ಚಿತ್ರವೆಂಬ ಕಾವ್ಯ..

ಸಿದ್ಧರಾಮ ಕೂಡ್ಲಿಗಿ

ನಾವು ಕ್ಲಿಕ್ ಮಾಡುವ ಚಿತ್ರಗಳು ಸಾಮಾನ್ಯವಾಗಿ ಒಂದು ಸ್ಥಳ ಅಥವಾ ವಿಷಯವನ್ನು ಬಿಂಬಿಸುತ್ತವೆ ಅಷ್ಟೆ. ಅಂದರೆ ಅದೊಂದು ಇದ್ದುದನ್ನು ಇದ್ದಂತೆ ಹೇಳುವ ಒಂದು ವರದಿಯಾಗುತ್ತದೆ. ಚಿತ್ರ ಒಂದು ವರದಿಯಾದರೆ ಅದು ಸಪ್ಪೆಯೆನಿಸುತ್ತದೆ. ಚಿತ್ರ ಸುಂದರವೇ ಇರಬಹುದಾದರೂ ಅದೊಂದು ಇದ್ದುದನ್ನು ಇದ್ದಂತೆ ಹೇಳುವ ಒಂದು ಚಿತ್ರವಷ್ಟೇ. ಅದರಲ್ಲೇನೂ ಸೊಗಸಿರುವುದಿಲ್ಲ.

ಹಾಗಾದರೆ ಸೊಗಸು ತರಲು ಅಥವಾ ಅದರಲ್ಲೊಂದು ದಿವ್ಯ ಅರ್ಥವನ್ನು, ಒಂದು ಸಂಗತಿಯನ್ನು, ಅಷ್ಟೇ ಯಾಕೆ ಒಂದು ಕಾವ್ಯ ಹೇಳುವುದನ್ನು ಒಂದು ಚಿತ್ರದಲ್ಲಿ ತರಲು ಏನು ಮಾಡುವುದು ?

ಅದಕ್ಕೇ ಹಲವಾರು ಜನ ಮಹನೀಯರು ಹೇಳುವುದು, ‘ಕೆಮರಾ ಒಂದು ಸಾಧನ ಮಾತ್ರ ಅದರ ಹಿಂದಿನ ನೋಟವೇ ಬಹಳ ಮುಖ್ಯವಾದುದು’ ಅಂತ. ನಮ್ಮ ಹೃದಯದ ಭಾವವನ್ನು ಹಿಡಿದಿಡಲು ಇರುವ ಸಾಧನವೇ ಕೆಮರಾ ಎಂಬ ಉಪಕರಣವೇ ಹೊರತು ಎಲ್ಲವನ್ನೂ ಅದೇ ಮಾಡುವುದಿಲ್ಲ. ಇದನ್ನು ನಾವು ತುಂಬಾ ಚೆನ್ನಾಗಿ ಅರಿತಿರಬೇಕು. ಇದನ್ನು ಯಾರು ಅರ್ಥೈಸಿಕೊಂಡಿರುತ್ತಾರೋ ಅವರೇ ಅತ್ಯುತ್ತಮ ಫೋಟೊಗ್ರಾಫರ್ ಗಳಾಗಲು ಸಾಧ್ಯ.

??

ಚಿತ್ರ ತೆಗೆಯುವಾಗಿನ ಸ್ಥಳ, ಹಿನ್ನೆಲೆ, ನೆರಳು ಬೆಳಕಿನ ಸಂಯೋಜನೆ, ಸಮಯ, ಎಲ್ಲದಕ್ಕಿಂತಲೂ ಮುಖ್ಯವಾಗಿ ಮೊದಲು ನಮ್ಮ ನೋಟ ಏನನ್ನು ಸೆರೆಹಿಡಿಯಬೇಕಾಗಿದೆ ಎಂಬುದನ್ನು ಗುರುತಿಸಿರಬೇಕು. ಆ ಕ್ಷಣವನ್ನು ಮೀರಿದರೆ ಮುಗಿಯಿತು ಆ ಅದ್ಭುತ ದೃಶ್ಯ ಮತ್ತೊಮ್ಮೆ ಸಿಗಲಾರದು. ಇದನ್ನೆ ದೃಶ್ಯ ಕಾವ್ಯ ಎನ್ನುತ್ತೇವೆ.

ಇಲ್ಲಿಯ ಚಿತ್ರವನ್ನೇ ನೋಡಿ, ನಾವು ಪ್ರತಿದಿನವೂ ನೋಡುವ ಸಾಮಾನ್ಯ ದೃಶ್ಯವೇ. ಮಕ್ಕಳು ಸೈಕಲ್ ಟೈರ್ ಅಥವಾ ಬೇರೆ ವಾಹನಗಳ ಟೈರ್ ಗಳನ್ನೇ ಗಾಲಿಯನ್ನಾಗಿಸಿ ಓಡಿಸುವುದು. ಇಡೀ ಚಿತ್ರವು ಒಂದು ಓಟವನ್ನು ಸೂಚಿಸುತ್ತದೆ. ಚಿತ್ರದ ಫ್ರೇಮ್ ಇಳಿಜಾರಾಗಿದೆ. ಅಂದರೆ ಇಳಿವು ಓಟವನ್ನು ಸೂಚ್ಯವಾಗಿ ಹೇಳುತ್ತದೆ. ಮಕ್ಕಳು ಅತ್ಯಂತ ಸಂತೋಷದಿಂದ ಗಾಲಿಯನ್ನು ಓಡಿಸುವ ಸಂಗತಿ ಅವರ ಸಂಭ್ರಮವನ್ನು ಚಿತ್ರಿಸುತ್ತದೆ. ಇದಕ್ಕೆ ಪೂರಕವಾಗಿ ಹಿನ್ನೆಲೆಯಲ್ಲಿರುವ ಸಮೃದ್ದ ಉಸುಕು ಚಿಮ್ಮಿ ಅವರ ಓಟಕ್ಕೆ ಪೂರಕವಾಗಿ ಮೂಡಿದೆ. ವರ್ಣ ಸಂಯೋಜನೆ, ಬೆಳಕಿನ ವಿನ್ಯಾಸ ಎಲ್ಲವೂ ಈ ಚಿತ್ರಕ್ಕೆ ಅದ್ಭುತವಾಗಿ ಕಳೆಗಟ್ಟಿದೆ.

ಈ ಸಂದರ್ಭವನ್ನೇ ‘ಬಂಗಾರದ ಸಮಯ’ (Golden Time) ಎನ್ನುತ್ತಾರೆ.

ನೋಡಿ ಇಡೀ ದೃಶ್ಯವೇ ಕಾವ್ಯಾತ್ಮಕವಾಗಿದೆ. ಬಡ ಮಕ್ಕಳು ಗಾಲಿಯನ್ನು ಉರುಳಿಸುವುದರಲ್ಲೇ ಸಂತೋಷವನ್ನು ಕಂಡುಕೊಳ್ಳುತ್ತಾರೆ. ಆಟದಲ್ಲಿರುವ ಸಂತೋಷವನ್ನು ಇದು ತಿಳಿಸುತ್ತದೆ.

ವಿಯೆಟ್ನಾಂನ ‘ಮ್ಯೂ ನೆ’ ಎಂಬ ಮೀನುಗಾರಿಕೆಯೆ ಉದ್ಯೋಗವಾಗಿರುವ ಹಾಗೂ ಪ್ರವಾಸಿ ತಾಣವಾಗಿದೆ. ಹಲವಾರು ಮಕ್ಕಳು ತಮ್ಮ ತಂದೆಯ ಜೊತೆ ಬಂದು ಆಟವಾಡುತ್ತಾರೆ ಜೊತೆಗೆ ತಮ್ಮ ಪಾಲಕರಿಗೆ ಸಹಾಯ ಮಾಡುತ್ತಾರೆ. ಮಕ್ಕಳು ಮರಳಿನಲ್ಲಿ ಆಟವಾಡುವ ಜಾರುಬಂಡಿಗಳನ್ನು ಬಾಡಿಗೆ ನೀಡುವ ಹಾಗೂ ತೆಂಗಿನ ಎಳೆನೀರನ್ನು ಮಾರುವ ಕೆಲಸವನ್ನು ಮಾಡುತ್ತಾರೆ.

ತಾಯಂದಿರುವ ಹಿಟ್ಟನ್ನು ಮಾರಾಟ ಮಾಡುವ ಹಾಗೂ ತಂದೆಯಂದಿರು ಬೈಕ್ ನ ಟ್ಯಾಕ್ಸಿ ಓಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ. ಇಲ್ಲಿಯ ಮಕ್ಕಳು ತುಂಬಾ ಬಡತನದಲ್ಲಿರುವವರು ಇವರಿಗೆ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳಿಲ್ಲ. ಕಷ್ಟಪಟ್ಟು ದುಡಿಯುವುದರ ಜೊತೆಗೆ ಬಿಡುವಿನ ವೇಳೆಯಲ್ಲಿ ಅತ್ಯಂತ ಸಂತಸದಿಂದ ಆಟವಾಡುತ್ತಾರೆ. ಇವರ ಸಂತೋಷ ಅತ್ಯಂತ ಸರಳ ಆಟಗಳಿಂದ ರೂಪಿತಗೊಂಡಿದೆ. ಇಷ್ಟೆಲ್ಲ ಹಿನ್ನೆಲೆ ಈ ಚಿತ್ರದ್ದು.

ಅಂದಹಾಗೆ ಈ ಚಿತ್ರ 2020ರ ಜಾಗತಿಕ ಛಾಯಾಚಿತ್ರ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿದೆ. ಈ ಚಿತ್ರವನ್ನು ಕ್ಲಿಕ್ಕಿಸಿದ ಮಹನೀಯ ವಿಯೆಟ್ನಾಂನಾ ಟ್ರಾನ್ ಟುವಾನ್ ವಿಯೆಟ್ (Traan Tuan Viet). 1983ರಲ್ಲಿ ವಿಯೆಟ್ನಾಂ ನಲ್ಲಿ ಜನಿಸಿದ ಟ್ರಾನ್ ಹಲವಾರು ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಿದ್ದಾನೆ.

ನ್ಯಾಶನಲ್ ಜಿಯಾಗ್ರಫಿಯಂತಹ ಪ್ರತಿಷ್ಠಿತ ಜಾಗತಿಕ ಪುಸ್ತಕಗಳಲ್ಲಿ ಈತನ ಚಿತ್ರಗಳು ಪ್ರಕಟಗೊಂಡಿವೆ.

ಈ ಚಿತ್ರದ ಬಹುಮಾನದ ಹಣವನ್ನು ಟ್ರಾನ್ ವಿಯೆಟ್ನಾಂನ ಕೋವಿಡ್-19 ಪರಿಹಾರ ನಿಧಿಗೆ ಅರ್ಪಿಸಿದ್ದಾನೆ.

ಟ್ರ್ಯಾನ್ ನಿನಗೆ ನೀನೇ ಸಾಟಿ.

ಈಗ ಹೇಳಿ ನಾವು ತೆಗೆಯುವ ಚಿತ್ರಗಳು ಹೇಗಿರುತ್ತವೆಂದು ?

‍ಲೇಖಕರು Admin

August 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಲಿತಾ ಸಿದ್ಧಬಸವಯ್ಯ

    ಕಾವ್ಯವು ಚಿತ್ರವಾದ ಹಾಗೆಯೇ ಚಿತ್ರವೂ ಕಾವ್ಯವಾಗಬಲ್ಲುದು. ಇಲ್ಲಿನ ಮಕ್ಕಳ ನಿರುಮ್ಮಳದ ಉತ್ಸಾಹವು ಒಂದು ಕಾವ್ಯವೇ ಹೌದು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: