ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ವೈಶಾಖ ಮಾಸದಲ್ಲಿ ಹೊಳೆ ಶಾಂತ ಇದ್ದಾಗ…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.

ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.

11

ದಿನ ರಾತ್ರೆ ಅವಳ ಜೊತೆಗೇ ಆ ಗೊಂಬೆ. ಅದನ್ನು ಎತ್ತಿ ಮುದ್ದಿಸಿದರೆ ವೆಂಕಟಲಕ್ಷ್ಮಿಗೆ ಕೊಂಕು ನಗೆ. ‘ಇದು ನನ್ನಮ್ಮ ತಂದದ್ದು. ಚೆಂದ ಇಟ್ಕಾ. ತುಂಡು ಮಾಡಿದ್ರೆ ತಿರಗಾ ಬೇರೆ ಸಿಕ್ಕಾ’ ಎನ್ನುವ ಗರ್ವಿಷ್ಠೆ. ಆದರೆ ಕೊನೆಗೂ ಹಾಗೇ ಆಯ್ತು. ಚಕ್ರಿ ಮನೆಯಿಂದ ಹೊರಟಾಗ ನೋಡುತ್ತಾಳೆ ಗೊಂಬೆಯ ಕೈಕಾಲು ಮುರಿದು ಅಂಗಿ ಹರಿದು… ಅವಳ ಚೀಲದಲ್ಲಿ ಇಟ್ಟದ್ದು ಇವನೇ. ಚೆಂದದ ಗೊಂಬೆಗೆ ಆದ ಸ್ಥಿತಿ ಕಂಡು ಅಳುತ್ತಿದ್ದ ಗೌರಿಗೆ ಶಂಕರಿ ಅತ್ತೆ ತನ್ನ ಮಗಳ ಗೊಂಬೆ ಕೊಟ್ಟಾಗ ಆಯಿ ಹಿಂದಕ್ಕೆ ಕೊಟ್ಟಿದ್ದಳು, ‘ಗೊಂಬೆ ಹಾಳಾದ್ದು ಅವಳದ್ದು. ಬದಲಿಗೆ ನಿನ್ನ ಮಗಳದ್ದು ಕಿತ್ತು ಕೊಡ್ಬೇಡ.” ಎಂದಳಲ್ಲದೆ ಗೌರಿಯನ್ನು ಸಂತೈಸಿದ್ದಳು ದೋಣಿ ಏರಿ ಹಿಂದಿರುಗುವ ದಾರಿಯಲ್ಲಿ.

ಅಮ್ಮೋ! ಚಕ್ರಿಮನೆಯ ಗಂಡುಮಕ್ಕಳ ಸಹವಾಸವೇ ಸಾಕು, ಇನ್ನು ಹೋಗುವುದು ಬೇಡ. ಮನಸ್ಸು ನೊಂದು ಹೇಳಿದರೂ ಅಮ್ಮಮ್ಮನ ಅಸೀಮ ಪ್ರೀತಿಯ ಸ್ಪರ್ಶಕ್ಕೆ ಮನದ ನೋವು ಮಾಸುವ ಗುಣವಿತ್ತು. ಅವಳ ದುಃಖ ನೋಡಿಯೇ ಅಪ್ಪಯ್ಯ ಗುಟ್ಟಾಗಿ ಯಾರ ಮುಖಾಂತರವೋ ತಂದುಕೊಟ್ಟಿದ್ದ ಪಿಳಿ ಪಿಳಿ ಕಣ್ಣು ಬಿಡುವ ಚೆಂದದ ಗೊಂಬೆಯನ್ನು.

‘ಮಿಣ್ಣಗಿದ್ದ ಅಣ್ಣನ ಬಣ್ಣ ಬೇರೆಯೇ’ ವಿನಾಯಕನನ್ನು ನೋಡಿಯೇ ಮಾಡಿದ ಗಾದೆ. ಇವನಿಗಿಂತ ಗಿರಿಧರ ವಾಸಿ. ನಾಣಿ ಹಳೆ ಸೈಕಲ್ ಚಕ್ರವನ್ನು ಕೋಲಿನಿಂದ ದೂಡುತ್ತ ಚಕ್ರಿಮನೆ ಅಂಗಳದಲ್ಲಿ ಆಡುತ್ತಿದ್ದಾಗ ಬಿದ್ದು ಕಾಲಿಗೆ ದೊಡ್ಡ ಗಾಯ ಆಗಿ ಹೋ, ಆಗ ಅವನನ್ನು ಕೂಡಲೆ ತನ್ನ ಸೈಕಲ್‌ನಲ್ಲಿ ಎದುರು ಕುಳ್ಳಿರಿಸಿ ಸರಕಾರಿ ದವಾಖಾನೆಗೆ ಕರೆದೊಯ್ದು ಡಾಕ್ಟರರಿಂದ ಹೊಲಿಗೆ, ಬ್ಯಾಂಡೇಜ್ ಮಾಡಿಸಿ ಕರೆ ತಂದವ ಗಿರಿಧರ. ಗಾಯ ಮಾಯುವ ತನಕ ಉಪಚಾರ ಅವನದೇ. ಅಲ್ಲಿ ಕೃತ್ರಿಮ ಇರಲಿಲ್ಲ. ಈಗೀಗ ನಾಣಿಯನ್ನು ತನ್ನ ಸೈಕಲ್‌ನಲ್ಲಿ ಕುಳ್ಳಿರಿಸಿ ಚಕ್ರಿ ಊರಲ್ಲಿ ತಿರುಗಿಸುವ. ಗೌರಿ ಆಸೆ ಕಣ್ಣಲ್ಲಿ ನೋಡಿದರೆ, ‘ಬರ್ತಿಯೇನೇ, ಹಿಂದಿನ ಸೀಟಲ್ಲಿ ಕೂತ್ಕಾ ಆಚೀಚೆ ಕಾಲು ಹಾಕಿ. ನಂಗೆಂತ ಹೆದರಿಕೆ ಇಲ್ಲೆ.ʼ ಎನ್ನುವ ದೊಡ್ಡ ಮಾರಾಯನಾಂಗೆ.

ಒಮ್ಮೆ ಕೂತಿದ್ದಳು ಸೀಟಿನ ಹಿಂದೆ ಒಂದೇ ಬದಿಗೆ ಎರಡೂ ಕಾಲು ಇಳಿಬಿಟ್ಟು. ಅವಳ ಗ್ರಹಚಾರ, ಸೈಕಲ್ ಸ್ವಲ್ಪದೂರ ಹೋಗಿತ್ತು, ಆಗ ಅವಳ ಉದ್ದದ ಪರಕಾರ ಸೈಕಲ್ ಚೈನಿನಲ್ಲಿ ಸುತ್ತಿ ತಿರುಗಿ ಸೈಕಲ್ ಸಮೇತ ಇಬ್ಬರೂ ಧರೆಗೆ ಉರುಳಿ. ಛೀ, ಪರಕರ ಸೈಕಲ್ ಚೈನಿನಿಂದ ಬಿಡಿಸಲಾಗದೆ ಪೂರಾ ಹರಿದು ಗಿರಿಧರನ ಮುಖ ಸುಟ್ಟ ಬದನೆಕಾಯಿ. ʼಅಮ್ಮಮ್ಮನಿಗೆ ಹೇಳಿ ನಿಂಗೆ ಹೊಸ ಪರಕರ ಹೊಲಿಸಿ ಕೊಡುವ. ಮೊಣಕೈ ಅಂಗೈ ತರಚಿ ರಕ್ತ ಬರ್ತಿದೆ. ಇರು, ಔಷಧ ಹಚ್ತೇನೆʼ

ಅದಕ್ಕೇಆಯಿ ಹೇಳಿದ್ದು ನಿಜವೇ, ‘ಎಲ್ಲಾ ಬಾಲ ಇಲ್ಲದ ಕಪಿಗಳು. ಈ ಚೇಷ್ಟೆ ಇನ್ನೊಂದಷ್ಟು ಕಾಲ. ದೊಡ್ಡವರಾಗಲಿ, ಸರಿಹೋಗ್ತಾವೆ.’
ಸುಭದ್ರ ಅತ್ತೆಗೆ ಹೂವಿನ ಹುಚ್ಚು. ಮಲ್ಲಿಗೆ, ಜಾಜಿ, ಪಾರಿಜಾತ, ಸೇವಂತಿಗೆ ಏನೆಲ್ಲ ಬೆಳೆಸಿದ್ದಾಳೆ. ಗೌರಿ ಬಂದರೆ ತಲೆ ತುಂಬ ಹೂ ಮುಡಿ ಎನ್ನುವವಳು. ಅಮ್ಮಮ್ಮ ಪ್ರತಿದಿನ ತಾನೇ ಅವಳ ತಲೆ ಬಾಚಿ ಬಿಗಿಯಾಗಿ ಎರಡು ಜಡೆ ಹೆಣೆದು ತುದಿಗೆ ರಿಬ್ಬನ್ ಬಿಗಿದು, ಕೆಲವೊಮ್ಮೆ ಒಂದೇ ಜಡೆ ಹಾಕಿ ಅದಕ್ಕೆ ಪೇಟೆಯಿಂದ ತಂದ ಚೌರಿ ಸೇರಿಸಿ, ಆ ಹೆಣೆದ ಜಡೆಗೆ ಮಲ್ಲಿಗೆಯ ಜಲ್ಲಿ ಬಿಟ್ಟು ಆಂ! ಆಗೆಲ್ಲ ಅಕ್ಕನ ಜಡೆಯ ಚೆಂದಕ್ಕೆ ನಾಣಿಯ ಕುಣಿದಾಟ. ‘ಅತ್ತೆ, ನಿಮ್ಮ ಮೊಮ್ಮಗನಿಗೂ ಒಂದು ಜುಟ್ಟು ಕಟ್ಟಿ ಮಲ್ಲಿಗೆ ಮಾಲೆ ಮುಡಿಸಿ’ ಎನ್ನುವಳು ಸುಭದ್ರ ಅತ್ತೆ. ಒಂದು ಸಂಜೆ ನಾಣಿ ಅಕ್ಕನಿಗಾಗಿ ಮಲ್ಲಿಗೆ ಮೊಗ್ಗುಗಳನ್ನು ಬಿದಿರು ಶಿಬ್ಬಲು ತುಂಬಾ ಕುಯ್ದು ತಂದಿದ್ದ. ಆ ಮೊಗ್ಗುಗಳಲ್ಲಿ ಹೆಚ್ಚಿನವು ನಾಡಿದ್ದು ಅರಳಬೇಕಾದ ಎಳೆ ಮೊಗ್ಗುಗಳು. ಅಮ್ಮಮ್ಮ ರಾತ್ರೆ ಅರಳುವ ಮೊಗ್ಗುಗಳನ್ನು ಮಾತ್ರ ಬೇರೆ ಮಾಡಿ ಎಳೆತನ್ನು ಬದಿಗಿಟ್ಟಳು.

‘ನಾಣಿ, ಎಳೆ ಮೊಗ್ಗು ಕುಯ್ದರೆ ಅವು ಅರಳುವುದೇ ಇಲ್ಲ. ಇಂತಾದ್ದು ದೇವರಿಗೂ ಸಲ್ಲ. ಜಡೆಗೆ ಮುಡಿಸಲೂ ಆಗ್ತಿಲ್ಲೆ. ಗಿಡವೂ ಅಳುತ್ತದೆ ಗೊತ್ತೇನೋ?’

‘ಅಮ್ಮಮ್ಮ, ನಾಣಿಯಂತೆ ಗಿಡ ಅಳುತ್ತದಾ?’ ಮುಗ್ಧನಾಗಿ ಕೇಳಿದ್ದ ನಾಣಿ.

‘ಹೂಂ, ನಾಣಿಗಿಂತ ಹೆಚ್ಚು’ ಅವನ ಕೆನ್ನೆ ಸವರಿ, ‘ತನ್ನ ಮೈಮೇಲೆ ಹೂ ಅರಳುವಾಗ ಪ್ರತಿ ಗಿಡವೂ ಸಂತೋಷದಲ್ಲಿ ನಗುತ್ತವಂತೆ. ಅದ್ಕೇ ಅಲ್ಲದಾ, ಹೂ ಕುಯ್ಯುವಾಗ ಪೂರಾ ಗಿಡ ಸಪಾಟ ಮಾಡೂದಲ್ಲ. ಹೂವು ಮತ್ತು ಮೊಗ್ಗುಗಳಲ್ಲಿ ಕೆಲವನ್ನು ಅದರಲ್ಲೇ ಬಿಡೆಕ್ಕು. ಮಲ್ಲಿಗೆ, ಜಾಜಿ ರಾತ್ರೆ ಅರಳುವ ಹೂಗಳು. ಅವುಗಳ ಅಂದಿನ ಮೊಗ್ಗು ತೆಗೆಯಕ್ಕಲ್ಲದೆ ನೀ ಕುಯ್ದಂಗೆ ನಾಡಿದ್ದು ಅರಳುವ ಮೊಗ್ಗಲ್ಲ’ ಹೇಳಿದ ಅಮ್ಮಮ್ಮ ಒಂದು ಅಡಿಕೆ ಹಾಳೆ ತಂದು ಎಳೆ ಮೊಗ್ಗುಗಳನ್ನು ಹರಡಿ ನೀರು ತಳೆದು ‘ತುಳಸಿ ಕಟ್ಟೆ ಬದಿಗೆ ಇಟ್ಟು ಬಾ’ ಎಂದಳು. ಆ ಮೊಗ್ಗುಗಳು ಎರಡು ದಿನ ಸಂದರೂ ಅರಳದೆ ಮುರುಟಿ ತುಳಸಿ ಗಿಡದ ಕೆಳಗೆ ಗೊಬ್ಬರವಾಗಿ, ಪಾಪ, ನಾಣಿ ಮುಖ ನೋಡಬೇಕು.

ಈ ಅಜ್ಜಿಯರೆಲ್ಲ ಒಂದೇ. ಅಜ್ಜಮ್ಮನಂತೆ ಈ ಅಮ್ಮಮ್ಮನೂ ಇದರಲ್ಲಿ ನಿಸ್ಸೀಮಳು. ಆದರೆ ಅಜ್ಜಮ್ಮನಿಗಿಂತ ಅಮ್ಮಮ್ಮನ ಕರಾಮತ್ತು ಇನ್ನೂ ಹೆಚ್ಚಿಗೆ. ಚಕ್ರಿ ಮನೆಯಿಂದ ತುಸು ದೂರದಲ್ಲಿ ಹರಿಯುವ ಚಕ್ರ ಹೊಳೆಯಲ್ಲಿ ಅಮ್ಮಮ್ಮ ಈಜುವುದನ್ನು ಕಣ್ಣಾರೆ ನೋಡಬೇಕು. ಸೀರೆಯನ್ನು ಕಚ್ಚೆಯಂತೆ ಕಟ್ಟಿ ಮೀನಿನಂತೆ ಲೀಲಾಜಾಲವಾಗಿ ಈಜಬಲ್ಲಳು. ನಾಣಿ, ಗಿರಿಧರ, ವಿನಾಯಕ ಎಲ್ಲ ಮಕ್ಕಳಿಗೂ ಈಜು ಕಲಿಸಿದ್ದು ಅವಳೇ. ಗೌರಿ ಒಬ್ಬಳೇ ಬಾಕಿ.

‘ಶರಾವತಿಯಂತೆ ನೀನು ಪುಕ್ಕಲು. ನೀರು ಕಂಡ್ರೆ ಮಾರುದೂರ. ಹೊಳೆ ದಡದಲ್ಲಿದ್ದ ನಮಗೆ ಈಜು ಬರದಿದ್ದರೆ ಜನ್ಮ ವ್ಯರ್ಥ. ಒಂದು ತಮಾಷಿ ಹೇಳ್ತೆ, ನಿನ್ನ ಅಜ್ಜಯ್ಯನಿಗೆ ಎಷ್ಟು ಬೇಡಿಕಂಡ್ರೂ ನನಗೆ ಈಜಲು ಕಲಿಸಲಿಲ್ಲೆ. ನಾನೆಂತ ಮಾಡ್ದೆ ಗೊತ್ತ?’ ಹೇಳುವಾಗ ಅವಳ ಕಣ್ಣಲ್ಲಿ ನಕ್ಷತ್ರದ ಮಿನುಗು. ಅಮ್ಮಮ್ಮನ ನೆನಪು ಜಾರುತ್ತದೆ ತನ್ನ ಬಾಲ್ಯಕಾಲಕ್ಕೆ. ‘ದಿನಾ ಚಕ್ರಹೊಳೆ ಬದಿಯಲ್ಲಿ ಮನೆಯವರ ಕೊಳೆ ಅರಿವೆಗಳನ್ನು ತೊಳೆದು ತಪ್ಪದು ನನ್ನ ಮತ್ತು ನನ್ನ ಕೊನೆ ಮೈದುನನ ಹೆಂಡತಿ ಈಶ್ವರಿಯ ಕೆಲ್ಸ. ಆಗ ನಾವು ಹೆಚ್ಚೆಂದರೆ ಹದಿನಾರು ವರ್ಷದ ಹುಡುಗೀರು. ಅಂಟವಾಳದ ಹುಡಿಯಲ್ಲಿ ನೆಂದ ಅರಿವೆಗಳನ್ನು ಹೊಳೆ ಕಲ್ಲಲ್ಲಿ ಹಾಕಿ ಗಸ್ ಗಸ್ ತಿಕ್ಕಿ ಒಗೆವದು ನನ್ನ ಕೆಲ್ಸ. ಈಶ್ವರಿ ಅದನ್ನು ಹರಿವ ನೀರಲ್ಲಿ ಹಾಕಿ ಆಚೀಚೆ ಎತ್ತಿ ತೆಗ್ದು ಜಾಲಿಸಿ ಹಿಂಡುವುದು.

ಆ ಹೊತ್ತಿನಲ್ಲಿ ದಿನಾ ನಾ ಎಂತ ಮಾಡ್ತಿದ್ದೆ ಗೊತ್ತಾ? ಹೊಳೆ ದಂಡೆ ಬದಿಯ ಕಲ್ಲನ್ನು ಎರಡೂ ಕೈಗಳಿಂದ ಒತ್ತಿಹಿಡಿದು ಮುಖ ಮಾತ್ರ ಮೇಲೆತ್ತಿ ದೇಹ ಪೂರಾ ನೀರಿಗಿಳಿಸಿ ಕಾಲುಗಳನ್ನು ಹೀಂಗೆ ನೀರಲ್ಲಿ ಬಡೀತಾ ಬಡೀತಾ ಹೋ, ಒಂದು ದಿನ ದುಡುಂ ನೀರಿಗೆ ಬಿದ್ದದ್ದೇ. ಹರಿವ ನೀರು. ಮುಳ್ಕ್ ಹಾಕಿ ಮುಳುಗಿ ಎದ್ದು ಮತ್ತೆ ಮುಳುಗಿ ನೀರಲ್ಲಿ ಅಷ್ಟು ದೂರ ಬಳ್ಕಂಡ್ ಹೋದೆ. ಈಶ್ವರಿ ಬೊಬ್ಬೆ ಕೇಳ್ತಿತ್ತು, ಅಕ್ಕ ಮುಳುಗಿದ್ಲು. ನಾ ಹಾಂಗೆ ಕೈ ಕಾಲು ಹೊಡೀತಾ ದೂರ ಹೋದವಳೂ ತಿರಗಾ ದಡ ಮುಟ್ದೆ. ಗೌರಿ, ಯಾವ ಮಾಯೆಯಲ್ಲಿ ಈಜಿ ಮೇಲೆ ಬಂದ್ನೋ.

‘ಈಶ್ವರಿಗೆ ಮನೇಲಿ ಹೇಳ್ಬೇಡ ಅಂದಿದ್ದೆ. ಹರಕು ಬಾಯಿ ಹೇಳದ್ದು ಪುಣ್ಯ. ನಾಲ್ಕು ದಿನದಲ್ಲಿ ಲಾಯಕ್ಕಾಗಿ ಈಜುದಕ್ಕೆ ಬಂತು. ಆದರೆ ನಿನ್ನ ಅಜ್ಜಯ್ಯ ಒಂದಿನ ಹೊಳೆಯಲ್ಲಿ ನಾನು ಈಜುವುದ ಕಂಡು ಹುಣಿಸೆ ಅಡರು ಹಿಡ್ಕಂಡು,’ ನೀರಲ್ಲಿ ಸಾಯ್ತಿಯೇನೇ? ಮೇಲೆ ಬಾ. ನಾಲ್ಕು ಬಾರಿಸ್ತೆ ನೋಡು’ ಬೊಬ್ಬೆ ಹಾಕಿದರು. ಹೆದರ್ತಾ ದಡ ಮುಟ್ಟಿ ಮೇಲೆ ಬಂದಾಗ’

ಹೇಳುತ್ತ ಭಾವುಕಳಾಗುತ್ತಾಳೆ ಅಮ್ಮಮ್ಮ. ಅಜ್ಜಯ್ಯ ಹುಣಿಸೇ ಅಡರು ಬಿಸಾಕಿ, ‘ಪಾಚೂ, ಒಬ್ಬಳು ಹೆಂಡತಿಯನ್ನು ಕಳ್ಕೊಂಡೆ. ನೀನೂ ಹೊಳೆಗೆ ಬಿದ್ದು ಗೊಟಕ್ ಅಂದ್ರೆ ನಂಗ್ಯಾರು ಗತಿ?ʼ ಹೆಣ್ಣಿನಂತೆ ಅತ್ತನಂತೆ. ಆಮೇಲೆ ದಿನಾ ಸಂಜೆ ಗಂಡ ಹೆಂಡತಿ ಇಬ್ಬರೂ ಒಟ್ಟಿಗೆ ಹೊಳೆಯಲ್ಲಿ ಈಜ್ತಿದ್ದರಂತೆ. ‘ನಾವು ಹೆದರಿದಷ್ಟೂ ನೀರು ನಮ್ಮನ್ನು ಹೆದರಿಸ್ತು. ನೀರಿನಲ್ಲಿ ಮುಳುಗಿದಷ್ಟೂ ನಮ್ಮನ್ನು ಇಷ್ಟ ಪಡುತ್ತು. ಹೆದರುಪುಕ್ಕಲು ನಿನ್ನ ಆಯಿ, ಈಜಲು ಕಲಿಯಲೇ ಇಲ್ಲ. ನಿನಗೆ, ನಾಣಿಗೆ ಕಲಿಸಲೂ ಬಿಡಲಿಲ್ಲ.ಇಬ್ಬರೇ ಮಕ್ಕಳು ಅಂತ ಮೋಹವೋ, ವಾತ್ಸಲ್ಯವೋ ತಿಳಿದು. ಆಯಿಗೆ ಹೇಳ್ಬೇಡ, ಈಸಲ ವೈಶಾಖ ಮಾಸದಲ್ಲಿ ಹೊಳೆ ಶಾಂತ ಇದ್ದಾಗ ನೀ ಈಜು ಕಲೀಬೇಕು ತಿಳೀತಾ?ʼ

ಅಮ್ಮಮ್ಮ ಹೇಳುವುದರಲ್ಲಿ ಹೆಚ್ಚು ರೋಚಕ ಸಂಗತಿ ಅವಳು ಗಾಂಧೀಜಿಯನ್ನು ನೋಡಿದ್ದು. ಅವಳ ಸ್ಮರಣೆಯಲ್ಲಿ ನಿತ್ಯ ಗಾಂಧೀಜಿ ಕಾಣಿಸಿಕೊಂಡಂತೆ ಹೇಳಿದಷ್ಟು ಸಾಲದು.

| ಇನ್ನು ನಾಳೆಗೆ |

‍ಲೇಖಕರು Admin

July 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಲಿತ ಎ.ಪಿ.

    ನಮ್ಮ ಬಾಲ್ಯವೆಲ್ಲ ಕಣ್ಣೆದುರು ಬರುವಷ್ಟು ಸಶಕ್ತ ಬರವಣಿಗೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: