‘ಚಿತ್ರಾಕ್ಷರಿ’ಯ ನೆಲೆಯ ಹುಡುಕುತ್ತಾ . . .

ಪುಂಡಲೀಕ ಕಲ್ಲಿಗನೂರು

**

ನಿಸರ್ಗದ ತೆರೆದ ಪುಸ್ತಕದೊಳಗೆ ನಿರಂತರವಾಗಿ ನಡೆದಾಡುವ ವಿಹಂಗಮ ವಿಹಾರಿ, ಕಲಾ ಜಗತ್ತಿನ ಜಂಗಮರು ಶ್ರೀ ಕೆ. ವಿ. ಸುಬ್ರಹ್ಮಣ್ಯಂ. ಅವರು ಲಲಿತಕಲಾ ಇತಿಹಾಸಕಾರರು ಮತ್ತು ವಿಮರ್ಶಕರು. ಮಾತ್ರವಲ್ಲ, ಸ್ವತಃ ಅದ್ಭುತವಾದ ಕಲಾವಿದರೂ ಹೌದು. ಹಲವು ನೆಲೆಗಳನ್ನು ಮಾಧ್ಯಮಗಳನ್ನು ಅಭ್ಯಸಿಸಿ ತಮ್ಮ ಲಲಿತಕಲಾ ಅಭಿವ್ಯಕ್ತಿಗೆ ಪೆನ್ನನ್ನೂ ಹಿಡಿದಿದ್ದಾರೆ, ಬ್ರಷ್‌ನ್ನೂ ಬಳಸಿದ್ದಾರೆ. ಆ ಎರಡೂ ಮುಖಗಳನ್ನು ಈ ಪುಸ್ತಕದಲ್ಲಿ ದಾಖಲಿಸುವ ಅನನ್ಯ ಪ್ರಯತ್ನ ಇಲ್ಲಿ ನಡೆದಿದೆ.

ಕೆ. ವಿ. ಎಸ್. ಅವರು ಲಲಿತಕಲಾ ಮೀಮಾಂಸಕರಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಮುಂಚೂಣಿಯಲ್ಲಿರುವ ವಿಶಿಷ್ಠ ವ್ಯಕ್ತಿತ್ವದ ಸಾಂಸ್ಕೃತಿಕ ಜೀವಿ. ಅಂಥವರನ್ನು ಕುರಿತಾದ ಈ ಪುಸ್ತಕವು ‘ಆನೆಯನ್ನು ಕನ್ನಡಿಯಲ್ಲಿ’ ಕಂಡಂತೆ ಆಗಿರುವುದಂತೂ ಸತ್ಯ. ಇಲ್ಲಿಯ ಪ್ರತಿ ಪುಟವೂ ಕೆ. ವಿ. ಎಸ್. ಅವರನ್ನು ಮತ್ತು ಅವರ ಕಲಾ ಚಟುವಟಿಕೆಯನ್ನು ಸರಳವಾಗಿ ಬಿಂಬಿಸುತ್ತದೆ. ಈ ಸಾಹಸ ಮಾಡಿದ ಹರಿಶ್ರೀಯವರನ್ನು ಮನಸಾರೆ ಅಭಿನಂದಿಸುವೆ. ಮತ್ತು ಈ ಪುಸ್ತಕವನ್ನು ನಮ್ಮ ಕನ್ನಡ ಪ್ರಕಾಶನವು ಬಹು ಹೆಮ್ಮೆಯಿಂದ ಪ್ರಕಟಿಸುತ್ತಿದೆ.

ಇವರು ಅಪ್ರತಿಮ ಕಲಾಪ್ರೇಮಿಯಾಗಿರುವ ಜೊತೆ ಜೊತೆಗೆ ಅದ್ಭುತವಾದ ಪುಸ್ತಕಪ್ರೇಮಿಯೂ ಹೌದು, ನಿಗೂಢ ಲೋಕದ ಕುತೂಹಲಿಯೂ ಹೌದು! ಹೀಗಾಗಿ ಕೆ.ವಿ.ಎಸ್. ಅವರು ಯಾವಾಗ ಯಾವ ಬೆಟ್ಟ ಹತ್ತುತ್ತಾರೋ ಯಾವ ಕಣಿವೆ ಇಳಿಯುತ್ತಾರೋ, ಯಾವ ಶಿಲಾಶ್ರಯ ನೆಲೆಗಳನ್ನರಸುತ್ತಾ ಆದಿಮ ಚಿತ್ರಗಳ ಅನ್ವೇಷಣೆ ನಡೆಸುತ್ತಾರೋ, ಯಾವ ದೇವಾಲಯ ಮತ್ತು ಕುರುಹುಗಳನ್ನು ಹುಡುಕುತ್ತಾ ಅಂಡಲೆಯುತ್ತಾರೋ ಯಾರಿಗೂ ಗೊತ್ತಿಲ್ಲ, ಯಾವ ವಿಷಯಗಳನ್ನು ಹುಡುಕುತ್ತಾ ಕೆದಕುತ್ತಾ ತಮ್ಮ ಗ್ರಂಥ ಭಂಡಾರದಲ್ಲಿ ಹುದುಗಿರುತ್ತಾರೋ ಅದೂ ಗೊತ್ತಾಗುವಂಥ ವಿಷಯವಲ್ಲ. ಅಲ್ಲಿಂದ ಹೊರಗೆ ಬಂದಾದ ಮೇಲೆ ಅದೇನೋ ಅಷ್ಟಿಷ್ಟು ಫೋನಿನಲ್ಲಿ ಹಂಚಿಕೊಂಡಾಗಲೇ ಗೊತ್ತು! ಫೇಸ್ ಬುಕ್ಕಿನಲ್ಲಿ ಇಂದಿಷ್ಟು ಟಿಪ್ಪಣಿ ಹಾಕಿದಾಗಲೇ ಗೊತ್ತು!!

ಈ ಹಿಂದೆಯಂತೂ ಪತ್ರಿಕೆಗಳು ಇವರ ಬರಹಗಳನ್ನು ನಾ ಮುಂದು ತಾ ಮುಂದು ಎಂದು ಇವರ ಲಲಿತಕಲಾ ಬರಹಗಳನ್ನು ಪ್ರಕಟಿಸುತ್ತಿದ್ದವು! ಈಗಲೂ ಪ್ರಕಟಿಸುವವರಿದ್ದಾರೆ; ಆದರೆ ಇವರೇ ಬರೆಯುತ್ತಿಲ್ಲ. ಬರೆದರದು ಅಪರೂಪದಲ್ಲಿ ಅಪರೂಪದ ಸಾಂಸ್ಕೃತಿಕ ಕೊಡುಗೆ! ಇಂಥ ಅಪರೂಪದ ವ್ಯಕ್ತಿತ್ವದ ಕೆ. ವಿ. ಸುಬ್ರಹ್ಮಣ್ಯಂ ಅವರ ಕುರಿತಾದ ಪುಸ್ತಕವೊಂದು ಬರುತ್ತಿದೆ ಎಂದರೆ ಗ್ರಂಥಲೋಕ ಹೆಮ್ಮೆ ಪಡುತ್ತದೆ.

ಅದನ್ನು ಪ್ರಕಟಿಸುವ ಭಾಗ್ಯ ನನ್ನದಾಗಿದ್ದು ‘ಯಾರಿಗುಂಟು ಯಾರಿಗಿಲ್ಲ!!’ ಎನ್ನುವಂತೆ ನನಗೇ ಆ ಅವಕಾಶ ದೊರೆತದ್ದು ನಿಜಕ್ಕೂ ಆಶ್ಚರ್ಯಕರ ಘಟನೆ!  ಕಳೆದ ವರ್ಷ ಶ್ರೀ ಕೆ. ವಿ ಸುಬ್ರಮಣ್ಯಂ ಅವರ ‘ವಾಗಟ’ ಮನೆಯ ಪ್ರವೇಶಕ್ಕೆಂದು ಬೆಂಗಳೂರಿಗೆ ಹೋದಾಗ ಕಲಾ ವಿದ್ಯಾರ್ಥಿನಿ ಹರಿಶ್ರೀಯವರು ಕೈಲಿ ಈ ಗ್ರಂಥದ ಮೂಲ ಅಂದರೆ, ತಮ್ಮ ವಿದ್ಯಾಭ್ಯಾಸದ ಅಂಗವಾಗಿ ಮಂಡಿಸಬೇಕಾದ ಪ್ರಬಂಧದ ಫೈಲ್‌ನ್ನು ಕೈಲಿ ಹಿಡಿದುಕೊಂಡು ಅವರೂ ಒಳ ಬಂದರು. ನಾನು ಮತ್ತು ಆ ಮನೆ ಕಟ್ಟಿದ ನನ್ನ ಬಹುಕಾದದ ಗೆಳೆಯ ಪ್ರಸಾದ್ ಕೆರಕಲಮಟ್ಟಿ ಲೋಕಾಭಿರಾಮವಾಗಿ ಮಾತಾಡುತ್ತಾ ಕುಳಿತಿದ್ದೆವು. ಹರಿಶ್ರೀ ಅವರ ಕೈಲಿದ್ದ ಫೈಲು ನನ್ನ ಗಮನ ಸೆಳೆಯಿತು. ಯಾವುದೋ ಬರಹದ ಸ್ಕ್ರಿಪ್ಟ್ ಇರಬೇಕು ಎಂದುಕೊಂಡ ನಾನು ಕೆಟ್ಟ ಕುತೂಹಲಿಗನಾಗಿ ಆ ಫೈಲಿನತ್ತ ಕೈ ಚಾಚಿದೆ. ಅವರು ನನ್ನ ಕೈಗೆ ಕೊಟ್ಟೇಬಿಟ್ಟರು!

ಪುಟ ತೆರೆದಂತೆ ನನ್ನ ಪಾಲಿಗೆ ಲಲಿತಕಲಾ ಮೀಮಾಂಸಕರಾಗಿ ಮಾತ್ರ ಕಂಡಿದ್ದ ಕೆ. ವಿ. ಸುಬ್ರಹ್ಮಣ್ಯಂ ಅವರು ಬರಹಗಾರರು ಮಾತ್ರವಲ್ಲ, ಒಳ್ಳೆಯ ಕಲಾವಿದರೂ ಹೌದು ಎನ್ನುವುದನ್ನು ಅಲ್ಲಿ ಕಂಡೆ!!

ಕೆ.ವಿ.ಎಸ್. ಅವರು ತಮ್ಮ ಸಂತೋಷಕ್ಕಾಗಿ ಚಿತ್ರಿಸಿದ ಹಲವು ಕೃತಿಗಳ ವಿವಿಧ ಮಾಧ್ಯಮಗಳ ವಿವರಗಳನ್ನು ಕಂಡು ಬೆರಗಾದೆ! ಅಷ್ಟೇ ಅಲ್ಲ ಇಲ್ಲಿ ಇನ್ನೂ ಒಂದು ವಿಷಯವನ್ನು ಪ್ರಾಸ್ತಾಪಿಸಬಹುದಾದರೆ… ಅವರ ಪುಸ್ತಕ ಸಂಗ್ರಹ ಅಪರೂಪದಲ್ಲಿ ಅಪರೂಪದ್ದು. ಇವರ ಕೊಂಡುತಂಡ ಗ್ರಂಥರಾಶಿ ಎಂಥದ್ದು ಎಂದರೆ ಅದೊಂದು ಮಿನಿ ಕಿಷ್ಕಿಂಧೆಯಂತಿದೆ! ನೋಡುತ್ತ ಹೋದಂತೆ ನಾವೇ ಕಳೆದುಹೋಗುವಷ್ಟು ಪುಸ್ತಕಗಳ ಸಣ್ಸಣ್ಣ ಬೆಟ್ಟಗಳು!! ಹುಷಾರಾಗಿ ಹೆಜ್ಜೆಯಿಟ್ಟು ಸಾಗಬೇಕು. ಕೂಡಲಲ್ಲಿ ಜಾಗವೇ ಇಲ್ಲ… ತಮಗೆ ಬೇಕಾದ ಪುಸ್ತಕಗಳನ್ನು ಅದು ಹೇಗೆ ಹುಡುಕಿ ತೆಗೆಯುತ್ತಾರೋ…, ಏನಾದರೂ ಕೋಡ್‌ವರ್ಡ್ ಇಟ್ಟುಕೊಂಡಿದ್ದಾರೋ ಆ ಸುಬ್ರಮಣ್ಯನೇ ಬಲ್ಲ!

 ಗ್ರಂಥಾಲಯ ಇಲಾಖೆಯ ಗಂಥಾಲಯಗಳಲ್ಲಿ ಓದುಗರಿಗೆ ಪುಸ್ತಕಗಳನ್ನು ಒದಗಿಸುತ್ತಾ ಗ್ರಂಥಗಳ ಮಧ್ಯೇಯೇ ಜೀವನ ಸಾಗಿಸಿದ ನನಗೂ ಅಚ್ಚರಿಯಾಗುವಷ್ಟು ಪುಸ್ತಕಗಳೇ ಪುಸ್ತಕಗಳು!! ಕನ್ನಡವಲ್ಲದೆ ಇಂಗ್ಲೀಷಿನ ಕಲಾಲೋಕದ ಬೃಹತ್ ರಾಶಿಯೇ ಇಲ್ಲಿ ಹುದುಗಿದೆ. ಅದರ ನಡುನಡುವೆ ಇವರ ಬರಹಗಳನ್ನು ಎದೆಯಲ್ಲಿ ಅಚ್ಚೊತ್ತಿಸಿಕೊಂಡು ಸಿಲುಕಿ ನಲುಗುತ್ತಿರುವ ಪತ್ರಿಕೆಗಳು, ಅವನ್ನೆಲ್ಲ ಕೆದಕಿ ಆರಿಸಿ ತೆಗೆದರೆ, ಆ ಲಲಿತಕಲಾ ಬರಹಗಳೇ ಹಲವು ಸಂಪುಟಗಳಾಗುವಷ್ಟಿವೇ! ಇಲ್ಲಿರುವ ಒಂದೊಂದು ಗ್ರಂಥಗಳೂ ಕೆ. ವಿ. ಎಸ್ ಅವರ ವ್ಯಕ್ತಿತ್ವದ ಕಂಗನ್ನಡಿಗಳು!! ಗ್ರಂಥಾಲಯವನ್ನು ಪ್ರವೇಶಿಸಿದ ಗ್ರಂಥರಾಶಿಯನ್ನು ಕಂಡ ಹಿರಿಯ ಕವಿಯೊಬ್ಬರು…

ಕಣ್ ದಿಟ್ಟಿ ಹರಿದತ್ತ ಗ್ರಂಥಗಿರಿ ಪಂಕ್ತಿಗಳು
ಎನಿತು ಹಿರಿ ಬಾಳುಗಳ ಮೇಳ ನೆರೆದಿಹುದಿಲ್ಲಿ
ಇವುಗಳಡಿ ನಾ ಧೂಳ ಕಣವಾಗಿ ನಿಲ್ಲುವೆನು
ನನ್ನ ಮತಿ ಮುದುಡಿಹೋಗುವುದಿಲ್ಲಿ
ನನ್ನ ಅಹಂಕಾರವನು ನುಚ್ಚು ನೂರಾಗಿಸುವುದೀ ತಾಣ ಅಪ್ಪಳಿಸಿ…

ಎಂದು ಉದ್ಘರಿಸುತ್ತಾರೆ! ಅಂಥ ಹಿರಿಯ ಜೀವ ಸುಬ್ರಹ್ಮಣ್ಯಂ. ದೇಶ ಸುತ್ತಬೇಕಂತೆ ಕೋಶ ಓದಬೇಕಂತೆ!, ಸುಬ್ರಮಣ್ಯಂ ದೇಶವನ್ನೂ ಸುತ್ತಿದ್ದಾರೆ ಕೋಶವನ್ನೂ ಓದಿದ್ದಾರೆ. ಅಷ್ಟಲ್ಲದೆ ಆ ಕುರಿತು ಬರೆದೂ ಇದ್ದಾರೆ.

ಇದ್ದರೆ ಇಂಥ ಒಬ್ಬ ವಿದ್ವಾಂಸನಿರಬೇಕು. ನಾಡಿಗೆ ಬೆಳಕು ಚೆಲ್ಲಬಲ್ಲ ನಿರಂತರ ಕಾಯಕ ನಿರತ ದಣಿವರಿಯದ ಸರದಾರರಾಗಿ ನನಗೆ ಕಾಣುತ್ತಾರೆ. ಕಲೆ, ಇತಿಹಾಸ, ಲಲಿತಕಲಾ ವೈವಿಧ್ಯ-ವೈರುದ್ಯಗಳನ್ನು, ಪಲ್ಲಟಗಳನ್ನು ಕಂಡು ಬೆರಗಾಗಿಯೂ, ಕಲಾಲೋಕದ ಕುತೂಹಲಿಗರಾಗಿ ಇನ್ನೂ ಚಟುವಟಿಕೆಯಿಂದಿದ್ದಾರೆ. ಹಲವಾರು ಪತ್ರಿಕೆಗಳಿಗೆ ಲೇಖನ – ಅಂಕಣಗಳನ್ನು ಕಲಾವಿದರ ಪರವಾಗಿ ಅವರ ಕಲಾಕೃತಿಗಳನ್ನು ‘ಒರೆ’ಗೆ ಹಚ್ಚಿ ವಿವರವಾಗಿ ಬರೆದವರು, ಕೆ. ವಿ. ಸುಬ್ರಹ್ಮಣ್ಯಂ, ಕಲಾಲೋಕದ ಹಿರಿಯ ಕಲಾ ಲೇಖಕ ಮತ್ತು ವಿಮರ್ಶಕ ಶ್ರೀ ಅ.ಲ.ನರಸಿಂಹನ್ ಮುಂತಾದವ ಲಲಿತಕಲಾ ಜೀವಿಗಳು ಇವರ ಒಡನಾಡಿಗಳು. ಇಬ್ಬರೂ ಸೇರಿ ಕಲಾಲೋಕವನ್ನು ಜಗತ್ತನ್ನು ಬೆಳಗಿದವರು. ಹಲವು ಹಿರಿ-ಕಿರಿಯ ಕಲಾವಿದರಾದ ವಾಸುದೇವ್, ಜಿ. ಎಸ್. ಶೆಣೈ, ಕುರಿತಾಗಿ ಗ್ರಂಥಗಳನ್ನೂ, ಪರಿಚಯಾತ್ಮಕ ಲೇಖನಗಳನ್ನೂ ಎಪ್ಪತ್ತು ಎಂಬತ್ತರ ದಶಕದಿಂದಲೇ ಬರೆಯುತ್ತ ಬಂದವರು. ಕರ್ನಾಟಕ ಲಲಿತಕಲಾ ಅಕಾಡೆಮಿಯ ‘ಕಲಾವಾರ್ತೆ’ಯ ಸಂಪಾದಕರಾಗಿ ಅದ್ಭುತವಾದ ಮತ್ತು ಕಲೆಯ ಸೂಕ್ಷ್ಮ ಅಂಶಗಳನ್ನೂ ಗಮನಿಸಿ ದಾಖಲಿಸಿದವರು.

ಕೆ.ವಿ ಸುಬ್ರಹ್ಮಣ್ಯಂ ಬಹು ಜನಪ್ರಿಯ ‘ಸಂಯುಕ್ತ ಕರ್ನಾಟಕ’ ದಿನ ಪತ್ರಿಕೆಯೊಂದರಲ್ಲೆ ನಿರಂತರವಾಗಿ ನಾಲ್ಕೈದು ದಶಕದಿಂದ ಲಲಿತಕಲಾ ಪರಿಚಯ ಮತ್ತು ವಿಮರ್ಶೆಗಳನ್ನು ಬರೆದವರು. ‘ಕನ್ನಡಪ್ರಭ’ ಪತ್ರಿಕೆಗೂ ಹಲವು ವರ್ಷಗಳ ಕಾಲ ಅಂಕಣಗಳನ್ನು ಬರೆಯುತ್ತಿದ್ದರು. ಇನ್ನು ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಮಯೂರ, ಸುಧಾ, ಮತ್ತು ಉದಯವಾಣಿಗಳಲ್ಲೂ ಇವರಿಗೆ ವಿಫುಲ ಅವಕಾಶವಿದ್ದುದರಿಂದಾಗಿ ಇಂದಿನ ಲಲಿತಕಲಾ ಲೋಕದ ಬರಹಗಳನ್ನು ನಿರಂತರವಾಗಿ ಬರೆಯುತ್ತ ಆಮೂಲಕ ಕಿರಿಯ ಕಲಾವಿದರನ್ನು ಬರೆದು ಬೆಳೆಸುತ್ತ ಬಂದವರು.

ಇದರ ಪರಿಣಾಮವಾಗಿ ಕರ್ನಾಟಕ ಲಲಿತಕಲಾ ಲೋಕವು ಸಮೃದ್ಧವಾಗಿ ಬೆಳೆಯಲು ರಾಷ್ಟ್ರೀಯ-ಅಂತರ ರಾಷ್ಟ್ರೀಯವಾಗಿ ಬೆಳಗಲು ಕಾರಣವಾಯಿತು. ಅವರ ಅಲೆಮಾರಿ ಬದುಕಿನಲ್ಲಿ ಒಬ್ಬ ನಿರಂತರ ಕಲಾ ಬರಹಗಾರ ಶಿಸ್ತಿನ ಸಿಪಾಯಿ ಇದ್ದಾರೆ. ಇವರಿಂದ ಬೆನ್ನು ತಟ್ಟಿಸಿಕೊಂಡ ಸಾವಿರಾರು ಕಲಾವಿದರು ಈ ನಾಡಿನಲ್ಲಿ ಇದ್ದಾರೆ. ಕಲಾ ಕೃಷಿಯನ್ನು ಮಾಡಿ, ದೇಶ-ವಿದೇಶಗಳ ವರೆಗೆ ತಮ್ಮ ಕಲಾಕೃತಿಯನ್ನು ಮಾರಿ, ಹಲವು ದೇಶೀಯ ಅಂತರ್ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದು ಮೆರೆದಿದ್ದಾರೆ, ಮೆರೆಯುತ್ತಿದ್ದಾರೆ. ನಾನೇ ಕಂಡಂತೆ ಅವರೆಲ್ಲರಲ್ಲಿ ಹಲವರ ಹಿಂದೆ ಒಬ್ಬ ಸಮರ್ಥ ಲೇಖಕ, ಕಲಾ ವಿಶ್ಲೇಷಣೆಗಾರ, ಅಳೆದು-ತೂಗಿ ದಾಖಲಿಸಿದ ಅತ್ಯಂತ ಸಹೃದಯಿ ಕೆ. ವಿ. ಸುಬ್ರಹ್ಮಣ್ಯಂ ಇದ್ದಾರೆ.

ಪಾಂಡಿತ್ಯವೇ ಮೈವೆತ್ತಂತಿರುವ ಹಿರಿಯ ಜೀವವಿದು. ಇಲ್ಲಿ ಕೆ. ವಿ. ಎಸ್. ಅವರು ಹೇಳುತ್ತಾ ಹೋದುದನ್ನು ಇಲ್ಲಿ ಈ ಗ್ರಂಥದ ಲೇಖಕಿ ದಾಖಲಿಸುತ್ತಾ ಬಂದಿದ್ದಾರೆ. ತಮ್ಮ ಅನುಭವದ ನೆಲೆಯಿಂದ ಪುಸ್ತಕದ ಕಣಜದಿಂದ ಕಲಾಕೃತಿಗಳ ಗುಂಪಿನಿಂದ ಎತ್ತಿ ಕೊಟ್ಟಷ್ಟವುಗಳನ್ನು ದಾಖಲಿಸುತ್ತಾ ಹೋಗಿದ್ದಾರೆ.

ಕೆ. ವಿ. ಸುಬ್ರಹ್ಮಣ್ಯಂರವರು ನನ್ನ ಬೇಲೂರು ಹಳೇಬೀಡು ಶಿಲ್ಪಕಲಾ ಸಾಮ್ರಾಜ್ಯ, ಬಾದಾಮಿ ಐಹೊಳೆ ಪಟ್ಟದಕಲ್ಲು ಮಹಾಕೂಟಗಳ ಶಿಲ್ಪಕಲೆಯನ್ನು ಕುರಿತಾದ ‘ಚಾಲುಕ್ಯ ಶಿಲ್ಪಕಲೆ’ ಮತ್ತು ನಮ್ಮ ಶಿಲ್ಪಕಲಾ ಶ್ರೀಮಂತಿಕೆಯನ್ನು ದಾಖಲಿಸುವ ‘ಚೆಲುವ ಕನ್ನಡ ನಾಡು’ ಕೃತಿಗಳಿಗೆ ತಮ್ಮ ಮೌಲಿಕ ಮುನ್ನುಡಿಯನ್ನು ಬರೆದು ಕೊಟ್ಟವರು. ಆಯಾ ಕೃತಿಗಳ ಮೌಲ್ಯವನ್ನು ಹೆಚ್ಚಿಸಿದ ಮಹನೀಯರು ಶ್ರೀ ಕೆ. ವಿ. ಸುಬ್ರಮಣ್ಯಂ. ಅವರನ್ನು ಬಹು ಕೃತಜ್ಞತೆಯಿಂದ ಅನುದಿನವೂ ನೆನೆಯುತ್ತೇನೆ.

ಈ ಗ್ರಂಥ ಚಿತ್ರಾಕ್ಷರ: ಕೆ. ವಿ. ಎಸ್ ರವರ ಸಾಹಿತ್ಯ ಮತ್ತು ಅವರ ಕಲೆಯನ್ನೂ ಕುರಿತಾದ ಈ ಪುಸ್ತಕದ ಪ್ರಕಟಣೆ ಮತ್ತು ಪ್ರಕಾಶನದ ನನಗೇ ದಕ್ಕಿರುವುದು ನನಗೆ ಹೆಮ್ಮೆಯ ಸಂಗತಿ. ಹಾಗೆ ನೋಡಿದರೆ ಕೆ.ವಿ.ಎಸ್. ಮತ್ತು ನಾನು ಸಮಾನ ವ್ಯಸನಿಗಳೆಂದು ಕಾಣಿಸುತ್ತಿದೆ. ಅವರು ಅಭ್ಯಸಿಸದ ಪುಸ್ತಕಗಳೇ ಇರಲಿಕ್ಕಿಲ್ಲ! ಈ ಮಾತಿಗೆ ಅವರ ಗ್ರಂಥಗಳ ರಾಶಿ-ರಾಶಿಗಳು ಸಾಕ್ಷ್ಯ ನುಡಿಯುತ್ತಿವೆ!! ಅವರದು ಕಲೆಯ ಉತ್ಖನನ ಮಾಡಿದ ಮೇಧಾವಿಗಳು. ನಾನೋ ಶಿಲ್ಪಕಲೆಯ ನಮ್ಮ ಶ್ರೀಮಂತಿಕೆಯನ್ನು ಕಾಣಲು ನೂರಾರು ದೇವಾಲಯಗಳ ಛಾಯಾಗ್ರಹಣ ಮಾಡುತ್ತಾ, ಆ ಶಿಲ್ಪಕಲೆಯ ಒಡಲನ್ನು ನನಗೆ ತಿಳಿದಷ್ಟು ಗ್ರಹಿಸುತ್ತ ಮತ್ತು ಹಲವು ಬೆಟ್ಟ ಗುಡ್ಡಗಳನ್ನು ಸುತ್ತಿ ಸುತ್ತಿ ದಣಿಯುತ್ತಿರುವ ಮೂದೇವಿ.

ಅವರು ದೇಶಾದ್ಯಂತ ತಿರುಗಿ ದೇವಾಲಯಗಳ ಒಳ-ಹೊರಗನ್ನು ಮತ್ತು ಅನೂಹ್ಯ ಬೆಟ್ಟಗಳ ಆಂತರ್ಯದ ಹುದುಗಿಕೊಂಡ ಆದಿಮ ನೆಲೆಗಳ ಕಲಾ ಸಂಪತ್ತನ್ನು ಕಲೆಯಿಂದ ಬಣ್ಣಿಸಿ ಮತ್ತು ಲೇಖನಿಯಿಂದ ವಿವರಿಸಿ ಸಾರಸ್ವತ ಲೋಕಕ್ಕೆ ಪರಿಚಯಿಸಿದ ಪುಣ್ಯಾತ್ಮರು!!! ಹಾಂ! ತಮ್ಮ ಬರಹಗಳನ್ನು ಕೆ. ವಿ. ಸುಬ್ರಹ್ಮಣ್ಯಂ ಹೆಸರಿನಿಂದಲ್ಲದೆ ಸಹೃದಯಿ, ಸತ್ಯಕಾಮ ಎಂಬೆಲ್ಲ ಅನ್ವರ್ಥಕ ಹೆಸರಿನಿಂದಲೂ ಬರೆಯುತ್ತಿದ್ದರು ಎನ್ನುದನ್ನೂ ಮರೆಯುವಂತಿಲ್ಲ. ಇಂಥ ಮೇರು ವ್ಯಕ್ತಿತ್ವಕ್ಕೆ ಶರಣು ಧನ್ಯವಾದಗಳು.

‍ಲೇಖಕರು avadhi

April 13, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: