ಕೂನಿಂಗ ಬೋವಿಯೂ, ಭಲ್ಲೂಕವೂ ವಲ್ಮೀಕದ ಸಂಘದಲ್ಲಿ….

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು.

ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.

ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು.

ಅಲ್ಲೆ ಆ ಕಡೆ ನೋಡಲಾ…’ ಎಂದು ನಿಮಗೆ ತೋರಿಸುತ್ತಿರುವುದು ಅವರ ಊರಿನ ಆತ್ಮವನ್ನು.

ಒಂದಿಡಿ ದಿನ ಬಿದ್ದ ಮಳೆಗೆ
ಮೈಯ್ಯನ್ನೆಲ್ಲಾ ತೋಯಿಸಿಕೊಂಡು
ಸೂರ್ಯನತ್ತಲೆ ನೋಡಿ ನಕ್ಕ ಬೀಜ

ಮಣ್ಣಿಗಿರುವ ಉಸಿರು ನಿಂತರೆ ಬದುಕೇ ಅವಸಾನವಾಗಿಬಿಡುತ್ತೆ. ಶಾಲೆಗೆ ಹೋಗುತ್ತಿದ್ದ ಕಾಲವನ್ನು ಹೊರತಾಗಿಟ್ಟರೆ ನಾನು ಹೆಚ್ಚು ಮಣ್ಣು ಹಾಗೂ ನಮ್ಮ ಎಡಬಲದ ಊರುಗಳಿಗೆ ಹೃದಯದಂತಿದ್ದ ದೊಡ್ಡಳ್ಳದ ಮರಳು ನೀರಿನ ಮೈತ್ರಿಯಲ್ಲಿ ಕಾಲ ಕಳೆದದ್ದು. ನಮ್ಮ ಊರಿನಲ್ಲಿ ಮಣ್ಣನ್ನು ಧರಿಸಿದ ಜನರೇ ಹೆಚ್ಚು ಇರುವುದರಿಂದ ಎದ್ದು ಬಿದ್ದು ನೋಡಿದ್ದು ಬೇಸಾಯವನ್ನೆ. ಅಪ್ಪ ದೊಡ್ಡಪ್ಪಂದಿರಂತು ಸುತ್ತೇಳು ಹಳ್ಳಿಗೆ ಹೆಸರಾದಂತೆ ಕೃಷಿದ್ಯಾನ ಮಾಡಿದವರು.

ಮಣ್ಣೆಂಬ ಅನಂತವೊಂದು ನಮ್ಮೊಳಗೆ ಕಾಣಿಸಿದ ದಿವ್ಯತೆಗೆ ಕೊನೆಯಿಲ್ಲ. ಎರೆಹೊಲದ ಕಪ್ಪು ಮಣ್ಣಿನಲ್ಲಿ ಎಳ್ಳು ಮಾಗಿ ಒಣಗಿ ಕೊಯ್ಯುವ ಕಾಲ ಬಂದರೆ ಒಂದು ಸಾಲು ಗಿಡಗಳ ಎಳ್ಳಿನ ಕುಕ್ಕೆ ನಮ್ಮ ಲಂಗದಲ್ಲಿ ಗಂಟಾಗಿ ಕಲ್ಲಿಗೆ ಬಡಿದು ಉದುರಿಸಿ ಕೈಯ್ಯಲ್ಲೆ ತೂರಿಕೊಂಡು ತಿಂದ ನೆನಪುಗಳ ಕಣಜ ಹಸಿರಾಗಿದೆ ಇವತ್ತಿಗೂ.ಹಜಾಮರ ಎರೆ,ಹೊಂಗೆ ಮರದ ಎರೆಗಳಲ್ಲಿ ಕಣ್ಣಾಯಿಸಿದಷ್ಟು ಕಾಣುವ ಕಪ್ಪು ಮಣ್ಣಿನ ಗಮಲನ್ನು ಮಳೆಯದಿನಗಳಲ್ಲಿ ಮೈದುಂಬಿಕೊಂಡು ಆಡಿದ್ದೇವೆ.

ಮಣ್ಣದೇವರುಗಳು ನಮ್ಮ ಕೈಯಲ್ಲಿ ರೂಪುಗೊಂಡು ಮಣ್ಣಿಗೆ ಸೇರಿವೆ. ಮಣ್ಣಿನ ಮಹಿಮೆಗೆ ಒಮ್ಮೆ ಹೊಕ್ಕರೆ ಸಾಕು ಬಿಡಿಸಿಕೊಳ್ಳದ ಬಂಧವೊಂದು ಉದಾರವಾಗಿ ಕಾಯುತ್ತದೆ. ಈಗಲೂ ಹಗಲಿನಲ್ಲಿ ನನ್ನ ಊರಿನ ತೊಂಭತ್ತು ಭಾಗ ಮನೆಗಳ ಬಾಗಿಲು ಮುಚ್ಚಿ ಮಣ್ಣಿನ ಮನೆಯ ಶ್ರಮಕ್ಕೆ ಆತುಕೊಂಡಿರುತ್ತಾರೆ.

ನಾನು ಚಿಕ್ಕವಳಿದ್ದಾಗ ನಮ್ಮ ಊರಿನ ಪಕ್ಕ ಕಿಲಾರದಹಳ್ಳಿ ಗೊಲ್ರಟ್ಟಿ ಅಂತ ಇತ್ತು ಈಗಲೂ ಇದೆ. ಅಲ್ಲಿಂದ ಕೂನಿಂಗ ಬೋವಿ ಅನ್ನೋ ಹಿರಿಯರು ಬರೋರು. ಮೊದಲೆಲ್ಲ ಇವರು ಯಾಕೆ ಬರೋರು ಅನ್ನೋದನ್ನು ನಾವು ಗಮನಿಸುತ್ತಿರಲಿಲ್ಲ. ಒಂದಿಷ್ಟು ಹೊತ್ತು ಹಜಾರದಲ್ಲಿ ಕುಳಿತು ದೊಡ್ಡಪ್ಪ ದೊಡ್ಡಮ್ಮನ ಹತ್ತಿರ ಏನೋ ವ್ಯವಹಾರ ನಡೆಯೋದು.

ಆಮೇಲಾಮೇಲೆ ತಿಳಿಯಿತು ಇವರು “ತಾಯಿಸ್ಲು” ಹಿಡಿದು ಸ್ಥಿತಿವಂತರ ಮನೆಗಳಿಗೆ ಮಾರಲು ಬರುತ್ತಾರೆಂಬುದು. ಸುತ್ತಲಿನ ಊರುಗಳ ಎಲ್ಲೆಲ್ಲಿ ಹುತ್ತಗಳಿವೆ ಎಂಬುದನ್ನು ಹುಡುಕೋದು ಹಾಗೆ ದಿನವಿಡೀ ಹುತ್ತ ಬಗೆದರೆ ತಳದಲ್ಲಿ ಬೆಳ್ಳನೆಯ ಉದ್ದದ ತಾಯೀಸ್ಲು ಹುಳ ಸಿಗೋದು. ಒಂದು ದಿನಕ್ಕೆ ಐದಾರು ಹುಳಗಳನ್ನು ತಂದು ಮಾರುವುದೆ ಇವರ ವೃತ್ತಿ.

ಸುಮಾರು ಮೂವತ್ತು ವರ್ಷಗಳ ಹಿಂದೆ ಈ ಹುಳವೊಂದಕ್ಕೆ ಒಂದು ನೂರು ಕೊಟ್ಟು ನಮ್ಮ ಮನೆಯಲ್ಲಿ ತಗಳೋರು. ತಲೆಜಿಗ್ಟಿಬಿಸಾಕಿ ಬಿಳಿಯ ಹುಳವನ್ನು ಅಂಗೇನುಂಗ್ಸೋರು. ಅದು ಗಂಡುಮಕ್ಕಳಿಗೆ ಮಾತ್ರ. ನಾವು ಕಾರಣ ಕೇಳಿದರೆ ಗಂಡುಡುಗ್ರಿಗೆ ಬಲ ಬರುತ್ತೆ ಒಂದುಳ ನುಂಗಿರೆ ಒಂದು ಸೇರು ತುಪ್ಪ ಕುಡ್ದಂಗೆ ಅಂತೆಲ್ಲಾ ಹೇಳೋರು.

ಕೆಲವೊಮ್ಮೆ ಒಲೆಯ ಕೆಂಡದ ಮೇಲೆ ಕಂಚಿನ ಗಂಗಳ ಇಟ್ಟು ತುಪ್ಪ ಸುರಿದು ಬರೀ ತುಪ್ಪದಲ್ಲಿಯೇ ಕುಕ್ಕಿ ಕುಕ್ಕಿ ಈ ಹುಳವನ್ನು ಹದವಾಗಿ ಬೇಯಿಸಿ ನಮ್ಮ ಅಣ್ಣಂದಿರಿಗೆ ಮಾತ್ರ ತಿನ್ನಲು ಕೊಡೋರು. ನಾವು ಹಬೆಯಲ್ಲಿ ಕುಳಿತು ನೋಡವುದಷ್ಟೆ ಕೆಲಸ. ಕಣ್ಣು ಮುಂದೆ ಲಿಂಗ ಅಸಮಾನತೆ ನಡೀತಿದ್ರು ಗುರುತಿಸುವಷ್ಟು ಅರಿವಿಲ್ಲದ ಕಾಲ.

ಕೂನಿಂಗ ಬೋವಿ ನಮ್ಮ ಹೊಲದಲ್ಲಿ ಹುತ್ತ ಬಗೆಯುವ ಶ್ರಮವನ್ನು ನೋಡಿದ್ದೇನೆ. ದಿನದರ್ದ ಕಾಲ ಗುದ್ದಲಿ ಹಿಡಿದು ಬೆವರು ಬಸಿದರೆ ಒಂದು ಹುಳ ಸಿಗೋದು. ದಿನವೊಂದಕ್ಕೆ ಎರಡು ಹುತ್ತ ಬಗೆದರೆ ಹೆಚ್ಚು. ಸಿಕ್ಕ ಹುಳುಗಳನ್ನು ಊರೂರು ತಿರುಗಿ ಶ್ರೀಮಂತರ ಮನೆಗಳಿಗೆ ಮಾರೋದು. ಕೊಳ್ಳುವ ಯಾರ ಮನೆಗಳಲ್ಲಿ ಕೇಳಿದರೂ ಇವು ಗಂಡುಡುಗ್ರು ಪಾಲು ಮಾತ್ರ. ಶೋಷಣೆಯ ಚರಿತ್ರೆ ಗೆ ಎಷ್ಟು ರೂಪಗಳಿವೆ.

ನಾವು ಕೂಡ ಪ್ರಶ್ನಿಸಿ ನಮಗು ತಾಯೀಸ್ಲು ತಿನ್ನಿಸಿ ಎಂದು ಅಮ್ಮಂದಿರನ್ನು ಕೇಳದಷ್ಟು ಅಸಹಾಯಕರು ಅಂದಿನ ದಿನಗಳಲ್ಲಿ ಒಮ್ಮೆ ಹುಣ್ಣಿಮೆಯಲ್ಲಿ ಊರಿನ ಅನೇಕರು ಬಂದು ನಮ್ಮರಾಗಿ ಹೊಲದಲ್ಲಿ ಕೊಯ್ದು ಹರವಿದ್ದನ್ನು ಮೆದೆ ಕಟ್ತಾಇದ್ರು. ಈ ಕೆಲಸ ಮಾಡುವಾಗ ನಾವು ಟೀ ಕಾಯಿಸಿಕೊಂಡು ಮನೆಜನವೆಲ್ಲ ಕಂತೆ ಕಟ್ಟುವುದು ಆಗುವವರೆಗೆ ಸರಿರಾತ್ರಿಯವರೆಗೆ ಹೊಲದಲ್ಲೇ ಇರ್ತಾ ಇದ್ವಿ.

ನಮ್ಮ ಹೊಲದ ಬದುವಿನಲ್ಲಿ ಸಾಲು ಬೇವಿನ ಮರಗಳಿದ್ವು ಕೆಳಗೊಂದು ಹುತ್ತ ,ರಾತ್ರಿ ಹನ್ನೆರಡು ಸುಮಾರು. ಬಲ್ಲೂಕವೊಂದು ಎರಡು ಮರಿಗಳ ಜೊತೆ ಬಂದು ರೊಚ್ಚಿಗೆದ್ದು ಹುತ್ತ ಬಗೀತಿದೆ. ದೊಡ್ಡಪ್ಪ ಹೇಳ್ತಿದ್ರು ಯಾರು ಬೆಂಕಿ ಹಾಕಿ ವರ್ಲುಬ್ಯಾಡ್ರಿ ಮರಿಕಲ್ಡಿ ತಿರುಗ್ಬಿದ್ರೆ ಒಬ್ಬೊಬ್ರುನ್ನು ಅಗುದ್ಬಿಡುತ್ತೆ ಅಂಥಾ ರೋಷ ಅವಕ್ಕೆ. ತನ್ಮಯರಾಗಿ ಬೆಳ್ದಿಂಗ್ಲಲ್ಲಿ ನೋಡ್ತಾ ಇದೀವಿ ಹುತ್ತವನ್ನು ನೆಲಸಮ ಮಾಡಿ ಕುಂತು ಏನೋ ತಿಂದು ಹೋಯ್ತು.

ಆಮೇಲೆ ಮೆದೆ ಕಟ್ತಿದ್ದವರೆಲ್ಲ ಹೇಳುದ್ರು. ಬಲ್ಲೂಕಗಳಿಗೆ ಈ ತಾಯೀಸ್ಲು ಹುಳ ಅಂದ್ರೆ ಪ್ರಾಣ ಅಂತೆ. ಎಲ್ಲಿ ಹುತ್ತ ಕಂಡ್ರು ಬಗ್ದು ತಿಂದೇ ಹೋಗೋದು ಅಂತ.ನಮ್ಮ ಭಾಗದಲ್ಲಿ ಕರಡಿ ಕತ್ಕಿರ್ಬಗಳ ಹಾವಳಿ ಹೆಚ್ಚು. ವರ್ಷವೆಲ್ಲ ಕಿರ್ಬ ದನ ಕರು ಕುರಿ ಮೇಕೆ ಗಿಡಕ್ಕೆ ಮೇವಿಗೋದಾಗ ಹಿಡಿದು ತಿಂದ ವರ್ತಮಾನ ಇರ್ತಿದ್ವು.

ಬಲ್ಲೂಕಗಳನ್ನು ಗಾಬರಿ ಎಬ್ಬಿಸಿ ಸತ್ತವರೆಷ್ಟೋ? ಹಲಸಿನ ಹಣ್ಣಿನ ಕಾಲ ಬಂತೆಂದರೆ ಇರುಳಿನಲ್ಲಿ ಹೊಲಕ್ಕೆ ರಾತ್ರಿ ನೀರು ಕಟ್ಟಲು ಹೋದವರು ಬಲ್ಲೂಕಗಳ ದಾಳಿಯಿಂದ ಘೋರವಾಗಿ ನರಳಿದ್ದಂತು ವಿಪರೀತ.

ದೊಡ್ಡಪ್ಪ ಯಾವಾಗಲೂ ಹೇಳೋರು
ಆಗ ಮೂಗನ ಕೈಲಿ
ಆರಿಲ್ಲ ಗುದಲಿಲ್ಲ
ನೀರ ತರುವುದಕೆ ಕೊಡನಿಲ್ಲ
ಈ ಕೋಟೆ ಯಾರು ಕಟ್ಟಿದರಯ್ಯ ಸರ್ವಜ್ಞ.

ಹೀಗೆ ಗೆದ್ದಲು ಹುಳುಗಳು ಕಟ್ಟಿದ ಹುತ್ತ ಕೋಟೆ ಕೂನಿಂಗ ಬೋವಿಯ ಬದುಕಿಗೆ ಆಧಾರ. ಬದುಕನ್ನು ಉಳಿಸಿಕೊಳ್ಳಲು ಕೂನಿಂಗಜ್ಜ ಹುತ್ತ ಬಗೆದು ತಾಯಿಸ್ಲು ಹಿಡಿದು ಊರೂರಲ್ಲೂ ಮಾರುವುದು ಅನಿವಾರ್ಯವಾಗಿತ್ತು.

ದುಡ್ಡಿನ ಜನ ಕೆಲವೊಮ್ಮೆ ಮುಂಗಡವು ಹಣ ಕೊಟ್ಟು ಹೆಚ್ಚು ತಾಯಿಸ್ಲು ತಂದು ಕೊಡಲು ಹೇಳೋರು. ಕೂನಿಂಗ ಬೋವಿಯಂತು ದಿನವಿಡೀ ಹುತ್ತಗಳಿಗೆ ಬೆವರು ಬಸಿಯುವುದೇ ಆಗ್ತಿತ್ತು. ವಿಶ್ರಾಂತಿಗೆಂದು ಒಮ್ಮೆಯಾದರೂ ಹುತ್ತ ಬಿಟ್ಟು ಮನೆಯಲ್ಲಿ ಉಳಿದದ್ದೆ ಇಲ್ಲ. ಬದುಕು ಎಷ್ಟೆಲ್ಲಾ ಶ್ರಮಗಳ ಜೊತೆ ರಾಜಿ ಮಾಡಿಕೊಂಡು ಚಲಿಸುತ್ತಿರುತ್ತದೆ.

ನಮಗೆ ಮುಂಗಾರು ಮಳೆಗಳು ಹುಟ್ಟಿದವೆಂದರೆ ಬಲು ಹಿಗ್ಗು. ಒಂದೆರಡು ಮಳೆ ಸುರಿದರೆ ಮನೆಯಲ್ಲಿ ಹಿರಿಯರು ಒಣಗಿದ ತೆಂಗಿನ ಗರಿಗಳನ್ನು ತಂದು ಸುತ್ತಿ ಸೂಡ್ಗೆ ಮಾಡೊರು. ಇರುಳಲ್ಲಿ ಮಳೆ ಸುರಿದು ನಿಂತ ಮೇಲೆ ನಾವೆಲ್ಲಾ ಲಘುಬಗೆಯಿಂದ ಮನೆಯ ಪಕ್ಕವೇ ಇದ್ದ ಹೊಲಗಳಿಗೆ ಕಂದೀಲು ಸೂಡ್ಗೆ ತಗೊಂಡು ಹೋಗ್ತಾ ಇದ್ವಿ.

ಹೊಲದ ನಡುವಲ್ಲಿ ಮಂದ್ಲಿಕೆ ರಗ್ಗು ಹಾಸಿ ಸೂಡ್ಗೆ ಹಚ್ಚಿರೆ ಬೆಳಕಿಗೆ ರಾಶಿ ರಾಶಿ ಈಸ್ಲುಳ ಹಾರಿ ಬಂದು ಮಂದ್ಲಿಕೆ ರಗ್ಗಿನ ಮೇಲೆ ಬಿದ್ದಿರೊವು. ಬಿದ್ದ ಕೂಡಲೆ ಗುಡಿಸಿ ಗುಡಿಸಿ ಕೈಚೀಲಗಳಿಗೆ ತುಂಬಿ ಕೊಳ್ತಿದ್ವಿ. ಹೆಚ್ಚು ಕಡಿಮೆ ಐದಾರು ಸೇರು ಈಸ್ಲು ಸಿಗುವವರೆಗೂ ನಾವು ಮನೆಗೆ ಬರ್ತಾ ಇರ್ಲಿಲ್ಲ. ಊರಿನ ಎಲ್ಲಾ ಮನೆಗಳ ಜನರು ಲೈಟು ಕಂಬಗಳ ಕೆಳಗೆ ಹೊಲಗಳಲ್ಲಿ ಇದೇ ಕೆಲಸ ಮಾಡ್ತಾ ಇದ್ರು.

ಮುಂಗಾರು ಮುಗಿಯುವತನಕ ಈಸ್ಲು ಸುಗ್ಗಿ ನಮಗೆ. ಗುಡಿಸಿ ತಂದ ಈಸ್ಸು ಹುಳಗಳ ರೆಕ್ಕೆ ಉದುರಿದ ಮೇಲೆ ಎಲ್ಲವನ್ನೂ ಹದವಾಗಿ ಹುರಿದು ಉರ್ಗಡ್ಲೆಯನ್ನು ಬೆಚ್ಚಗೆ ಮಾಡಿ ಹುಳಗಳ ಜೊತೆ ಬೆರಸಿ ಮನೆಮಂದಿಯೆಲ್ಲಾ ಮಧ್ಯಾಹ್ನ ಮತ್ತು ಸಂಜೆ ಟೀ ಸಮಯದಲ್ಲಿ ಒಂದೊಂದು ಹಿಡಿ ತಿಂತಾಇದ್ವಿ. ನಾವಂತೂ ಶಾಲೆಗೆ ಒಂದು ಡಬ್ಬಿಯಲ್ಲಿ ತುಂಬಿಟ್ಟುಕೊಂಡು ಹೋಗ್ತಿದ್ವಿ. ಸಿಂಕುಳ್ಳಿಯಂತೆ ಹುರಿದ ಈಸ್ಲು ತಿನ್ನುವುದು ಬಲು ಚೆಂದ.

ಕಮ್ಮಗೆ ತುಪ್ಪ ಕುಡಿದಂತೆ ಬಲು ರುಚಿ. ಊರಿನ ಮನೆ ಮನೆಯ ಕೋಡೊಲೆ ಮೇಲೆ ಹರಿಡಿರೋರು. ಬೆಚ್ಚಿಗಿರುವಾಗಲೇ ತಿನ್ನುವುದಂತು ಇನ್ನೂ ಸವಿ. ನಮ್ಮ ಹಳ್ಳಿಗಳಲ್ಲಿ ಹೀಗೆ ವಿಶೇಷ ಆಹಾರ ಪದ್ಧತಿಯ ಜೊತೆ ಬೆಸೆದುಕೊಂಡು ಸೋಜಿಗವಾಗುವಂತೆ ಬದುಕಿಬಿಡಲು ಸಾಧ್ಯವಾಗುತ್ತದೆ.

ನಾವು ಸಣ್ಣವರಿದ್ದಾಗ ಊರಿನ ಮಕ್ಕಳೆಲ್ಲಾ ಈಸ್ಲು ಬೀಳು ಅಂತಾ ಇತ್ತು. ಅಲ್ಲಿಗೆ ಹೋಗ್ತಾ ಇದ್ವಿ. ಈಸ್ಲು ಗೆಡ್ಡೆ ಹೊಯ್ಯದು ಅಂದ್ರೆ ನಮಗೆಲ್ಲಾ ಜಾತ್ರೆಯಿದ್ದಂತೆ. ಗೆಡ್ಡೆಗೆ ಹಾನಿಯಾಗದಂತೆ ಬಗೆದು ಬಿಡಿಸುವುದರಲ್ಲಿ ಪಳಗಿದ ಬೂತಣ್ಣ ಅಂತ ಒಬ್ಬನಿದ್ದ ಅವ ಈಸ್ಲು ಗಿಡವನ್ನು ಮೊದಲು ಕತ್ತರಿಸಿ ಬುಡದಿಂದ ನಿಧಾನಕ್ಕೆ ಗೆಡ್ಡೆ ತೆಗೆಯಲು ಶುರು ಮಾಡಿದರೆ ಅರ್ಧ ದಿನ ಆಗ್ತಾಇತ್ತು.

ನಾವು ಸುತ್ತ ಕುಳಿತು ಬೇರು ಮಣ್ಣು ಅಗೆಯೋ ಕೆಲಸ ಮಾಡ್ತಾ ಇದ್ವಿ. ಎಷ್ಟೋ ಹೊತ್ತಿನ ಮೇಲೆ ಬಿಳಿಯ ಎಳೆಯದಾದ ಗಿಣ್ಣದ ದಿಂಡು ಸಿಗೋದು. ಅದನ್ನು ತೆಗೆದ ಮೇಲೆ ಎಲ್ಲರಿಗೂ ಸಮನಾಗಿ ಕತ್ತರಿಸಿ ಹಂಚಿ ತಿಂತಿದ್ವಿ. ಈಚಲು ಗಿಣ್ಣಿನ ಸವಿಯಂತೂ ಅಪೂರ್ವದ್ದು.

ಕೂನಿಂಗ ಬೋವಿಯ ತಾಯಿ ಈಸ್ಲು ಹಿಡಿಯುವ ಪಯಣದಿಂದ ಈಸ್ಲು ಗೆಡ್ಡೆ ಅಗಿಯುವವರೆಗಿನ ಎಲ್ಲವೂ ಸಹಜವಾದ ಅನುಭವ ಕೊಟ್ಟಿವೆ.

October 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. ಚೈತ್ರಶ್ರೀ R ನಾಯಕ

    ನೀವು ನೋಡಿದ “ತಾಯಿಸ್ಲು ” ನಾನು ಹುಟ್ಟಿ ನೋಡುವಷ್ಟರಲ್ಲಿ ಕಣ್ಮರೆಯಾಯಿತು. ಕೂ ನಿಂಗ ಭೋವಿ ತಾತ ಕೂಡ. ಆ ತಾಯಿಸ್ಲ್ ನ್ನು ನೋಡಿದಷ್ಟೇ ಅನುಭವವಾಯಿತು ಈ ನಿಮ್ಮ ಅಂಕಣದಿಂದ ಈಸಲು ಹುಳಗಳನ್ನು ಚಿನ್ಕುಳ್ಳಿ ಯ ಹಾಗೆ ಒಲೆಯ ಮೇಲೆ ಒಣಗಿಸಿ ಕಡಲೆ ಬೆರೆಸಿ ಬೊಗಸೆಯಲ್ಲಿ ಅಜ್ಜಿ ಕೊಡಲು ಕೂಗಿದಾಗ ನಾನು ಬಂದು ನಿಲ್ಲುತ್ತಿದ್ದೆ. ಆದರೆ ಮೊದಲು ಕೊಡುತ್ತಿದ್ದು ಅಣ್ಣನಿಗೆ ಮಾತ್ರ. ಲಿಂಗ ಅಸಮಾನತೆ ಇಂದಿಗೂ ನಮ್ಮ ಹಳ್ಳಿಯಲ್ಲಿದೆ.

    ಪ್ರತಿಕ್ರಿಯೆ
  2. Kavishree

    ಚೆನ್ನಾಗಿದೆ. ಹಾಗೆ ರಾಮಲಿಕಗಾಪುರದ ಈರಣ್ಣ ತೊಗರಿ ಕಾಯಿ ಕಾಲದಲ್ಲಿ ಕೆರೆಯಲ್ಲಿ ಏಡಿ ಕಾಯಿ ಹಿಡಿದು ನೂರು ರೂಪಾಯಿಗೆ ಒಂದು ಬಿಂದಿಗೆ ತಂದು ಕೊಡುತ್ತಿದ್ದರು ಅದು ನೆನಪಾಯಿತು ಅದರ ರುಚಿ ಈಗ ತಿಂದಹಾಗೆ ಇದೆ.

    ಪ್ರತಿಕ್ರಿಯೆ
  3. Vasudha C.Rai

    Nanu hutti belladadu udupi adru nanu besige raje (summer holidays)alli nanna doddammana maney Hebri ge hogta iddey,nimma Lekane vodi nanage Nanna balyada nenapu kanna yeduru banthu. Nanage Nanna balyada dina gallanu nenapisidi akke tumba thanks Nimma Haley nenapannu swalpanu adambara illaddey ,iddadannu idea hagey varnisidirra. Idu nanage tumba ista aythu.

    ಪ್ರತಿಕ್ರಿಯೆ
  4. T S SHRAVANA KUMARI

    ಬೇರೆಯದೇ ಲೋಕದ ಪರಿಚತ. ಆಸಕ್ತಿದಾಯಕವಾಗಿದೆ.

    ಪ್ರತಿಕ್ರಿಯೆ
  5. ಕಾವ್ಯ

    ನಮಗೆ ಪರಿಚವೇ ಇರದ ಹುಳುಗಳ ಪ್ರಪಂಚ ಅನಾವರಣ ಮಾಡಿದಕ್ಕೆ ಧನ್ಯವಾದಗಳು.ನಾವಂತೂ ಎಂದು ತಾಯೀಸ್ಲ್ ಹುಳುಗಳನ್ನು ನೋಡಿದವರೇ ಅಲ್ಲ.ಇನ್ನು ಈಚಲು ಹುಳುಗಳನ್ನು ಹುರಿದು ತಿನ್ನುದಿದ್ದರ ಬಗ್ಗೆ ನಮ್ಮ ಅಪ್ಪ ಹೇಳುತ್ತಿದ್ದರು. ಈಗಿನ ವಿಧ ವಿಧವಾದ ಸ್ನಾಕ್ಸ್ ಗಳ ಮುಂದೆ ಆಗಿನ ಟೀ ಟೈಮ್ ಸ್ನ್ಯಾಕ್ಸ್ ಈಚಲು ಹುಳುಗಳ ಚಿನಕುರುಳಿಯಂತೂ ಮಾಯವಾಗಿದೆ .ಇನ್ನು ತಾರತಮ್ಯಆಗಲು ಎಚ್ಚಿತ್ತು ಈಗಲೂ ಇದೆ .

    ಪ್ರತಿಕ್ರಿಯೆ
  6. Vishwas

    ಈಚಲು ಗಿಣ್ಣಿನ ಬಗ್ಗೆ ಅಕ್ಕ ಬರೆದಿರುವ ಪರಿಯನ್ನು ಕಂಡರೆ, ಸ್ವತಃ ನಾನೇ ಅದರ ರುಚಿ ಸವಿಯುತ್ತಿರುವಂತೆನಿಸಿತು ನನಗೆ.

    ಕೂನಿಂಗ ಬೋವಿಯವರ ಬದುಕಿಗಾಧಾರ, ತಾಯೀಸ್ಲು ಹುಳುಗಳಿಗಾಸರೆ, ಬಲ್ಲೂಕಗಳು ಬಗೆದದ್ದು, ಜನರಿಗೆ ಮನೆಗಳಾಗಿ ಆಶ್ರಯಿಸಿದ್ದು – “ಮಣ್ಣು”.

    ಅಕ್ಕನ ಲೇಖನ ಓದುತ್ತಾ ನನಗೆ ತಿಳಿದದ್ದೇನೆಂದರೆ, ಮಣ್ಣು ಎಂಬ ಹೊನ್ನು ಆಭರಣವಾಗಿ ಧರಿಸುವ ಶ್ರೀಮಂತಿಕೆ ಎಲ್ಲರಿಗೂ ದಕ್ಕದು. ಅದು, ಅಕ್ಕನಂತಹ ಉದಾರ ಮನಸ್ಸಿರೋರಿಗೆ ಮಾತ್ರ ಸಲ್ಲುವ ಸನ್ಮಾನವೇ ಎನ್ನಬಹುದು,‌ಕಾರಣ ೨೪ ವರ್ಷಗಳಿಂದ ಮೈದಾನದ, ಕ್ರೀಡಾಂಗಣಗಳ ಹೊರತಾಗಿ ಇನ್ನೆಲ್ಲೂ ಮಣ್ಣ ಕಾಣದ ದುರಾದೃಷ್ಟ ನನ್ನದು.

    ಹುಟ್ಟಿನಿಂದ ವಿಧಿವಶವಾಗುವವರೆಗೂ ಆಸರೆಯಾಗುವ ಪೋಷಕ, ಮಣ್ಣು ಮಾತ್ರ. ಮನುಕುಲದ ಜೊತೆಗಿನ ಮಣ್ಣಿನ ಬೆಸುಗೆಗೆ ಬಿರುಕು, ಬೇರ್ಪಡಿಸುವಿಕೆಗಳೆಂಬುದು ಅಸಾಧ್ಯ. ಅಕ್ಕ ಬರೆದಿರುವಂತೆ, ದೇವರುಗಳೇ ಮಣ್ಣಿನಲ್ಲಿ ಹುಟ್ಟಿ, ಮರು ಮಣ್ಣನ್ನೇ ಸೇರುವಾಗ‌, ಮನುಷ್ಯರಿಗೆ ಬೇರೊಂದು ಮಾರ್ಗವಿದೆಯೇ!!? ಪವಿತ್ರ ಬಂಧವದು.

    “ತಾಯೀಸ್ಲು‌ ನಮ್ಮನ್ನು ಸೇರಿ,ಭೇದ ಮಣ್ಣನ್ನು ಸೇರಬೇಕು”‌:
    ಬಲ‌ ಕೊಡುವ ಅವುಗಳಿಗೇ ಲಿಂಗ ಭೇದವಿಲ್ಲದಿರುವಾಗ ಅದನ್ನು ಸೇವಿಸುವ ನಮಗೇಕೆ‌!??.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: