ಪಿ ಪಿ ಉಪಾಧ್ಯ ಸರಣಿ ಕಥೆ 67- ಅಂತ್ಯನನ್ನು ನೋಡಿದ ಅನಂತನ ಕಣ್ಣಲ್ಲಿ ನೀರು…

ಪಿ ಪಿ ಉಪಾಧ್ಯ

ಯಾರಿಗೂ ಕಾಯದ ಕಾಲ ಮಾತ್ರ ಓಡುತ್ತಲೇ ಇದೆ. ಆದಿ ಮತ್ತು ಅಂತ್ಯ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಇದ್ದದ್ದೂ ಹೆಚ್ಚು ಮಗ್ನರಾಗಿ ಕೆಲಸ ಮಾಡುತ್ತ ಕಾಲ ಕಳೆಯುತ್ತಿದ್ದಾರೆ. ಇಬ್ಬರಿಗೂ ಮದುವೆ ಬೇರೆ ಇಲ್ಲ. ಈಗ ಮದುವೆಯ ವಯಸ್ಸೂ ಕಳೆದಿದೆ. ಆದಿಗೆ ಐವತ್ತು ಕಳೆದಿದೆ. ಅಂತ್ಯ ಅವನಿಗಿಂತ ಹನ್ನೆರಡು ವರ್ಷ ಚಿಕ್ಕವ. ಆದಿ ಅಪ್ಪ ಅಮ್ಮ ಇದ್ದಾಗಲೇ ಬಂದ೦ತಹ ಹಲವು ಸಂಬ೦ಧಗಳನ್ನು ತಿರಸ್ಕರಿಸಿ ತನಗೆ ಮದುವೆಯೇ ಬೇಡ ಎಂದು ಕುಳಿತವನು. ಅಂತ್ಯನಿಗೆ ಮದುವೆಯ ಮಾತು ಹೇಳಲು ಆ ತಂದೆ ತಾಯಂದಿರೇ ತುಸು ಹಿಂಜರಿದಿದ್ದರು. ಅವರಿಬ್ಬರ ಮನಸ್ಸಿನ ಮೂಲೆಯಲ್ಲೂ ಕೊರೆಯುತ್ತಿದ್ದ ಚಿಂತೆ ಅಣ್ಣನಿಗೆ ಆಗದೆ ತಮ್ಮನಿಗೆ ಹೇಗೆ ಮಾಡುವುದು ಎನ್ನುವುದೇ. ಜೊತೆಗೆ ಅಣ್ಣ ಎಂದಾದರೂ ಒಪ್ಪಿಯಾನು ಎನ್ನುವ ದೂರದ ಆಸೆ. ಆ ಆಸೆಯಲ್ಲಿಯೇ ಒಬ್ಬರ ಹಿಂದೆ ಒಬ್ಬರು ಕೊನೆಯುಸಿರೆಳೆದಿದ್ದರು.

ಈಗ ಅಪ್ಪ ಅಮ್ಮ ಸತ್ತು ವರ್ಷಗಳೇ ಕಳೆದಿವೆ. ಯಕ್ಷಗಾನ ಕೇಂದ್ರದ ನಾಡಿಯೇ ಆಗಿದ್ದ ಶಾಸ್ತ್ರೀಗಳೂ ಕೊನೆಯುಸಿರೆಳೆದು ಸಮಯ ಕಳೆದಿದೆ. ಅಂತ್ಯನೇ ಕೇಂದ್ರವನ್ನು ಪೂರ್ತಿಯಾಗಿ ನೋಡಿಕೊಳ್ಳುತ್ತಿದ್ದಾನೆ. ಹಣದ ವ್ಯವಹಾರ ಮಾತ್ರ ಆದಿಯದ್ದೇ. ಅದೂ ಕೇಂದ್ರದ ಚಟುವಟಿಕೆಗಳಿಗೆ ಹಣ ಕಮ್ಮಿ ಬೀಳುತ್ತಿದೆಯೆನ್ನುವ ಸೂಚನೆ ಸಿಕ್ಕಿದರೆ ಸಾಕು ಕೂಡಲೇ ವ್ಯವಸ್ಥೆ ಮಾಡುತ್ತಾನೆ. ಉಳಿದಂತೆ ಆದಿ ತನ್ನನ್ನು ಸಾಮಾಜಿಕ ಕೆಲಸಗಳಲ್ಲಿ ಪೂರ್ತಿಯಾಗಿ ತೊಡಗಿಸಿಕೊಂಡಿದ್ದಾನೆ.

ಚುನಾವಣೆಗೆ ನಿಲ್ಲುವ ಬಗ್ಗೆ ಬಹಳಷ್ಟು ಕೋರಿಕೆಗಳು ಬಂದಿದ್ದಾವೆ. ಜನ ಒತ್ತಾಯಿಸುತ್ತಿದ್ದಾರೆ. ನಿಮ್ಮಂಥವರೇ ನಮ್ಮನ್ನು ಆಳಲು ಬರಬೇಕು. ಜನರಿಗೆ ನೆಮ್ಮದಿ ಸಿಗುತ್ತದೆ. ಒಳ್ಳೆಯದಾಗುತ್ತದೆ ಎಂದು ಸ್ಥಳೀಯ ಪಂಚಾಯಿತಿಯಿ೦ದ ಹಿಡಿದು ಎಸ್ಸೆಂಬ್ಲಿಯ ವರೆಗೆ ಚುನಾವಣೆ ಬಂದಾಗಲೆಲ್ಲ ಇವನನ್ನು ಒತ್ತಾಯಿಸುತ್ತಾರೆ. ತಮ್ಮ ತಮ್ಮೊಳಗೆ ಮಾತಾಡಿಕೊಳ್ಳುತ್ತಾರೆ ಸಹ ‘ನಮ್ಮ ಆದಿ ಚುನಾವಣೆಗೆ ನಿಂತರೆ ಆಯ್ಕೆಯಾಗುವುದರ ಬಗ್ಗೆ ಸಂಶಯವೇ ಇಲ್ಲ. ಅಷ್ಟೇ ಅಲ್ಲ. ಅವನೊಬ್ಬ ಮಂತ್ರಿಯೂ ಆಗುತ್ತಾನೆ’ ಎಂದು. ಈ ಎಲ್ಲ ಮಾತುಗಳು ಆದಿಯ ಕಿವಿಯ ಮೇಲೂ ಬೀಳುತ್ತವೆ. ಆದರೆ ಅವನದ್ದು ಮಾತ್ರ ಒಂದೇ ಉತ್ತರ. ‘ಅದೆಲ್ಲ ನನಗೆ ಬೇಡ. ಈಗೇನು ಮಾಡುತ್ತಿದ್ದೇನೋ ಅದನ್ನೇ ಮುಂದುವರಿಸಿಕೊ೦ಡು ಹೋಗುತ್ತೇನೆ. ಬೇರೆ ಏನೂ ಆಸೆಯಲ್ಲ ನನಗೆ’ ಎಂದು ಅವರೆಲ್ಲರ ಬೇಡಿಕೆಗಳನ್ನೂ ನಯವಾಗಿಯೇ ತಿರಸ್ಕರಿಸುತ್ತ ಬಂದಿದ್ದಾನೆ.

ಈ ನಡುವೆ ನಡೆದ ಒಂದು ಅನಿರೀಕ್ಷಿತ ವಿದ್ಯಾಮಾನವೆಂದರೆ ಅನಂತ ಊರಿಗೆ ಬಂದದ್ದು. ಅಪ್ಪ ಅಮ್ಮ ಇಬ್ಬರೂ ಸತ್ತಿದ್ದೇ ತಿಳಿಯದ ಅವ ಊರಿಗೆ ಬಂದದ್ದೇ ಅವರು ಸತ್ತ ಹನ್ನೆರಡು ವರ್ಷಗಳ ಮೇಲೆ. ಒಬ್ಬನೇ ಬಂದಿದ್ದ. ಪರಿಚಯ ಸಿಗದಷ್ಟು ಬದಲಾಗಿದ್ದರೂ ಕರುಳ ಸಂಬ೦ಧ ಗುರುತು ಹಿಡಿದಿತ್ತು. ಹಾಗಾಗಿ ಊರಿನವರೆಲ್ಲ ಇದು ಯಾರೋ ಹೊಸ ನೆಂಟರೊಬ್ಬರು ಶಾಮಣ್ಣನವರ ಮನೆಗೆ ಬಂದಿದ್ದಾರೆ ಎಂದು ಆಶ್ಚರ್ಯಚಕಿತರಾಗಿ ನೋಡುತ್ತಿದ್ದಂತೆಯೇ ಆದಿ ಮಾತ್ರ ಮನೆಯ ಅಂಗಳದಲ್ಲಿ ಬರುತ್ತಿದ್ದ ಅವನನ್ನು ನೋಡಿದವನೇ ’ಅನಂತಾ ಬಂದ್ಯೇನೋ’ ಎಂದು ಬಾಚಿ ತಬ್ಬಿಕೊಂಡು ಒಳಗೆ ಕರೆದುಕೊಂಡು ಹೋಗಿದ್ದ.

ಹಾಗೆ ಒಳ ಹೋದ ಆದಿ ಮಾಡಿದ ಮೊದಲ ಕೆಲಸ ಅಂತ್ಯನಿಗೆ ಫೋನ್ ಮಾಡಿದ್ದು. ಅನಂತ ಬಂದ ಬಾಡಿಗೆಯ ಕಾರು ಮನೆಯ ಅಂಗಳದಲ್ಲಿ ನಿಂತೇ ಇದ್ದುದನ್ನು ಗಮನಿಸಿದ ಆದಿಗೆ ಮೊದಲು ಅನಿಸಿದ್ದು ‘ಅನಂತ ಇಲ್ಲಿ ಉಳಿಯಲು ಬಂದವನಲ್ಲ. ಕೂಡಲೇ ತಿರುಗಿ ಹೊರಟು ಬಿಡುತ್ತಾನೆ’ ಎಂದು. ಅದಕ್ಕೇ ಅಂತ್ಯನಿಗೆ ಕರೆ ಮಾಡಿದ್ದ. ಅಣ್ಣನ ಕರೆ ಬಂದದ್ದೇ ಅದೆಂತಹುದೋ ಗಡಿಬಿಡಿಯ ಕೆಲಸದಲ್ಲಿದ್ದ ಅವನೂ ಅದನ್ನು ಹಾಗೆಯೇ ಬಿಟ್ಟು ಓಡಿ ಬಂದಿದ್ದ.

ಆದಿ ಹೆಚ್ಚು ಕಡಿಮೆ ತಬ್ಬಿಕೊಂಡೇ ಒಳಕರಕೊಂಡು ಬಂದಿದ್ದ ಅನಂತ ಏನನ್ನೋ ಹುಡಕುವವನಂತೆ ನೋಡುತ್ತಿರುವಾಗಲೇ ಅಂತ್ಯ ಒಳ ಬಂದ. ಅಂತ್ಯನನ್ನು ನೋಡಿದ ಅನಂತನ ಕಣ್ಣಲ್ಲಿ ನೀರು. ಅದನ್ನು ಒರೆಸಿಕೊಳ್ಳುತ್ತ ಇಬ್ಬರನ್ನೂ ಕೇಳಿದ ‘ಅಪ್ಪ ಅಮ್ಮ ಎಲ್ಲಿ’. ಉತ್ತರಕ್ಕೆ ಆದಿ ಮತ್ತು ಅಂತ್ಯ ಇಬ್ಬರೂ ತಡಕಾಡಿದ್ದರು. ನಿರೀಕ್ಷೆಯಿಂದ ನೋಡುತ್ತಲೇ ಇದ್ದಾನೆ ಅನಂತ. ಎಷ್ಟೋ ಕಾಲದ ನಂತರ ನೋಡುತ್ತಿದ್ದೇವೆ.

। ಇನ್ನು ನಾಳೆಗೆ ।

‍ಲೇಖಕರು Admin

July 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: