊರಡುವಾಗ ಹತ್ತು ಸಲ ಹೇಳಿ ಕಳಿಸಿದ್ದರು. ಎರಡೆರಡು ಪೆನ್ನುಗಳಿವೆ ಎರಡಕ್ಕೂ ಇಂಕ್ ತುಂಬಿಸಿಟ್ಕೊಂಡು, ಪರೀಕ್ಷೆಗೆ ಹೋಗುವ ಮೊದಲು ಚೆಕ್ ಮಾಡ್ಕೊಂಡು ಹೋಗು ಅಂತ. ಪೆನ್ನುಗಳೇನೋ ಇಂಕಿನಿಂದ ತುಂಬಿವೆ. ಹಾಳೆ ತುಂಬಬೇಕಲ್ಲ!

ಅಂದುಕೊಂಡಷ್ಟು ಭಯ ಪಡುವುದು ಏನಿರಲಿಲ್ಲ. ಮೊದಲನೇಯ ಪರೀಕ್ಷೆಯೇ ಕನ್ನಡದ್ದಾಗಿತ್ತು. ಮತ್ತು ಅದರಲ್ಲಿನ ಎಲ್ಲಾ ಪ್ರಶ್ನೆಗಳ ಉತ್ತರಗಳು ನನಗೆ ಗೊತ್ತಿದ್ದವು. ತಲೆ ತಗ್ಗಿಸಿ ಬರೆಯಲು ಶುರು ಮಾಡಿದೆ. ಪರೀಕ್ಷೆ ಆರಂಭವಾಗಿ ಅರ್ಧ ಗಂಟೆಯೂ ಕಳೆದಿರಲಿಲ್ಲ, ಕೊಠಡಿಯಲ್ಲಿ ಗುಸುಗುಸು ಶುರುವಾಯಿತು. ತಲೆ ಎತ್ತಿ ನೋಡಿದರೆ ಅದಾಗಲೇ ಕೆಲವರು ಹಿಂದಿನ ಮುಂದಿನ ಬೆಂಚಿನವರೊಂದಿಗೆ ಏನೋ ಕೇಳುತ್ತಿದ್ದಾರೆ. ಇನ್ನೂ ಕೆಲವರು ತಾವು ತಂದ ಕಾಪಿ ಚೀಟಿಯಲ್ಲಿರುವುದು ಎದುರಿಗಿರುವ ಪ್ರಶ್ನೆಗೆ ಹೊಂದುತ್ತದೆಯಾ ಎಂದು ನೋಡುತ್ತಿದ್ದರು ಎನಿಸುತ್ತದೆ. ಅಚ್ಚರಿಯಾಯಿತು. ಕನ್ನಡಕ್ಕೂ ಕಾಪಿನಾ ಅಂತ. ನನ್ನ ಪಾಡಿಗೆ ನಾನು ಬರೆಯುತ್ತಾ ಕುಳಿತೆ. ಸೂಪರ್ವೈಜಿಂಗ್ ಮಾಡುತ್ತಿದ್ದ ಸರ್ ಗದರಿಸಿದ ಮೇಲೆ ಸದ್ದು ಕಮ್ಮಿ ಆಯಿತು ಮುಂದೆ. ನನ್ನವ್ವ ಮೊದಲಿನಿಂದಲೂ ಕಾಪಿ ಮಾಡುವುದು ಒಳ್ಳೆಯದಲ್ಲ ಎಂದು ಹೇಳೀ ಹೇಳೀ ತಲೆಯಲ್ಲಿ ಮನಸ್ಸಿನಲ್ಲಿ ಅದೇ ಇತ್ತಾದ್ದರಿಂದ ಅದರ ಗೊಡವೆ ನನಗಿರಲಿಲ್ಲ. 

ಮರು ದಿನ ಇಂಗ್ಲಿಷ್ ಪರೀಕ್ಷೆ. ಅಂದಂತೂ ಸೂಪರ್ವೈಸರ್ ಆಚೆ ಹೋಗುವುದನ್ನೇ ಕಾಯುತ್ತಿದ್ದವರಂತೆ ಅವರಾಚೆ ಹೋಗುತ್ತಲೂ ಕಾಪಿ ಚೀಟಿಗಳನ್ನು ಹೊರ ತೆಗೆದು ಬರೆವುದು ಪರಸ್ಪರ ಹಂಚಿಕೊಳ್ಳುವುದು ನಡೆದಿತ್ತು. ಪಾಪ ಹಳ್ಳಿಯ ಮಕ್ಕಳಿಗೆ ಇಂಗ್ಲಿಷ್ ಕಷ್ಟ ಅಂದುಕೊಂಡಿದ್ದರೇನೋ ಅದೇ ಕಾರಣಕ್ಕೆ ರೂಮಿನಿಂದಾಚೆ ಹೋಗಿ ಬಂದು ಮಾಡುತ್ತಿದ್ದರು. ಒಳ ಬಂದಾಗ ಮಾತ್ರ ಗದರಿಸಿ ಕಣ್ಣಿಗೆ ಕಂಡ ಕಾಪಿ ಚೀಟಿಗಳನ್ನು ಕಸಿದುಕೊಳ್ಳುತ್ತಿದ್ದರು. ಸ್ಕ್ವಾಡ್ ಬರ್ತಿದೆ ಅನ್ನುವ ಹೆದರಿಕೆ ಹಾಕುತ್ತಿದ್ದರು.

ಎಲ್ಲಾ ದಿನವೂ ಇದು ಮಾಮೂಲಿಯಾಗಿ ಹೋಯಿತು. ಎಲ್ಲಾ ಶಿಕ್ಷಕರು ಪಾಪ ಹೋಗ್ಲಿ ಅಂತ ಆಗಾಗ ಸಡಿಲು ಬಿಟ್ಟರೂ ಒಬ್ಬ ಮೇಷ್ಟ್ರು ಮಾತ್ರ ತುಂಬಾ ಸ್ಟ್ರಿಕ್ಟ್ ಆಗಿದ್ದರು. ಅವರ ಹೆಸರು ಈಗ ನೆನಪಾಗ್ತಿಲ್ಲ, ಅವರು ನಮ್ಮ ಶಾಲೆಯಲ್ಲಿ ಕೆಲವು ತಿಂಗಳು ಕಾಲ ನಮಗೆ ಪಿಇ ಟೀಚರ್ ಆಗಿದ್ದರಾದ್ದರಿಂದ ಅವರ ಪರಿಚಯವಿತ್ತು ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ. ಈ ಹಿಂದೆ ನಮಗೆ ಪಿಇ ಟೀಚರ್ ಆಗಿದ್ದ ಶಿವರೆಡ್ಡಿ ಸರ್ ಗೆ ಸಂಬಂಧಿಕರಾಗಿದ್ದರವರು ಎಂಬಂತೆ ನೆನಪು. ವಿಜ್ಞಾನದ ಪರೀಕ್ಷೆಯ ದಿನ ನಾನು ಚಿತ್ರ ಬಿಡಿಸಲೆಂದು ಸೀಸ್ಪೆನ್ಸಿಲನ್ನು ಮೈಂಡ್ ಮಾಡಿ ಅದರ ಸಿಪ್ಪೆ ಎಲ್ಲಿ ಹಾಕುವುದು ತಿಳಿಯದೆ ಕಂಪಾಸ್ ಬಾಕ್ಸ್ ತೆಗೆದು ಅದರಲ್ಲಿ ಹಾಕಲು ನೋಡಿ ಮನಸು ಬಾರದೆ ಅತ್ತಿತ್ತ ನೋಡಿ ಮತ್ತೆ ಕಂಪಾಸ್ ಬಾಕ್ಸ್ ಕೈಗೆತ್ತಿಕೊಳ್ಳುವುದಕ್ಕೂ ಈ ಪಿಇ ಟೀಚರ್ ಬಂದು, “ಏನದು ತಗಿ ಹೊರಗ” ಎಂದು ಗಡುಸಾಗಿ ಗದರುವುದಕ್ಕೂ ಸರಿಹೋಯಿತು. ಗದರುತ್ತಿದ್ದಾರ್ಯಾಕೆ ಅನ್ನುವುದು ಆ ಕ್ಷಣಕ್ಕೆ ಅರ್ಥವಾಗದಿದ್ದರೂ ಕಂಪಾಸ್ ಅವರೆದುರು ಹಿಡಿದೆ. 

“ಇದರಾಗಿದ್ದ ಕಾಪಿ ಚೀಟಿ ಎಲ್ಲಿಟ್ಟಿ? ಅದನ್ನ ಕೊಡು” ಇನ್ನೂ ಗಡಸು ದನಿಯಲ್ಲಿ ಹೇಳಿದರು. ಕಾಪಿ ಮಾಡದವಳಿಗೆ ಹೀಗೆ ಕೇಳಬಹುದೇ ಯಾರಾದರು?! ಇಲ್ಲವೆಂದರೆ ನಂಬಲಿಲ್ಲ ಆಸಾಮಿ. ನಾನು ಭಾರಿ ಚಾಲಾಕಿನ ಹುಡುಗಿ ಅಂದುಕೊಂಡರೇನೋ, ಏನೂ ಸಿಗದೇ ಹೋಗಿದ್ದಕ್ಕೆ ಸಿಡಿಮಿಡಿಗುಟ್ಟುತ್ತಲೇ ಆಚೆ ನಡೆದರು. ಬಹುಶಃ ಹೊರಗೆ ಹೋದ ಮೇಲೆ ಆ ಹುಡುಗಿ ಮಹಾ ಚಾಲಾಕು ಎಂದು ಉಳಿದ ಸೂಪರ್ವೈಜರುಗಳ ಜೊತೆ ಚರ್ಚೆಯಾಗಿದೆ ಅನಿಸುತ್ತದೆ. ಅಲ್ಲಿಯವರೆಗೆ ನನ್ನ ಪಾಡಿಗೆ ನಾನು ಕಾಪಿ ಹೊಡೆಯದೇ ಬರೆಯುವುದನ್ನು ನೋಡಿದ್ದ ಅವರುಗಳು ಇದ್ದ ವಿಷಯ ತಿಳಿಸಿದ್ದಾರೆ. ಅವರೆಲ್ಲ ಹೇಳಿದರೂ ನಂಬದ ಅವರು ನನ್ನ ಕಳ್ಳತನವನ್ನು ಹಿಡಿದೇ ಸಿದ್ದ ಎಂದುಕೊಂಡು ಅಂದಿನಿಂದ ಪರೀಕ್ಷೆಯ ಕೊನೆಯ ದಿನದವರೆಗೂ ಆಗಾಗ ಮರೆಯಲ್ಲಿ ನಿಂತು ಪರೀಕ್ಷಿಸತೊಡಗಿದರು. ಅದನ್ನು ನಾನು ಒಂದೆರಡು ಬಾರಿ ನೋಡಿದ್ದೆನಾದರೂ ಅದು ಕೇವಲ ನನ್ನೊಬ್ಬಳಿಗಾಗಿ ಎಂದು ಆಗ ತಿಳಿದಿರಲಿಲ್ಲ. ಎದುರಾದಾಗಲೆಲ್ಲ ಸಿಡುಕು ಮೋರೆ ಬೇರೆ.

ಕೊನೆಯ ದಿನ ನಾನು ಪರೀಕ್ಷೆ ಬರೆದು ಆಚೆ ಬಂದಾಗ ಎದುರಿಗೆ ಬಂದ ಆ ಸರ್ ನಗುತ್ತಾ, “ಇಡೀ ಸೆಂಟರಿನ್ಯಾಗ ಯಾರರ ಕಾಪಿ ಹೊಡದಿಲ್ಲ ಅಂದ್ರ ಅದು ನೀನು. ನಿನ್ನ ರೆಡ್ ಹ್ಯಾಂಡ್ ಆಗಿ ಹಿಡದುಕೊಡ್ತೀನಿ ಅಂದಿದ್ದೆ ನಾ ಎಲ್ಲಾರ್ಗೂ. ಆದ್ರ ನಾ ಸೋತೆ. ಗುಡ್, ಕೀಪ್ ಇಟ್ ಅಪ್” ಎಂದವರು ನನ್ನ ಉತ್ತರಕ್ಕೂ ಕಾಯದೆ ಮುನ್ನಡೆದರು. ಅಂದು ಮನಸು ಅನುಭವಿಸಿದ ಸಾರ್ಥಕತೆಯ ಸುಖದ ಸಿಹಿ ಮಾತಿನಲ್ಲಿ ಹೇಳಲಾಗದು.

ಕುಷ್ಟಗಿಯಲ್ಲಿ ಪರೀಕ್ಷೆ ಬರೆಯಲು ಇದ್ದಷ್ಟು ದಿನವೂ ನಾನು ಮಲ್ಲಿಗೆ ಮುಡಿದುಕೊಂಡಿದ್ದೇನೆ. ಮಲ್ಲಿಗೆ ಅಂದರೆ ದುಂಡು ಮಲ್ಲಿಗೆಯಲ್ಲ. ಇಲ್ಲಿ  ಮಲ್ಲೆ/ಮಳ್ಳೆ ಅಂತಾರಲ್ಲ ಆ ಮಲ್ಲಿಗೆ. ಕುಷ್ಟಗಿಯಲ್ಲಿ ನಾವಿದ್ದ ರೂಮಿನಿಂದ ಎಕ್ಸಾಮ್ ಸೆಂಟರಿಗೆ ಹೋಗಬೇಕೆಂದರೆ ಬಸ್ ಸ್ಟ್ಯಾಂಡ್ ದಾಟಿಕೊಂಡೇ ಹೋಗಬೇಕಾಗಿತ್ತು. ಆಗೆಲ್ಲ ಹೂವು ಹಣ್ಣುಗಳು ಬಸ್ ಸ್ಟ್ಯಾಂಡಿನಲ್ಲಿ ಮಾತ್ರ ಇಟ್ಟು ಮಾರುತ್ತಿದ್ದರು. ಅದರ ಆವರಣದ ಮುಂಭಾಗದಲ್ಲೇ ಒಂದು ಹೂವಿನಂಗಡಿ ಇತ್ತು.

ನಿತ್ಯವೂ ಅದೇ ಅಂಗಡಿಯಲ್ಲಿ ಹೂವು ಕೊಳ್ಳುತ್ತಿದ್ದೆ. ಕಾರಣ ನಾಲ್ಕಾಣೆಗೆ ಮೊಳ ಹೂವನ್ನು ಕೊಟ್ಟ ಆ ಹೂವಿನಂಗಡಿಯ ಯಜಮಾನ ಮಾರನೇ ದಿನದಿಂದ ನನ್ನ ಬಳಿ ಹಣ ತೆಗೆದುಕೊಳ್ಳದೇ ಕೊಡತೊಡಗಿದ್ದ ಅದೂ ಒತ್ತಾಗಿ ಕಟ್ಟಿದ ಮಾಲೆ (ಅವನ ಬಳಿ ಅದೇ ನಾಲ್ಕಾಣೆಗೆ ಮಾಮೂಲಾಗಿ ಕಟ್ಟಿದ ಹೂವನ್ನು ಮೊಳ ಹಾಕಿ ಕೊಡುವುದನ್ನು ನೋಡುತ್ತಿದ್ದೆ) ಹಣ ಕೊಡಲು ಮುಂದಾದರೆ, ನಗುತ್ತಾ ಆಲ್ ದಿ ಬೆಸ್ಟ್ ಹೋಗು ಎಂದು ಬೇರೆ ಗಿರಾಕಿಗಳತ್ತ ಗಮನ ಹರಿಸುತ್ತಿದ್ದ. ಮತ್ತು ದಿನವೂ ಮುಗುಳ್ನಗೆಯೊಂದಿಗೆ ‘ಪರೀಕ್ಷೆ ಹೆಂಗಾಯ್ತು?’ ಎಂದು ವಿಚಾರಿಸುತ್ತಿದ್ದ. ಅಪರಿಚಿತ ಊರಲ್ಲಿ ಅಪರಿಚಿತರ್ಯಾರೊ ಅಷ್ಟು ಆತ್ಮೀಯತೆಯಿಂದ ವಿಚಾರಿಸಿಕೊಳ್ಳುವುದು ನನಗೆ ಖುಷಿ ಅನಿಸುತ್ತಿತ್ತು. ಆದರೆ ಅದ್ಯಾಕೋ ಗೊತ್ತಿಲ್ಲ ಕೊನೆಯ ದಿನ ಮಾತ್ರ ಆತ ಎಂದಿನಂತಿರದೆ ನನ್ನ ಪರಿಚಯವೇ ಇಲ್ಲವೆಂಬಂತೆ, ಮುಖ ಬಿಗಿದುಕೊಂಡಿದ್ದು ನೋಡಿ ಅರ್ಥವಾಗದೆ ಮನಸ್ಸಿಗೆ ಕಸಿವಿಸಿ ಆಗಿತ್ತು.

ಮತ್ತೆಂದೂ ಆ ಬಸ್ಟ್ಯಾಂಡಿಗೆ ಹೋಗುವ ಪ್ರಸಂಗವೇ ಬರಲಿಲ್ಲವಾದರೂ ಈಗಲೂ ಅರ್ಥವಾಗದೆ ಇರುವುದು ವಿನಾ ಕಾರಣ ಅಷ್ಟು ಅಕ್ಕರೆ ತೋರಿದ್ದ ಅವನು ಇದ್ದಕ್ಕಿದ್ದಂತೆಯೇ ಹಾಗೆ ವರ್ತಿಸಿದ್ದೇಕೆ? ನನ್ನಲ್ಲಿ ಅವನು ತನ್ನ ಕಳೆದುಕೊಂಡಿರಬಹುದಾದ (ಈ ಆಲೋಚನೆ ಫ಼ಿಲ್ಮಿ ಟೈಪ್ ಅನಿಸುತ್ತೇನೋ) ಇಲ್ಲಾ ದೂರದಲ್ಲಿರೊ ತನ್ನ ತಂಗಿ ಅಥವಾ ಇನ್ನ್ಯಾರದೋ ಹೋಲಿಕೆ ಕಂಡು ಅಷ್ಟು ಆತ್ಮೀಯತೆಯನ್ನು ಎರೆದಿದ್ದಾ? ನಾನು ಅಲ್ಲಿಂದ ಹೊರಡುವ ಕೊನೆಯ ದಿನ ಅವರ ಮನೆಯಲ್ಲೇನಾದ್ರೂ ಘಟಿಸಿತ್ತೆ? ಯಾಕೆ ಆತ ನನ್ನನ್ನು ವಿನಾರಣ ಹಚ್ಚಿಕೊಂಡಿದ್ದು ಮತ್ತು ವಿನಾಕಾರಣ ನನ್ನನ್ನು ಅಲಕ್ಷಿಸಿದ್ದು?

ಊರಿಗೆ ಮರಳಿದ್ದೇ ಮನೆ ಎದುರಿಗೇ ಹಾಕಲಾಗಿದ್ದ ನಾಟಕದ ಟೆಂಟ್ ಕಡೆಗೆ ಸೆಳೆತ. ಅಪ್ಪ ಮಾತು ಕೊಟ್ಟಂತೆ ನಾಟಕ ನೋಡಲು ಬಿಟ್ಟರು. ಒಂದೇ ನಾಟಕವನ್ನು ಮೂರ್ನಾಲ್ಕು ದಿನ ಜನ ಇಷ್ಟಪಟ್ಟರೆ ಮತ್ತೂ ನಾಲ್ಕಾರು ದಿನ ಆಡುತ್ತಿದ್ದರಾದ್ದರಿಂದ ನಾಲ್ಕೋ ಐದೋ ನಾಟ್ಕಗಳನ್ನು ಮಾತ್ರ ನೋಡಲು ಸಾಧ್ಯವಾಯಿತು. ಸಂಪತ್ತಿಗೆ ಸವಾಲ್, ಸೊಸೆ ತಂದ ಸೌಭಾಗ್ಯ, ಗೌಡರ ಗದ್ದಲಾ ಶೆಟ್ಟರ ಸಂಕಟ, ಕಿತ್ತೂರ ಚೆನ್ನಮ್ಮ ನಾಟಕಗಳನ್ನು ನೋಡಿದ ಖುಷಿಯಲ್ಲಿದ್ದಾಗಲೇ ಹತ್ತನೇ ತರಗತಿಯ ಫಲಿತಾಂಶ ಬಂದಿದೆ ಎನ್ನುವುದು ತಿಳಿಯಿತು. ಪಾಸಾ ಫೇಲಾ ಕುತೂಹಲ ಆತಂಕ ಒಟ್ಟೊಟ್ಟಿಗೆ ಕಾಡತೊಡಗಿದವು. 

ಅವತ್ತಿನ ದಿನ ಸಂಜೆಯ ಹೊತ್ತಿಗೆ ನಮ್ಮ ಶಾಲೆಯಲ್ಲಿ ರಿಸಲ್ಟ್ ಪಟ್ಟಿ ಬಂದಿತ್ತು. ನಾನು ಗೆಳತಿಯ ಮನೆಯಲ್ಲಿದ್ದೆ. ನಮ್ಮ ಶಾಲೆಯ ಅಟೆಂಡರ್ ಫಲಿತಾಂಶ ತಿಳಿಸಲು ಚಪ್ಪಲಿಯೂ ಧರಿಸದೆ ನಮ್ಮನೆಗೆ ಓಡೋಡಿ ಬಂದು, ಅಪ್ಪ ಅಮ್ಮಂಗೆ ವಿಷಯ ತಿಳಿಸಿ ಅಲ್ಲಿ ನಾನಿಲ್ಲದ್ದು ನೋಡಿ ಕೇಳಿಕೊಂಡು ನನ್ನ ಗೆಳತಿಯ ಮನೆಗೆ ಧಾವಿಸಿದ್ದರು! ಏದುಸಿರು ಬಿಡುತ್ತಾ, ಕಾಲಿಗೆ ನಟ್ಟಿದ್ದ ಮುಳ್ಳನ್ನು ಹುಡುಕಿಕೊಳ್ಳುತ್ತಲೇ ‘ಬೇ, ಬೇ ರಿಜಲ್ಟ್ ಬಂತು!. ನೀವ್ ಪಾಸಾಗೀರಿ’ ಅಂದ್ರು.

ನನಗೆ ಖುಷಿಯಾಗುವ ಬದಲು ಅವರು ನನಗಾಗಿ ಬರಿಗಾಲಲ್ಲಿ ಓಡಿ ಬಂದು ಮುಳ್ಳು ನಡಿಸಿಕೊಂಡಿದ್ದು ಕಂಡು ಅಳು ಬಂದುಬಿಟ್ಟಿತು… ನನ್ನ ಅಳು ಕಂಡು ತಾವು ಓಡಿ ಬರುವಾಗ ಮುಳ್ಳು ಚುಚ್ಚಿಸಿಕೊಂಡಿದ್ದೇ ಅಪರಾಧವಾಯ್ತು ಅನ್ನುವಂತೆ “ಹೇ, ಇಲ್ಲ ತಗೀಬೇ, ಏನಾಗಿಲ್ಲ, ಏನಾಗಿಲ್ಲ, ಅನಸ್ತು ಅಷ್ಟ, ನಟ್ಟಿಲ್ಲ’’ ಎಂದು ಸೀದಾ ನಿಂತುಕೊಂಡಿದ್ದು ನನ್ನ ಜನುಮದಲ್ಲೇ ಮರೆಯಲಾಗದ ಘಟನೆ! (ನನ್ನ ಮರೆವು ಇವರ ಹೆಸರನ್ನು ಕಸಿದುಕೊಂಡಿದೆಯಾದ್ರೂ ಚಹರೆಯನ್ನಲ್ಲ! ಸಣ್ಣಗೆ ಐದಡಿ ಮೇಲೊಂದೆರೆಡು ಇಂಚು ಎತ್ತರವಿದ್ದ, ಸಾದುಗಪ್ಪು ಬಣ್ಣದ ಮುಖದಲ್ಲಿ ಸದಾ ಒಂದು ವಿನಮ್ರತೆಯನ್ನು ಡಿಫಾಲ್ಟ್ ಆಗಿ ಹೊಂದಿದಂಥ ಅಕ್ಕರೆಯುಳ್ಳ ಮನುಷ್ಯ) ಈಗಲೂ ಯೋಚಿಸುತ್ತಿರುತ್ತೇನೆ, ಯಾವ ಶಾಲೆಯ ಜವಾನನಾದ್ರೂ ಹೀಗೆ ವಿದ್ಯಾರ್ಥಿನಿಯೊಬ್ಬಳ ಫಲಿತಾಂಶಕ್ಕಾಗಿ ಈ ಪರಿಯಲ್ಲಿ ಖುಷಿಗೊಂಡಿದ್ದು ಇರೋಕೆ ಸಾಧ್ಯವಾ?!? ಅಂತ… ಈಗ ಗೊತ್ತು ನನಗೆ ಅವರ ಈ ಅಕ್ಕರೆಯ ಹಿಂದೆ ನನ್ನಪ್ಪ ಅವರ ಮನೆಯಲ್ಲಿ ಯಾರನ್ನೋ ಬದುಕುಳಿಸಿದ, ಕೈಯಲ್ಲಿ ಕಾಸಿಲ್ಲದಾಗ ಹೊರಗಿನಿಂದ ಔಷಧಿ ತರಲು ಅಷ್ಟಿಷ್ಟು ಹಣ ಕೊಟ್ಟ ಕಾರಣದ ಕೃತಜ್ಞತಾ ಭಾವ ಇದೆ ಅನ್ನೋದು. ಆದ್ರೂ ಯೋಚಿಸ್ತೀನಿ, ಅದಷ್ಟೇ ಆಗಿದ್ದರೆ, ಅವ್ರು ಅಪ್ಪನಿಗಷ್ಟೇ ಸುದ್ದಿ ಮುಟ್ಟಿಸಿ ಮರಳಬಹುದಿತ್ತಲ್ಲ ತಮ್ಮನೆಗೆ! ಊಂಹೂಂ, ನಮ್ಮೆನೆವರೆಗೂ ಓಡೋಡಿ ಬಂದವರು ಅದೇ ವೇಗದಲ್ಲಿ ನಾನಿದ್ದಲಿಗೇ ಬಂದೂ ವಿಷಯ ತಿಳಿಸಿದ್ದರು. ನನಗೆ ವಿಷಯ ತಿಳಿಸುವಾಗ ಅವರ ಕಣ್ಣಲ್ಲಿದ್ದ ಅಪಾರವಾದ ಸಂತಸ ತಮ್ಮನೆಯ ಕೂಸಿನ ಕುರಿತ ಖುಷಿಗೆ ಸಮವಾಗಿತ್ತು! ಅಷ್ಟು ಅಕ್ಕರೆ ತೋರಿಸುವಂಥದ್ದನ್ನೇನು ಮಾಡಿದ್ದೆ ನಾನು?! ಏನೂ ಇಲ್ಲ. ಎಲ್ಲ ಹೈಸ್ಕೂಲಿನ ಹುಡುಗಿಯರಂತೆ ನಾನೂ ಒಂದಿಷ್ಟು ತರ್ಲೆ ಮಾಡ್ಕೊಂಡು, ಆಡ್ಕೊಂಡು, ಒಂದಿಷ್ಟು ಓದುತ್ತಾ, ಎದುರಿಗೆ ಸಿಕ್ಕಾಗ ಅವರನ್ನು ಮಾತಾಡಿಸುತ್ತಾ ಇದ್ದೆ ಅಷ್ಟೆ. ಅಲ್ಲಿಗೆ ನನದೇನೂ ಹೆಚ್ಚುಗಾರಿಕೆಯಿಲ್ಲ, ಆ ಹೆಚ್ಚುಗಾರಿಕೆ ಏನಿದ್ದರೂ ಅವರ ಮಮತಾಮಯಿ ಮನಸ್ಸಿನದ್ದು. ನಿಸ್ವಾರ್ಥ ಪ್ರೀತಿಯದು! ಇಂಥ ಒಂದಿಷ್ಟು ಜನರ ನಿಸ್ವಾರ್ಥ ಪ್ರೀತಿ ನನ್ನ ಪಾಲಿಗೆ ಜೀವನದಲ್ಲಿ ಆಗಾಗ ದೊರಕುತ್ತಲೇ ಇರುವುದನ್ನ ನೋಡಿದಾಗ ಹೋದ ಜನ್ಮದಲ್ಲೇನೋ ಪುಣ್ಯದ ಕೆಲಸ ಮಾಡಿದ್ದೆ ಅಂತನಿಸುತ್ತೆ ಅಂದುಕೊಳ್ಳುತ್ತೇನೆ. ಆ ಎಲ್ಲ ಮನಸುಗಳೂ ಅವರ ಮನೆಗಳೂ ಯಾವಾಗ್ಲೂ ನೆಮ್ಮದಿಯಿಂದಿರ್ಲಿ ಅನ್ನುವ ಹಾರೈಕೆ ನನ್ನದು..

ನಾನು ಕಲಿತ ಶಾಲೆಯಲ್ಲಿ ಇದ್ದ ಮೂರು ಜನ ಹುಡುಗಿಯರಲ್ಲಿ ನಾನೊಬ್ಬಳು ಪಾಸಾಗಿದ್ದೆ. ಪಾಪ ಅವ್ರು ಮುಳ್ಳು ಚುಚ್ಚಿಸಿಕೊಂಡೂ ಕೇರ್ ಮಾಡದೆ ಓಡಿ ಬರುವಷ್ಟರ ಮಟ್ಟಿಗೆ ರ್ಯಾಂಕ್ ಏನೂ ಬಂದಿರ್ಲಿಲ್ಲ ನಾನು. ರ್ಯಾಂಕ್ ಬಿಡಿ ಡಿಸ್ಟಿಂಕ್ಷನ್ನೂ ಅಲ್ಲ ಅದು, ಜಸ್ಟ್ ಫಸ್ಟ್ ಕ್ಲಾಸ್ ಅಷ್ಟೆ! ಅದೂ ಕಾಟಾಕಾಟಿ ೬೧% !! 

ಈ ನಮ್ಮ ಶಾಲೆಯ ಅಟೆಂಡರ್ (ಆಗೆಲ್ಲ ಪ್ಯೂನ್ ಅಂತಿದ್ದುದು ಅಲ್ವಾ?)ರ ಅತಿಪ್ರೀತಿಯ ನೆಕ್ಸ್ಟ್ ವರ್ಶನ್ ನನ್ನಪ್ಪ! ಮಿಠಾಯಿಯವರನ್ನ ಕರೆಸಿ ಮನೆ ಪಕ್ಕದಲ್ಲಿ ಒಲೆ ಹೂಡಿಸಿ ದೊಡ್ಡದೊಂದು ಕಡಾಯಿ (ಬಾಣಲೆ)ಯಲ್ಲಿ ದುಂಡು ದುಂಡನೆಯ ಜಿಲೇಬಿ ಕರಿಸಿ, ಇಡೀ ಊರಿಗೇ ಹಂಚಿದ್ದು ಮತ್ತು ಬೆಂಗಳೂರಿನಿಂದ (ಆಗೆಲ್ಲ ಬೆಂಗಳೂರು ಅಂದರೆ ನಮಗೆಲ್ಲಾ ಫಾರಿನ್ ಇದ್ದಂತೆ!) ತಮ್ಮ ಆರ್ಕಿಯಾಲಾಜಿಸ್ಟ್ ಸ್ನೇಹಿತರಿಗೆ ಹೇಳಿ ಆಕಾಶ ಬಣ್ಣದ, ತುಂಬಾ ಮೃದುವಾದ ದುಪ್ಪಟ್ಟಾವುಳ್ಳ ಚೂಡಿದಾರ್ ಸೆಟ್ ತರಿಸಿದ್ದು! ಅದೂ ಜಸ್ಟ್ ಫಸ್ಟ್ ಕ್ಲಾಸ್ ಪಾಸಿಗೆ! ನನ್ನ ಬದುಕಿನ ಅಮೃತ ಘಳಿಗೆಗಳಲ್ಲಿ ನನ್ನ ಎಸ್‍ಎಸ್‍ಎಲ್‍ಸಿ ರಿಸಲ್ಟ್ ಸಹ ಒಂದು! 

|ಇನ್ನು ಮುಂದಿನ ವಾರಕ್ಕೆ|

‍ಲೇಖಕರು Admin

February 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: