ಚೈತ್ರಾ ಶಿವಯೋಗಿಮಠ
ಬಿಡುಗಡೆ!
ಪುಟಗಳ ತಿರುವಿ
ಪದಗಳ ಹರವಿ ಬೆರಗಾದರೂ
ಭಾವಕ್ಕೆ
ಬಿಡುಗಡೆಯ ಭಾಗ್ಯ ಸಿಗಲೊಲ್ಲದು.
ಉಟ್ಟು, ಉಂಡು
ಸಿಂಗರಿಸಿ ಮನವ ಮುದಗೊಳಿಸಿದರೂ
ಭಾವಕ್ಕೆ
ಬಿಡುಗಡೆಯ ಭಾಗ್ಯ ಸಿಗಲೊಲ್ಲದು
ಮನವ ಹರವಿ
ಅಂತರಾಳವ ಸುರುವಿ ಹಗುರಾದೆನೆಂದರೂ
ಭಾವಕ್ಕೆ
ಬಿಡುಗಡೆಯ ಭಾಗ್ಯ ಸಿಗಲೊಲ್ಲದು

ದೂರದೊಂದು ಕುಹೂ
ಅನವರತ ಇಂಪಾಗಿ ಕೇಳಿದರೂ
ಭಾವಕ್ಕೆ
ಬಿಡುಗಡೆಯ ಭಾಗ್ಯ ಸಿಗಲೊಲ್ಲದು
ಹರಡಿದ ಪದಗಳನೆಲ್ಲ
ಹೆಕ್ಕಿ, ಒತ್ತಾಗಿ
ಒಂದರ ಹಿಂದೊಂದು ಪೋಣಿಸಿ
ಕಟ್ಟಿ, ಮಾಲೆಯ ಹಿಡಿದು,
ಪದಗಂಧವ ಸಂಭ್ರಮಿಸಿದಾಗಲೆ
ಭಾವಕ್ಕೆ ಬಿಡುಗಡೆಯ ಭಾಗ್ಯ!
ಅನುವಾದಿತ ಪದ್ಯ
ಖಲೀಲ್ ಗಿಬ್ರಾನ್ ನ “Fear”ಪದ್ಯದ ಭಾವಾನುವಾದ
ಭಯ
ಶರಧಿಯಲ್ಲಿ ಲೀನವಾಗುವ ಮೊದಲು
ನದಿ ಭಯದಿಂದ ಥರಗುಟ್ಟುತ್ತಾಳೆ
ಬೆಟ್ಟದ ತುತ್ತ ತುದಿಯಿಂದಿಳಿದು, ನೀಳವಾದ
ತಿರುವುಗಳೊಂದಿಗೆ
ಕಾಡುಮೇಡು, ಹಳ್ಳಿಗಾಡುಗಳ ಬಳಸಿ ಬಂದ
ಹಾದಿಯನ್ನೊಮ್ಮೆ ಹಿಂದಿರುಗಿ ನೋಡುತ್ತಾಳೆ!
ಮುಂದಡಿಯಿಟ್ಟರೆ,
ತನ್ನೊಳಗೇ ಕರಗಸಿಕೊಳ್ಳುವ ಅನಂತ ಸಾಗರ
ಅವಳ ಕಣ್ಣ ಮುಂದೆಯೇ

ಆದರವಳಿಗೆ ಹಿಂದಿರುಗಿ ಹೋಗಲು
ಶಕ್ಯವೇ ಇಲ್ಲ!
ವಾಸ್ತವದಲ್ಲಿ, ಯಾರೂ ಸಹಹಿಮ್ಮುಖವಾಗಿ
ಚಲಿಸುವುದು ಅಸಾಧ್ಯವಲ್ಲದೆ ಅಸಂಭವವೂ
ನದಿ ಸಾಗರನ ಒಳ ಹೋಗುವ
ಸಾಹಸವನ್ನ ಮಾಡಲೇಬೇಕು!
ಅಂದಾಗಲೇ ಭಯದ ನೆರಳು ಸರಿಯುವುದು.
ಆಗಲೇ ಅವಳಿಗೆ ತಿಳಿಯುವುದು ತಾನು ಸಾಗರನಲ್ಲಿ
ಕಣ್ಮರೆಯಲ್ಲ, ಐಕ್ಯಳಾಗುವಳು!
ನದಿ ತಾನೂ ಶರಧಿಯಾಗುವಳು.






ಎರಡೂ ಕವಿತೆಗಳೂ ತುಂಬಾ ಚೆನ್ನಾಗಿವೆ ಚೈತ್ರಾ
ಚೆಂದದ ಕವಿತೆಗಳು.
ಧನ್ಯವಾದಗಳು ಮ್ಯಾಮ್