ಚಿತೆಯಲ್ಲಿ ಶೂನ್ಯದ ಲೆಕ್ಕಾಚಾರ


ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ.

ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ ಇಂಥದ್ದೊಂದು ನಡೆಯಲಿಲ್ಲವಲ್ಲ ನಮ್ಮ ಮಕ್ಕಳು ಮುಚ್ಚಟೆಯಾಗಿದ್ದಾರಲ್ಲ ಎನ್ನುವ ನೆಮ್ಮದಿಯ ಭಾವ ಮನಸಿನಾಳದಲ್ಲಿ ಬೆಚ್ಚಗೆ ಕೂತಿರುತ್ತದೆ.

ಈ ಕಾಣದಾದ ಮತ್ತು ವಾಪಸ್ಸು ಮನೆಗೆ ಹೋಗದ ಹೆಣ್ಣುಮಕ್ಕಳ ಬಗ್ಗೆ ಲೀಲಾ ಸಂಪಿಗೆ ನಮ್ಮ ನಿಮ್ಮೆಲ್ಲರ ವೈಯಕ್ತಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ತುಸು ಜಾಗೃತಗೊಳಿಸುತ್ತಿದ್ದಾರೆ ‘ಆಫ್ ದಿ ರೆಕಾರ್ಡ್’ ನಲ್ಲಿ.

ಲೈಂಗಿಕವೃತ್ತಿ ಎನ್ನುವಾಗಲೇ ಪ್ರತಿಫಲಾಪೇಕ್ಷೆ ಯನ್ನೂ ಒಂದು ಪ್ರಮುಖ ಅಂಶವನ್ನಾಗಿಸಿ ನೂರಾರು ವ್ಯಾಖ್ಯಾನಕಾರರು ವ್ಯಾಖ್ಯಾನಗಳನ್ನು ಕೊಟ್ಟಿದ್ದಾರೆ.  ನಿರ್ಭಾವುಕವಾಗಿ  ಅವರು ವ್ಯಾಖ್ಯಾನಿಸಿದ್ದಷ್ಟಕ್ಕೇ ಬಿಟ್ಟು, ಈ ವೃತ್ತಿ ಮತ್ತು ಆರ್ಥಿಕ ಸಂಬಂಧಗಳ ತಳಸ್ಪರ್ಶ ಮಾಡಿದಾಗ ಅದರ ಹರವು ವಿಸ್ತರಿಸಿಕೊಳ್ಳುತ್ತಲೇ ಹೋಗುತ್ತದೆ.

1995- 96 ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು ನಡೆಸಿದ ಅಧ್ಯಯನದ ಪ್ರಕಾರ,  ಈ ವೃತ್ತಿಯಿಂದ ಈ ಸಮಾಜಕ್ಕೆ, ಸರ್ಕಾರಕ್ಕೆ ,  ವಿವಿಧ ಕ್ಷೇತ್ರಗಳಿಗೆ ಹರಿದುಬರುವ ಆರ್ಥಿಕ ಲೆಕ್ಕಾಚಾರದ ಒಂದು ಪಕ್ಷಿನೋಟವನ್ನು ಕೊಡಲಾಗಿದೆ. (ಸ್ವರೂಪಗಳು ಬೇರೆಯಾದರೂ ಇದು ಭಾರತದ, ಕರ್ನಾಟಕದ ಎಲ್ಲ ಭಾಗಗಳಿಗೂ, ಎಲ್ಲಾ ತೆರನಾದ ಲೈಂಗಿಕವೃತ್ತಿ ಮಹಿಳೆಯರಿಗೂ ಅನ್ವಯಿಸುತ್ತದೆ)*       

ನ್ಯಾಯಾಲಯಕ್ಕೆ,  ಪೊಲೀಸ್ ಇಲಾಖೆಗೆ, ಆಸ್ಪತ್ರೆ ವೈದ್ಯರಿಗೆ,  ಬೀಡಾ, ಜರ್ದಗಳಿಗೆ, ಕುಡಿತಕ್ಕೆ,  ಇತರೆ ಚಟಗಳಿಗೆ,  ಬ್ರೋಕರ್, ಪಿಂಪ್,  ರೂಂ ಬಾಯ್ ಗಳಿಗೆ,  ತನ್ನ ದಿನನಿತ್ಯದ ಅಲಂಕಾರ, ಊಟಕ್ಕೆ, ಸಾಲಕ್ಕೆ ಬಡ್ಡಿಗಾಗಿ,  ಮಕ್ಕಳಿಗೆ,  ಅವಲಂಬಿತರಿಗೆ,  ಬಾಡಿಗೆ ಗಂಡಂದಿರಿಗೆ,  ಉತ್ಸವಗಳು ಹಬ್ಬ-ಹರಿದಿನಗಳು,ಯಾತ್ರೆ, ಉತ್ಸವಗಳಿಗೆ, ಮಾಟ- ಮಂತ್ರಗಳಿಗೆ……

ಸರಾಸರಿ  ವಾರ್ಷಿಕ ಪ್ರತಿ ಲೈಂಗಿಕವೃತ್ತಿ ಮಹಿಳೆ ಐದು ಲಕ್ಷದಿಂದ     ಏಳು ಲಕ್ಷದವರೆಗೂ ಹಣತೆರುತ್ತಾಳೆ.

ಹಾಗೆಯೇ ವಾರ್ಷಿಕವಾಗಿ ಈ  ವೃತ್ತಿಯಿಂದ ಸುಮಾರು 600 /ಕೋಟಿಯಿಂದ 800/ಕೋಟಿಯವರೆಗೂ  ಸಮಾಜ ಮತ್ತು  ಸರ್ಕಾರದೆಡೆಗೆ ಹರಿಯುತ್ತದೆ.ದಿನನಿತ್ಯ ಅವಳ ಮೈಯಿಂದ ಹರಿದ ಬೆವರು ಇಷ್ಟೆಲ್ಲಾ ಹಣವನ್ನು ಹರಿದಾಡಿಸುತ್ತದೆ.

 ಈ ಹಣದ ಲೆಕ್ಕಾಚಾರವೇ ಈ ಸಮಾಜದ ಹಾಗೂ ಫಲಾನುಭವಿಗಳ ಕಣ್ಣಿಗೆ ರಾಚುವುದು. ಈ ಹಣವನ್ನು ಅವಳು ಅನುಭವಿಸುತ್ತಾಳೆಯೇ ಅಂದ್ರೆ ಮತ್ತೆ ಅದೇ ಖೋತ ಬಜೆಟ್! ಇಲ್ಲಿ ಹಣದ ಕ್ಷಣಕಾಲದ   ‘ಸ್ಪರ್ಶಸುಖ’ ವಷ್ಟೇ ಅವಳಿಗೆ ದಕ್ಕುವುದು.ಉಳಿದದ್ದೆಲ್ಲವೂ ಅಂತಿಮವಾಗಿ ಸಮುದ್ರ ಸೇರಲು  ಹರಿಯುವ ನೀರಿನಂತೆ !!* *ಸೊನ್ನೆ × ಸೊನ್ನೆಯಂತೆ!!!

ಬಂದು ಸಾಂತ್ವನ ಹೇಳಿ ಹೋದವರು ಹಿಂದುರಿಗಿ ಬಾರದಾಗ ಪರಿಸ್ಥಿತಿ ಅರಿವಾಯ್ತುಸಂಜೆಯಾಗುತ್ತಿತ್ತು. ಅವಸರವಸರವಾಗಿ ತನ್ನ ಕೆಲಸ ಮುಗಿಸಿ ಹೊರಟವನಂತೆ ಸೂರ್ಯ ಕ್ಷಣಕ್ಷಣಕ್ಕೂ ಇಳಿಯತೊಡಗಿದ್ದ. ಬೆಳಕು ದುಪ್ಪಟ್ಟಿತ್ತು. ಬೆಳಕಿನ ಭ್ರಮೆ ಕಳೆದು ನನ್ನ ಜಗತ್ತು ಮಸುಕು ಮಸುಕಾಗಿತ್ತು. ಈ ವಾತಾವರಣವೇ ದಟ್ಟ ಕತ್ತಲಿಗೆ ನನ್ನನ್ನು ಒಡ್ಡುವುದು ಎಂಬುದರ ಅನುಭವ ನನ್ನನ್ನು ಎಚ್ಚರಿಸಿತು.

ಬರೀ ದೇಹದ ಮಸಲ್ಸ್ ಗಳನ್ನೇ ಮಾರಿದ ನನಗೆ ನನ್ನೊಡಲ ಹಣತೆಯಾಗಿದ್ದ ಮಗಳ ಹೆಣವನ್ನು ಕೊಳ್ಳ ಬೇಕಾಗಬಹುದಾದ ಕಲ್ಪನೆಯೂ ಸುಳಿದಿರಲಿಲ್ಲ. ನನ್ನ ಒಡಲ ಕುಡಿಗೆ ನಾನೇ ತೆರಬೇಕಾದ ತೆರವನ್ನು ಹೊಂಚೋದಾದ್ರೂ ಹೇಗೆ !? ಎನ್ನಿಸಿ ಬೇರೆ ದಾರಿ ಕಾಣದೆ ಎದ್ದು ನಿಂತೆ. ನೆರಿಗೆಗಳನ್ನು ಕೊಡವಿಕೊಂಡೆ.

ಬೆಳಗ್ಗಿನಿಂದ ಅತ್ತೂ ಅತ್ತೂ ಬತ್ತಿದ್ದ ಮುಖಕ್ಕೆ ನೀರೆರೆಚಿಕೊಂಡೆ. ಸೀದಾ ರಸ್ತೆಗಿಳಿದೆ. ಮೆಜೆಸ್ಟಿಕ್ ಪರಲೋಕ ಹೋಟೆಲಿನ ತಿರುವಿನ ಕಿರುದಾರಿಯ ಗೂಡಂಗಡಿಗೆ ಹೋದೆ. ಮಾಣಿಕ್ ಚಂದ್ ಪೊಟ್ಟಣ ಒಡೆದು ಬಾಯಿಗೆ ಸುರುವಿಕೊಂಡೆ. ಮೂರನೇ ಗಲ್ಲಿಯಲ್ಲಿ ವೆಂಕಟೇಶ್ವರ ವೈನ್ ಸ್ಟೋರಿನ ಮುಂಭಾಗದಲ್ಲಿ ನಿಂತೆ. ಅಂಗಡಿ ಮಾಲೀಕ ನಾರಾಯಣ ಪ್ರಶ್ನಾರ್ಥಕವಾಗಿ ನೋಡಿದ. ಒಂದು ಪೆಗ್ ಕೊಡಣ್ಣ ಅಂದೆ. ಗಟಗಟನೆ ಸುರುವಿಕೊಂಡೆ. ಗಂಟಲು, ಎದೆ, ಹೊಟ್ಟೆ… ದಹಿಸ್ಕೊಂಡೆ ಒಳಸೇರ್ತು.

ನಾರಾಯಣ ಆವಾಜ್ ಹಾಕ್ತಾನೇ ಇದ್ದ. ಬರೋವಾಗ ದುಡ್ಡು ಕೊಟ್ಟು ಹೋಗು…, ಮುಂಡೇವು ಕುಡಿದೇ ಇದ್ರೆ ಸೆರಗು ಬೀಳೋಲ್ಲ, ಸೆರಗು ಬೀಳದೆ ದುಡ್ಡು ಕೊಡೋಲ್ಲ…. ಅಂತ ಗೊಣಗ್ತಾನೇ ಇದ್ದ. ಅದೆಷ್ಟು ಸೆರಗುಗಳ ಸಂದಿಯ ನೋಟುಗಳನ್ನು ಎಣಿಸಿದ್ದಾನೆ ಅನ್ನೋದು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅವನ ದವಲತ್ತು ನೋಡಿದ್ರೇ ಹೇಳಬಹುದು.

ರಂಭಾ ಥಿಯೇಟರಿನ ಗಲ್ಲಿಗಿಳಿದೆ, ಅದೆಷ್ಟು ವರ್ಷಗಳ ಪರಿಚಿತ ಸ್ಥಳ. ಆ ಗಲ್ಲಿಯ ಅಡಿಯಡಿಯ ಇತಿಹಾಸದ ಪರಿಚಿತಳು ನಾನು. ಎದುರಿಗೆ ಸ್ವಲ್ಪ ದೂರದಲ್ಲಿ ವ್ಯಕ್ತಿಯೊಬ್ಬ ಬಂದು ನಿಂತ. ಅವನೇ ಬೆರಳುಗಳ ಅಂಕಿ ಸೂಚಿಸಿದ. ಏನೂ ಪ್ರತಿಕ್ರಿಯಿಸದೆ ಅವನ ಹಿಂದೆ ನಡೆದೆ. ಅವನೇನೋ ಮಾತನಾಡ್ತಾನೇ ಇದ್ದ.

ಸಪ್ತಪದಿಯವಳೊಂದಿಗೆ ಎಂದೂ ಬೆತ್ತಲಾಗದ ತಾಕತ್ತಿಲ್ಲದವನು ನನ್ನಲ್ಲಿ ಭ್ರಮೆಗಳನ್ನು ಹುಟ್ಟಿಸುತ್ತಾನೇ ಇದ್ದ. ನನ್ನೊಡಲು ಮಾತ್ರ ಅಸಾಧ್ಯವಾದ ನೋವನ್ನು ಒಸರುತ್ತಿತ್ತು. ಅವನು ತೃಷೆಯ ಉತ್ತುಂಗದಲ್ಲಿ ತನ್ನೊಂದಿಗೆ ಬರಲು ರಮಿಸುತ್ತಲೇ ಇದ್ದ. ಕೊನೆಗೂ ನಿಸ್ತೇಜನಾದ.ಮಾತಾಡಿ ಬಂದದ್ದು ಇಡೀ ರಾತ್ರಿಗೆ, ಅರ್ಧ ಗಂಟೆಗೇ ಅವನ ಪೌರುಷ ಮುಗಿದಿತ್ತು.

ಕಾವಿಳಿದ ಮೇಲೆ ಭರವಸೆಗಳೂ ಇಲ್ಲ, ಭ್ರಮೆಗಳೂ ಇಲ್ಲ. ಗಾಢನಿದ್ರೆಗೆ ಹೋದ ಹೆಣದಂತೆ! ದೇಹ ಮನಸ್ಸು ಬದುಕು ಎಲ್ಲವೂ ಚಿಂದಿಚಿಂದಿ. ಸುಮಾರು 25 ವರ್ಷಗಳಿಂದಲೂ ನನ್ನ ಜೊತೆ ನಡೆದವರು, ಕಸಿದವರು, ತಿಂದವರು, ಕುಡಿದವರು, ನನ್ನನ್ನೇ ಹೀರಿದವರು ಲೆಕ್ಕವಿಲ್ಲದಷ್ಟು. ನೀರವತೆ ನನ್ನನ್ನು ಆವರಿಸುತ್ತಿತ್ತು.

ಎಷ್ಟು ಬೇಡವೆಂದರೂ ನಾನು ದುಡಿದುಡಿದು ಹಾಕಿದ ನೋಟುಗಳ ಲೆಕ್ಕ ಮಾಡುವ ವ್ಯರ್ಥ ಪ್ರಯತ್ನವನ್ನು ನನ್ನ ಮನಸ್ಸು ಮಾಡುತ್ತಲೇ ಇತ್ತು. ಎಂದೂ ಲೆಕ್ಕಕ್ಕೇ ಸಿಗದ ಆ ಕಾಂಚಾಣ ಸೊನ್ನೆ ಸೊನ್ನೆಗಳನ್ನು ಸುತ್ತಿಸುತ್ತಿ ನನ್ನ ಮುಂದೆ ಗುಡ್ಡೆ ಹಾಕಿತ್ತು. ಗಳಿಸಿದ್ದೆಲ್ಲವೂ ದಕ್ಕಿದ್ದಾದರೂ ಎಲ್ಲಿ? ಇಂಥಾ ಅದೆಷ್ಟು ಶೇಖರ, ಮುನಿ, ಪಾಷರಂತಹವರು ನುಂಗಿ ನೀರು ಕುಡಿದಿದ್ದರು.

ಬೆತ್ತಲಾದ ಕತ್ತಲಾಟದಲ್ಲಿ ಬೆವರಿಳಿಸಿ ಕೊಂಡವರು ಕೊಟ್ಟಿದ್ದೂ ಲೆಕ್ಕವಿಲ್ಲ, ಬೆತ್ತಲೆ ದೇಹಕ್ಕೆ ಸೀರೆ ಸುತ್ತುವ ಮುನ್ನವೇ ಕಸಿದುಕೊಂಡ ಹದ್ದುಗಳದ್ದೂಲೆಕ್ಕವಿಲ್ಲ. ಎಷ್ಟು ರಾಶಿ ಸೊನ್ನೆಗಳಿದ್ದರೂ ಗುಣಿಸಿದ್ದು ಸೊನ್ನೆಯಿಂದಲೇ ಆದಾಗ ಎಲ್ಲವೂ ಶೂನ್ಯವಾಯ್ತು. ನನ್ನ ಬೆಂಗಾಡಿನ ತಂಗಾಳಿಯಂತೆ ಬಂದ ಶಾರಿಯೆಂಬ ‌ ಬೆಳಕೂ ಕತ್ತಲೆಯಾಯ್ತು. ಎಲ್ಲವೂ ವ್ಯವಸ್ಥೆಯಾಗಿತ್ತು. ಜೀವ ದಣಿದಿತ್ತು. ಅಂತಿಮ ಅಗ್ನಿಸ್ಪರ್ಶ ದೊಂದಿಗೆ ನನ್ನ ಬದುಕೇ ಮುಗಿದು ಹೋದಂತೆ ಮನಸ್ಸು ರೋದಿಸುತ್ತಿತ್ತು.

ನನ್ನ ಮಗಳು ಶಾರೀ ಅಗ್ನಿಯಲ್ಲಿ ಲೀನವಾಗಿದ್ದಳು ಆ ಕೆನ್ನಾಲಿಗೆಯ ರೌದ್ರವತೆಯನ್ನು ದಿಟ್ಟಿಸುತ್ತಾ ಅಲ್ಲೇ ಕುಸಿದೆ. ನನ್ನ ಬದುಕಿನ ಚಾಪೆ ಸುತ್ತಿ ನನ್ನ ಸಮೇತ ದೂರಕ್ಕೆ ಎಸೆದಂತಾಗಿತ್ತು ನನ್ನ ವಾಸ್ತವದ ಸ್ಥಿತಿ. ಶಾರೀ ಕಣ್ಣೆದುರು ಬಂದಳು… ಕೃಷ್ಣ ಸುಂದರಿಯವಳು. ಆರೋಗ್ಯವಾಗಿ ದಷ್ಟಪುಷ್ಟವಾಗಿದ್ದ ದೇಹಕ್ಕೆ ಹರೆಯದ ಮಿಂಚು. ಆ ಮುಗ್ದತೆಯ ಮುಖಮುದ್ರೆಯೂ ಶಾಂತವಾಗಿತ್ತು.

ಅವಳನ್ನು ಅಷ್ಟು ಬೆಳೆಸಲು ನಾನು ಪಟ್ಟ ಕಷ್ಟವನ್ನೆಲ್ಲ ಅವಳ ಒಂದು ಅಪ್ಪುಗೆ ಮರೆಸಿಬಿಡುತ್ತಿತ್ತು. ಅವಳ ಒಂದು ನಗುವೇ ನನ್ನ ಬದುಕಿನ ಆಶಾ ಕಿರಣವಾಗಿತ್ತು. ಮೊಟ್ಟಮೊದಲ ಬಾರಿಗೆ ಶಾರಿ ಅಳುವಿನ ನಾದ ಕೇಳಿದಾಗ , ಅವಳ ಹುಟ್ಟಿಗೆ ಕಾರಣವಾದ ಎಲ್ಲಾ ಸಂಕಟಗಳೂ ಗಾಳಿಯಲ್ಲಿ ತೂರಿ ಹೋಗಿದ್ದವು. ನನ್ನ ಬದುಕಿಗೂ ಒಂದು ಸಮರ್ಥನೆ ಸಿಕ್ಕಿತ್ತು. ಕ್ಷಣ ಕಾಲವೂ ಬಿಟ್ಟಿರಲಾರದ ನನ್ನ ಏಕೈಕ ಜಗತ್ತೇ ಅವಳಾಗಿ ಬಿಟ್ಟಳು. ಅವಳಿಗೆ ಶಾರದ ಎಂದು ನಾನೇ ನಾಮಕರಣ ಮಾಡಿದೆ.

ಹಸಿವಿನ ಹಂಗಿನಲ್ಲಿ ಹನ್ನೊಂದು ದಿನಗಳ ಕಳೆಯೋ ಹೊತ್ತಿಗೆ ಸಾಕುಸಾಕಾಯ್ತು. ಶಾರಿಯನ್ನು ಶಾಲಲ್ಲಿ ಸುತ್ತಿಕೊಂಡೇ ಮೆಜೆಸ್ಟಿಕ್ ದಾರಿ ಹಿಡಿದುಬಿಟ್ಟೆ. ಮಾಂಸದ ಮುದ್ದೆಯಂತೆ ಪಿಚಿಪಿಚಿ ಅಂತ ನನ್ನೊಂದಿಗೆ ಬಂದ ಶಾರೀ ಅವರಿವರ ಕೈಯ್ಯಲ್ಲೇ ಬೆಳೆದಳು. ಯಾರೂ ಇಲ್ಲದಿದ್ದರೆ ಪಿಂಪ್ ಮಾದೇವನಿಗೆ 20 ರೂಪಾಯಿ ಕೊಟ್ರೆ ಅವನೇ ನೋಡ್ಕೊಳ್ಳೋನು.

ಐದಾರು ವರ್ಷದವಳಾ ಗೋವರೆಗೂ ಹೀಗೇ ಬೆಳೆದು ಬಿಟ್ಟಳು. ಅವಳಿಗಾಗಿ ಕಾಳಜಿ ವಹಿಸಿ ಒಂದು ವಠಾರದಲ್ಲಿ ಮನೆ ಮಾಡಿದೆ. ಶಾರಿಯನ್ನು ಒಬ್ಬ ಆಶ್ರಯದಾತನ ಸಹಕಾರದಿಂದ ಶಾಲೆಗೆ ಸೇರಿಸಿದೆ. ನನ್ನ ಶಾರಿ ಒಂಬತ್ತನೇ ತರಗತಿಯವರೆಗೆ ಕಲಿತಳು. ಅದೊಂದು ಸೋಜಿಗ ನನಗೆ…! ಅದೊಂದು ನನ್ನ ಬದುಕಿನ ಎಲ್ಲ ಕಳಂಕವನ್ನು ತೊಳೆದ ಹೆಮ್ಮೆ ನನಗೆ….!

ಅದೊಂದು ದಿನ ಆಪ್ತರೊಬ್ಬರು ಸುರೇಶನೆಂಬ ಅನಾಥ ಹುಡುಗನ ಗುಣಗಾನ ಮಾಡಿ ಶಾರೀ ಮದುವೆಯ ಪ್ರಸ್ತಾಪ ಮಾಡಿದ್ರು. ಎಲ್ಲರ ಸಹಾಯ ಪಡೆದು ಮದುವೆ ಯೆಂಬ ನಮ್ಮ ಬದುಕಿನ ಮರೀಚಿಕೆಯ ಗೆದ್ದು ನನ್ನ ಮಗಳಿಗೆ ಮದುವೆ ಮಾಡಿಬಿಟ್ಟೆ. ನನ್ನ ಬದುಕಿನ ಬಾಗಿಲಿಗೂ ಪ್ರವೇಶಿಸದ ಬದುಕು ನನ್ನ ಮಗಳಿಗೆ ಸಿಕ್ಕಿತು ಅಂತ ಹಿಗ್ಗಿದೆ.

ಹೆಜ್ಜೆಹೆಜ್ಜೆಗೂ ‘ಸೂಳೆ ಸೂಳೆ’ ಅಂತ ಮೂದಲಿಸಿ ಕೊಂಡೆ ಉಸಿರಾಡಿದ ನನಗೆ ನನ್ನ ಮಗಳು ಯಾವ ಮೈಲಿಗೆಯೂ ಇಲ್ಲದೆ ಗೃಹಿಣಿಯಾಗಿದ್ದು, ಪತ್ನಿ ಯಾದದ್ದು ನನ್ನ ಬದುಕಿನಲ್ಲಿ ಅದೆಂಥದೋ ರೋಮಾಂಚನವನ್ನು ತಂದೊಡ್ಡಿತ್ತು. ದಣಿವಾಗುವಷ್ಟು ದುಡಿದರೂ ಲೆಕ್ಕಿಸದೆ ಒಂದು ಪುಟ್ಟ ಮನೆಯನ್ನೂ, ಬದುಕನ್ನೂ ನನ್ನ ಮಗಳಿಗೆಜೋಡಿಸಿ ಕೊಟ್ಟೆ.

ಆದರೆ ಕೆಲವೇ ತಿಂಗಳುಗಳಲ್ಲಿ ಶಾರಿಯ ಮೈಯ್ಯ ಮಿಂಚು ಮಾಯವಾಗ್ತಾ ಬಂತು. ಬದುಕೊಳಗೆ ಹೊಗೆಯಾಡೋಕೆ ಶುರುವಾಯ್ತು. ಅವಳ ಗಂಡ ಕೆಲಸಕ್ಕೆ ಹೋಗೋದು ನಿಲ್ಲಿಸಿದ್ದ. ಕುಡಿತವೂ ಅವನಿಗೆ ಗೊತ್ತು ಅನ್ನೋದು ದಿನ ಕಳೆದಂತೆ ಶಾರಿಗೆ ಗೊತ್ತಾಯ್ತು. ಕೆಲಸಕ್ಕೆ ಹೋಗುವಂತೆ ಗಂಡನನ್ನು ಒತ್ತಾಯಿಸಿದಾಗ, ಅವನು ತನ್ನೊಳಗೆ ಅಡಗಿದ್ದ ಲಾವಾ ರಸವನ್ನು ಹೊರ ಉಕ್ಕಿಸಿದ್ದ. ‘ನಿಮ್ಮಮ್ಮನಿಗೆ ತಂದು ಹಾಕುವಂತೆ ಹೇಳು, ಒಬ್ಬ ಬೀದಿ ಸೂಳೆ ಮಗಳನ್ನು ನಾನು ಕೈ ಹಿಡಿದು ಜೀವನ ಕೊಟ್ಟಿಲ್ವಾ’? ಎಂದಾಗ ಶಾರಿ ಬದುಕಿಗೇಬರಸಿಡಿಲು ಬಡಿದಿತ್ತು.

ಉದ್ದಕ್ಕೂ ಇಂಥವಳ ಮಗಳು ಅಂತ ಅನುಭವಿಸಿ ಬಂದ ಎಲ್ಲ ನೆನಪುಗಳು ರಾಚಿದವು. ಈ ಸಂಸಾರವೆಂಬ ಮರೀಚಿಕೆ ತನಗೆಟಕಲಾರದ್ದು ಎಂಬ ವಾಸ್ತವ ಶಾರಿಯನ್ನು ಕಂಗಾಲಾಗಿಸಿತ್ತು. ನನ್ನೊಂದಿಗೆ ಶಾರಿ ತನ್ನ ಬದುಕಲ್ಲಿ ಸಾಮರಸ್ಯ ಬಿರುಕುಬಿಟ್ಟ ಬಗ್ಗೆ ಹೇಳಿಕೊಂಡು ಅತ್ತಿದ್ದಳು. ಆದರೂ ಎದೆಗುಂದದ ನಾನು ಹೇಗಾದರೂ ನನ್ನ ಮಗಳ ಬದುಕನ್ನು ಹಸನುಗೊಳಿಸಲು ಉಸಿರುಗಟ್ಟಿ ದುಡಿದೆ.

ಒಮ್ಮೆ ಎಲ್ಲವೂ ಸರಿ ಹೋದಂತೆ ಭಾಸವಾಗುತ್ತಿತ್ತು. ಮತ್ತೊಮ್ಮೆ ಸೌಧವೇ ಉರುಳಿ ಹೋಗಿ ಬಿಡುವ ಅಪಾಯ ಕಾಡುತ್ತಿತ್ತು. ಇನ್ನೂ ಚಿಕ್ಕ ವಯಸ್ಸು ಎಲ್ಲವೂ ಸರಿಹೋಗುತ್ತೆ ಅಂತ ಸಮಾಧಾನಿಸಿ ಕೊಳ್ಳುತ್ತಿದ್ದೆ. ಊಹುಂ ! ಸರಿಹೋಗಲೇ ಇಲ್ಲ. ನಾನು ಮಾಡಿದ ಎಲ್ಲ ಪ್ರಯತ್ನಗಳೂ ಕಡಲತೀರದ ಮರಳ ಗುಡ್ಡೆಯ ಗೂಡುಗಳಂತಾಯ್ತು. ಈ ಕಳಂಕವನ್ನೇ ಬ್ಲಾಕ್ಮೇಲ್ ತಂತ್ರ ಮಾಡಿಕೊಂಡ ಸುರೇಶನ ಕುಡಿತ, ಮೋಜು ಮಿತಿಮೀರಿತ್ತು. ಅದಕ್ಕೆ ನೆಪ ನಾನಾಗಿದ್ದೆ.

ಆ ಅಮಲಲ್ಲೇ ನನ್ನ ಶಾರಿಯ ಮೇಲೆ ಸೀಮೆಎಣ್ಣೆ ಸುರಿದ. ಗೀಚಿದ ಬೆಂಕಿ ಕಡ್ಡಿಯಿಂದ ಬೀಡಿ ಹೊತ್ತಿಸಿ ಕೊಂಡ ಸುರೇಶ ಉಳಿದ ಕಡ್ಡಿಯ ಪುಟ್ಟ ಬೆಂಕಿಯನ್ನು ಶಾರಿಯೆಡೆಗೆ ಎಸೆದು ಬಿಟ್ಟಿದ್ದ.ಸುದ್ದಿ ತಿಳಿದು ವಿಕ್ಟೋರಿಯ ಆಸ್ಪತ್ರೆಗೆ ಓಡಿದೆ. ಆಗಲೇ ನನ್ನ ಶಾರಿ ಶವಾಗಾರದಲ್ಲಿದ್ದಳು….. ಆಕಾಶವೇ ಕಳಚಿ ಬಿದ್ದಿತ್ತು. ಹೃದಯಕ್ಕೆ ಕತ್ತಲು ದಾಳಿಯಿಟ್ಟಿತ್ತು. ನನ್ನನ್ನು ಹಿಂಡಿ ತಿಂದವರೆಲ್ಲ ಬಂದು ಸಾಂತ್ವನದ ಮಾತಾಡಿದರು.

ನಾನು ಅವರೆಡೆಗೆ ದೀನಳಾಗಿ ನೋಡುತ್ತಾ, ನನ್ನ ಒಡಲ ಕುಡಿಗೆ ಸಂಸ್ಕಾರ ಮಾಡಿ ಅಂತ ವಿನಂತಿಸಿದ್ದೆ. ಮರಳಿ ಬಾರದ ಅವರುಗಳು ಇಲ್ಲವಾಗಿದ್ದರು. ಇದು ನನ್ನ ಈ ಪಾತಕ ಲೋಕದ ಅಂತಿಮ ಪಯಣ……ಅಂತ ನಿರ್ಧರಿಸಿದೆ. ನನ್ನ ಶಾರಿ ಮತ್ತು ನನ್ನನ್ನು ನಡೆಸಿಕೊಂಡ ಈ ಘಾತುಕ ಲೋಕದ ಸಂಸ್ಕಾರಕ್ಕಾಗಿ ಹಣ ಹೊಂಚಲು ಕೊನೆಯದಾಗಿ ಬೆತ್ತಲಾದೆ. ಶಾರೀ ಹೆಣವೂ ಕೂಡ ನನ್ನ ದೇಹದ ಕಿಮ್ಮತ್ತಿನ ಕಾಸನ್ನು ಬೇಡಿತ್ತು??

‍ಲೇಖಕರು ಲೀಲಾ ಸಂಪಿಗೆ

October 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. T S SHRAVANA KUMARI

    ಕರುಳು ಕರಗಿಸುವ ಬರಹ. ಮನ ಮೂಕವಾಗುತ್ತದೆ. ಇಂತಹ ಎಷ್ಟು ಅಗ್ನಿದಿವ್ಯಗಳೋ ಇಂತವರ ಬಾಳಲ್ಲಿ

    ಪ್ರತಿಕ್ರಿಯೆ
  2. ಗೀತಾ ಎನ್ ಸ್ವಾಮಿ

    ಲೀಲಕ್ಕ ಪ್ರತಿ ಸಲವೂ ನಿಮ್ಮ ಅಂಕಣ ಓದಿದಾಗ ಸಂಕಟವಾಗುತ್ತದೆ… ಯಾವಾಗ ಇಂಥದ್ದೆಲ್ಲ ನಿಲ್ಲುತ್ತೋ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: