ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ರುದ್ರಪಟ್ಣ ಅಸ್ತಿತ್ವಕ್ಕೆ ಬಂದದ್ದು ಯಾವಾಗ?

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು.

ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡಕ್ಕೆ ತಂದಿದ್ದಾರೆ.

ಖ್ಯಾತ ಸಂಗೀತಗಾರರೂ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ ಟಿ ಎಸ್ ಸತ್ಯವತಿ ಅವರು ಇದನ್ನು ಸಂಪಾದಿಸಿದ್ದಾರೆ.

ಈ ಕನ್ನಡ ಅವತರಣಿಕೆ ‘ಅವಧಿ’ಯಲ್ಲಿ ಧಾರಾವಾಹಿಯಾಗಿ ನಿಮ್ಮ ಮುಂದೆ…

। ಕಳೆದ ವಾರದಿಂದ ।

1

ರುದ್ರಪಟ್ಣ ಅಸ್ತಿತ್ವಕ್ಕೆ ಬಂದದ್ದು ಯಾವಾಗ? ಈ ಪ್ರಶ್ನೆಗೆ ನಿಖರವಾಗಿ ಉತ್ತರಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಮಾರಿಗುಡಿಯ ಮುಂದಿರುವ ಶಿಲಾಶಾಸನದ ಪ್ರಕಾರ, ಈ ಗ್ರಾಮ 15ನೇ ಶತಮಾನಕ್ಕೆ, ಎಂದರೆ 1482ನೇ ಶಕವರ್ಷಕ್ಕೆ ಸೇರಿದೆ. ವಾಸಗೃಹಗಳಿರುವ ಪ್ರದೇಶದಲ್ಲಿರುವ ಮತ್ತೊಂದು ಶಿಲೆಯ ಮೇಲೆ ಚಂಗನಾಡನ್ನಾಳಿದ ಬುಕ್ಕಣ್ಣ ಒಡೆಯರ್ ರವರಿಗೆ ಒಕ್ಕಣಿಸಿರುವ 1357ನೇ ಸಾಲಿಗೆ ಸೇರಿದ ಕೆತ್ತನೆ ಇದ್ದು, ಅದರಲ್ಲಿ ‘ಹಯಗ್ರೀವಪುರ’ ಮತ್ತು ಅದರ ‘ಒಡೆಯ ರಾಮಚಂದ್ರ’ನ ಉಲ್ಲೇಖಗಳಿವೆ. ಈ ಆಧಾರದ ಮೇಲೆ ಹಳ್ಳಿಯ ಹಿರಿಯರು ರುದ್ರಪಟ್ಣವನ್ನು ಹಿಂದೆ ಹಳ್ಳಿಯ ವೈಷ್ಣವರು ‘ಹಯಗ್ರೀವಪುರ’ ಎಂದು ಕರೆಯುತ್ತಿದ್ದುದಾಗಿ ಊಹಿಸುತ್ತಾರೆ. 

ರುದ್ರಪಟ್ಣದ ನಿವಾಸಿಗಳಾದ ಭಾಸ್ಕರ ಅವಧಾನಿಗಳು ತಮ್ಮ ಪುಸ್ತಕ ‘ಸಂಗ್ರಾಮ’ (ಸಂಗೀತ ಗ್ರಾಮ ರುದ್ರಪಟ್ಣ)ದಲ್ಲಿ, ಹಯಗ್ರೀವಸ್ವಾಮಿ  ಜ್ಞಾನಪ್ರದಾತೃವಾಗಿರುವುದರಿಂದ ಸುತ್ತಮುತ್ತಲ ಹಳ್ಳಿಗಳಲ್ಲೆಲ್ಲ ರುದ್ರಪಟ್ಣ ಮಾತ್ರವೇ ವೇದ ಮತ್ತು ನಾದಗಳಲ್ಲಿ ಬಹುಜನ ವಿದ್ವಾಂಸರನ್ನು ಪಡೆದ ಸೌಭಾಗ್ಯಶಾಲಿ ಗ್ರಾಮವಾಗಿದೆ ಹಾಗೂ ಈ ಕಾರಣದಿಂದ ಹಳ್ಳಿಯ ಹಿರಿಯರಲ್ಲಿ ಅನೇಕರು, ಹಿಂದೆ ಈ ಗ್ರಾಮವನ್ನು ಅನ್ವರ್ಥವಾಗಿ  ಹಯಗ್ರೀವಪುರ ಎಂದು ಕರೆಯುತ್ತಿದ್ದರು ಎಂದು ದೃಢವಾಗಿ ನಂಬುತ್ತಾರೆ. 

ಗ್ರಾಮದ ಪೂರ್ವಸೀಮೆಯಲ್ಲಿ ಪ್ರವಹಿಸುತ್ತಿರುವ ದಕ್ಷಿಣವಾಹಿನಿ ಕಾವೇರಿ ಜ್ಞಾನಸಮೃದ್ಧಿಯ ದ್ಯೋತಕವಾಗಿದ್ದಾಳೆ ಎಂದು ಕೆಲವರು ವಿವರಿಸುತ್ತಾರೆ. ಆದರೆ ರುದ್ರಪಟ್ಣದ ಮುಖ್ಯಸ್ಥನೊಬ್ಬ ನೆಟ್ಟ ಸಮಾಧಿಕಲ್ಲಿನ ಮೇಲಿರುವ ಕೆತ್ತನೆಯ ಪ್ರಕಾರ, ಕೇವಲ 600 ವರ್ಷಗಳ ಹಿಂದೆ ಇಲ್ಲಿ ನೆಲಸಿದ್ದ ಶೈವರ ಗುಂಪು ಈ ಹಳ್ಳಿಗೆ ‘ರುದ್ರಪಟ್ಣ’ ಎಂದು ಹೆಸರಿಡಬೇಕು ಎಂದು ಬಯಸಿತು. ಈ ಗ್ರಾಮದಲ್ಲಿದ್ದ ಪುರಾತನ ಶಿವಾಲಯಗಳು ಈ ಪ್ರಸ್ತಾವನೆಗೆ ಬಲವಾದ ಪೀಠಿಕೆಯನ್ನು ಹಾಕಿರಬೇಕು ಎನ್ನಲಾಗುತ್ತದೆ. 14-15ನೇ ಶತಮಾನಗಳಲ್ಲಿ ಸ್ಥಳೀಯ ಮುಖ್ಯಸ್ಥ ರುದ್ರಪ್ಪ ನಾಯಕ ಈ ಸ್ಥಾನವನ್ನು ಆಳುತ್ತಿದ್ದುದರಿಂದ ಈ ಹಳ್ಳಿಗೆ ‘ರುದ್ರಪಟ್ಣ’ ಎಂದು ಹೆಸರು ಬಂತು ಎಂದೂ ನಂಬಲಾಗುತ್ತದೆ. ಅವಧಾನಿಗಳು ತಮ್ಮ ಪುಸ್ತಕದಲ್ಲಿ ಈಗಲೂ ಮೈಸೂರು ವಿಶ್ವವಿದ್ಯಾಲಯದ ಕಡತಗಳಲ್ಲಿ ಈ ಕುರಿತ ವಿವರಗಳಿರುವ ದಾಖಲೆಗಳಿವೆ ಎನ್ನುತ್ತಾರೆ.

ವಾಗ್ಗೇಯಕಾರರು, ಗಾಯಕರು ಮತ್ತು ಪಿಟೀಲುಗಾರರು ತುಂಬಿರುವ ರುದ್ರಪಟ್ಣದ ಸುತ್ತಮುತ್ತಲ ಜನರಲ್ಲಿ ಕಂಡುಬರುವ ವೀಣೆ ನುಡಿಸುವ ಹುಚ್ಚಿಗೂ, ಸಮೀಪಸ್ಥ ಬೆಟ್ಟದಪುರ ಹಳ್ಳಿಯ ದೇವಸ್ಥಾನದಲ್ಲಿನ ಸಿಡಿಲು ಮಲ್ಲಿಕಾರ್ಜುನನೆಂದು ಹೆಸರಾಗಿರುವ ಈಶ್ವರ, ದೇವಿ ಸರಸ್ವತಿಯ ವೀಣಾನಾದದ ಝೇಂಕಾರ ಮತ್ತು ಅನುರಣನವನ್ನು ಕೇಳಿ ಆನಂದಿಸಿದ ಎಂಬ ಪ್ರತೀತಿಗೂ ನಂಟು ಕಲ್ಪಿಸಲಾಗುತ್ತದೆ! ರುದ್ರಪಟ್ಣದ ವೀಣಾ ಪರಂಪರೆ ನಿಜಕ್ಕೂ ತುಂಬ ಮಹತ್ವಪೂರ್ಣವಾದದ್ದು ಮತ್ತು ಪ್ರಸಿದ್ಧವಾದದ್ದು. 

ವಿಷಯಗಳನ್ನು ಬಣ್ಣಿಸುವ ಸಾಮಥ್ರ್ಯದಲ್ಲಿ ಇಲ್ಲಿನ ಹಳ್ಳಿಗರು ಸರಳರು. “ಕೇಶವನ ದೇವಸ್ಥಾನದ ಮುಂಭಾಗ ಮತ್ತು ಈಶ್ವರ ದೇವಾಲಯದ ಹಿಂಭಾಗದ ನಡುವೆ ಇರುವ ಜಾಗವೇ ರುದ್ರಪಟ್ಣ” ಎಂದು ಅವರು ಗೆಲುವಾಗಿ ವಿವರಿಸುತ್ತಾರೆ! ಇಲ್ಲಿನ ಬಹುತೇಕ ಮಂದಿರಗಳು ಹೊಯ್ಸಳ ಮತ್ತು ಚೋಳ ವಾಸ್ತುಶಿಲ್ಪವನ್ನು ಹೊಂದಿದೆ. ಅತ್ಯಂತ ಪುರಾತನವಾದ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಹೊಯ್ಸಳರ ವಾಸ್ತುಶೈಲಿ ಕಂಡುಬಂದರೆ ರುದ್ರರಾಮೇಶ್ವರ ದೇವಸ್ಥಾನದಲ್ಲಿ ಚೋಳರ ಶೈಲಿ ಎದ್ದುಕಾಣುತ್ತದೆ.

ದಶಕಗಳ ಹಿಂದೆ, ಪ್ರತಿದಿನ ಕಛೇರಿಗಳನ್ನು ಹಮ್ಮಿಕೊಳ್ಳುತ್ತಿದ್ದುದಕ್ಕಾಗಿ ರುದ್ರಪಟ್ಣ ಪ್ರಖ್ಯಾತವಾಗಿತ್ತು. ಸಂಗೀತ ರುದ್ರಪಟ್ಣದ ಗೀಳು. ಈ ಹಳ್ಳಿಯ ಮನೆಗಳ ಜಗುಲಿಗಳಲ್ಲಿ, ದೇವಾಲಯಗಳಲ್ಲಿ ಮತ್ತು ಸಾಮಾನ್ಯವಾಗಿ ಜನ ಸೇರುವೆಡೆಗಳಲ್ಲಿ ವಿವಿಧ ರೂಪಗಳಲ್ಲಿ ನಾದಲಹರಿ ಸಹಜವಾಗಿ ಪಸರಿಸುತ್ತಿತ್ತು. ಹಾಗೆಯೇ ಇಲ್ಲಿನ ಗ್ರಾಮಜೀವನದಲ್ಲಿ ವೈದಿಕ ಆಚರಣೆಗಳು, ವ್ರತಗಳು ಮತ್ತು ಅನುಷ್ಠಾನಗಳು ತುಂಬಿರುತ್ತಿದ್ದವು. 

ರುದ್ರಪಟ್ಣದಲ್ಲಿ ದೀಕ್ಷಿತರು, ಸೋಮಯಾಜಿಗಳು, ಅವಧಾನಿಗಳು, ಅಷ್ಟಾವಧಾನಿಗಳು, ಶತಾವಧಾನಿಗಳು, ಘನಪಾಠಿಗಳು, ಜಟಾಪಾಠಿಗಳು, ಶಾಸ್ತ್ರಿಗಳು ಎಂಬ ಅಭಿದಾನಗಳಿಂದ ಭೂಷಿತರಾದ ವೇದದ ವಿವಿಧ ಶಾಖೆಗಳ ತಜ್ಞರು ನೆಲಸಿದ್ದರು. ದೀಕ್ಷಿತರ ಮಂತ್ರೋಚ್ಚಾರಣೆಯ ನೈಪುಣ್ಯದಿಂದ ಮತ್ತು ಸೋಮಯಾಜಿಗಳ ಹೋಮಾನುಷ್ಠಾನದಿಂದ ವೇದ-ನಾದಗಳ ಅಪೂರ್ವ ಮಿಶ್ರಣ ಮೈದಳೆದಿತ್ತು. ಶಾಸ್ತ್ರಗಳ ಆಳಕ್ಕೆ ಮುಳುಗುತ್ತಿದ್ದವರು ಅವಧಾನಿಗಳು.

ಅಷ್ಟಾವಧಾನಿಗಳು ಮತ್ತು ಶತಾವಧಾನಿಗಳು ವಿದ್ವದ್ಗೋಷ್ಠಿಗಳಲ್ಲಿ ಪ್ರಧಾನ ಪಾತ್ರ ವಹಿಸುತ್ತಿದ್ದರು. ಸ್ವಾರಸ್ಯವೆಂದರೆ ಅಷ್ಟಾವಧಾನಿಗಳು ವಿದ್ವಾಂಸರಿಂದ ಒಮ್ಮೆಗೇ ಎಂಟು ಪ್ರಶ್ನೆಗಳನ್ನು ಸ್ವೀಕರಿಸಿ, ಒಂದು ಪ್ರಶ್ನೆಯನ್ನೂ ಮರೆಯದೆ, ಪ್ರಶ್ನೆಗಳು ಕೇಳಲ್ಪಟ್ಟ ಕ್ರಮದಲ್ಲೇ ಉತ್ತರ ನೀಡಿದರೆ, ಸೋಜಿಗವೆಂಬಂತೆ ಶತಾವಧಾನಿಗಳು ಅಂಥ ನೂರು ಪ್ರಶ್ನೆಗಳನ್ನು ಆಲಿಸಿ, ಪ್ರತಿಯೊಂದು ಪ್ರಶ್ನೆಗೂ ನಿರರ್ಗಳವಾಗಿ  ಸುದೀರ್ಘವಾದ ಉತ್ತರಗಳನ್ನು ನೀಡುತ್ತಿದ್ದರು! ಘನಪಾಠಿಗಳು ಮತ್ತು ಜಟಾಪಾಠಿಗಳು ನಾದ ಮತ್ತು ಉಚ್ಚಾರಣೆಗಳು ಸ್ಫುಟವಾಗಿ ಹೊಮ್ಮುವಂತೆ ತಮ್ಮ ಮಂತ್ರಪಠಣದ ಗಾತ್ರವನ್ನು ಹಿಗ್ಗಿಸುತ್ತಿದ್ದರು. ಜೋಯಿಸರ ಮನೆಯವರು ನಿಖರವಾಗಿ ಭವಿಷ್ಯ ಹೇಳುವ ನೈಪುಣ್ಯದಿಂದ ಜನಜೀವನಕ್ಕೆ ಮತ್ತೊಂದು ಆಯಾಮ ನೀಡುತ್ತಿದ್ದರು.

ಸರಿ, ಈಗಿನ ಸ್ಥಿತಿ? ಇವರೆಲ್ಲ ಈಗಲೂ ತಮ್ಮ ಪರಂಪರಾಗತ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೋ ಅಥವಾ ‘ಹಸಿರು ಹುಲ್ಲುಗಾವಲು’ಗಳನ್ನು ಪ್ರವೇಶಿಸಿಬಿಟ್ಟಿದ್ದಾರೋ? ‘ಈಗ ತಮ್ಮ ತಾತಮುತ್ತಾತಂದಿರ ಹೆಜ್ಜೆಗಳನ್ನು ಅನುಸರಿಸುತ್ತಿರುವವರು ಬೆರಳೆಣಿಕೆಯಷ್ಟು ಜನ ಮಾತ್ರ; ಅವರ ಕೌಶಲ್ಯ ಮತ್ತು ಪಾತ್ರಗಳು ಬರಬರುತ್ತ ನಮ್ಮ ಶ್ರೀಮಂತ ಇತಿಹಾಸದ ಭಾಗವಾಗಿಬಿಡುತ್ತಿವೆ’ ಎನ್ನುವುದು ಸಂಕೇತಿಗಳ ನಂಬಿಕೆ. ಹಿಂದೆ ರುದ್ರಪಟ್ಣದ ಸಂಗೀತಗಾರರು ಹಾಗೂ ವೇದವಿದ್ವಾಂಸರು ತಮ್ಮ ಜೀವನೋಪಾಯಕ್ಕಾಗಿ ಕೃಷಿಭೂಮಿಯ ಉತ್ಪನ್ನಗಳನ್ನು ಅವಲಂಬಿಸಿ ಸಂತೋಷದಿಂದ ತಮ್ಮ ಕಲೆಗಳನ್ನು ಅಭ್ಯಾಸ ಮಾಡುತ್ತಿದ್ದರು. ಇವರಲ್ಲಿ ಹಲವರಿಗೆ ಮೈಸೂರು ರಾಜಮನೆತನದ ಆಶ್ರಯವೂ ದೊರೆತಿದ್ದು, ಇವರು  ಆಸ್ಥಾನ ವಿದ್ವಾಂಸರಾಗಿದ್ದರು ಮತ್ತು ಅರಮನೆಯ ವೇದಪಂಡಿತರಾಗಿದ್ದರು.

ಸಂಗೀತ, ಮಂತ್ರಗಳ ಮನೋಹರ ಜಗತ್ತು ಮತ್ತು ನಿಸರ್ಗ ಸೌಂದರ್ಯದೊಂದಿಗೆ ರುದ್ರಪಟ್ಣದ ಅಭಿಮಾನಕ್ಕಿರುವ ಮತ್ತೊಂದು ಕೋಡು ಎಂದರೆ, ಸಂಕೇತಿ ಇತಿಹಾಸದಲ್ಲಿ ದಾಖಲಿಸಿರುವಂತೆ ಯಶಸ್ಸಿನ ಉತ್ತುಂಗಕ್ಕೇರಿದ ಇಲ್ಲಿನ ಬಹುತೇಕ ನಿವಾಸಿಗಳು. ಲಲಿತಕಲೆಗಳ ಅಂತರ್-ಸಾಂಸ್ಕøತಿಕ ವಿನಿಮಯವಾಗಲಿ, ವಿಜ್ಞಾನ ಮತ್ತು ಎಂಜಿನಿಯರಿಂಗ್‍ನಲ್ಲಿನ ವಿಕ್ರಮಗಳಾಗಲಿ, ಕಾನೂನು, ಸಿನೆಮಾ, ಶಿಕ್ಷಣ ಮತ್ತು ವೇದವಿದ್ಯೆಗಳಾಗಲಿ, ಸಂಗೀತದ ಮೂಲಕ ಸಮಾಜದ ಉತ್ಥಾನವಾಗಲಿ, ಈ ಎಲ್ಲ ಕ್ಷೇತ್ರಗಳಲ್ಲೂ ಪ್ರತಿಭಾನ್ವಿತರಿಂದ ಕೂಡಿರುವ ರುದ್ರಪಟ್ಣ ಒಂದು ಮಾದರಿ ಹಳ್ಳಿ. ಸಂಕೇತಿ ಸಮುದಾಯದ ಕುರಿತು ಪರಿಶ್ರಮಿಸಿರುವ ಹಲವು ಲೇಖಕರ ನಿರೀಕ್ಷಣೆಯಂತೆ ಈ ಅಪರೂಪದ ಜನವರ್ಗ ಮೈಸೂರಿನ ಅರಸರ ಕೃಪಾಕಟಾಕ್ಷವನ್ನು ಎಂದೂ ಬಯಸಲಿಲ್ಲ.

ಸ್ಥಳೀಯರ ಅಭಿಮತದಂತೆ ಭೂಮಿಕಾಣಿಯನ್ನು ಪಡೆಯುವುದು ಎಂದಿಗೂ ಸಂಕೇತಿಗಳ ಆದ್ಯತೆಯಾಗಿರಲಿಲ್ಲ. ಆದರೆ ತಮ್ಮ ಸಮುದಾಯಕ್ಕೆ ಸಹಜವಾದ ಚಾತುರ್ಯದಿಂದ ಅವರು, ಪ್ರತಿ ದೊನ್ನೆ ಕಟ್ಟಿನಲ್ಲಿ ನೂರಕ್ಕೆ ಬದಲು ಕೇವಲ ತೊಂಬತ್ತು ದೊನ್ನೆಗಳಿರುವಂತೆ ಮೈಸೂರಿನ ಮಹಾರಾಜ ಕೃಷ್ಣರಾಜ ಒಡೆಯರ್ ರವರ ಮನವೊಲಿಸುವಲ್ಲಿ ಸಫಲರಾದರು. ಪ್ರತಿ ಕಟ್ಟಿನಲ್ಲೂ ಹತ್ತು ದೊನ್ನೆಗಳು ಉಳಿದಿದ್ದರಿಂದ ಸಂಕೇತಿಗಳಿಗೆ ಲಾಭವಾಯಿತು.

ರುದ್ರಪಟ್ಣಕ್ಕೆ ಗೌರವ ತಂದುಕೊಟ್ಟಿರುವ ವ್ಯಕ್ತಿಗಳ ಅನಂತ ಯಾದಿಯಲ್ಲಿ ಕೆಂಗಲ್ ಹನುಮಂತರಾಯರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಕರ್ನಾಟಕದ ಮುಖ್ಯ ನ್ಯಾಯಾಧೀಶರಾಗಿದ್ದ ಕೆ.ವೆಂಕಟರಾಮಯ್ಯನವರು ಮತ್ತು ಅವರ ಪುತ್ರ ವಿ.ರಾಮನಾಥ್ ಅವರೂ ಸೇರಿದ್ದಾರೆ. ಅಮೇರಿಕಾದ ಎಂ.ಐ.ಟಿಯಲ್ಲಿ ಪ್ರೊಫೆಸರ್ ಆಗಿದ್ದ ರಾಮನಾಥ್ ಅವರು, 50 ವರ್ಷಗಳ ಹಿಂದೆ ಮಾನವನನ್ನು ಚಂದ್ರಗ್ರಹಕ್ಕೆ ಕಳುಹಿಸಿದ ಅಪೋಲೋ ಮಿಷನ್‍ನ ಅಂಗವಾಗಿ ನಾಸಾದ ರಾಕೆಟ್ ಉಡಾವಣೆಗಾಗಿ ಸೌರವ್ಯವಸ್ಥೆಗಳನ್ನು ಅನುಸ್ಥಾಪಿಸಲು ಪರಿಶ್ರಮಿಸಿದವರಲ್ಲಿ ಪ್ರಮುಖರಾಗಿದ್ದರು.

ಒಂದು ಕಾಲದಲ್ಲಿ ಬ್ರಾಹ್ಮಣರ ಅಗ್ರಹಾರವಾಗಿದ್ದ ರುದ್ರಪಟ್ಣದ ನಾಲ್ಕು ಬೀದಿಗಳಲ್ಲಿ ಸಂಗೀತಗಾರರು, ಸಂಗೀತಜ್ಞರು, ಸಂಸ್ಕøತ ವಿದ್ವಾಂಸರು, ನಾಟಕದ ಕಲಾವಿದರು, ಗಮಕ ಕಲಾವಿದರು, ಕೃಷಿಕರು, ವೇದ ಪಂಡಿತರು, ಎಂಜಿನಿಯರುಗಳು, ವಕೀಲರು ಮತ್ತು ವಿಜ್ಞಾನಿಗಳು ನೆಲಸಿದ್ದ ತೊಟ್ಟಿಮನೆಗಳಿದ್ದವು. ಈಗ ಬೆರಳೆಣಿಕೆಯಷ್ಟು ಜನ ಮಾತ್ರ ತಮ್ಮ ಪೂರ್ವಿಕರ ಮನೆಗಳನ್ನು ಉಳಿಸಿಕೊಂಡಿದ್ದಾರೆ. ಇವರಿಗೆ ಕೃಷಿಯೇ ಮುಖ್ಯ ಜೀವನಾಧಾರವಾಗಿದೆ.

ಸಂಕೇತಿಗಳು ‘ದಶವೃತ್ತಿ-ಊಂಛವೃತ್ತಿಗಳನ್ನು’ ಅವಲಂಬಿಸಿದ್ದ (‘ದಶವೃತ್ತಿ-ಊಂಛವೃತ್ತಿ’ ಎಂದರೆ ಒಂದು ಬಗೆಯ ಗೋಷ್ಠಿಗಾಯನ. ಹೀಗೆ ಹಾಡುತ್ತ ಗುಂಪಾಗಿ ಬರುತ್ತಿದ್ದವರಿಗೆ ಗ್ರಾಮದವರು ಆಹಾರ ನೀಡುತ್ತಿದ್ದರು) ಆ ದಿನಗಳಲ್ಲಿ ರುದ್ರಪಟ್ಣದ ನಿವಾಸಿಗಳಾಗಿದ್ದ ನಾರಾಯಣದಾಸ ಮತ್ತು ಕೇಶವದಾಸರು ದೀರ್ಘ ಪಥಗಳನ್ನು ಕಾಲ್ನಡಿಗೆಯಲ್ಲಿ ಕ್ರಮಿಸುತ್ತ ಹತ್ತಿರದ ಹಳ್ಳಿಗಳಲ್ಲಿನ ಗ್ರಾಮಸ್ಥರಿಗಾಗಿ ದೇವರನಾಮಗಳನ್ನು ಹಾಡುತ್ತಿದ್ದರು. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದವರನ್ನು ನಮ್ಮ ಸಂತರು ಪ್ರಸಾರ ಮಾಡಿದ ಉನ್ನತ ಚಿಂತನೆಗಳ ಸನಿಹಕ್ಕೆ ಕರೆತರುವ ಉದ್ದೇಶದಿಂದ ಈ ಇಬ್ಬರು ದಾಸರು ಅವರ ಬಳಿಯೂ ಹಾಡುತ್ತಿದ್ದರು.

ಇಲ್ಲಿನ ಬಹುತೇಕ ಮನೆಗಳು’ತೊಟ್ಟಿಮನೆಗಳು’

‘ಉಂಗ್ಡೆ ಜರ್ನಲಿಸ್ಟು ನಂಬ್ಡೆವಾಳೆ ಇರಣು ಅಂಡುಟ್ಟಿ ಬಲಮಾನ ಸಂಶಯು ರಾಂದಿ’ (ನಿಮ್ಮ ಜರ್ನಲಿಸ್ಟು ನಮ್ಮವರೇ ಆಗಿರಬೇಕು ಅಂತ ನನಗೆ ಬಲವಾದ ಅನುಮಾನ)- ಇವು ರುದ್ರಪಟ್ಣದಲ್ಲಿ ಒಂಬತ್ತು ಜನ ಗ್ರಾಮವಾಸಿಗಳಿಗೆ ಮನೆಯಾಗಿದ್ದ ತೊಟ್ಟಿಬಂಗಲೆಯೊಂದರಲ್ಲಿ ಹಳ್ಳಿಯ ಲೋಕಾಭಿರಾಮವಾದ ಮಾತುಕತೆಗಳಲ್ಲಿ ನಾವು ಮುಳುಗಿದೊಡನೆ, ನನ್ನ ಮಾರ್ಗದರ್ಶಕರ ಬಳಿ ಒಬ್ಬ ಸಂಕೇತಿ ಸ್ತ್ರೀ ಆಡಿದ ಸ್ವಾಗತೋಕ್ತಿಗಳು.  

ನಮ್ಮ ಮಾತುಕತೆ ಸಂಕೇತಿ ಬ್ರಾಹ್ಮಣರು ವಾಸವಾಗಿದ್ದ ನಾಲ್ಕು ಮುಖ್ಯ ರಸ್ತೆಗಳ, ಅಲ್ಲಿನ ಅನನುಕರಣೀಯ ಗೃಹವಿನ್ಯಾಸಗಳ ಮತ್ತು ಸಂಕೇತಿಗಳ ಅದ್ಭುತ ಕೊಡುಗೆಗಳ ಕುರಿತು ತಿರುಗಿತು.

ಮಧ್ಯದಲ್ಲಿ ಆಗಸಕ್ಕೆ ತೆರೆದುಕೊಂಡಿರುವ, ಹಲವು ಕಂಬಗಳಿಂದ ಆಧಾರ ಪಡೆದು ಅಲಂಕೃತಗೊಂಡ ಒಳಾಂಗಣಗಳುಳ್ಳ ಈ ತೊಟ್ಟಿಮನೆಗಳು, ನೂರಾರು ವರ್ಷಗಳ ಹಿಂದೆ ಮುಂದುವರಿದ ಎಂಜಿನಿಯರಿಂಗ್ ಕೌಶಲ್ಯಗಳಲ್ಲಿ ಈ ಸಮುದಾಯದವರಿಗಿದ್ದ ಸಾಮಥ್ರ್ಯವನ್ನು ಪ್ರತಿಬಿಂಬಿಸುತ್ತವೆ.

ಎರಡು ಸಮಾನಾಂತರ ಗೋಡೆಗಳ ನಡುವೆ ಮರಳು ತುಂಬಿದ್ದ ವೇದ ವಿದ್ವಾಂಸರಾದ ದೊಡ್ಡಮನೆ ವೆಂಕಟರಾಮಾ ಶಾಸ್ತ್ರಿಗಳ ಮನೆ ಬಹಳ ಪ್ರಸಿದ್ಧವಾಗಿತ್ತು. ಇದು ‘ಪಂಜು ಕಳ್ಳರು’ ಎಂದು ಕರೆಯಲ್ಪಡುತ್ತಿದ್ದ ಕೊಡಗಿನ ಗುಡ್ಡಗಾಡು ಪ್ರದೇಶದ ದರೋಡೆಕೋರರಿಗೆ ಒಡ್ಡಿದ ವಿನೂತನ ಮಾದರಿಯ ಬೋನಾಗಿತ್ತು. ಗೋಡೆಯೊಡೆಯಲು ಯತ್ನಿಸಿದಾಗ ಹೊರ ಸುರಿಯುತ್ತಿದ್ದ ಮರಳಿನ ರಾಶಿಯಿಂದ ಕಳ್ಳರು ಮೋಸ ಹೋಗುತ್ತಿದ್ದರು. ಪ್ರತಿ ಗೋಡೆಯೂ ಸುಮಾರು ಎರಡರಿಂದ ಮೂರಡಿ ದಪ್ಪವಾಗಿದ್ದು, ಆನೆಗಳ ಕಾಲುಗಳಿಂದ ತುಳಿಸಿ ನಾದಿಸಲ್ಪಟ್ಟ ಮಣ್ಣಿನಿಂದ ನಿರ್ಮಿಸಲ್ಪಡುತ್ತಿತ್ತು. ಈ ಗೋಡೆಗಳು ತುಂಬ ಬಲವಾಗಿರುತ್ತಿದ್ದು, ಹಲವು ಶತಮಾನಗಳವರೆಗೆ ಸುಸ್ಥಿತಿಯಲ್ಲಿರುತ್ತಿದ್ದವು!

ವೀಣಾ ವೆಂಕಟರಾಮಯ್ಯನವರ ದೊಡ್ಡ ತೊಟ್ಟಿಮನೆ ಅವರ ಪೂರ್ವಿಕರು ಸುಮಾರು ಐನೂರು ವರ್ಷಗಳ ಹಿಂದೆ ಅಳವಡಿಸಿಕೊಂಡಿದ್ದ ಚತುರ ಕಟ್ಟಡ ನಿರ್ಮಿತಿಯ ಗುಣಮಟ್ಟಕ್ಕೆ ಇಂದಿಗೂ ಸಾಕ್ಷಿಯಾಗಿದೆ. ಕರ್ನಾಟಕ ಸಂಗೀತದ ಇತಿಹಾಸದಲ್ಲಿ ಇವರ ಝಂಪೆತಾಳದ ಕೇದಾರಗೌಳ ವರ್ಣದಂತೆಯೇ ಇವರ ಸ್ವಂತ ತೋಟದ ಹಲಸಿನ ಮರದಿಂದ ನಿರ್ಮಿತವಾದ ನಾಲ್ಕುನೂರು ವರ್ಷಗಳಷ್ಟು ಹಳೆಯ ವೀಣೆಯೂ ದಾಖಲಾಗಿದೆ. ಈಗಲೂ ಈ ವೀಣೆ ವೆಂಕಟರಾಮಯ್ಯನವರ ಮರಿಮೊಮ್ಮಗ ಆರ್.ವಿ.ರವಿಚಂದ್ರನ್ ರವರ ಬಳಿ ಪ್ರದರ್ಶನಕ್ಕಾಗಿ ಇರಿಸಲ್ಪಟ್ಟಿದೆ.

ಸ್ವಾರಸ್ಯವೆಂದರೆ, ದೃಢಕಾಯರಾದ ಮತ್ತು ಗಟ್ಟಿಯಾಗಿ ಹಾಡಬಲ್ಲ ದನಿಶಕ್ತಿಯುಳ್ಳ ಗಾಯಕರು ಈ ದೊಡ್ಡ ತೊಟ್ಟಿಮನೆಯಲ್ಲಿ ಕಛೇರಿ ನೀಡುತ್ತಿದ್ದಾಗ, ನಾದದ ಅಲೆಗಳು ಮೃದುವಾಗಿ ರಾತ್ರಿಯ ಮೌನವನ್ನು ಸೀಳಿಕೊಂಡು ಕಾವೇರಿಯ ಆಚೆ ದಡದಲ್ಲಿ ಹತ್ತು ಮೈಲಿ ದೂರದಲ್ಲಿರುವ ಬಸವಾಪಟ್ಣದಲ್ಲಿರುವವರ ಕಿವಿಗಳನ್ನು ತಲುಪುತ್ತಿದ್ದವು. ನಾದದ ಮೋಡಿಗೆ ಮರುಳಾದ ಅವರು ಸನಿಹದಿಂದ ಶ್ರವಣಸುಖವನ್ನು ಪಡೆಯಲು ಆತುರಾತುರವಾಗಿ ನದಿಯನ್ನು ದಾಟಿ ಧಾವಿಸಿಬರುತ್ತಿದ್ದರು. ಬಸವಾಪಟ್ಣದ ವೇದವಿದ್ವಾಂಸರಾದ ವೆಂಕಟರಾಮಯ್ಯ ಶಾಸ್ತ್ರಿಯವರು ಇಂಥ ಅನೇಕ ಘಟನೆಗಳನ್ನು ಜ್ಞಾಪಿಸಿಕೊಳ್ಳುತ್ತಾರೆ.

ಗಾಯಕ ರಾಮಸ್ವಾಮಯ್ಯನವರ ಅಥವಾ ತೊಟ್ಟಿ ತಮ್ಮಪ್ಪನವರ ಹದಿನೈದು ಕುಟುಂಬಗಳಿಗೆ ಆಶ್ರಯ ನೀಡಿದ್ದ ಮನೆ ತನ್ನೊಳಗಿರುವ ಅನೇಕ ಕಂಬಗಳಿಂದ ಮತ್ತು ವಿಶಾಲವಾದ ತೆರಪಿನ ಜಾಗಗಳಿಂದ ಆಕರ್ಷಣೆಯ ಕೇಂದ್ರವಾಗಿದೆ. ತಮ್ಮಪ್ಪನವರು ಬಿಡಾರಾಂ ಕೃಷ್ಣಪ್ಪನವರನ್ನು ಕರೂರಿನ ರಾಮಸ್ವಾಮಿಗಳ ಬಳಿ ಹೆಚ್ಚಿನ ಶಿಕ್ಷಣಕ್ಕಾಗಿ ಕರೆದೊಯ್ದರೆಂದೂ ಚರಿತ್ರೆ ಹೇಳುತ್ತದೆ. ಮುಂದೆ ಈ ನೂರು ಕಂಬಗಳ ಮನೆಯಲ್ಲಿ ‘ರುದ್ರಪಟ್ಣ ಸಂಗೀತೋತ್ಸವ’ವನ್ನು ನಡೆಸಲು ಅಗತ್ಯವಾದ ಹಣವನ್ನು ಸಂಗ್ರಹಿಸಲು ಕಛೇರಿ ಕೊಡುವಂತೆ ಕೋರಿ ತಮ್ಮಲ್ಲಿಗೆ ಬರುತ್ತಿದ್ದ ಅಸಂಖ್ಯ ಮನವಿಗಳನ್ನು ತಮ್ಮಪ್ಪನವರು ಮನ್ನಿಸಿದರು. ಇಂದಿಗೂ ಅತ್ಯಂತ ದೃಢವಾಗಿ ಕಾಣುವ ಈ ಮನೆ, ಇಲ್ಲಿನ ಕೃಷಿ ಮತ್ತು ನಾದದ ವಿಶಿಷ್ಟ ಮೇಳನವನ್ನು ಎತ್ತಿಹಿಡಿದು ರುದ್ರಪಟ್ಣವನ್ನು ‘ಕರ್ನಾಟಕದ ತಿರುವಯ್ಯಾರು’ ಎಂಬ ಬಿರುದಿಗೆ ಪಾತ್ರವನ್ನಾಗಿ ಮಾಡಿದ ಸಂಕೇತಿಗಳ ಆಚಾರವಿಚಾರಗಳಿಗೆ ಹಾಗೂ ಜೀವನಶೈಲಿಗೆ ಕನ್ನಡಿ ಹಿಡಿಯುತ್ತದೆ.

‘ರುದ್ರಪಟ್ಣ ನಿತ್ಯ ವೈಕುಂಠವೇ ಆಗಿತ್ತು, ನಿತ್ಯ ಕೈಲಾಸವೇ ಆಗಿತ್ತು’ ಎನ್ನುತ್ತಾರೆ ಭಾಸ್ಕರ ಅವಧಾನಿಗಳು. ಮೈಸೂರು ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಸಂಕೇತಿಗಳ ಕುರಿತ ಬರಹಗಳಲ್ಲಿ, ವೀಣೆ ಶೇಷಣ್ಣನವರು ಮತ್ತು ಮೈಸೂರು ವಾಸುದೇವಾಚಾರ್ಯರು ರುದ್ರಪಟ್ಣಕ್ಕೆ ನೀಡಿದ ಭೇಟಿ ಮತ್ತು ಇಲ್ಲಿನ ವೇದ ಹಾಗೂ ಸಂಗೀತ ವಿದ್ವಾಂಸರ ಗೋಷ್ಠಿಗಳನ್ನು ಕಂಡು ವಿಸ್ಮಿತರಾದುದರ ಬಗ್ಗೆ ಉಲ್ಲೇಖವಿದೆ. ಒಂದು ದಶಕದ ಹಿಂದೆ ‘ರುದ್ರಪಟ್ಣದ ಸಂಗೀತೋತ್ಸವ ಸಮಿತಿ’ಯ ಉದ್ಘಾಟನೆಗಾಗಿ ಇಲ್ಲಿಗೆ ಆಗಮಿಸಿದ ಗಮಕಗಾಯಕರೂ ಶಿಕ್ಷಣವೇತ್ತರೂ ಆದ ಮತ್ತೂರು ಕೃಷ್ಣಮೂರ್ತಿಯವರು ಇಲ್ಲಿನ ಮೃತ್ತಿಕೆಯನ್ನು ತಮ್ಮ ಶಿರಸ್ಸಿನ ಮೇಲೆ ಪ್ರೋಕ್ಷಿಸಿಕೊಂಡದ್ದರಲ್ಲಿ ಅಚ್ಚರಿಯೇನಿಲ್ಲ. “ರುದ್ರಪಟ್ಣ ‘ಸಂಗೀತ ವಿಶ್ವವಿದ್ಯಾಲಯ’ವಿದ್ದಂತೆ; ಜನ ಇಲ್ಲಿಂದ ಶಿಕ್ಷಣ ಪಡೆದುಕೊಂಡು ಹೋಗುತ್ತಾರೆ” ಎಂದಿದ್ದರು ಅವರು.

ಜರ್ಮನಿಯ ಕುಲಪತಿಗಳೊಬ್ಬರು ಅಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಭಾಗವಹಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು “ನೀವು ಶ್ಯಾಮಾಶಾಸ್ತ್ರಿಗಳ ದೇಶದವರೆ?” ಎಂದು ಕೇಳಿದರು. ರುದ್ರಪಟ್ಣದವರೂ ಶಿಕ್ಷಣತಜ್ಞರೂ ಆಗಿದ್ದ ಶ್ಯಾಮಾಶಾಸ್ತ್ರಿಗಳು, ಈ ವೇಳೆಗಾಗಲೇ ಮೌರ್ಯರ ಕಾಲದಲ್ಲಿ ರಚಿತವಾಗಿದ್ದ ಕೌಟಿಲ್ಯನ ಅರ್ಥಶಾಸ್ತ್ರದ ಸಂಸ್ಕೃತ ಮೂಲಗ್ರಂಥವನ್ನು ಇಂಗ್ಲಿಷಿಗೆ ತರ್ಜುಮೆ ಮಾಡಿ, ಅಲ್ಲಿನ ವಿದೇಶೀ ವಿಶ್ವವಿದ್ಯಾಲಯದ ಪ್ರಶಂಸೆಗೆ ಭಾಜನರಾಗಿದ್ದರು. ರಾಜ್ಯಾಡಳಿತದ ಕುರಿತ ಸಿದ್ಧಾಂತಗಳು ಮತ್ತು ಆದರ್ಶಗಳ ಕುರಿತು ಈ ಗ್ರಂಥ ಚರ್ಚಿಸುತ್ತದೆ. ಈ ಅಂತರರಾಷ್ಟ್ರೀಯ ಸಮ್ಮೇಳನದ ಸಂದರ್ಭದಲ್ಲಿ ಒಡೆಯರ್ ರವರು ಶ್ಯಾಮಾಶಸ್ತ್ರಿಗಳಿಗೆ “ನಾನು ಮೈಸೂರಿನ ದೊರೆಯಾಗಿರಬಹುದು. ಆದರೆ ಇಲ್ಲಿ ನೀವೇ ರಾಜರು” ಎಂದು ಹೇಳಿದ್ದರು.

ನಂತರ ಒಡೆಯರ್ ಅವರು ಶ್ಯಾಮಾಶಾಸ್ತ್ರಿಗಳನ್ನು ಮೈಸೂರು ವಿಶ್ವವಿದ್ಯಾಲಯದ ಪ್ರಾಚಾರ್ಯರನ್ನಾಗಿ ನೇಮಿಸಿದರು.

ಡಾ.ಆರ್.ಶ್ಯಾಮಾಶಾಸ್ತ್ರಿಗಳು (1868-1944) ಮೈಸೂರಿನ ಓರಿಯೆಂಟಲ್ ಗ್ರಂಥಾಲಯದ ಮುಖ್ಯಗ್ರಂಥಪಾಲಕರಾಗಿಯೂ ಸೇವೆ ಸಲ್ಲಿಸಿದ್ದರು. ಸುಮಾರು 400 ಪುರಾತನ ಶಾಸನಗಳ ಗೂಡಾರ್ಥವನ್ನು ಅವರು ಕಂಡುಹಿಡಿದಿದ್ದರು ಮತ್ತು ನೂರಾರು ಗ್ರಂಥಗಳನ್ನು ರಚಿಸಿದ್ದರು. ಅವರಿಗೆ 1919ನೇ ಸಾಲಿನಲ್ಲಿ ವಾಷಿಂಗ್ಟನ್‍ನ ಓರಿಯೆಂಟಲ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟೊರೇಟ್ ಪದವಿ ಮತ್ತು 1921ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟೊರೇಟ್ ಪದವಿ ಲಭಿಸಿತು.

ಸಾಧನೆಗಳ ಸರಮಾಲೆ ಮತ್ತು ಅಸಮಾನ ಯಶಸ್ಸಿನಿಂದ ಕೂಡಿದ ರುದ್ರಪಟ್ಣ ತನ್ನ ವೈಭವದ ಉತ್ತುಂಗದಲ್ಲಿ ಹೀಗಿತ್ತು.

ಅಷ್ಟ-ಗ್ರಹ ಕೂಟ

ಎಂಟು ಗ್ರಹಗಳ ಅಪರೂಪದ ಮಿಲನವಾದ ‘ಅಷ್ಟಗ್ರಹ ಕೂಟ’ ಜರುಗಿದ್ದು 1962ರಲ್ಲಿ. ಅನೇಕ ಸಂಶೋಧನೆಗಳು ಮತ್ತು ಅಧ್ಯಯನದ ಬಳಿಕ ಭವಿಷ್ಯದಲ್ಲಿ ಈ ಅಷ್ಟಗ್ರಹ ಕೂಟ ಘಟಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಇದು ಆಗಸದಲ್ಲಿ ನಡೆಯುವ ಅಪಾಯಕಾರೀ ಗ್ರಹಗಳ ಸಂಗಮವೆಂದೂ ಇದರಿಂದ ಎಲ್ಲ ಸೌಭಾಗ್ಯಗಳೂ ದೂರವಾಗಿ ಸರ್ವನಾಶ ಉಂಟಾಗುತ್ತದೆ ಎಂದೂ ಭವಿಷ್ಯವಾಣಿ ನುಡಿಯಲಾಗಿತ್ತು. ಖಗೋಳಶಾಸ್ತ್ರಜ್ಞರು ಮತ್ತು ಜ್ಯೋತಿಷಿಗಳು ಈ ಅಷ್ಟಗ್ರಹಕೂಟದಿಂದ ಗ್ರಾಮದ ಜನ ರೋಗರುಜಿನಗಳಿಗೆ ಮತ್ತು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎಂಬ ನಿರಾಶಾಜನಕ ಮುನ್ಸೂಚನೆ ನೀಡಿದ್ದರು. ನೂರಾರು ವೇದವಿದ್ವಾಂಸರ ನೆಲೆಬೀಡಾಗಿದ್ದ ರುದ್ರಪಟ್ಣದ ಜನ ಎಚ್ಚೆತ್ತು, ಈ ಭವಿಷ್ಯವಾಣಿಯನ್ನು ಗಂಭೀರವಾಗಿ ಪರಿಗಣಿಸಲೇಬೇಕಾಗಿತ್ತು.

 ಈ ಬೃಹತ್ ವಿನಾಶದ ಮುನ್ಸೂಚನೆಗೆ ಸೂಕ್ತವಾಗಿ ಸ್ಪಂದಿಸಲು ಅತ್ಯುತ್ತಮ ಉಪಾಯ ಯಾವುದು? ಅದೂ ಅಲ್ಲದೆ, ಕೇವಲ ಮೂರು ದಶಕಗಳ ಹಿಂದೆ ದೇಶದ ಇತರ ಭಾಗಗಳಂತೆ ಈ ಚಾರಿತ್ರಿಕ ಗ್ರಾಮದಲ್ಲಿ ನಡೆದ ಪ್ಲೇಗ್ ರೋಗದ ಆಕ್ರಮಣ ಇಲ್ಲಿನ ಬಹುಜನರ ಜೀವವನ್ನು ನಂದಿಸಿಬಿಟ್ಟಿತ್ತು. ಪಿಟೀಲು ವಿದ್ವಾಂಸರಾಗಿದ್ದ ವೆಂಕಟರಾಮಾ ಶಾಸ್ತ್ರಿಗಳು (ಆರ್.ಕೆ.ಶ್ರೀಕಂಠನ್ ರವರ ಹಿರಿಯ ಸೋದರ ಮತ್ತು ಸಂಸ್ಕøತ ವಿದ್ವಾಂಸ ಕೃಷ್ಣಶಾಸ್ತ್ರಿಗಳ ಹಿರಿಯ ಪುತ್ರ) ಅಷ್ಟಗ್ರಹ ಕೂಟದ ಸವಾಲನ್ನು ಎದುರಿಸಲು ಸಿದ್ಧರಾದರು ಮತ್ತು ಈ ವೇದ-ನಾದಗಳ ಗ್ರಾಮಕ್ಕೆ ಪವಿತ್ರ ರಕ್ಷಾಕವಚವನ್ನು ಒದಗಿಸುವ ಕರ್ತವ್ಯವನ್ನು ತಮ್ಮ ಮೇಲೆ ತೆಗೆದುಕೊಂಡರು. ಬಂದೆರಗಲಿರುವ ವಿಪತ್ತಿನಿಂದ ಗ್ರಾಮವನ್ನು ಮತ್ತು ಗ್ರಾಮಸ್ಥರನ್ನು ದೂರವಿಡಲು ಧಾರ್ಮಿಕ ವಿಧಿಗಳೇ ಅತ್ಯುತ್ತಮ ಸಾಧನ ಎನಿಸಿತು ಅವರಿಗೆ. 

1961ನೇ ಸಾಲಿನ ಡಿಸೆಂಬರ್ ಮಾಸದಲ್ಲಿ, ಇಡೀ ದೇಶ ಅಷ್ಟಗ್ರಹ ಕೂಟದ ಈ ಭೀಕರ ಭವಿಷ್ಯವಾಣಿಯಿಂದ ತಲ್ಲಣಗೊಂಡಿತು. ಈ ಆತಂಕ ಮತ್ತು ಭೀತಿಗಳನ್ನು ಶಾಂತಗೊಳಿಸಲು ಶೃಂಗೇರಿಯ ಜಗದ್ಗುರುಗಳಾದ ಅಭಿನವ ವಿದ್ಯಾತೀರ್ಥ ಸ್ವಾಮೀಜಿಯವರ ಆಧ್ಯಾತ್ಮಿಕ ನೇತೃತ್ವ ಮತ್ತು ಸಲಹೆಗಳನ್ನು ಕೋರಲಾಗಿ, ಅವರು ಈ ಪರಿಸ್ಥಿತಿಯಿಂದ ಹೊರಬರುವ ಉಪಾಯವೊಂದನ್ನು ಸೂಚಿಸಿದರು. ಇದರಂತೆ ಹದಿನೈದು ದಿನಗಳ ಕಾಲ ಹಗಲು-ರಾತ್ರಿ ಅಖಂಡ ‘ಅತಿರುದ್ರ ಮಹಾಯಾಗ’ವನ್ನು ಕಾವೇರೀ ತೀರದಲ್ಲಿ ಮೈಸೂರು ಮಹಾರಾಜ ಜಯಚಾಮರಾಜ ಒಡೆಯರ್ ರವರ ಸಾನ್ನಿಧ್ಯದಲ್ಲಿ, ಈಶ್ವರನ ಪ್ರೀತ್ಯರ್ಥವಾಗಿ ನೂರಾರು ಹೋಮಕುಂಡಗಳಲ್ಲಿ ಅಗ್ನಿಯನ್ನು ಪ್ರಜ್ವಲಿಸುವ ಮೂಲಕ ನೆರವೇರಿಸಲಾಯಿತು.

ದಕ್ಷಿಣ ಭಾರತದ ವಿವಿಧ ಭಾಗಗಳಿಂದ ಮತ್ತು ಕಾಶಿಯಿಂದ ಸುಮಾರು ಒಂದು ಸಹಸ್ರ ವೇದವಿದ್ವಾಂಸರು ಮತ್ತು ದೇಶದ ಮೂಲೆಮೂಲೆಗಳಿಂದ ಲಕ್ಷಾಂತರ ಜನ ಈ ಗ್ರಾಮಕ್ಕೆ ಆಗಮಿಸಿ ಯಾಗವನ್ನು ವೀಕ್ಷಿಸಿದರು. ಇಂಥ ಬೃಹತ್ ಪ್ರಮಾಣದ ಯಾಗ ಈ ಸ್ಥಳದ ಇತಿಹಾಸದಲ್ಲಿ ಹಿಂದೆಂದೂ ನಡೆದಿರಲಿಲ್ಲ ಎನ್ನುತ್ತಾರೆ ರುದ್ರಪಟ್ಣದ ಜನ. 1962ರ ಫೆಬ್ರವರಿ ತಿಂಗಳಿನಲ್ಲಿ ಅಷ್ಟಗ್ರಹ ಕೂಟದ ಸಂದರ್ಭದಲ್ಲಿ ಹಲವು ತಿಂಗಳುಗಳ ಕಾಲ ತೇರಾಕೋಟಿ ಹೋಮವನ್ನೂ ನೆರವೇರಿಸಲಾಯಿತು. ಈ ಪವಿತ್ರ ಕಾರ್ಯಕ್ರಮದ ಮೂಲಕ ವೆಂಟರಾಮಾ ಶಾಸ್ತ್ರಿಗಳು ಮತ್ತು ಅವರ ಭಾವಮೈದ ಕಾಶಿ ಸುಬ್ರಹ್ಮಣ್ಯ ಶಾಸ್ತ್ರಿಗಳು ಗ್ರಾಮದಲ್ಲಿ ಶಾಶ್ವತವಾದ ಶಾಂತಿಯನ್ನು ಸಂಸ್ಥಾಪಿಸುವಲ್ಲಿ ಯಶಸ್ವಿಗಳಾದರು. ಅಜ್ಞಾತ ಭಯದ ಮುಷ್ಟಿಯಲ್ಲಿ ಸಿಲುಕಿದ್ದ ಗ್ರಾಮಸ್ಥರು ಜಾತಿ, ಕುಲ, ಮತಗಳ ಭೇದಗಳನ್ನು ತೊರೆದು ಒಂದಾದರು.

Pictures of Rudrapatnam Village 
by Rudrapatnam S. Ramakanth

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

March 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: