ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೈತ್ರಾ ಶಿವಯೋಗಿಮಠ ಹೊಸ ಕವಿತೆ- ನಿರ್ಭಯವಾಗಿ ಬದುಕುವುದೆಂದರೆ..

ಚೈತ್ರಾ ಶಿವಯೋಗಿಮಠ

ನಿರ್ಭಯವಾಗಿ ಬದುಕುವುದೆಂದರೆ
ಮತ್ತೊಬ್ಬರನ್ನು ಚುಚ್ಚಿ ಇರಿದು
ಸಮರ್ಥಿಸಿಕೊಳ್ಳುವುದಲ್ಲ
ಪ್ರತಿ ವಾದದಲ್ಲೂ ಗೆಲ್ಲುವುದಲ್ಲ
ತನ್ನ ಇಷ್ಟ ಕಷ್ಟಗಳನ್ನು ಸದಾ
ಹೇರುವುದೂ ಅಲ್ಲ

ಮುಂಜಾನೆ ಮೆಲ್ಲಗೆ ಅರಳಿ ಸಂಜೆಗೇ
ಸಾಯುವುದೆಂದು ಗೊತ್ತಿದ್ದರೂ
ಇರುವಷ್ಟೂ ಹೊತ್ತು ಬಾಯ್ತುಂಬಾ ನಕ್ಕು
ಕಂಡವರಿಗೆಲ್ಲಾ ಮುಗುಳ್ನಕ್ಕು
ಮೋಸಮಾಡುವರೆಂದು ಗೊತ್ತಿದ್ದೂ
ಪ್ರೀತಿಸುವೆನೆಂದು ಬಳಿಬಂದವರಿಗೆ
ಎದೆ ತೆರೆದು ಪ್ರೀತಿ ಹರಿಸುವುದು

ನಿರ್ಭಯವಾಗಿ ಬದುಕುವುದೆಂದರೆ
ಕಗ್ಗಪ್ಪು ಇಜ್ಜಲೆಂದು ತಿಳಿದಿದ್ದರೂ
ಮೌನವಾಗಿ ಕಾಲಗರ್ಭದೊಳಗೆ
ಹೂತು ಒಂದೊಮ್ಮೆ ಪ್ರಖರವಾಗಿ
ಹೊರಹೊಮ್ಮುವುದು

ನಿರ್ಭಯವಾಗಿ ಬದುಕುವುದೆಂದರೆ
ಒಡಲೊಳಗೆ ಜ್ವಾಲೆ ಉರಿದರೂ
ಮಡಿಲೊಳಗೆ ಹಸುರ ಚಿಗುರಿಸುವುದು
ಉಸಿರ ಪ್ರಣತಿಗೆ ದೀಪ ಮುಡಿಸುವುದು

ನಿರ್ಭಯವಾಗಿ ಬದುಕುವುದೆಂದರೆ
ಮೌನವಾಗಿ ಮಿಡಿಯಬಲ್ಲ ಕಲೆ
ಗಮ್ಯ ತಿಳಿದರೂ ಗತಿಯ ಕಾಯುವುದು
ತಿಳಿಯದಿದ್ದರೆ ಮತಿಯ ಕಾಯುವುದು

‍ಲೇಖಕರು Admin

18 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading