ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಿತ್ತಿ ಮಳೆಯೂ ಬಂದು…

ಎಸ್. ಪಿ. ವಿಜಯಲಕ್ಷ್ಮಿ

ಚಿತ್ತೀ ಮಳೆಯೂ ಬಂದೂ
ಹೊತ್ತಿ ಹೋಯ್ತಲ್ಲೊ ಬದುಕು
ಬಿತ್ತಿದ ಮುತ್ತೆಲ್ಲಾ
ಬತ್ತಿದವೋ,
ತುತ್ತಾಗದಂತೆ ಎತ್ಹೋದವೋ….

ಚಿತ್ತಾರ ಮನದಾಗೆ ನೂರಿದ್ದವೋ
ಮುತ್ತೀಗೆ ಹಾಕುತ್ತಾ ಮೆರೆಸಿದ್ದವೋ
ಎತ್ತೆತ್ತ ನೋಡಲಿ ಮಣ್ಣಿನ ಮಡಿಲಲ್ಲಿ
ಬಂಗಾರ ಹೊಳೆದಂತೆ
ಕುಣಿಸಿದ್ದವೋ,
ಝಳಝಳನ ಬೆಳೆಯಂತೆ
ಬೆಳಗಿದ್ದವೋ…

ಮುಗಿಲ್ಯಾಕೊ ಬಿಮ್ಮಾನೆ ಕಪ್ಪಾಯಿತೋ
ನಮ್ಮಿಂದ ಏನಂಥ ತಪ್ಪಾಯಿತೋ
ಬೋಗುಣಿ ಕವುಚಿ ನೆಲವನ್ನೆ ಅವುಚಿ
‘ಸೋ’ ಎಂದು ಭರಭರನೆ
ರಾಚಿದವೋ,
ಒನಕೆಯ ಮಟ್ಟಲ್ಲಿ
ಕುಟ್ಟಿದವೋ…

ಗಂಗೇಗೆ ಯಾಕಿಂಥ ಮುನಿಸಾಯ್ತೋ
ರುದ್ರಾನ ತಾಂಡವಾ ಅತಿಯಾಯ್ತೋ
ಮನೆಯೇ ಹೊಳೆಯಾಗಿ ಇಳೆಯೇ ಕಳೆದ್ಹೋಗಿ
ಮನೆಮನೆಯಾ ಗುಡಿಸೀ
ಹಿಸುಕೀದವೋ,
ಸಾವಿನ ಸೂತಕ
ಹರಿಸಿದವೋ…

ಆಕಳು ಕರು ಕುರಿಯೂ ಎಲ್ಹೋದವೋ
ಮಗಳೆಲ್ಲೊ ಮಗನೆಲ್ಲೊ ಕಂಡಿಲ್ಲವೋ
ಎದೆ ಒಡೆದು ಚೂರಾಗಿ, ಮನೆ ಕುಸಿದು ಬಯಲಾಗಿ
ಇದ್ದದ್ದು ಇರದಂತೆ
ಮರೆಯಾದವೋ,
ಇಲ್ಲದ್ದು ತಳವೂರಿ
ಕುಕ್ಕೀದವೋ…

ಹೊನ್ನಂತು ಬಿಟ್ಟೇನು ಅನ್ನಾನೂ ಮರೆತೇನು
ಹಡೆದಾ ಕುಡಿ ಮರಳೀ ಬಂದೀತೇನು
ನೇಸಾರ ಸೂರಾಗೆ ಗುಡಿಸಾಲು ಗೋರ್ಯಾಗೆ
ಇನ್ನೆಂಗೆ ಬದುಕಾ
ಬಾಳ್ಯೇನೂ,
ಕತ್ತಾಲ ಗವಿಯಲ್ಲಿ
ಕಂಗೆಟ್ಟೆನೂ…

‍ಲೇಖಕರು avadhi

24 October, 2019

6 Comments

  1. S.P.Vijayalakshmi

    ಧನ್ಯವಾದಗಳು ಅವಧಿ…

  2. Kumar

    A true tragedy picturised in poem.

  3. S.P.Vijayalakshmi

    Dhanyavaadagalu Avadhi…

  4. Mukund

    ಮನಕಲುಕ್ಕದೆ ಕಣ್ಮುಂದೆ ನಡೆದಂತೆ

  5. T S SHRAVANA KUMARI

    ಮನಮುಟ್ಟಿದ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading