ಜಯಲಕ್ಷ್ಮಿ ಪಾಟೀಲ್ ಅಂಕಣ- ಕನಸಲೂ ಊಹಿಸದ ದುರ್ಘಟನೆ ಕಂಡು ಬೆಚ್ಚಿಬಿದ್ದಿದ್ದ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯಲಿದ್ದಾರೆ.

9

‘ಅದ್ಯಾಕೆ ಚಿಕ್ಕ ಮಕ್ಕಳು ತಮ್ಮೊಂದಿಗೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ತಂದೆ ತಾಯಿಯೊಂದಿಗೆ ಹಂಚಿಕೊಳ್ಳುವುದಿಲ್ಲ?’

ಎಂದು ಇತ್ತೀಚಿನ ೭-೮ ವರ್ಷಗಳಲ್ಲಿ ಕೆಲ ಮನಶಾಸ್ತ್ರಜ್ಞರಲ್ಲಿ ಕೇಳಿರುವೆನಾದರೂ ಯಾರಿಂದಲೂ ಸಮರ್ಪಕ ಉತ್ತರ ನನಗೆ ದೊರೆತಿಲ್ಲ. ಆ ಆರು ಬೆರಳಿನ ಕಂಡಕ್ಟರ್ ನ ಕಿರುಕುಳ, ತೀರ ಹತ್ತಿರದ ಸಂಬಂಧಿಕರಿಬ್ಬರಿಂದ ಇಂಥ ಕಿರುಕುಳ ಅನುಭವಿಸಿದ ನಾನೂ ಮನೆಯಲ್ಲಿ ಆ ಕುರಿತು ಹೇಳಿರಲಿಲ್ಲ. ಇಷ್ಟವಾಗುತ್ತಿರಲಿಲ್ಲ, ಹಿಂಸೆಯಾಗುತ್ತಿತ್ತು, ಆದರೂ ಇದನ್ನು ಮನೆಯಲ್ಲಿ ದೊಡ್ಡವರೆದುರು ಹೇಳಬೇಕು ಎನ್ನುವುದೇ ತಲೆಯಲ್ಲಿ ಬಂದಿರಲಿಲ್ಲ! ಯಾಕೆ ಹಾಗೆ ಅನ್ನುವುದಕ್ಕೆ ನಿಖರ ಉತ್ತರ ಈಗಲೂ ನನಗೆ ಗೊತ್ತಿಲ್ಲ. ನನ್ನಂತೆ ಆ ಕಂಡಕ್ಟರಿನಿಂದ ಹಿಂಸೆ ಅನುಭವಿಸಿರಬಹುದಾದ ಇತರ ಹುಡುಗಿಯರೂ ಅವರ ಮನೆಯಲ್ಲಿ ಹೇಳಿರ್ಲಿಕ್ಕಿಲ್ಲ ಎಂದುಕೊಳ್ಳುತ್ತೇನೆ.

ನಾವು ಗೆಳತಿಯರು ಕೂಡ ಪರಸ್ಪರ ಹೇಳಿಕೊಂಡಿರಲಿಲ್ಲ. ಮಕ್ಕಳಾಟಿಕೆಯಲ್ಲಿ ಪರಸ್ಪರ ಹೊಡೆದಾಡಿದ್ದನ್ನು ಹೊಡೆದ/ಳು, ಚಿವುಟಿದ/ಳು, ನೂಕಿದ/ಳು ಎಂದು ಅಳುತ್ತಾ ಓಡೋಡಿ ಬಂದು ದೊಡ್ಡವರೆದುರು ಹೇಳುವ ಮಕ್ಕಳು, ಇಂಥವನ್ನೆಲ್ಲ ಯಾಕೆ ಹೇಳುವುದಿಲ್ಲ? ಇದೇನೋ ನನ್ನೊಟ್ಟಿಗೆ ಅಸಹಜವಾದುದು ನಡೆಯುತ್ತಿದೆ ಎನ್ನುವುದು ಅರಿವಿಗೆ ಬರುತ್ತದೆಯಾದರೂ ಅಸಹಜ ಅನ್ನುವ ಪದವಾಗಲಿ, ಅದರರ್ಥವಾಗಲಿ ಮಕ್ಕಳಿಗೆ ತಿಳಿದಿರುವುದಿಲ್ಲ, ಅನುಭವಕ್ಕೆ ಬರುತ್ತೆ, ಹಿಂಸೆಯಾಗುತ್ತೆ ಆದರೂ ಇಂಥವನ್ನು ಹಿರಿಯರೆದುರು ಹೇಳಬೇಕು ಎನ್ನುವುದು ಮಕ್ಕಳಿಗೆ ತೋಚುವುದಿಲ್ಲ. ಯಾಕೆ ಎಂದು ತುಂಬಾ ಸಲ ತಲೆ ಕೆಡಿಸಿಕೊಂಡಿದ್ದೇನೆ.

ದೇಹ ಬೆಳೆದಂತೆ ಅನುಭವಕ್ಕೆ ತಕ್ಕಂತೆ, ಆಸಕ್ತಿಗಳಿಗೆ ತಕ್ಕಂತೆ ಅವರವರ ಮಟ್ಟಕ್ಕೆ ಬುದ್ದಿಯೂ ಬೆಳೆಯುತ್ತದೆಯಲ್ಲವೆ. ಇಂಥ ವಿಷಯಗಳನ್ನು ಮನೆಯಲ್ಲಿ ದೊಡ್ಡವರೆದುರು ಹೇಳದಿರಲು, ಮಕ್ಕಳ ಮೆದುಳಿನ ಕಾರ್ಯ ಕ್ಷಮತೆ ಇನ್ನೂ ಹೆಚ್ಚಿರದ ಕಾರಣವೋ? ಇಲ್ಲವೇ ಜೊತೆಗಿರುವ ದೊಡ್ಡವರ ವರ್ತನೆ/ಪರಿಸರದ ಪ್ರಭಾವವೋ? ಅಥವಾ ಬೇರೆ ಇನ್ನೇನಾದರೂ ಕಾರಣಗಳಿರಬಹುದಾ? ಬಹುಶಃ ಈಗಿನಂತೆ ಆಗಿನವರೂ ‘ಏನೇ ಹಿಂಸೆ/ತೊಂದರೆಯಾದರೂ ತಕ್ಷಣ ಬಂದು ಅಮ್ಮ ಅಪ್ಪನಲ್ಲಿ ಹೇಳಬೇಕು’, ‘ಅಪರಿಚಿತರೊಡನೆ ಮಾತಾಡಬಾರದು’, ‘ನನ್ನ ನಿನ್ನ ಸಿಕ್ರೆಟ್ ಕೋಡ್’ ಮುಂತಾದವುಗಳನ್ನು ಹೇಳಿಕೊಡಬೇಕೆನ್ನುವುದನ್ನು ತಿಳಿದವರಾಗಿದ್ದರೆ ಬಹುಶಃ ಅಂಥ ಹಿಂಸೆಯಿಂದ ಅನೇಕ ಮಕ್ಕಳು ಪಾರಾಗುತ್ತಿದ್ದೇವೆನೋ.

ಕಾಲ ಬದಲಾಗಿದ್ದರೂ, ಇಂಥದ್ದೊಂದು ಜಾಗೃತಿ ಅಭಿಯಾನ ಜಗತ್ತಿನಾದ್ಯಂತ ಚಾಲ್ತಿಯಲ್ಲಿದ್ದರೂ ಭಾರತದಲ್ಲಿ ಇದು ನಗರ, ಪಟ್ಟಣಗಳಲ್ಲಿ ವಾಸಿಸುವ ಹಲವರಿಗೆ ಮಾತ್ರ ತಲುಪಿದೆ ಅನ್ನುವುದು ಕಟು ವಾಸ್ತವ. ಸೂಕ್ಷ್ಮವರಿಯದೇ ಇಂದಿಗೂ ಅನೇಕರು ಇಂಥ ವಿಷಯವನ್ನು ಪ್ರಸ್ತಾಪಿಸುವುದೂ ಮಹಾ ಕೊಳಕು ಎಂದುಕೊಳ್ಳುತ್ತಾರೆ. ಅದು ನಮ್ಮ ಸಂಸ್ಕೃತಿಯಲ್ಲ, ಸಂಸ್ಕಾರವಲ್ಲ ಎನ್ನುತ್ತಾರೆ.

ಆ ಮೂಲಕ ತಮ್ಮ ಮಕ್ಕಳ ಬಾಲ್ಯಕ್ಕೆ ಸುರಕ್ಷತೆಯ ಕವಚವಾಗುವ ಜವಾಬ್ದಾರಿಯಿಂದ ನುಣಿಚಿಕೊಳ್ಳುತ್ತಾರೆ. ಪ್ರಫುಲ್ಲ ವಾತಾವರಣದಲ್ಲಿ ನಗುತ್ತಾ ಅರಳಬೇಕಾದ ತಮ್ಮದೇ ಕುಡಿ ಮೌನವಾಗಿ ನಲಗುತ್ತಾ ಮುಲುಗುತ್ತಲೇ ಅರಳುವ ಹೋರಾಟದಲ್ಲಿರುವುದಕ್ಕೆ ಕಾರಣರಾಗ್ತಾರೆ. ಮಕ್ಕಳಲ್ಲಿ ಹುಡುಗಿಯರು ಮಾತ್ರವಲ್ಲ, ಹುಡುಗರೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ.

ಈಗಲೂ ನನಗೆ ಆ ಕಂಡಕ್ಟರನ ಹೊಲಸು ಮುಖ ನೆನಪಾದರೆ, ನನ್ನಂತೆ ನಂತರದಲ್ಲಿ ಇನ್ನೂ ಅದೆಷ್ಟು ಮಕ್ಕಳು ಅವನಿಂದ ತೊಡೆ, ಎದೆ ಚಿವುಟಿಸಿಕೊಂಡು ಹಿಂಸೆ ಅನುಭವಿಸಿರಲಿಕ್ಕಿಲ್ಲ ಅನಿಸಿ ರೋಷ ಉಕ್ಕುತ್ತದೆ. ಅವನು ಸತ್ತಿದ್ದಾನೋ, ಬದುಕಿದ್ದಾನೋ ಬದುಕಿದ್ದರೆ ಎಲ್ಲಿದ್ದಾನೋ ಹುಡುಕಿಕೊಂಡು ಹೋಗಿ ಕೆನ್ನೆಗೆ ಬಾರಿಸಬೇಕು ಅನಿಸುತ್ತದೆ. ಸಾಧ್ಯವಾಗಿಲ್ಲ. ಆದರೆ ತೀರ ಹತ್ತಿರದ ಸಂಬಂಧಿಕರಿಬ್ಬರು ಎಂದೆನಲ್ಲ, ಕೆಲ ವರ್ಷಗಳ ಹಿಂದೆ ಅವರಲ್ಲೊಬ್ಬನಿಗೆ ಸರಿಯಾಗಿ ಉಗಿದು ಮಂಗಳಾರತಿ ಮಾಡಿದ್ದೇನೆ ಎನ್ನುವ ಸಮಾಧಾನವಿದೆ. ಅಂಥದ್ದೊಂದು ಧೈರ್ಯ ನೀಡಿ, ನನ್ನೊಳಗಿನ ಹಿಂಸೆಗೊಂದು ಮುಕ್ತಿ ನೀಡಿದ ‘ಲ್ಯಾಂಡ್ ಮಾರ್ಕ್’ನ ನನ್ನ ಸ್ನೇಹಿತರನ್ನು ನಾನಿಲ್ಲಿ ಪ್ರೀತಿಯಿಂದ ನೆನೆಯುತ್ತೇನೆ. 

ನಾನು ಮಾತನಾಡಿಸಿದ ಮನಶಾಸ್ತ್ರಜ್ಞರೆಲ್ಲ, ಲೈಂಗಿಕ ಕಿರುಕುಳಕ್ಕೊಳಗಾದ ಮಕ್ಕಳು ಖಿನ್ನತೆಗೊಳಗಾದ ಉದಾಹರಣೆಗಳನ್ನು ಕೊಡುತ್ತಾ, ಹೇಗೆ ಪಾಲಕರಿಗೆ ತಮ್ಮ ಸಹಾಯದಿಂದ ಆ ಕುರಿತು ಗೊತ್ತಾಗಿ ಅದರಿಂದ ತಮ್ಮ ಮಕ್ಕಳನ್ನು ಪಾರು ಮಾಡಿದರೆನ್ನುವುದನ್ನು ವಿವರಿಸಿದರೇ ಹೊರತು, ಮಕ್ಕಳು ಯಾಕೆ ಹೇಳಿಕೊಳ್ಳುವುದಿಲ್ಲ ಅನ್ನುವುದನ್ನು ವಿವರಿಸಲಿಲ್ಲ. ನಾನಿಲ್ಲಿ ಖಂಡಿತ ಅವರನ್ನು ಆಡಿಕೊಳ್ಳುತ್ತಿಲ್ಲ. ಅವರುಗಳಿಂದ ನಮಗೆ ಅನೇಕ ಮಾಹಿತಿಗಳು ಸಿಕ್ಕು, ಜನದನಿಯ ಜಾಗೃತಿ ಕಾರ್ಯಕ್ರಮಕ್ಕೆ ಬಹಳಷ್ಟು ಅನುಕೂಲವಾಗಿದೆ.

ಬಹುಶಃ ಅವರುಗಳು ಮನಶಾಸ್ತ್ರ ಓದುವಾಗ ಈ ಕುರಿತು ಇನ್ನೂ ಸಂಶೋಧನೆ ಆಗಿರದೇ ಇದ್ದಿರಬಹುದಾದ ಸಾಧ್ಯತೆ ಇದೆ. ಈ ಕುರಿತು ಸಂಶೋಧನೆಗಳಾಗಿದ್ದು ಈ ಬರಹವನ್ನು ಓದುತ್ತಿರುವವರಿಗೆ ಅದು ಗೊತ್ತಿದ್ದಲ್ಲಿ ದಯವಿಟ್ಟು ತಿಳಿಸಿ. ‘ಜನದನಿ’ಯಿಂದ ನಾವು ಒಂದಿಷ್ಟು ಜನ ಸಮಾನ ಮನಸ್ಕರು ಸೇರಿ ‘ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ’ದ ಕುರಿತು ಜನರಲ್ಲಿ ಜಾಗೃತಿಯನ್ನುಂಟು ಮಾಡುತ್ತಾ ನಡೆದಿದ್ದೇವೆ. ನಿಮ್ಮಿಂದ ನಮಗೆ, ಸಮಾಜಕ್ಕೆ ತುಂಬಾ ಸಹಾಯವಾಗುತ್ತದೆ.

*

ನಮ್ಮ ಮದುವೆಯಾದ ಹೊಸತರಲ್ಲಿ ನನ್ನ ಗಂಡ, ಮುಂಬಯಿನ ಕಾಂಟ್ರ್ಯಾಕ್ಟರ್ ಒಬ್ಬರ ಕಂಪನಿಯಲ್ಲಿ, ಪುಣೆಯಲ್ಲಿ ಸೈಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಸತಾರಾ ರೋಡಲ್ಲಿರುವ ಧನಕ್ವಾಡಿಯಲ್ಲಿ ಕಟ್ಟಡದ ಕೆಲಸ ನಡೆಯುತ್ತಿತ್ತು. ದೊಡ್ಡ ದೊಡ್ಡ ಕಟ್ಟಡಗಳ ಕಾರ್ಮಿಕರಿಗೆಲ್ಲ ಸಾಮಾನ್ಯವಾಗಿ ಅದೇ ಜಾಗದಲ್ಲಿ ಶೆಡ್ಡುಗಳನ್ನು ಹಾಕಿಕೊಡಲಾಗುತ್ತದೆ. ಹಾಗೆಯೇ ಇವರ ಸೈಟಿನಲ್ಲೂ ಕೆಲಸಗಾರರು ಶೆಡ್ ಹಾಕಿಕೊಂಡಿದ್ದರು. ಅವರಲ್ಲಿ ಮಹಾರಾಷ್ಟ್ರದವರ ಜೊತೆಗೆ ಕನ್ನಡದವರೂ, ತಮಿಳರೂ ಇದ್ದರು.

ಮನೆಯಿಂದ ಇವರು ಕೆಲಸ ಮಾಡುವ ಸೈಟ್ ಕಣ್ಣಳತೆಯ ದೂರದಲ್ಲಿತ್ತಾದ್ದರಿಂದ (ಅಬ್ಬಬ್ಬಾ ಅಂದರೆ ೩೦೦-೪೦೦ ಮಿಟರ್ ದೂರ) ಅಲ್ಲಿನ ಚಟುವಟಿಕೆಗಳು ಮನೆಯಿಂದಾಚೆ ಬಂದು ನಿಂತರೆ ಕಾಣುತ್ತಿದ್ದವು. ಮನೆಯ ಗ್ರೌಂಡ್ ಫ್ಲೋರಲ್ಲಿ ಓನರ್ ಇದ್ದರೆ, ಮೊದಲ ಅಂತಸ್ತಿನಲ್ಲಿ ನಾವು ವಾಸಿಸುತ್ತಿದ್ದೆವು. ಬೇರೆ ಜಾಗಗಳಿಗೆ ಹೋದಾಗ ಸಹಜವಾಗಿಯೇ ನಮ್ಮವರು ಎನ್ನುವುದೊಂದು ಆತ್ಮೀಯತೆ ಅಂತಸ್ಥನ್ನು ಮೀರಿ ಬೆಳೆದುಬಿಡುತ್ತದಲ್ಲ, ಅಂಥದ್ದೊಂದು ಆತ್ಮೀಯತೆ ನನ್ನ ಗಂಡ ಹಾಗೂ ಕನ್ನಡ ಕಾರ್ಮಿಕರ ನಡುವೆ ಬೆಳೆದಿತ್ತು.

ಹೀಗಾಗಿ ಅವರುಗಳಿಗೆ ಏನಾದರೂ ತೊಂದರೆಯಾದಾಗ, ಮ್ಯಾನೇಜರ್ ಸಂಬಳ ಕೊಡಲು ಸತಾಯಿಸಿದಾಗ, ನಮ್ಮ ಮನೆಗೆ ಬಂದು ಇವರಲ್ಲಿ ಹೇಳಿಕೊಂಡು, ಸಮಸ್ಯೆಯನ್ನು ಬಗೆ ಹರಿಸಿಕೊಳ್ಳುವುದು ಸಾಮಾನ್ಯವಾಗಿತ್ತು.

೧೯೯೧ರ ಮಾರ್ಚ್ ಅಥವಾ ಎಪ್ರಿಲ್ ತಿಂಗಳಿರಬೇಕು, ನಮ್ಮ ಮದುವೆಯಾಗಿ ೪-೫ ತಿಂಗಳುಗಳಾಗಿದ್ದವಷ್ಟೆ. ನಾನು ಪುಣೆಗೆ ಬಂದು ಮೂರು ತಿಂಗಳಾಗಿದ್ದಿರಬಹುದು. ಅದೊಂದು ರಾತ್ರಿ ಎಂಟೂವರೆ ಹೊತ್ತಿಗೆ ಊಟ ಮಾಡುತ್ತಿದ್ದೆವು. ಧಡ ಧಡ ಮೂರ್ನಾಲ್ಕು ಜನ ಮೆಟ್ಟಿಲೇರಿ ಬರುವ ಸದ್ದು ಕೇಳಿಸಿತು. ಸ್ಲ್ಯಾಬ್ ಹಾಕುವುದು ಇದ್ದಾಗಲೆಲ್ಲ ಇವರು ರಾತ್ರಿ ಸೈಟಿಗೆ ಹೋಗುವುದಿತ್ತಾದ್ದರಿಂದ ಆ ವೇಳೆಯಲ್ಲಿ ಇವರ ಸೈಟಿನ ಜನರ್ಯಾರಾದರು ಇವರನ್ನು ಕಾಣಲು ಬರುವುದು ನನಗಾಗಲೇ ಅಭ್ಯಾಸವಾಗಿತ್ತಾದ್ದರಿಂದ ಅಚ್ಚರಿಯಾಗಲಿಲ್ಲ. ಆದರೆ ಅವತ್ತು ಸ್ಲ್ಯಾಬ್ ಹಾಕೋದಿರ್ಲಿಲ್ಲ. ಕಾಲಿಂಗ್ ಬೆಲ್ ಸದ್ದಾಗದೆ, ಬಾಗಿಲು ಬಡಿವ ಸದ್ದು ಕೇಳಿಸಿತು. ಊಟ ಮಾಡುತ್ತಿದ್ದ ಇವರು ಎದ್ದು ಬಾಗಿಲು ತೆರೆದು ಅವರೊಡನೆ ಮನೆಯಾಚೆಗೇ ನಿಂತು ಏನೆನ್ನೋ ಮಾತಾಡಿದವರು, ‘ಈಗ ಬರ್ತೀನಿ, ಬಾಗ್ಲಾ ಹಾಕ್ಕೊ’ ಎಂದವರೇ ಲಗುಬಗೆಯಿಂದ ಬಟ್ಟೆ ಬದಲಿಸಿ ಹೊರಟು ನಿಂತರು.

‘ಯಾಕ್ರಿ ಏನಾತು? ಊಟಾನರ ಪೂರಾ ಮುಗಸಿ ಹೋಗ್ರಿ’ ಎಂದೆ. 

‘ಇಲ್ಲ, ಬರ್ತೀನಿ, ನೀ ಬಾಗ್ಲಾ ಹಾಕ್ಕೊ’ ಎಂದು ಹೊರಟೇಬಿಟ್ಟರು. 

ಬಾಗಿಲು ಹಾಕಿಕೊಂಡು ಊಟ ಮುಗಿಸಿ ಇವರಿಗಾಗಿ ಕಾಯುತ್ತಾ ಕುಳಿತೆ. ಸ್ವಲ್ಪ ಹೊತ್ತಿಗೆಲ್ಲ ಬಾಗಿಲು ಮುಚ್ಚಿದ್ದರೂ ಸೈಟಿಂದ ಜೋರುಜೋರಾದ ದನಿ ಕೇಳಿ ಬರತೊಡಗಿ, ಏನಾಗುತ್ತಿದೆ ಎಂದು ತಿಳಿಯದೆ ಗಾಬರಿಯಿಂದ ಹೊರಗೆ ಬಂದೆ. ಜನ ಗುಂಪು ಸೇರಿದ್ದು ಕಾಣಿಸಿತು. ಅಲ್ಲಿ ಯಾರೋ ಮೂರ್ನಾಲ್ಕು ಜನ  ಕೂಗಾಡುತ್ತಿರುವ, ಇನ್ನ್ಯಾರೋ ಅಳುತ್ತಿರುವ ಸದ್ದುಗಳನ್ನು ಕೇಳಿ ಎದೆಯಲ್ಲಿ ನಡುಕ ಹುಟ್ಟಿಕೊಂಡಿತು. ಏನಾಗಿರಬಹುದು? ಯಾಕೀ ಗಲಾಟೆ? ನನ್ನ ಗಂಡ ಸುರಕ್ಷಿತ ತಾನೆ? ಇವರನ್ನು ಕರೆಯಲು ಬಂದಿದ್ದವರು ಪರಿಚಿತರೇ ಹೌದಾ? ಅಥವಾ ಬೇರೆ…. ಹೀಗೆ ಏನೇನೋ ನೂರೆಂಟು ಗಂಡನ ಸುರಕ್ಷತೆಯ ಕುರಿತು ಆತಂಕದ ಆಲೋಚನೆಗಳು. ಒಂದರ್ಧ ಮುಕ್ಕಾಲು ಗಂಟೆಯ ನಂತರ ನಿಧಾನವಾಗಿ ಸದ್ದುಗಳು ಅಡಗಿದವು. ಇವರು ಮನೆಗೆ ಬರುವವರೆಗೆ ನಾನು ಕೆಂಡದೆ ಮೇಲೆ ಕಾಲಿಟ್ಟವಳಂತೆ ಚಡಪಡಿಸುತ್ತಿದ್ದೆ. ಮೂರು ಗಂಟೆಗಳ ನಂತರ ಇವರು ಸುರಕ್ಷಿತವಾಗಿ ಮನೆಗೆ ಬಂದಾಗ ಹೊಯ್ದಾಟ ನಿಂತು ನಿಟ್ಟುಸಿರಿಟ್ಟೆ. 

‘ಏನಾತ್ರಿ? ಯಾಕಷ್ಟು ಬಾಯಿ ಆಗಾಕತ್ತಿತ್ತಲ್ಲಿ? ಅಂಜಿಬಿಟ್ಟಿದ್ದೆ ನಾನು’

‘ಏನಿಲ್ಲ. ಮಕ್ಕೊ ನಡಿ ನೀನು’

‘ಅಲ್ಲ, ಮತ್ತ..’

‘ನಡಿ ನನಗ ನಿದ್ದಿ ಬಂದೈತಿ, ನಾಳೆ ಹೇಳ್ತೀನಂತ’ ಎಂದವರೇ ಹಾಸಿಗೆ ಸೇರಿದರು. ಇವರು ನಾಳೆ ಹೇಳ್ತೀನಿ ಅಂತಿದ್ದಾರೆ ಅಂದ್ರೆ ಅಂಥಾ ತಲೆ ಹೋಗೊ ವಿಷಯವಿರ್ಲಿಕ್ಕಿಲ್ಲ ಎಂದು ನಾನೂ ಮಲಗಿದೆ. ಹಾಸಿಗೆಗೆ ಮೈಯಂಟಿದರೆ ಸಾಕು ನಿದ್ದೆ ಹೋಗುವ ಇವರು ಪದೇ ಪದೇ ಮಗ್ಗುಲು ಬದಲಿಸುತ್ತಿದ್ದರು. ಮಲಗುವುದು ಅವರಿಂದಾಗದೇ ಎದ್ದು ಕುಳಿತು,

‘ಹೊಟ್ಟಿಗೆ ಅನ್ನಾ ತಿನ್ನಂಗಿಲ್ಲ ಈ ಸುಳೇಮಕ್ಕ್ಳು. ಮನಷ್ಯಾರದಾರೋ ಇಲ್ಲಾ ದನಾ ಅದಾರೋ!! ಥು!’

ಅಲ್ಲಿಯವರೆಗೆ ಅವರ ಬಾಯಿಂದ ಯಾವತ್ತೂ ಕೆಟ್ಟ ಬೈಗುಳಗಳನ್ನು ಕೇಳಿಯೇ ಗೊತ್ತಿರದ ನಾನು, ಏನೂ ಅರ್ಥವಾಗದೆ ಮಿಕಮಿಕ ಅವರ ಮುಖವನ್ನೆ ನೋಡುತ್ತಾ, ‘ಏನಾತ್ರಿ? ಯಾರಿಗ್ ಬೈಯಾಕತ್ತೀರಿ ನೀವು? ಯಾರರ ಏನರೆ ಅಂದ್ರೇನ್ ನಿಮಗ?’ ಎಂದೆ.

‘ನನಗ್ಯಾರ್ ಏನ್ ಅಂತಾರ! ಸೈಟಿನ್ಯಾಗ ಒಬ್ಬ ಲೇಬರ್ ಕುಡುದು ಬಂದು, ತನ್ನ ಮಗಳ ಜೊತಿಗೆ ಅಲ್ಲೇ ಆಟಾ ಆಡಾಕತ್ತಿದ್ದ ಬಾಜೂ ಝೋಪಡಿ ನಾಕ ವರ್ಷದ ಹುಡ್ಗಿನ್ನ, ತನ್ನ ಝೋಪಡಿಗೆ ಎಳ್ಕೊಂಡು ಹೋಗಿ ರೇಪ್ ಮಾಡ್ಯಾನ. ಆ ಹುಡುಗಿ, ಕಾಲ ತುಂಬೆಲ್ಲಾ ರಕ್ತಾ ಸೋರಸ್ಗೋತ ಅಳಕೋತ ಹೊರಗ ಬಂದಾಗ ಎಲ್ಲಾರ್ಗೂ ಗೊತ್ತಾಗೇತಿ. ಅದಕ್ಕ ಅವ್ರೆಲ್ಲ ಓಡಿ ಬಂದಿದ್ದ್ರು ನನ್ನ ಕರ್ಯಾಕ. ಹೋಗಿ ಅವನ್ನ ಕಂಬಕ್ಕ ಬಿಗದು ಅಲ್ಲೆ ಇದ್ದ ಸಲಾಕಿ ತೊಗೊಂಡು ನಾಕ್ ಬಿಗದ್ರ, ‘ಮಾಫ್ ಕರೊ ಸಾಬ್ ಗಲತಿ ಹೋಗಯಾ. ಪಿಯಾ ಥಾ, ತೊ ಪತಾ ನಹಿ ಚಲಾ, ನಶೆ ಮೆ ಥಾ ಸಾಬ್, ಛೋಡ್ ದೊ. ಗಲತಿ ಹುವಾ, ದುಬಾರಾ ಐಸಾ ನಹಿ ಕರೂಂಗಾ’ (ಕ್ಷಮಾ ಮಾಡ್ರಿ ಸಾಯೇಬ್ರ, ಕುಡ್ದಿದ್ದಿನ್ರಿ ಹಿಂಗಾಗಿ ಗೊತ್ತಾಗ್ಲಿಲ್ರೀ, ನಶಾದಾಗ ತಿಳೀದ ಮಾಡೀನ್ರಿ, ಬಿಟ್ಟಬಿಡ್ರಿ, ತಪ್ಪಾತ್ರಿ, ಮತ್ತ ಇಂಥಾ ತಪ್ಪು ಮಾಡಂಗಿಲ್ರೀ) ಅಂತ ಅಳತಾನ ಹಲ್ಕಟ್ ಸುಳೆಮಗಾ. ಇವ್ನಿಗೆ ತನ್ನ ಮಗಳನ್ನ ಮುಟ್ಟಬಾರ್ದು ಅನ್ನೂದು ನಶೇದಾಗ ಗೊತ್ತಾಕ್ಕತಿ. ಇದು ಗೊತ್ತಾಗ್ಲಿಲ್ಲಂತ! ಪೋಲಿಸ್ರನ್ನ ಕರ್ಸಿ ಅವನ್ನ ಅವ್ರಿಗೊಪ್ಪೀಸಿ ಬಂದೆ.’

‘ಮತ್ತ ಆ ಕೂಸು…?’

‘ಅವ್ರವ್ವ ಅಪ್ಪನ ಜೊತಿಗೆ ನಾಕೈದು ಮಂದಿನ್ನ ಜೋಡಿ ಮಾಡಿ ದವಾಖಾನಿಗೆ ಕಳ್ಸೀನಿ.’ ಎಂದ ಗಂಡನ ಮುಖ ನೋಡಿದೆ. ಕನಸಲೂ ಊಹಿಸದ ದುರ್ಘಟನೆಯೊಂದನ್ನು ಕಣ್ಣಾರೆ ಕಂಡು ಬೆಚ್ಚಿಬಿದ್ದಿದ್ದ ಅವರು, ಜೀವಕಳೆಯೇ ಇಲ್ಲದವರಂತೆ ವಿಷಣ್ಣರಾಗಿ ಕುಳಿತಿದ್ದರು. ಆ ರಾತ್ರಿ ನಾವಿಬ್ಬರೂ ನಿದ್ದೆ ಮಾಡಲಿಲ್ಲ.

 | ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಲಲಿತಾ ಸಿದ್ಧಬಸವಯ್ಯ

    ಪೈಶಾಚಿಕ ಕಾಮ ಇದು, ಪಿಶಾಚಿ ಬಿಡಿಸಿದ ಹಾಗೆ ಬಿಡಿಸಬೇಕು. ಒಳ್ಳೆಯ ಮಾತಿಗೆ ಬಗ್ಗುವಂತಹವಲ್ಲ ಇವು.

    ಪ್ರತಿಕ್ರಿಯೆ
  2. Akshata Deshpande

    ಛೆ!ಛೆ! ಏನ್ ಮಂದಿರಿ ಪ್ಪಾ ಮೈಯೆಲ್ಲಾ ಊರದೋತು .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: