ಜಯಲಕ್ಷ್ಮಿ ಪಾಟೀಲ್ ಅಂಕಣ – ಇದೆಲ್ಲವೂ ನನ್ನ ಪಾಲಿಗೆ ಜಸ್ಟ್ ಟೈಮ್ ಪಾಸ್ ಆಗಿತ್ತು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

53

ಆರ್ಥಿಕವಾಗಿಯೂ ಪತಿಗೆ ನೆರವಾಗಬೇಕೆಂದು ನಿರ್ಧಾರಿಸಿದೆ. ಹಾಗಂತ ಬೆಳಿಗ್ಗೆಯಿಂದ ಸಂಜೆಯವರೆಗೆ ಮನೆಯಾಚೆ ಇದ್ದು ಯಾವುದೇ ನೌಕರಿ ಮಾಡುವುದು ನನಗಿಷ್ಟವಿರಲಿಲ್ಲ, ಕಾರಣ ಮನೆಗೆಲಸಗಳನ್ನು ಪೂರೈಸಿ ಮಕ್ಕಳನ್ನು ನೋಡಿಕೊಳ್ಳುವುದೂ ನನ್ನ ಆದ್ಯತೆ ಆಗಿತ್ತು. ಅದನ್ನೂ ಮಾಡಿ ನೌಕರಿಯನ್ನೂ ಮಾಡುವುದು ಆಗ ನನ್ನಿಂದಾಗದ ಮಾತಾಗಿತ್ತು. ಹೀಗಾಗಿ ಆಗ ಬಿಜಾಪುರದಲ್ಲಿ ತುಂಬಾ ಚಲಾವಣೆಯಲ್ಲಿದ್ದ, ಮನೆಯಲ್ಲಿ ಮಾಡಿದಷ್ಟೇ ಚೆನ್ನಾಗಿದ್ದ ಮಶಿನ್ ಮೇಡ್ ಶಾವಿಗೆಯನ್ನು ತಂದು ಮಾರುವುದು ಎಂದು ನಿರ್ಧರಿಸಿದೆ.

ಬೆಂಗಳೂರಲ್ಲಿ ಸಿಕ್ಕಾಪಟ್ಟೆ ಖರ್ಚಾಗುವುದು ಗ್ಯಾರಂಟಿ ಎಂಬ ಭ್ರಮೆ ಇತ್ತು. ಕಾರಣ ಅಂಗಡಿಗಳಲ್ಲಿ ಸಿಗುತ್ತಿದ್ದ (ಈಗಲೂ ಸಿಗುತ್ತೆ!) ಅಂಟು ಸವರಿಕೊಂಡು ಗಟ್ಟಿ ಮತ್ತು ತುಸು ದಪ್ಪನಾದ ತುಂಡು ಶಾವಿಗೆಯ ಎದುರು ಮನೆಯಲ್ಲಿ ದಾರದಂತೆ ತೆಳ್ಳಗೆ ಹೊಸೆದು ಮಾಡುವ ಶಾವಿಗೆಯಂತೆಯೇ ಇರುವ ಈ ಮಶಿನ್ ಶಾವಿಗೆ ಎಲ್ಲರಿಗೂ ಇಷ್ಟವಾಗುತ್ತೆ ಎಂದುಕೊಂಡಿದ್ದು. ಮೊದಲ ಹೆಚ್ಚಿಗೆ ತರುವುದು ಬೇಡ ಅಂದುಕೊಂಡು ೨೦ ಕಿಲೊದಷ್ಟನ್ನು ಬಿಜಾಪುರಕ್ಕೆ ಹೋದಾಗ ತಂದು ನಾವಿದ್ದ ಮನೆಯ ಓನರ್ರಿಗೂ, ನಮ್ಮಂತೆಯೇ ಬಾಡಿಗಿದ್ದ ಇನ್ನೆರಡು ಕುಟುಂಬದವರಿಗೂ ಪಕ್ಕದ ಮನೆಯವರಿಗೂ ಶಾವಿಗೆ ಮಾರುತ್ತಿರುವುದರ ಬಗ್ಗೆ ಹೇಳಿದೆ. ಅವರೆಲ್ಲ ತಮಗೂ ತಮ್ಮ ಕೆಲ ಬಂಧುಗಳಿಗೂ ತೆಗೆದುಕೊಂಡು ಭರವಸೆ ಮೂಡಿಸಿದರು. ತಂದಿದ್ದೆಲ್ಲಾ ಖಾಲಿಯಾಗಿ ಮತ್ತೆ ತಂದಾಗ ಇದೇ ನಾಲ್ಕು ಮನೆಯ ಜನ ಕೊಂಡಿದ್ದು ತಮಗಾಗಿ. ಉಳಿದಿದ್ದನ್ನೆಲ್ಲ ನಾನು ಉಪ್ಪಿಟ್ಟು, ಪಾಯ್ಯಸ ಮಾಡೀ ಮಾಡೀ ಖಾಲಿ ಮಾಡುವ ಮೂಲಕ ಶಾವಿಗೆ ಬ್ಯೂಸಿನೆಸ್ ಅವಸಾನಗೊಂಡಿತು. 

ನಂತರ ನನ್ನ ಕಣ್ಣು ಬಿದ್ದಿದ್ದು ಮನೂಕದ ಮೇಲೆ! ಎಲ್ಲರಿಗೂ ಗೊತ್ತಿರುವಂತೆ ಬಿಜಾಪುರ ಜಿಲ್ಲೆ ಬಿಳಿ ಜೋಳಕ್ಕೆ ಮಾತ್ರವಲ್ಲ, ದ್ರಾಕ್ಷಿ, ದಾಳಿಂಬೆಗೂ ಪ್ರಸಿದ್ಧ. ದ್ರಾಕ್ಷಿ ಹಣ್ಣನ್ನು ಸಂಸ್ಕರಿಸಿ ಮನೂಕ ಅಂದರೆ ಒಣ ದ್ರಾಕ್ಷಿಯನ್ನೂ ಬಿಜಾಪುರದಲ್ಲಿ ಸಾಕಷ್ಟು ಜನ ತಯಾರಿಸುತ್ತಾರೆ. ಅಲ್ಲಿಂದ ಮನೂಕ ತಂದು ಬೆಂಗಳೂರಿನ ರಿಟೇಲ್ ಅಂಗಡಿಗಳಿಗೆ ಹೋಲ್ ಸೇಲಲ್ಲಿ ಸಿಗುವುದಕ್ಕಿಂತ ಕಮ್ಮಿಗೇ ಮಾರಿದರೆ ಕೊಂಡುಕೊಳ್ಳದೆ ಇರುತ್ತಾರೆಯೇ ಅನ್ನುವ ಆಲೋಚನೆ ಬಂತು. ನನ್ನ ಆಲೋಚನೆಗೆ ಪುಷ್ಠಿ ಕೊಡುವಂತೆ ಕೆಳಗೆ ಔಟ್ ಹೌಸಲ್ಲಿ ಬಾಡಿಗೆಗಿದ್ದ ಲತಾ, ತನಗೆ ಕೆಲವು ಅಂಗಡಿಯವರು ಗೊತ್ತೆಂದೂ, ತಾನು ಮಾರಾಟ ಮಾಡಿಸಿಕೊಡುವುದಾಗಿಯೂ ಹೇಳಿದಳು. ಆಕೆ ಹಾಗೆ ಹೇಳಿದ್ದೇ ನನಗೆ ಬಲ ಬಂದಂತಾಗಿ, ಊರಿಗೆ ಹೋಗಿ ಐವತ್ತು ಕಿಲೊ ಮನೂಕ ಹೊತ್ತು ತಂದೆ. ಅವುಗಳನ್ನು ನೋಡಿದ ಲತಾ ಮತ್ತು ಸೀಮಾ ಅಷ್ಟೊಳ್ಳೆ ದ್ರಾಕ್ಷಿ ಬೆಂಗಳೂರಿನಲ್ಲಿ ಅಷ್ಟು ಕಮ್ಮಿ ಬೆಲೆಗೆ ಸಿಗುವುದು ಅಪರೂಪವೇ ಸರಿ ಎಂದರು. ಸೀಮಾ ನಮ್ಮಂತೆಯೇ ಅಲ್ಲಿ ಔಟ್ ಹೌಸಿನ ಮೊದಲ ಮಹಡಿಯಲ್ಲಿ ಗಂಡ ಮತ್ತು ಮೈದುನನನೊಡನೆ ಬಾಡಿಗೆಗಿದ್ದ ದಾವಣಗೆರೆಯ ಹುಡುಗಿ. 

ಲತಾ ಮೊದಲು ಮಾತು ಕೊಟ್ಟಂತೆ, ಮಾರಲು ಅಂಗಡಿಗೆ ಹೋಗೋಣ ನಡೀರಿ ಎಂದಾಗ ನಾನು, ಸಧ್ಯಕ್ಕೆ ಸ್ಯಾಂಪಲ್ಲಿಗೆ ಸ್ವಲ್ಪ ಮಾತ್ರ ತೆಗೆದುಕೊಂಡು ಹೋಗೋಣ, ಆಟೊ ರಿಕ್ಷಾದಲ್ಲಿ ಅಷ್ಟನ್ನೂ ಹೊತ್ತು ತಿರುವುದಾಗುವುದಿಲ್ಲ ಎಂದೆ. ಲತಾ, “ಅಷ್ಟನ್ನೂ ಒಟ್ಟಿಗೆ ತೆಗೆದುಕೊಂಡು ಹೋಗೋಣ, ನನ್ನ ಪರಿಚಯದವರ ಓಮ್ನಿ ಗಾಡಿ ತೊಗೊಂಡು ಹೋದ್ರಾಯ್ತು. ಯಾರೆಷ್ಟು ತೊಗೊಳ್ತಾರೋ ತೊಗೊಳ್ಳಿ’ ಅಂದಾಗ ನನಗೂ ಪಾಪ ಆಕೆ ನನ್ನ ಸಲುವಾಗಿ ಹತ್ತು ಸಲ ಸುತ್ತೋದಕ್ಕಿಂತ ಇದು ಒಳ್ಳೆಯ ಐಡಿಯಾ ಅನಿಸಿ ಒಪ್ಪಿಕೊಂಡೆ. ಆದರೆ ಓಮ್ನಿ ಗಾಡಿ ನಮ್ಮನೆಯವರೆಗೆ ಬರುವುದಿಲ್ಲವೆಂದೂ ಅದ್ಯಾವುದೋ ಏರಿಯಾದವರೆಗೆ ನಾವು ಆಟೋದಲ್ಲೇ ಹೋಗಬೇಕಾಗುತ್ತದೆಂದು ಹೇಳಿ ಲತಾ ಆಟೊ ಬುಕ್ ಮಾಡಲು ಹೇಳಿದಳು. ಎರಡು ಆಟೊ ಮಾಡಿಕೊಂಡು ಮಾಲು ಹೇರಿಕೊಂಡು ಆ ಏರಿಯಾಗೆ ಹೋದೆವು. ಅದ್ಯಾವ ಏರಿಯಾ ಎಂದು ಗೊತ್ತಿಲ್ಲ. ಯಾವುದೋ ಬಸ್ ಸ್ಟ್ಯಾಂಡ್ ಅದು. ಅಲ್ಲಿಗೆ ಹೋಗಿ, ಆ ಓಮ್ನಿ ಗಾಡಿಯಲ್ಲಿ ಮನೂಕದ ಡಬ್ಬಿಗಳನ್ನು ಹಾಕಿ ಒಳಗೆ ಹತ್ತಿ ಕೂರಲು ಹೋದರೆ ಅಲ್ಲಿ ಒಂದು ಸೀಟಿನುದ್ದಕ್ಕೂ ಹಾಸಿಗೆ ಹಾಸಲಾಗಿತ್ತು ಮತ್ತಲ್ಲಿ ದಿಂಬೊಂದಿತ್ತು! ನನಗೆ ವಿಚಿತ್ರ ಅನಿಸಿತು. “ಲತಾ, ಬಹುಶಃ ಈ ಗಾಡಿಯವರು ಎಲ್ಲಿಗೋ ಹೊರಟಿದ್ದಾರೆನಿಸುತ್ತದೆ, ಅವರಿಗೆ ತೊಂದರೆ ಆಗೋದು ಬೇಡ ಬನ್ನಿ, ನಾವು ಈಗ ಬಂದಂತೆಯೇ ಆಟೊದಲ್ಲೇ ಮನೂಕ ಹಾಕ್ಕೊಂಡು ಹೋಗೋಣ” ಅಂದೆ.

“ಹೇ ಹಾಗೇನಿಲ್ಲ, ಅವ್ರ ಗಾಡೀಲಿ ಯಾವಾಗ್ಲೂ ಇರುತ್ತೆ ಇದು. ಅವ್ರಿಗೆ ಕೆಲಸ ಮಾಡಿ ಸುಸ್ತಾದಾಗ ಬಂದು ಗಾಡೀಲಿ ಸ್ವಲ್ಪ ಹೊತ್ತು ರೆಸ್ಟ್ ಮಾಡ್ತಾರೆ. ಅದಕ್ಕೇ ಹೀಗಿದೆ” ಎಂದು ನನ್ನನ್ನ ಅಲ್ಲೇ ಅದೇ ಸೀಟಿನ ಮೇಲೆ ಕೂರಿಸಿ ಕೆಳಗಿಳಿದು ಹೋದಳು. ನನ್ನ ಜೀವಕ್ಕೆ ಇರುಸುಮುರುಸು.. ಐವತ್ತು ಕೇಜಿಯಷ್ಟು ಮನೂಕ ಹೊತ್ತು ತಂದಾಗಿದೆ, ಅಪರಿಚಿತ ಊರು ಬೇರೆ. ಅನಿವಾರ್ಯವಾಗಿ ಚಡಪಡಿಸುತ್ತಾ ಕುಳಿತೆ. ಹೊರಗೆ ಅದ್ಯಾರೊಂದಿಗೋ ಆಕೆ ಮಾತನಾಡುತ್ತಿದ್ದಳು. ಓಮ್ನಿಯ ಮಾಲಿಕರಿರಬಹುದು ಎಂದುಕೊಂಡೆ. ಆ ಮನುಷ್ಯನನ್ನು ನೊಡಿದರೆ ಆತ ದೊಡ್ಡ ಹುದ್ದೆಯಲ್ಲಿದ್ದವರಂತೆ ಕಾಣುತ್ತಿದ್ದರು. ಅಷ್ಟು ದೊಡ್ಡ ವ್ಯಕ್ತಿಗಳ ಪರಿಚಯ ಈಕೆಗೆ ಹೇಗೆ ಎಂದು ಅಚ್ಚರಿಯಾಯಿತೆನ್ನುವುದು ಎಷ್ಟು ಸತ್ಯವೋ ಆಗ ಅದರಾಚೆಗೆ ತಲೆ ಓಡಲಿಲ್ಲ ಅನ್ನುವುದೂ ಅಷ್ಟೇ ಸತ್ಯ! ಅವರೊಂದಿಗೆ ಮಾತಾಡಿ ಬಂದವಳು ಅದೆಲ್ಲಿಗೋ ತನ್ನ ಪರಿಚಯದವರ ಅಂಗಡಿ ಎಂದು ಅಲ್ಲಿಗೆ ಕರೆದುಕೊಂಡುಹೋಗಿ ಒಣದ್ರಾಕ್ಷಿಯ ಬಗ್ಗೆ ಈಕೆ ಹೇಳುತ್ತಿದ್ದರೆ ಆ ಮನುಷ್ಯ ತುಂಬಾ ನಿರ್ಲಕ್ಷ್ಯದಿಂದಿದ್ದ.

ನಾನು ಮಾತಾಡಲು ನೋಡಿದರೆ ಕೊಂಡುಕೊಳ್ಳಲು ಆಗಲ್ಲ ಎಂದು ಗದರಿದಂತೆ ಮಾತಾಡಿಬಿಟ್ಟ ಆ ಮನುಷ್ಯ! ತುಂಬಾ ಅವಮಾನವಾದಂತಾಯ್ತು. ನಡೀರಿ ಲತಾ ಇಲ್ಲಿಂದ ಎಂದು ಆಕೆಯನ್ನು ಅಲ್ಲಿಂದ ಹೊರಡಿಸಿಕೊಂಡು ಬಂದೆ. ಅವತ್ತಿನ ದಿನ ಆದ ಇರುಸುಮುರಿಸಿನಿಂದಾಗಿ ಮನಸ್ಸೆಲ್ಲ ರಾಡಿಯಾದಂತೆನಿಸಿ ತುಂಬಾ ಕಸಿವಿಸಿ ಅನುಭವಿಸಿದೆ ಮಾತ್ರವಲ್ಲ, ಇನ್ನ್ಯಾವತ್ತೂ ಯಾರ ಅಂಗಡಿಗೂ ದ್ರಾಕ್ಷಿ ಕೊಳ್ತೀರಾ ಎಂದು ಕೇಳಿಕೊಂಡು ಹೋಗುವುದಿಲ್ಲ ಎಂದು ನಿರ್ಧರಿಸಿದೆ. ತಂದಿದ್ದರಲ್ಲಿ ಹತ್ತು ಕಿಲೋದಷ್ಟು ಸುತ್ತಲಿನವರೇ ಕೊಂಡುಕೊಂಡರು. ಉಳಿದಿದ್ದನ್ನ ನಾನೆಲ್ಲಿಂದ ತಂದಿದ್ದೆನೋ ಅವರಿಗೆ ದಮ್ಮಯ್ಯ ಗುಡ್ಡೆ ಹಾಕಿ ವಾಪಸ್ ಕೊಟ್ಟು ಕೈತೊಳೆದುಕೊಂಡೆ.

ನನ್ನವ್ವನ ಸೋದರತ್ತೆಯ ಮಗಳು ಶಕುಂತಲಾ ಎಂದು, ಅವರು ಬೆಂಗಳೂರಿನಲ್ಲಿಯೇ ಇದ್ದಾರೆ. ವರಸೆಯಲ್ಲಿ ಅವರು ನನಗೆ ಅತ್ತೆ ಆಗಬೇಕಾದರೂ ಅಕ್ಕಾ ಎಂದೇ ಕರೆಯುವುದು ಅಭ್ಯಾಸ. ನಾವಾಗ ವಿಜಯನಗರದಲ್ಲಿದ್ದೆವು ಎಂದೆನಲ್ಲ, ಅವರಿರುವುದು ವಿಜಯನಗರಕ್ಕೆ ಹತ್ತಿರವಿರುವ ಚಂದ್ರಾ ಲೇಔಟಲ್ಲಿ. ಹೀಗಾಗಿ ಅವರಿಂದಾಗಿ ಆಗ ಸ್ನೇಹಾ ಸಮಾಜದ ಒಂದೆರಡು ಕಾರ್ಯಕ್ರಮಕ್ಕೆ ಹೋದವಳು, ಮೂರನೇ ಬಾರಿ ಹೋದಾಗ ಇಲ್ಲಿನ ಶಾಂತಿ ಕೊಟ್ರೇಶ್ ಅವರ ಒತ್ತಾಸೆಯ ಮೇರೆಗೆ ಅಲ್ಲಿನ ಮೇಂಬರ್ ಆದೆ ನಾನು. ವಿನೋದಾ ಆಗಿನ ಅಲ್ಲಿನ ಅಧ್ಯಕ್ಷೆಯಾಗಿದ್ದರು. ಸ್ನೇಹಾ ಸಮಾಜ; ವೀರಶೈವ ಲಿಂಗಾಯತ ಸಮಾಜದ ಮಹಿಳಾ ವಿಭಾಗವಾಗಿದೆ. ಬೆಂಗಳೂರಿನ ಬಹಳಷ್ಟು ಏರಿಯಾಗಳಲ್ಲಿ ಅದರ ಶಾಖೆಗಳಿವೆ. ತಮ್ಮದೇ ಮಿತಿಯಲ್ಲಿ ತಿಂಗಳಿಗೊಮ್ಮೆ ತುಂಬಾ ಚೆಂದದ ಕಾರ್ಯಕ್ರಮಗಳನ್ನು ಮಾಡುತ್ತಿದ್ದ ಆ ಗುಂಪು ನನಗಿಷ್ಟವಾಯಿತು. ಬಿಡುವಾದಾಗಲೆಲ್ಲ ಅಲ್ಲಿನ ಚಟುವಟಿಕೆಗಳಲ್ಲಿ ನಾನೂ ಭಾಗವಹಿಸುತ್ತಿದ್ದೆ. ಅದೇನೋ ಗೊತ್ತಿಲ್ಲ, ಅವರಿಗೆಲ್ಲ ನನ್ನನ್ನು ಕಂಡರೆ ತುಂಬಾ ಅಕ್ಕರೆ. ಅದು ನನ್ನನ್ನು ಸೆಳೆಯುತ್ತಿತ್ತು. ಸ್ನೇಹಾ ಬಳಗವನ್ನು ಶುರು ಮಾಡಿದ್ದು ಕನ್ನಡದ ಖ್ಯಾತ ನಟಿ, ಬಡ್ಡಿ ಬಂಗಾರಮ್ಮ ಸಿನಿಮಾದಿಂದ ಅದೇ ಹೆಸರಲ್ಲಿ ಪ್ರಸಿದ್ಧರಾಗಿದ್ದ ಉಮಾ ಶಿವಕುಮಾರ ಅವರ ತಾಯಿಯವರು. ಈಗ ಅವರಿಬ್ಬರೂ ಇಲ್ಲ. 

ನಾನು ಅಲ್ಲಿನ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆ ಎಂದೆನಲ್ಲ, ಅವುಗಳಲ್ಲಿ ವಿಜಯನಗರದಲ್ಲಿರುವ ಯಾವುದೋ ಮಠ (ಬಾಲ ಗಂಗಾಧರ ಮಠವಾ…? ಸರಿಯಾಗಿ ನೆನಪಾಗುತ್ತಿಲ್ಲ)ದ ಉತ್ಸವಕ್ಕೆ, ಮುಜುಗರ ಪಡುತ್ತಲೇ ತಲೆಯ ಮೇಲೆ ಕಳಶ ಹೊತ್ತು ಮೆರವಣಿಗೆಯಲ್ಲಿ ಮುಂದೆ ಸಾಗಿದ್ದೂ ಒಂದು! ಆಗ ವಾರ್ಷಿಕೋತ್ಸವಕ್ಕೆ ಎಲ್ಲಾ ಶಾಖೆಗಳಿಂದ ಐದು ನಿಮಿಷದ ನಾಟಕಗಳ ಸ್ಪರ್ಧೆ, ಡಾನ್ಸ್, ಹಾಡುಗಳ ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ನಮ್ಮ ವಿಜಯನಗರದಿಂದ ಮಾಡಿಸುವ ನಾಟಕಕ್ಕೆ ನಾನು ನಾಟಕ ಬರೆದು ಮಾಡಿಸುವುದು ಎಂದಾಯಿತು. ನಾನು ಮೋಳಿಗೆಯ ಮಾರಯ್ಯ ಮತ್ತು ಮಹಾದೇವಿಯ ಮೇಲೆ ೧೧ ಪುಟಗಳಷ್ಟು ನಾಟಕ ಬರೆದೆ. ಅದನ್ನೋದಿದ ಅವರೆಲ್ಲ ಅಂಥಾ ಸಿರಿಯಸ್ ವಿಷಯ ಬೇಡವೆಂದು, ಎಂ. ಎಸ್ ನರಸಿಂಹಮೂರ್ತಿಗಳು ಬರೆದ ಹಾಸ್ಯ ನಾಟಕವೊಂದನ್ನು ಆಯ್ದುಕೊಂಡು ನನಗದರಲ್ಲಿ ಗಂಡಸಿನ ಪಾತ್ರ ಕೊಟ್ಟರು! ವಿಜಯನಗರದಲ್ಲಿಯೇ ಇದ್ದ ಸೀತಾ ಎನ್ನುವ ಡಾನ್ಸ್ ಟೀಚರ್ ಒಬ್ಬರಿಂದ ಎರಡು ಡಾನ್ಸ್ ಕಲಿತೆವು.

ನಮ್ಮ ಒಂದು ಡಾನ್ಸಿನ ಗುಂಪಿನಲ್ಲಿ ನನ್ನಂಥಾ ಮೂವತ್ತು ವರ್ಷದವಳಿಂದ ಮೊದಲ್ಗೊಂಡು ಅರವತ್ತು ವರ್ಷದವರೂ ಇದ್ದರು! ಇನ್ನೊಂದು ಬಾಂಗ್ಡಾ ನೃತ್ಯದಲ್ಲಿ ಐವತ್ತರ ಮೇಲ್ಪಟ್ಟು ಯಾರಿರಲಿಲ್ಲ. ಒಟ್ಟು ನಮ್ಮೆಲ್ಲರಿಗೂ ಡಾನ್ಸ್ ಹೇಳಿಕೊಡುವಷ್ಟರಲ್ಲಿ ಸೀತಾ ಅವರು ಬಸವಳಿದು ಹೋಗಿದ್ದರಾದರೂ ನಮ್ಮ ಗುಂಪಿನ ಉತ್ಸಾಹದ ಎದುರು ಅವರಿಗೂ ಅದು ಮುಖ್ಯವೆನಿಸಲಿಲ್ಲ. ಯವನಿಕಾದಲ್ಲಿ ನಡೆದ ಸ್ಪರ್ಧೆಗಳಲ್ಲಿ ನಮ್ಮ ತಂಡ ರಂಗೋಲಿ, ಹಾಡು, ಬಾಂಗ್ಡಾ ಮತ್ತು ನಾಟಕಕ್ಕೆ ಒಂದಿಷ್ಟು ಬಹುಮಾನಗಳನ್ನು ಬಾಚಿಕೊಂಡಿತು. ಇದೆಲ್ಲವೂ ನನ್ನ ಪಾಲಿಗೆ ಜಸ್ಟ್ ಟೈಮ್ ಪಾಸ್ ಅಥವಾ ಖುಷಿಗಾಗಿ ಅಂತಷ್ಟೇ ಆಗಿತ್ತಾದ್ದರಿಂದ ಅದಕ್ಕೂ ಮೀರಿದ ಬೇರ್ಯಾವ ಉದ್ದೇಶಗಳೂ ಇರಲಿಲ್ಲ. ಆದರೆ ಮುಂದೊಂದು ದಿನ ನನ್ನ ಅಸ್ತಿತ್ವದ ಬಗ್ಗೆ, ನನ್ನ ಅಸ್ಮಿತೆಯ ಬಗ್ಗೆ ನಾನು ಯೋಚಿಸುವ ದಾರಿಯ ಬೀಜಾಂಕುರವಾಗಿದ್ದು ಆಗ ನಾವು ಒಂದೂವರೆ ವರ್ಷದ ಮಟ್ಟಿಗೆ ಬೆಂಗಳೂರಿನಲ್ಲಿದ್ದಾಗಲೇ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

November 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Dakshayani Biradar

    ಒಂದು ಸಣ್ಣ ಹೆಜ್ಜೆ ಬಹುದೊಡ್ಡ ಮಹತ್ಕಾರ್ಯಕ್ಕೆ ಮೈಲುಗಲ್ಲಾಗುತ್ತದೆ ಎಂಬುದಕ್ಕೆ ನಿಮ್ಮ ಬದುಕೇ ಸಾಕ್ಷಿ.. ಅದ್ಭುತ ಬರವಣಿಗೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: