‘ಸುದ್ದಿಗಳನ್ನು ಏಕೆ ಓದಬಾರದು?’

ಪ್ರಸಾದ್ ನಾಯ್ಕ್

ಸುದ್ದಿಗಳನ್ನು ಏಕೆ ಓದಬಾರದು ಎಂದು ಖ್ಯಾತ ಲೇಖಕರಾದ ರಾಲ್ಫ್ ಡೊಬೆಲ್ಲಿ ಒಂದು ಪುಸ್ತಕವನ್ನೇ ಬರೆದಿದ್ದಾರೆ. ಇತ್ತೀಚೆಗೆ ಮುಂಬೈ ಏರ್ ಪೋರ್ಟಿನಲ್ಲಿ ಈ ಪುಸ್ತಕವು ನನಗೆ ಆಕಸ್ಮಿಕವಾಗಿ ಸಿಕ್ಕಿತ್ತು. ಸುದ್ದಿಗಳ ಬಗ್ಗೆ ಡೊಬೆಲ್ಲಿ ಹೀಗೆಲ್ಲಾ ಸವಿವರವಾಗಿ, ರಸವತ್ತಾಗಿ ಬರೆದಿದ್ದಾರೆ. ಓದಿದ ನಂತರ ಕಾಡದಿದ್ದರೆ ಹೇಳಿ!

ಸುದ್ದಿಗಳಿಗೆ ಇಂದೇ ಎಳ್ಳುನೀರು ಬಿಟ್ಟುಬಿಡಿ;
ಏಕೆಂದರೆ:
1. ದೇಹಕ್ಕೆ ಸಕ್ಕರೆ ಹೇಗೋ, ಮನಸ್ಸಿಗೆ ಸುದ್ದಿಗಳು ಹಾಗೇನೇ. ಅತಿಯಾದರೆ ಎರಡೂ ಅಪಾಯಕಾರಿ!

2. ಆಹ್ಲಾದಕರ, ಸಕಾರಾತ್ಮಕ ಸುದ್ದಿಗಳಿಗಿಂತ ಹಿಂಸೆ-ಗಲಭೆ-ರಕ್ತಪಾತಗಳಂತಹ ನಕಾರಾತ್ಮಕ ಸುದ್ದಿಗಳಿಗೆ ಆಕರ್ಷಣೆ ಮತ್ತು ಜೀವಿತಾವಧಿ ಹೆಚ್ಚು. ಹೀಗಾಗಿ ಮಾಧ್ಯಮಗಳಿಂದ ನಮಗೆ ಸಿಗುವ ಬಹುತೇಕ ಸುದ್ದಿಗಳಲ್ಲಿ ನೆಗೆಟಿವ್ ನೆರೇಟಿವ್ ಸುದ್ದಿಗಳ ತೂಕ ಹೆಚ್ಚಿರುತ್ತದೆ.

3. ಮುಖ್ಯವಾಗಿ ಸುದ್ದಿಗಳು ನಮ್ಮ ದೃಷ್ಟಿಕೋನವನ್ನು ತೀರಾ ಸಂಕುಚಿತಗೊಳಿಸುತ್ತವೆ. ಉದಾಹರಣೆಗೆ ಘಟನೆಯೊಂದರ ಬಗ್ಗೆ ಬರೆಯುವಾಗ “ಅದು ಹಾಗೆ” ಆಗಿದ್ದರಿಂದ “ಇದು ಹೀಗೆ” ನಡೆಯಿತು ಎಂಬುದು ಮಾಧ್ಯಮಗಳ ಧಾಟಿ. ಆದರೆ ನೈಜ ಜಗತ್ತು ಹಾಗಿರುವುದಿಲ್ಲ. ಒಂದು ಘಟನೆ ನಡೆಯುವುದಕ್ಕೆ (ನಮಗೆ ಗೊತ್ತಿರುವ ಮತ್ತು ಗೊತ್ತಿಲ್ಲದ) ಹತ್ತು-ಹಲವು ಅಂಶಗಳು ಕಾರಣವಾಗಿರುತ್ತವೆ. ಇವೆಲ್ಲವನ್ನು ವಿವರಿಸುವಷ್ಟು ಸಮಯವೂ, ಸ್ಥಳಾವಕಾಶವೂ ಇಲ್ಲದ ಪರಿಣಾಮವಾಗಿ ಘಟನೆಯೊಂದನ್ನು ಹೆಚ್ಚೇ ಸರಳೀಕರಿಸಿ ನಮ್ಮೆದುರು ಸುದ್ದಿಯ ರೂಪದಲ್ಲಿ ಪ್ರಸ್ತುತಪಡಿಸಲಾಗುತ್ತದೆ. (ಹೆಚ್ಚು ವಿವರಣಾತ್ಮಕವಾದ ಸುದ್ದಿಗಳು ಬೋರು ಹೊಡೆಸುವುದರಿಂದ ಇದಕ್ಕೆ ಓದುಗರೂ ಕಮ್ಮಿ. ಹೀಗಾಗಿ ಆದಷ್ಟು ಚಿಕ್ಕದಾಗಿ ಬಹಳಷ್ಟನ್ನು ಹೇಳುವ ಬರಹಗಳಿಗೆ ಇಂದು ಆದ್ಯತೆ ಹೆಚ್ಚು). ಇಂತಹ ಸುದ್ದಿಗಳಿಂದ ನಮಗೆ ಮೇಲ್ಪದರದ ಅಲ್ಪ ಮಾಹಿತಿ ಸಿಗಬಹುದೇ ಹೊರತು ಆಳವಾದ ಅರಿವಲ್ಲ. ಹೀಗಾಗಿ ಅರೆಬೆಂದ ಸುದ್ದಿಗಳ ಬದಲಾಗಿ, ಆಯಾ ವಿಷಯಗಳ ಬಗ್ಗೆ ತಜ್ಞರಿಂದ ಬರೆಯಲ್ಪಟ್ಟ ದೀರ್ಘ ಲೇಖನ/ಅಂಕಣ/ಪುಸ್ತಕಗಳನ್ನು ಓದುವುದು ಉತ್ತಮ.

4. ಬಿಸಿಬಿಸಿ ಚರ್ಚೆಗಳನ್ನು ಕೆಲವು ದಿನಗಳ ಕಾಲ ಮಾತ್ರ ಜೀವಂತವಾಗಿಡುವ ಮಾಧ್ಯಮಗಳು ನಂತರ ಅವುಗಳನ್ನು ಬಹುಬೇಗನೆ ಮರೆತು ಮುಂದಕ್ಕೆ ನಡೆದುಬಿಡುತ್ತವೆ. ಆ ಸುದ್ದಿಯ “ಎಂಟರ್ಟೈನ್ಮೆಂಟ್ ವ್ಯಾಲ್ಯೂ” ಮುಗಿದ ನಂತರ ಅವುಗಳ ಗೋಜಿಗೆ ಸುದ್ದಿಸಂಸ್ಥೆಗಳು ಹೋಗುವುದಿಲ್ಲ. ಹೊಸದಾಗಿ ಇನ್ನೇನನ್ನೋ ಹುಡುಕಿ, ಅವುಗಳ ಸುತ್ತ ಗಿರಕಿ ಹೊಡೆಯಲಾರಂಭಿಸುತ್ತವೆ. ಅಸಲಿಗೆ ಘಟನೆಯೊಂದನ್ನು ತಾರ್ಕಿಕ ಅಂತ್ಯದತ್ತ ತಲುಪಿಸುವ ಬಗ್ಗೆ ಅವುಗಳಿಗೆ ಕಾಳಜಿಯಿರುವುದಿಲ್ಲ. ಬಹಳಷ್ಟು ಬಾರಿ ಅದು ಹೇಳುವಷ್ಟು ಸುಲಭ ಸಾಧ್ಯವೂ ಅಲ್ಲ. ಒಟ್ಟಿನಲ್ಲಿ ಇವೆಲ್ಲದರ ಲಾಭ ಪಡೆದುಕೊಳ್ಳುವುದು ಕೆಲ ಶಕ್ತಿಗಳು ಮಾತ್ರ. ನಿಮಗಂತೂ ಇದರಿಂದ ನಯಾಪೈಸೆ ಲಾಭವಿಲ್ಲ.

5. “ಸೆಲೆಬ್ರಿಟಿ” ಎಂಬ ಲೇಬಲ್ಲು ಇಂದಿನ ಕಾಲಮಾನದಲ್ಲಿ ಅರ್ಥಹೀನವಾದದ್ದು. ಹಿಂದೆಲ್ಲಾ ಸಾಧಕರಿಗೆ ಮಾತ್ರ ಖ್ಯಾತಿಯು ಒಲಿಯುತ್ತಿತ್ತು. ಇಂದು ಏನೇನೂ ಅಲ್ಲದವರು ಕೂಡ ಖ್ಯಾತಿಯನ್ನು ಗಳಿಸುತ್ತಾರೆ. ಸೆಲೆಬ್ರಿಟಿಯೆಂದು ಕರೆಸಿಕೊಳ್ಳುತ್ತಾರೆ. ಇಂಥವರು ಸೀನಿದರ, ಕೆಮ್ಮಿದರ, ಪ್ರಣಯಗಳ ಸುದ್ದಿ ಕಟ್ಟಿಕೊಂಡು ನಿಮಗೇನಾಗಬೇಕಾಗಿದೆ?

6. ಕಳೆದ 10 ವರ್ಷಗಳಲ್ಲಿ 20,000 ಕ್ಕೂ ಹೆಚ್ಚು ಸುದ್ದಿ ತುಣುಕುಗಳನ್ನು ನೀವು ಓದಿರಬಹುದು/ವೀಕ್ಷಿಸಿರಬಹುದು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ನಿಜಕ್ಕೂ ನಿಮಗಿಂದು ಎಷ್ಟು ಸುದ್ದಿಗಳು ನೆನಪಿವೆ? ನಿಮ್ಮ ವೈಯಕ್ತಿಕ ಜೀವನ, ಸಂಬಂಧಗಳು, ನೌಕರಿ, ನಿರ್ಧಾರಗಳು ಇತ್ಯಾದಿಗಳ ಗುಣಮಟ್ಟವನ್ನು ಹೆಚ್ಚಿಸುವುದರಲ್ಲಿ ಈ ಸುದ್ದಿಗಳು ಎಷ್ಟರಮಟ್ಟಿಗೆ ಉಪಯೋಗಕ್ಕೆ ಬಂದಿವೆ? ಒಮ್ಮೆ ಯೋಚಿಸಿ ನೋಡಿ.

7. ಒಂದು ಸುದ್ದಿ ಬಹಳ ದೊಡ್ಡದು ಅಥವಾ ಪ್ರಮುಖವಾಗಿದ್ದರೆ ಇವತ್ತಲ್ಲಾ ನಾಳೆ ನಿಮ್ಮ ಮಿತ್ರರಿಂದ, ಸಹೋದ್ಯೋಗಿಗಳಿಂದ, ಬಂಧುಗಳಿಂದ ನಿಮಗೆ ಗೊತ್ತಾಗುವುದು ಖಚಿತ. ಈ ಸುದ್ದಿ ನನಗೇ ಮೊದಲು ಸಿಕ್ಕಿತು ಎಂದು ಜಂಭ ಕೊಚ್ಚಿಕೊಳ್ಳುವುದರಲ್ಲಿ, ಅದಕ್ಕಾಗಿ ಹಪಹಪಿಸುವುದರಲ್ಲಿ ಅರ್ಥವಿಲ್ಲ. ಸುದ್ದಿಯೊಂದನ್ನು ಮೊದಲು ದಕ್ಕಿಸಿಕೊಂಡ ಮಾತ್ರಕ್ಕೆ ಯಾರೂ ನಿಮಗೆ ಬಹುಮಾನ ನೀಡುವುದಿಲ್ಲ. ಆ ಸುದ್ದಿ ಹೇಗೂ ಕೆಲ ನಿಮಿಷ/ದಿನಗಳಲ್ಲಿ, ಒಂದಲ್ಲಾ ಒಂದು ಮಾರ್ಗದಲ್ಲಿ ಎಲ್ಲರಿಗೂ ತಿಳಿಯುವಂಥದ್ದೇ. ಹಳತಾದ ನಂತರ ಅದಕ್ಕೆ ನೀವಂದುಕೊಂಡಷ್ಟು ಮಹತ್ವವೂ ಇರುವುದಿಲ್ಲ.

8. ನಿಮ್ಮ ಫೋನಿನಲ್ಲಿ ನಿಮಿಷಕ್ಕೊಂದರಂತೆ ಬರುವ ನ್ಯೂಸ್ ನೋಟಿಫಿಕೇಷನ್ನುಗಳನ್ನು ಆಫ್ ಮಾಡಿ ಬಿಡಿ. ದಿನಕ್ಕೆ ನೂರು ಬಾರಿ ನ್ಯೂಸ್ ಪೋರ್ಟಲ್ ಗಳನ್ನು ತೆರೆದು ಓದಲು ಕೂರಬೇಡಿ. ಏನೋ ಓದಲು ಹೊರಟು, ಇನ್ನೇನೋ ನಿಮ್ಮ ಕಣ್ಣುಕುಕ್ಕಿ, ನೀವು ಮತ್ತೆಲ್ಲೋ ತಲುಪಿಬಿಡುತ್ತೀರಿ. ನಿಮ್ಮ ಅಮೂಲ್ಯ ಸಮಯ ಮತ್ತು ಏಕಾಗ್ರತೆಯ ಸಾಮಥ್ರ್ಯವನ್ನು ಮಣ್ಣುಮುಕ್ಕಿಸಲು ಇವಿಷ್ಟು ಸಾಕು. ಎಲ್ಲಾ ಅಡಿಕ್ಷನ್ ಗಳಂತೆ ನ್ಯೂಸ್ ಕೂಡ ಒಂದು ಅಡಿಕ್ಷನ್.

9. “ನ್ಯೂಸ್ ಬೇಡವೇ ಬೇಡ ಎಂಬುದು ಅತೀ ಎನ್ನಿಸುವಂಥಾ ರ್ಯಾಡಿಕಲ್ ಚಿಂತನೆ. ನನಗೆ ಬೇಕಿರುವ ಸುದ್ದಿಯನ್ನು ಮಾತ್ರ ನಾನು ಓದುತ್ತೇನೆ”, ಎಂದು ನಿಮಗೆ ನೀವೇ ಸುಳ್ಳಾಡಬೇಡಿ. ಬೇಕಿರುವ ಸುದ್ದಿಗಳನ್ನು ಹೆಕ್ಕಿ ತೆಗೆಯುವ ಜಂಜಾಟದಲ್ಲಿ ಬೇಡದ ಕಸಗಳೆಲ್ಲಾ ನಿಮ್ಮ ಬುದ್ಧಿಯನ್ನು ಭ್ರಷ್ಟಗೊಳಿಸಿಬಿಡುತ್ತವೆ. ಬೇಕಿದ್ದರೆ ಜಗತ್ತಿನ ಪ್ರಮುಖ ಸುದ್ದಿಗಳನ್ನು ವಾರಕ್ಕೊಮ್ಮೆ ಸಾರಾಂಶದ ರೂಪದಲ್ಲಿ ನೀಡುವ ಕೆಲ ನ್ಯೂಸ್ ಜರ್ನಲ್ ಗಳಿರುತ್ತವೆ. ಅವುಗಳನ್ನು ನೀವು ನೆಚ್ಚಿಕೊಳ್ಳಬಹುದು. ಒಪ್ಪಿಕೊಳ್ಳುವುದು ಬಿಡುವುದು ಬೇರೆ ಸಂಗತಿ. ಆದರೆ ನಮಗೇ ಅರಿವಿಲ್ಲದಂತೆ ಆಟೋ ಪೈಲಟ್ ಮೋಡಿನಲ್ಲಿ ನಾವು ಬದುಕುತ್ತಿರುತ್ತೇವೆ. ಮಾರುಕಟ್ಟೆಯ ಮತ್ತು ಪ್ರಭುತ್ವದ ಹಲವು ಶಕ್ತಿಗಳು ಸದ್ದಿಲ್ಲದೆ ನಮ್ಮ ಯೋಚನಾವಿಧಾನಗಳನ್ನೇ ಬದಲಿಸುತ್ತಿರುತ್ತವೆ. ಹೀಗಾಗಿ “ಮೆಂಟಲ್ ಡಯಟ್” ಸಂಬಂಧಪಟ್ಟಂತೆ ಇಂತಹ ಜ್ಞಾನೋದಯಗಳು ಆಗಾಗ ಆಗುತ್ತಿರಬೇಕು. ಆಗಲೇ ಬದುಕು ಅರ್ಥಪೂರ್ಣವಾಗುವುದು.

‍ಲೇಖಕರು Admin

March 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: