ಚಿತ್ರ ಸಂತೆಯೊಳಗೊಂದು ದೀಪಾವಳಿ

ಜಗತ್ತಿನಲ್ಲಿರುವ ಎಲ್ಲಾ ಅಮೂಲ್ಯ ವಸ್ತುಗಳು ಮನೆಯ ಸಿಂಗಾರವಾಗಬೇಕು ಎನ್ನುವ ವಯಸ್ಸು.

ಮೈಸೂರಿನಿಂದ ನಮ್ಮನ್ನು ಅಂದಿನ ಸಂಜೆಗೆ ವಾಪಾಸ್ಸು ಬರುವಂತೆ ಮಾಡಿತ್ತು. ದೂರದೂರಿನ ಹಾದಿಯನ್ನು ಹಾದು, ಬರುವಾಗಲೇ ತಡವಾಗಿಯೂ ಹೋಗಿತ್ತು. ಆಗಿನ್ನೂ… ಚಿತ್ರಸಂತೆ ಅನ್ನುವ ಪರಿಕಲ್ಪನೆ ಬೆಂಗಳೂರಿನ ಕಲಾ ಲೋಕದಲ್ಲಿ ಹೊಸದಾಗಿ ಚಾಲನೆಗೆ ಬಂದಿತ್ತು. ಯಾವಾಗಲೂ ಹಣವಂತರ ಕೈ ಸೊತ್ತಾಗುವ ಬೆಲೆ ಬಾಳುವ ಕಲಾಕೃತಿಗಳು, ಸಾಮಾನ್ಯ ಜನತೆಗೂ ಕೈಗೆಟುಕುವಂತೆ, ಚಿತ್ರಸಂತೆ ಎನ್ನುವ ಹೊಸ ಪರಿಕಲ್ಪನೆಯಿಂದಾಗಿ ರಸ್ತೆಯುದ್ದಕ್ಕೂ ಅನಾವರಣಗೊಂಡಿತ್ತು. ಚಿತ್ರರಸಿಕರ ಮನೆಮನಗಳನ್ನು ಅಲ್ಲಿಗೆ ಅದು ಎಳೆದು ತಂದಿತ್ತು.

nammuru-1ಆದರೆ… ಅಲ್ಲಿಯ ಗಜಿಬಿಜಿ ಕಂಡ ಮೇಲೆ “ಈ ಚಿತ್ರಗಳನ್ನು ನೋಡಿ ನಮ್ಮದಾಗಿಸಿಕೊಳ್ಳಲು ಕೂಡ ಒಂದು ಸಮಾಧಾನದ ಸ್ಥಿತಿ ಹಾಗೂ ವಾತಾವರಣ ಬೇಕಾಗುತ್ತದೆ. ಕಲೆಯೊಂದು ಧ್ಯಾನ ಹಾಗೂ ಎಚ್ಚರಿಕೆಯ ನಡುವಿನ ಮಂಪರು ! ಒಬ್ಬರಿಂದ ಇನ್ನೊಬ್ಬರಿಗೆ ತನ್ನೊಳಗಿನ ದ್ರವವನ್ನು ದಾಟಿಸಲು ಕೂಡ ಧಾವಂತ ಸಲ್ಲದು. ಅದಕ್ಕಾಗಿಯೇ ಸೃಜನಶೀಲನೊಬ್ಬ ನೋಡುಗನ ಕಣ್ಣಲ್ಲಿ ವಿಭಿನ್ನವಾಗಿ ಕಾಣುತ್ತಾನೆ. ಒಳಗೆ ಏಳುವ ತಲ್ಲಣಗಳನ್ನು ತಣಿಸುವ ತಾಳಿಕೆಯೆ, ಕಲೆಯ ಕಲಿಕೆಯಿರಬಹುದೇನೋ? “. ಎಂಬ ಅನಿಸಿಕೆಗಳ ಹೊರಳಾಟವೂ ಮನಸ್ಸಿನಲ್ಲಾಯಿತು.

ಜನ, ಜನ, ಜನ… ಎಲ್ಲೆಲ್ಲೂ ತಾರಾಡುವ ಕಾಲುಗಳು. ಅದರಿಂದೇಳುವ ಧೂಳಿನ ನಡುವೆ ಆ ಇಳಿಸಂಜೆಯಲ್ಲಿ… ಕಲಾಕಾರರು ತೆರೆದಿಟ್ಟ ಅಂಗಡಿಯ ನಡುವಲ್ಲಿ, ಮುಗಿಬಿದ್ದ ತಲೆಗಳ ನಡುವೆ ತಲೆತೂರಿಸಿದೆವು. ಯಾವ ಕಲೆಯೂ ತಲೆ ವಳಗೆ ಇಳಿಯದೆ ಸುಮ್ಮನೆ ನೋಡುತ್ತಾ ಸಾಗಿದೆವು. ಅದಾಗಲೇ ಕಲಾವಿದರು ತಮ್ಮ ಹರವಿದ್ದ ಕಲಾ ಕೃತಿಗಳನ್ನು ವಾಪಾಸ್ ಮನೆಗೆ ಕೊಂಡೊಯ್ಯಲು ಜತನದಿಂದ ಜೋಡಿಸುತ್ತಿದ್ದರು. ಇದನ್ನು ನೋಡುತ್ತಾ ಮುಂದೆ ಹೋಗುವುದೆ ಒಂದು ಅನುಭವವಾಗಿತ್ತು.

ಅಡಗಿದ ಅಡವಿಯಿಂದ ಸ್ವಚ್ಚಂದ ಪ್ರಾಣಿಗಳು ಬಂದು, ಜೀವಂತವಾಗಿ ಝೂನಲ್ಲಿ ನಿಂತ ತೆರದಲ್ಲಿ ನೋಡುವ ಜನರ ಮುಂದೆ ಕಲಾಕೃತಿಗಳು ಅನಾವರಣಗೊಂಡಿದ್ದವು. 5 ಲಕ್ಷ ರೂಗಳಿಗೆ ಮಾರಾಟವಾದ ಬೃಹತ್ ಆನೆಯ ಚಿತ್ರವೊಂದು ವಾಹನವನ್ನೇರಿತ್ತು. ದಸರಾ ಅಂಬಾರಿ ಹೊತ್ತು ಬಂದ ದ್ರೋಣ ತನ್ನ ಕಾರ್ಯ ಮುಗಿಸಿ ಖಾರಾಪುರದ ಕಾಡಿಗೆ ಹೊರಟು ನಿಂತಂತೆ ಅದು ಕಾಣುತಿತ್ತು. ಆನೆ ಇದ್ದರೂ ಬೆಲೆ, ಸತ್ತರೂ ಬೆಲೆ, ಎಂದು ಸಾರಿ ಹೇಳುವಂತೆ ಗಜಗಂಭೀರದಲ್ಲಿ ಮಾನವನ ಫ಼್ರೇಮಿನೊಳಗೆ ಸೊಂಡಿಲೆತ್ತಿ ದಾರಿಗೆ ಅಡ್ಡಬರಬೇಡಿ, ದಾರಿ ಕೊಡಿ ಎಂದು ಅದು ಕೇಳುವಂತಿತ್ತು.

ಚಿತ್ರಕಲಾ ಪರಿಷತ್ತಿನ ವಾತಾವರಣದಿಂದ ದೂರವಾಗುತ್ತಿರುವಾಗ ಒಬ್ಬ ಯುವ ಕಲಾವಿದ “ಸರ್” ಎಂದ. ಅವನ ಗೆಲುವಿಲ್ಲದ ದನಿ ನಡೆಯನ್ನು ನಿಲ್ಲುವಂತೆ ಮಾಡಿತು. ಮೈ ಹಿಡಿ ಮಾಡಿ ಹೇಳಿದ “ಸರ್, ತಗೊಳ್ಳಿ ಸರ್, ದೂರದ ಅಳಂದದಿಂದ ಬಂದಿದೀನಿ. ವಾಪಾಸ್ ಹೋಗದಿಕ್ಕೆ ಬಸ್ ಚಾರ್ಜ್ ಬೇಕು.” ಆ ಕರೆಗೆ ನಿಂತು ಚಿತ್ರಗಳನ್ನು ನೋಡಿದೆವು. ಸಮಾಧಾನವಾಗದ ರೇಖೆಗಳು, ಕಲಿಕೆಯ ಮಾದರಿಯವು. ಅದರೊಳಗೊಂದು ಉತ್ತಮವಾದ ಫ಼್ರೇಮಿದ್ದ ಚಿತ್ರವೊಂದನ್ನು ಖರೀದಿಸಿ ಮನೆಗೆ ತಂದೆವು. ಯಾಕೆಂದರೆ ಕಲಾವಿದ ಬೇಡಿದ ಹಣ ಕೇವಲ ಅದರ ಚೌಕಟ್ಟಿನ ಬೆಲೆಯಷ್ಟೇ ಆಗಿತ್ತು.

colorsಕಲಾವಿದನಿಗೆ, ಅವನ ಗೀಳು ಜೀವನ ನಿರ್ವಹಣೆ ಕೂಡ ಆಗಿರುತ್ತದೆ. ಮನಸು, ಮನೆ, ಸಮಾಜ, ಮೂರರ ನಡುವಿನ ಒಂದು ಸೇತುವೆಯನ್ನು ಅವನು ಕಟ್ಟಿಕೊಳ್ಳಬೇಕಿರುತ್ತದೆ. ವೈಯಕ್ತಿಕವಾದುದು ಸಾರ್ವತ್ರಿಕವಾದುದು, ಸಾರ್ವತ್ರಿಕವಾದುದು ವೈಯಕ್ತಿಕವೂ ಆಗಿರುತ್ತದೆ. ಸೃಜನಶೀಲ ದುಡಿಮೆಯ ಹಿಂದೆ ಏನೆಲ್ಲ ಕಷ್ಟಗಳನ್ನು ಇಟ್ಟಿದ್ದೀಯಪ್ಪಾ! ದೇವರೆ.

ಮನೆಗೆ ಬಂದು ಅದನ್ನು ರೂಮಿನಲ್ಲಿ ತೂಗು ಹಾಕಿದೆವು. ಸೊಕ್ಕಿನಿಂದ ನಿಂತ ಹೆಣ್ಣು. ಪಾರದರ್ಶಕ ತೆರೆಯ ಹಿಂದೆ ತೆರೆದಿಟ್ಟ ಅವಳ ಮೊಲೆಗಳನ್ನು ನೋಡಿ ಕೆಲವರು, “ವಾವ್” ಎಂದರೆ ಇನ್ನೂ ಕೆಲವರು ಮುಖ ತಿರುಗಿಸುತ್ತಾರೆ. ನುರಿತ ಕಲಾವಿದರೊಬ್ಬರು ಇದನ್ನು ಕಂಡ ಕೂಡಲೆ “ವೆರಿ ಬ್ಯಾಡ್” ಎಂದರು. ಆಗ….. ಯುವ ಕಲಾವಿದನ ಹಣೆಯ ಮೇಲಿನ ಗೆರೆಗಳು ನೆನಪಾದವು. ಮಲಗಿದಲ್ಲಿಂದ ಕಾಣುವ ಆ ಚಿತ್ರವನ್ನೊಮ್ಮೆ ಗಮನಿಸಿದೆ. ಅಂಗಾಂಗದ ರಚನೆಯಲ್ಲೆ ಅಳತೆ ಏರುಪೇರಾಗಿದ್ದಂತೆ ಕಂಡಿತ್ತು. ಬಣ್ಣದ ವಿನ್ಯಾಸ ಹದವಾಗಿರುವುದರಿಂದಷ್ಟೆ ಅದು ಚಿತ್ರವಾದಂತೆ ಕಂಡಿತು. ಬಡತನಕ್ಕೂ ಕಲೆಗೂ ಸಂಬಂಧವಿದೆಯೆ ? ವಯಸ್ಸಿಗೂ, ಕಲಾತ್ಮಕ ಅನುಭವಕ್ಕೂ ತಾಳೆಯಾಗುತ್ತದೆಯೇ ?

ಯೋಚಿಸುತ್ತಲೇ ಹಾಲಿನಲ್ಲಿದ್ದ ಇನ್ನೊಂದು ಕೃತಿಯನ್ನು ಗಮನಿಸಿದೆ. ನನ್ನ ಗಮನ ಸೆಳೆಯುತ್ತಾ ಅದು ತನ್ನ ಹತ್ತಾರು ಮುಖಗಳನ್ನು ಬಿಚ್ಚಿಡತೊಡಗಿತು. ಅಚ್ಚರಿ ಹುಟ್ಟಿಸುವಷ್ಟರಮಟ್ಟಿಗೆ ಅದರೊಳಗಿಂದ ಕತೆಯೊಂದು ಹುಟ್ಟಿಕೊಂಡಿತು. ನಕ್ಷತ್ರ, ಸೂರ್ಯ-ಚಂದ್ರರಾದಿಯಾಗಿ ಬಂದಿಳಿದು ಭೂಗೋಳವೊಂದು ಅಲ್ಲಿ ತೆರೆದುಕೊಂಡಿತು. ಖಗಮೃಗಗಳು, ಹಕ್ಕಿ-ಪಕ್ಷಿಗಳು ಬಂದು ಹಾರಾಡಿದವು.

ಹರಿವ ತೊರೆಯಲ್ಲಿ ಮೀನು ಹುಟ್ಟಿ, ಹೆಣ್ಣಿನ ತುರುಬಿಗೆ ಸಿಕ್ಕಿಸಿದ್ದ ಬಾಣ ಹಿಡಿದೆಳೆದ ಬಿಲ್ಲುಗಾರನೊಬ್ಬನ ಪ್ರವೇಶವಾಯಿತು. ಅಷ್ಟರಲ್ಲಿ… ಮನೆಯ ಚಿಲಕ ಕುಟ್ಟಿದಂತಾಗಿ ಎದ್ದು ಆಚೆಗೆ ಹೋದೆ. ಬಂದವರೊಟ್ಟಿಗೆ ಮಾತು ಮುಗಿಸಿ ಅವರನ್ನು ಕಳಿಸಿ ಬಂದೆ. ಬಿಟ್ಟು ಹೋಗಿದ್ದ ಕಥೆಯ ತಂತನ್ನು ಮತ್ತೆ ಹಿಡಿದು ನಿಂತು ಕಲಾಕೃತಿಯನ್ನು ಹತ್ತಿರಕ್ಕೆ ಬಂದು ನಿಂತು ಗಮನಿಸಿದೆ.

ದೂರದಿಂದ ನೋಡಿದಾಗ, ಕಥೆಯೊಳಗೆ ಇಳಿದು ಬಂದು ಮೈ ಚಳಿ ಬಿಟ್ಟು ಹುರುಪಾಗಿದ್ದ ಪಾತ್ರಗಳೆಲ್ಲ, ಅಕಾರಾಳ ವಿಕರಾಳವಾಗಿ ಕಾಣುತಿದ್ದ  ಹೆಣ್ಣಿನ ದೇಹದ ಅಂಗಾಂಗದ ಒಂದೊಂದು ಗೆರೆಯೊಳಗೆ ನುಸುಳಿ ಅರ್ಥವಾಗದಂತೆ ಸ್ತಬ್ಧವಾಗಿ ಅದರೊಳಗೆ ಲೀನವಾದವು. ಕಣ್ಣಲ್ಲಿ ಕಣ್ಣಿಟ್ಟು ಗಮನಿಸಿದಾಗ ಮೀನು ಚಲಿಸದೆ ಅವಳ ಕಣ್ಣಾಗಿತ್ತು. ನನಗೆ ಕಂಡ ಕೆಂಪನೆ ಸೂರ್ಯ ಅವಳ ಕುಂಕುಮವಾಗಿದ್ದ. ಬೆಳದಿಂಗಳ ಹರಿಸಿದ್ದ ಚಂದ್ರ, ಮೊಲೆಯಾಗಿ ಮೂಡಿದ್ದ. ಕೂದಲು ಕಾಡಾಗಿ ಹರಡಿತ್ತು.

ಸುತ್ತಲೂ ಪ್ರಾಣಿಗಳು ಇಟ್ಟಾಡಿ, ಇಡೀ ಜಗತ್ತೆ ಅವಳ ದೇಹವನ್ನು ಪ್ರತಿನಿಧಿಸುತ್ತಾ, ಅವಳನ್ನೆ ಬೊಂಬೆಮನೆ ಮಾಡಿಕೊಂಡು ಅದರೊಳಗೆ ಬಂದು ತೆಪ್ಪಗೆ ಕುಂತಿದ್ದವು.  ಬಿಲ್ಲಿನಾಕೃತಿಯೊಂದು ತಲೆಯ ತುರುಬನ್ನು ಹಿಡಿದಿಟ್ಟಿತ್ತು. ಬಾಣದ ತುದಿಗೆ ಮಿಕವೊಂದು ನೇತು ಬಿದ್ದಿತ್ತು. ಆ… ಚೌಕಟ್ಟಿನಲ್ಲಿ  ಇದುವರೆಗೂ ಕಾಣದಿದ್ದ ಲೋಕವೊಂದು ಇದ್ದಕ್ಕಿದ್ದಂತೆ ಕಣ್ಬೆಳಕಲ್ಲಿ ಕನಸಂತೆ ಕಣ್ಣಂಚಿಗೆ ತೆರೆದುಕೊಂಡು ಕುಳಿತಿತ್ತು. ಅಲ್ಲೇ ಪ್ರತಿಷ್ಠಿತ ಕಲಾವಿದರೊಬ್ಬರ ರುಜು ಕೆಳಗಿತ್ತು.

ತಟ್ಟನೆ ನಮ್ಮೂರಿನ ದೀಪಾವಳಿಯ ಆ ದಿನ ನೆನಪಾಯಿತು. ಹರೆಯದ ವಯಸ್ಸು, ಹೊಳೆಯುವ ಮಯ್ಯಿಗೆ ಅತ್ತಿಗೆಯ ಒಂದು ಹೊಸ ರೇಷ್ಮೆ ಸೀರೆಯೊಂದನ್ನು ಉಡುವಾಸೆ. ಮನೆಯ ಚಾವಡಿಯಗಲಕ್ಕೂ ಇದ್ದ ಎರಡು ಬದಿಯ ಕಿಟಕಿಯಲ್ಲಿ ದೀಪಗಳನ್ನು ಹಚ್ಚಿಡುವ ಯೋಜನೆ ಅಂದು ನನ್ನ ಮನಸ್ಸಲ್ಲಿ ರೂಪುಗೊಂಡಿತ್ತು. ಹರೆಯದ ಸಂಭ್ರಮ. ಅವ್ವನಿಗೆ ಮೈ ತುಂಬ ಕೆಲಸ.

deepamದೀವಳಿಗೆ ಹಬ್ಬ ನಮ್ಮಲ್ಲಿ ದನಕರುಗಳ ಹಬ್ಬ. ಪ್ಯಾಟೆ ಮುಖ ಹೊತ್ತು ಬಂದ ನಮಗೆ ಹಳ್ಳಿ ಕೆಲಸಗಳ ಅರಿವಿರಲಿಲ್ಲ. ಅಪರೂಪಕ್ಕೆ ಊರಿನ ದೀಪಾವಳಿ ಆ ಬಾರಿ ದೊರಕಿತ್ತು. ತಲೆವಾಗಿಲು, ಮುಂದ್ಲ ಬಾಗ್ಲು , ಹಿಂದ್ಲ ಬಾಗ್ಲು, ಕೊಟ್ಟಿಗೆ ಬಾಗ್ಲು, ಹಂಗೆ… ದೇವರ ಮುಂದ್ಲ ಗೂಡಿಗೆ ಮಾತ್ರ ರಾತ್ರಿ ನಕ್ಷತ್ರದ ಬೆಳಕನ್ನು ತಂದು ಹಚ್ಚಿಡುವುದು ಹಳ್ಳಿ ಮನೆಗಳ ಸಂಪ್ರದಾಯ.

ಅಂಥ ಸೊಬಗು, ಎಂಥ ಘನತೆಯಿಂದ ರಾತ್ರಿಯ ಕತ್ತಲಿಗೆ ಬೆರಗನ್ನು ತಂದು ಕೊಡುತ್ತವೆ ! ಯಾವುದೇ ತೋರಿಕೆಯಿಲ್ಲದೆ, ಬದುಕಿನ ಹಿಡಿಗೆ ಹಿಡಿಸುವಷ್ಟೆ ಹೊಳಪು ಆ ದೀಪಗಳಿಗೆ. ಇರುಳನ್ನು ಕದಲಿಸದೆ ಅದು ತಂತಾನೆ ನಿದ್ದೆಗೆ ಜಾರುವಂತಿರುತ್ತದೆ. ಹಳ್ಳಿಮನೆಯ ದೀಪಗಳು ಕತ್ತಲನ್ನು ನೋಯಿಸದೆ ಕಣ್ಣಿಗೆ ಬೇಕಾದಷ್ಟೆ ಬೆಳಕನ್ನು ಕೊಟ್ಟು, ಸಹಜವಾಗಿ ಗಿಡದಲ್ಲಿ ಅರಳಿದ ಹೂನಂತೆ ಕಂಡವರ ಕಣ್ಣಿಗಷ್ಟೇ ತಾಗಿ ಆರಿ ಹೋಗುತ್ತಿದ್ದವು.

ಕತ್ತಲೆಯ ಹೊಟ್ಟೆಯನ್ನೇ ಸೀಳಿ ಝಗಮಗಿಸುವ ನಗರದ ಬೆಳಕು ಇರುಳಿನ ನೆಮ್ಮದಿಯನ್ನೇ ಕಸಿದುಕೊಂಡಿದೆ ಎಂಬುದು ಈಗ ನಮ್ಮ ಅರಿವಿಗೆ ಬರುತ್ತಿದೆ. ಆದರೆ, ಆಗ, ಹೊಸತೇನನ್ನೋ ಊರಿಗೆ ತಂದು ತೋರುವ ಉತ್ಸಾಹದಲ್ಲಿ ಒಂದು ಮೂವತ್ತು ದೀಪಗಳನ್ನು ತರಿಸಿ ದೀಪ ಸಾಲಿನ ಮೆರವಣಿಗೆ ಮಾಡಿದೆ. ಅದಕ್ಕೆ ನಮ್ಮ ಅಣ್ಣತಮ್ಮರ ಮನೆಯ ಹುಡುಗರ ಬಳಗವು ಬಂದು ಸೇರಿತು. ರೇಷ್ಮೆ ಸೀರೆ ಉಟ್ಟು ಪಟಾಕಿ ಹೊಡೆದಾಯ್ತು.

ಆದರೆ ಎದುರುಗಡೆಯ ದೊಡ್ಡಜ್ಜನ ದೊಡ್ಡ ಮನೆಯ ಕಿಡಕಿಯಿಂದ ಕಂಡ ಎರಡ್ಮೂರು ಮಕ್ಕಳ ತಲೆಗಳು ಸ್ವಂತದ್ದೆ ಆದರೂ ಅವು ಹೊರಗೆ ಬರದೆ ಅಲ್ಲಿಂದಲೇ ಇಣುಕುತ್ತಿದ್ದವು. “ಬನ್ರೋ” ಎಂದ್ರೂ, ಹೊರಗೆ ಬರಲಿಲ್ಲ. ಆಗಿನ ಸಂಭ್ರಮದಲ್ಲಿ, ಆಗ ಅದು, ದೊಡ್ಡದು ಎಂತನಿಸಲೂ ಇಲ್ಲ. ಈಗ ಆ ಮನೆ ನೆಲ ಸಮವಾಗಿ ಹೋಗಿದ್ದರೂ,  ಕಿಟಕಿಯ ಫ಼್ರೇಮಿನೊಳಗಿನ ಆ ನಾಕೈದು ಮಕ್ಕಳ ಮುಖಗಳು, ಈಗಲೂ, ಮನದ ಕಿಟಕಿಯಲ್ಲಿ ಬೇಕಾದಗ ತೆರೆದುಕೊಂಡು ಪಾಪ ಪ್ರಜ್ಞೆಯನ್ನು ಹೊಟ್ಟೆಯೊಳಗೆ ತಂದು ಹಾಕುತ್ತವೆ. ಮಕ್ಕಳ ಕಣ್ಣುಗಳಲ್ಲಿದ್ದ  ಒಂದು ಕಣ್ಣೋಟ ನನ್ನೊಳಗೆ ಕಳವಳವನ್ನು ಹುಟ್ಟು ಹಾಕುತ್ತ ಮರೆಯಾಗುತ್ತವೆ.

ದೀಪಾವಳಿಯ ಬೆಳಿಗ್ಗೆ ಆಳುಗಳ ಮೂಲಕ ನಮ್ಮ ಮನೆಗೆ ಗೊತ್ತಾಗಿದ್ದು. “ದೊಡ್ಡಜ್ಜನ ಮನೆಯಲ್ಲಿ ಅಕ್ಕಿ ಮುಗಿದು ಹೋದ ಕಾರಣದಿಂದಾಗಿ ಅಂದು ಅವರು ಹಬ್ಬ ಮಾಡದೆ ಹಸಿದಿದ್ದರು. ಆ ಮನೆಯ ಮಗಳನ್ನು ಕೊಟ್ಟ ಇನ್ನೊಂದು ಊರಿನ ಮನೆಯಿಂದ ಹಬ್ಬದೂಟ ಹಾಗೂ ಅಕ್ಕಿ ಬಂದ ಮೇಲೆ ತಡ ರಾತ್ರಿಯಲ್ಲಿ ಆ ಮನೆಯ ಊಟವಾಯಿತು. “ಅವ್ವ” ಹಬ್ಬದ ಕೆಲ್ಸದಲ್ಲಿ ನಂಗೆ ಗೊತ್ತಗ್ಲಿಲ್ವಲ್ಲ, ಪಕ್ಕದಲ್ಲಿದ್ರೂವೆ… ದ್ಯಾಮ ನಂಗೆ ಹೇಳಬಾರ್ದಾ ? ಮುಚ್ಚಿಟ್ಟಕಂಡ್ಲಲ್ಲಾ ?” ಅಂತ ವಾರಗಿತ್ತಿ ನೆನಸ್ಕಂಡು ಪೇಚಾಡಿಕೊಳ್ತು.

ನಾನು ಚಡಪಡಿಸಿ ಹೋದೆ. ಅಂದೇ ಬದುಕಿನ ಇನ್ನೊಂದು ಮುಖವನ್ನೂ ಕಂಡಿದ್ದೆ. ಯಾಕೆ ಅಂದ್ರೆ  ದೊಡ್ಡಜ್ಜನ ಮನೆಯಲ್ಲಿ ಸಮೃದ್ಧಿ ಎನ್ನುವುದು ಕೇವಲ ಹತ್ತು ವರುಶಗಳ ಹಿಂದೆಯೂ ಕಾಲು ಮುರಿದು ಬಿದ್ದಿತ್ತು. ಇದ್ದಕ್ಕಿದ್ದಂತೆ ಸಮೃದ್ಧಿ ಎನ್ನುವುದು ತಿಳಿವಿಗೆ ಬರುವ ಮುನ್ನವೇ ಯಾವಾಗ ಬೇಕಾದರೂ, ಬಡವಾಗಿಬಿಡಬಹುದು ! ಕಣ್ಮರೆಯಾಗಬಹುದು. ಈ ಸ್ಥಿತಿಯಲ್ಲಿ ಇದ್ದ ನಮ್ಮವರ ಮುಂದೆ ಆ ದೀಪಾವಳಿಯಲ್ಲಿ ಬೆಳಕಿನ ಹೊನಲನ್ನೇ ಹರಿಸಿ, ಆಚರಿಸಿದ ಮನಃಸ್ಥಿತಿ ಎನ್ನುವುದು ಬೆಳಕು ಹರಿವಷ್ಟರಲ್ಲೆ ಕಣ್ಣುಗಳನ್ನು ಮಂಜಾಗಿಸಿತ್ತು.

ಅದರ ಹಿಂದೆ ಸರೀಕರ ಮನೆ ಬಾಗಿಲಿಗೆ ಹೋಗಿ ನಿಲ್ಲದಂತೆ ತಡೆದ ಆ ಮಕ್ಕಳ ತಾಯಿಯ ಕಣ್ಣಿನ ಕಾವಲಿರಬಹುದು.  ಕಿಟಕಿಯ ಚೌಕಟ್ಟಿನಲ್ಲಿ ಕುತೂಹಲದಿಂದ ಬಗ್ಗಿ ನೋಡುವ ಮೂರು ಮಕ್ಕಳ ತಲೆಗಳು ಬರೆಯದ ಚಿತ್ರಪಟವಾಗಿ ಎದೆಗೆ ಮೊಳೆ ಹೊಡೆದು ಆತು ನಿಂತುಬಿಟ್ಟಿತು.

‍ಲೇಖಕರು Admin

September 25, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Raghunath

    Nimma baravanigeyinda kaleduhoda Jan nappa avarannu avara urinamulaka morali padedantayitu

    ಪ್ರತಿಕ್ರಿಯೆ
  2. ಮಹೇಶ್ವರಿ.ಯು

    ಖುಷಿಪಡುವ ಗಳಿಗೆಯಲ್ಲಿ ಒಡಹುಟ್ಟುಗಳನ್ನು ನೆರೆಕರೆಯವರನ್ನು ಗಮನಿಸಿಕೊಳ್ಳಬೇಕು.ಸಂಸ್ಕೃತಿಯ ಹಿರಿಯ ಪಾಠವನ್ನು ತಿಳಿಸುವ ಅಂತ :ಕರಣದಿಂದ ಕೂಡಿದ ಆರ್ದ್ರ ಬರವಣಿಗೆ.ನನಗಿಷ್ಟವಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: