ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೈತನ್ಯದ ಶಾರ್ವರಿ ಎದೆಯೊಳಗೆ..

(ಕೊರೊನ ಕಷ್ಟಕಾಲಕ್ಕೆ ಸ್ಪಂದಿಸಿ ಬರೆದ ಕವಿತೆ)

ಬದುಕಿನ ಕೈಯನೆ ಹಿಡಿದುಬಿಡಲಿ

ದಾದಾಪೀರ್ ಜೈಮನ್ 

ಹೊಸ್ತಿಲಾಚೆಗೆ ಅಂಡಲೆಯುತ್ತಿದೆ ಅದು;
ಕಾಣದೆ ಕಣ್ಣಿಗೆ ಹೊರಗೆ
ಅಷ್ಟ ದಿಕ್ಕುಗಳೆಲ್ಲೆಡೆ ಹಬ್ಬಿದೆ
ಉಳಿಸದೆ ಹೆಜ್ಜೆಯ ಗುರುತನು ಇಳೆಗೆ

ದಾಟಬಾರದ ಲಕ್ಷ್ಮಣರೇಖೆಯು
ಮನೆಗೂ ಬಯಲಿಗೂ ನಡುವೆ ಇದೆ
ಅಂದಿಗೂ ಇಂದಿಗೂ ಎಂದಿನ
ಕಥೆಗಳ ಎಚ್ಚರ ಬೆಚ್ಚಗೆ ಕಾಯುತಿದೆ

ಹೊರಗಡೆ ಸುರಿಯುವ ಧೋ-ಧೋ ಮಳೆಗೆ
ಗುಡುಗು ಸಿಡಿಲುಗಳ ಸಾವಿನ ಭಯಕೆ
ವೃಂದಾವನದ ಮಂದಿಗಳೆಲ್ಲ ಗೋವರ್ಧನ
ಗಿರಿಯ ಗೃಹಬಂಧನದೊಳಗೆ
ಏಳು ಹಗಲುಗಳು ಏಳು ಇರುಳುಗಳು
ಪೊರೆದುದು ಬಾಲಮುರಳಿಯ ಕಿರುಬೆರಳು
ಆತ್ಮಸ್ಥೈರ್ಯಗಳ ಆಳದ ಆಲದ ಹಿರಿನೆರಳು

ಸುತ್ತಲೂ ಕತ್ತಲು ಉಸಿರುಗಟ್ಟಿಸುತಿರುವಾಗ
ಬಿಡುಗಡೆಗೊಳಿಸಿತು ಕೃಷ್ಣನ ಕೊಳಲಿನ ದಿವ್ಯನಾದ
ಕೇಳುತ ಉಳಿಯಲು ಹೊರಗಿನ ರಕ್ಕಸ ಸತ್ತು ಹೋದ
ಜಡಿಮಳೆ ನಿಂತಿತು ಬಿಸಿಲಿನ ಝಳ ಬಡಿಯಿತು
ಊರತುಂಬೆಲ್ಲ ಮತ್ತೆ ಹೊಸ ಜೀವಸಂಚಾರ
ವಿಕಾರಗಳೆಲ್ಲವೂ ಅಳಿದು ವೈರಗಳೆಲ್ಲವೂ ಮಡಿದು
ಹರಿಯತೊಡಗಿದಳು ಚೈತನ್ಯದ ಶಾರ್ವರಿ ಎದೆಯೊಳಗೆ

ಅಂದಿನ ಕಾಲದ ಎಂದಿನ ಆಸೆಯು
ಕೊನೆಗೂ ಬದುಕಿನ ಕೈಯನೆ ಹಿಡಿದುಬಿಡಲಿ
ಬೇವಿನ ಕಹಿ ಮರೆತು ಬೆಲ್ಲದ ಸಿಹಿ ನೆನೆದು
ಇಷ್ಟಕಾಲದ ಯುಗವು ಬೇಗಬೇಗನೆ ಓಡಿ ಬಂದುಬಿಡಲಿ

 

‍ಲೇಖಕರು avadhi

26 March, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading