ಕೆ ನಲ್ಲತಂಬಿ ಅನುವಾದ ಸರಣಿ- ಮರುದುವಿನ ಮಗನಿಗಾದ ಗತಿ!

ಮೂಲ: ಎಸ್ ರಾಮಕೃಷ್ಣನ್  

1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ.

ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಇತಿಹಾಸ, ನಾಟಕ, ಅನುವಾದ ಹೀಗೆ ಅನೇಕ  ಪ್ರಕಾರಗಳ ಬರಹಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಗ್ಲೀಷಿನಲ್ಲೂ ಬರೆಯುತ್ತಾರೆ. 10 ಕಾದಂಬರಿ, 21 ಸಣ್ಣಕಥೆಗಳ ಸಂಕಲನ, ಮೂರು ನಾಟಕ, 22 ಮಕ್ಕಳ ಸಾಹಿತ್ಯ, ಅನೇಕ ಅಂಕಣ ಸಂಕಲನಗಳನ್ನು ಬರೆದಿದ್ದಾರೆ.

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಉತ್ತಮ ಕಾದಂಬರಿ ಪ್ರಶಸ್ತಿ, ಉತ್ತಮ ಪುಸ್ತಕ ಪ್ರಶಸ್ತಿ, ಠಾಗೂರ್ ಸಾಹಿತ್ಯ  ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದುವುಗಳನ್ನು ಗಳಿಸಿದ್ದಾರೆ.

ತಮಿಳಿನ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು.

ಕೆ ನಲ್ಲತಂಬಿ

22

‘ಯುದ್ದವನ್ನು ರಣರಂಗದೊಂದಿಗೆ ಮುಗಿಸಿಕೊಳ್ಳಿ. ಪಾಮರ ಪ್ರಜೆಗಳ ಮೇಲೆ ಒಮ್ಮೆಯೂ ಅತ್ಯಾಚಾರ ಮಾಡಬೇಡಿ. ಸ್ತ್ರೀಯರನ್ನು ಗೌರವದಿಂದ ನಡೆಸಿ. ಸೆರೆಯಾದ ಕೈದಿಗಳ ಮತದ ನಂಬಿಕೆಗೆ ಬೆಲೆಕೊಡಿ. ವೃದ್ಧರಿಗೂ ಮಕ್ಕಳಿಗೂ ರಕ್ಷಣೆ ನೀಡಿ’ ಎಂದು ತನ್ನ ಸೈನ್ಯಕ್ಕೆ ಲಿಖಿತ ರೂಪದಲ್ಲಿ  ಟಿಪ್ಪು ಆಜ್ಞೆ ನೀಡಿದವನು. ಆದರೇ, ಅವನ ಕುಟುಂಬದವರನ್ನು ಆಂಗ್ಲರು ಸೆರೆಹಿಡಿದು, ಯಾವ ಮೂಲಭೂತ ಹಕ್ಕುಗಳೂ ಇಲ್ಲದೆ ಸತ್ತದ್ದು ಇತಿಹಾಸದ ಸತ್ಯ. 

1854ರಲ್ಲಿ ಟಿಪ್ಪುವಿನ ಮಕ್ಕಳಲ್ಲಿ ಜೀವ ಸಹಿತ ಇದ್ದ ಒಬ್ಬನೇ ಗಂಡು ವಾರಿಸುದಾರ ಗುಲಾಂ ಮಹಮ್ಮದ್. ಅವನು ತನ್ನನ್ನು ಕಾಪಾಡಬೇಕೆಂದು ವಿಕ್ಟೋರಿಯಾ ಮಹಾರಾಣಿಗೆ ಬರೆದ ಪತ್ರ ಟಿಪ್ಪುವಿನ ವಾರಿಸುದಾರರನ್ನು ಬ್ರಿಟಿಷ್ ಸರಕಾರ ಹೇಗೆ ಬೆದರಿಸಿತು ಎಂಬುದಕ್ಕೆ ಸಾಕ್ಷಿ. ಟಿಪ್ಪುವಿನ ಮಕ್ಕಳ ವಿಷಯದಲ್ಲಿ ನಡೆದದ್ದು ಅವಮಾನ ಎಂದರೆ, ಚಿನ್ನಮರುದುವಿನ ಮಗನಿಗೆ ನಡೆದದ್ದು ತೀವ್ರವಾದ ದಬ್ಬಾಳಿಕೆ. ಸಹಿಸಿಕೊಳ್ಳಲಾಗದ ಇತಿಹಾಸದ ಶೋಕ! 

ಮರುದು ಸಹೋದರರ ಕುರಿತು ಕರ್ನಲ್ ವೆಲ್ಶ್ (Colonel Welch) ‘ಸಿಪಾಯಿ ಡೈರಿ’ ಎಂಬ ಕೃತಿಯಲ್ಲಿ ವಿಸ್ತಾರವಾಗಿ ಬರೆದಿದ್ದಾರೆ. ಅವರು ಮರುದು ಸಹೋದರರ ಜತೆ ನಿಕಟ ಸಂಪರ್ಕದಲ್ಲಿದ್ದವರು. ಅವರ ನೆನಪುಗಳಲ್ಲಿ ಹೊರಹೊಮ್ಮುವ ಪೆರಿಯಮರುದು, ಚಿನ್ನಮರುದು ಬಗ್ಗೆಯ ಚಿತ್ರಗಳು ಅಪಾರವಾದದ್ದು. ಮರುದು ಸಹೋದರರ ಬಗ್ಗೆ ವೆಲ್ಶ್ ವಿಸ್ಮಯದಿಂದ ಹೇಳುತ್ತಾರೆ. 

ಪೆರಿಯಮರುದುವನ್ನು ಸಾರ್ವಜನಿಕರು ವೆಳ್ಳೈಮರುದು ಎಂದೇ ಕರೆದಿದ್ದಾರೆ. ದೊಡ್ಡ ಬೇಟೆಗಾರ. ಜೀವನ ಪರ್ಯಂತ ಸುತ್ತಾಡುತ್ತಲೇ ಕಳೆದವನು. ದೃಢಗಾತ್ರವಾದ ದೇಹವುಳ್ಳ ಪೆರಿಯಮರುದು ನಾಣ್ಯವನ್ನು ಬೆರಳುಗಳಿಂದ ಬಗ್ಗಿಸುವಷ್ಟು ಬಲವುಳ್ಳವನು. ಐರೋಪ್ಯರ ಗೌರವಕ್ಕೆ ಪಾತ್ರನಾದವನು. ಹುಲಿ ಬೇಟೆಯಲ್ಲಿ ಮುಂದೆ ನಿಂತು ಹುಲಿಯನ್ನು ಇವನೇ ಮೊದಲು ಕೊಲ್ಲುವುದು. ಇವನ ತಮ್ಮ ಚಿನ್ನಮರುದು ಸಾಮರ್ಥ್ಯಶಾಲಿ. ಅವನು ತಲೆತೂಗುವುದನ್ನೂ ಸಹ ಕಾನೂನಾಗಿ ಪ್ರಜೆಗಳು ಗೌರವಿಸಿದರು. ಅವರ ಅರಮನೆಗೆ ಒಬ್ಬ ಕಾವಲುಗಾರನೂ ಇರಲಿಲ್ಲ. ಯಾರು ಬೇಕಾದರೂ ಒಳಗೆ ಹೋಗಬಹುದು, ಹೊರಗೆ ಬರಬಹುದು. 

ಪ್ರೀತಿ ವಿನಯದಿಂದ ಮಾತನಾಡುವವನು. ‘ಮರುದುಗಳಿಂದಲೇ ಶೂಲ ಎಸೆಯುವುದನ್ನೂ, ಕಳರಿ (ಕೇರಳದ ಒಂದು ಬಗೆಯ ಮಲ್ಲಯುದ್ದ) ಕಲಿತುಕೊಂಡೇ ಎಂದು ಹೇಳುವ ವೆಲ್ಶ್, ಯುದ್ದದ ಅಂತ್ಯದಲ್ಲಿ ಮರುದುವನ್ನು ಒಂದು ಮೃಗದಂತೆ ಬೇಟೆಯಾಡಿದ್ದನ್ನೂ, ತೊಡೆಯಲ್ಲಿ ಗಾಯಗೊಂಡು, ಕಾಲು ಮುರಿದುಕೊಂಡು ಸೆರೆಯಾದದ್ದನ್ನೂ, ಸಾಮಾನ್ಯ ಅಪರಾಧಿಯಂತೆ ನೇಣು ಕಂಬಕ್ಕೆ ಏರಿಸಿದ್ದನ್ನೂ ಮನ ನೊಂದು ದಾಖಲೆ ಮಾಡಿದ್ದಾರೆ. 

ವೆಲ್ಶಿನ ಹೇಳಿಕೆಯ ಪ್ರಕಾರ, ಚಿನ್ನಮರುದುವಿನ ಕೊನೆಯ ಮಗ ದೊರೈಸ್ವಾಮಿ, ಪಿನಾಂಗಿಗೆ ಗಡಿಪಾರು ಮಾಡಲಾಯಿತು. ಆಗ ಅವನ ವಯಸ್ಸು 15. ದೊರೈಸ್ವಾಮಿಯ ಹುಟ್ಟು ಹೆಸರು, ಮುತ್ತು ವಡುಗನಾದ  ದೊರೈ ಎಂದು ಹೇಳುತ್ತದೆ ಶಿವಗಂಗೆಯ ಅಮ್ಮಾನೈ (poetic  genre with the word ‘Ammanai’ as refrain) ಕೃತಿ. ಚಿನ್ನಮರುದುವಿನ ಜತೆ ಗೆಳೆತನದಿಂದ ಇದ್ದ ವೆಲ್ಶ್, ತನ್ನನ್ನು ಅವರು ಬಹಳ ಪ್ರೀತಿಯಿಂದ ನಡೆಸಿಕೊಂಡದ್ದೂ ಅಲ್ಲದೆ, ಪ್ರತಿ ಸಲವೂ ತನಗಾಗಿ ಪ್ರತ್ಯೇಕ ರುಚಿಕರವಾದ ಕಿತ್ತಲೆ ಹಣ್ಣುಗಳು ತುಂಬಿದ ಕುಕ್ಕೆಗಳನ್ನು ಬಳುವಳಿಯಾಗಿ ಕೊಡುವುದು ಪದ್ದತಿ ಎಂದು ತನ್ನ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. 

ಕಟ್ಟಬೊಮ್ಮನನ್ನು ನೇಣು ಹಾಕಿದ ಮೇಲೆ, ತಪ್ಪಿಸಿಕೊಂಡು ಹೋದ ಊಮೈದೊರೈಗೆ ಆಶ್ರಯ ನೀಡಿದ ಕಾರಣಕ್ಕೆ ಮರುದುವಿನ ಜತೆ ಬ್ರಿಟೀಷರು ಯುದ್ದ ಮಾಡಿದರು. ಅದರ ನಂತರ ಬಂದ ಬ್ರಿಟೀಷರನ್ನು ಅಳಿಸಿ ನಾಶಮಾಡುವ ಪ್ರವೃತ್ತಿಯ ಬಗ್ಗೆಯೂ, ಮರುದು ಸಹೋದರರ ಬಗ್ಗೆಯೂ ತನ್ನ ಅಧ್ಯಯನದ ಲೇಖನ ಒಂದರಲ್ಲಿ ಲೇಖಕ ಪಿ.ಎ. ಕೃಷ್ಣನ್ ವಿಸ್ತಾರವಾಗಿ ಉಲ್ಲೇಖಿಸಿದ್ದಾರೆ. ಪ್ರಮುಖವಾಗಿ, 1813ನೇಯ ಇಸವಿ ಕೋರ್ಲೆ (Corle) ಎಂಬ ಬ್ರಿಟೀಷ್ ಬರಹಗಾರ ಇತಿಹಾಸವನ್ನು ವಿವರವಾಗಿ ಉಲ್ಲೇಖಿಸಿ ಅಂದಿನ ಪಾಳೆಯಗಾರರ ಬಗ್ಗೆ ಬ್ರಿಟೀಷರಿಗೆ ಇದ್ದ ಕೋಪವನ್ನು ವಿವರಿಸುತ್ತಾರೆ. 

ಪಾಳೆಯಗಾರರ ಮೇಲೆ ಯುದ್ದ ಘೋಷಿಸಿದ್ದು, ಅವರ ಪಾಳೆಗಳಿಗೆ ಬೆಂಕಿ ಹಾಕಿ ಅಳಿಸುವಂತೆ ಆಜ್ಞೆ ಹೊರಡಿಸಿದ್ದು, ಕುಟುಂಬದಲ್ಲಿರುವ ಗಂಡು ಮಕ್ಕಳೆಲ್ಲರನ್ನೂ ಸೆರೆ ಹಿಡಿಯುವಂತೆ ಆಜ್ಞೆ ಹೊರಡಿಸಿದ್ದು, ಸೆರೆಯಾದ ಎಲ್ಲರನ್ನೂ ವಿಚಾರಣೆ ನಡೆಸದೆ ನೇಣು ಹಾಕಿದ್ದು ಇಂತಹ ಕಾರ್ಯಗಳಲ್ಲಿ ಸ್ವಲ್ಪವೂ ಬದಲಾವಣೆ ಮಾಡದೆ, ಕಾಲಹರಣ ಮಾಡದೆ ತಕ್ಷಣ ನೆರವೇರಿಸಿದರು. ಮರುದು ಮತ್ತು ಅವನ ಸೈನ್ಯವೂ ಒಂದಂಗುಲ ಭೂಮಿಯನ್ನೂ ಬಿಟ್ಟುಕೊಡದೆ ಹೋರಾಡಿದರು. 1801ರಲ್ಲಿ ಸಂಚಿನಿಂದ ಗೆದ್ಡು ಮರುದು ಮತ್ತು ಅವನ ಕುಟುಂಬವನ್ನು ಕೈದು ಮಾಡಲಾಯಿತು. 

ಇಬ್ಬರು ಅಥವಾ ಮೂವರನ್ನು ಸೈನ್ಯದ ನ್ಯಾಯಾಲದ ಮುಂದೆ ನಿಲ್ಲಿಸಿ ತಕ್ಷಣ ನೇಣು ಹಾಕಲಾಯಿತು. ಮರುದು ಸಹೋದರರನ್ನು ನೇಣು ಹಾಕಿದ್ದರಲ್ಲಿ ತೃಪ್ತಿ ಹೊಂದದ ಬ್ರಿಟಿಷ್ ಸರಕಾರ, ಒಂದು ಸೂಚನೆಯನ್ನು ಹೊರಡಿಸಿತು. ಅದರ ಪ್ರಕಾರ, ದೊರೈಸ್ವಾಮಿಯೊಂದಿಗೆ 11 ಜನರನ್ನು ಹಿಡಿದುಕೊಟ್ಟರೆ, 1000 ಕೂಲಿ ಚಕ್ರಗಳನ್ನು ಬಹುಮಾನವಾಗಿ ಕೊಡುತ್ತೇವೆ ಎಂದು ಕರ್ನಲ್ ಅಗ್ನ್ಯು (Agnew) 1801 ಅಕ್ಟೋಬರ್ 1ರಂದು ಶಿವಗಂಗೈಯಲ್ಲಿ ಒಂದು ಸಾರ್ವಜನಿಕ ಸೂಚನೆಯನ್ನು ಹೊರಡಿಸಿದನು. ಬ್ರಿಟಿಷ್ ರ ಕೈಗೆ ಸಿಕ್ಕಿದ ಚಿನ್ನ ಮರುದುವಿನ ಮಗ ದೊರೈಸ್ವಾಮಿ, ಮರುದುವಿನ ದಳಪತಿಗಳು, ಜತೆಯಿದ್ದ ಪ್ರಮುಖ ವೀರರು ಎಂದು 72 ಜನರನ್ನು, ಪ್ರಿನ್ಸ್ ಆಫ್ ವೇಲ್ಸ್ ದ್ವೀಪಕ್ಕೆ (ಇಂದಿನ ಪಿನಾಂಗ್) ಗಡಿಪಾರು ಮಾಡಲಾಯಿತು. 

ಗಡಿಪಾರು ಮಾಡಲಾದವರ ಬಗ್ಗೆ ವಿಸ್ತಾರವಾಗಿ ಅಧ್ಯಯನ ಮಾಡಿ ಬರೆದಿರುವ ಅಧ್ಯಯನಕಾರರಾದ ದಿವಾನ್, ‘ಭಾರತದ  ಸ್ವಾತಂತ್ರ ಹೋರಾಟದಲ್ಲಿ ತಮಿಳುನಾಡಿನ ಮುಸಲ್ಮಾನರು’ ಎಂಬ ಕೃತಿಯಲ್ಲಿ ಹೊಸ ಮಾಹಿತಿಗಳನ್ನು ನೀಡಿದ್ದಾರೆ. 

ಪಿನಾಂಗಿಗೆ ಗಡಿಪಾರು ಮಾಡಲಾದ ಕೈದಿಗಳಿಗೆ ಕೋಳ  ತೊಡಿಸಿ, ಕೈಕಾಲುಗಳನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿ ಬಿಡುತ್ತಿದ್ದರು. ಅವರು ನಡೆಯುವಾಗ ಸರಪಳಿಯ ಶಬ್ದ ‘ಕ್ಲಿಂಗ್ ಕ್ಲಿಂಗ್’ ಎಂದು ಕೇಳುವುದರಿಂದ ಆ ಕೈದಿಗಳನ್ನು ‘ಕ್ಲಿಂಗರು’ ಎಂದು ಕರೆಯಲ್ಪಟ್ಟರು. ನಂತರ ಆ ಹೆಸರು ಅಲ್ಲಿ ಗುಳೇ ಬಂದ ತಮಿಳರನ್ನು ಕರೆಯುವ ಹೆಸರಾಗಿ ಬದಲಾಯಿತು. ಆ ಕೈದಿಗಳಲ್ಲಿ ಇಬ್ಬರಿಗೆ ಮಾತ್ರ ನಡೆಯಲಾಗದಂತೆ  ದೊಡ್ಡ ಸರಪಳಿಯೊಂದಿಗೆ ದೊಡ್ಡ ಕಬ್ಬಿಣದ ಗುಂಡುಗಳನ್ನು ಕೈ ಕೋಳದಲ್ಲಿ ಸೇರಿಸಿ ಕಟ್ಟಿ ತೂಗಬಿಟ್ಟಿದ್ದರು. ಯಾಕೆಂದರೆ, ಅವರಿಬ್ಬರು ಬಹಳ ಮುಖ್ಯವಾದವರು. ಅದರಲ್ಲಿ ಒಬ್ಬರು ಚಿನ್ನಮರುದುವಿನ ಮಗ ಮುತ್ತುವಡುಗು ಎಂಬ ದೊರೈಸ್ವಾಮಿ. ಮತ್ತೊಬ್ಬ, ಸೈನ್ಯದ ಪ್ರಮುಖ ದಳಪತಿಯಾಗಿದ್ದ ಶೇಕ್ ಹುಸೈನ್ ಎಂಬ ಯುವಕ. 

ಇಚ್ಚಪಟ್ಟಿ ಅಮಲ್ದಾರ್ ಶೇಕ್ ಹುಸೈನ್ ಎಂದು ಕರೆಯಲ್ಪಟ್ಟ ಇವರು, ಸ್ವಾತಂತ್ರ ಕ್ರಾಂತಿ ಸೈನ್ಯದ ಮೊದಲ ಆಕ್ರಮಣಕ್ಕೆ ನೇತೃತ್ವ ವಹಿಸಿದವರು. ಇವರನ್ನು, ದಿಂಡುಗಲ್ ಕ್ರಾಂತಿಕಾರಿಗಳ ಗುಂಪಿನ ಧೀರ, ಶ್ರೇಷ್ಠ ಹೋರಾಟಗಾರ ಎಂದು ಇತಿಹಾಸ ತಜ್ಞರಾದ ಕೆ.ರಾಜಯ್ಯನ್ ಉಲ್ಲೇಖಿಸುತ್ತಾರೆ. ಈ ಶೇಕ್ ಹುಸೈನ್ ಮರುದು ಪಾಂಡಿಯರ್ ಅಳಿವಿನ ಸಮಯದಲ್ಲಿ ಕೈದು ಮಾಡಲಾಗಿ ಪಿನಾಂಗ್ ದ್ವೀಪದಲ್ಲಿ ಸರಪಳಿಯಿಂದ ಕಟ್ಟಿ  ನಡೆಯಲಾಗದೆ ಹಸಿವಿನಿಂದ ಬಳಲಿ ಅಲ್ಲೇ ಮರಣ ಹೊಂದಿದರು. 

1902 ಫಿಬ್ರವರಿ 11 ರಂದು ದಳಪತಿ ವೆಲ್ಶ್, ದೊರೈಸ್ವಾಮಿಯನ್ನು ಗಡಿಪಾರು ಮಾಡಿ ಹಡಗಿನಲ್ಲಿ ಕಳುಹಿಸುವ ಪ್ರಯತ್ನ ಮಾಡಿದ ಸಮಯ ತನ್ನ ಕೃತಿಯಲ್ಲಿ ಉಲ್ಲೇಖಿಸುತ್ತಾರೆ. ಕೈದಿಗಳನ್ನು ಹಡಗು ಹತ್ತಿಸಿ ಕಳುಹಿಸುವ ಜವಾಬ್ಧಾರಿಯನ್ನು ನಾನು ಲೆಫ್ಟಿನಂಟ್ ರಾಕ್ ಹೆಫ್ಟ್ (Lieutenant Rock Heft) ಬಳಿ ಒಪ್ಪಿಸಿದ ಆ ದಿನವನ್ನು ಎಂದೂ ಮರೆಯಲಾಗದು. ತೂತ್ತುಕ್ಕುಡಿಯಲ್ಲಿ ಇದ್ದ ಸೈನ್ಯದ  ದಂಡಿಗೆ ನನ್ನನ್ನು ನೇತೃತ್ವ ವಹಿಸಲು ಕಳಿಹಿಸಿಕೊಡಲಾಯಿತು. ಕಲಹದಲ್ಲಿ ತೊಡಗಿಕೊಂಡು  ಗಡಿಪಾರು ಶಿಕ್ಷೆಗೆ ಒಳಗಾದ ಎಲ್ಲರೂ ಅಲ್ಲೇ ಇದ್ದರು. ಅಲ್ಲೇ ನನಗೆ ನನ್ನ ಹಳೆಯ ಗೆಳೆಯ ಚಿನ್ನಮರುದುವಿನ ಮಗ ದೊರೈಸ್ವಾಮಿಯ ಬೇಡಿಗಳನ್ನು ಕಳಚುವ ಅವಕಾಶ ದೊರಕಿತು. ಅವರ ಕಾವಲು ಕಾಯುವ ಹೊಣೆಯನ್ನು ನನ್ನ ಬಳಿ ಕೊಟ್ಟಿದ್ದರಿಂದ, ನನ್ನಿಂದ ಅವರನ್ನು ತಪ್ಪಿಸಿಕೊಂಡು ಹೋಗುವಂತೆ ಮಾಡಲು ಸಾಧ್ಯವಾಗಲಿಲ್ಲ’ ಎಂದು ಉಲ್ಲೇಖಿಸಿದ್ದಾರೆ. 

ತಕ್ಕ ಗೌರವದೊಂದಿಗೆ ದೊರೈಸ್ವಾಮಿಯನ್ನು ನಡೆಸಿಕೊಳ್ಳಬೇಕೆಂದು ಆಜ್ಞೆ ನೀಡಿದ ವೆಲ್ಶ್, 17 ವರ್ಷಗಳು ಕಳೆದು ಅವರನ್ನು ಮತ್ತೆ ಪಿನಾಂಗಿನಲ್ಲಿ ಬಹಳ ಕ್ಷೀಣವಾದ ಸ್ಥಿತಿಯಲ್ಲಿ ಬೇಟಿಯಾದದ್ದನ್ನು ತನ್ನ ನೆನಪುಗಳಲ್ಲಿ ಉಲ್ಲೇಖಿಸಿದ್ದಾರೆ. 

ಪಿನಾಂಗಿನ ಮೊದಲ ಗವರ್ನರಾಗಿದ್ದ ಸರ್ ಫ್ರಾನ್ಸಿಸ್ ಲೈಟ್ (Sir Francis Light)  ಮಗಳನ್ನು ವೆಲ್ಶ್ ಮದುವೆಯಾಗಿದ್ದರು. ಕಟ್ಟಬೊಮ್ಮನನ್ನು ಅಳಿಸಿದ ಮೇಜರ್ ಬೇನರ್ಮನ್, (Major Bannerman)  ಪಿನಾಂಗಿನಲ್ಲಿ ಅಧಿಕಾರಿಯಾಗಿದ್ದನು. ಅವನು  ಒಂದು ಕ್ರೈಸ್ತ ಸಭೆಯನ್ನು ನಿರ್ಮಿಸುತ್ತಿದ್ದನು. ಆ ಕಟ್ಟಡದ ಕೆಲಸಕ್ಕೆ ಕೈದಿಗಳನ್ನು ಕರೆತರಲಾಯಿತು. ಹಾಗೆ ಕರೆ ತಂದ  ಕೈದಿಗಳಲ್ಲಿ ಒಬ್ಬರಾಗಿ ಸಣಕಲು ದೇಹವಾಗಿ ಬಳಲಿದ್ದರು ದೊರೈಸ್ವಾಮಿ. ಆ ಕ್ರೈಸ್ತ ಸಭೆಯನ್ನು ವೀಕ್ಷಿಸಲು ಬಂದ ವೆಲ್ಶ್ ಅನ್ನು ಬೇಟಿಯಾದ ದೊರೈಸ್ವಾಮಿ ತನ್ನನ್ನು ಪರಿಚಯಿಸಿಕೊಂಡರು.

ವೆಲ್ಶ್ ತನ್ನ ಮುಂದೆ ನಿಂತಿರುವ ಮನುಷ್ಯನನ್ನು ನಂಬಲಾಗಲಿಲ್ಲ. ತನ್ನ ಗೆಳೆಯ ಚಿನ್ನ ಮರುದುವಿನ ಮಗ ದೊರೈಸ್ವಾಮಿಯೇ ಈ ಸ್ಥಿತಿಯಲ್ಲಿರುವುದು ಎಂದು ನೊಂದುಕೊಂಡು  ಅವರ ಬಳಿ ಪ್ರೀತಿಯಿಂದ ಮಾತನಾಡಿದರು. ತನ್ನ ಕುಟುಂಬದವರಿಗೆ ಒಂದು ಪತ್ರ ಬರೆದು ಕೊಡುವುದಾಗಿ ಹೇಳಿದ ದೊರೈಸ್ವಾಮಿ, ಅದನ್ನು ಹೇಗಾದರೂ ಶಿವಗಂಗೆಗೆ ಕೊಂಡುಹೋಗಿ ತಲುಪಿಸಬೇಕೆಂದು ಕೇಳಿದರು. ತನ್ನ ಪದವಿ ಮತ್ತು ಬ್ರಿಟೀಷ್ ಸರಕಾರದ ಶಿಸ್ತಿನ ಕಾರಣ ಆ ಪತ್ರವನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ನಿರಾಕರಿಸಿದ ವೆಲ್ಶ್, ಪರಿತಾಪದಿಂದ ತನ್ನ ಮುಂದೆ ನಿಂತ ದೊರೈಸ್ವಾಮಿಯ ಆಕಾರ ತನ್ನ ಮನಸ್ಸಿನಲ್ಲಿ ಹೇಳತೀರದ ನೋವನ್ನು ಉಂಟುಮಾಡಿತು ಎಂದು ಬರೆದಿದ್ದಾರೆ. 

ವೀರ ಸೀಮೆಯನ್ನು ಆಳಿದ ರಾಜನ ಮಗ ಕೈದಿಯಾಗಿ ಒಂದು ಪತ್ರವನ್ನೂ ಸಹ ಕಳುಹಿಸಲಾಗದೆ ನಿಂತ ದೃಶ್ಯ ಇತಿಹಾಸದಲ್ಲಿ ಅಳಿಸಲಾಗದ ಶೋಕದ ಚಿತ್ರವಾಗಿಯೇ ಉಳಿದಿದೆ. ಅದರ ನಂತರ ದೊರೈಸ್ವಾಮಿ ಏನಾದರು ಎಂಬ ವಿವರಗಳು ಇಂದಿನವರೆಗೆ ದೊರಕಲಿಲ್ಲ. ಮೇಜರ್ ಬೇನರ್ಮನ್ ಪಿನಾಂಗಿನಲ್ಲಿ ತೀರಿಕೊಂಡರು. ಇಂದಿಗೂ ಅವರ ಸಮಾಧಿ ಅಲ್ಲಿದೆ ಎಂದು ದೊರೈಸ್ವಾಮಿಯ ಬಗ್ಗೆ ಹಲವು ವಿವರಗಳನ್ನು ಬರೆದಿರುವ ಇತಿಹಾಸ ಸಂಶೋಧಕರಾದ ಡಾಕ್ಟರ್ ಜಯಭಾರತಿ ಹೇಳುತ್ತಾರೆ. 

ಪೆರಿಯಮರುದುವನ್ನು ನೇಣು ಹಾಕುವ ಮೊದಲು ತನ್ನ ವಾರಿಸುದಾರರನ್ನು  ಕಾಪಾಡಿ, ತನ್ನ ಆಸ್ತಿಯನ್ನು ಧರ್ಮ ಕಾರ್ಯಗಳಿಗೆ ಬಳಸಬೇಕೆಂದು ಖಡ್ಗದ ಮೇಲೆ ಪ್ರಮಾಣ ಮಾಡಿ ಹೇಳಬೇಕೆಂದು ಹೇಳಿದ್ದರು. ಅಗ್ನ್ಯು ದೊರೆಯೂ ಹಾಗೆ ಮಾಡುವುದಾಗಿ ಪ್ರಮಾಣ ಮಾಡಿದ್ದರು. ಆದರೇ ಮಾತುಗಳನ್ನು ಗಾಳಿಯಲ್ಲಿ ತೂರಬಿಟ್ಟು ದೊರೈಸ್ವಾಮಿಯೊಂದಿಗೆ 71 ಜನರನ್ನು ಜೀವನ ಪರ್ಯಂತ ವಿದೇಶದಲ್ಲಿ ನರಳುವಂತೆ ಮಾಡಿತು ಬ್ರಿಟಿಷ್ ಸರಕಾರ. 

1891 ಮೇ 18ರಂದು ದೊರೈಸ್ವಾಮಿಯ ಮಗ ಮರುದು ಸೇರ್ವೈಕ್ಕಾರನ್ ಎಂಬುವರು ಮದುರೈ ಆಡಳಿತ ಅಧಿಕಾರಿಯ ಬಳಿ ನಿವೃತ್ತಿ ವೇತನ ಬೇಕೆಂದು ನೀಡಿದ ಮನವಿಯಲ್ಲಿ ದೊರೈಸ್ವಾಮಿಯವರ ಕೊನೆಯ ದಿನಗಳ ಬಗ್ಗೆ ಉಲ್ಲೇಖಿಸಿದ್ದಾರೆ. ದೊರೈಸಾಮಿಯನ್ನು ಪಿನಾಂಗಿನಿಂದ ಮದರಾಸಿಗೆ ಕರೆತಂದ ನಂತರ, ಬ್ರಿಟಿಷ್ ಸರಕಾರದ ಬಳಿ ತನಗೆ ರಕ್ಷಣೆ ಬೇಡಿ ಮದುರೈಯಲ್ಲಿ ಉಳಿದುಕೊಳ್ಳಲು ಅನುಮತಿ ಕೇಳಿದರು. ಆದರೇ, ದೊರೈಸ್ವಾಮಿ ಖಾಯಿಲೆಗೆ ತುತ್ತಾಗಿ ಶಿವಗಂಗೆಗೆ ಕೊಂಡುಹೋಗಿ ಅಲ್ಲೇ ಮರಣ ಹೊಂದಿದರು ಎಂದು ಅವರ ಮಗ ಉಲ್ಲೇಖಿಸುತ್ತಾರೆ. ದೊರೈಸ್ವಾಮಿಯ ಬಗ್ಗೆ ಮಾಹಿತಿಗಳು ಇನ್ನೂ ಸಂಪೂರ್ಣವಾಗಿ ದೊರಕಲಿಲ್ಲ. ಅವರ ಜೀವನದ ಕೆಲವು ಗಳಿಗೆಗಳು ನಮ್ಮ ಮುಂದೆ ಬೆಳಕು ಚೆಲ್ಲಿದೆ. ಒಬ್ಬ ಕೈದಿಯಾಗಿ ಅವರು ನೋವುಗಳನ್ನು ಯಾಕೆ ಅನುಭವಿಸಿದರು… ಅದನ್ನು ಯಾಕೆ ಮೌನವಾಗಿ ಒಪ್ಪಿಕೊಂಡರು? 

15ನೇಯ ವಯಸ್ಸಿನಲ್ಲಿ ಜೈಲಿಗೆ  ಹೋಗಿ ವಯಸ್ಸಾಗಿ ಖಾಯಿಲೆಗೆ ತುತ್ತಾಗಿ ಹೊರ ಬಂದು ಯಾವ ಹಕ್ಕುಗಳು ಇಲ್ಲದೆ ನಿಧನರಾದ ದೊರೈಸ್ವಾಮಿಯ ಜೀವನ, ಮಾತುಗಳಿಗೆ ನಿಲುಕದ ವ್ಯಥೆಯಾಗಿಯೇ ಉಳಿದಿದೆ. ಆ ನೆನಪುಗಳು ಕೇವಲ ಇತಿಹಾಸದ ಮಾಹಿತಿಗಳಲ್ಲ. ಬ್ರಿಟಿಷ್ ಸರಕಾರ ಎಂತಹ ದಬ್ಬಾಳಿಕೆ ನಡೆಸುತ್ತಿತ್ತು ಎಂಬುದಕ್ಕೆ ಸಾಕ್ಷಿ. 

ಇತಿಹಾಸದ ಕತ್ತಲ ಪುಟಗಳಲ್ಲಿ ಹುದುಗಿಹೋದ ದನಿಗಳನ್ನು ಹುಡುಕಿ ಕಂಡುಕೊಳ್ಳುವುದೇ ನಿಜವಾದ ಸಂಶೋಧಕನ ಕೆಲಸ. ದೊರೈಸ್ವಾಮಿಯ ವಿಷಯದಲ್ಲಿ ಆ ಕೆಲಸ ಇನ್ನೂ ಬಾಕಿ ಇದೆ ಎಂದೇ ಅನಿಸುತ್ತದೆ. ದೊರೈಸ್ವಾಮಿಗೆ ದೊರಕಿದ ಸ್ವಲ್ಪ ಗಮನ ಸಹ ಉಳಿದ 71 ಜನರಿಗೆ ದೊರಕಲಿಲ್ಲ. ಅವರೆಲ್ಲರೂ ಏನಾದರು? ಹೇಗೆ ಬದುಕಿದರು? ಅವರ ತಲೆಮಾರು ಎಲ್ಲಿದ್ದಾರೆ? ಉತ್ತರವಿಲ್ಲದ ಪ್ರಶ್ನೆಗಳು ಬೊಬ್ಬೆ ಹಾಕುತ್ತಿವೆ. 

ಸ್ವಾತಂತ್ರ ಹೋರಾಟ ಎಂಬುದು ಹೀಗೆ ಹೊರಗೆ ಬೆಳಕಿಗೆ ಬರದೇ ಹೋದ ಅಸಂಖ್ಯಾತ ಮನುಷ್ಯರ ಪ್ರಾಣ ತ್ಯಾಗಗಳಿಂದ ರೂಪಗೊಂಡದ್ದು ಎಂಬುದನ್ನು ತಿಳಿಯುವಾಗಲೇ ಸ್ವಾತಂತ್ರದ ನಿಜವಾದ ಮೌಲ್ಯವನ್ನು ಅರಿತುಕೊಳ್ಳಲು ಸಾಧ್ಯ.

| ಇನ್ನು ನಾಳೆಗೆ |

‍ಲೇಖಕರು Admin

August 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: