ಜಯರಾಮಚಾರಿ ಹೊಸ ಕಥೆ – ಅವನ ಫ್ಲ್ಯಾಟಿನಲ್ಲಿ, ನಾನು ಅವನು ಬೆತ್ತಲಾಗುತ್ತಿರಲಿಲ್ಲ…

ಜಾನಿ ವಾಕರ್ ಅಂಕಲ್, ರಕ್ತದ ಪಾದ ಮತ್ತು ಹನ್ನೊಂದನೇ ಫ್ಲೋರಿನ ಫ್ಲ್ಯಾಟು

ಜಯರಾಮಚಾರಿ

ಆ ದಿನ, ಆ ಕ್ಷಣ 

ನನ್ನ ಕಾರು ಆ ದಾರಿಯಲ್ಲಿ ಕೆಟ್ಟು ಹೋಗಬಾರದಿತ್ತು, ಕಾರಿನ ವಿಂಡೋ ಇಳಿಸಿ, ಹೈವೇಲಿ ಬೀಸಿ ಬಂದ ಗಾಳಿಗೆ ನನ್ನ ಕೂದಲ ಹಾರಿಬಿಟ್ಟು ,ಒಂದು ಕೈಲಿ ಎರಡು ಬೆರಳ ಮಧ್ಯೆ ಅರ್ಧ ಸುಟ್ಟ ಸಿಗರೇಟು, ಇನ್ನೊಂದು ಕೈಲಿ ಸ್ಟೇರಿಂಗ್ ಸಂಭಾಳಿಸುತ್ತ ಊರಿನಲ್ಲಿ ನನ್ನ ಹಳೆಯ ಗೆಳೆಯನಿಗೆ ಕೂದಲು ನೆರೆ ಬಂದು ನನ್ನ ಅಪ್ಪನಿಗಿಂತ ವಯಸ್ಸಾದವನಂತೆ ಕಂಡ ಪವಾಡ ನೆನಪಿಸಿಕೊಳ್ಳುತ್ತಾ ಸಿಗರೇಟು ಸುಡುತ್ತಿದ್ದೆ, ಎಷ್ಟೋ ವರುಷಗಳ ಹಿಂದೆ ಇಂತದ್ದೇ ಒಂಟಿ ಮಧ್ಯಾಹ್ನದಲ್ಲಿ ಅವನು ನಾನು ಕಾಲೇಜಿಂದ ಮನೆಗೆ ನಡೆಯುವಾಗ ಸರಕ್ಕನೆ ನೀಲಗಿರಿ ತೋಪಿಗೆ ಎಳೆದು ನನ್ನ ತಬ್ಬಿ ಕೊಟ್ಟ ಫ್ರೆಂಚ್ ಕಿಸ್ ನೆನಪಾಯ್ತು, ಇನ್ನು ಮುಂದಿನ ಕ್ಷಣ ನೆನಪಾಗುವಷ್ಟರಲ್ಲಿ ಕಾರು ಯಾಕೋ ನಿಂತು ಹೋಯ್ತು, ಕಾರಿನ ಮೆಕಾನಿಸಂ ನ ಕೊಂಚ ಜ್ಞಾನವು ಇಲ್ಲದ ನಾನು ಸುಮ್ಮನೆ ನೋಡುತ್ತಾ ನಿಂತೇ, ಒಂದೆರಡು ಬಾರಿ ಸ್ಟಾರ್ಟ್ ಮಾಡಲು ಹೋದೆ,  ಹೊಗೆ ಇನ್ನು ಹೆಚ್ಚಾಗಿ ,ಭಯವಾಗಿ ಅದಕ್ಕೆ ಕೈ ಮುಗಿದು ಆಫ್ ಮಾಡಿ ರೋಡಿನಲ್ಲಿ ನಿಂತೆ.

MECHANICAL NEAR ME, GOOGLE  ಮಾಡಿದರೆ ಹತ್ತು ಕಿಮಿ ದೂರದಲ್ಲಿ ಫಯಾಜ್ ಮೆಕಾನಿಕಲ್ ಅಂತ ಇತ್ತು, ಬಿಟ್ರೆ ಬೇರೆ ಯಾವುದಿಲ್ಲ. ಬೆಂಗಳೂರನ್ನ ಇನ್ನೆರಡು ಗಂಟೆಯಲ್ಲಿ ತಲುಪಲೇಬೇಕು, ತಲುಪಿ ಮತ್ತೆ ಬಟ್ಟೆ ಬದಲಿಸಿ ಕ್ಲೈಂಟ್ ಮೀಟ್ ಬೇರೆ ಅಟೆಂಡ್ ಮಾಡಲೇಬೇಕು, ಈ ಫಯಾಜ್ ಬಂದು ಗಾಡಿ ರೆಡಿ ಮಾಡಿ ಕೊಡುವಷ್ಟರಲ್ಲಿ ಕನಿಷ್ಠ ಅರ್ಧದಿನ ಬೇಕೇ ಬೇಕು, ಗೊತ್ತಾಗದೆ ಅವಿಗೆ ಕಾಲ್ ಮಾಡಿದೆ, “ಅವನಿಗೆ ಹೇಳು ರೆಡಿ ಮಾಡಿ ಯಾವುದಾರೂ ಕಾರ್ಗೋ ಗಾಡಿ ಗೆ ಕಳಿಸಿಬಿಡೋಕ್ಕೆ” ಅಂದ, ಅದೇ ಸರಿ ಅನಿಸಿ ಫಯಾಜ್ ಗೆ ಕಾಲ್ ಮಾಡಿ ಅವನ ಕಾದು ಕೂತೆ, ಹತ್ತು ನಿಮಿಷ ಅಂದವನು ಎಂಟು ನಿಮಿಷಕ್ಕೆ ಬಂದ, ಮೆಕಾನಿಕಲ್ ರೂಪ ವೇಷದಲ್ಲಿ, ಅವನ ಕೈಗೆ ಗಾಡಿ  ಕೊಟ್ಟು ವಿಷಯ ಹೇಳಿದೆ, “ಟೆನ್ಸನ್ ಮಾಡಿಕೋಬೇಡಿ ಮೇಡಂ ಸಂಜೆ ಒಳಗೆ ರೆಡಿ ಮಾಡಿ ಬೆಂಗಳೂರಿಗೆ ಹೋಗೋ ರೆಗ್ಯುಲರ್ ಲಾರಿಗೆ ಎತ್ತಿ ಹಾಕಿ ಕಳಿಸುವೆ” ಅಂದ, ಥ್ಯಾಂಕ್ಸ್ ಎಂದು ವಿಳಾಸ ಕೊಟ್ಟೆ ಕೆಲಸ ಆದಮೇಲೆ ಫೋನ್ ಫೆ ಮಾಡುವೆ ಅಂದು ನಕ್ಕೆ. ಅವನು ಅರಳಿದ ,ಹೊರಟ.

ನಾನು ಹೈವೇ ಲಿ ಬರಬಹುದಾದ ಬಸ್ಸೋ ಇಲ್ಲ ಯಾವುದಾದರೂ ಕಾರೋ ಅಡ್ಡ ಹಾಕಲು ಸಣ್ಣ ಸೂಟ್ ಕೇಸ್ ಹಿಡಿದು ನಿಂತೆ.

ಒಂದೆರಡು ಬಸ್ಸಿಗೆ ಕೈ ಹಾಕಿ ಅವು ನಿಲ್ಲದೆ ಹಂಗಿಸಿ ಹೊರಟು ಹೋದವು, ಮನಸಾರೆ ಡ್ರೈವರಿಗೆ ಶಾಪ ಹಾಕಿದೆ. ಒಂದೈದು ನಿಮಿಷದ ಮೇಲೆ ಕೆಂಪು ಪೋಲೊ ಕಾರೊಂದು ಬರ್ತಿತ್ತು, ಕೈ ಅಡ್ಡ ಹಾಕಿದೆ, ನಿಲ್ಲಿಸಲಿಲ್ಲ, ಅವನಿಗೂ ಬೈದೆ, ನನ್ನ ಬೈಗುಳ ಕೇಳಿಸಿರಬೇಕು ಸ್ವಲ್ಪ ದೂರ ಹೋದವನು ಮತ್ತೆ ರಿವರ್ಸ್ ಗೇರಿನಲ್ಲಿ ಬಂದು ನಿಲ್ಲಿಸಿ ಕಾರ್ ವಿಂಡೋ ಇಳಿಸಿ ನೋಡಿದ ಪ್ರಶ್ನಾರ್ಥಕವಾಗಿ ಬೆಂಗಳೂರು ಎಂದೆ, ಹತ್ತಿ ಎಂದ.

ಹಿಂದೆ ಹತ್ತಿ ಕೂತೆ ಸೂಟ್ ಕೇಸ್ ಚಿಕ್ಕದಾದ್ದರಿಂದ ಪಕ್ಕದಲ್ಲೇ ಇಟ್ಟ್ಕೊಂಡು ಕೂತೆ.

ಹಿಂದೆಗಡೆ ಸೀಟಿನಲ್ಲಿ ದಾಸ್ತೋವಿಸ್ಕಿಯ ಕ್ರೈಮ್ ಅಂಡ್ ಪನಿಶ್ಮೆಂಟ್, ಮುರಾಕಾಮಿಯ ಕಾಫ್ಕ ಆನ್ ಡಿ ಶೋರ್ ಪುಸ್ತಕಗಳು ಬಿದ್ದಿದ್ದವು ,ಅದು ಬಿಟ್ರೆ ಕಾರಿನಲ್ಲಿ ಬೇಡವೆಂದರೂ ಇಡಬಹುದಾಗಿದ್ದ ಯಾವ ಫ್ಯಾಂಟಸಿ ವಸ್ತುಗಳು ಅಲ್ಲಿರಲಿಲ್ಲ, ಒಳಗಡೆ ಅವನು ಹಚ್ಚಿದ್ದ ನಿರ್ವಾಣದ “ಸಂಥಿಂಗ್ ಇನ್ ದ ವೇಯ್ನ್” ಹಾಡು ಲೂಪಿನಲ್ಲಿ ಬರ್ತಿತ್ತು, ನನಗೂ ಅದನ್ನ ಲೂಪಿನಲ್ಲಿ ಕೇಳಿ ಅಭ್ಯಾಸ ಇದ್ದರಿಂದ ಕಿರಿಕಿರಿ ಆಗಲಿಲ್ಲ, ಸಡನ್ನಾಗಿ ಅವನ ಮುಖ ನೋಡುವ ಬಯಕೆ ಆಯ್ತು, ಮೊದಲು ಅವನು ವಿಂಡೋ ಇಳಿಸಿ ನನ್ನ ನೋಡಿದ ಕ್ಷಣ ನೆನಪಿಸಿಕೊಂಡು ಅವನ ಮುಖ ಹೇಗಿರಬಹುದೆಂದು ಊಹಿಸಿಕೊಳ್ಳಲು ಯತ್ನಿಸಿದೆ, ಸ್ಪಷ್ಟ ಚಿತ್ರ ಸಿಗಲಿಲ್ಲ, ಮಿರರ್ ಲಿ ಕಾಣುತ್ತಾನಾ ನೋಡಿದೆ ಉದ್ದ ರಸ್ತೆ ಅಷ್ಟೇ ಕಾಣಿಸಿತು, ಸೂಟ್ ಕೇಸ್ ಈ ಬದಿಗೆ ಸರಿಸಿ ಕೂತೆ ಅವನ ಲೆಫ್ಟ್ ಪ್ರೊಫೈಲ್ ಕಾಣಿಸ್ತು, ಗೋಧಿಬಣ್ಣ, ಗಡ್ಡ ಬಿಟ್ಟಿದ್ದಾನೆ, ಬ್ರಾಂಡೆಡ್ ಗಾಗಲ್ಸ್ PORSCHE ಹಾಕಿದ್ದಾನೆ, ಸ್ವಲ್ಪ ಹೊತ್ತಲ್ಲಿ ಅವನ ಬಲಗೈ ತುಟಿಗೆ ಸೋಕಿ ಹೊಗೆ ಬಂತು, ಸಿಗರೇಟು ಕೂಡ ಸೇದುತ್ತಿದ್ದಾನೆ, ಎರಡು ಸೀಟು ಮಧ್ಯದಲ್ಲಿ ಓಪನ್ ಮಾಡದ ಜಾನಿ ವಾಕರ್ ಬಾಟಲಿ.

ಅವನೇ ಮಾತು ಶುರು ಮಾಡಿದ “ಶಾಪ ಏನು ಹಾಕ್ಲಿಲ್ಲ ತಾನೇ ಗಾಡಿ ನಿಲ್ಲಿಸಿಲ್ಲ ಅಂತ ” ಎಂದ, ನಾನು ನಕ್ಕೆ ,”ಛೆ ಛೆ ಹಾಗೇನಿಲ್ಲ” ಅಂದೇ,  “ಅಕಸ್ಮಾತ್ ಹಾಕಿದ್ರೆ ಅದಕ್ಕೊಂದು ಉಶಾಪ ಇರ್ಬೇಕಲ್ಲ ಅದಕ್ಕೆ ಕೇಳಿದೆ ” ಎಂದ, “ಒಂದು ಸಿಗರೇಟು” ಅಂದೇ ಜೊತೆಗೆ “ಇದ್ದ ಸಿಗರೇಟು ಪ್ಯಾಕ್ ಕಾರಲ್ಲೇ ಬಿಟ್ಟೆ” ಅಂತಲೂ ಸೇರಿಸಿದೆ , “ಯಾವ ಪುರಾಣದಲ್ಲೂ ಇಷ್ಟು ಸುಲಭದ ಉಶಾಪವಿಲ್ಲ” ಎಂದು ನಕ್ಕು Treasurer ಸಿಗರೇಟು ಕೊಟ್ಟ, ಲೈಟರು ಕೊಟ್ಟ, ವಿಂಡೋ ಕೆಳಗೆ ಇಳಿಸಿ ಸಿಗರೇಟು ಹಚ್ಚಿ ಹೋಗೆ ಬಿಟ್ಟಾಗಲೇ ನೆಮ್ಮದಿ ಸಿಕ್ಕಿದ್ದು , ಕಂಫರ್ಟ್ ಅನಿಸಿದ್ದು . ಬೆಂಗಳೂರು ೧೧೫ ಕಿಮಿ ದೂರದ ಮೈಲುಗಲ್ಲು ಹೋಯ್ತು, ಇವನು ಓಡಿಸುತ್ತಿರೋ ಸ್ಪೀಡಿಗೆ ಇನ್ನೊಂದು ಒಂದೂವರೆ ಗಂಟೆ ಎಂದುಕೊಂಡೆ.

ಸಿಗರೇಟು ಸೇದುತ್ತ ಸಣ್ಣಗೆ ಮಾತುಕತೆ ಶುರು ಆಯ್ತು, ಅವನದು ಊಟಿಯ ಬಳಿಯ ಯಾವುದೋ ಊರು (ಹೇಳಿದ್ದು ಕೇಳಿಸಿಕೊಂಡೆ ಆದರೂ ಮರ್ತೆ ) ಒಂದು ಮದ್ವೆ ಮುರಿದುಬಿದ್ದು, ಡಿವೋರ್ಸ್ ಆಗಿ ಸದ್ಯ ಎರಡನೇ ಮದ್ವೆ ಆಗಿದೆ, ಎರಡನೇ ಹೆಂಡತಿಗೆ ಹುಟ್ಟಿದ ಮಗುವಿಗೆ ಈಗ ಎಂಟು ವರ್ಷ, ಆಕೆಯೂ ಬ್ಯುಸಿನೆಸ್ ವುಮೆನ್, ಇವನು ಬಿಸಿನೆಸ್ ಮೆನ್ ಹಾಗಾಗಿ ಮಗು ಊರಲ್ಲಿ ಇದೆ ಅಜ್ಜಿ ಅಜ್ಜ ಜೊತೆ, ನೆನ್ನೆ ಅದರ ಬರ್ತ್ ಡೇ , ಆಚರಿಸಿ ವಾಪಾಸು ಮನೆಗೆ ಹೋಗುತ್ತಿದ್ದಾನೆ, ಸದಾಶಿವನಗರದ ನಾಲ್ಕನೇ ಕ್ರಾಸಲ್ಲಿ ಅವನ ಮನೆ, ಹೆಂಡತಿ ಮಗು ಜೊತೆ ಇನ್ನೊಂದೆರಡು ದಿನ ಇದ್ದು ಬರ್ತೀನಿ ಅಂದಿದ್ದಾಳೆ, ಲೆಡ್ ಝೆಪ್ಲೀನ್, ನಿರ್ವಾಣ , ಡೋರ್ಸ್ , ಇಳಯರಾಜ , ಹಂಸಲೇಖ , ರಾಜ್ಕುಮಾರ್ ಅಂದ್ರೆ ಇಷ್ಟ ಅಂದ. ನಾನು ಅವನಿಗೆಷ್ಟು ಬೇಕೋ ಅಷ್ಟೇ ವಿಷಯ ಹೇಳಿ ಸುಮ್ಮನಾದೆ,ಸದ್ಯ ನಿರ್ವಾಣ ಹಾಡು ತೆಗೆದು, ಲೆಡ್ ಝೆಪ್ಲೀನ್ ನ “ಸ್ಟೈರ್ ವೇ ಟು ಹೆವೆನ್ ” ಲೋಪಲ್ಲಿ ಹಾಡುತ್ತಿತ್ತು, ಸಂಗೀತದ ವಿಷಯಕ್ಕೆ ಬಂದರೆ ಅವನ ನನ್ನ ಟೆಸ್ಟು ಹೆಚ್ಚು ಕಮ್ಮಿ ಒಂದೇ ಆಗಿತ್ತು, ಮೂಡಿದ ಬಿಳಿ ಕೂದಲುಗಳಿಂದ ಅವನು ನನಗಿಂತ ದೊಡ್ಡವನೆಂದು ಹೇಳಬಹುದಿತ್ತು .

ದಾರಿ ಮಧ್ಯೆ ಕೆಫೆಡೇಯಲ್ಲಿ ನಿಲ್ಲಿಸಿ, ಯಾರ ಜೊತೆಯೋ ಹತ್ತು ನಿಮಿಷ ಮಾತಾಡಿ, ಒಂದು ಕಾಫಿ ಏರಿಸಿ ಕಾರಲ್ಲಿ ಕೂತ, ನಾನು ಕೋಲ್ಡ್ ಕಾಫಿಯನ್ನ ಕಾರಿನಲ್ಲೇ ಕೂತು ಹೀರಿ ಅವಿ ಜೊತೆ ಕ್ಯಾಬ್ ಮಾಡಿ ಬರ್ತಿದ್ದೀನಿ ಎಂದು ಸುಳ್ಳು ಹೇಳಿ ಟೈಮಿಗೆ ಕರೆಕ್ಟಾಗಿ ತಲುಪುತ್ತೇನೆ ಎಂದೆ, ಒಂದು ಮಟ್ಟಿಗೆ ಚೆನ್ನಾಗಿರುವ ಅಂಕಲ್ ಜೊತೆ ಬರುವ ವಿಷಯ ಹೇಳಿದರೆ ಅವನು ಕೇಳುವ ಪ್ರಶ್ನೆಗಳಿಗೆ ಸಾಕು ಸಾಕಾಗಿ ಹೋಗುತ್ತೆ,ನನ್ನ ವಿಷಯದಲ್ಲಿ ಅವನದು ಅನುಮಾನವೋ, ಪೊಸೆಸ್ಸಿವೆನಿಸೋ ತಿಳಿಯದು. ಅಂತೂ ನಾನು ಅಂದುಕೊಂಡಕ್ಕಿಂತ ಬೇಗನೆ ಮನೆ ಮುಟ್ಟಿಸಿದ, ಕೊನೆಯಲ್ಲಿ ತನ್ನ ವಿಸಿಟಿಂಗ್ ಕಾರ್ಡ್ ಕೊಟ್ಟು ಬಾಯ್ ಮಾಡಿ ಹೊರಟ.

**

ಅವನು ವಿಸಿಟಿಂಗ್ ಕಾರ್ಡ್ ಕೊಟ್ಟು ಹೊರಟ ಮೇಲೆ ಅದನ್ನು ಎಲ್ಲೋ ಎಸೆದು ಮತ್ತೆ ನನ್ನ ಬದುಕಿಗೆ ಮರಳಿದ್ದೆ, ಹೊಸದಾಗಿ ಪೊಲಿಟಿಕಲ್ ವ್ಯಕ್ತಿಗಳನ್ನು ಹಿಡಿದು ಒಂದಷ್ಟು ನನ್ನ ಹೊಸ ಸ್ಟಾರ್ಟ್ ಅಪ್ ಗೆ ದುಡ್ಡು ಹೊಂದಿಸಲು ಒದ್ದಾಡುತ್ತಿದ್ದೆ, ಮೀಡಿಯಾ ಹ್ಯಾಂಡಲ್ ಮಾಡಿ ಸಾಕು ಎನ್ನುವಲ್ಲಿಗೆ ಎಲ್ಲ ಮೀಟಿಂಗ್ ಗಳು ಕೊನೆ ಆಗ್ತಿದ್ದವು, ಹೊಸ ತರದ ಪ್ಲಾನ್ ಗಳು ಅವರಿಗೆ ಇಷ್ಟವೇ ಆಗುತ್ತಿರಲಿಲ್ಲ, ಹಳೆಯ ಜಾಯಮಾನದ ಸಗಣಿ ಹೊತ್ತ ತಲೆಗಳು, ರಾಜಕಾರಣಿಗಳಿಗಿಂತ ಅವರ ಮಕ್ಕಳು ಆಸಕ್ತಿ ತೋರಿ, ಒಂದೆರಡು ದೊಡ್ಡ ದೊಡ್ಡ ಹೊಟೇಲುಗಳಲ್ಲಿ ಮೀಟ್ ಆಗಿ, ಕೊನೆಗೆ ವಿಷ್ಯ ಮಲಗುವಲ್ಲಿಗೆ ತಲುಪುತ್ತಿತ್ತೋ ಹೊರತು ಅವರ ಅಪ್ಪಂದಿರು ನಮ್ಮ ಯೋಜನೆಗಳಿಗೆ ಸೊಪ್ಪು ಹಾಕುತ್ತಿರಲಿಲ್ಲ, ಹೇಗಾದರೂ ಮಾಡಿ ಬ್ಯುಸಿನೆಸ್ ಗಟ್ಟಿ ಆಗಲೇ ಬೇಕಾದ ಕಾರಣ ಅವರ ಮಕ್ಕಳ ಫ್ಯಾಂಟಸಿ ಗೆ ಅಷ್ಟೊಂದು ಸೊಪ್ಪು ಹಾಕಲು ನಾನು ಕೂಡ ಹೋಗಲಿಲ್ಲ, ಮಂಚದ ವಿಷಯಕ್ಕೆ ಬಂದ್ರೆ ಅವಿಯಿಂದ ಬೇಕಾದಷ್ಟು ತೃಪ್ತಿ ಸಿಗುತಿತ್ತು ಅದರಲ್ಲಿ ಏನೋ ಮಿಸ್ ಆಗ್ತಿದೆ ಅಂತ ನಂಗೆ ಅನಿಸಿಯೇ ಇರಲಿಲ್ಲ ಹಾಗಾಗಿ ಸಿಹಿ ಹಾದರಕ್ಕೆ ಅಷ್ಟೊಂದು ಹೋಗಲಿಲ್ಲ 

ಯಾವುದೋ ಒಂದು ಸಂಜೆ ,ಹಳೆಯ ಫೈಲುಗಳನ್ನು ಹುಡುಕುವಾಗ ಅವಿಗೆ ಡ್ರಾಪ್ ಮಾಡಿ ಹೋದ ಜಾನಿ ವಾಕರ್ ಅಂಕಲ್ ನ  ವಿಸಿಟಿಂಗ್ ಕಾರ್ಡ್ ಸಿಕ್ಕಿ, ಫುಲ್ ಎಕ್ಸೈಟ್ ಮೆಂಟ್ ಲಿ DO YOU THIS GEM GUY? ಎಂದ, YES ಅಂದೆ , ಆದರೆ ಕಾರು ಕೆಟ್ಟು ಅವನ ಕಾರಿನಲ್ಲಿ ಬಂದ ವಿಷಯ ಹೇಳದೆ, ಯಾವುದೋ ಸಮ್ಮಿಟ್ ಲಿ ಸಿಕ್ಕಿದ್ದ ,ಅವನ ವಿಸಿಟಿಂಗ್ ಕಾರ್ಡ್ ಕೊಟ್ಟಿದ್ದ ಎಂದೆ, ಅವಿ ತುಂಬಾ ಜೋಷ್ ಲಿ “ಅವನು ನನ್ನ ಮಾನಸ ಗುರು, ನಮ್ಮ ಕಾಲೇಜಿನ ಕೊನೆ ಸೆಮಿನಾರಿನಲ್ಲಿ ಆತ ಬಂದದ್ದು, ಬ್ಯುಸಿನೆಸ್ ಅಂದ್ರೆ ಏನು ಅದನ್ನು ಹೇಗೆ ಶುರು ಮಾಡಬೇಕು, ಯಾವ ಯಾವ ಐಡಿಯಾ ಮೇಲೆ ವರ್ಕ್ ಔಟ್ ಮಾಡಬೇಕು ,ಯಾವ ಐಡಿಯಾಗಳು ಜನರಿಗೆ ತಲುಪುತ್ತೆ ಎಂದೆಲ್ಲ ಹೇಳಿದ ಹಾಗೆ ನಿನ್ನ ಸ್ಟಾರ್ಟ್ ಅಪ್ ಬಗ್ಗೆ ಆ ಹಾಳಾದ ಶಾರ್ಕ್ ಟ್ಯಾಂಕ್ ಷೋ ನೋಡೋದು ಬಿಟ್ಟು , ಅವ್ರ ಜೊತೆ ಒಂದು ಸಲ ಮಾತಾಡು HE MAY GIVE YOU FANTASTIC IDEAS” ಎಂದ, ಸರಿ ಎಂದು ಒಂದು ನಿರ್ಲಕ್ಷತನ ಪ್ರಕಟಿಸಿದೆ ಆದರೂ ಅವನ ಬಾಯಲ್ಲಿ ಬಂದ ಮಾತು ಕೇಳಿ ಖುಷಿ ಆಯಿತು 

ಇದಾಗಿ ಒಂದು ವಾರ ಅದೇ ವಿಸಿಟಿಂಗ್ ಕಾರ್ಡ್ ನಲ್ಲಿ ಇದ್ದ ನಂಬರ್ ಸೇವ್ ಮಾಡಿ ಅವನ ಸ್ಟೇಟಸ್ಸು ,ಡಿ ಪಿ ನೋಡುತ್ತಾ ಇದ್ದೆ, ಒಮ್ಮೊಮ್ಮೆ ಸೈನ್ಸು, ಒಮ್ಮೊಮ್ಮೆ ಪೊಯೆಟ್ರಿ, ಒಮ್ಮೊಮ್ಮೆ ಸಂಗೀತ, ಒಮ್ಮೊಮ್ಮೆ ಬ್ಯುಸಿನೆಸ್, ಹೀಗೆ ಹತ್ತು ಹಲವು ವಿಷ್ಯಗಳು ಅವನ ಸ್ಟೇಟಸ್ ಅಲ್ಲಿ ಇದ್ದವು

ಒಂದು ಸಂಜೆ ನಾನೇ ಹಾಯ್ ಕಳಿಸಿದೆ,  ಮೂರು ದಿನ ನಾನು ಕಳಿಸಿದ ಮೆಸೇಜ್ ಬ್ಲೂ ಟಿಕ್ ಆಗಲೇ ಇಲ್ಲ, ನಾಲ್ಕನೇ ದಿನಕ್ಕೆ “ಹಾಯ್, ನನ್ನ ಲೈಟರ್ ನಿನ್ನ ಬಳಿ ಇದೆ, ಇಷ್ಟು ದೊಡ್ಡ ಶಾಪ ಹಾಕಬಾರದು, ಅದು ನನ್ನ ಫೆವರೇಟ್ ಲೈಟರ್, ಯಾವಾಗ ಹಿಂತಿರುಗಿಸಿವಿರಿ” ಎಂದ, ನಾನು “ನಿಮಗೆ ಕಳಿಸಿದ ಮೆಸೇಜು ಬ್ಲೂ  ಟಿಕ್ ಆಗಲಿಕ್ಕೆನೇ ಮೂರು ದಿನ, ಇನ್ನು  ನಿಮ್ಮ ಲೈಟರ್ ತಲುಪಲು ಜನುಮ ಬೇಕೇನೋ” ಅಂದೆ, ಅವನು ನಕ್ಕ, ಮತ್ತೆ ನಮ್ಮ ಮಾತು ಕತೆ ನಡೆಯುತ್ತಾ ಹೋಯ್ತು ..

ಅವನ ಲೈಟರ್ ಹುಡುಕಿ ಹುಡುಕಿ ಸಾಕು ಮಾರನೇ ದಿನ ಸಿಕ್ತು, ಅವನನ್ನು ಮೀಟ್ ಮಾಡಿದೆ, ಲೈಟರ್ ಕೊಟ್ಟಾಗ ಖುಷಿ ಪಟ್ಟ “ಇದು ತನ್ನ ಮೊದಲ ಲವ್ವರ್ ಕೊಟ್ಟ ಲೈಟರ್, ಬದುಕಲ್ಲಿ ಹೇಗಾದರೂ ಎದ್ದು ನಿಲ್ಲಬೇಕು ಎಂದು ಒದ್ದಾಡುತ್ತಿದ್ದ ದಿನಗಳಲ್ಲಿ ನನಗೆ ಇದ್ದ ಏಕೈಕ ಜೀವ ಅವಳು, ಸಿಕ್ಕಾಪಟ್ಟೆ ಸಿಗರೇಟು ಸೇದುತ್ತಿದ್ದೆ, ಯಾವ ಯಾವದೋ ಐಡಿಯಾ ಮೇಲೆ ವರ್ಕ್ ಮಾಡಿ ಅದನ್ನು ಸಫಲಗೊಳಿಸಲು ಒದ್ದಾಡುತ್ತಿದ್ದಾಗ ಅವಳು ನನ್ನ ಜೊತೆ ಇದ್ದಳು , ಇಬ್ಬರು ಒಂದೇ ರೂಮಲ್ಲಿ ಕೂತು ಗಂಟೆಗಟ್ಟಲೆ ಸಿಗರೇಟು ಸೇದುತ್ತ ಮಾತಾಡುತ್ತ, ಮುದ್ದು ಮಾಡುತ್ತಾ , ಬರಿ ಚಡ್ಡಿ ಬನಿಯನ್ ಲಿ ಇಡೀ ದಿನ ಬೆಡ್ ಮೇಲೆ ಮಲಗುತ್ತಿದ್ದ ದಿನಗಳು, ನನ್ನ ಮೊದಲ ಬ್ಯುಸಿನೆಸ್ ಸಕ್ಸಸ್ ಆದ ಒಂದು ತಿಂಗಳಲ್ಲಿ ಅವಳು ನನ್ನ ನೋಡಲು ಏರಿದ್ದ ವಿಮಾನ ಕ್ರಾಶ್ ಆಗಿ ಸತ್ತು ಹೋದಳು” ಎಂದ , ನಾನು ಸಾರಿ ಅಂದೆ, ಅವನು ಕೇಳಿಸಿಕೊಳ್ಳದೆ ಸಿಗರೇಟು ಸೇದುತ್ತ ಹೊರಗಡೆ ನೋಡುತ್ತಿದ್ದ 

**

ಕತ್ತಲು, ಅವಿಯ ಬಾಯಿಂದ ವಿಷಲ್ ತರದ ಗೊರಕೆ ಸದ್ದು,ಫ್ಯಾನ್ ನ ಸದ್ದು ,ಸಡನ್ ಆಗಿ ಮಗು ಅಳುತ್ತಿರುವ ಕಿರುಚುತ್ತಿರುವ ಸದ್ದು,ಪಕ್ಕದ ಮನೆಯದ? ಇಲ್ಲ, ಅಕ್ಕ ಪಕ್ಕದ ಮನೆಯಲ್ಲಿ ಅಳುವಂತ ಚಿಕ್ಕ ವಯಸ್ಸಿನ ಮಕ್ಕಳಿಲ್ಲ, ಮತ್ತೆ ಇದು ಎಲ್ಲಿಂದ ಬರುತ್ತಿದೆ, ಬರ್ತಾ ಬರ್ತಾ ಧ್ವನಿ ಜಾಸ್ತಿ ಆಗಿ ಇಲ್ಲೇ ಎಲ್ಲೋ ಹತ್ತಿರದಲ್ಲಿ ಕಿರುಚುತ್ತಿದೆ, ನಮ್ಮ ಮನೆಯಲ್ಲಿ ಏನಾದರೂ ? ಭಯವಾಯ್ತು, ಮರುಕ್ಷಣ ರೂಮಿನ ಬಾಗಿಲು ಮೆಲ್ಲನೆ ಕಿಯ್ಯ್ ಎಂಬ ಸದ್ದಲ್ಲಿ ತೆರೆದು ಹೊರಗಿನಿಂದ ಬೆಳಕು ರಾಚಿತು, ಬಾಗಿಲ ಸಂದಿನಿಂದ ಮುದ್ದಾದ ದಪ್ಪನೆಯ ಆವಿಯ ಮುಖ ಇರುವ ಸಣ್ಣ ಮಗುವೊಂದು ತವಳುತ್ತ ಬರ್ತಿದೆ, ಆ ತೆವಳುವಿಕೆಯಲ್ಲಿ ರಕ್ತ, ರಕ್ತದ ಚಿಕ್ಕ ಚಿಕ್ಕ ಪಾದಗಳು, ನನ್ನತ್ತಲ್ಲೇ ಬರುತ್ತಿದೆ, ಭಯ, ನಡುಕ, ಬೆವರು, ಅವಿ ಅವಿ ಎಂದು ಅವನನ್ನು ಬಡಿಯುತ್ತಿದ್ದೇನೆ ಅವನ ವಿಷಲ್ ಸದ್ದು ಜೋರಾಗ್ತಿದೆ, ಆ ಮಗು ತೆವಳಿ ಬಂದು ಎದ್ದು ನಿಲ್ತು.. ಅಷ್ಟೇ ಕಣ್ಬಿಟ್ಟೆ, ಬಿದ್ದ ಕನಸಿಗೆ ಬೆವತಿದ್ದೆ, ಅವಿ ಪಕ್ಕದಲ್ಲಿ ವಿಷಲ್ ಗೊರಕೆ ಹೊಡೆಯುತ್ತ ಮಲಗಿದ್ದ

**

ಒಂದೆರಡು ಮೀಟಿಂಗ್ ಆದಮೇಲೆ ಜಾನಿ ವಾಕರ್ ಅಂಕಲ್ ಕೊಟ್ಟ ಐಡಿಯಾ ಮೇಲೆ ಒಂದಷ್ಟು ವರ್ಕ್ ಔಟ್ ಮಾಡಿದ ಮೇಲೆ ಒಂದಿಬ್ರು ರಾಜಕಾರಣಿಗಳು ನಮ್ಮ ಐಡಿಯಾ ಮೆಚ್ಚಿ ಒಪ್ಪಿಗೆ ಕೊಟ್ಟರು, ಆ ರಾಜಕಾರಣಿಗಳನ್ನು ಪರಿಚಯಿಸಿದ್ದು ಅವನೇ.

ಈ ನಡುವೆ ಇನ್ಸೋಮೇನಿಯಾದ ಜೊತೆ, ತಲೆನೋವು ಕೂಡ ಜಾಸ್ತಿ ಆಗಿತ್ತು. ಹೀಗೆ ಮಧ್ಯಾಹ್ನ ತಲೆ ನೋಯುತ್ತಿದ್ದ ವೇಳೆ ಅವನ ಸ್ಟೇಟಸ್ ಲಿ ಕಾಲು ಮೇಲೆ ಕಾಲು ಇದ್ದು ಅಲ್ಲೇ ಇರುವ ಸ್ಟಡಿ ಟೇಬಲ್ ಮೇಲೆ ಮುರಕಾಮಿಯ ‘ಮೆನ್ ವಿತ್ ಔಟ್ ವುಮೆನ್’ ಬುಕ್, ನಾಲ್ಕು ಸುಟ್ಟ ಅರ್ಧ  ಸಿಗರೇಟಿನ ಫೋಟೋ, ನಾನು ಚಾಟ್ ಮಾಡಲು ಶುರು ಮಾಡಿದೆ, ನಾವಿಬ್ರು ಮೊದಲಿಗಿಂತ ಹೆಚ್ಚು ಆಪ್ತವೆ ಆಗಿದ್ವಿ, ಅದಕ್ಕೆ ಮುಖ್ಯ ಕಾರಣ ಅವಿ, ಅವಿಗೆ ಇವನ ಜೊತೆ ಇದ್ದೀನಿ ಅಂತ ಗೊತ್ತಾದ್ರೆ, ಇವನ ಜೊತೆ ಮೀಟಿಂಗ್ ಅಂತ ಹೇಳಿದರೆ ಯಾವ ಪ್ರಶ್ನೆಯೂ ಕೇಳುತ್ತ ಇರಲಿಲ್ಲ, ಅದೇ ನನಗೆ ತುಂಬಾ ಧೈರ್ಯ ಕೊಟ್ಟಿತ್ತು, ಹಾಗಾಗಿ ಸಿಗುವ ಅಂದೆ, ಅವನು ಸರಿ ಎಂದು ಅಡ್ರೆಸ್ ಕಳಿಸಿದ ಅವನ ಫ್ಲ್ಯಾಟ್ ತಲುಪಿದ್ದು ಮೊದಲ ಭೇಟಿಯಾಗಿ ಸುಮಾರು ಎಂಟು ತಿಂಗಳಾದ ಮೇಲೆ.

ಅದು ಅವನ ಫ್ಲ್ಯಾಟ್ , ನಾಗವಾರದಲ್ಲಿ ಇರುವ ಫ್ಲ್ಯಾಟ್, ಅದು ಹನ್ನೊಂದನೇ ಫ್ಲೋರಿನಲ್ಲಿತ್ತು, ಮನೆಯಿಂದ, ಹೆಂಡತಿಯಿಂದ ಸ್ವಲ್ಪ ಸ್ಪೇಸ್ ಬೇಕು ಅನಿಸಿದಾಗ ಯಾವುದೋ ಬ್ಯುಸಿನೆಸ್ ಟ್ರಿಪ್ ಅಂತ ಹೇಳಿ ಇಲ್ಲಿ ಬಂದು ಇದ್ದುಬಿಡುತ್ತಿದ್ದ, ರಾಶಿಗಟ್ಟಲೆ ಪುಸ್ತಕ, ಬುದ್ಧನ ಪ್ರತಿಮೆ, ಹಳೆ ರಾಕ್ ಪಾಪ್ ಸಿಡಿಗಳು, ದೊಡ್ಡ ಮ್ಯೂಸಿಕ್ ಸಿಸ್ಟಮ್. ಮೇಲೊಂದು ಹೋಮ್ ಥಿಯೇಟರ್, ಜೊತೆಗೆ ಟೆರೇಸ್ ನಲ್ಲಿ ಸ್ವಿಮ್ಮಿಂಗ್ ಫೂಲ್ ಕೂಡ ಇತ್ತು.

ಅದನ್ನು ನೋಡಿ ಭಯಾನಕ ಖುಷಿ ನಂಗೊಂದು ಆ ತರದ ಫ್ಲ್ಯಾಟ್ ಇರಬಾರದಿತ್ತಾ ಅಂದುಕೊಂಡೆ, ಅಲ್ಲೇ ಬ್ಯಾಗ್ ಎಸೆದು ಕೂತೆ ಸೋಫಾ ಮೇಲೆ ಕೂತೆ ಆತ ಸಿಗರೇಟು ಕೊಟ್ಟ, ಅವನೇ ಲೈಟರ್ ಹಿಡಿದ, ತುಂಬಾ ಅಂದವಾಗಿ ಕಾಣ್ತಿದ್ದೀಯ ಅಂತ ಮೊದಲ ಸಲ, ಹಾಗೆ ನೋಡಿದರೆ ಅಂತ ಮೇಕಪ್ ಇಲ್ಲದೆ ಸೀದಾ ಸಾದಾ ಹಾಗೆ ಬಂದಿದ್ದೆ ತಲೆ ಭಾರದಿಂದ,ಅವನು ಹಾಗೆ ಅನ್ನಲಿ ಎಂದು ಪ್ರಯತ್ನ ಮಾಡಿದ ಎಷ್ಟೋ ಮೀಟಿಂಗ್ ಗಳಲ್ಲಿ ಆತ ಏನು ಹೇಳದೆ ಸಡನ್ನಾಗಿ ಅವತ್ತು ಹೇಳಿಬಿಟ್ಟ, ನಾನು ಹೇಗೆ ಪ್ರತಿಕ್ರಿಯೆ ಕೊಡಲು ಗೊತ್ತಾಗದೆ ನಕ್ಕೆ, ಅಷ್ಟು ದೊಡ್ಡ ಮನೆ ಇದ್ರೂ ಈ ತರ ಫ್ಲ್ಯಾಟ್ ಯಾಕೆ ಅಂದೇ ನನಗೆ ನಾನಾಗಿ ಇರಲು ಒಂದು ಸ್ಥಳ ಬೇಕು ಅದೇ ಇದು, ನನಗೆ ಇಷ್ಟವಾದುದು ಓದುತ್ತ ಕೇಳುತ್ತ ನೋಡುತ್ತಾ ತಿನ್ನುತ್ತಾ ಇರಲಿಕ್ಕೆ ಬೇಕು, ಇಲ್ಲಿ ನಾನು ನಾನಾಗಿ ಇರುತ್ತೀನಿ ಎಂದ . ನಾನು ನನಗು ಇಂತ ಒಂದು ಜಾಗ ಬೇಕು ಎಂದು ನಕ್ಕೆ.

ನನ್ನ ಇನ್ಸೋಮೇನಿಯಾದ ಕತೆ ಮೊದಲ ಸಾರಿ ಹೇಳಿದೆ, ಈಗಲೂ ಬರುವ ಕಮ್ಮಿ ನಿದ್ದೆಯಲ್ಲೂ ಬೀಳುವ ರಕ್ತದ ಪಾದದ ಮಗುವಿನ ಕನಸನ್ನ ಹೇಳಿದೆ, ಮದ್ವೆ ಆದ ಮೂರನೇ ತಿಂಗಳಿಗೆ ಗರ್ಭಪಾತವಾದದ್ದು , ಆಮೇಲೆ ಪ್ರತಿ ರಾತ್ರಿ ಕನಸಲ್ಲೂ ಮಗುವೊಂದು ರಕ್ತದ ಪಾದಗಳಲ್ಲಿ ನನ್ನ ಬಳಿ ಬರುತ್ತಿದ್ದು, ನಾನು ಬೆಚ್ಚಿ ಬಿದ್ದು , ಮಲಗದೆ ರಾತ್ರಿಯಿಡಿ ಓದುತ್ತಲೋ, ಫ್ಯಾನ್ ಗಿರಾಕಿ ಹೊಡೆಯುವುದನ್ನು ನೋಡುತ್ತಲೋ, ನಿದ್ದೆ ಬಂದು ಗೊರಕೆ ಹೊಡೆವ ಅವಿ ನೋಡುತ್ತಲೋ ಇದ್ದುದು ಮತ್ತು ಅದೇ ರೂಡಿ ಆಗಿ ಹೋದದ್ದು ಹೆಚ್ಚೆಂದರೆ ದಿನಕ್ಕೆ ಎರಡು ತಾಸು ಅಷ್ಟೇ ನಿದ್ದೆ ಎಂದು ಹೇಳಿ, ಆ ನಂತರ ಸೆಕ್ಸ್ ಬಗ್ಗೆ ನನಗು ಅವಿಗೂ ಉತ್ಸಾಹ ಕರಗುತ್ತ ಬಂದ್ದಿದ್ದು, ಮಗು ಆಗಲೆಂದೇ ಕೂಡುವ ಕ್ರಿಯೆ ಇದ್ದುದ್ದು, ಇದೆಲ್ಲ ಹೇಳಿಬಿಟ್ಟೆ, ಯಾಕೆ ಏನು ನನಗು ಗೊತ್ತಾಗಲಿಲ್ಲ.

ಅವನು ಏನು ಮಾತಾಡದೆ ಮುತ್ತಿಟ್ಟ, ಫ್ರೆಂಚ್ ಕಿಸ್, ಒಂದೊಳ್ಳೆ ಮಿಥುನಕ್ಕೆ ನಿದ್ದೆ ಬರಿಸುವ ಶಕ್ತಿ ಇದೆ ಎಂದ, ನಾನು ನಡುಗುತ್ತಿದ್ದೆ, ಅವನು ಬೇಕು ಅನಿಸಿತ್ತು, ಇವಾಗ ಅವನೇ ಮುಂದುವರಿದಾಗ ಭಯಂಕರ ಪ್ರಶ್ನೆ ,ನಡುಕ ಏನೇನೋ ಅಡ್ಡ ಬಂತು, ಅದನ್ನು ಮೀರಿಸಿ ದೇಹ ಅವನಿಗೆ ಸಹಕರಿಸಿತ್ತು. 

“ಒಂದ್ ನಿಮಿಷ” ಎಂದು ಅವಿಗೆ ಕಾಲ್ ಮಾಡಿದೆ. ನಿಮ್ಮ ಜಾನಿವಾಕರ್  ಸರ್ ಜೊತೆ ಮೀಟಿಂಗ್ ಇದೆ, ಸ್ವಲ್ಪ ಲೇಟ್ ಆಗಬಹುದು ಅಂದೆ, ಅವನು ಖುಷಿಯಿಂದ ಕ್ಯಾರಿ ಆನ್ ಆರಾಮಾಗಿ ಬಾ ಎಂದ, ಫೋನು ಇಟ್ಟೊಡನೆ ಜಾನಿವಾಕರ್ ಮುದ್ದಿಸತೊಡಗಿದ… ಎಂಟು ತಿಂಗಳ ಹಿಂದೆ ಅನಾಮಿಕ ರೋಡಿನಲ್ಲಿ ನನ್ನ ಕಾರು ಕೆಟ್ಟದ್ದೇ ಇದ್ದಿದ್ದರೆ, ಅವನ ಫ್ಲ್ಯಾಟಿನಲ್ಲಿ ಅವನು ನಾನು ಬೆತ್ತಲಾಗುತ್ತಿರಲಿಲ್ಲ. ಆ ರಾತ್ರಿ ಎಂತ ನಿದ್ದೆ ಬಂತು ! ಮೂರು ವರುಷಗಳ ನಂತರ 12 ಗಂಟೆ ನಿದ್ದೆ ಮಾಡಿದ್ದೆ, ಕಣ್ಬಿಟ್ಟಾಗ ತಲೆ ಭಾರ ಇಲ್ಲದೆ ಹಗುರಾಗಿತ್ತು, ಅವನು ಬಾಲ್ಕನಿಯಲ್ಲಿ ಕೂತು ಸಿಗರೇಟು ಸೇದುತ್ತ ಯಾವುದೋ ಪುಸ್ತಕ ಓದುತಿದ್ದ, ಮೊಬೈಲಿನಲ್ಲಿ ಅವಿಯ ಒಂದು ಮಿಸ್ ಕಾಲ್ ಕೂಡ ಇರಲಿಲ್ಲ.

‍ಲೇಖಕರು Admin

March 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: