ಜಯರಾಮಚಾರಿ ಕಥೆ ಚಂದ್ರನಿಗೆ ಸ್ವಂತ ಬೆಳಕಿಲ್ಲ…

ಜಯರಾಮಚಾರಿ

ಭಾಗ- 1
ನಿಮಗೊಂದು ನವಿರು ನವಿರಾದ ಪ್ರೇಮ ಕತೆ ಹೇಳಬೇಕು..

ಅವನು ಪ್ರೀತಮ್, ಒಂದು ಆರು ಅಡಿ ಎತ್ತರ, ಸ್ವಲ್ಪವಷ್ಟೆ ಬೊಜ್ಜು ಬಂದ ದೇಹ, ಉದ್ದ ಕೂದಲು, ಮುಖದ ತುಂಬಾ ಗಡ್ಡ, ಕಣ್ಣಿಗೆ ಒಂದು ಕನ್ನಡಕ, ತುಂಬಾ ಅಲ್ಲದಿದ್ದರೂ ಸ್ಪುರದ್ರೂಪಿ. ಸದಾ ತುಂಬು ತೋಳಿನ ಶರ್ಟು ಇಲ್ಲ ಟಿ ಶರ್ಟು, ಜೀನ್ಸು, ಸ್ನೀಕರ್ಸ್. ಯಾವಾಗಲೂ ಕೈಲಿ ಹಿಡಿದ ಸ್ಮಾರ್ಟ್ ಫೋನ್. ಅವನಿಗೆ ಎಸ್ಪ್ರೆಸ್ಸೋ ಅಂದರೆ ಇಷ್ಟ, ಆಫೀಸಿನಲ್ಲಿ ಸರ್ವರ್ ನೋಡಿಕೊಳ್ಳುವ ಎಂಜಿನಿಯರ್ರ್.

ಪ್ರತಿ ಸಂಜೆ ಕಾಫಿ ಬ್ರೇಕ್ ಲಿ ಕಾಫಿ ಮಷೀನಿನಲ್ಲಿ ಎಸ್ಪ್ರೆಸೊ ಒತ್ತಿ ಅದಕ್ಕೊಂದು ಸ್ಟಿಕ್ ಹಾಕಿ ಅಲ್ಲಾಡಿಸುತ್ತಾ ಪ್ರತಿ ಸಂಜೆ ಅದೇ ಕ್ಯಾಂಟೀನ ಸೀಟಿನಲ್ಲಿ ಕೂರುವನು, ಅವನಿಗೆ ಸಿನಿಮಾ ಎಂದರೆ ಹುಚ್ಚು, ಮುಂದೆ ತಾನೊಂದು ಬ್ಲಾಕ್ ಬಸ್ಟರ್ ರೊಮಾಂಟಿಕ್ ಸಿನಿಮಾ ಮಾಡಬೇಕೆಂಬ ಹುಚ್ಚು, ಅದಕ್ಕೊಂದು ಕತೆ ಬರೆದಿದ್ದಾನೆ, ಅದನ್ನೇ ಕಾಫಿ ಕುಡಿಯುತ್ತಾ ಧಾನಿಸುತ್ತಾನೆ, ಅವನ ಸಿನಿಮಾಕ್ಕೆ ಹೆಸರು ಕೂಡ ಇಟ್ಟಿದ್ದಾನೆ. ‘ಕಡಲ ದಡದ ಮುತ್ತು’.

ಈ ದಿನ ಕೂಡ ನೀಲಿ ಕಲರಿನ ,ಪೂರ್ತಿ ತೋಳಿನ ಟಿ ಶರ್ಟ್, ಬ್ಲಾಕ್ ಜೀನ್ಸ್ ಹಾಕಿ, ಒಂದು ಕೈಯಲ್ಲಿ  ಮೊಬೈಲ್ ಹಿಡಿದು, ಇನ್ನೊಂದು ಕೈಲಿ ಕಾಫಿ ಹಿಡಿದು ಅದೇ ಕ್ಯಾಂಟೀನಿನ ಅದೇ ಸೀಟಿನಲ್ಲಿ ಕೂತಿದ್ದಾನೆ. ಅಲ್ಲಿಗೆ ಅವಳು ಬಂದಳು, ಜೊತೆಗಿದ್ದ ನಾಕು ಮಂದಿ ಜೊತೆ ಜೋರು ನಗುತ್ತಾ ಬಂದು ಕೂತಳು, ಕರೆಕ್ಟಾಗಿ ಪ್ರೀತಮ್ ಕುಳಿತ ಸೀಟಿಗೆ ಎದುರಾಗಿ ದೂರದಲ್ಲಿ, ಕಾಫಿ ಹೀರುತ್ತಾ ಒಮ್ಮೆ ಅವಳನ್ನು ನೋಡಿದ. ಪ್ರೀತಿಯ ಬೆಂಕಿ ಧಗ್ ಎಂದು ಉರಿಯಿತು, ಅವಳ ಆ ನಗು, ಅವಳ ಆ ನಾಚಿಕೆ, ಅವಳ ಆ ತುಟಿ, ಅವಳ ಕಿವಿಯಲ್ಲಿ ನೇತಾಡುತ್ತಿರುವ ಆ ಇಯರಿಂಗ್ಸ್, ಥೇಟು ಕಮರ್ಷಿಯಲ್ ಸಿನಿಮಾಗಳಲ್ಲಿ ಆಗುತ್ತಲ್ಲ ಅದೇ ತರ, ಲವ್ ಅಟ್ ಫರ್ಸ್ಟ್ ಸೈಟ್, ಅವಳು ಹಸಿರು ಕಲರಿನ ಚೂಡಿ ದಾರ ತೊಟ್ಟಿದ್ದಳು, ಅವಳ ಕಿವಿಯಲ್ಲಿ ನೇತಾಡುತ್ತಿರುವ ಹಸಿರು ವಾಲೆಗಳು, ಎರಡು ರೆಪ್ಪೆ ಕೂಡುವ ಕಡೆ ಇಟ್ಟಿರುವ ಹಸಿರು ಬೊಟ್ಟು, ಬೊಟ್ಟಿನ ಮಧ್ಯೆ ಡೈಮಂಡ್ ಶೇಪ್ ನ ಪ್ಲಾಸ್ಟಿಕ್ಕು, ಅದು ಕೂಡ ಹೊಳೆಯುತ್ತಿದೆ, ಸುತ್ತ ಇರುವ ನಾಲ್ವರು ನಗುತ್ತಿದ್ದಾರೆ ಎಲ್ಲರ ನಗುವ ಮಧ್ಯೆ ಇವಳ ನಗು ಮಿಂಚಾಗಿದೆ, ಪ್ರೀತಮ್ ಅವಳನ್ನೇ ನೋಡುತ್ತಾ ಕಳೆದು ಹೋದ, ಅವನೇ ಬರೆದ ಕಡಲ ದಡದ ಮುತ್ತಿನಲ್ಲಿ ಒಂದು ಸೀನ್ ಇದೆ.

ನಾಯಕ ಸಾಯಲು ಕಡಲಿಗೆ ಹಾರುತ್ತಾನೆ, ಇನ್ನೇನೋ ಉಸಿರುಗಟ್ಟಿ ಸಾಯುವಾಗ, ಮೀನಾಗಿ ಕಡಲ ಕನ್ಯೆ ಬರುತ್ತಾಳೆ, ಸಪೊರವಾಗಿ ಬಳಕುತ್ತಾ, ನೀರಿಗೆ ಬಿದ್ದ ಸುಂದರ ನಾಯಕನನ್ನು ತನ್ನ ಎರಡು ಕೈಗಳಿದ ಬಾಚಿ ಹಿಡಿದು ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಅವನ ತಬ್ಬುತ್ತಾಳೆ, ಅವನ ಉಸಿರು ಸರಾಗವಾಗುತ್ತದೆ, ಆ ಕ್ಷಣ ನಾಯಕನಿಗಾದ ಆ ರೋಚಕ ಭಾವವೇ ಈ ಕ್ಷಣ ಅವನಿಗಾಗಿದೆ, ಆ ಹುಡುಗಿ ಅವನಿಗೆ ಕಡಲ ಆಳದ ಮುತ್ತಿನಂತೆ ಕಂಡಳು, ಆಕೆ ನಗುತ್ತಲೇ ಅಲ್ಲಿಂದ ಎದ್ದು ಹೋಗುವಳು, ಅವನು ಅವಳು ಹೋದ ದಾರಿಯಲ್ಲಿ ಚೆಲ್ಲಿ ಹೋದ ನಗೆಯನ್ನು ನೋಡುತ್ತಾ ಕುಳಿತ.

ಅವತ್ತು ಅವನಿಗೆ ನಿದ್ದೆ ಹತ್ತಲೇ ಇಲ್ಲ, ಸ್ಲೋ ಮೋಷನಿನ್ನಲಿ ಅವಳು ನಕ್ಕ ನಗು, ಅವಳ ವಾಲಾಡುವ ವಾಲೆಗಳು, ಅವಳ ನಡಿಗೆ, ಅವಳ ಮುಖ, ಬೆಳಗಾಗುವರೆಗೂ ಮಗ್ಗುಲ ಬದಲಿಸುತ್ತಿದ್ದ ನಿದ್ದೆ ಮಾತ್ರ ಹತ್ತಲಿಲ್ಲ.

ಮರುದಿನವೂ ಅಲ್ಲೇ ಕೂತ, ಕಾದ, ಆಕೆ ಬರಲಿಲ್ಲ.
ಅದರ ಮರುದಿನವೂ ಕೂತ, ಕಾದ, ಆಕೆ ಬರಲಿಲ್ಲ.
ಮರುದಿನ ಭಾನುವಾರ. ಆಫೀಸು ಇರಲಿಲ್ಲ.

ಮೂರು ದಿನ ಅವಳ ನೋಡದೆ ಒದ್ದಾಡಿ ಹೋದ, ಆ ನಗು, ಆ ವಾಲೆ ಪದೇ ಪದೇ ಬಿಡದೆ ಕಾಡುತ್ತಿದ್ದವು, ಹದಿಹರೆಯದಲ್ಲಿ ಹೀಂಗೆಲ್ಲ ಆಗಬಾರದಿತ್ತು ಆದರೆ ಆಗುತ್ತಿತ್ತು. ಮಾರನೇ ದಿನ ಕಾಫಿ ಬ್ರೇಕನ್ನೇ ಕಾದಿದ್ದ, ಕಾಫಿ ಬ್ರೇಕಿನ ಸಮಯದಲ್ಲಿ ಆತುರಾತುರವಾಗಿ ಹೋಗಿ ಕಾಫಿ ಹಿಡಿದು ಕೂತ, ಇವತ್ತಾದರೂ ಬಳಿ ಎಂದು ದೇವರನ್ನು ಬೇಡಿಕೊಳ್ಳುತ್ತಿದ್ದ ಚಿಕ್ಕ ಮಗುವಿನಂತೆ, ಕೊನೆಗೂ ಬಂದಳು ಹೂವಿನ ತರ, ನಕ್ಕಳು ದಾಸವಾಳದ ತರ, ಹೋದಳು ಆದರೆ ಹೋಗುವ ಮುನ್ನ ಸುಮ್ಮನೊಂದು ಸಲ ತಿರುಗಿ ನಕ್ಕುಬಿಟ್ಟಳು. ಪ್ರೀತಮ್ ಗೆ ಕರೆಂಟು ಹೊಡೆದಂತಾಯ್ತು, ನಿಜಕ್ಕೂ ನನ್ನನ್ನೇ ನೋಡಿದ್ದ? ನಕ್ಕಿದ್ದ ? ಖುಷಿಗೆ ಕುಣಿದಾಡಿಬಿಟ್ಟ.

ಆಮೇಲೆ ಗೊತ್ತಾಯ್ತು ಆಕೆ ಈ ಕಂಪನಿಗೆ ಸೇರಿ ಇನ್ನೂ ವಾರವಾಗಿಲ್ಲ, ಅವಳ ಹೆಸರು ಸುಹಾಸಿನಿ,ಆಪರೇಷನ್ ವಿಭಾಗದವಳು, ಸದಾ ನಗು, ಒಳ್ಳೆಯ ಹುಡುಗಿ, ಮಾತು ಕಮ್ಮಿ ಮೌನ ನಗು ಜಾಸ್ತಿ, ಅಷ್ಟಾಗಿ ಯಾರನ್ನೂ ಹಚ್ಚಿಕೊಂಡಿಲ್ಲ ಅಂತ. ಅವತ್ತು ಅವಳ ವಿಭಾಗದ ಡಾಟಾ ಎಲ್ಲ ಜಾಲಾಡಿ ಅವಳ ಆಫೀಸಿನ ಐಡಿ ಕಂಡು ಹಿಡಿದು, ‘ನೀವು ಚೆನ್ನಾಗಿದ್ದೀರಾ’ ಎಂದು ಹಾಕಿಬಿಟ್ಟ, ಆಮೇಲೆ ಭಯವಾಯ್ತು, ಎಲ್ಲಿ ಅದನ್ನು ಅವಳು ರಾದ್ಧಾಂತ ಮಾಡಿಬಿಟ್ಟರೆ? Harassment ಸೆಲ್ ಗೆ ದೂರು ನೀಡಿಬಿಟ್ಟರೆ? ಅಥವಾ ನಾ ಇರೋ ಕಡೆ ಬಂದು ನಿಂಗೇನು ಮಾನ ಮರ್ಯಾದೆ ಇಲ್ಲ ಅಂತ ಅಂದರೆ? ತುಂಬಾ ಭಯವಾಗಿ ಸ್ಸಾರಿ ಎಂದು ಇನ್ನೊಂದು ಮೇಲ್ ಹಾಕಿ ಸುಮ್ಮನಾದ, ಆದರೂ ಆಕೆ ತಿರುಗಿದ ರೀತಿ, ನಕ್ಕ ರೀತಿ ನೆನಪಾಗುತ್ತಲೇ ಇತ್ತು ಆ ನೆನಪಲ್ಲೇ ಆ ರಾತ್ರಿಯೂ ನಿದ್ದೆಯನ್ನ ಕೊಂದ.

ಅಲ್ಲಿಂದ ನೋಡುವ ನಗುವ ಬೇರಾಗಾಗುವ ಕ್ರಿಯೆ ಶುರುವಾಯ್ತು, ಸಮಯಕ್ಕೆ ಸರಿಯಾಗಿ ಬಂದು ಕಾಫಿ ಹಿಡಿದು ಎದುರಿನ ಸೀಟು ನೋಡುತ್ತಾ ಕೂರುವುದು, ಆಕೆ ನಗುತ್ತಾ ಬಂದು ಕೂತು ಸ್ನೇಹಿತರ ಜೊತೆ ಮಾತಾಡುತ್ತಾ ನಗುತ್ತಾ ಸಡನ್ನಾಗಿ ಇವನ ಕಡೆ ಒಮ್ಮೆ ತಿರುಗಿ ನಗುವುದು, ಮರುಕ್ಷಣವೇ ಅವನನ್ನು ನೋಡಿಲ್ಲದ ರೀತಿ ಇರುವುದು ಎದ್ದು ಹೋಗುವಾಗ ಒಮ್ಮೆ ಹಿಂದುರಿಗಿ ಮತ್ತೆ ನಗುವುದು, ಅವನು ಅವಳ ಆಫೀಸಿನ ಮೇಲ್ ಗೆ ಅದೇ ಹೊಗಳಿ ಮತ್ತೆ ಭಯದಲ್ಲಿ ಸ್ಸಾರಿ ಕೇಳಿ ಸುಮ್ಮನಾಗುವುದು. ಕೊನೆಗೊಂದು ಧೈರ್ಯ ಮಾಡಿ ಅವಳ ಫೇಸ್‌ಬುಕ್ ಗೆ ರಿಕ್ವೆಸ್ಟ್ ಕಳಿಸಿದ ಕಳಿಸಿದ ಮೂರೂವರೆ ಸೆಕೆಂಡುಗಳಲ್ಲೇ ಅವಳು ಸ್ವೀಕರಿಸಿಕೂಡ ಬಿಟ್ಟಳು.

ಅಲ್ಲಿಂದ ಮತ್ತೊಂದು ವರಸೆ ಸುರುವಾಯ್ತು, ಅವನು ಫೇಸ್‌ಬುಕ್ ನ ಸ್ಟೋರಿಯಲ್ಲಿ ಚಂದ್ರನ ಫೋಟೋ ಹಾಕಿ ನೀ ನನ್ನ ಚಂದಿರ ಅಂತ ಹಾಕಿದರೆ, ಅವಳು ಮರುಕ್ಷಣದಲ್ಲಿ ಚಂದ್ರನಿಗೆ ಸ್ವಂತ ಬೆಳಕಿಲ್ಲ, ನೀನೇ ಸೂರ್ಯ ಅಂತಾ ಹಾಕುತ್ತಿದ್ದಳು ಅವನು ನೋಡಿದ ಕೂಡಲೇ ಅದು ಡಿಲೀಟ್ ಮಾಡುತ್ತಿದ್ದಳು. ಅವನು ಹೂವಿನ ಫೋಟೋ ಹಾಕಿದರೆ ಆಕೆ ದುಂಬಿಯ ಫೋಟೋ ಹಾಕುತ್ತಿದ್ದಳು, ಅವನು ಕಾಡಿನ ಫೋಟೋ ಹಾಕಿದರೆ ಆಕೆ ಕಡಲಿನ ಫೋಟೋ ಹಾಕುತಿದ್ದಳು, ಅವನು ನಾ ನಿನ್ನ ಮರೆಯಲಾರೆ ಹಾಡನ್ನು ಹಾಕಿದರೆ ಆಕೆ ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು ಹಾಕುತ್ತಿದ್ದಳು, ಸುಮಾರು ದಿನ, ವಾರ ಇದೆ ನಡೆಯುತ್ತಿತ್ತು ಒಬ್ಬಬ್ರೊಬ್ಬರು ನೇರ ಮಾತಾಡಿಸಲೇ ಇಲ್ಲ. ನಗು ನೋಟ ಫೇಸ್‌ಬುಕ್ ನಾ ಆಟ.

ಇಷ್ಟೆಲ್ಲ ಆಗುವಾಗಲೇ ಪ್ರೀತಮ್ ಗೆಳೆಯನೊಬ್ಬನ ಮದುವೆಗೆ ಚಿಕ್ಕಮಗಳೂರಿಗೆ ಹೋದನು, ಕಾಡಿನಂತ ಊರು, ನೆಟ್ವರ್ಕ್ ಇಲ್ಲ, ಎರಡು ದಿನ ಒದ್ದಾಡಿದ ನಾಲ್ಕನೇ ದಿನ ರಾತ್ರಿ ಸಿಟಿಯಿಂದ ಬಸ್ ಹತ್ತುವಾಗ ನೆಟ್ವರ್ಕ್ ಸಿಕ್ತು. ಅವಳ ಫೇಸ್ ಬುಕ್ ಸ್ಟೋರಿ ಒಂದು ಹೃದಯಾಕಾರದ ಎಲೆಯಲ್ಲಿ ಮಿಸ್ ಯು ಅಂತ ಬರೆದು ಪೋಸ್ಟ್ ಮಾಡಿದ್ದಳು. ಅವನಿಗೆ ಬಸ್ಸು ಸ್ವರ್ಗದ ರಥದಂತೆ ಕಾಣಿಸಿತು.

ಅವತ್ತು ಆ ಕ್ಷಣ ಮೊದಲ ಬಾರಿ ಆಕೆಯೇ ಅವನಿಗೆ ಮೆಸೆಂಜರಿನಲ್ಲಿ ‘ಎಲ್ಲಿ ಕಾಣಿಸಿಲ್ಲ ಅಂತ’ ಮೆಸೇಜು ಹಾಕಿದಳು, ‘ಮಿಸ್ ಮಾಡಿಕೊಂಡ್ಯಾ’ ಅಂತ ಇವನು ರಿಪ್ಲೇ ಹಾಕಿದ, ಅಲ್ಲಿಂದ ಶುರುವಾಗಿ ಬೆಳಗಿನ ಜಾವದವರೆಗೂ ಇಬ್ಬರು ಮೆಸೇಜು ಮಾಡುತ್ತಾ ನಗುತ್ತಾ ಕಾಲೆಳೆಯುತ್ತಾ ಇದ್ದರೂ ಕೊನೆಗೆ ಅವನು ನಂಬರ್ ಕೇಳಿದ ಆಕೆ ನೀನೇ ಕಳಿಸು ಅಂದಳು, ಕಳಿಸಿದ, ಆಕೆ ಹಾಯ್ ಎಂದಳು, ಸರಿ ಇನ್ಮೇಲೆ ಫೇಸ್ ಬುಕ್ ಬೇಡ ಎಲ್ಲರೂ ನೋಡ್ತಾರೆ ವಾಟ್ಸ್ ಆಪ್ ನಲ್ಲೇ ಮೆಸೇಜು ಮಾಡು ಅಂದ, ಆಕೆ ನಕ್ಕಳು, ಕಣ್ಣು ಹೊಡೆಯುವ ಈ ಮೋಜಿ ಕಳಿಸಿದಳು. ಅಲ್ಲಿಂದ ಅವರ ಊರು ಬಾಲ್ಯ ಸ್ಕೂಲ್ ಕಾಲೇಜು ಕಂಡ ಕೇಳಿಸಿಕೊಂಡ ಲವ್ ಸ್ಟೋರಿಗಳು ಇಷ್ಟವಾಗುವ ಬಣ್ಣ ಊಟ ಆಟ ಹೀರೋ ಸಿನಿಮಾ ಸ್ಥಳ ಕನಸು ಹೀಗೆ ಎಲ್ಲ ಹಂಚಿಕೊಂಡರು, ಅವನು ಅವಳನ್ನು ಹೊಗಳುತ್ತಿದ್ದ ಆಕೆ ನಗುತ್ತಿದ್ದಳು, ಇಷ್ಟ ಎಂದರೆ ಕಣ್ಣು ಹೊಡೆಯುತ್ತಿದ್ದಳು, ಸಿಗ್ತೀಯ ಅಂದರೆ ಯಾಕೆ ಅನ್ನುತ್ತಿದ್ದಳು, ಅವನು ಬಯಕೆ ತೋಡಿಕೊಂಡರೆ ಆಕೆ ಬಾಯಾರಿಕೆ ಮಾಡಿ ಸುಮ್ಮನಾಗುತ್ತಿದ್ದಳು.

ಅವತ್ತು ಭಾನುವಾರ, ಪ್ರೀತಮ್ ತನ್ನ ರೂಮಿನಲ್ಲಿ, ಬಿನ್ ಬ್ಯಾಗ್ ಮೇಲೆ ಕೂತು, ಕಿವಿಯಲ್ಲಿ ಹೆಡ್ ಫೋನ್ ಹಾಕಿ ರೊಮಾಂಟಿಕ್ ಹಾಡುಗಳನ್ನ ಕೇಳ್ತಿದ್ದ, ಅವಳಿಗೆ ಮೆಸೇಜು ಮಾಡಿದ ‘ಎಲ್ಲಿದ್ದೀಯ ಬೇಬ್’ (ಹೇಳೋದು ಮರೆತೇ ಮೊಬೈಲಿನಲ್ಲೇ ಅವನು ಅವಳಿಗೆ ಪ್ರಪೋಸ್ ಮಾಡಿದ್ದ, ಆಕೆ ನಕ್ಕಿದ್ದಳು ಅಷ್ಟೇ, ಹೋಗಿ ಬನ್ನಿ ಇಂದ ಹೋಗೋ ಬಾರೋ ಹೋಗಿ ಇವಾಗ ಬೇಬ್ ಮುದ್ದು ಬಂಗಾರಿ ವರೆಗೂ ಬಂದು ನಿಂತಿತ್ತು ಇನ್ನೂ ಭೇಟಿಯಾಗದೇ) 

ಅವಳು -ದೇವಸ್ಥಾನದಲ್ಲಿ
ಅವನು- ಯಾವ ದೇವಸ್ಥಾನ
ಅವಳು- ರಾಘವೇಂದ್ರ ದೇವಸ್ಥಾನ, ಜೆ ಪಿ ನಗರ್
ಅವನು – ದೇವರು ನೋಡಕ್ಕ ಬಂದ್ಯಾ
ಅವಳು- ನನ್ ದೇವರು ಸಿಗ್ತಾನೇನೋ ಅಂತ
ಅವನು- ಬರ್ಲಾ?
ಅವಳು- ಕೇಳ್ತಿಯಲ್ಲ 

ಅವನು ಬಿನ್ ಬ್ಯಾಗ್ ಇಂದ ಹಾರಿ ತನ್ನ ಗೆಳೆಯನನ್ನು ಎತ್ತಿಕೊಂಡು ಅವನ ಕೆ ಟಿ ಎಂ ಬೈಕು ಹಿಡಿದು ಹೊರಟ, ರೋಡಿನಲ್ಲಿದ್ದ ಟ್ರಾಫಿಕ್ಕು, ರೆಡ್ ಸಿಗ್ನಲ್, ಎದ್ರು ಬಂದ ಮುದುಕರ ಆಂಟಿಯರ ಕಾರುಗಳಿಗೆ ಶಾಪ ಹಾಕುತ್ತಾ ಓಡಿಸುತ್ತಿದ್ದ, ಹಿಂದೆ ಕುಳಿತ ಗೆಳೆಯನಿಗೆ ನಗು, ಕೊನೆಗೂ ಅವನ ಬೈಕು ರಾಘವೇಂದ್ರ ದೇವಸ್ಥಾನ ಎದುರು ನಿಂತು, ಪ್ರೀತಮ್ ಆತುರದಿ ಒಳಗೆ ಹೋದ, ಒಳಗೆ ಅವಳಿದ್ದಳು, ಹಳದಿ ಚೂಡಿದಾರ್ ಹಾಕಿದ್ದಳು ಅದಕ್ಕೊಪ್ಪುವ ಹಳದಿ ಇಯರಿಂಗ್ಸ್, ಹಳದಿ ಬೊಟ್ಟು, ತಲೆಕೂದಲ ಜಡೆ ಹಾಕದೆ ಹರಿಬಿಟ್ಟು ಅದನ್ನೊಂದು ಹಳದಿ ಕ್ಲಿಪ್ಪಿನಲ್ಲಿ ಸಿಕ್ಕಿಸಿದಳು, ಅವನ ಕಣ್ಣಿಗೆ ಸಾಕ್ಷಾತ್ ಸುಂದರಿಯಾಗಿ ಕಂಡಳು, ಆಫೀಸ್ ಬಿಟ್ಟರೆ ಮೊದಲ ಬಾರಿ ಅವಳನ್ನು ಭೇಟಿಯಾಗುವ ತವಕದಲ್ಲಿದ್ದ, ಆಕೆ ತಿರುಗಿ ನೋಡಿದಳು ನಕ್ಕಳು, ದೇವರಿಗೆ ಕೈ ಮುಗಿದು ಬಂದಳು. ಮೊದಲ ಬಾರಿಗೆ ಆಕೆ ಅವನನ್ನು, ಅವನು ಅವಳನ್ನು ಅಷ್ಟು ಹತ್ತಿರದಿಂದ ನೋಡಿದ್ದು, ಆಕೆ ನಕ್ಕಳು.

ಹೋಗುವಾಗ ಗೆಳೆಯ ಆಟೋದಲ್ಲಿ ಹೋದ, ಆಕೆ ಅವನ ಬೆನ್ನಿಗಂಟಿಕೊಂಡು ಕೂತಳು, ಅಲ್ಲಿಂದ ಶುರುವಾಯ್ತು ಪ್ರೇಮದ ಕುತೂಹಲ ಘಟ್ಟ, ಸಮಯ ಸಿಕ್ಕಾಗಲೆಲ್ಲ ಅವನು ಅವಳ ಸ್ಕೂಟಿ ಏರುವುದು, ಇಲ್ಲ ಆಕೆ ಅವನ ಬೈಕು ಏರುವುದು, ನೈಸ್ ರೋಡು, ರಿಂಗ್ ರೋಡು, ಹೆಸರುಘಟ್ಟ, ಬನ್ನೇರುಘಟ್ಟ, ಮಾಲುಗಳು, ದೇವಾಲಯಗಳು ಸುತ್ತಾತೊಡಗಿದರು. ಆಕೆ ಅವನನ್ನು ತಬ್ಬಿ ಹಿಡಿಯುತ್ತಿದ್ದಳು, ಆತ ಆಕೆಯನ್ನ ಒತ್ತಿ ಹಿಡಿಯುತ್ತಿದ್ದ, ಡೊಪಮೈನ್ ಎಂಬ ಹಾರ್ಮೋನು ಅವರ ಮನಸ್ಸುಗಳನ್ನು ದೇಹಗಳನ್ನು ಇನ್ನಷ್ಟು ಹತ್ತಿರ ಕೂರಿಸಿ ಸೇರಿಸಿ ಮಜಾ ತಗೋತಿತ್ತು.

ಒಂದು ಬಾರಿ ಥೇಟು ಅರ್ಜುನ್ ರೆಡ್ಡಿ ಸಿನಿಮಾ ತರ ಆಕೆ ಅವನ ತಿರುಗಿಸಿ ಬೈಕಿನಲ್ಲಿ ಹೋಗುತ್ತಲೇ ರಿಂಗ್ ರೋಡಿನಲ್ಲಿ ತುಟಿಗೆ ತುಟಿ ಒತ್ತಿದ್ದಳು. ರಿಂಗ್ ರೋಡಿನ ದೇವಸ್ಥಾನ, ನೈಸ್ ರೋಡಿನ ಅಯ್ಯಂಗಾರ್ ಬೇಕರಿ, ಹೋಟೆಲು ಅವರ ಹಾಟ್ ಸ್ಪಾಟ್ ಆಗಿತ್ತು. ಈ ಮಧ್ಯದಲ್ಲಿ ಆಕೆ ಅವನ ರೂಮಿಗೆ ಹೋಗಲು ಶುರು ಮಾಡಿದಳು, ಅವಳ ಮನೆಯವರು ಹೊರಗೆ ಹೋದಾಗ ಆತ ಕೂಡ ಬಂದು ಹೋಗಿದ್ದ, ಪ್ರೇಮದ ಪರಾಕಾಷ್ಟೆಯಲ್ಲಿ ಅವರು ತೇಲಾಡುತ್ತಿದ್ದರು. ಅವರ ಪ್ರೀತಿಯ ರೋಚಕ ಕ್ಷಣಗಳನ್ನು ಅವರು ತೆಗೆದುಕೊಂಡ ಸೆಲ್ಫಿಗಳೇ ಸಾಕ್ಷಿ. ಅವನಿಗೆ ದಿನೇ ದಿನ ಪೊಸೆಸೆಸಿವ್ ನೆಸ್ ಹೆಚ್ಚುತ್ತಿತ್ತು ಒಮ್ಮೆ ಹೀಗೆ ಆಕೆಯ ಸ್ಕೂಟಿಯಲ್ಲಿ ಅವಳ ತಬ್ಬಿ ಹೋಗುವಾಗ ಆತನಿಗೆ ಪದೇ ಪದೇ ವರದ ಎನ್ನೋ ಹುಡುಗನ ಕಾಲ್, ಕೊನೆಗೆ ಆಕೆ ಕಾಲ್ ಸ್ವೀಕರಿಸಿ ಸ್ನೇಹಿತನ ಬರ್ತ್ ಡೇ ಇದೆಯ್ಯೆಂದು ಆಮೇಲೆ ಕಾಲ್ ಮಾಡುವೆ ಎಂದು ಕಾಲ್ ಕಟ್ಟಿ ಮಾಡಿದಳು, ಆದರೂ ಆ ಹುಡುಗ ಮತ್ತೆ ಮತ್ತೆ ಕಾಲ್ ಮಾಡಿದಾಗ ಮೊಬೈಲ್ ಸೈಲೆಂಟ್ ಮಾಡಿದಳು. ಹಿಂದೆ ಕುಳಿತ ಪ್ರೀತಮ್ ಯಾರು ಅದು ಅಂದಾಗ ‘ಹೇ ನನ್ ಫ್ರೆಂಡಿನಾ ಫ್ರೆಂಡ್ ಕಣೋ, ತಲೆ ತಿಂತಾನೆ’ ಎಂದ್ಲು, ಅವನು ಮತ್ತೆ ತಬ್ಬಿಕೊಂಡ ಆಕೆ ಅವನ ಕೆನ್ನೆ ಮುಟ್ಟುತ್ತ ಗಾಡಿ ಓಡಿಸಿದಳು.

ದೀಪಾವಳಿ ದಿನ ಆತ ಅವನ ಮನೆಯಲ್ಲಿ ಆಟಂ ಬಾಂಬ್ ಹಚ್ಚಿದ್ದ, ಆಕೆ ಸೂಸುರ್ ಬತ್ತಿ ಹಿಡಿದು ಪೋಸ್ ಕೊಟ್ಟು ಸ್ಟೇಟಸ್ ಹಾಕಿದಳು. ಕೂಡಲೇ ಅವನು ಸೂಸುರ್ ಬತ್ತಿ ಹಿಡಿದು ಪೋಸ್ ಕೊಟ್ಟು ತಾನು ಹಾಕಿದ, ಆಕೆ ಕಾಲ್ ಮಾಡಿ ‘ಚಿನ್ನಿ ನೀನು ಅಲ್ಲಿ ನಾನು ಇಲ್ಲಿ ಬೇಡ ಮುಂದಿನ ದೀಪಾವಳಿಗೆ ಒಟ್ಟಿಗೆ ಸೂಸುರ್ ಬತ್ತಿ ಹಚ್ಚೋಣ’ ಎಂದಳು, ಆತ ‘ಹೌದಾ ಈಗ್ಲೇ ಬರ್ಲಾ, ಹಚ್ಚಲ’ ಎಂದ ‘ಬಂದ್ರೆ ಎನ್ ಮಾಡ್ತೀಯಾ’ ಅಂತ ನಕ್ಕಳು, ಅವನು ‘ಬಂದು ನಿನ್ ತುಟಿಗೆ ಕಿಸ್ ಮಾಡಿ ನಿನ್ ಕುತ್ತಿಗೆಗೆ ಕಿಸ್ ಮಾಡಿ, ಹಾಂಗೆ… ಎಂದಾಗ ಆಕೆ ‘ಬಂಗಾರಿ ಸಾಕು, ತುಂಬಾ ದಿನ ಆಯ್ತು, ನಿನಗೆ ನನ್ ನೆನಪೇ ಇಲ್ಲ ಅಂದಳು’ ಆತ ನಕ್ಕ.

ಆ ರಾತ್ರಿ ಯಾಕೋ ಆಕೆ ಅವನಿಗೆ ಬೇಕು ಅನಿಸಿತು ಗಾಢವಾಗಿ, ಅವನ ಬಾಳಿಗೆ ಅವಳೇ ಬೆಳಕು ಅವಳೇ ದೀಪಾವಳಿ ಅನಿಸಿತು, ಮದ್ವೆ ಆಗೋಣ ಅಂದ, ಜೊತೆಗೆ ನಮ್ ಅಪ್ಪ ಟೀಚರ್, ಬಲು ಶಿಸ್ತಿನ ಮನುಷ್ಯ ಅಂದ. ಆಕೆ ಹೇ ಪುಕ್ಲ ನಾನೇ ಕೇಳ್ತೀನಿ ನಂಬರ್ ಕಳಿಸು ಅಂದಳು. ಅವನು ಕಳಿಸಿದ. ಆಕೆ ಹಾಯ್ ಅಂಕಲ್ ಎಂದು ಆ ನಂಬರಿಗೆ ಮೆಸೇಜು ಮಾಡಿದಳು.

ಅಲ್ಲಿಂದ ಅವರ ಪ್ರೀತಿ ಮತ್ತೊಂದು ಹಂತಕ್ಕೆ ಬಂದು ನಿಂತಿತು, ಅವಳು ಕಳಿಸಿದ ಮೆಸೇಜು ನೋಡಿ ಪ್ರೀತಮ್ ಅಪ್ಪ ಯಾರು ಎಂದು ಕೇಳಿ ಆಕೆ ಧೈರ್ಯದಿಂದ ತನ್ನ ಪ್ರೀತಮ್ ನಾ ಪ್ರೀತಿ ಹೇಳಿ ಮದುವೆ ಮಾಡಿಕೊಡಿ ಅಂದಳು, ಅವರು ಪ್ರಾಣ ಹೋದರು ತಾನು ತನ್ನ ಮಗನಿಗೆ ಅನ್ಯ ಜಾತಿಯ ಹೆಣ್ಣನು ತರೋಲ್ಲ ಎಂದು ಉಗಿದು ಇಟ್ಟರು, ಅಲ್ಲಿಂದ ಪ್ರೀತಮ್ ಸುಹಾಸಿನಿ ಸಿಕ್ಕಾಗಲೆಲ್ಲ ಮದುವೆ ಬಗ್ಗೆ ಮಾತಾಡುತ್ತಾ, ಎಲ್ಲರನ್ನೂ ಹೇಗೆ ಒಪ್ಪಿಸುವುದು ಎಂದು ಮಾತಾಡುತ್ತಾ, ಒಪ್ಪಿಸುವುದು ಹೇಗೆ ಎಂದು, ಒಪ್ಪದಿದ್ದರೆ ಏನು ಮಾಡುವುದೆಂದು ಮಾತಾಡುತ್ತಾ ಇದ್ದರು, ಅವಳು ತನ್ನ ಮನೆಯಲ್ಲಿ ತಾನು ಒಪ್ಪಿಸುವೆ ಅಷ್ಟು ಕಷ್ಟವಿಲ್ಲ ಎಂದಳು, ಅವರಿಬ್ಬರೂ ಶಿವಗಂಗೆಗೆ ಹೋಗಿ ದೇವರನ್ನು ಪ್ರಾರ್ಥಿಸಿದರು, ಅವತ್ತು ಅವನು ಜೇಬಿನಲ್ಲಿ ತಾಳಿ ತಂದಿದ್ದ, ಕಟ್ಟಿಬಿಡೋಣಾ ಎಂದುಕೊಂಡ, ಕೊನೆಗೆ ಬೇಡ ಹೇಗಾದರೂ ಸರಿ ಮನೆಯವರನ್ನು ಒಪ್ಪಿಸಿಯೇ ಮದುವೆ ಆಗೋಣ ಎಂದ. ಅವತ್ತು ವಾಪಾಸು ಬೆಂಗಳೂರಿಗೆ ಬರುವಾಗ ಆಕೆ ಗಾಢವಾಗಿ ತಬ್ಬಿದ್ದಳು, ಅಳುತ್ತಿದ್ದಳು, ಆತನು ಆಳುತ್ತಿದ್ದ. 

ಆ ದಿನವಾದ ಕೆಲವು ದಿನಗಳು ಆಕೆ ಸಿಗಲಿಲ್ಲ, 

ಕೊನೆಗೆ ಒಂದು ದಿನ ಸಿಕ್ಕು ನೀನು ಆರಾಮಾಗಿರು ಬಂಗಾರಿ, ನನಗೆ ಮನೆಯಲ್ಲಿ ಒಬ್ಬ ಹುಡುಗನ ನೋಡಿದ್ದಾರೆ ಅವನ್ನನೆ ಮದುವೆಯಾಗುವೆ ಅಂದಳು, ನಿನ್ನ ಬಿಟ್ಟಿರಕ್ಕೆ ಆಗ್ತಿಲ್ಲ ಅಂದಳು, ಆತ ಅತ್ತ ಕೋಪ ಮಾಡಿ ಉಗಿದ ಹೇಗಾದರೂ ಮನೆಯವರನ್ನು ಒಪ್ಪಿಸುವೆ ಎಂದ, ಆಕೆ ಅಳುತ್ತಾ ಹೋಗಿಬಿಟ್ಟಳು. ಇವಳಿಗೆ ಇಷ್ಟು ದಿನ ಮನೆಯವರ ನೆನಪಾಗಲಿಲ್ವ ಎಂದು ಬೈದುಕೊಂಡ, ಅತ್ತ. ಏನು ಮಾಡದೆ ಸುಮ್ಮನೆ ಕೂಟ, ಮೊಬೈಲ್ ಗ್ಯಾಲರಿಯಲ್ಲಿ ಅವರಿಬ್ಬರ ಸಾವಿರ ಫೋಟೋಗಳು, ಎದೆಯಲ್ಲಿ ಸಾವಿರ ನೆನಪುಗಳು.

| ಮುಂದುವರೆಯುತ್ತದೆ |

‍ಲೇಖಕರು Admin

January 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: