ಪುಟ್ಟಾರಾಧ್ಯ ಎಸ್ ಹೊಸ ಕಥೆ- ಕುತೂಹಲ!

ಪುಟ್ಟಾರಾಧ್ಯ ಎಸ್

ಆಗಿನ್ನ ಪೇಟೆಗಳಲ್ಲಿ ಮಾತ್ರ ಕಾರುಗಳು ಓಡಾಡಲು ಶುರು ಮಾಡಿದ್ದು ಬಿಟ್ಟರೆ, ಹಳ್ಳಿಗಳಲ್ಲಿ ಕಾರನ್ನು ಕಂಡಿರದ ಕಾಲ. ಅಂದಿನ ಗ್ರಾಮಸಭೆಗೆ ಜಿಲ್ಲಾಧಿಕಾರಿಗಳು ಬರುತ್ತಿದ್ದರಿಂದ ಊರಿನ ಪ್ರಮುಖರು ತರಾವರಿ ತಯಾರಿಯಲ್ಲಿ ನಿರತರಾಗಿದ್ದರು. ಶಾಲೆಯೆಂದರೆ ಇಷ್ಟವಿರದ ಎಂಟು ವರ್ಷದ ರವಿಗೆ ಬಸ್ಸು, ಮೋಟಾರನ್ನು ಹಿಡಿದು ಎಲ್ಲಾ ರೀತಿಯ ಮೆಷೀನುಗಳೆಂದರೆ ಬಲು ಕುತೂಹಲ.

ಯುವಕರು-ಹಿರಿಯರು ಸೇರಿ ಓಡಾಡಿಕೊಂಡು ಕೆಲಸ ಮಾಡುತ್ತಿದ್ದರೆ, ರವಿಯ ಮನಸ್ಸಲ್ಲೇ ಸಂಭ್ರಮ ಮನೆಮಾಡಿ ಜಿಲ್ಲಾಧಿಕಾರಿ ಬರುವುದನ್ನೆ ಕಾಯುತ್ತಾ  ದೂರದಿಂದಲೇ ಇದನ್ನೆಲ್ಲವನ್ನು ಗಮನಿಸುತ್ತಿದ್ದ. ಗಂಟೆಯ ನಂತರ ತಯಾರಿಯೆಲ್ಲಾ ಮುಗಿದು ಜಿಲ್ಲಾಧಿಕಾರಿಯ ಅಂಬಾಸಿಡರ್‌ ಕಾರು ಬಂದು ನಿಂತಿತು. ಊರಿನ ಜನರೆಲ್ಲಾ ಸೇರಿ ಅಧಿಕಾರಿಯನ್ನು ಸಭೆಗೆ ಕರೆದುಕೋಡು ಹೋದರೆ ಕೆಲವರು ಕಾರಿನ ಡ್ರೈವರ್‌ ಶಂಕ್ರಣ್ಣನ ಕುಶಲೋಪರಿ ನೋಡಿಕೊಳ್ಳತೊಡಗಿದರು.

ಮೊದಲ ಬಾರಿ ಕಾರಿನಲ್ಲಿ ಊರಿಗೆ ಬಂದ ಅಧಿಕಾರಿ ಎಷ್ಟು ವಿಶೇಷವೋ, ಕಾರು ಚಲಾಯಿಸಿಕೊಂಡು ಬಂದ ಡ್ರೈವರ್‌ ಶಂಕ್ರಣ್ಣನೂ ಜನರಿಗೆ ಅಷ್ಟೇ ವಿಶೇಷವಾಗಿ ಕಂಡಿದ್ದ. ಶಂಕ್ರಣ್ಣನಿಗೆ ಕಾರು ಬಿಟ್ಟು ಹೋಗುವ ಮನಸ್ಸಿಲ್ಲದಿದ್ದರೂ ಜನರ ಪ್ರೀತಿಗೆ ಮಣಿಯಬೇಕಾಯ್ತು. ಅವರೆಲ್ಲರೂ ಸೇರಿ ಶಂಕ್ರಣ್ಣನನ್ನು ಕರೆದುಕೊಂಡು ಹೋಗಿ ಸಭೆಯ ಮುಂದಕ್ಕೆ ಕುರ್ಚಿ ಹಾಕಿ ಕುಳ್ಳಿರಿಸಿ ಅವನಿಗೂ ಸತ್ಕಾರ ಮಾಡಿದ್ದರು. ಇತ್ತ ರವಿಗೆ ಮೊದಲ ಬಾರಿ ನೋಡಿದ್ದ ಕಾರು ಹುಚ್ಚು ಹಿಡಿಸಿತ್ತು. ಅಷ್ಟರಲ್ಲಿ ಸೈಲೆನ್ಸರ್‌ ಬಿಸಿ ಇಳಿದರೆ ಇವನ ಕುತೂಹಲ ಏರಿತ್ತು. 

ಜನರೆಲ್ಲಾ ಸಭೆಯ ಭಾಷಣಕ್ಕೆ ಮರುಳಾಗುವುದನ್ನೇ ಕಾದು, ಕಾರಿನ ಬಳಿ ಬಂದು ಸುತ್ತಲೂ ನೋಡಿ ಯಾರೂ ಇವನನ್ನು ಗಮನಿಸದಿಲ್ಲದಿರುವುದನ್ನು ಖಚಿತಪಡಿಸಿಕೊಂಡು ಕಾರಿನ ಹಿಂದಿನ ಸೈಲೆನ್ಸರ್‌ ಕಂಡು ಅದೇನೆಂದು ತಿಳಿಯದೆ ಕೈ ಹಾಕಿ ನೋಡಿದ. ಎಂತದೂ ಸಿಗಲಿಲ್ಲ ಆದರೆ ಏನೋ ಹೊಳೆದಂತಾಗಿ ಅಮ್ಮ ಬೆಳಿಗ್ಗೆ ಕೊಟ್ಟಿದ್ದ ನಾಣ್ಯವೊಂದನ್ನು ತೆಗೆದು ಸೈಲೆನ್ಸರ್ ಒಳಗೆ ಉರುಳಿಬಿಟ್ಟ!. ಒಳಗೆ ಹೋದ ನಾಣ್ಯ ವಾಪಾಸಾಗಲಿಲ್ಲ ಆದರೆ, ರವಿಗೆ ನಾಣ್ಯ ಬೇಕೇ ಬೇಕು ಅದರಲ್ಲು ಅಪರೂಪಕ್ಕೆ ಅಮ್ಮನಿಂದ ಸಿಗುವ ಹಣ ಬಿಟ್ಟು ಹೋಗಲು ಮನಸ್ಸಿಲ್ಲ.

ಕಡ್ಡಿಯೊಂದನ್ನು ತಂದು ಪ್ರಯತ್ನಿಸಿದಾಗ ಕಡ್ಡಿಯೂ ಒಳಗೋಯ್ತು.! ನಂತರ ಕಲ್ಲುಗಳ ಸರದಿ, ಅವು ಕೂಡ ಒಳ ಹೊಕ್ಕವು. ಆ ಕಡೆ ಅಧಿಕಾರಿಗಳ ಬಾಷಣದ ಸದ್ದು ಮುಗಿಲಿಗೇರಿದರೆ, ಇತ್ತ ರವಿಯ ಪ್ರಯತ್ನ ಅವಿರತವಾಗಿ ಮುಂದುವರೆದಿತ್ತು. ಅಷ್ಟರಲ್ಲಿ ಎಲ್ಲಿಂದಲೋ ಸೈಕಲ್ಲಿನಲ್ಲಿ ಬಂದ ರವಿಯ ಅಣ್ಣ ಸಿದ್ದ, ರವಿಯನ್ನು ಕಂಡವನೇ ಅವನನ್ನು ಅಲ್ಲಿಂದ ಎಳೆದುಕೊಂಡು ಹೋಗಿ ದೂರದ ಮರವೊಂದರ ನೆರಳಿನಲ್ಲಿ ಕುಳಿತು ರವಿಯ ರಾದ್ದಾಂತವನ್ನೆಲ್ಲಾ ಆಲಿಸಿದ. ಹೆದರುತ್ತಾ ಇಬ್ಬರು ಹಿಂದಿರುಗಿದಾಗ ಅಧಿಕಾರಿಯ ಸಮೇತ ಊರಿನ ಜನ ಮತ್ತು ಡ್ರೈವರ್‌ ಶಂಕ್ರಣ್ಣ ತಲೆಮೇಲೆ ಕೈ ಹೊತ್ತು ಕುಳಿತಿದ್ದರು. ಶಂಕ್ರಣ್ಣನಿಗೆ, ಆಫೀಸಿನಿಂದ ಮೆಕ್ಯಾನಿಕ್‌ ಕಳಿಸುವೆನೆಂದು ಹೇಳಿ, ಇಲ್ಲೇ ಇದ್ದು ಕಾರು ರಿಪೇರಿ ಮಾಡಿಸಿಕೊಂಡು ಬರುವಂತೆ ತಿಳಿಸಿ ಕೊನೆಗೆ ಅಧಿಕಾರಿಯು ಬಸ್ಸಿನಲ್ಲಿ ವಾಪಾಸಾಗಬೇಕಾಯಿತು. 

ಹೀಗೆ ರವಿಯ ಉತ್ಸುಕತೆಗಳಿಂದಾದ ಅನಾಹುತಗಳ ಪಟ್ಟಿ ಬಲು ಉದ್ದವಿದೆ. ಊರಿಗೆ ಬರುವುದು ಒಂದೇ ಬಸ್ಸು ಬೆಳಗ್ಗೆ ಒಮ್ಮೆ ಬಂದರೆ ಮತ್ತೆ ಬರುವುದು ಸಂಜೆಯೇ. ಆ ಬಸ್ಸಿನ ಹಿಂದೆ ನರಿಯ ಚಿತ್ರವಿರುವುದರಿಂದ ಅದನ್ನು ‘ಕಪ್ಪುಲ್‌ ನರಿ’ ಬಸ್ಸೆಂದು ಊರಿನ ಜನ ನಾಮಕರಣ ಮಾಡಿದ್ದಾರೆ. ರವಿ ಆಗ ಇನ್ನೂ ಐದು ವರ್ಷದವನಿದ್ದಿರಬೇಕು, ಅದೊಂದಿನ ಬಸ್‌ ಬಂದಿದ್ದೇ ತಡ, ನಿಂತಿರುವ ಬಸ್ಸಿನ ಹಿಂದೆ ಹೋಗಿ ಪರೀಕ್ಷಿಸತೊಡಗಿದ.

ಬಸ್ಸಿಗೆ ಹಾಕುವ ಡೀಸೆಲ್ಲಿಗೆ ಊರಿನ ಸೊಸೈಟಿಯಲ್ಲಿ ಕಡಿಮೆ ಬೆಲೆಗೆ ಸಿಗುವ ಸೀಮೆಎಣ್ಣೆ ಬೆರೆಸಿದ ಕಾರಣ ಸೈಲೆನ್ಸರ್ ನಲ್ಲಿ ಹೊರಟಿದ್ದ ದಪ್ಪ ಹೊಗೆ ಅವನನ್ನು ಆಕರ್ಷಿಸಿತ್ತು. ಅದನ್ನು ಕಂಡು ಬೆರಗಾಗಿ ನೋಡುತ್ತಾ ನಿಂತವನು, ಬಸ್ಸು ಹೊರಟಾಗ ಯಾರಿಗೂ ಹೇಳದೇ ಕೇಳದೇ ಹಿಂದಿನ ಏಣಿ ಹತ್ತಿ ನೇತಾಡಿಕೊಂಡು ಹೋಗಿಯೇಬಿಟ್ಟಿದ್ದ. ಅವನನ್ನು ಹುಡುಕಿ ತರಲು ಮೂರು ದಿನಗಳೇ ಹಿಡಿದಿತ್ತು.

ಹೀಗೆ ಒಂದಿನ ಊರಿನಲ್ಲಿದ್ದ ದರ್ಜಿ ಶಾಂತಮ್ಮನ ಮನೆಯಲ್ಲಿ ಬಟ್ಟೆ ಹೊಲೆಯುವ ಮೆಷೀನನ್ನು ನೋಡುತ್ತಾ ಸೂಜಿಯ ಅಡಿ ಬೆರಳಿಟ್ಟು ಯಂತ್ರವನ್ನು ತುಳಿದಿದ್ದ. ಅವನ ತುಳಿತದಲ್ಲಿ ಹೆಚ್ಚು ಬಲವಿರಲಿಲ್ಲವಾದ್ದರಿಂದ ಸೂಜಿ ಸ್ವಲ್ಪವೇ ಒಳಹೊಕ್ಕು ಬೆರಳನಲ್ಲಿ ಸಣ್ಣ ತೂತು ಮಾಡಿತ್ತು. ಇದನ್ನೆಲ್ಲಾ ಕಂಡು ರವಿಗಿಂತ ಐದು ವರ್ಷ ದೊಡ್ಡವನಾದ ಸಿದ್ದನಿಗೆ ಒಮ್ಮೊಮ್ಮೆ ಹೆದರಿಕೆಯಾದರೂ ತಮ್ಮನ ಕಂಡರೆ ಬಲು ಪ್ರೀತಿ. ಆದರೆ, ಅವರ ತಾಯಿ ನಿಂಗವ್ವನಿಗೆ ಈ ಕಿರಿಮಗನ ಕುತೂಹಲ ತಣಿಸಲು ಸಾಧ್ಯವಾಗದೆ ಇವನನ್ನು ಹಿಡಿಯುವುದೇ ಒಂದು ಸಾಹಸವಾಗಿಬಿಟ್ಟಿತ್ತು.

‘ಸಿದ್ದಾss’ ನಿಂಗವ್ವ ಕೂಗಿದಳು. ಮತ್ತೆರಡು ನಿಮಿಷ ಬಿಟ್ಟು ‘ಲೋ ಸಿದ್ದಾ, ಎಲ್ಲೋಗಿದ್ಯಲಾ, ಬಂದಾನ ಬಾರೋ’. ರವಿ, ಅಮ್ಮನ ಕೂಗು ಕೇಳಿದವನೆ ಅವಳ ಬಳಿ ಓಡಿದನು. ‘ರವಿ, ಸಿದ್ದ ಎಲ್ಲೋಗ್ವನೋ?’ ನಿಂಗವ್ವ ಕೇಳಿದಳು. ರವಿ, ಗೊತ್ತಿಲ್ಲವೆಂದು ತಲೆಯಾಡಿಸಿದ. ನಿಂಗವ್ವನಿಗೆ ಐದು ಜನ ಮಕ್ಕಳು, ಮೂರು ಗಂಡು, ಎರಡು ಹೆಣ್ಣು. ರವಿಯೊಬ್ಬನನ್ನು ಬಿಟ್ಟು ಎಲ್ಲರೂ ಊರ್ಮುಂದಿನ ಶಾಲೆ ಸೇರ್ಕೋಂಡಿರೋದ್ರಿಂದ ಪಾಠ ಕೇಳೋಕೆ ಹೋಗವ್ರೆ ಅಂದ್ಕೊಂಡ್ರೆ ತಪ್ಪಾಗಬಹುದು.

ಇತ್ತೀಚೆಗೆ ಶುರು ಮಾಡಿರೋ ಮೊಟ್ಟೆ ಮತ್ತು ಹಾಲಿನ ಆಸೆಗೆ ಮನೆ ಮಕ್ಕಳೆಲ್ಲಾ ಶಾಲೇಲಿ ಹಾಜರು. ಸರ್ಕಾರ ಮಕ್ಕಳಲ್ಲಿ ಪೌಷ್ಟಿಕತೆಯನ್ನು ಏರಿಸುವ ಹೊಸ ಪ್ರಯತ್ನದಲ್ಲಿದ್ದರೆ, ಶಾಲೆಯ ಹೆಡ್‌ ಮಾಸ್ತರಾದ ರಂಗಪ್ಪನವರಿಗೆ ಶಾಲೆಯಲ್ಲಿ ಹಾಜರಾತಿ ಹೆಚ್ಚಿದ್ದೇ ಖುಷಿಯಾಗಿತ್ತು. ಹಾಲು ಮೊಟ್ಟೆ ನೆಪದಲ್ಲಾದ್ರೂ ಮಕ್ಕಳು ಶಾಲೆಗೆ ಬಂದರೆ, ಕಲಿಸುವುದಕ್ಕೆ ಅವರಿಗೂ ಖುಷಿ. ಅಂದು ನಿಂಗವ್ವ ಮನೆಯಲ್ಲಿದ್ದ ಭತ್ತ, ರಾಗಿ, ಅಲಸಂದೆ, ಹೆಸರುಕಾಳುಗಳನ್ನು ಸ್ವಚ್ಛ ಮಾಡುವ ಸಲುವಾಗಿ ಕೂಲಿ ಹೋಗುವುದನ್ನು ತಪ್ಪಿಸಿಕೊಂಡಿದ್ದಳು.

ಸ್ವಚ್ಛ ಮಾಡಿದ್ದೆಲ್ಲಾ ಗಿರಣಿಯಲ್ಲಿ ನುಣ್ಣಗೆ ಮಾಡಿಸಿಕೊಂಡು ಹಿಟ್ಟು ಮಾಡಿಕೊಳ್ಳಬೇಕಾಗುತ್ತಿತ್ತು. ಮನೆ ತುಂಬಾ ಮಕ್ಕಳು, ಹಿಟ್ಟು ಇಲ್ಲವಾದರೆ ಅವರನ್ನು ಸಂಭಾಳಿಸಲು ಸಾಧ್ಯವೇ? ಕಳೆದ ಬಾರಿ ಮಳೆಗಾಲ ಚೆನ್ನಾಗಿ ನೆಡೆಸಿದ್ದರಿಂದ ಮನೆಯ ವಾಡೆ ತುಂಬಾ ದಡ್ಡಿ ಭತ್ತ, ರಾಗಿ ಸೆರಿದಂತೆ ಅಕ್ಕಡಿಯಲ್ಲಿ ಬೆಳೆದ ಅಲಸಂದೆ, ಹೆಸರು, ತೊಗರಿ ಮತ್ತಿತರ ಕಾಳುಗಳು ತುಂಬಿಕೊಂಡಿವೆ ಆದರೆ, ಇಷ್ಟೊಂದು ಮಕ್ಕಳ ಮುಂದೆ ಎಷ್ಟಿದ್ದರೂ ಸಾಲದು. ಪೈಸೆ-ಪೈಸೆ ಲೆಕ್ಕ ಹಾಕಿದರೆ ಮಾತ್ರ ಈ ದೊಡ್ಡ ಸಂಸಾರ ಸಾಕಲು ಸಾಧ್ಯ. ಆದ್ದರಿಂದ ಒಂದ್ಹಿಡಿ ಕಾಳನ್ನೂ ವ್ಯರ್ಥ ಮಾಡದೆ ಅಚ್ಚುಕಟ್ಟಾಗಿ ಸ್ವಚ್ಛಮಾಡಿ ಗಿರಣಿಗೆ ಕಳಿಸಲು ತಯಾರಿ ಮಾಡಿಟ್ಟು, ಬೆಳಗ್ಗೆ ಮಾಡಿದ್ದ ರಾಗಿಹಿಟ್ಟಿನ ಜೊತೆ ನೆನ್ನೆ ಉಳಿದಿದ್ದ ಮಸೊಪ್ಪಿನ ಜೊತೆ ನೆಂಚಿಕೊಂಡು ಮೂರೇ ಗುಕ್ಕಿಗೆ ತಿಂದು ಮುಗಿಸಿ ಹೊರಗೆ ಬಂದಾಗ ಆಗಲೇ ಸೂರ್ಯ ನೆತ್ತಿ ಮೇಲೆ ಉರಿಯುತ್ತಿದ್ದ.

ಮನೆಯಲ್ಲಿ ದಿನವೂ ರಾಗಿ ಮುದ್ದೆ ಇರಲೇಬೇಕು ಕಾರಣ ‘ಹಿಟ್ಟು ತಿಂದ್ರೆ ಶಕ್ತಿ ಬರ್ತೈತೆ’ ಅಂತ ಊರಲ್ಲೆಲ್ಲಾ ನಂಬಿಕೆ, ಅದು ದಿಟವೂ ಹೌದು. ನಿಂಗವ್ವನ ಗಂಡ ಯಲ್ಲಪ್ಪ ಅಜಾನುಬಾಹು, ಗಟ್ಟಿ ಆಳು ಆದ ಕಾರಣ ಯಲ್ಲಪ್ಪನಿಗೆ ಊರಲ್ಲಿ ಕೂಲಿನೂ ಜಾಸ್ತಿ. ಆದ್ರೆ ಆಳಿಗೆ ತಕ್ಕಂತೆ ಸೊಪ್ಪು, ಕಾಳು ತಿಂದ್ರೆ ಮಾತ್ರ ದೇಹ ಸಾಕಲು ಸಾದ್ಯ. ಬಯಲು ಸೀಮೆಯಾದ್ರೂ ಬೇಲಿ, ಹೊಲಗಳಲ್ಲಿ ಸೊಪ್ಪು-ಸೆದೆಗೆ ಏನೂ ಕಡಿಮೆ ಇಲ್ಲ, ಒಂದ್ಸಲ ಹೋದ್ರೆ ವಾರಕ್ಕಾಗುವಷ್ಟು ಸೊಪ್ಪು ಕಿತ್ಕೊಂಡ್‌ ಬರ್ಬಹುದು. ಆದ್ದರಿಂದ ನಿಂಗವ್ವ ಹೊರಟಿದ್ದು ಬೇಲಿ ಹೊಲದ ಸಾಲಿಗೆ. 

ಬೇಲಿಲಿರೋ ಕುಂಬಳದ ಕುಡಿ, ಹೊಲದಲ್ಲಿ ಸಿಗೋ ಅಣ್ಣೇ ಸೊಪ್ಪು, ಸರದ ಕಡೆ ಹೋದ್ರೆ ಹೊನಗೊನೆ ಸೊಪ್ಪುಇತ್ಯಾದಿ ಇತ್ಯಾದಿ ಸೇರಿ ಎಂಟತ್ತು ತರದ ಸೊಪ್ಪು ಕಿತ್ಕೊಂಡು ಸೆರಗಿಗೆ ಹಾಕ್ಕೊಂಡು ಓಡಾಡ್ತಾ ಇದ್ರೆ, ರವಿ ಅಮ್ಮನ ಸೆರಗಿಡಿದು ಹಿಂದಿಂದೆ ಸುತ್ತುತ್ತಿದ್ದ. ಆಗೊಮ್ಮೆ ಇಗೊಮ್ಮೆ ಅವಳ ಕಾಲಿಗೆ ಸಿಕ್ಕಾಗ ಒಮ್ಮೊಮ್ಮೆ ಆಕೆ ರೇಗಿಬಿಡ್ತಿದ್ಲು. ಆಗ ರವಿಯೂ ಒಮ್ಮೊಮ್ಮೆ ಅತ್ತುಬಿಡುತ್ತಿದ್ದ. ಮಗನ ಕಣ್ಣಲ್ಲಿ ನೀರು ಬಂದ್ರೆ ಯಾವ ತಾಯಿ ತಡೆದಾಳು? ಒಮ್ಮೆ ಎತ್ತಿಕೊಂಡು ಮುತ್ತಿಕ್ಕಿ ಮುದ್ದಿಸಿ ಸಂಭಾಳಿಸಿ ಹೊಲದಲ್ಲಿ ಸಿಗೋ ತೊಂಡೆ ಹಣ್ಣು ಕಿತ್ತುಕೊಟ್ರೆ ಅಲ್ಲಿಗೆ ಅವನ ಅಳು ನಿಂತು ಮತ್ತೆ ಅಮ್ಮನ ಹಿಂದೆ ಸವಾರಿ ಹೊರಡ್ತಿತ್ತು. ರವಿಯನ್ನು ಸಂಭಾಳಿಸಿಕೊಂಡು ಅಡಿಗೆಗೆ ಸೊಪ್ಪು ಕಿತ್ಕೊಂಡು ಮನೆಗೆ ಬರುವಷ್ಟರಲ್ಲಿ ಮಧ್ಯಾಹ್ನ ಮೀರಿ ಹೋಗಿತ್ತು.

ನಿಂಗವ್ವನ ಗಂಡ ಯಲ್ಲಪ್ಪ ಬೆಳಿಗ್ಗೆಯೇ ಎದ್ದು ಅಡವಪ್ಪನವರ ವೀಳ್ಯದೆಲೆ ಬಳ್ಳಿ ತೋಟದಲ್ಲಿ ಪೆಂಡಿ ಕೆಲಸಕ್ಕೆ ಹೋಗಿದ್ದ. ಆದ್ದರಿಂದ ಗಿರಣಿಗೆ ಹೋಗಲು ಹಿರಿಮಗ ಸಿದ್ದ ಬರಬೇಕು, ಆದರೆ ರವಿಗೆ ತಾನೇ ಹಿಟ್ಟಿನ ಗಿರಣಿಗೆ ಸೈಕಲ್ಲಿನಲ್ಲಿ ತಳ್ಳಿಕೊಂಡು ಹೋಗಿ ಹಿಟ್ಟು ಮಾಡಿಸಿಕೊಂಡು ಬರುವ ಆಸೆ. ರವಿಯ ಕಥೆ ಚೆನ್ನಾಗಿ ಗೊತ್ತಿದ್ದ ನಿಂಗವ್ವ ಸಿದ್ದನ ಜೊತೆ ಕಳಿಸುವ ಯೋಚನೆ ಮಾಡಿ ರವಿಯ ಉತ್ಸಾಹವನ್ನು ತಡೆದಿದ್ದಳು. ರವಿಯ ಚಿಂತೆ ಎಂದರೆ ಸಿದ್ದ ಬಂದರೆ ಸೈಕಲ್‌ ಮುಟ್ಟಿಸುವುದಕ್ಕೂ ಬಿಡುವುದಿಲ್ಲ ಎಂಬುದು. ಊರಿಂದೆ ವಾಸವಾಗಿದ್ದ ಜಮೀನ್ದಾರ ಭದ್ರಪ್ಪನವರು ಮೀಷೀನು ತರಿಸಿ ಆಗಿನ್ನು ಹಿಟ್ಟಿನ ಗಿರಣಿ ಶುರು ಮಾಡಿದ್ದರು.

ಊರಿನ ಹೆಂಗಸರಿಗಂತೂ ಬೀಸೋ ಕಲ್ಲು ಎಳೆದು ಕೈ ಸೋತಿದ್ದರಿಂದ, ಭದ್ರಪ್ಪನ ಗಿರಣಿ ಮಾಯಾಯಂತ್ರವಾಗಿ ತೋರಿತ್ತು. ಶುರುವಿನಲ್ಲಿ ಇಡೀ ಊರಿಗೇ ಭದ್ರಪ್ಪನ ಗಿರಣಿಯಂತ್ರವನ್ನು ನೋಡುವುದೇ ಒಂದು ಸಂಭ್ರಮ. ಆದರೆ ಭದ್ರಪ್ಪ ಬಹಳ ಶಿಸ್ತಿನ ಮನುಷ್ಯ. ಕೆಲಸವಿರದ ಹೊರತು ಗಿರಣಿಯೊಳಗೆ ಯಾರಿಗೂ ಪ್ರವೇಶವಿಲ್ಲ.

ಎಲ್ಲರಿಗೂ ಆ ಮಾಯಾಯಂತ್ರವನ್ನು ನೋಡುವ ಆಸೆಯಲ್ಲವೇ? ಆದ್ದರಿಂದ ಒಂದೈವತ್ತು ಪೈಸೆ ಹೋದರೂ ಚಿಂತೆಯಿಲ್ಲ ಗಿರಣಿಯೊಳಗೆ ಹೋಗಿ ಯಂತ್ರವನ್ನು ನೋಡಬಹುದಲ್ಲಾ ಎಂಬ ಆಸೆಯಿಂದ ಮನೆ ಮಕ್ಕಳನ್ನು ಎಷ್ಟು ಬಾರಿ ಕಳಿಸಿದರೂ ಬೇಜಾರು ಮಾಡಿಕೊಳ್ಳುತ್ತಿರಲಿಲ್ಲ. ಮಕ್ಕಳಂತೂ ಗಿರಣಿ ಮನೆ ಸುತ್ತಲೇ ಕಾದು ಕುಳಿತು ಗಿರಣಿ ಮನೆಯೊಳಗೆ ಇಣುಕುವುದಕ್ಕೆ ಪ್ರಯತ್ನಿಸುತ್ತಾ ಭದ್ರಪ್ಪನವರಿಂದ ಬೈಗುಳ ತಿಂದು ಓಡಿಹೋಗುತ್ತಿದ್ದರು.

ಶಾಲೆ ಮುಗಿಸಿ ಐದು ಘಂಟೆಗೆಲ್ಲ ಮನೆಗೆ ನಾಲ್ಕೂ ಜನ ಮಕ್ಕಳು ವಾಪಸಾಗಿದ್ದರು. ನಿಂಗವ್ವ ಎಲ್ಲರಿಗೂ ರಾಗಿ ಗಂಜಿ ಕಾಯಿಸಿಟ್ಟಿದ್ದರಿಂದ ಹೊಟ್ಟೆ ತುಂಬಾ ಕುಡಿದು, ದಿನವೂ ಅಮ್ಮ ಕೂಲಿ ಹೋಗದೆ ಮನೆಯಲ್ಲೇ ಉಳಿದರೆ ಹೀಗೆ ತಿನ್ನುವುದಕ್ಕೆ, ಕುಡಿಯುವುದಕ್ಕೆ ಏನಾದರೂ ಇರುವುದೆಂದು ಆಶಿಸಿದ್ದರು. ಆದರೆ ಆಕೆ ಯಾವುದೇ ಕಾರಣಕ್ಕೆ ಮನೆಯಲ್ಲಿ ಉಳಿಯುವಳಲ್ಲ. ದಿನಕ್ಕೆ ಮೂವತ್ತು ರೂಪಾಯಿ ಕೂಲಿ ಬಿಡುವುದುಂಟೆ? ಸಿದ್ದ ಗಂಜಿ ಕುಡಿದು ಮುಗಿಸಿದ ಮೇಲೆ ನಿಂಗವ್ವ ಹೇಳಿದಳು, ‘ಅಲ್ಲಿರೋ ಚೀಲಗಳನ್ನ ಸೈಕಲ್‌ ಮೇಲೆ ಹಾಕ್ಕೊಂಡು ಗಿರಣಿಗೆ ಹೋಗಿಬಾರಪ್ಪ’.

ಸಿದ್ದನಿಗೂ ಗಿರಣಿಯೆಂದರೆ ಖುಷಿಯೇ ಆದ್ದರಿಂದ ಹೊರಡಲು ಅನುವಾಗಿ ಸೈಕಲ್ಲಿನ ಹಿಂದಿನ ಚಕ್ರದಲ್ಲಿ ಗಾಳಿ ಕಡಿಮೆ ಇದ್ದಿದ್ದರಿಂದ ಸೈಕಲ್‌ ಪಂಪ್‌ ತೆಗೆದುಕೊಂಡವನೇ ಗಾಳಿ ಒತ್ತಲು ಶುರು ಮಾಡಿದ. ಅಷ್ಟರಲ್ಲಿ ರವಿಯು ಅಮ್ಮನ ಹಿಂದೆ ಸುತ್ತುತ್ತಾ ತನ್ನನ್ನೂ ಅಣ್ಣನ ಜೊತೆ ಕಳಿಸಬೇಕೆಂದು ಹಠ ಹಿಡಿದ್ದಿದ್ದನ್ನು ಕಂಡ ನಿಂಗವ್ವನಿಗೆ ಬೇರೆ ದಾರಿ ಇರಲಿಲ್ಲ. ಆದರೆ ಅಷ್ಟರಲ್ಲಿ ಯಲ್ಲಪ್ಪ ಬಂದವನೇ ರವಿಯನ್ನು ಹಿಡಿದೆಳೆದು ಕುಂಡಿಯ ಮೇಲೆ ಛಟೀರನೆ ಎರಡು ಬಾರಿಸಿದಾಗ ರವಿ ಅಳುತ್ತಾ ಮೂಲೆಗೆ ಓಡಿ ಅವಿತು ಕುಳಿತ. ಬೆಳಗಿನಿಂದ ವೀಳ್ಯೆದೆಲೆ ಪೆಂಡಿಗಳನ್ನು ಕಟ್ಟಿ ಹೊತ್ತು ಸುಸ್ತಾಗಿದ್ದ ಯಲ್ಲಪ್ಪ ಅಂಗಿ ಬಿಚ್ಚಿ ಗೂಟಕ್ಕೆ ನೇತುಹಾಕಿದವನೇ ಕೈಕಾಲು-ಮುಖ ತೊಳೆಯಲು ಹೊರನಡೆದ.

ಎರಡನೆ ಮಗ ರಂಗನಾಥ ಮತ್ತು ಇಬ್ಬರು ಹೆಣ್ಮಕ್ಕಳು ಕೂಡಿ ದೂರದ ಬಯಲಿನಲ್ಲಿ ಆಟಕ್ಕೆಂದು ತೆರಳಿದ್ದರು. ನಿಂಗವ್ವ ಅಡುಗೆ ಮನೆಯಲ್ಲಿ ಯಲ್ಲಪ್ಪನಿಗೆ ಊಟ ತಯಾರಿಸುತ್ತಿದ್ದಳು. ಸಿದ್ದಣ್ಣ ಸೈಕಲ್ಲಿಗೆ ಗಾಳಿ ಒತ್ತುವುದರಲ್ಲಿ ಮಗ್ನನಾಗಿದ್ದ. ರವಿಗೆ ಏನೋ ಹೊಳೆದಂತಾಗಿ ಮೂಲೆಯಿಂದ ಎದ್ದವನೇ ಅಪ್ಪನ ಅಂಗಿಯ ಕಡೆ ಓಡಿ ಜೇಬು ತಡಕಿವದವನಿಗೆ ನಾಲ್ಕೈದು ನಾಣ್ಯಗಳು ಸಿಕ್ಕವು. ಅವನಿಗೆ ನಾಣ್ಯಗಳ ಬೆಲೆ ಇನ್ನೂ ತಿಳಿಯದು, ಆದರೆ ಒಂದು ನಾಣ್ಯವನ್ನು ಕೈಗೆತ್ತಿಕೊಂಡವನೇ ಮತ್ತೆ ಮೂಲೆಗೆ ಓಡಿ ಕುಳಿತ.

ಯಲ್ಲಪ್ಪ ಮುಖ ಒರೆಸಿಕೊಂಡು ಅಡುಗೆ ಮನೆಗೆ ಹೋಗಿ ಊಟಕ್ಕೆ ಕುಳಿತರೆ, ರವಿ ಎದ್ದು ಹೊರಗೋಡಿದ. ಅಷ್ಟರಲ್ಲಾಗಲೇ ಸಿದ್ದ ಸೈಕಲ್‌ ಮೇಲೆ ಚೀಲವಿರಿಸಿ ಹೋಗುತ್ತಿರುವುದನ್ನು ಗಮನಿಸಿ, ಪೂರ್ತಿ ಬಲ ಬಿಟ್ಟು ಓಡಿ ಅಣ್ಣನನ್ನು ಮುಟ್ಟಿ ಜೇಬಿನಲ್ಲಿದ್ದ ನಾಣ್ಯವನ್ನ ತೋರಿಸಿದಾಗ ಸಿದ್ದನ ಹುಬ್ಬೇರಿತು. ನಾಣ್ಯದಾಸೆಗೆ ಸಿದ್ದ ತನ್ನ ಬದಲು ರವಿಯನ್ನೆ ಗಿರಣಿಯೊಳಗೆ ಬಿಡುವೆನೆಂದು ಒಪ್ಪಿಕೊಂಡು ಅವನಿಂದ ಪಡೆದ ನಾಣ್ಯವನ್ನು ತನ್ನ ಜೇಬಿಗಿಳಿಸಿದ.

ಗಿರಣಿಗೆ ಹೋಗುವ ದಾರಿಯುದ್ದಕ್ಕೂ ಸಿದ್ದ ರವಿಗೆ ಮೆಷೀನಿನಿಂದ ಹಿಟ್ಟು ಮಾಡಿಸಿಕೊಳ್ಳುವುದು ಹೇಗೆಂದು ಹಂತ ಹಂತವಾಗಿ ಬಿಡಿಸಿ ಹೇಳಿದ. ‘ಮೊದಲು ಭದ್ರಪ್ಪ ಮೋಟಾರು ಚಾಲು ಮಾಡುತ್ತಾನೆ, ಆಗ ಚೀಲ ಎತ್ತಿ ಆಲಿಕೆಯಲ್ಲಿ ಸುರಿಯಬೇಕು. ನಂತರ ಮೆಷೀನಿನ ಮುಂದೆ ಅದಕ್ಕೆ ತೊಡಿಸಿದ ಪ್ಯಾಂಟ್‌ ತೋಳನ್ನು ಹಿಡಿದು ಚೀಲದಲ್ಲಿ ಹಾಕಿಕೊಳ್ಳಬೇಕು. ಮೊದಲನೆಯ ಸುತ್ತು ಮುಗಿದ ಮೇಲೆ ಪ್ಯಾಂಟ್‌ ತೋಳಲ್ಲಿ ಇರುವುದೆಲ್ಲವನ್ನು ಕೊಡವಿಕೊಂಡು ನಂತರ ಮತ್ತೊಮ್ಮೆ ಆಲಿಕೆಗೆ ಸುರಿಯಬೇಕು ನಂತರ ಮತ್ತೆ ಕೊನೆಯ ಬಾರಿ ಹಿಟ್ಟನ್ನ ಚೀಲಕ್ಕೆ ತುಂಬಿಕೊಳ್ಳಬೇಕು’. ಕೊಡವಿಕೊಳ್ಳುವಾಗ ಒಂಚೂರು ಹಿಟ್ಟನ್ನೂ ಬಿಡಬಾರದೆಂದು ಮತ್ತು ತೋಳಿನೊಳಗೆ ಹುಷಾರಾಗಿ ಕೈ ಹಾಕಿ ತೆಗೆಯಬೇಕೆಂದು ವಿವರಿಸಿದ.

ಇದಿಷ್ಟೂ ಪ್ರಕ್ರಿಯೆಯು ಸಿದ್ದನ ಸಾಮಾನ್ಯ ಜ್ಞಾನದಿಂದ ಪ್ರಾಪ್ತವಾದ ಅನುಭವವೇ ಹೊರತು ಬೇರೆ ಏನಿಲ್ಲ ಜೊತೆಗೆ ಊರಿನ ಇತರರು ಪಾಲಿಸುತ್ತಿದ್ದ ವಿಧಾನವನ್ನು ಇವನೂ ಅನುಸರಿಸುತ್ತಿದ್ದ. ಅಷ್ಟರಲ್ಲಿ ಗಿರಣಿ ತಲುಪಿದ ಅವರು ಸೈಕಲ್‌ ನಿಲ್ಲಿಸಿ ಚೀಲಗಳನ್ನು ಇಳಿಸಿ ರವಿಯಿಂದ ನಾಣ್ಯ ಪಡೆದು ರವಿಗೆ ಒಳಗೆ ಹೋಗಲು ಹೇಳಿ ಇವನು ಬಾಗಿಲಲ್ಲೇ ಕಾದು ಕುಳಿತ. ಕಾರಣ ಗಿರಣಿಯೊಳಗೆ ಒಬ್ಬರಿಗೆ ಮಾತ್ರ ಪ್ರವೇಶ. ಐದಾರು ನಿಮಿಷವಾಗಿರಬೇಕು.

ಸಿದ್ದ ಹೇಳಿದಂತೆ ಭದ್ರಪ್ಪ ಮೋಟಾರು ಚಾಲು ಮಾಡಿದ, ಅಷ್ಟು ಹತ್ತಿರದಿಂದ ಮೊಟಾರಿನ ಕರ್ಕಶ ಸದ್ದನ್ನು ಕೇಳಿ ರವಿಯ ಎದೆ ಒಡೆದುಕೊಳ್ಳತೊಡಗಿತು. ಒಮ್ಮೆಗೆ ಕಿವಿ ಚಿಟ್ಟೆಂದು, ಓಡಿಹೋಗಬೇಕೆನಿಸಿದರೂ ಧೈರ್ಯ ಮಾಡಿ ಅಲ್ಲೇ ನಿಂತ. ಮೋಟಾರಿನ ಬೆಲ್ಟುಗಳು ಜೋರಾಗಿ ತಿರುಗತೊಡಗಿದವು. ಭದ್ರಪ್ಪ ಆಲಿಕೆಯ ತಳಕ್ಕೆ ಕೈ ಅಡ್ಡ ಇರಿಸಿ ತಲೆ ಅಲ್ಲಾಡಿಸಿದ. ರವಿ ಉಸ್‌ ಎಂದು ಚೀಲ ಎತ್ತಿದವನೇ ರಾಗಿಯನ್ನು ಆಲಿಕೆಗೆ ಸುರಿದ.

ನಂತರ ಮುಂದೆ ಓಡಿ ಬಂದು ಪ್ಯಾಂಟಿನ ತೋಳನ್ನು ಹಿಡಿದು ಚೀಲದಲ್ಲಿರಿಸಿದ. ಆಗ ನುಣ್ಣಗಿನ ಹಿಟ್ಟು ಚೀಲದಲ್ಲಿ ಬೀಳಲು ಶುರುವಾಯಿತು. ಹಿಟ್ಟು ಬೀಳುತ್ತಿರುವುದನ್ನು ಕಂಡು ರವಿಗೆ ರೋಮಾಂಚನವಾಯಿತು. ಹೀಗೆ ಮೊದಲನೇ ಸುತ್ತು ಯಾವುದೇ ಅಡಚಣೆಯಿಲ್ಲದೆ ಮುಕ್ತಾಯಗೊಂಡಿತು. ಕಿಟಕಿಯಲ್ಲಿ ನಾಲ್ಕಾರು ಹುಡುಗರು ಒಳಗೆ ಇಣುಕಲು ಸಾಹಸಪಡುತ್ತಿದ್ದರು. ಈ ಕಡೆ ರವಿ ಮೆಷೀನಿಗೆ ತೊಡಿಸಿದ್ದ ಪ್ಯಾಂಟಿನ ತೋಳನ್ನಿಡಿದು ಕೊಡವಿ ಕೊಡವಿ ಚೀಲದಲ್ಲಿರಿಸುತ್ತಿದ್ದ. ಮತ್ತಷ್ಟೂ ನುಣ್ಣಗಿನ ಹಿಟ್ಟು ಚೀಲದಲ್ಲಿ ಬೀಳಲು ಶುರುವಾಯಿತು.

ಐದಾರು ನಿಮಿಷದ ನಂತರ ಎರಡನೆಯ ಸುತ್ತು ಮುಗಿದ ಮೇಲೆ ಭದ್ರಪ್ಪ ಆಯ್ತೆಂದು ತಲೆಯಾಡಿಸಿದ. ಎಲ್ಲವೂ ಮುಗಿಯಿತೆಂದು ತಿಳಿದು ರವಿ ಎಡಗೈಯನ್ನು ಪ್ಯಾಂಟಿನ ಒಳಗೆ ತೂರಿಸಿದವನೇ ಅಲ್ಲಲ್ಲಿ ಅಂಟಿಕೊಂಡಿದ್ದ ಹಿಟ್ಟನ್ನೆಲ್ಲಾ  ಹೊರಗೆಳೆಯಲು ಶುರುಮಾಡಿದ. ಅದನ್ನು ಗಮನಿಸದ ಭದ್ರಪ್ಪ ಮೋಟಾರನ್ನು ಆರಿಸುವುದನ್ನು ಮರೆತು ಕಿಟಕಿಯಲ್ಲಿ ಇಣುಕುತ್ತಿದ್ದ ಹುಡುಗರನ್ನು ಗದರಿಸಲು ಓಡಿದ. ರವಿಯು ಕೈ ತೂರಿಸಿದಂತೆಲ್ಲಾ ಹಿಟ್ಟು ಸಿಗುತ್ತಿತ್ತು. ಎರಡು ನಿಮಿಷವಾಗಿರಬೇಕು, ಚಟ್-ಪಟ್‌ ಎಂದು ಸದ್ದು ಕೇಳಿಸಿತು. ಅತ್ತ ಹೊರಗೆ ಕಾದು ಕುಳಿತಿದ್ದ ಸಿದ್ದನಿಗೆ ಎದೆ ಒಡೆದುಹೋದಂತಾಯಿತು.

ಮೊದಲೇ ರವಿಯ ಚೇಷ್ಟೆಗಳು ಒಂದಲ್ಲಾ ಎರಡಲ್ಲಾ ಅಂತದ್ದರಲ್ಲಿ ಗಿರಣಿಯ ಒಳಗೆ ಅವನನ್ನು ಬಿಟ್ಟಿದ್ದೇ ತಪ್ಪಾಯ್ತೆಂದು ಹೆದರಿ ಓಡಿದ. ಪ್ಯಾಂಟಿನ ತೋಳಿನ ಒಳಗೆ ಕೈ ಇಟ್ಟರೆ ತಿರುಗುವ ಮೋಟಾರಿಗೆ ಸಿಕ್ಕಿ ಕೈ ಪುಡಿ-ಪುಡಿಯಾಗುವುದೆಂದು ಹೇಳಲು ಮರೆತಿದ್ದ ಸಿದ್ದ ತನ್ನನ್ನು ತಾನು ಶಪಿಸಿದ. ಅಷ್ಡರಲ್ಲಿ ಭದ್ರಪ್ಪ ಜೋರಾಗಿ ಸಿದ್ದನ ಹೆಸರು ಕೂಗಿದ್ದು ಕೇಳಿಸಿ ಒಡೆದು ಹೋಗುತ್ತಿದ್ದ ಹೃದಯವನ್ನಿಡಿದು ಸಿದ್ದ ಒಳ ನುಗ್ಗಿದ. 

ಒಳಗೆ ಹೋಗಿ ನಿಂತವನಿಗೆ ಆಶ್ಚರ್ಯ ಕಾದಿತ್ತು. ಅಲ್ಲಿ ನೋಡಿದರೆ ರವಿ ಎಲ್ಲಾ ಚೀಲಗಳನ್ನು ಶಿಸ್ತಿನಿಂದ ಕಟ್ಟಿಕೊಂಡು ಹೊರಡಲು ತಯಾರಾಗಿದ್ದ. ಮೋಟಾರು ಸ್ತಬ್ಧವಾಗಿತ್ತು. ಕಿಟಕಿಯ ಹಿಂದೆ ಯಾರೂ ಇರಲಿಲ್ಲ. ಕೈಕಾಲುಗಳು ಇನ್ನೂ ಅದುರುತ್ತಿದ್ದವು. ಭದ್ರಪ್ಪ ಕೂಗಿದ, ‘ಹೇ ಸಿದ್ದ, ಬಾರೋ ಇಲ್ಲಿ, ನಿನ್‌ ತಮ್ಮಂಗೆ ಆಗಲ್ಲ ಚೀಲ ಎತ್ಕೊಂಡು ಹೋಗ್‌ ಬಾರೋ’. ಅಂದರೆ ತಾನು ಇಲ್ಲಿಯವರೆಗೂ ಕಂಡಿದ್ದು ಕನಸೇ?. ಸಿದ್ದನ ಕಣ್ಣಲ್ಲಿ ನೀರು ಹರಿಯತೊಡಗಿತು.

ಭದ್ರಪ್ಪ ಕಿಟಕಿ ಬಳಿ ಎಸೆದ ಕಡ್ಡಿಯೊಂದು ಮೊಟಾರು ಬೆಲ್ಟಿಗೆ ತಗುಲಿ ಚಟ್-ಪಟ್‌ ಸದ್ದು ಮಾಡಿತ್ತು. ಚೀಲವನ್ನೆಲ್ಲಾ ಎತ್ತಿ ಸೈಕಲ್ಲಿಗೇರಿಸಿ ತಳ್ಳಿಕೊಂಡು ವಾಪಸು ಮನೆ ಕಡೆ ನಡೆಯುವಾಗ ರವಿಯ ತಲೆಯನ್ನೊಮ್ಮೆ ನೇವರಿಸಿ ತನ್ನ ಜೇಬಿನಲ್ಲಿದ್ದ ನಾಣ್ಯವನ್ನು ತಮ್ಮನ ಕೈಗಿರಿಸಿ ಹೇಳಿದ ‘ಕಡ್ಲೆ ಮಿಠಾಯಿ ತಿನ್ನು’, ‘ನಾಳೆಯಿಂದ ಇಸ್ಕೂಲಿಗೆ ಬಂದ್ರೆ, ನಾನೇ ಗಿರಣಿಗೆ ಹೋಗಲು ಹಣ ತೆಕ್ಕೊಂಡೆ ಅಂತ ಅಪ್ಪಂಗೆ ಹೇಳ್ತಿನಿ’. ರವಿ ‘ಹೂಂ’ ಎಂದು ತಲೆಯಾಡಿಸಿದ.

‍ಲೇಖಕರು Admin

July 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: