ಪಿ ಪಿ ಉಪಾಧ್ಯ ಸರಣಿ ಕಥೆ 39- ಎಲ್ಲವೂ ಸುರುವಿನಿಂದಲೇ ಆಗಬೇಕು…

ಪಿ ಪಿ ಉಪಾಧ್ಯ

39

ಅಎಲ್ಲವೂ ಸುರುವಿನಿಂದಲೇ ಆಗಬೇಕು.

ದೇಶದೊಳಗಿನ ತಮ್ಮ ಪ್ರವಾಸದ ಭೇಟಿಯ ಯಶಸ್ಸಿನಿಂದ ಉತ್ಸಾಹಿತರಾಗಿದ್ದ ಶಾಸ್ತ್ರೀಗಳು ತಮ್ಮ ಮುಂದಿನ ಯೋಜನೆ ವಿದೇಶ ಪ್ರಯಾಣವೇ ಎಂದು ಲೆಕ್ಕ ಹಾಕಿದ್ದರು. ಒಂದು ವೇಳೆ ಅದು ಆಗುವುದೇ ಆದರೆ ಪ್ರೊಫೆಸರ್ ಗಣೇಶ್ ಕೂಡ ತಮ್ಮೊಂದಿಗೆ ಬರಬೇಕು ಎಂದು ಆಗಲೇ ಹೇಳಿಟ್ಟಿದ್ದರು. ಅವರೂ ಹೂಂಗುಟ್ಟಿದ್ದರು. ವಿದೇಶ ಪ್ರವಾಸದ ಆಕರ್ಷಣೆ ಒಂದು ಕಡೆಯಾದರೆ ತನ್ನ ಜ್ಞಾನ ವೃದ್ಧಿಗೆ ಮತ್ತು ಸಂಶೋಧನೆಗೆ ಸಹಾಯಕವಾಗಬಹುದಾದ ವಿಷಯಗಳೇನಾದರೂ ದೊರಕಬಹುದೆನ್ನುವ ಆಸೆ ಪ್ರೊಫೆಸರರಿಗೆ.

ದೇಶದೊಳಗಿನ ಬೇರೆ ಬೇರೆ ಜಾಗಗಳಿಗೆ ಹೋಗುವುದಕ್ಕೇ ತಿಂಗಳುಗಟ್ಟಲೆ ತಯಾರಿ ಬೇಕಾಗಿತ್ತು. ಪ್ರಸಂಗಗಳ ತಾಲೀಮು ನಡೆಸುವುದರೊಂದಿಗೆ ಪ್ರಯಾಣ ಮತ್ತು ಆಯಾ ಜಾಗಗಳಲ್ಲಿನ ಶೋಗಳ ಪರವಾನಗಿ ಬಗ್ಗೆ ಕಾಗದ ಪತ್ರಗಳನ್ನು ತಯಾರಿಸುವ ಕೆಲಸವೂ ಆಗಬೇಕಾಗಿತ್ತು. ಅದೇ ಈಗ ಬೇರೆ ದೇಶಗಳಿಗೆ ಹೋಗಬೇಕೆಂದರೆ ಮೊದಲು ಅಲ್ಲಿ ಇವರ ಕಾರ್ಯಕ್ರಮವನ್ನು ಪ್ರಾಯೋಜಿಸುವವರನ್ನು ಹುಡುಕಬೇಕು. ಇಲ್ಲಿಗೆ ಬಂದಾಗ ‘ನೀವು ನಮ್ಮಲ್ಲಿಗೆ ಬರಬೇಕು. ಅಲ್ಲಿ ನಾವೇ ನಿಮ್ಮ ಕಾರ್ಯಕ್ರಮಗಳನ್ನು ಪ್ರಾಯೋಜಿಸುತ್ತೇವೆ’ ಎಂದೆಲ್ಲ ಹೇಳಿ ಹೋಗುವವರು ಅಲ್ಲಿಗೆ ತಿರುಗಿ ಹೋದ ನಂತರ ತಮ್ಮ ಆಶ್ವಾಸನೆಯನ್ನು ನೆನಪಿಟ್ಟುಕೊಳ್ಳುವುದೇ ಇಲ್ಲ. ಇವರಾಗಿಯೇ ಕಾಗದ ಬರೆದು ಸಂಪರ್ಕಿಸಲು ಪ್ರಯತ್ನಿಸಿದರೂ ಸರಿಯಾಗಿ ಉತ್ತರ ಕೊಡಲೊಲ್ಲರು. ಒಂದೊಮ್ಮೆ ಉತ್ತರಿಸಿದರೂ ಅದರಲ್ಲಿ ತಮ್ಮ ಕಷ್ಟಗಳದ್ದೇ ಪಟ್ಟಿ. ‘ಇಲ್ಲಿ ನಮ್ಮ ದೇಶದಂತಲ್ಲ. ಹಾಗೆಲ್ಲ ಕಾರ್ಯಕ್ರಮಗಳನ್ನು ಕೊಡಲು ಆಗುವುದಿಲ್ಲ. ಹತ್ತು ಹಲವು ಅಡೆ ತಡೆಗಳಿರುತ್ತವೆ. ಈ ದೇಶದಲ್ಲಿ ಇಲ್ಲದ್ದು ಅಂತಹುದೇನಿದೆ ನಿಮ್ಮಲ್ಲಿ ಎನ್ನುವ ಅಸಂಬದ್ಧದ ಪ್ರಶ್ನೆಗಳಿಗೆ ಉತ್ತರಿಸಬೇಕು’ ಎಂದೆಲ್ಲ ಬರೆದು ನುಣಚಿಕೊಳ್ಳಲು ಯತ್ನಿಸುತ್ತಾರೆ. ಅಷ್ಟಾಗಿಯೂ ತಮ್ಮೂರ ಕಲಾವಿದರನ್ನು ಕರೆಸಿಕೊಳ್ಳಬೇಕೆಂಬ ಮನಸ್ಸಿದ್ದವರಿಗೆ ಹಣದ ಅಡಚಣಿ. `ಈಗೀಗ ಇಲ್ಲಿ ನಮ್ಮ ಆರ್ಥಿಕ ಸ್ಥಿತಿಯೂ ಅಷ್ಟು ಚನ್ನಾಗಿಲ್ಲ. ಬೇಕಾದರೆ ನೀವೇ ಪ್ರಯಾಣದ ಖರ್ಚನ್ನು ಹಾಕಿಕೊಂಡು ಬರುವುದಾದರೆ ಇಲ್ಲಿ ಉಳಿದುಕೊಳ್ಳುವ ಮತ್ತು ಊಟ ತಿಂಡಿಯ ವ್ಯವಸ್ಥೆಯನ್ನು ಮಾಡಬಹುದು. ನಮ್ಮವರೇ ಒಂದೆಂಟು ಜನರ ಮನೆಗಳಲ್ಲಿ ಒಬ್ಬರೋ ಇಬ್ಬರೋ ಉಳಿದುಕೊಳ್ಳಬಹುದು’ ಎಂದೂ ಹೇಳುತ್ತಾರೆ. ಅವರು ಅಷ್ಟೆಲ್ಲ ಹೇಳಿದ ಮೇಲೆಯೂ ಒತ್ತಾಯವಾಗಿ ಹೋಗುವ ಮನಸ್ಸು ಶಾಸ್ತಿçಗಳಿಗಿಲ್ಲ.

ಆದರೆ ಅಪರೂಪಕ್ಕೊಮ್ಮೆ ಈ ಎಲ್ಲವನ್ನೂ ಮೀರಿ ಊರವರನ್ನು ಕರೆಸಿಕೊಳ್ಳಬೇಕೆಂಬ ಆಸೆಯವರೂ ಇರುತ್ತಾರೆ. ತಮ್ಮ ಹೆಗ್ಗಳಿಕೆಯನ್ನು ತೋರಿಸಿಕೊಳ್ಳುವ ಬಯಕೆಯೂ ಇದ್ದೀತು. ಆದರೆ ಆಹ್ವಾನಿತರಿಗೆ ಅದರ ಬಗ್ಗೆ ಕಾಳಜಿಯಿಲ್ಲ. ಹೊರ ದೇಶಕ್ಕೆ ಹೋಗುವ ತಮ್ಮ ಆಸೆ ಪೂರೈಸಿತಲ್ಲ ಎನ್ನುವ ತೃಪ್ತಿ ಅಷ್ಟೆ.

ಹಾಗಿರುವಾಗಲೇ ಅಮೆರಿಕದ ಒಂದು ಪಟ್ಟಣದಿಂದ ಶಾಸ್ತಿçಗಳ ಮತ್ತು ಅವರ ತಂಡಕ್ಕೆ ಆಹ್ವಾನ ಬಂತು. ಒಂದು ಲೆಕ್ಕದಲ್ಲಿ ಪ್ರೊಫೆಸರ್ ಗಣೇಶರ ವಿದ್ಯಾರ್ಥಿಗಳೇ ಆಗಿದ್ದ ನಾಲ್ಕಾರು ಜನ ಸೇರಿ ಕಟ್ಟಿಕೊಂಡ ಸಂಘ ಅಲ್ಲಿಯದು. ಪ್ರೊಫೆಸರ್ ಗಣೇಶರೇ ಅವರೊಂದಿಗೆ ಮಾತನಾಡುವಾಗ ಆ ಬಗ್ಗೆ ಸೂಚನೆ ಕೊಟ್ಟಿದ್ದು. ಮೊದಲಿಗೆ ಪ್ರೊಫೆಸರು ಹೇಳುತ್ತಿದ್ದಾರೆಂಬ ದಾಕ್ಷಿಣ್ಯಕ್ಕೆನ್ನುವಂತೆ ಒಪ್ಪಿದ ಅವರು ಮುಂದೆ ಪ್ರೊಫೆಸರ್ ಅವರೇ ಕಳುಹಿಸಿದ ಇಲ್ಲಿನ ಪೇಪರ್ ಕಟ್ಟಿಂಗ್ ಮತ್ತು ವಾರ್ತಾ ಪತ್ರಿಕೆಗಳ ವರದಿಗಳನ್ನು ನೋಡಿದ ಮೇಲೆ ನಿಜವಾಗಿಯೂ ಆಸಕ್ತರಾಗಿದ್ದರು. ಹಾಗೆಯೇ ನೇರವಾಗಿಯೇ ಶಾಸ್ತಿçಗಳಿಗೆ ಬರೆದಿದ್ದರು. ಹಾಗೆ ಬರೆಯುವಾಗ ಪ್ರೊಫೆಸರರ ಹೆಸರನ್ನು ಬಳಸಿಕೊಳ್ಳಲು ಮಾತ್ರ ಮರೆತಿರಲಿಲ್ಲ.

ಒಪ್ಪಿಗೆ ಪತ್ರವನ್ನು ಕಳುಹಿಸಲು ಶಾಸ್ತಿçಗಳೂ ತಡಮಾಡಲಿಲ್ಲ. ಕೂಡಲೇ ಕಳುಹಿಸಿದರು. ಹಾಗೆ ಒಪ್ಪಿದ ಮೇಲೆ ಮುಂದಿನ ಕೆಲಸಗಳ ಬಗ್ಗೆ ಗಮನ ಹರಿಸಬೇಕಲ್ಲ. ತಂಡವನ್ನು ಹೊಸತಾಗಿಯೇ ರಚಿಸಬೇಕೇ ಇಲ್ಲ ಈಗಾಗಲೇ ತರಬೇತಾದ ತಂಡವನ್ನೇ ಕರೆದುಕೊಂಡು ಹೋಗುವುದೇ ಎನ್ನುವುದು ತೀರ್ಮಾನವಾಗಬೇಕು. ಪ್ರಸಂಗಗಳ ಆಯ್ಕೆಯಾಗಬೇಕು. ಈಗಾಗಲೇ ಆಡಿದ ಪ್ರಸಂಗಗಳಾದರೂ ವಿದೇಶದ ಪ್ರೇಕ್ಷಕರಿಗೆ ಒಗ್ಗುವಂತೆ ತುಸು ಮಾರ್ಪಾಡು ಮಾಡಬೇಕು. ನಮ್ಮವರೇ ಅಲ್ಲಿಗೆ ಹೋದವರಾದರೂ ಅಲ್ಲಿ ಹೋದ ನಂತರ ತಮ್ಮ ಅಭಿರುಚಿಯನ್ನು ಬದಲಾಯಿಸಿಕೊಂಡಿರುತ್ತಾರೆ. ಏನಿಲ್ಲವೆಂದರೂ ಅಲ್ಲಿನ ಸ್ಥಳೀಯ ಪೇಪರಿನವರು ಬಂದಿರುತ್ತಾರೆ. ಇನ್ನೂ ತುಸು ಹೆಚ್ಚು ಕೆಲಸ ಮಾಡಿದರೆ ಸ್ಥಳೀಯ ಟಿವಿ ಚಾನೆಲ್‌ನವರೂ ಬರುತ್ತಾರೆ.

ಪ್ರದರ್ಶನ ನೀಡುವಾಗ ಅವರ ಅಭಿರುಚಿಯನ್ನೂ ಗಮನದಲ್ಲಿಟ್ಟುಕೊಳ್ಳಬೇಕು ಎನ್ನುವುದು ಅಲ್ಲದಿದ್ದರೂ ಅವರಿಗೆ ಅರ್ಥವಾದರೂ ಆಗಬೇಕಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿ ಪ್ರಸಂಗಗಳ ಅವಧಿಯನ್ನು ಒಂದೂವರೆ ಗಂಟೆ ಅಥವಾ ಎರಡು ಗಂಟೆಗಳಿಗೆ ಇಳಿಸಬೇಕು. ಇಲ್ಲಿನ ಹಾಗೆ ಎರಡೂವರೆ ಮೂರು ಗಂಟೆ ಕುಳಿತು ನೋಡುವ ಸಮಯ ಮತ್ತು ತಾಳ್ಮೆ ಅಲ್ಲಿನ ಜನರಿಗೆ ಇಲ್ಲ. ಇದೆಲ್ಲ ಮುನ್ನಚ್ಚರಿಕೆಯ ಮಾತುಗಳನ್ನು ಕರೆಸಿಕೊಳ್ಳುವ ವ್ಯವಸ್ಥೆ ಮಾಡಿದವರೇ ಸೂಚ್ಯವಾಗಿ ಹೇಳಿದ್ದರು. ಈ ಎಲ್ಲ ವಿಷಯಗಳ ಚರ್ಚೆಯಲ್ಲೂ ಪ್ರೊಫೆಸರರನ್ನು ಸೇರಿಸಿಕೊಳ್ಳಬೇಕೆಂದುಕೊಂಡಿದ್ದರೂ ಯುನಿವರ್ಸಿಟಿಯಲ್ಲಿನ ಪರೀಕ್ಷೆ ಜೊತೆಗೆ ಎರಡನೆ ಹೆರಿಗೆಗೆ ತಯಾರಾದ ಹೆಂಡತಿಗೆ ತುಸು ಆರೋಗ್ಯದ ಸಮಸ್ಯೆ ಎಲ್ಲ ಸೇರಿ ಆಗಾಗ್ಗೆ ಬರಲಿಕ್ಕಾಗದಿದ್ದ ಅವರು ಶಾಸ್ತ್ರೀಗಳಿಗೇ ಪೂರ್ಣ ಜವಾಬ್ದಾರಿ ಹೊತ್ತುಕೊಳ್ಳಲು ಹೇಳಿದ್ದರು. ಅವರು ಏನು ಮಾಡಿದರೂ ಅದು ತನಗೆ ಒಪ್ಪಿಗೆ ಎಂದೂ ಸೇರಿಸಿದ್ದರು. 

ಪ್ರಸಂಗಗಳಲ್ಲಿ ತೀರ ಸ್ಥಳೀಯವಾದ ಕೆಲವು ದೃಶ್ಯಗಳನ್ನು ಕೈಬಿಟ್ಟು ಎಲ್ಲರಿಗೆ ಅರ್ಥವಾಗುವಂತಹವುಗಳನ್ನು ಮಾತ್ರ ಇಟ್ಟುಕೊಳ್ಳಬೇಕು. ತಂಡವನ್ನು ಈ ಹೊಸ ಪರಿಯ ಆಟಕ್ಕೆ ತಯಾರಿ ಮಾಡಿಕೊಳ್ಳುವುದರ ಜೊತೆಗೆ ಪ್ರಸಂಗದ ಸೂಕ್ಷ್ಮಗಳನ್ನು ಮತ್ತು ಇಡೀ ಕಥೆಯನ್ನು ಅದರ ಹಿನ್ನೆಲೆಯೊಂದಿಗೆ ಆ ದೇಶದ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಟಿಪ್ಪಣಿಗಳನ್ನು ತಯಾರು ಮಾಡಿ ಮುದ್ರಿಸಿ ಇಟ್ಟುಕೊಳ್ಳಬೇಕು. ಒಂದೇ ಎರಡೇ..

ಎಲ್ಲಕ್ಕಿಂತ ಹೆಚ್ಚಾಗಿ ಆಯಾ ದೇಶಗಳಿಗೆ ಹೋಗಲು ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ತಯಾರು ಮಾಡಿಕೊಳ್ಳಬೇಕು. ಶಾಸ್ತಿçಗಳು ಮತ್ತು ಪ್ರೊಫೆಸರನ್ನು ಬಿಟ್ಟರೆ ಬೇರೆ ಯಾರ ಹತ್ತಿರ ಪಾಸ್‌ಪೋರ್ಟ್ ಕೂಡ ಇಲ್ಲ. ಪಾಪ ಇಂತಹ ಹಳ್ಳಿಯಲ್ಲಿ ಹೊಟ್ಟೆ ಪಾಡಿಗೋಸ್ಕರ ಯಕ್ಷಗಾನದ ಕುಣಿತವನ್ನು ಕಲಿಯಲು ಬರುವ ಆ ಮಂದಿಗೆ ಪಾಸ್‌ಪೋರ್ಟಿನ ಅಗತ್ಯವಾದರೂ ಎಲ್ಲಿತ್ತು. ಹಾಗಾಗಿ ಎಲ್ಲವೂ ಸುರುವಿನಿಂದಲೇ ಆಗಬೇಕು.

ಕೂಡಲೇ ಶಾಸ್ತ್ರೀಗಳು ಕಾರ್ಯಪ್ರವರ್ತರಾಗಿದರು. ನಾಲ್ಕು ಪ್ರಸಂಗಗಳನ್ನು ಆಯ್ಕೆ ಮಾಡಿ ಪಾತ್ರಧಾರಿಗಳನ್ನು ಗುರುತಿಸಿದರು. ಸಾಧ್ಯವಾದ ಮಟ್ಟಿಗೆ ಒಬ್ಬನೇ ನಾಲ್ಕು ಪ್ರಸಂಗಗಳಲ್ಲೂ ಪಾತ್ರ ಮಾಡುವಂತಹವನನ್ನೇ ಹುಡುಕಿದರೆ ಕರೆದುಕೊಂಡು ಹೋಗುವ ಜನರ ಸಂಖ್ಯೆ ಕಡಿಮೆಯಾಗುತ್ತದೆ. ಕರೆಯುವವರು ಹೇಳುತ್ತಾರೆ `ನೀವು ಎಷ್ಟು ಜನ ಬೇಕೋ ಅಷ್ಟು ಜನರನ್ನೂ ಕರೆತನ್ನಿ. ಆ ಬಗ್ಗೆ ತೀರಾ ಕಂಜೂಸಿತನ ತೋರಿಸುವುದು ಬೇಡ ಎಂದು. ಆದರೆ ತಾವು ಹಾಗೆ ಮಾಡಲಿಕ್ಕಿದೆಯೇ. ಜಾಗ್ರತೆಯಿಂದ ಪಾತ್ರಧಾರಿಗಳನ್ನು ಆಯ್ಕೆ ಮಾಡಿದ್ದರು. ಅವರಿಗೆ ತರಬೇತಿ ಪ್ರಾರಂಭಿಸುವ ಮುನ್ನ ಪ್ರಸಂಗಗಳನ್ನು ಚುಟುಕು ಮಾಡಬೇಕು. ಹಾಗೆ ಮಾಡುವಾಗ ಅದರ ಮೂಲ ಸಾರಕ್ಕೆ ಭಂಗ ಬರಬಾರದು. ಹಾಗಾಗಿ ಅದೊಂದು ಪ್ರಮುಖ ಕೆಲಸ. ಶಾಸ್ತ್ರೀಗಳೇ ಮಾಡಬೇಕು.

ನಾಲ್ಕು ಪ್ರಸಂಗಗಳಿಗೂ ಹಾಗೆ ಕತ್ತರಿ ಪ್ರಯೋಗಿಸಬೇಕೆಂದರೆ ತುಂಬಾ ಸಮಯವೂ ಬೇಕು. ಆದರೂ ಪ್ರಾರಂಭಿಸಿದ್ದರು. ಒಂದನ್ನು ಮುಗಿಸಲೇ ತುಂಬ ಸಮಯ ತೆಗೆದುಕೊಂಡಿದ್ದರು. ಇದನ್ನು ನೋಡಿದ ಅಂತ್ಯ ತಾನು ಮಾಡಲೇ ಎಂದು ಕೇಳಿದ. ಶಾಸ್ತಿçಗಳು ಮೊದಲಿಗೆ ತುಸು ಹಿಂಜರಿದರೂ ಸಮಯಾಭಾವದ ಹೆದರಿಕೆಯಿಂದ ಒಪ್ಪಿದರು ಮತ್ತು ಅದನ್ನು ಪ್ರಯೋಗಕ್ಕೆ ಅಳವಡಿಸುವ ಮುನ್ನ ಹೇಗಿದ್ದರೂ  ತಾನು ಕಣ್ಣು ಹಾಯಿಸಿಯೇ ಹಾಯಿಸುತ್ತೇನಲ್ಲ ಎಂದು ಒಂದು ಪ್ರಸಂಗವನ್ನು ಕೊಟ್ಟರು. ಅಂದು ಸಂಜೆಯೇ ತಿರುಗಿ ಬಂದ ಅವ ಅದನ್ನು ಹಿಂದಿರುಗಿಸಿ ಇನ್ನೊಂದನ್ನು ಕೊಡಿ ಎಂದಾಗ ಅವಾಕ್ಕಾಗಿದ್ದರು. ಅವನು ತಿರುಗಿ ಕೊಟ್ಟ ಪ್ರಸಂಗವನ್ನು ಮೇಲಿಂದ ಮೇಲೆ ನೋಡಿದರೆ ಇನ್ನೂ ಆಶ್ಚರ್ಯ ಅವರಿಗೆ. ತಾನು ಮಾಡಿದ್ದಕ್ಕಿಂತ ಇನ್ನೂ ಪ್ರಶಸ್ತವಾಗಿ ಅಚ್ಚುಕಟ್ಟಾಗಿ ಮಾಡಿದ್ದ.

ಯಾವುದೇ ಅನುಮಾನವಿಲ್ಲದೆ ಉಳಿದೆರಡನ್ನೂ ಅವನಿಗೆ ಕೊಟ್ಟರು. ಅಂತ್ಯ ಮತ್ತೆರಡು ದಿನಗಳಲ್ಲಿಯೇ ಅವೆರಡನ್ನೂ ತಯಾರಿಸಿಕೊಂಡು ತಂದಿದ್ದ. ತಯಾರಾದ ನಾಲ್ಕನ್ನೂ ಕೂಲಂಕಷವಾಗಿ ಪರಿಶೀಲಿಸಿದರೆ ತಾನೇ ಕುಳಿತು ಮಾಡಿದ್ದಕ್ಕಿಂತ ಅಂತ್ಯ ತಯಾರು ಮಾಡಿದ್ದೇ ಉತ್ತಮವಾದದ್ದು ಎನ್ನಿಸಿತು ಶಾಸ್ತಿçಗಳಿಗೆ. ಅಂತ್ಯನನ್ನು ಕರೆದು ಹೇಳಿದ್ದಷ್ಟೇ ಅಲ್ಲ ಮುಂದಿನ ವಾರ ಹಾಗೆಯೇ ನೋಡಿ ಹೋಗಲೆಂದು ಬಂದಿದ್ದ ಪ್ರೊಫೆಸರರ ಹತ್ತಿರವೂ ಹೇಳಿಕೊಂಡು ಕೊಂಡಾಡಿದ್ದರು. ಆ ಪ್ರಸಂಗಗಳ ಮೇಲೆ ಕಣ್ಣು ಹಾಯಿಸಿದ ಅವರೂ ಶಾಸ್ತ್ರೀಗಳು ಹೇಳಿದ ಮಾತುಗಳಲ್ಲಿನ ಸತ್ಯಾಂಶವನ್ನು ಕಂಡುಕೊಂಡರು. ಅಂತ್ಯನ ಕಲಾಪ್ರಜ್ಞೆ ಮತ್ತು ತರ್ಕ ಅವರಿಬ್ಬರನ್ನೂ ದಂಗುಬಡಿಸಿತ್ತು ಮತ್ತು ತಮ್ಮ ನಡುವೆ ಪ್ರತಿಭಾ ರತ್ನವೊಂದು ಪ್ರಕಾಶಿತವಾಗತೊಡಗಿದೆ ಎನ್ನುವುದನ್ನು ಗಮನಿಸಿದ್ದಷ್ಟೇ ಅಲ್ಲ ತಮ್ಮೊಳಗೇ ಹೇಳಿಕೊಂಡರು ಕೂಡಾ. 

ಇನ್ನು ತರಬೇತಿ ಪ್ರಾರಂಭವಾಗಬೇಕು. ಪ್ರಸಂಗ ಮತ್ತು ಕಲೆಯ ಮೂಲ ಉದ್ದೇಶಕ್ಕೆ ತೊಂದರೆ ಬರದಿದ್ದರೂ ತೀರ ಹೊಸತಾದ ಜನರೆದುರಿಗೆ ಪ್ರದರ್ಶಿಸಬೇಕು. ಅವರಿಗೂ ಅರ್ಥವಾಗಬೇಕು. ಸುರುವಿನಲ್ಲೇ ಆಸಕ್ತಿ ಮೂಡಿಸಬೇಕು. ಇಲ್ಲವೆಂದರೆ ಪ್ರೇಕ್ಷಕ ಮುಂದೆ ನೋಡುವುದಕ್ಕೂ ಹೋಗಲಾರ. ಇಲ್ಲಿನ ಸಾಂಪ್ರದಾಯಿಕ ಪ್ರದರ್ಶನಗಳಲ್ಲಿ ತೋರಿಸುವ ಕೋಡಂಗಿ, ಬಾಲ ಗೋಪಾಲರು ಮತ್ತು ಸ್ತ್ರೀ ವೇಷಗಳನ್ನು ಪೂರ್ತಿಯಾಗಿ ಬಿಡುವ ಹಾಗೆಯೂ ಇಲ್ಲ. ಹಾಗೆಂದು ಗಂಟೆ ಅರ್ಧಗಂಟೆ ಹೊತ್ತು ಅದನ್ನೇ ತೋರಿಸುತ್ತ ಇರುವ ಹಾಗೂ ಇಲ್ಲ. ಇದೊಂದು ಸಾಂಪ್ರದಾಯಿಕ ಪ್ರದರ್ಶನ ಮತ್ತು ಇದರ ಪ್ರಾರಂಭ ಹೀಗೇ ಎಂದು ಪ್ರೇಕ್ಷಕನಿಗೆ ಹೇಳುವಷ್ಟರ ಮಟ್ಟಿಗೆ ತೋರಿಸಬೇಕಷ್ಟೆ.

ವಿನಃ ಬೋರಾಗುವಷ್ಟಲ್ಲ. ಜೊತೆಗೆ ಸಂಕ್ಷೇಪ ಮಾಡಿದ ಪ್ರಸಂಗಗಳನ್ನು ಆಡಿಸುವಾಗ ಘಟನೆಯಿಂದ ಘಟನೆಗೆ ಸಂಬಂಧವಿಲ್ಲದಂತಾಗಬಾರದು. ಅಂತ್ಯ ಆ ಬಗ್ಗೆ ಉತ್ತಮವಾದ ಕೆಲಸವನ್ನೇ ಮಾಡಿದ್ದಾನೆ. ಸಂಭಾಷಣೆಯಲ್ಲಿ ಸಂಬಂಧ ಬರುವಂತೆ ಮಾಡಿದ್ದಾನೆ. ಸಾಧ್ಯವೇ ಆಗಲಿಲ್ಲ ಎಂದಲ್ಲಿ ಭಾಗವತರ ಹಾಡಿನ ಮೂಲಕ ಆ ಅಂತರ ತುಂಬುವಂತೆಯೂ ನೋಡಿಕೊಂಡಿದ್ದಾನೆ. ಈಗ ಅದನ್ನೆಲ್ಲ ಪುನಃ ಒಮ್ಮೆ ನೋಡಿಕೊಂಡು ಆಡುವಾಗ ಯಾವ ಆಭಾಸವೂ ಆಗದಂತೆ ಜಾಗ್ರತೆ ವಹಿಸಬೇಕು.

| ಇನ್ನು ನಾಳೆಗೆ |

‍ಲೇಖಕರು Admin

June 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: