‘ಚೊಂಗೆ’ ಅಂದ್ರ ಮಂಗ್ಯಾನೂ ಬಾಯ್ಬಿಡ್ತದಂತ!!!

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ .

ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ.

ಅಷ್ಟೇ ಆಗಿದ್ದರೆ ಇದನ್ನು ಒಂದು ರಸ ರುಚಿಕಾಲಂ ಹೆಸರಿನಡಿ ಸೇರಿಸಿ ನಾವು ಕೈ ತೊಳೆದುಕೊಳ್ಳುತ್ತಿದ್ದೇವೇನೋ..!

ಆಕೆಗೆ ಒಳಗಣ್ಣಿದೆ. ಒಂದು ಆಹಾರ ಹೇಗೆ ಒಂದು ಸಂಸ್ಕೃತಿಯ ಭಾಗವಾಗಿ ಬರುತ್ತದೆ ಎನ್ನುವುದರ ಬಗ್ಗೆ ಹಾಗೂ ಹೇಗೆ ಆಹಾರ ಒಂದು ಸಂಸ್ಕೃತಿಯನ್ನು ರೂಪಿಸುತ್ತದೆ ಎನ್ನುವುದರ ಬಗ್ಗೆಯೂ

ಹಾಗಾಗಿಯೇ ಇದು ರಸದೂಟವೂ ಹೌದು ಸಮಾಜ ಶಾಸ್ತ್ರದ ಪಾಠವೂ ಹೌದು.


ನೀವೆಲ್ಲ ಈಚೆಗೆ ಮೊಹರಮ್‌ ಆಚರಣೆಯ ಫೋಟೊ ನೋಡಿರಬೇಕು. ಸುದ್ದಿನೂ ಓದಿರಾಕ ಬೇಕು. ಮುಸ್ಲಿಮರಿಲ್ಲದ ಊರಿನಲ್ಲಿ ಮೊಹರಮ್‌, ಸೌಹಾರ್ದದ ಆಚರಣೆ ಅಂತೆಲ್ಲ ಇರೂದು. 

ಕಲಬುರ್ಗಿಯಿಂದ ಹುಬ್ಬಳ್ಳಿತನಾನೂ ಮೊಹರಂ ಅಂದ್ರ ಚೊಂಗೆ ಅಂತನೆ ಅರ್ಥ. ಮದಿವಿ ಆದ್ರ, ಚಪಾತಿ ಲಟ್ಟಸಾಕ ಒಂದು ಮಣಿ, ಚೊಂಗೆ ಮಣಿ ಕೊಟ್ಟೇ ಕೊಡ್ತಾರ. ಒಂದು ಮಣಿ ಕೊಟ್ಟು ಇನ್ನೊಂದು ಕೊಡ್ಲಿಕ್ರ, ಮಗಳ ಉಗುರು ಮುರಿಯುವಷ್ಟು ಕೆಲಸಾಗ್ತದ ಅನ್ನೂದೊಂದು ನಂಬಿಕಿ. ಹೌದು, ಅದು ಖರೆನೂ ಹೌದು. ಯಾಕಂದ್ರ ಚೊಂಗೆ ಮಣಿ ಕೊಡ್ಲಿಕ್ರ… ಅದನ್ನ ಉಗುರಿಲೆ ಸುತ್ತು ಸುತ್ತಬೇಕು. ಉಗುರು ಸುತ್ತಾದರೂ ಬಿಡುಹಂಗಿಲ್ಲ. ಹಂಗ ಚಕ್ರವ್ಯೂಹದಂಗ ಚಪಾತಿ ಮಾಡ್ಲಿಕ್ರ, ಅದರ ನಡುವೆ ಕೊಬ್ಬರಿ ಸಕ್ರಿ ಮಿಶ್ರಣರೆ ಹೆಂಗ ನಿಲ್ಲಬೇಕು..?

ಇದು ಇನ್ನಾ ಸ್ಪಷ್ಟಗೆ ಅರ್ಥ ಆಗಬೇಕಂದ್ರ ಅದರ ಸ್ವರೂಪ ಹೇಳ್ತೇನಿ ನಿಮಗ. ಚಕ್ರವ್ಯೂಹದಂಥ ಚಪಾತಿ. ನಡುವಿನ ಗಡಿಗಳು ಸ್ಪಷ್ಟಗೆ ಎದ್ದಿರಬೇಕು. ಅಂದ್ರ ಆ ನಡುಕಿನ ಬಿರುಕಿನಾಗ ನದಿಯೊಂದು ತಣ್ಣಗೆ, ಸಣ್ಣಗೆ ಹರಕೊಂಡು ಹೊಂಟಂಗ ಬೆಳ್ಳನೆಯ ಕೊಬ್ಬರಿ, ಸಕ್ಕರಿ ಪುಡಿ ಕಾಣ್ಬೇಕು. ಜವೆಗೋಧಿಯ ಹಿಟ್ಟಿನಿಂದಲೇ ಮಾಡೂದ್ರಿಂದ ಕಡುಕಂದು ಬಣ್ಣದ ಚೊಂಗೆಯೊಳಗ ಈ ಶ್ವೇತ ಶುಭ್ರಮ ಮಿಶ್ರಣ ಅಗ್ದಿ ಚಂದ ಕಾಣ್ತದ.

ಕೆಲವೊಮ್ಮೆ ಬೆಲ್ಲದ ಎಳೀಪಾಕ ಹಾಕಿ, ಅದರ ಮ್ಯಾಲೆ ಕೊಬ್ಬರಿ, ಎಳ್ಳುನು ಉದುರಿಸಿರ್ತಾರ. ಒಂದು ತುಣುಕು, ಒಂದೇ ಒಂದು ತುಣುಕು ಬಾಯಿಗಿಟ್ಕೊಂಡ್ರ ಅಗ್ದಿ ಹದವಾದ ರುಚಿ ಬಾಯ್ತುಂಬ ಹರಡ್ತದ. 
ಒಂದು ಒಣಕೊಬ್ಬರಿ, ಸಕ್ಕರೆ ಇದೆರಡೂ ಚೊಂಗೆಗ ಅಂಟ್ಕೊಂಡಿರಲಿ ಅಂತನ ಸಣ್ಣಗೆ ತುಪ್ಪ, ಸವರ್ತಾರ. ಇದಕ್ಕ ಒಂಚೂರು ಗಸಗಸೆನೂ ಬೆರಸಿರೂದ್ರಿಂದ ಮಂದಮಂದ ಸಕ್ಕರಿ ಬಾಯಿಗೆ ಅಂಟ್ಕೊಳ್ಳುಹಂಗ ಮಾಡ್ತದ.

ಮೊದಲು ಎಳಕ ಸಕ್ಕರೆ ಪಾಕ ಮಾಡಿ ಅದನ್ನ ಹಗುರಕ ಆ ಚಕ್ರವ್ಯೂಹದ ದಾರಿಯೊಳಗ ಬಿಟ್ಕೊಂಡು ಹೋಗ್ತಾರ. ಆಮೇಲೆ ಅದರ ಮ್ಯಾಲೆ ಕೊಬ್ಬರಿ, ಗಸಗಸೆ ಉದುರಿಸಿಕೊಂಡು ಹೋಗ್ತಿದ್ರು. ಗೋಧಿ ಜೊತಿ ಮಂದ ಆಗ್ತದ ಅಂತ ಒಂಚೂರು ಜಾಸ್ತಿನೆ ಪಾಕ ಸುರಿಯೋರು. 

ಎಳೀಕೂಸಿನ ನಡುನೆತ್ತಿಗೆ ಎಣ್ಣಿಯುಣಿಸಿದಂಗ ಸಕ್ಕರೆ ಪಾಕ ಉಣಿಸಿರ್ತಾರ. ಆ ಚೊಂಗೆ ರಸ ನುಂಗಿ, ರಸಮಯವಾಗಿರ್ತದ.

ಚೊಂಗೆ ಮಾಡಾಕ ಹಿಟ್ಟನ್ನು ನಾದೂಮುಂದ ಗಟ್ಟಿ ನಾದ್ತಾರ. ಅಗ್ದಿ ಗಟ್ಟಿ ನಾದಿ, ದಪ್ಪ ಚಪಾತಿ ಮಾಡಿ, ಅವು ಹೊಟ್ಟೆಯುಬ್ಬಿಸದ್ಹಂಗ ಬೇಯಿಸಬೇಕು. ಬೀಯಿಸಿದ ಕೂಡಲೇ ಇನ್ನೂ ಬಿಸಿ ಇರೂಮುಂದ, ಉಗುರಿಲೆ ಚೂಟ್ಗೊಂತ ಚಕ್ರವ್ಯೂಹದ ಸ್ವರೂಪ ಕೊಡಬಹುದು. ಈ ತ್ರಾಸು ಬ್ಯಾಡಂತಲೆ ಇದರ ಮಣಿನೂ ಸಿಗ್ತಾವ. ಬೇಯಿಸಿದ ಕೂಡಲೇ ಅದರ ಮ್ಯಾಲೆ ಒತ್ತತಾರ. ಒಣಕೊಬ್ಬರಿ, ಗಸಗಸೆ, ಸೋಂಪು ಹಾಕಿ, ಒಂದರಮ್ಯಾಲೆ ಒಂದು ಪೇರಿಸಿಡ್ತಾರ.

ಬಂದೋರಿಗೆಲ್ಲ ಚೊಂಗೆ ಮ್ಯಾಲೆ ತುಪ್ಪ ಹಾಕಿ ಕೊಟ್ರ ತಿನ್ನೋರಿಗೆ ಸ್ವರ್ಗ ಸುಖ. ಈ ನಾದುವ ಕ್ರಿಯೆ ಮತ್ತು ಸುರುಳಿ ಸುತ್ತುವ ಕ್ರಿಯೆಯೊಳಗ ದೇವರ ಧ್ಯಾನಕ್ಕ ತೊಡಗ್ತೇವಿ. ಅನಾಯಾಸವಾಗಿ ಬೇಂದ್ರೆ ಅಜ್ಜಾರು ನೆನಪಾಗಬಹುದು.

ನಾದಬೇಕು… ನಾದಬೇಕು..  ಚೊಂಗೆ ಮಾಡೂದು ಒಂದು ಸಾಮೂಹಿಕ ಕೆಲಸ. ಒಬ್ಬರು ಚಪಾತಿ ಲಟ್ಟಸ್ತಾರ, ಇನ್ನೊಬ್ರು ಬೇಯಸ್ತಾರ, ಬಿಸಿ ಇದ್ದಾಗಲೇ ಮತ್ತೊಬ್ಬರು ಚೂಟ್ಗೊಂತ ಕುಂದರ್ತಾರ.. (ಚಪಾತಿನ್ನ). ಮತ್ತೊಬ್ಬರು ಬಿಸಿ ಆರೂದ್ರೊಳಗ ಬೆಲ್ಲದ ಪಾಕ ಹಾಕ್ತಾರ.

ಹಿಂಗ ಇವರೆಲ್ಲ ಕೂಡಿ ಕುಂತು ಚೊಂಗೆ ಮಾಡೂಮುಂದ ಹಾಡುನು ಹೇಳ್ತಾರ. ಒಂದರ ಮ್ಯಾಲೆ ಒಂದು ಪೇರಿಸಿಕೊಂತ ಹೋಗೂದ್ರಿಂದ ಎರಡೂ ಕಡೆನೂ ಕೊಬ್ಬರಿ ಅಂಟ್ಕೊಂಡಿರ್ತದ.
ಮೊಹರಂ ಅಂದ್ರ ಅಲಾಯಿ ಕುಣಿಯುವ ಹಬ್ಬ. ಹುಲಿ ವೇಷಧಾರಿಗಳು, ಪಂಜಾಗಳು, ಜರಿಬಟ್ಟೆ ಧರಿಸಿ ಮಸೀದಿ, ದೇವಾಲಯಗಳ ಗೋಡೆಗಾನಿ ನಿಂತಿರ್ತಾವ. ಕೊನಿದಿನದ ನೈವೇದ್ಯ ಪಂಜಾ. ಅದರ ಜೊತಿಗೆ ಖಿಚ್ಡಿನೂ ಮಾಡ್ತಾರ. 

ಅಲಾಯಿ ಹಾಡುಗಳು ಒಂಥರ ಚರಮಗೀತೆಗಳಿದ್ದಂಗ. ಒಂದು ಕದನದ ಸುತ್ತಲಿನ ಈ ಆಚರಣೆ ಅದೆಂತೋ ಸೌಹಾರ್ದದ ಆಚರಣೆಯಾಗಿದೆ. ಆ ಬಗ್ಗೆ ಕೆದುಕುವುದು ಬೇಡ. ಆದ್ರ ನನ್ನಜ್ಜ ನನಗ ಸಿಂದಗಿಯೊಳಗ ಅಲಾಯಿ ಕುಣಿತ ತೋರಿಸಾಕ ಕರಕೊಂಡು ಹೋಗ್ತಿದ್ದುದು ನೆನಪದ. ಪಕ್ಕಾ ನೆನಪದ..

ಮಧ್ಯಾಹ್ನ ತನ್ನ ಪಕ್ಕ ಮಲಗಿಸ್ಕೊಂಡು ರಾತ್ರಿ ಹೆದರಬಾರದು ಅಂತ ಕತಿ ಹೇಳ್ತಿದ್ದ. ಅಜ್ಜನ ಅಂಗೈಯೊಳಗ ನನ್ನ ತೋರುಬೆರಳು ಭದ್ರಬೆಚ್ಚಗಿರ್ತಿತ್ತು. ರಾತ್ರಿ ಊಟ ಮಾಡಿ ಅಲಾಯಿ ಕುಣಿತ ನೋಡಾಕ ಹೊಂಟ್ರ ಆತಂಕ ಸಂಭ್ರಮಗಳ ಮಿಶ್ರಭಾವ ಮನದಲ್ಲಿ.

ಬೇಸಿಗೆಯ ಹಿತವಾದ ರಾತ್ರಿಯದು. ಅರಳಿ ಮರದ ಎಲೆಗಳಿಂದ ಸುಂಯ್ಯನೆ ಬೀಸುವ ಸುಳಿಗಾಳಿಯ ಸದ್ದು, ನೆರಳಿನಲ್ಲಿ ಮೂಡಿಸುವ ವಿವಿಧ ಆಕಾರಗಳು, ಇವನ್ನು ದಾಟಿಕೊಂಡು ಹೋದಾಗಲೇ ಅಲಾಯಿ ಕುಣಿತದ ಜಾಗ ಬರ್ತಿತ್ತು. ದೊಡ್ಡದೊಡ್ಡ ಮಶಾಲುಗಳನ್ನು ಹೊತ್ತಿಸಿರುತ್ತಿದ್ದರು. ಒಂದೊಂದು ಕಂದೀಲುಗಳನ್ನು ನಾಲ್ಕುಮೂಲಿಗೂ ಇಟ್ಟಿರುತ್ತಿದ್ದರು. 

ಇಷ್ಟುದ್ದದ ಕೋಲುಗಳಿಗೆ ಜರಿಯಂಗಿಯುಡಿಸಿರುತ್ತಿದ್ದರು. ತ್ರಿಶೂಲ, ಬಾಕುನಂಥ ಆಕಾರ ಇರುವ ಇವುಗಳನ್ನೇ ಪಂಜಾ ಅಂತ ಕರಿಯುತ್ತಿದ್ದಿದ್ದು. ಅದರ ಮುಂದೆ ಹೆಜ್ಜೆ ಹಾಕಬೇಕಾದರೆ ಅದೆಲ್ಲಿಂದ ಆ ತಮಟೆ, ಡೊಳ್ಳುಗಳಿಗೆ ಜೋಷು ಬರುತ್ತಿತ್ತೊ… ನರನಾಡಿಗಳಲ್ಲಿ, ಧಮನಿಧಮನಿಗಳಲ್ಲಿ ರಕ್ತ ಹರಿಯುವ ವೇಗ ಅನುಭವಕ್ಕೆ ಬರ್ತಿತ್ತು. ಮಂದ್ರಕ್ಕೆ ಹೋದಾಗ ಅದ್ಯಾವ ಕಾರಣದಿಂದ ಅಳು ಬರ್ತಿತ್ತೊ ಗೊತ್ತಿಲ್ಲ..

ಅಲಾಯಿ ಪದಗಳಲ್ಲಿ ಒಂದೂ ಹಾಡು ನೆನಪಿಲ್ಲ. ರಾತ್ರಿ, ಮಧ್ಯರಾತ್ರಿಯವರೆಗೂ ಅಜ್ಜನೊಂದಿಗೆ ನೋಡ್ತಿದ್ದೆ. ತೂಕಡಿಸಲು ಸಹ ಆಗದಷ್ಟು ಗದ್ದಲದೊಳಗ ಕಣ್ಣೆಳೆದು, ಕಣ್ರೆಪ್ಪೆ ಕೆನ್ನೆಗಂಟಿಕೊಳ್ಳುವಾಗ ಅಜ್ಜ ವಾಪಸ್‌ ಕರಕೊಂಡು ಬರ್ತಿದ್ರು.  ಮರುದಿನ ಹೊಳೀತನಾ ಮೆರವಣಿಗಿ ಹೋಗ್ತಿತ್ತು. ಅದಾದ ಮೇಲೆ ಆ ಮಹಾಯಾನದ ನಂತರವೇ ಈ ನೈವೇದ್ಯೆಯ ಚೊಂಗೆ ಪರಸ್ಪರ ಹಂಚ್ಕೊತಿದ್ರು. ಹಂಚ್ಕೊಂಡು ತಿಂತಿದ್ರು. 

ಈಗಲೂ ಅಲಾಯಿ ಕುಣಿತ ಆಗ್ತದ. ಆದ್ರ ತಮಟೆಗಳ ಜಾಗದೊಳಗ ಡಿಜೆ ಬಂದಾವ. ಸಣ್ಣ ಧ್ವನಿ ಮತ್ತು ದೊಡ್ಡ ಧ್ವನಿಯೊಳಗ ಹಾಡುವ ಚಾಚಾ, ಮಾಮುಗಳ ಬದಲಿಗೆ ಡಿಜೆವಾಲೆ ಬಾಬು ಹಾಡು ಹೇಳ್ತಿರ್ತಾರ. ಇಲ್ಲಾಂದ್ರ ಹಾಡೆಲ್ಲೋ ಸಣ್ಣ ಧ್ವನಿಯೊಳಗ ಕೇಳ್ತದ.. ಅಗ್ದಿ ಮಂದ್ರದೊಳಗ. ಮುನ್ನಲೆಗೆ ಬರೂದು ಹುಲಿ ಹೆಜ್ಜೆ ಹಾಕಲು ಅಗತ್ಯವಿರುವ ಹೊಡೆತ, ಬಡಿತಗಳೇ. ಕುಣಿತವೆಂಬುದು, ಮನದೊಳಗಿನ ತಲ್ಲಣವಾಗದೆ, ತಲೆಪ್ರತಿಷ್ಠೆಯ ವಿಷಯವಾಗಿರೂದ್ರಿಂದ ಲಯವೇ ಇಲ್ಲದಂಗ ಆಗೇದ ಅನಿಸ್ತದ. ಆದ್ರ ಕೆಲವು ಕಡೆ ಇನ್ನಾನೂ ಹಳೆಯ ವೈಭವ ಉಳದದ, ತತ್ವಪದಗಳೂ ಉಳದಾವ. ಅವು ನೇಪಥ್ಯಕ್ಕೆ ಸರಿಯೂಮೊದಲು ಕೂಡಿಡುವ ಕೆಲಸ ಆಗಬೇಕು.

ಧರ್ಮ, ಪೂಜೆ, ಆಚರಣೆ ಬದಿಗಿರಿಸಿದರೆ, ಭುವಿಯೊಳಗೆ ಬಿತ್ತಿದ ಬೀಜವೊಂದು ತೆನೆಯಾಗಿ, ಕಬ್ಬಾಗಿ ಬೆಳೆದಿದ್ದು, ಗಾಣದಲ್ಲಿ ಅರೆದು, ಕಾಯ್ದು, ಕುದ್ದು, ಗಟ್ಟಿಯಾಗಿ ಬೆಲ್ಲದ ಸವಿಯಾಗಿ, ಮುಗಿಲುಮುಟ್ಟುವೆನೆಂಬಂತೆ ತೆಂಗಿನ ಮರದ ತುದಿಯಲ್ಲಿದ್ದ ಕಾಯೊಂದು, ಕೊಬ್ಬರಿಯಾಗಿ, ಒಣಗಿ, ತುರಿದಾಗಲೂ ಜೀವಾಮೃತವನ್ನೇ ಹೊರಸೂಸುತ್ತದೆ. ಹೀಗೆ ಕಷ್ಟಗಳಲ್ಲಿ ಬೇಯುತ್ತ, ಭುವಿಯೊಳಗಿಂದ ಅಂಕುರವಾಗಿ ಜೀವದುಂಬುವಂತೆ, ಅರೆದಷ್ಟೂ ಅರಿವಿನ ಕಾವಿನಲ್ಲಿ ಸವಿಯಾಗುವ ಬೆಲ್ಲ ಒಂದೊಂದು ಜೀವನಪಾಠವನ್ನು ಕಲಿಸುತ್ತವೆ.


ಸೌಹಾರ್ದವೆಂಬುದು ಚೊಂಗೆಯ ಚಕ್ರವ್ಯೂಹದಲ್ಲಿ ಬಂಧಿಸಲಾಗಿರುತ್ತದೆ. ಸವಿದವರಿಗೆ ನೆನಪಿನ ಬುತ್ತಿಯ ಸವಿ ಎಂದೂ ಮರೆಯಲಾಗದು. ಮೊಹರಂ ಹೊತ್ತಿಗೆ ಉತ್ತರ ಕರ್ನಾಟಕಕ್ಕೆ ಬಂದ್ರ ಚೊಂಗೆ ತಿನ್ನದೆ ಹೋಗಬ್ಯಾಡ್ರಿ.. ಉಳದ ಹೊತ್ತಿನಾಗ ಮಾಡೂದಿಲ್ಲ ಈ ತಿನಿಸು.  

‍ಲೇಖಕರು ಅನಾಮಿಕಾ

September 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: