ಜಗವ ಸುತ್ತುವ ಮುನ್ನ…

ಸುಚಿತ್ರಾ ಹೆಗಡೆ

ಜಗವ ಸುತ್ತುವ ಮಾಯೆ ನನಗೆ ಇಂದಿನದ್ದಲ್ಲ. ನನ್ನ ಹೆಜ್ಜೆಗಳು ತಾವಾಗಿ ತನ್ನ ದಾರಿಯನ್ನು ಹುಡುಕಿಕೊಳ್ಳುವ ಮತ್ತು ನನ್ನ ಹೃದಯ ಭಿನ್ನವಾದ ರಾಗವನ್ನು ಕಲಿಯುವ ತಾಣವೇನಾದರೂ ಇದ್ದರೆ ಅದೇ ಪ್ರವಾಸ. ನನಗೆ ಬುದ್ಧಿ ತಿಳಿದಾಗಿನಿಂದ ಈ ಪ್ರವಾಸದ ಹುಚ್ಚು ನನ್ನ ಜೊತೆಗೆ ಬೆಳೆಯುತ್ತಲೇ ಬಂದಿದೆ. ಇದು ನನ್ನ ಕನಸುಗಳ ತಂಗುದಾಣ. ನಿಮಿಷಾರ್ಧದಲ್ಲಿ ರೆಕ್ಕೆಗಳನ್ನು ಮೂಡಿಸುವ ಇಂದ್ರಜಾಲ. ಕಂಡು ಕೇಳರಿಯದ ಸಾಧ್ಯತೆಗಳನ್ನು ತಂದಿಡುವ ಕಿನ್ನರಲೋಕ. ಅಹಂಕಾರವು ಆತ್ಮವಿಶ್ವಾಸವಾಗಿ ಬದಲಾಗುವ ವಿಕಸನ. ನನ್ನೊಳಗೆ ಕುಡಿಯೊಡೆಯುವ ಸುಂದರ ಧ್ಯಾನ. ನಾನು ನಾನಾಗಿಯೇ ಇರುವ ಪರಮ ಸುಖ.

ನನ್ನ ಜೀವನದ ಅತಿ ದೀರ್ಘ, ಸಾಹಸಮಯ ಮತ್ತು ಅತ್ಯಂತ ಅನಿಶ್ಚಿತವಾದ ಮದುವೆಯೆಂಬ ಪ್ರವಾಸದಲ್ಲಿ ನನ್ನ ಜೊತೆಯಾಗಿ, ಇದನ್ನೊಂದು ಸುಮಧುರ ಪಯಣವನ್ನಾಗಿಸಿದ ನನ್ನ ಬಾಳಸಂಗಾತಿ ನನ್ನ ಅತಿ ದೊಡ್ಡ ಶಕ್ತಿ. ಇತ್ತೀಚೆಗೆ ನನ್ನಷ್ಟೇ ಪ್ರವಾಸದ ಹುಚ್ಚಿನ ಮಗಳು ನನ್ನ ತಿರುಗಾಟಗಳಿಗೆ ಜೊತೆಯಾಗಿರುವುದು ಪ್ರವಾಸಗಳ ಮಜವನ್ನು ದ್ವಿಗುಣಗೊಳಿಸಿದೆ. ಪತಿಯ ವರ್ಗಾವಣೆಯ ನೆಪದಲ್ಲಿ ಊರೂರು ಸುತ್ತತೊಡಗಿದಾಗಲೇ ನಿಜವಾದ ಅರ್ಥದಲ್ಲಿ ಜಗತ್ತಿನ ಪರಿಚಯವಾದದ್ದು. ಮೊದಮೊದಲು ಗಂಡನ ಜೊತೆಗೇ ದೇಶ ವಿದೇಶಗಳನ್ನು ಬೆರಗುಗಣ್ಣಿನಲ್ಲೇ ಸುತ್ತಿದ್ದಾಯ್ತು. ಮುಖ್ಯವಾದ ಪ್ರೇಕ್ಷಣೀಯ ಸ್ಥಳಗಳು, ಪುಣ್ಯ ಕ್ಷೇತ್ರಗಳು, ಶಿಲ್ಪಕಲೆಯ ತಾಣಗಳ, ಹಿಮಾಚ್ಛಾದಿತ ಪರ್ವತಗಳು, ರಾಜಸ್ಥಾನದ ಮರುಭೂಮಿ, ಈಶಾನ್ಯ ರಾಜ್ಯಗಳ ರಮಣೀಯ ಪ್ರಕೃತಿ, ಮಹಾನಗರಗಳ ವೈಭವ…ಹೀಗೆ ನನ್ನ ಭಾರತ ದರ್ಶನದ ತಿರುಗಾಟಗಳನ್ನು ನೆನಪಿಸಿಕೊಂಡಾಗ ನಮ್ಮ ದೇಶದ ವೈವಿಧ್ಯಕ್ಕೆ ಮನಸೋಲುತ್ತದೆ.

ಅರಿವಿನ ಕ್ಷಿತಿಜ ವಿಸ್ತಾರವಾದಂತೆ, ಜ್ಞಾನದ ಪರಿಧಿ ದೊಡ್ಡದಾದಂತೆ ಬದುಕಿಗೊಂದು ಗುರಿ, ಲಯ ಮತ್ತು ಸಣ್ಣಗೆ ಆತ್ಮವಿಶ್ವಾಸ ಮೊಳೆಯತೊಡಗಿತ್ತು. ಯುರೋಪಿನ ದೇಶಗಳನ್ನು ನೋಡುತ್ತಿದ್ದಂತೆ ಚರಿತ್ರೆಯನ್ನು ಬಾಟಲಿಯಲ್ಲಿಟ್ಟು ಸಂರಕ್ಷಿಸಿದ ರೀತಿ ತುಂಬ ಇಷ್ಟವಾಗಿತ್ತು. ಆ ಓಲ್ಡ್ ವರ್ಲ್ಡ್ ಚಾರ್ಮ್ ನಿಂದ ತಪ್ಪಿಸಿಕೊಳ್ಳಲಾಗದೇ ಯುರೋಪಿನ ಚಿಕ್ಕಪುಟ್ಟ ದೇಶಗಳನ್ನೂ ಬಿಡದೇ ಪದೇ ಪದೇ ಹೋಗಿದ್ದೇನೆ. ವಿವಿಧ ಋತುಮಾನಗಳಲ್ಲಿ ಒಂದೊಂದು ರೂಪ ತಾಳುವ ಆ ದೇಶಗಳ ಸೌಂದರ್ಯ, ಚೊಕ್ಕ ಪರಿಸರ ಮತ್ತು ಶಿಸ್ತು ಗಮನಿಸಿ ಸಂತಸಪಟ್ಟಿದ್ದೇನೆ.

ಯುರೋಪು ದೇಶಗಳ ಅತಿ ದೊಡ್ಡ ಪ್ಲಸ್ ಪಾಯಿಂಟ್ ಅಲ್ಲಿನ ಸುರಕ್ಷತೆ. ಲಿಂಗ ತಾರತಮ್ಯವಿಲ್ಲದೇ ಆ ದೇಶಗಳುದ್ದಕ್ಕೂ ಒಂಟಿಯಾಗಿ, ಯಾವುದೇ ವೇಳೆಯಲ್ಲೂ, ಯಾವ ಅಭದ್ರತೆಯ ಭಾವನೆಗಳಿಲ್ಲದೇ ನಿರಾಳವಾಗಿ ಸಂಚರಿಸಬಹುದು. ಹುಟ್ಟಿದಾಗಿನಿಂದ ‘ಒಬ್ಬಳೇ ಎಲ್ಲೂ ಹೋಗಬೇಡ, ಕತ್ತಲಾಗುವ ಮೊದಲೇ ಮನೆ ಸೇರು’ ಮೊದಲಾದ ಮಾತುಗಳನ್ನು ಕೇಳಿ ಬೆಳೆದ ನನ್ನಂತವರಿಗೆ ಎಷ್ಟೊತ್ತಿಗೂ ಎಲ್ಲಾದರೂ ನಿರ್ಭಯದಿಂದ ಸುತ್ತಬಹುದು ಎನ್ನುವ ಅದ್ಭುತ ಸ್ವಾತಂತ್ರ್ಯವನ್ನು ದಯಪಾಲಿಸಿದ ಯುರೋಪಿನ ದೇಶಗಳಿಗೆ ನಾನು ಚಿರಋಣಿ.
ಹಾಗೆಯೇ ಏಷ್ಯಾದ, ಆಫ್ರಿಕಾದ ಬಹುತೇಕ ದೇಶಗಳನ್ನು ಸುತ್ತಿ ಅವುಗಳ ವಿಭಿನ್ನ ಸಂಸ್ಕೃತಿಗಳನ್ನು ಅರಿಯಲು ಪ್ರಯತ್ನಿಸಿದ್ದೇನೆ. ಕ್ರಮೇಣ ಈ ತಿರುಗಾಟಗಳು ಪ್ರತಿಯೊಂದು ವಿಷಯವನ್ನೂ ಒಂದು ಅನುಭವದಂತೆ ಪರಿಗಣಿಸುವ ಮನಸ್ಥಿತಿ ಬೆಳೆಸಿ ಎಲ್ಲ ಪಯಣಗಳೂ ಸ್ಮರಣೀಯವಾಗುವಂತೆ ಮಾಡಿವೆ.

ನನ್ನ ಅಪ್ಪ ಅಮ್ಮನ ಜೊತೆಗೆ, ಗಂಡನೊಟ್ಟಿಗೆ, ಗೆಳತಿಯೊಂದಿಗೆ, ಒಂಟಿಯಾಗಿ ಅಷ್ಟೇ ಅಲ್ಲ, ಇತ್ತೀಚೆಗೆ ನನ್ನ ಗೆಳತಿಯಂಥ ಮಗಳ ಜೊತೆಯಾಗಿ…ಹೀಗೆ ಪ್ರತಿ ಪ್ರವಾಸವನ್ನೂ ವಿಭಿನ್ನ ನೆಲೆಯಲ್ಲಿ ಆನಂದಿಸಿದ್ದೇನೆ. ತೀರ್ಥಯಾತ್ರೆಯೇ ಇರಲಿ, ಗಿರಿಧಾಮಗಳಾಗಿರಲಿ, ದಟ್ಟಕಾಡಿನ ಮಧ್ಯವಾದರೂ ಸರಿ, ಜನನಿಬಿಡ ಶಹರವೇ ಇರಲಿ, ಅಪರಿಚಿತ ದೇಶವಾಗಲಿ ಎಲ್ಲವನ್ನೂ ಅದೇ ಉತ್ಸಾಹದಲ್ಲಿ ಆನಂದಿಸುತ್ತೇನೆ. ಅಲ್ಲಿಯ ಭಾಷೆ, ಸಂಸ್ಕೃತಿ, ಸಭ್ಯತೆಗಳ ಪರಿಚಯ ಮಾಡಿಕೊಳ್ಳುವದರ ಜೊತೆಗೆ ಅವರ ಆಹಾರದ ವೈವಿಧ್ಯವನ್ನೂ ಸವಿಯುತ್ತೇನೆ. ಇಲ್ಲಿ ಐಷಾರಾಮಿ, ಸಾಮಾನ್ಯ, ದೇಶ, ವಿದೇಶಗಳೆಂಬ ಯಾವ ಭೇದವೂ ಇಲ್ಲ. ನನಗೆ ಪ್ರವಾಸ ಎನ್ನುವುದೇ ಬಿಡುಗಡೆಯ ಭಾವ… truly liberating experience. ಒಂದು ಮಗುವಾಗಿ, ಈ ಅದ್ಭುತರಮ್ಯವಾದ ಜಗತ್ತೆಂಬ ಆಟಿಗೆಯಂಗಡಿಯಲ್ಲಿ ಕಳೆದುಹೋಗುವ ಕ್ರಿಯೆ.

ಬೆರಳ ತುದಿಯಲ್ಲೇ ಮಾಹಿತಿಯ ಮಹಾಪೂರವಿರುವ ಈ ಕಾಲದಲ್ಲಿ, ಪ್ರವಾಸಿ ಸ್ಥಳಗಳ ದೀರ್ಘ ವಿವರಣೆಗಳಿಗಿಂತ ವಿಭಿನ್ನ ದೃಷ್ಟಿಕೋನದ, ಅಲ್ಲಿಯ ಜನರ ಜೊತೆ ಬೆರೆತು ಒಡನಾಡಿದ ಕಥನಗಳು ಸೂಕ್ತವೆಂದು ನನಗನಿಸಿದೆ. ಕಳೆದ ಒಂದು ದಶಕದಲ್ಲಿ ಒಂದು ಮಹತ್ವದ ಉದ್ಯಮವಾಗಿ ಬದಲಾದ ಪ್ರವಾಸೋದ್ಯಮದ ಚಿತ್ರಣದೊಂದಿಗೆ ನನ್ನ ವೈಯಕ್ತಿಕ ಅನುಭವಗಳನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದೇನೆ.

ಇಲ್ಲಿನ ಬರಹಗಳು ನನ್ನ ಪಯಣಗಳಂತೆ. ಅದೇ ದೇಶ ಅದೇ ಜಾಗವೆಂಬ ಸಂಕೋಲೆ ತೊಟ್ಟಿಲ್ಲ.
ನನ್ನ ಮನದ ಕಣ್ಣುಗಳಿಂದ ಕಂಡಷ್ಟು ಪ್ರಪಂಚವನ್ನು ಎದೆಯ ಬೊಗಸೆಯಲ್ಲಿ ಹಿಡಿದಿಡುವ ಪ್ರಾಮಾಣಿಕ ಪ್ರಯತ್ನವಿದು. ಪ್ರವಾಸದ ಪ್ರತಿ ಕ್ಷಣವನ್ನೂ ಜೀವಿಸುವ ಅಪ್ಪಟ ಪ್ರವಾಸಿಯ ಸಂಚಾರಿ ಭಾವಲಹರಿ.

‍ಲೇಖಕರು Admin

June 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: