ಜಯಲಕ್ಷ್ಮಿ ಪಾಟೀಲ್ ಅಂಕಣ –ಒಂದು ತಮಾಷೆಯ ಪ್ರಸಂಗ ಜರುಗಿತ್ತು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

36

ನನ್ನನ್ನು ನೋಡಲು ಬಂದ ವರನಿಗೋ ಡಾಕ್ಟರ್ ಮಗಳನ್ನೇ ಅಂದರೆ ನನ್ನನ್ನೇ ಮದುವೆಯಾಗಬೇಕೆನ್ನುವ ಹಠ. ಕೊನೆಗೆ ಮಗನ ಹಠದ ಎದುರು ತಾಯಿ ಸೋತು ಸುಮ್ಮನಾಗಿದ್ದಕ್ಕೆ ನಮ್ಮ ಮದುವೆಯ ಮಾತುಕತೆ ಮತ್ತು ಸರಳ ನಿಶ್ಚಿತಾರ್ಥ ೧೯೯೦ ಮಾರ್ಚ್ ೩೧ರಂದು ನಮ್ಮ ಮನೆಯಲ್ಲಿ ನೆರವೇರಿತು. ನಮ್ಮತ್ತೆ ತುಂಬಾ ಲಕ್ಷಣವಂತರು. ಐದು ಮುತ್ತಿನ ಮೂಗುತಿ ಧರಿಸಿದ ನೆಟ್ಟಗೆ ಮೂಗು, ಪುಟ್ಟ ಬಾಯಿ, ಹಣೆಯ ಮೇಲಿನ ಕುಂಕುಮ, ತಲೆ ತುಂಬಾ ಸೆರಗು ಹೊದ್ದು, ಕೊರಳಲ್ಲಿ ಗುಂಡು, ಬೋರಮಾಳ ಧರಿಸಿದ್ದ ಅವರನ್ನು ನೋಡಿದೊಡನೆಯೇ ಅವರ ಪ್ರತಿ ಗೌರವವ ಭಾವ ಮೂಡಿತ್ತು ನನಗೆ. ಆದರೆ ನಿಶ್ಚಿತಾರ್ಥದ ದಿನ ನಮ್ಮತ್ತೆಯವರು ದಾರದಿಂದ ನನ್ನನ್ನು ಕಾಲಿನಿಂದ ತಲೆಯವರೆಗೆ ಅಳೆದಿದ್ದು, ‘ಎಲ್ಲಿ ನಿನ್ನ ಪಾದಾ ತೋರ್ಸು’ ಎಂದು ನನ್ನ ಪಾದಗಳನ್ನ ಪರೀಕ್ಷೆ ಮಾಡಿದ್ದು ನನಗೆ ತುಂಬಾ ಇರುಸುಮುರುಸಾಗಿ ಅಂದು ಮುಖ ಊದಿಸಿಕೊಂಡೇ ಕುಳಿತು ಆರತಿ ಮಾಡಿಸಿಕೊಂಡಿದ್ದೆ. ನಿಶ್ಚಿತಾರ್ಥದ ನಂತರ ಒಂದು ತಮಾಷೆಯ ಪ್ರಸಂಗ ಜರುಗಿತ್ತು. 

ಒಂದು ದಿನ ಗೆಳತಿಯರೊಂದಿಗೆ ಸಿನಿಮಾ ನೋಡಲು ಹೋಗುವುದಕ್ಕಾಗಿ ಗಾಂಧಿ ಚೌಕಿಗೆ ಹೋಗುವ ಸಿಟಿ ಬಸ್ ಹತ್ತಿದ್ದೆ. ಗಾಂಧಿ ಚೌಕ ನಮ್ಮ ಬಿಜಾಪುರದ ಕೇಂದ್ರ ಸ್ಥಳ. ಆಗೆಲ್ಲಾ ಹೂವು ಹಣ್ಣು ತರಕಾರಿ, ಸಗಟು ದಿನಸಿ, ಚಪ್ಪಲ್ ಶೂಸ್, ಚಿನ್ನ ಬೆಳ್ಳಿ ಕಬ್ಬಿಣ, ಸಿನಿಮಾ, ಪುಸ್ತಕ, ಬಳೆ, ಪಾತ್ರೆ ಪಗಡೆ, ಬಟ್ಟೆ ಬರೆ ಏನೇ ಕೊಳ್ಳುವುದಿದ್ದರೂ, ಹೊಟೆಲ್ಲಿನ ಊಟ/ತಿಂಡಿಗೂ ಇಡೀ ಊರು ಗಾಂಧಿ ಚೌಕಿಗೇ ದೌಡಾಯಿಸುತ್ತಿತ್ತು. ಓಣಿಗಳೊಳಗಿನ ಕಿರಾಣಿ ಅಂಗಡಿಗಳು ಏನಿದ್ದರೂ ತುರ್ತಿಗೆ ಒದಗುವ ಅಂಗಡಿಗಳಾಗಿದ್ದವು. ಈಗ ಬಿಜಾಪುರ ಆಗಿನ ಹತ್ತರಷ್ಟು ದೊಡ್ಡದಾಗಿ ಬೆಳೆದು, ದೊಡ್ಡ ದೊಡ್ಡ ಓಣಿಗಳಲ್ಲೆಲ್ಲಾ ಒಂದೊಂದು ಗಾಂಧಿ ಚೌಕಿನಂತಾಗಿದ್ದರೂ ಈಗಲೂ ಗಾಂಧಿ ಚೌಕ್ ಎಂದರೆ ಊರ ಕೇಂದ್ರ ಮಾರುಕಟ್ಟೆ ಅಂತಲೇ ಲೆಕ್ಕ.

ಹಾಗೆ ಸಿಟಿ ಬಸ್ ಹತ್ತಿ ಕುಳಿತು, ಟಿಕೇಟು ತೆಗೆದುಕೊಳ್ಳಲೆಂದು ಕಂಡಕ್ಟರ್ ಕಡೆ ತಿರುಗಿ ದಂಗು ಬಡಿದುಹೋದೆ! ಸಿವಿಲ್ ಇಂಜಿನಿಯರ್ ಎಂದು ನನ್ನನ್ನು ನೋಡಲು ಬಂದ ವರನ ಸಾಕ್ಷಾತ್ ರೂಪ ಟಿಕೇಟ್ ಮತ್ತು ಹಣವಿರುವ ಚರ್ಮದ ಚೀಲವನ್ನು ಹೆಗಲಿಗೆ ಹಾಕಿಕೊಂಡು ನನ್ನತ್ತ ಕೈಚಾಚಿ ನಿಂತಿದೆ! ಫುಲ್ ಕಕ್ಕಾವಿಕ್ಕಿಯಾಗಿ ಹೋದೆ ನಾನು. ಸ್ವಲ್ಪ ಸುಧಾರಿಸಿಕೊಂಡು, ಟಿಕೆಟ್ ತೆಗೆದುಕೊಳ್ಳುತ್ತ ಮುದ್ದಾಂ ಪರಿಚಿತ ನಗು ಬೀರಿದೆ. ಕಂಡಕ್ಟರ್ ಏನೆಂದುಕೊಂಡನೋ ಏನೋ ಮಹಾನುಭಾವ, ಮುಖ ಗಂಟಿಕ್ಕಿಕೊಂಡು ಮುಂದಿನವರಿಗೆ ಟಿಕೇಟ್ ಕೊಡಲು ನನ್ನೆದುರಿನಿಂದ ಸರಿದುಹೋದ.

ವರನೇ ಈ ಕಂಡೆಕ್ಟರ್ ಆಗಿದಿದ್ದರೆ ನನ್ನನ್ನು ನೋಡಿ ತಾನು ಸುಳ್ಳು ಹೇಳಿ ಸಿಕ್ಕಿಬಿದ್ದ ಕಾರಣಕ್ಕೆ ಗಾಬರಿಯಾಗಬೇಕಿತ್ತು, ಬದಲಿಗೆ ನನ್ನ ನಗುವಿಗೆ ಅಪಾರ್ಥ ಕಲ್ಪಿಸಿಕೊಂಡು ಮುಖ ಗಂಟಿಕ್ಕುತ್ತಿರಲಿಲ್ಲ ಎನಿಸಿತಾದರೂ ತಲೇಲಿ ಹೊಕ್ಕ ಅನುಮಾನದ ಹುಳ ಸಮಾಧಾನದಿಂದ ಸಿನಿಮಾ ನೋಡಲು ಬಿಡಲಿಲ್ಲ. ಮನೆಗೆ ಬಂದವಳೇ ಅವ್ವನ ಹತ್ತಿರ ಹೀಗೀಗಾಯ್ತು ಎಂದೆ. ನಂಬಲಿಲ್ಲ. ಮುಂದೆ ಮತ್ತೆ ಒಂದೆರಡು ಸಲ ಬಸ್ಸಿನಲ್ಲಿ ಅವರನ್ನು ಕಂಡೆ. ಮುಂದೊಂದು ದಿನ ನಮ್ಮ ಶಿವು ಕಾಕಾ (ಲತಾ ಚಿಕ್ಕಮ್ಮನ ಪತಿ) ಮನೆಗೆ ಬಂದಿದ್ದಾಗ ಅವರೂ ಅದೇ ಕಂಡಕ್ಟರನ್ನು ಸಿಟಿ ಬಸ್ಸಲ್ಲಿ ನೋಡಿ, ಅದನ್ನು ಅವ್ವನೆದುರು ಹೇಳಿದಾಗ ನನ್ನ ಮಾತಿಗೆ ತುಸು ಬೆಲೆ ಬಂದಂತಾಗಿ, “ನಾ ಹೇಳಿದ್ರ ನೀ ನಂಬ್ಲಿಲ್ಲ, ಶಿವು ಕಾಕಾನೂ ಅದನ್ನ ಹೇಳಾಕತ್ತಾನ, ಈಗರೇ ನಂಬ್ತೀಯೊ ಇಲ್ಬೇ?” ಎಂದೆ. 

ಅವ್ವ ಗೊಂದಲದ್ದಿ ಬಿದ್ದರು. ಆಗ ಶಿವು ಕಾಕಾ, “ಎಕ್ಕಾ, ಇಂವಾ ನೋಡಾಕ ಆ ಹುಡುಗನ ಗತೇನ ಅದಾನ ಅಷ್ಟ ಬೇ. ಅವ್ನ ಬ್ಯಾರೆ, ಇವ್ನ ಬ್ಯಾರೆ, ಟೆನ್ಶನ್ ಮಾಡ್ಕೋಬ್ಯಾಡ” ಎಂದು ಸಮಾಧಾನ ಮಾಡಿದರು. ಮದುವೆಯಾದ ಮೇಲೆ ನನ್ನ ಪತಿಗೆ ಆ ಕಂಡಕ್ಟರನ್ನು ತೋರಿಸಿ ನಮಗಾದ ಗೊಂದಲದ ಬಗ್ಗೆ ಹೇಳಿ ನಕ್ಕಿದ್ದೆ.

೧೯೯೦ರ ಜನವರಿಯಲ್ಲಿರಬೇಕು, ಈಶಾನ್ಯ ಭಾರತದಿಂದ ABVPಯ ವಿದ್ಯಾರ್ಥಿಗಳ ತಂಡವೊಂದು ಬಿಜಾಪುರಕ್ಕೆ ಬಂದಿತ್ತು. ನಮ್ಮೂರಿನ ಟೂರಿಸ್ಟ್ ಹೊಟೆಲ್ಲಿನ ಮಾಲಿಕರಾದ ಪ್ರಭು ಅವರು ಸಮಾವೇಶವನ್ನು ಏರ್ಪಡಿಸಿ ಆ ತಂಡವನ್ನು ಕರೆಸಿದ್ದರಂತೆ. ನನಗಾಗ ABVP ಬಗ್ಗೆ ಏನೆಂದರೆ ಏನೂ ತಿಳಿದಿರಲಿಲ್ಲ. ಗೆಳತಿ  ಪದ್ಮಾ (ಪದ್ಮಜಾ ಬಿದರಿ)ಳ ಅಣ್ಣ ಶ್ರೀನಿವಾಸ ABVP ಮೇಂಬರ್ ಆಗಿದ್ದ. ಹೀಗಾಗಿ ಈಶಾನ್ಯ ಭಾರತದ ABVP ಸದಸ್ಯ ವಿದ್ಯಾರ್ಥಿಗಳು ಬಿಜಾಪುರಕ್ಕೆ ಬಂದಾಗ ಇಲ್ಲಿನ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವ ಕೆಲಸದಲ್ಲಿ ಭಾಗಿಯಾಗಿದ್ದ ಕಾರಣಕ್ಕೆ ಪದ್ಮಾ ನಮ್ಮೆಲ್ಲರನ್ನು ಕರೆದಿದ್ದಳು. ನಾನು, ಸುಹಾಸಿನಿ ಕೊರ್ತಿ, ವಾಣಿ ಕುಲಕರ್ಣಿ, ಡಿಂಪಿ ಆ ಸಮಾವೇಶಕ್ಕೆ ಹೋಗಿದ್ದೆವು.

ಕಾಮರ್ಸ್ ಕಾಲೇಜಿನಲ್ಲಿ ಸಂಜೆಯ ಏಳರ ಹೊತ್ತಿಗೆ ಸಮಾವೇಶವಿತ್ತು. ನಮಗಿಂತ ಮೂರ್ನಾಲ್ಕು ವರ್ಷ ದೊಡ್ಡವರೂ ನಮ್ಮ ಓರಿಗೆಯವರೂ ಸುಮಾರು ಜನ ಹುಡುಗ ಹುಡುಗಿಯರಿದ್ದರು ಬಂದವರಲ್ಲಿ. ಕುರ್ಚಿ ಮೇಜುಗಳಿಲ್ಲದ ಸಮಾವೇಶವದು. ಬಂದವರಲ್ಲಿ ಕೆಲವರು ಒಬ್ಬರಾದ ಮೇಲೆ ಒಬ್ಬರು ತಾವು ನಿಂತ ಜಾಗದಿಂದಲೇ ಕೆಲವರು ಇಂಗ್ಲಿಷಲ್ಲಿ, ಇನ್ನೂ ಕೆಲವರು ಹರುಕುಮುರುಕು ಹಿಂದಿಯಲ್ಲಿ ಬಲು ಉತ್ಸಾಹದಿಂದ ಆವೇಶದಿಂದ ಭಾಷಣ ಮಾಡಿದರೆ, ಉಳಿದವರು ಅದಕ್ಕೆ ಹುರುಪಿನಿಂದ ಪ್ರತಿಕ್ರಿಯಿಸುತ್ತಿದ್ದರು. ಅವರೆಲ್ಲ ಏನು ಮಾತಾಡುತ್ತಿದ್ದಾರೆ ಅನ್ನುವುದು ಎಳ್ಳಷ್ಟೂ ನನ್ನ ಗ್ರಹಿಕೆಗೆ ಸಿಗದಿದ್ದರೂ ಅವರ ಉತ್ಸಾಹ ಆಕರ್ಷಿಸಿತ್ತು. ಮರುದಿನ ಟೂರಿಸ್ಟ್ ಹೊಟೆಲ್ಲಿನಲ್ಲಿ ಅವರೊಂದಿಗೆ ಔತಣಕೂಟವಿತ್ತು. ಸುಹಾಸಿನಿ, ವಾಣಿ ಮತ್ತು ಡಿಂಪಿ ಆ ಔತಣಕೂಟದಲ್ಲಿ ಭಾಗವಹಿಸಿದರಾದರೂ ನಾನು ಅವರುಗಳಂತೆ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ ಅನ್ನುವ ಹಿಂಜರಿಕೆಯಿಂದಾಗಿ ಹೋಗದೇ ಮನೆಯಲ್ಲುಳಿದುಬಿಟ್ಟೆ! ಅವರೊಂದಿಗೆ ಭೂತನಾಳ ಕೆರೆಗೂ ಹೋಗಲಿಲ್ಲ. ನನ್ನ ಹಿಂಜರಿಕೆಯ, ಸಂಕೋಚದ ಸ್ವಭಾವದಿಂದಾಗಿ ಅನೇಕ ಅವಕಾಶಗಳನ್ನು, ಬೆಳೆಯಬಹುದಾದ ಪರಿಚಯ, ಗೆಳೆತನಗಳನ್ನು ಕಳೆದುಕೊಂಡಿದ್ದೇನೆ. ಈಗ ಸಾಮಾಜಿಕವಾಗಿ ಏನೆಲ್ಲಾ ರೀತಿಯಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದರೂ ಈ ಸಂಕೋಚ ಹಿಂಜರಿಕೆಗಳು ಸಂಪೂರ್ಣವಾಗಿ ನನ್ನಿಂದ ದೂರವಾಗಿಲ್ಲ. ತೀವ್ರತೆ ಕಡೆಮೆಯಾಗಿರುವುದೂ ಅಷ್ಟೇ ನಿಜ. ಬಹುಶಃ ಅಂದು ನನ್ನ ಈ ಸ್ವಭಾವಗಳು ನನಗೆ ಅಡ್ಡಿಯಾಗದೇ ಹೋಗಿದ್ದರೆ ನಾನು ಆಗಿನಿಂದಲೇ ಸಾಮೂಹಿಕ ಸಾಮಾಜಿಕ ಕೆಲಸಗಳಲ್ಲಿ ನನ್ನನ್ನು ತೊಡಗಿಸಿಕೊಂಡಿರುತ್ತಿದ್ದೆನೇನೋ… ಬಿಡಿ ರೇ ಪ್ರಪಂಚದಲ್ಲಿ ಎಲ್ಲವೂ ಸಾಧ್ಯ ಅಲ್ಲವೇ!

ಮದುವೆ ನಿಶ್ಚಯವಾದ ಮೇಲೆ ನನ್ನ ಭಾವಿಪತಿ ಪುಣೆಯಿಂದ ತಿಂಗಳಿಗೆ ಮೂರ್ನಾಲ್ಕು ಪತ್ರ ಬರೆಯುತ್ತಿದ್ದರು. ಹದಿನೈದು ದಿನಗಳಿಗೊಮ್ಮೆ ಫೋನ್ ಮಾಡುತ್ತಿದ್ದರು. ಎಸ್ ಟಿ ಡಿ (Subscriber trunk dialing) ಕರೆ ದುಬಾರಿಯಾಗಿರುತ್ತಿತ್ತು. ನಿಮಿಷ ಎರಡು ನಿಮಿಷಗಳಲ್ಲಿ ಮಾತು ಮುಗಿಸಿ ಫೋನ್ ಇಡುವ ಆತುರ ಎಲ್ಲರಿಗೂ. ಅಂಥದ್ದರಲ್ಲಿ ನನ್ನ ಭಾವಿ ಪತಿ ಐದು ಹತ್ತು ನಿಮಿಷಗಳ ಕಾಲ ಮಾತಾಡೋರು. ಮನೆಯರೆಲ್ಲ, ನಿನ್ನ ಗಂಡ ಪೂರಾ ಪಾಗಾರ ನಿನಗ ಫೋನ್ ಮಾಡಾಕ ಖರ್ಚು ಮಾಡ್ತಾನ ನೋಡು, ಜಲ್ದಿ ಮದವಿ ಮಾಡಿ ಮುಗಸಬೇಕು, ಆಗ ರೊಕ್ಕರ ಉಳೀತಾವ “ ಎಂದು ರೇಗಿಸುತ್ತಿದ್ದರು. ನನ್ನ ಸ್ನೇಹಿತರೆಲ್ಲ ನನ್ನ ಭಾವಿಪತಿಗೂ ಒಳ್ಳೆಯ ಸ್ನೇಹಿತರಾದರು. ಹುಡುಗಿಯರೆಲ್ಲ ಇವರನ್ನು ಮಾಮಾ ಎಂದು ಸಂಬೋಧಿಸಿದರೆ, ಹುಡುಗರಿಗೆಲ್ಲ ಇವ್ರು ಗೌಡ್ರು. ಇವತ್ತಿಗೂ ಆ ಸಂಬೋಧನೆ ಹಾಗೆಯೇ ಮುಂದುವರೆದುಕೊಂಡು ಬಂದಿದೆ.

೧೯೯೦ ಡಿಸೆಂಬರ್ ೧೨ನೇ ತಾರೀಖಿನಂದು ನಮ್ಮ ಮದುವೆ ಆಯಿತು. ಮದುವೆ ಗಂಡಿನವರ ಕಡೆ. ನಮ್ಮಲ್ಲಿ ಸಾಮಾನ್ಯವಾಗಿ ಚೊಚ್ಚಲ ಮಗನ ಮದುವೆಯನ್ನು ಗಂಡಿನವರು ತಮ್ಮಲ್ಲಿಯೇ ಮಾಡಿಕೊಳ್ಳುತ್ತಾರೆ. ನನ್ನ ಪತಿಯೂ ಮನೆಗೆ ಹಿರಿಮಗನಾಗಿದ್ದರಿಂದ ಮತ್ತು ಅವರಲ್ಲಿ ಗುಗ್ಗಳದ ಸಂಪ್ರದಾಯವಿದೆಯಾದ್ದರಿಂದ ಕಲಕೇರಿಯಲ್ಲಿಯೇ ನಮ್ಮ ಮದುವೆಯಾಯಿತು. ಗುಗ್ಗಳವೆಂದರೆ ವೀರಭದ್ರ ದೇವರ ಭಕ್ತರ ಮನೆಯಲ್ಲಿನ ಮದುವೆ ಸಮಯದಲ್ಲಿನ ಒಂದು ಸಂಪ್ರದಾಯದ ಆಚರಣೆ. ವೀರಭದ್ರನ ಭಕ್ತರಲ್ಲದೇ ಶಿವಭಕ್ತರ ಕೆಲ ಮನೆಗಳಲ್ಲೂ ಮದುವೆ ಹೊತ್ತಲ್ಲಿ ಕಡ್ಡಾಯವಾಗಿ ಈ ಸಂಪ್ರದಾಯವನ್ನು ಮಾಡುತ್ತಾರೆ.

ಗುಗ್ಗಳ ಹೊರಟ ಸಮಯದಲ್ಲಿ ಪುರವಂತರು ವೀರಭದ್ರನ ಸಾಹಸಗಳನ್ನು ಒಡಪಿನ ರೂಪದಲ್ಲಿ ಹೇಳುತ್ತಾ, ಕಣ್ಕಟ್ಟಿನಂಥಾ ಅನೇಕ ಚತುರ ಆಟಗಳನ್ನಾಡುತ್ತಾ, ಶಸ್ತ್ರಗಳನ್ನು (ಬೆಳ್ಳಿಯಿಂದ ಮಾಡಿದ ಮೂರ್ನಾಲ್ಕು ಫೂಟು ಉದ್ದದ, ಗಾತ್ರದಲ್ಲಿ ಕಿರುಬೆರಳಿನಿಂದ ಮೊದಲ್ಗೊಂಡು ಸೂಜಿಯಷ್ಟು ತೆಳ್ಳಗೆ ಇರುವ ತಂತಿಗಳು) ಕೆನ್ನೆ, ತುಟಿ, ನಾಲಿಗೆ, ಮುಂಗೈ ಮಣಿಕಟ್ಟು, ಕಣ್ರೆಪ್ಪೆ, ಹೀಗೆ ದೇಹದ ಹಲವು ಭಾಗಗಳಿಗೆ ಒಂದು ಬದಿಯಿಂದ ಚುಚ್ಚಿಕೊಂಡು ಇನ್ನೊಂದು ಬದಿಗೆ ಹಿರಿದೆಳೆದು ತೆಗೆಯುತ್ತಾರೆ. ಹರಕೆ ಹೊತ್ತವರೂ ಶಸ್ತ್ರ ಹಾಕಿಸಿಕೊಳ್ಳುತ್ತಾರೆ. ಮದುಮಕ್ಕಳಿಗೂ ಶಸ್ತ್ರ ಹಾಕುತ್ತಾರೆ ಎನ್ನುವುದು ಗೊತ್ತಾಗಿ ಮನೆಯಿಂದ ಹೊರಟ ಗುಗ್ಗಳ ಮೆರವಣಿಗೆ ದೇವಸ್ಥಾನವನ್ನು ತಲುಪುವವರೆಗೆ ನಾನು ಅಕ್ಷರಶಃ ಹೆದರಿಕೆಯಿಂದ ನಡಗುತ್ತಿದ್ದೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Akshata Deshpande

    ಅಮೋಲ್ ಮದ್ವೆ ಗುಗ್ಗುಳ ಮಿಸ್ ಮಾಡ್ಕೊಂಡಿದ್ದೆ.. ಇವತ್ತು ಓದಿ ಗುಗ್ಗುಳ ನೋಡಿದ ಹಾಗಾಯ್ತು. ಮುಂದಿನ ಭಾಗಕ್ಕಾಗಿ ಕಾಯುತ್ತಿರುವೆ ❤️❤️

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: