ಪರನಾಡಿನಲ್ಲಿ ಕನ್ನಡವೆಂಬ ದಿವ್ಯಾನುಭೂತಿ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟ ಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಅದೊಂದು ದಿನ ಹಿಮಾಚಲದ ಮೂಲೆಯ ಬೆಟ್ಟವೊಂದರಲ್ಲಿ ಚಾರಣ. ಸುತ್ತಲೂ ಹಿಮ, ಕತ್ತಲಾವರಿಸುವ ಮುನ್ನ ಕೆಳಗಿಳಿದು ಆ ಹಳ್ಳಿಯೊಂದರ ಮನೆಗೆ ನಾವು ತಲುಪಬೇಕಾಗಿದ್ದ ಅನಿವಾರ್ಯತೆ, ಜೊತೆಗೆ ಮೆಲ್ಲಗೆ ಏರುತ್ತಿದ್ದ ಚಳಿ, ಸೂರ್ಯ ಕೆಳಗಿಳಿಯುತ್ತಿದ್ದಂತೆ ಉಜಾಲದಲ್ಲಿ ಅದ್ದಿದ ಬಿಳಿ ವಸ್ತ್ರದಂತೆ ಬಣ್ಣ ಬದಲಾಯಿಸುತ್ತಿದ್ದ ಆಗಸದ ನೀಲಿ ತನ್ನ ಬಣ್ಣದ ಮಹಿಮೆಯನ್ನು ಹಿಮದ ಮೇಲೆ ದಾಟಿಸುತ್ತಿತ್ತು.

ಬೆಳಗ್ಗಿನಿಂದ ಈ ಹಿಮದಲ್ಲೇ ಎಂಟ್ಹತ್ತು  ಕಿಮೀ ನಡೆದು ಅಮ್ಮಾ ಸುಸ್ತಾಗ್ತಿದೆ ಅಂತ ಮೆಲ್ಲನೆ ರಾಗ ತೆಗೆಯಲು ಶುರುಮಾಡಿದ ಪುಟಾಣಿ ಮಗರಾಯ ಬೇರೆ. ಇದಕ್ಕೆಲ್ಲ ನನ್ನ ಬಳಿ ಇದ್ದಿದ್ದು ಒಂದೇ ಅಸ್ತ್ರ. ಕಥೆ ಹೇಳೋದು! ಬೆಳಗ್ಗಿನಿಂದ ನಾಲ್ಕಾರು ಕಥೆಗಳು ವಿವಿಧ ಬ್ರೇಕ್‌ಗಳಲ್ಲಿ ಹೇಳಿಯಾಗಿತ್ತು. ಈಗ ಮತ್ತೆ! ಅದ್ಯಾಕೋ ಅವನಿಗೆ ಚಾರಣಗಳಲ್ಲೆಲ್ಲ ಹತ್ತಾರು ಕಥೆ ಹೇಳಿಸಿಕೊಂಡು ಕೊನೆಗೆ ನೆನಪಾಗುವುದು ʻಭೀಮ ಬಕಾಸುರʼರ ಕಥೆ.

ಈ ಕಥೆಯಿಂದ ಚಾರಣ ಕೊನೆಗೊಳ್ಳದಿದ್ದರೆ, ತಿಂದಿದ್ದು ಅರಗಲ್ಲ ಅಂತಾರಲ್ಲ ಹಾಗೆ ಚಾರಣಕ್ಕೊಂದು ಅರ್ಥ ಬರಲಾರದು. ಈ ಕಥೆ ಹೇಳಿ ಹೇಳಿ, ಪ್ರತಿ ಬಾರಿಯೂ ವಿವರಣೆಯಲ್ಲಿ ಕೊಂಚ ಏರುಪೇರಾದರೂ, ಆತ ಅದನ್ನು ತಿದ್ದಿ, ಅಮ್ಮಾ ಅದು ಹಾಗಲ್ಲ, ಹೀಗೆʼ ಎಂದು ನಾನು ಈ ಕಥೆಯನ್ನು ಅವನಿಂದ ತಿದ್ದಿಸಿಕೊಳ್ಳದಿದ್ದರೆ ಅವನಿಗೆ ಸಮಾಧಾನವಿಲ್ಲ.

ಆ ಬಾರಿಯೂ ಹಾಗೆಯೇ ಆಯಿತು. ಅವನ ಕೈಲಿ ಕಥೆ ತಿದ್ದಿಸಿಕೊಳ್ತಾ ಭೀಮ ಬಕಾಸುರರ ಮಲ್ಲಯುದ್ಧದ ಇಂಚಿಂಚನ್ನೂ ಬಿಡಿಸಿ ಹೇಳುತ್ತಾ ಹೊರಗಿನ ಪ್ರಪಂಚವೇನೂ ನಮಗಿಬ್ಬರಿಗೆ ಅರಿವಿಗೆ ಬಾರದು ಎಂಬಷ್ಟು ಕಥೆಯೊಳಗೆ ಕಳೆದುಹೋಗಿದ್ದೆವು. ಅದೇ ಗುಂಗಿನಲ್ಲಿ ಹೆಜ್ಜೆ ವೇಗ ಪಡೆದುಕೊಂಡು ಸುಸ್ತು ಮರೆತುಹೋಗಿತ್ತು. ಮಗ ಮುಂದೆ ನಾನು ಹಿಂದೆ.

ಭೀಮ ಬಕಾಸುರನನ್ನು ಕೊಂದು ಊರನ್ನು ರಕ್ಷಿಸಿದ ಅಂತ ಒಂದು ಹ್ಯಾಪಿ ಎಂಡಿಂಗ್‌ ಕೊಡುತ್ತಿದ್ದಾಗಲೇ, ʻಅರೆ ವಾಹ್‌, ಎಂಥಾ ಕಥೆ! ಬಹಳ ಕಾಲದ ನಂತರ! ಎಷ್ಟು ಸೊಗಸಾಗಿ ಹೇಳಿದ್ರಿ!ʼ ಎಂಬ ಅಶರೀರವಾಣಿ.

ಹಠಾತ್‌ ಬಂದ ಈ ಕನ್ನಡ ದಾಳಿಗೆ ನನಗೆ ಹಾರ್ಟ್‌ ಫೇಲಾಗೋದೊಂದು ಬಾಕಿ. ಮಂದ ಬೆಳಕಿನ ದಟ್ಟ ಕಾಡಿನಲ್ಲಿ ಇಡೀ ಕಾಡೇ ಕಥೆ ಕೇಳುತ್ತಿರುವ ಹಾಗೆ ಹಾಗೂ ಹಿಮದ ಹೊದಿಕೆಯಿಂದಾಗಿ ನಮ್ಮ ಹೆಜ್ಜೆಗಳೂ ಸದ್ದು ಹೊರಡಿಸದಷ್ಟು ಮೌನವಿದ್ದ ಗವ್ವೆನ್ನುವ ಜಾಗದಲ್ಲಿ ಇದ್ದಕ್ಕಿದ್ದಂತೆ ಅಶರೀರವಾಣಿಯೊಂದು ಕೇಳಿಸಿದರೆ ಹೇಗಾಗಬೇಡ! ಅದೇ ಆಯಿತು.

ಹಿಂತಿರುಗಿ ನೋಡಿ, ಬಕಾಸುರನೇ ಬಂದ ಅನ್ನುವಷ್ಟು ಭಯಬಿದ್ದ ನನ್ನನ್ನು ನೋಡಿ, ಅವರು ʼಸಮಾಧಾನ ಸಮಾಧಾನ, ತುಂಬಾ ದೂರದಿಂದ್ಲೇ ನಿಮ್ಮ ಹಿಂದಿಂದ್ಲೇ ಬರ್ತಿದ್ದೆ. ನೀವು ಅದೆಷ್ಟು ಚೆಂದಕ್ಕೆ ಕಥೆ ಹೇಳ್ತಿದ್ರಿ ಅಂದ್ರೆ, ಮಧ್ಯದಲ್ಲಿ ಮಾತಾಡ್ಸಿ ಕಥೆಯ ಹರಿವಿಗೆ ಭಂಗ ಮಾಡೋದು ಇಷ್ಟವಿರಲಿಲ್ಲ. ಹಾಗೆಯೇ ಕೇಳುತ್ತಾ ಬಂದೆ. ಬೆಂಗ್ಳೂರಲ್ಲಿರೋ ಮಗಳ ಜೊತೆಗಿನ ಹಳೆಯ ದಿನಗಳು ನೆನಪಾದ್ವು ಎಂದರು.

ಮಗನಿಗೆ ಮಾತ್ರ ಕಥೆ ಹೇಳುತ್ತಿದ್ದೇನೆ ಎಂಬ ಭ್ರಮೆಯಲ್ಲಿದ್ದವಳಿಗೆ, ನಾನೂ ನಿಮ್ಮ ಕಥೆ ಕೇಳಿದೆ ಅಂತ ಅಪರಿಚಿತರೊಬ್ಬರು ಅಂದಾಗ ಆಗುವ ಮುಜುಗರವೇ ನನಗೂ ಆಯಿತು. ಅದರ ಜೊತೆಗೆ, ಇಷ್ಟು ದೂರದ, ಯಾರೂ ಕಾಣದ ಬೆಟ್ಟವೊಂದರಲ್ಲಿ ಸಡನ್ನಾಗಿ ಒಬ್ಬರು ಕನ್ನಡ ಮಾತಾಡಿಬಿಟ್ಟರೆ ಆಗುವ ಹಿತವಾದ ಶಾಕ್‌ ಕೂಡಾ. ಆಮೇಲೆ ಒಂದೈದು ನಿಮಿಷ ಜೊತೆಯಾಗಿ ನಡೆಯುತ್ತಾ, ತಾವು ಇಲ್ಯಾಕೆ ಎಂಬ ಕಾರಣವನ್ನೂ ಹೇಳಿ ನಮ್ಮ ಬಗ್ಗೆಯೂ ಅಷ್ಟಿಷ್ಟು ಕೇಳಿ ತಿಳಕೊಂಡರು.

ಉಪನ್ಯಾಸಕ ವೃತ್ತಿಯ ಅವರು ಅದ್ಯಾವುದೋ ವಿಚಾರ ಸಂಕಿರಣಕ್ಕೆಂದು ಶಿಮ್ಲಾ ಬಂದವರು ಒಂದೆರಡು ದಿನ ಹೆಚ್ಚು ಇಲ್ಲೇ ಇದ್ದು ಒಂದು ಚಾರಣ ಮಾಡಿ, ಅಲ್ಲಿಲ್ಲಿ ತಿರುಗಾಡಿ ವಾಪಸ್ಸು ಬೆಂಗ್ಳೂರಿಗೆ ಹೋಗೋ ಪ್ಲಾನು ಅಂದು, ನಮ್ಮ ನಿಧಾನಗತಿಯ ನಡಿಗೆಯನ್ನು ಓವರ್ಟೇಕ್‌ ಮಾಡಿ ಮುಂದಕ್ಕೆ ಹೋಗಿ, ʻಆವಾಗ್ಲೇ ಓವರ್ಟೇಕ್‌ ಮಾಡ್ತಿದ್ದೆ, ಕಥೆ ಕೇಳ್ತಾ ಕೇಳ್ತಾ ಅದನ್ನೂ ಮರೆತುಬಿಟ್ಟೆ ನೋಡಿʼ ಅಂತ ನಗುತ್ತಾ ಮರಗಳೆಡೆಯಲ್ಲಿ ಕಾಣೆಯಾದರು!

ಇದು ಮತ್ತೊಂದು ಕಥೆ. ಅಂದು ನಾನು ಮಗ ಲಿಫ್ಟಿನಲ್ಲಿ ನಮ್ಮದೇ ಕನ್ನಡ ಭಾಷೆಯಲ್ಲಿ ಬೇಕಾಬಿಟ್ಟಿ ಹರಟೆ ಹೊಡೆಯುತ್ತಿದ್ದೆವು. ಏನು ಮಾತಾಡಿದರೂ ಯಾರಿಗೂ ಅರ್ಥವಾಗುವುದಿಲ್ಲ ಎಂಬ ಬಿಂದಾಸಿ ಪ್ರವೃತ್ತಿ ಬೇರೆ. ಅವನೇನೋ ಅವನ ಕುತೂಹಲಗಳನ್ನು ಮುದ್ದುಮುದ್ದಾಗಿ ಕೇಳುತ್ತಿದ್ದ. ಇದ್ದಕ್ಕಿದ್ದಂತೆ ಇದೆಲ್ಲವನ್ನು ಆಲಿಸುತ್ತಿದ್ದ ಹಿಂದೆ ನಿಂತಿದ್ದ ವ್ಯಕ್ತಿಯೊಬ್ಬರು, ಹೊರಗಡೆ ಬರ್ತಿದ್ದ ಹಾಗೆ ಕೇಳಿಯೇ ಬಿಟ್ಟರು, ʻಅದ್ಯಾವ ಭಾಷೆ ಮಾತಾಡುತ್ತಿದ್ದೀರಿ?ʼ ʻಕನ್ನಡʼ ಅಂದೆ.

ʻವಾವ್ಹ್‌, ನೋಡಿ ಎಷ್ಟೊಳ್ಳೆ ವಿಚಾರ. ಮಾತೃಭಾಷೆಯಲ್ಲಿ ಮಗನ ಜೊತೆ ಮಾತಾಡ್ತಾ ಇದೀರಿʼ ಅಂದರು. ಸ್ವಲ್ಪ ಹೆಚ್ಚೇ ನಗು ಆತನ ಮುಖದ ಮೇಲೆ ಕಂಡಿದ್ದರಿಂದ, ಯಾಕೋ ಸ್ವಲ್ಪ ಡೌಟ್‌ ಬಂದ ನಾನು, ಸ್ವಲ್ಪ ಒರಟಾಗಿಯೇ, ʻಮಾತೃಭಾಷೆ ಮಾತಾಡದೆ, ಇನ್ಯಾವ ಭಾಷೆ ಮಾತಾಡ್ಲಿ ಅಲ್ವಾ! ಅದರಲ್ಲೇನೂ ವಿಶೇಷವಿಲ್ಲ ಬಿಡಿʼ ಅಂದೆ.

ಆಗ ಅವರು, ʻನೀವು ದಕ್ಷಿಣದವರು ನೋಡಿ. ನಿಮಗೆ ಹೀಗೆ ಅನಿಸೋದು ಕಡಿಮೆ. ನಮ್ದು ಹಿಮಾಚಲ ಪ್ರದೇಶ. ನಂಗೆ ಹಿಮಾಚಲಿ ಬರುತ್ತೆ. ನನ್ನ ಹೆಂಡ್ತೀನೂ ಹಿಮಾಚಲದವಳೇ. ಆದ್ರೆ, ಇಬ್ಬರೂ ಮನೇಲಿ ಹಿಮಾಚಲಿ ಮಾತಾಡೋದು ಭಾರೀ ಅಪರೂಪವೇ. ಇಲ್ಲಿಗೆ ಬಂದು ವರ್ಷಗಳೇ ಆದ್ವು. ಊರಿಗೆ ಹೋದ್ರೆ ಹಿಮಾಚಲಿ ಮಾತಾಡ್ತೇವೆ. ಆದ್ರೆ ನನ್ನ ಮಗಳಿಗೆ ಹಿಮಾಚಲಿ ಗೊತ್ತೇ ಇಲ್ಲ. ನಮ್ಮ ಮನೆಯೊಳಗೆ ಹಿಂದಿಯೇ. ಹೀಗೇ ಆಗಿ ಆಗಿ ಮುಂದೊಂದು ದಿನ ನಾವು ಹಿಮಾಚಲಿಗಳು ಅನ್ನೋಕೆ ಸಾಕ್ಷ್ಯನೇ ಉಳಿದಿರೋಲ್ಲ ಅಲ್ವಾ?

ಈ ದಕ್ಷಿಣ ಭಾರತದವರಷ್ಟು ಭಾಷಾಪ್ರೇಮ ಇಲ್ಲಿಲ್ಲ. ನೋಡಿ, ನೀವು ಕರ್ನಾಟಕದವರು ಅಂತೀರಿ. ಇಷ್ಟು ದೂರದ ದೆಹಲಿಯಲ್ಲಿ ಕೂತು ಮಗನ ಜೊತೆ ಕನ್ನಡ ಮಾತಾಡ್ತೀರಿ ಅಂದ್ರೆ ಅದೆಷ್ಟು ಒಳ್ಳೆ ವಿಚಾರ ಅಲ್ವಾ. ಅದ್ಕೆ ಖುಷಿಯಾಯ್ತು. ತುಂಬಾ ದಿನದಿಂದ ನೀವು ಮಾತಾಡೋದು ಕೇಳ್ತಾ ಇದ್ದೆ. ದಕ್ಷಿಣದವ್ರು ಅಂತ ಗೊತ್ತಾದ್ರೂ, ತಮಿಳೋ, ತೆಲುಗೋ ಅಂತ ಗೊತ್ತಾಗಿರ್ಲಿಲ್ಲ. ಅದಕ್ಕೇ ಕೇಳೋಣ ಅನಿಸಿ ಕೇಳಿದ್ದುʼ ಅಂದರು. ಇಷ್ಟು ಕೇಳಿ ನನ್ನ ಮುಖದಲ್ಲೂ ಚೆಂದದ ನಗು ಅರಳಿತ್ತು. ಇದು ಇವರೊಬ್ಬರ ಮಾತಲ್ಲ. ಪಕ್ಕದ ಮನೆಯ ಪಂಜಾಬಿ,  ರಾಜಸ್ಥಾನಿ ಗೆಳತಿ, ಮೇಲ್ಗಡೆ ಮನೆಯ ಗುಜರಾತಿ ಎಲ್ಲರದ್ದೂ ಹೆಚ್ಚು ಕಡಿಮೆ ಇದೇ ಕಥೆಯೇ.

ಆ ಕಥೆ ಹಾಗಿರಲಿ, ಇದು ಮತ್ತೊಂದು. ಅದೊಂದು ದಿನ ಗಿಡಕ್ಕೆ ಮಣ್ಣಿನ ಪಾಟ್‌ ಬೇಕಿತ್ತು. ಸರಿ ತೆಗೊಳ್ಳೋದಕ್ಕೆ ಅಂತ ಹೋದೆ. ಮಡಕೆ ಮಾಡೋರದ್ದೇ ಹರ್ಯಾಣದ ಹಳ್ಳಿಯೊಂದರ ಗಲ್ಲಿ ಅದು. ನಗರದಿಂದ ಸ್ವಲ್ಪ ಹೊರಗೆ. ಆತ ಏನು ಬೇಕು ಅಂತ ಕೇಳಿದ. ಅವನ ಹತ್ತಿರ ಏನೇನೋ ಮಣ್ಣಿನ ವಸ್ತುಗಳು, ಪಾತ್ರೆಪಗಡಿ ಎಲ್ಲವೂ ಇದ್ದವಾದರೂ ಪಾಟ್‌ ಕಾಣಲಿಲ್ಲ. ಹಾಗಾಗಿ ಅಂಗಡಿಯನ್ನೊಮ್ಮೆ ಕಣ್ಣಲ್ಲೇ ಅಳೆದು, ನನಗೆ ಬೇಕಾದ್ದು ಕಾಣಿಸ್ತಿಲ್ವಲ್ಲಾ ಅದ್ಕೊಂಡು, ಕೇಳೋದೇ ಬೆಟರು ಅನಿಸಿ, ʻಪಾಟ್‌ ಇದ್ಯಾ, ಗಿಡ ನೆಡೋವಂಥಾದ್ದುʼ ಅಂತ ಕೇಳಿದೆ. ಆತನಿಗೆ ಪಾಟ್‌ ಅಂದಿದ್ದು ಅರ್ಥವಾಗಲಿಲ್ಲ. ʻಪಾಟ್‌ ಅಂದ್ರೆ?ʼ ಅನ್ನುತ್ತಾ ಅಮಾಯಕನಾಗಿ ನನ್ನ ಮುಖ ನೋಡಿದ.

ಹಿಂದಿ ಚೆನ್ನಾಗೇ ಮಾತಾಡಲು ಬರುತ್ತದೆಯಾದ್ರೂ, ಸಾಕಷ್ಟು ಇಂಗ್ಲೀಷ್‌ ಶಬ್ದಗಳನ್ನು ಬೆರಕೆ ಮಾಡಿ ಮಾತಾಡುತ್ತೇನೆಂದು ನನಗೆ ಜ್ಞಾನೋದಯವಾಗಿದ್ದು ಹೀಗಿರುವ ಹಳ್ಳಿಗಳಲ್ಲಿ ತಿರುಗಾಡಿದಾಗಲೇ. ಒಂದೇ ಒಂದು ಇಂಗ್ಲೀಷ್‌ ಶಬ್ದ ಬೆರಕೆಯಾಗದೆ ಅಪ್ಪಟ ಹರ್ಯಾಣವೀ ಹಿಂದಿ ಅವರ ಭಾಷೆ. ಹೀಗಾಗಿ ಇಷ್ಟರವರೆಗೆ ತರಕಾರಿ, ಹಣ್ಣು, ಬೇಳೆ ಕಾಳು ಮಣ್ಣು ಮಸಿಗಳಿಗೆಲ್ಲಾ  ಆರಾಮವಾಗಿ ಇಂಗ್ಲೀಷ್‌ ಪದಗಳನ್ನು ಸೇರಿಸಿ ಬಿಡುತ್ತಿದ್ದ ನನ್ನ ಹಿಂದಿ ಆತನಿಗೆ ಸಹಜವಾಗಿಯೇ ತಲೆಗೆ ಹೋಗಿರಲಿಲ್ಲ.

ನಾವು ಹೀಗೆ ದಕ್ಷಿಣ ಭಾರತದಲ್ಲಿ ಕೂತು ಹಿಂದಿ ಕಲಿತಿದ್ದಕ್ಕೂ, ಉತ್ತರದಲ್ಲಿ ತಿರುಗಾಡಿ ಭಾಷೆ ಕಲಿಯೋದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಚೀಲ ಹಿಡಕೊಂಡು ಮಾರ್ಕೆಟ್ಟಿಗೆ ಹೋದಾಗಲೇ ಗೊತ್ತಾಗಿದ್ದು, ನೂರಕ್ಕೆ ತೊಂಬತ್ತರಷ್ಟು ತರಕಾರಿ ಹಣ್ಣುಗಳ ಹಿಂದಿ ಹೆಸರುಗಳೇ ಇಷ್ಟರವರೆಗೆ ನನಗೆ ಗೊತ್ತಿರಲಿಲ್ಲ ಎಂದು.

ಭಾಷೆ ಕಲಿಯಲು ಲೋಕಲ್‌ ಮಾರ್ಕೆಟಿನಷ್ಟು ಒಳ್ಳೆಯ ಸ್ಕೂಲು ಇನ್ನೊಂದಿರಲಿಕ್ಕಿಲ್ಲ. ಅದಕ್ಕಾಗಿಯೇ ನಾನು ಎಲ್ಲೇ ಹೊಸ ಊರಿಗೆ ಹೋದರೂ ಲೋಕಲ್‌ ಮಾರ್ಕೆಟ್ಟಿಗೆ ಹೋಗದೆ ಇರುವುದಿಲ್ಲ. ಅವರ ಭಾಷೆ ಕಣ್ಮಿಂಚಿನೊಂದಿಗೆ ಸೀದಾ ಹೃದಯಕ್ಕೆ ಇಳಿಯುತ್ತದೆ. ಆದರೆ ದೊಡ್ಡ ದೊಡ್ಡ ಅಂಗಡಿಯ ಹನುಮಂತನ ಬಾಲದಂಥ ಬಿಲ್ಲುಗಳಲ್ಲಿ ಈ ಟಚ್ಚೆಲ್ಲ ಸಿಗುವುದಿಲ್ಲ.

ಯೆಸ್, ಮತ್ತೆ ವಿಷಯಕ್ಕೆ ಬರುತ್ತೇನೆ, ಆ ಕುಂಬಾರ ನನ್ನನ್ನ ಮೂಕವಾಗಿ ನೋಡಿದ್ದೇ ತಡ, ಭಾಷಾ ಜಗತ್ತೇ ಬೆರಳ ತುದಿಯಲ್ಲೇ ಇದೆಯಲ್ಲಾ ಅಂದುಕೊಳ್ಳುತ್ತಾ ಫೋನಿಗೆ ಕೈಯಿಟ್ಟೆ. ಪಾಟ್‌ಗೆ ಹಿಂದೀಲಿ ಏನಂತ ಅಂತ ಸರ್ಚು ಕೊಟ್ಟರೆ, ಅದಕ್ಕೆ ಸರಿಯಾಗಿ ನೆಟ್ಟು ಸಿಕ್ಕದೆ ಸುತ್ತಿದಲ್ಲೆ ಗಿರಗಿರ ಸುತ್ತಿ ಕೊನೆಗೂ ಗಮ್ಲಾ ಅಂದಿತು. ಆತನ ಮುಖ ನೋಡಿ ಗಮ್ಲಾ ಎಂದು ವಿಷಯ ದಾಟಿಸಿದೆ. ಇಷ್ಟೆಲ್ಲಾ ಆಗುವಾಗ, ಅವನಿಗೂ ಅಂದಾಜಾಗಿ ನನ್ನ ಮುಂದೆರಡು ಪಾಟ್‌ ತಂದಿರಿಸಿ ಇಂಥದ್ದಾ ಎಂಬರ್ಥದಲ್ಲಿ ನನ್ನ ನೋಡುತ್ತಿದ್ದ.

ಗಮ್ಲಾ ತೆಗೊಂಡು, ಇನ್ನೇನು ಹೊರಡಬೇಕು ಅನ್ನೋವಾಗ ಆತ ಕೇಳಿದ ಕಟ್ಟ ಕಡೆಯ ಪ್ರಶ್ನೆ, ʻನೀವು ಎಲ್ಲಿಯವರು?ʼ

ಕಥೆ ಶುರುವಾಗಿದ್ದೇ ಅಲ್ಲಿಂದ. ನಾನು ಕರ್ನಾಟಕ ಅಂದ್ನಾ, ಅವನ ಕಣ್ಣರಳಿತು. ʻಕರ್ನಾಟಕವಾ? ನಾನು ಬೆಂಗ್ಳೂರಲ್ಲಿ ಎರಡು ವರ್ಷ ಕೆಲಸ ಮಾಡಿದ್ದೆ ಗೊತ್ತಾ? ನಂಗೆ ಕನ್ನಡ ಬರತ್ತೆ! ಅಂದ ಕನ್ನಡದಲ್ಲೇ. ನಂಗೆ ಇನ್ನೂ ಆಶ್ಚರ್ಯ. ಅರೆ, ಬೆಂಗ್ಳೂರಲ್ಲಿ ಏನ್ಮಾಡ್ತಿದ್ರಿ ಅಂದ್ರೆ, ಗಾಡಿ ಓಡಿಸ್ತಿದ್ದೆ, ಆಮೇಲೆ ಬಿಟ್ಟು ಬಂದೆ. ಇಲ್ಲಿ ನಮ್ಮ ಮನೆಯ ಈ ಕೆಲಸಾನೂ ಮಾಡ್ಬೇಕಿತ್ತಲ್ಲ ಎಂದ.

ಎಷ್ಟಾದ್ರೂ ಡ್ರೈವರ್‌ ಕೆಲಸ ಮಾಡಿದವನಲ್ವಾ, ಮಾತಾಡ್ತಾ ಆಡ್ತಾ ಏರ್ಪೋರ್ಟಿಂದ ಹಿಡಿದು ಕಲಾಸಿಪಾಳ್ಯದವರೆಗೂ ಮಾತಾಡಿದ. ಒಮ್ಮೆಲೆ ವಿವಿಪುರಂನ ತಿಂಡಿಬೀದಿಯಲ್ಲಿ ಬಿಸಿಬಿಸಿ ತುಪ್ಪ ಹಾಕಿ ಒಬ್ಬಟ್ಟು ತಿಂದಷ್ಟು ಖುಷಿಯಾಯ್ತು. ಅಲ್ಪ ಸ್ವಲ್ಪ ತಡವರಿಸಿದರೂ, ಪರ್ವಾಗಿಲ್ಲ, ಎರಡು ವರ್ಷದಲ್ಲಿ ಒಂದು ಮಟ್ಟಿಗೆ ಚೆನ್ನಾಗೇ ಕಲ್ತಿದ್ದಾನೆ, ಮತ್ತು ಬಿಟ್ಟು ಬಂದು ಒಂದೆರಡು ವರ್ಷ ಆದ್ರೂ ಮರೆತಿಲ್ಲ ಅನ್ನೋದಕ್ಕೆ ಭರ್ಜರಿ ಖುಷಿಯಾಯ್ತು. ಈಗೆಲ್ಲಾ ಆ ದಾರಿಯಾಗಿ ಹೋದರೆ ಒಂದು ಚೆಂದದ ಮುಗುಳ್ನಗು. ಜೊತೆಗೆ, ʻಓ ಅದು ಕೊಡಿ, ಓ ಇದು ಕೊಡಿʼ ಅಂತ ತುಂಬಿಸಿಕೊಂಡು ಬರುತ್ತಿದ್ದ ನಾನೂ ಕೂಡಾ ಸುಧಾರಿಸಿಕೊಂಡು ಒಂದು ಲೆವೆಲ್ಲಿಗೆ ಬಂದಿದ್ದೇನೆ.

ನಿಜವಾಗಿ ಹೇಳಬೇಕಂದ್ರೆ, ಕರ್ನಾಟಕದಿಂದ ಹೊರಗಿದ್ದು ಹೊರನಾಡ ಕನ್ನಡಿಗಳಾಗಿ ಕನ್ನಡ ಪ್ರೀತಿಸೋದರಲ್ಲಿ ಒಂದು ದಿವ್ಯಾನುಭೂತಿ ಸಿಕ್ಕಿದೆ. ಕರ್ನಾಟಕದೊಳಗೆ ಇರೋವಾಗ ಇದೆಲ್ಲ ಅನುಭವಕ್ಕೆ ಬಂದಿದ್ದು ಭಾರೀ ಅಪರೂಪ.

ಭಾರತ ಪಾಕಿಸ್ತಾನದ ಗಡಿಯಲ್ಲಿ ಸಿಕ್ಕ ಪ್ರೀತಿಯಿಂದ ಮಾತಾಡಿಸಿದ ಕನ್ನಡ, ತಮಿಳು ಸೈನಿಕರು, ದೂರದ ಉತ್ತರಾಖಂಡದ ಮೂಲೆಯ ಮಠದಲ್ಲೆಲ್ಲೋ ಕಂಡ ಕನ್ನಡ ಬೋರ್ಡು, ದೆಹಲಿಯ ರಸ್ತೆಗಳಲ್ಲಿ ತಡೆದು ನಿಲ್ಲಿಸಿದ ತಮಿಳು ಪೋಲೀಸಪ್ಪ ನಮ್ಮ ನಂಬರ್‌ ಪ್ಲೇಟ್‌ ನೋಡಿದಾಕ್ಷಣ ಹುಟ್ಟಿದಾಗಿಂದ ಗಳಸ್ಯ ಕಂಠಸ್ಯ ಫ್ರೆಂಡ್‌ಶಿಪ್ಪೇನೋ ಎಂಬಂತೆ ಅರ್ಧ ಗಂಟೆ ಹರಟೆ ಹೊಡೆದು ಆಮೇಲೆ ಬಿಟ್ಟದ್ದು, ಹೋದ ಚಾರಣಗಳಲ್ಲೆಲ್ಲ ಸಿಕ್ಕ ದಂಡು ದಂಡು ಕನ್ನಡಿಗರು, ಹೂಕಣಿವೆಯಲ್ಲಿ ಕಂಡ ಕನ್ನಡಿಗರದೇ ಸಾಮ್ರಾಜ್ಯದಿಂದಾಗಿ ಇದು ಉತ್ತರಾಖಂಡ ಹೌದೋ ಅಲ್ಲವೋ ಎಂದು ಡೌಟಾಗಿದ್ದು, ಹರಿದ್ವಾರದ ಗಂಗೆಯ ತೀರದಲ್ಲಿ ಸಿಕ್ಕು ಬೆಳಗ್ಗೆ ವಾಪಾಸಾಗಬೇಕಿದ್ದ ನಮ್ಮನ್ನು ಹೋಗಕೊಡದೆ ಮಧ್ಯಾಹ್ನದವರೆಗೂ ತೀರದಲ್ಲೇ ಕೂಡಿಹಾಕಿ ನಮ್ಮ ಪ್ಲ್ಯಾನನ್ನೆಲ್ಲ ತಲೆಕೆಳಗಾಗಿಸಿ ತನ್ನ ʻಬಿಚ್ಚುಗತ್ತಿʼ ಕಥೆಗಳನ್ನು ಓತಪ್ರೋತವಾಗಿ ಉಣಬಡಿಸಿದ ಹಿರಿಯ ಕನ್ನಡಿಗ… ಎಲ್ಲವೂ ಒಂದು ಆಪ್ತ ಭಾವವನ್ನು ಹೃದಯದೊಳಗೆ ದಾಟಿಸಿಬಿಟ್ಟಿವೆ.

ಕೊನೆಗೊಂದು ಕಣ್ಮಿಂಚು:

ಅದ್ಯಾವುದೋ ರಾಜ್ಯ. ಸರಿಯಾಗಿ ನೆನಪಿಲ್ಲ! ಉತ್ತರ ಪ್ರದೇಶವೋ, ಮಧ್ಯಪ್ರದೇಶವೋ, ಅಥವಾ ರಾಜಸ್ಥಾನವೋ! ಟೋಲ್‌ ಬೂತಿನಲ್ಲಿ ರಶ್ಶೋರಶ್ಶು. ಆಕಾಶದೆತ್ತರಕ್ಕೆ ಸಾಮಾನು ಹೇರಿಕೊಂಡ ಲಾರಿಯೊಂದು ನಮಗೆ ಸೈಡೇ ಬಿಡ್ತಿಲ್ಲ. ತನಗೆ ಮುಂದೆ ಹೋಗಲು ಜಾಗವಿಲ್ಲ ಅಂತ ಬೇಕಂತಲೇ ಬೇರೆಯವರೂ ಹೋಗೋದು ಬೇಡ ಅನ್ನೋ ಥರ ಅಡ್ಡ ನಿಂತ ಹಾಗಿತ್ತು.

ಇನ್ನೇನು ನಮ್ಮ ತಾಳ್ಮೆಯ ಕಟ್ಟೆಯೊಡೆದು, ಸಿಟ್ಟು ಬಂತು ಅನ್ನುವಷ್ಟರಲ್ಲಿ ನಮ್ಮ ಕಣ್ಣಿಗೆ ಆತನ ನಂಬರ್‌ ಪ್ಲೇಟ್‌ನಲ್ಲಿ ಕೆಎ ಕಂಡು ಬಂದ ಸಿಟ್ಟು ಕೂಡಾ ಅಷ್ಟೇ ವೇಗದಲ್ಲಿ ಇಳಿದಿತ್ತು. ಇದಾಗಿ ಒಂದೈದು ನಿಮಿಷವಾಗಿರಬೇಕು, ಆತನಿಗೂ ನಮ್ಮ ನಂಬರ್‌ ಪ್ಲೇಟ್‌ ಆತನ ಕನ್ನಡಿಯಲ್ಲಿ ಕಂಡಿರಬೇಕು. ಸಡನ್ನಾಗಿ ಅದ್ಹೇಗೋ ಜಾಗ ಮಾಡಿ, ʻಹೋಗಿ ಮುಂದೆ ʼಅನ್ನೋ ಥರ ನಗುವಿನೊಂದಿಗೆ ಕೈಭಾಷೆಯಲ್ಲಿ ತಿಳಿಸಿದ.

ಅವನನ್ನು ದಾಟಿಕೊಂಡು ಮುಂದೆ ಹೋಗುತ್ತಿದ್ದಾಗ, ಬಗ್ಗಿ ನೋಡಿದ ನಮಗೆ, ತನ್ನ ಸೀಟಿನಿಂದಲೇ ಮೆಲ್ಲನೆ ಇಣುಕಿ ʻನಮಸ್ಕಾರ ರೀʼ ಅಂತ ಹೇಳಿ ಚೆಂದದ ನಗುವನ್ನೂ ದಾಟಿಸಿಬಿಟ್ಟ. ನಾಲಗೆ ಹೊರಚಾಚಿದ ಕರಿ ಮುಖವಾಡಗಳನ್ನು ನೇತಾಕಿಸಿಕೊಂಡ, ದೇವಿ ಮಹಾತ್ಮೆಯ ಮಹಿಷ, ಚಂಡ-ಮುಂಡರ ಅಪರಾವತಾರದಂತೆ ಯಾವಾಗಲೂ ಕಾಣಿಸುತ್ತಿದ್ದ ಈ ಲಾರಿ ಎಂಬ ವಾಹನ, ಇದ್ದಕ್ಕಿದ್ದಂತೆ ಈ ಬಾರಿ ಹೀರೋ ಆಗಿ ಕಂಡುಬಿಟ್ಟಿತು!

‍ಲೇಖಕರು ರಾಧಿಕ ವಿಟ್ಲ

September 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: