ಚಂಪಾ ಸ್ಮರಣೆ…

ಮಮತ ಅರಸೀಕೆರೆ

ನಾನು ಪದ್ಯಗಳನ್ನು ಬರೆಯಲು ಆರಂಭಿಸಿದಾಗ ಕೆಲವು ಸ್ನೇಹಿತರು ಸಂಕ್ರಮಣಕ್ಕೆ ಪದ್ಯಗಳನ್ನು ಕಳಿಸು, ಸಂಕ್ರಮಣ ಸ್ಪರ್ಧೆಗಳನ್ನು ಆಯೋಜಿಸುತ್ತದೆ ಭಾಗವಹಿಸು ಅಂತೆಲ್ಲ ಸಲಹೆ ಕೊಟ್ಟಿದ್ದರು. ಸ್ಪರ್ಧೆಗಳೆಂದರೆ ಕೊಂಚ ಹಿಂಜರಿಯುತ್ತಿದ್ದ ನಾನು ಆ ಪ್ರಯತ್ನವನ್ನೆ ಮಾಡಲಿಲ್ಲ. ನನ್ನ ಕಾವ್ಯದ ಬಗ್ಗೆ ನನಗಿರುವ ಅಪನಂಬಿಕೆಯೂ ಅದಕ್ಕೆ ಕಾರಣ. ಆದರೆ ಸಂಕ್ರಮಣ ಪತ್ರಿಕೆ ಹೇಗಿರುತ್ತದೆ ಅಂತಾದರೂ ತರಿಸಿಕೊಂಡು ನೋಡಿದ್ದೆ. ಅಸಲಿಯೆಂದರೆ ನಾನು ಬಹಳಷ್ಟು ಪತ್ರಿಕೆಗಳನ್ನು ಓದುತ್ತಿದ್ದೆ.

ಸಂಕ್ರಮಣದ ವಸ್ತುವಿಷಯ ಮಾತ್ರ ಆಕರ್ಷಿಸಿತ್ತು. ತೀ ಸಂಪಾದಕೀಯ, ಒಳಹೂರಣ, ವೈವಿಧ್ಯ ಸಾಮಗ್ರಿಗಳು ಚಂಪಾರವರ ಭೇಟಿಗೂ ಮುನ್ನ ಚಂಪಾರ ಬಗ್ಗೆ ನನ್ನದೇ ನಿಲುವು ತಳೆಯುವಂತೆ ಮಾಡಿತ್ತು. ಅಬ್ಬಾ ಅದೆಷ್ಟು ಸುಲಲಿತವಾಗಿ ಖಂಡಿಸ್ತಾರೆ, ಟೀಕಿಸ್ತಾರೆ, ಕಚಗುಳಿಯಿಡುವಂತೆ ಬರೆಯುತ್ತಾರೆ ಅನಿಸಿತ್ತು. ಸಂಕ್ರಮಣದಲ್ಲಿ ಬಹುಮಾನ ತೆಗೆದುಕೊಳ್ಳುವುದೆಂದರೆ ಅದೊಂದು ಪ್ರತಿಷ್ಠೆಯ ವಿಷಯ ಹಾಗೂ ಪದ್ಯ ಪ್ರಕಟವಾದರೆ ಹೆಮ್ಮೆಯ ವಿಷಯವೆಂಬುದು ಎಲ್ಲರಿಗೂ ತಿಳಿದ ಸಂಗತಿ.

ಸಾಹಿತ್ಯದ ಒಡನಾಟ ಹೆಚ್ಚಾದ ಮೇಲೆ ಅಲ್ಲಲ್ಲಿ ಚಂಪಾರನ್ನು ಭೇಟಿ ಮಾಡಿ ‘ನಮಸ್ಕಾರ’ ಅನ್ನುವುದು ಹೊರತುಪಡಿಸಿ ಮತ್ತೇನೂ ಹೆಚ್ಚಿಗೆ ಸಂಪರ್ಕವಿರಲಿಲ್ಲ. ಕಾಲಕ್ರಮೇಣ ನಾನು ನನ್ನ ಕವನ ಸಂಕಲನ ಹೊರತರುವಾಗ ‘ಬೆನ್ನುಡಿ ಬರೆಯುತ್ತೀರ ಸರ್’ ಅಂತ ಕೇಳಿದ್ದೆ. ತಡಮಾಡದೆ ತಕ್ಷಣ ಬರೆದುಕೊಟ್ಟಿದ್ದರು. ಚುಟುಕಾಗಿ, ಚುರುಕಾಗಿ, ಉತ್ತೇಜನಕಾರಿಯಾಗಿ.. ಓದಿ ಕುಷಿಯಾಗಿತ್ತು.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ಗೆ ಚಂಪಾರ ಅಧ್ಯಕ್ಷತೆಯಿದ್ದ ಕಾಲ. ಶಿವಮೊಗ್ಗದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿದಾಗ ಸಮ್ಮೇಳನದಲ್ಲಿ ಮೂರು ದಿನವೂ ಇದ್ದೆವು. ಕೊನೆಯ ದಿನ ಚಂಪಾರ ಮಾತುಗಳನ್ನು ಕೇಳುವ ಸುಯೋಗ. ಆಗ ಮುಖ್ಯಮಂತ್ರಿಗಳಾಗಿದ್ದ ಮಾನ್ಯ ಕುಮಾರಸ್ವಾಮಿಯವರು ಚಂಪಾರೊಂದಿಗೆ ಮುನಿಸಿಕೊಂಡಿದ್ದರು ಎಂಬ ಸುದ್ದಿ ನಮ್ಮ ಕಿವಿಗೂ ಬಿದ್ದಿತ್ತು. ‘ಸಮ್ಮೇಳನಕ್ಕೆ ಬರೋಲ್ಲ ಅಂದವರು’ ಬಂದಿದ್ದರು. ಮಾತುಗಳಲ್ಲೆ ಕೊಂಚ ಚುಚ್ಚಾಟ ನಡೆದಿತ್ತು.

ನಂತರ ಮಾತಿಗೆ ನಿಂತವರು ಚಂಪಾ ಸರ್. ‘ನಮ್ಮ ಮಾನ್ಯ ಮುಖ್ಯಮಂತ್ರಿಗಳ ಹೆಸರಲ್ಲೆ ಕುಮಾರನೂ ಇದ್ದಾರೆ, ಪ್ರೌಢ ಸ್ವಾಮಿಯೂ ಇದ್ದಾರೆ, ಹಾಗಾಗಿಯೇ ಮುನಿಸು ತೊರೆದು ಸಮ್ಮೇಳನಕ್ಕೆ ಬಂದಿದ್ದಾರೆ. ಕನ್ನಡದ ಕೆಲಸವಲ್ಲವೇ ಅವರ ಉಪಸ್ಥಿತಿ ಮುಖ್ಯ’ ಅಂದಿದ್ದರು.. ‘ಅರೆರೆ, ಮುಖ್ಯಮಂತ್ರಿಗಳನ್ನೆ ಹೀಗೆ ಮಾತನಾಡಿಸುವಷ್ಟು ಸಲಿಗೆಯಿದೆಯಲ್ಲ ಇವರಿಗೆ ಅಂತ ಸೋಜಿಗಪಟ್ಟಿದ್ದೆ’. ನಂತರ ತಿಳಿದದ್ದು, ಸಮ್ಮೇಳನದಲ್ಲಿ ಬಹುಮುಖ್ಯ ಗೋಷ್ಠಿಗಳನ್ನೂ ಚಂಪಾ ಆಯೋಜಿಸಿದ್ದರು , ಹಾಗೂ ಅವೆಲ್ಲ ವಿವಾದವಾಗುವಂತಹವು. ಇವನ್ನೆಲ್ಲ ಆಯೋಜಿಸಿ ಗೆಲ್ಲುವಷ್ಟು ತಾಕತ್ತು ಚಂಪಾಗಿತ್ತು ಅಂತೆಲ್ಲ.

ಸಂಕ್ರಮಣದ ಐವತ್ತನೆ ವರ್ಷದ ಕಾರ್ಯಕ್ರಮಗಳು ನಡೆಯುತ್ತಿದ್ದವು. ತಾಲೂಕಿಗೊಂದು ಸಂಕ್ರಮಣದ ಸಮಿತಿ ಮಾಡಿ ತಾಲೂಕು ಪದಾಧಿಕಾರಿಗಳನ್ನು ನೇಮಿಸಿ ತಿಂಗಳಿಗೊಂದು ಕಾರ್ಯಕ್ರಮಗಳನ್ನೂ ಆಯೋಜಿಸುವ ಇಂಗಿತ ಚಂಪಾ ಸರ್‌ಗಿತ್ತು. ಈ ಸಂಬಂಧ ಅವರು ನನ್ನೊಡನೆಯೂ ಮಾತನಾಡಿದ್ದರು. ಸಂಕ್ರಮಣದ ಪ್ರಥಮ ಸಾಹಿತ್ಯ ಸಮ್ಮೇಳನ ಬೆಂಗಳೂರಿನಲ್ಲಿ ಜರುಗಿದಾಗ ನನ್ನನ್ನೂ ಕವಿಗೋಷ್ಠಿಯಲ್ಲಿ ಸೇರಿಸಿಕೊಂಡಿದ್ದರು.

ಹಾವೇರಿಯ ಗೊಟಗೋಡಿಯಲ್ಲಿ ಸಂಕ್ರಮಣದ ಸಂಚಿಕೆಗಳ ಸಂಪುಟಗಳು ಬಿಡುಗಡೆಯಾದಾಗ ಬಹಳ ಸೊಗಸಾಗಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಹಿಂದಿನ ಸಂಜೆಯೇ ನಾವೆಲ್ಲ ಗೊಟಗೋಡಿ ತಲುಪಿದ್ದೆವು. ಆ ದಿನ ವಿರಾಮವಾಗಿ ರೂಮೊಂದರಲ್ಲಿ ಕುಳಿತಿದ್ದ ಚಂಪಾ ಸರ್, ಇತ್ತೀಚಿನ ವಿದ್ಯಾಮಾನಗಳ ಬಗ್ಗೆ ಮಾತಿಗೆ ಸಿಕ್ಕಿದ್ದರು.

ಸಾಮಾಜಿಕ ಜಾಲತಾಣಗಳ ಬಗ್ಗೆ ಅವರದೇ ನಿಲುವು ಹೊಂದಿದ್ದ ಪಾಟೀಲರು, ನಮ್ಮೊಂದಿಗೆ ಫೇಸ್‌ಬುಕ್ ಬಗ್ಗೆಯೇ ಹೆಚ್ಚು ಚರ್ಚಿಸಿದ್ದರು. ಅದರ ಸಾಧಕ ಬಾಧಕಗಳ ಬಗ್ಗೆ ತಿಳಿದುಕೊಂಡಿದ್ದರು. ಅಲ್ಲಿ ಏನೆಲ್ಲಾ ಸಾಧ್ಯತೆಗಳಿವೆಯೆಂದು ಪ್ರಶ್ನಿಸಿದ್ದರು. ‘ನಾವೆಲ್ಲ ಫೇಸ್‌ಲೆಸ್ ಮಂದಿ, ನಂಗೆ ಫೇಸ್‌ಬುಕ್ ಅಕೌಂಟ್ ಇಲ್ಲವ್ವ’ ಅಂದು ನಕ್ಕಿದ್ದರು. ನಂತರ ಸಂಕ್ರಮಣದ ಚಂದಾ ವಿಷಯ ಬಂದಾಗ ‘ಫೇಸ್‌ಬುಕ್‌ಗೆ ಹಾಕಿ ಸಂಕ್ರಮಣದ ಪ್ರಚಾರ ಮಾಡ್ತೀನಿ ಸರ್’ ಅಂದಿದ್ದೆ. ಹಾರ್ದಿಕವಾಗಿ ಮುಗುಳ್ನಗೆ ಹರಿದಿತ್ತು.

ಒಮ್ಮೆ ಪತ್ರಿಕೆಯೊಂದನ್ನು ತಡಕಿ ಕೊಂಚ ಗಾಸಿಪ್ ಆದಂತಹ ಸಮಯ. ಆ ಪತ್ರಿಕೆ ನನ್ನ ಹೆಸರು, ಊರಿನ ಹೆಸರನ್ನು ಆಚೀಚೆ ಮಾಡಿ ಗೊತ್ತೂ ಗೊತ್ತಾಗದಂತೆ ಚಿತ್ರವಿಚಿತ್ರ ಮಾಡಿ ವ್ಯಂಗ್ಯ ಮಾಡಿ ಪ್ರಕಟಿಸಿತ್ತು. ಅದನ್ನು ಓದಿದ್ದ ಚಂಪಾ ಸರ್ ತಕ್ಷಣ ಕರೆ ಮಾಡಿ ‘ಏನವ್ವ ಇದು ನೀನೇನಾ? ಪರವಾಗಿಲ್ಲ ಘಾಟಿ ಇದ್ದೀ’ ಅಂದು, ಅದಕ್ಕೆ ಕಾರಣವಾದ ಸಂಗತಿಗಳ ಬಗ್ಗೆ ತಿಳಿದುಕೊಂಡಿದ್ದರು. ಈ ರೀತಿಯ ಪ್ರಕ್ರಿಯೆಗಳ ಜೊತೆ ಮತ್ತಷ್ಟು ಕೆಲಸ ಮಾಡುವ ಅಗತ್ಯವಿದೆ. ಮುಂದೆ ನಿನ್ನನ್ನು ಸಂಪರ್ಕಿಸ್ತೇನೆ ಅಂದಿದ್ದರು.

ಸಂಕ್ರಮಣದAತಹ ಪತ್ರಿಕೆಯೊಂದನ್ನು ಐವತ್ತು ವರ್ಷಗಳ ಕಾಲ ಹೊರತರುವುದು ಸಾಧಾರಣ ಸಂಗತಿಯಲ್ಲ. ನಾನೂ ಕೂಡ ಪತ್ರಿಕೆಗೆ ಕೆಲ ಕಾಲ ಚಂದಾದಾರಳಾಗಿದ್ದೆ. ಚಂದಾ ನಂತರವೂ ಪತ್ರಿಕೆ ಕೆಲವೊಮ್ಮೆ ಕೈ ಸೇರುತ್ತಿರಲಿಲ್ಲ. ವಿಷಯ ತಿಳಿಸಿದರೆ ತಕ್ಷಣ ಕ್ರಮ ಕೈಗೊಳ್ಳುತ್ತಿದ್ದರು. ಚಂದಾಹಣ ಮುಗಿದಾಗ ಮಾತ್ರ ತಪ್ಪದೇ ಪತ್ರ ಬರೆಯುತ್ತಿದ್ದ ಚಂಪಾ ಸರ್, ಯಾವುದಾದರೂ ಕಾರ್ಯಕ್ರಮದಲ್ಲಿ ಸಿಕ್ಕರೆ ‘ಪತ್ರಿಕೆಗೆ ನಿನ್ನ ಚಂದಾಹಣ ಮುಗಿದಿದೆ ನೋಡವ್ವ’ ಅನ್ನುತ್ತಾ ನೆನಪಿನಲ್ಲಿಟ್ಟು ಹೇಳುವುದು ಮಾತ್ರ ಅಚ್ಚರಿ ಹುಟ್ಟಿಸುತ್ತಿತ್ತು.

ಯಾವುದಾದರೂ ಕಾರ್ಯಕ್ರಮದಲ್ಲಿ ಅವರ ಅಭಿಮಾನಿಗಳು ಅವರೊಂದಿಗೆ ಫೋಟೊ ತೆಗೆದುಕೊಳ್ಳಲು ಬಯಸಿದರೆ, ‘ಮೊದಲು ಪುಸ್ತಕ ಕೊಂಡುಕೊಳ್ಳಿ ಪುಸ್ತಕ ಕೊಂಡರೆ ಮಾತ್ರ ಫೋಟೊ’ ಅನ್ನುತ್ತಿದ್ದುದು ನಮಗೆಲ್ಲ ನಗು ತರಿಸಿದರೂ ಅವರ ಬದ್ಧತೆ ಬಗ್ಗೆ ಮಾತ್ರ ಮೆಚ್ಚುಗೆಯಾಗುತ್ತಿತ್ತು.

ಸಿ.ಪ. ಸರ್, ಗಿರಡ್ಡಿ ಸರ್ ಮತ್ತು ಚಂಪಾ ಸೇರಿ ಆರಂಭಿಸಿದ್ದ ಸಂಕ್ರಮಣ ಪತ್ರಿಕೆ ಚಂಪಾರ ಸತತ ಹಠ ಹಾಗೂ ನಿರಂತರ ಪ್ರಯತ್ನಗಳ ಮೂಲಕವೇ ಐವತ್ತು ವರ್ಷಗಳು ನಾಗಾಲೋಟ ಕಂಡಿದ್ದು ಮಾತ್ರ ಸೋಜಿಗವೇ ಸರಿ. ನಾಡಿನ ಕವಿಗಳ, ಬರಹಗಾರರ ವಿಳಾಸ ಸಮೇತ ಸಂಪುಟಗಳನ್ನು ತರುವ ಯೋಜನೆ ಕೂಡ ರೂಪಿಸಿದ್ದರು. ನನ್ನ ಮಾಹಿತಿಯನ್ನೂ ಕೂಡ ಕೇಳಿ ತೆಗೆದುಕೊಂಡಿದ್ದರು.

ಪತ್ರಿಕೆಯಲ್ಲಿ ತಮಗೆ ಸರಿಯೆನಿಸಿದ್ದನ್ನು ಮತ್ತು ಹೇಳಬೇಕಿದ್ದನ್ನು ಯಾವುದೇ ಭೀತಿಯಿಲ್ಲದೆ ನಿರ್ಭೀಡೆಯಿಂದ ಹೇಳುತ್ತಿದ್ದ ಪರಿ ಮಾತ್ರ ಯಾವತ್ತಿಗೂ ಮಾದರಿಯ ವಿಷಯ. ಇದರಿಂದಾಗಿ ಅವರಿಗೆ ಸ್ನೇಹಿತರಿದ್ದಷ್ಟೆ ಸಂಖ್ಯೆಯಲ್ಲಿ ವಿರೋಧಿಗಳೂ ಇದ್ದದ್ದು ಅಚ್ಚರಿಯೇನಲ್ಲ. ಆದರೆ ಯಾವುದಕ್ಕೂ ಜಗ್ಗದ ವ್ಯಕ್ತಿತ್ವವೊಂದನ್ನು ನಾನವರಲ್ಲಿ ಕಂಡಿದ್ದೆ.

ಯಡಿಯೂರಪ್ಪನವರು ಕ.ಜ.ಪಾ. ಕಟ್ಟಿದಾಗ ತಾವೂ ಸಹ ಅವರೊಂದಿಗೆ ಸೇರಿಕೊಂಡಿದ್ದು ಕೆಲವು ಕಾಲ ಗೊಂದಲ ಹುಟ್ಟಿಸಿತ್ತು. ಅವರ ಚರ್ಯೆಗಳನ್ನು ವಿಭಿನ್ನವಾಗಿ ಕಾಣುವಂತೆ ಮಾಡಿತ್ತು. ಕರ್ನಾಟಕ ರಕ್ಷಣಾ ವೇದಿಕೆ ಜೊತೆಗೂ ಸಂಪರ್ಕವನ್ನೂ ಇಟ್ಟುಕೊಂಡಿದ್ದರು. ಕ.ರ.ವೆ. ಅರಸೀಕೆರೆಯಲ್ಲಿ ಕಾರ್ಯಕ್ರಮವೊಂದನ್ನು ಮಾಡಿದ್ದಾಗ ಶ್ರೀ ನಾರಾಯಣಗೌಡರ ಜೊತೆ ಅವರು ಆಗಮಿಸಿದ್ದು ಇನ್ನೂ ನೆನಪಿನಲ್ಲಿದೆ.

ಸಮಯದ ಕಾಲಾನುಕ್ರಮಣಿಕೆಯಲ್ಲಿ ತಮ್ಮದೇ ನಿಲುವು ಹಾಗೂ ಚಾಪನ್ನು ಮೂಡಿಸುತ್ತಾ ಬದುಕಿದ್ದ ವಿಶೇಷ ವ್ಯಕ್ತಿತ್ವದ ಚಂಪಾರನ್ನು ವಿಡಂಬನೆ ಹಾಗೂ ಟೀಕೆಯಲ್ಲದೆ ಸಹಜ ಸಾಧಾರಣವೆಂಬಂತೆ ನೋಡಿದ್ದು ಕಡಿಮೆ.
ಕಡೆಯ ಘಳಿಗೆಗಳಲ್ಲಿ ಆಗಾಗ್ಗೆ ಅವರ ಆರೋಗ್ಯದ ಕುರಿತು ಗೆಳೆಯರಿಂದ ಮಾಹಿತಿ ಪಡೆಯುತ್ತಿದ್ದುದಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಅವರ ಫೋಟೊಗಳು ಕಾಣಿಸಿಕೊಳ್ಳುತ್ತಿದ್ದವು. ಬೇಗ ಚೇತರಿಸಿಕೊಳ್ಳುತ್ತಾರೆ, ಗುಣವಾಗುತ್ತಾರೆ ಎಂಬ ನಂಬುಗೆಯಿತ್ತು. ಎಲ್ಲವನ್ನೂ, ಎಲ್ಲರನ್ನೂ ತೊರೆದು ಅವರೀಗ ನಿರ್ಗಮಿಸಿದ್ದಾರೆ. ಅವರ ವ್ಯಕ್ತಿತ್ವ ಮರೆಯುವ ಸಂಗತಿಯಲ್ಲ.

‍ಲೇಖಕರು Admin

January 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಕೊಟ್ರೇಶ್ ಅರಸೀಕೆರೆ

    ಒಳ್ಳೆಯ ಚಿತ್ರಣ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: