ಡೇವಿಡ್ ಮತ್ತು‌ ದಿಶಾ ಎಂಬೆರೆಡು ಮರಗಳು …

ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ‘ಟೈಪಿಸ್ಟ್ ತಿರಸ್ಕರಿಸಿದ ಕಥೆ’ಯನ್ನು ‘ಬಹುರೂಪಿ’ ಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ‘ವಿಜಯ ಕರ್ನಾಟಕ’ದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ

ಪ್ರತಿ ಬುಧವಾರದ ‘ಮಾವಲಿ ರಿಟರ್ನ್ಸ್’ನಲ್ಲಿ ಅವರುಂಟು ನೀವುಂಟು.

” ಮನುಷ್ಯರಂತೆ ಮರಗಳೂ ಪ್ರೀತಿಸುತ್ತವೆ ” ಎಂದು ಎದುರಿಗೆ ಕೂತಿದ್ದ ವ್ಯಕ್ತಿ ಹೇಳಿದ. ನನ್ನನ್ನುದ್ದೇಶಿಸಿ ಆ ಮಾತು ಹೇಳಿದನೋ ಅಥವಾ ಅವನಷ್ಟಕ್ಕೆ ಅವನು ಹೇಳಿಕೊಂಡನೋ ಸ್ಪಷ್ಟವಾಗಲಿಲ್ಲ. ಸಮಾರು ಅರ್ಧ ತಾಸಿನಿಂದ ಯಾವ ನಿಲುಗಡೆಯೂ ಇಲ್ಲದೆ ರೈಲು ವೇಗವಾಗಿ ಚಲಿಸುತ್ತಿತ್ತು.

ಕಿಟಕಿಯ ಪಕ್ಕದ ಸೀಟುಗಳಲ್ಲಿ ಎದುರುಬದರು ಕೂತಿದ್ದ ನಾವಿಬ್ಬರೂ ಆ ಪ್ರಯಾಣದಲ್ಲಿ ಇನ್ನೂ ಪರಿಚಿತರೇನೂ ಆಗಿರಲಿಲ್ಲ. ಸಾಮಾನ್ಯವಾಗಿ ರೈಲು ಪ್ರಯಾಣಕ್ಕೆಂದು ಸಣ್ಣದೊಂದು ಪುಸ್ತಕವನ್ನಾದರೂ ಜೊತೆಯಲ್ಲಿ ಕೊಂಡೊಯ್ಯುವ ನಾನು ಅದೇನು ಅವಸರವಿತ್ತೋ ಆ ದಿನ ಒಯ್ದಿರಲಿಲ್ಲ. 

ಸುಮಾರು ಹತ್ತು ನಿಮಿಷಗಳ ಕಾಲ ಕಿಟಕಿಯಾಚೆ ಕಾಣುತ್ತಿದ್ದ ಮರಗಿಡಗಳನ್ನು ಉತ್ಸಾಹಭರಿತನಾಗಿ ನೋಡಿದವ, ನಗುನಗುತ್ತ ನನ್ನತ್ತ ತಿರುಗಿ,”ಮನುಷ್ಯರಂತೆ ಮರಗಳೂ ಪ್ರೀತಿಸುತ್ತವೆ ಗೊತ್ತಾ ? ” ಎಂದ. ಬಹುಶಃ ಸುಮ್ಮನೆ ರಾಂಡಮ್ ಆಗಿ ‘ಹೌದು’ ಎಂದು ಹೇಳಿ ಅವನ ಮಾತನ್ನು ನಾನೂ ಪುರಸ್ಕರಿಸಿಬಿಡುತ್ತೇನೆ ಎಂಬುದು ಅವನ ಅಂದಾಜಾಗಿತ್ತೇನೊ.

ಆದರೆ ನಾನು ‘ ರೈಲಿನ ಕಿಟಕಿಯಿಂದ ನೋಡಿದಾಗ ನಿಮಗೆ ಹಾಗನ್ನಿಸಿರಬಹುದು ಅಷ್ಟೆ’ ಎಂದೆ. ಅದಕ್ಕವನು ತನ್ನ ಕೈಯಲ್ಲಿದ್ದ ಪುಸ್ತಕವನ್ನು ಎತ್ತಿ ಹಿಡಿದು ‘ಬೇಕಾದರೆ ಇದರಲ್ಲಿರುವ ಈ  ಕಥೆಯನ್ನು ಓದಿ ನೋಡಿ’ ಎಂದ. ಎಲ್ಲಿ ಅವನೇ ಕಥೆ ಹೇಳಲಾರಂಭಿಸಿಬಿಡುತ್ತಾನೋ ಎಂಬ ದಿಗಿಲಿನಿಂದ ನಾನೇ ಪುಸ್ತಕ ಪಡೆದ ಕಥೆಯನ್ನು ಓದ ತೊಡಗಿದೆ .

ಡೇವಿಡ್ ಮತ್ತು ದಿಶಾರ ಮನೆಗಳ ಮಧ್ಯೆ ಯಾವುದೇ ಕಾಂಪೌಂಡ್  ಇರಲಿಲ್ಲ. ಹಳ್ಳಿಗಳಲ್ಲಿ ಇಂಥ ಕಾಂಪೌಂಡ್ ಗಳ ಅವಶ್ಯಕತೆಯೂ ಬರುವುದಿಲ್ಲ ಎಂಬ ಕಾಲವೊಂದಿತ್ತು. ತಮ್ಮ ಮನೆಯ ಹಿತ್ತಲುಗಳಲ್ಲಿ ,ಹಜಾರಗಳಲ್ಲಿ ಪಕ್ಕದ‌ ಮನೆಯವರಿಗೂ ಪಾಲಿರುತ್ತಿತ್ತು. ಇಂಥದ್ದೇ ದಿನಗಳಲ್ಲಿ ಈ ಅಪರೂಪದ ಸಂಗತಿ ನಡೆಯಿತು.

ಡೇವಿಡ್ ನ ಮನೆಯ ಹಿತ್ತಲಲ್ಲಿದ್ದ ಗಿಡವೊಂದು ದಿಶಾಳ ಮನೆಯ ಹಿತ್ತಲಲ್ಲಿದ್ದ ಗಿಡವೊಂದನ್ನು ಪ್ರೀತಿಸಿತು. ಕೆಲವು ಗಜಗಳ ಅಂತರದಲ್ಲಿದ್ದ ಈ ಮರಗಳ ನಡುವೆ ಪ್ರೀತಿ ಹುಟ್ಟಲು ಕಾರಣವಾದ ಘಟನೆಯೂ ಸ್ವಾರಸ್ಯಕರವಾಗಿತ್ತು.

ಆ ದಿನ ಎಂದಿಗಿಂತ ದುಪ್ಪಟ್ಟು ಬಿರುಸಾಗಿ ಬೀಸಿದ ಗಾಳಿಯ ಕಾರಣದಿಂದ ಡೇವಿಡ್ ನ ಹಿತ್ತಲಿನ ಮರದಿಂದ ಕಳಚಿಕೊಂಡ ಹೂವೊಂದು ದಿಶಾಳ ಮನೆಯ ಹಿತ್ತಲಿನ ಮರವೊಂದರ ಮೇಲೆ ಬಿತ್ತು. ಇದನ್ನು ಈ ಲೋಕದಲ್ಲಿ ಯಾರೂ ಗಮನಿಸಿರಲಿಕ್ಕಿಲ್ಲ. ಒಂದು ವೇಳೆ ಯಾರೇ ನೋಡಿದ್ದರೂ ಅದನ್ನೊಂದು ಮಾಮೂಲಿ ವಿಚಾರವಾಗಿ ಪರಿಗಣಿಸುತ್ತಿದ್ದರಷ್ಟೆ. ಆದರೆ ಆ ಎರಡು ಮರಗಳ ಲೋಕದಲ್ಲಿ ಇದು ಮಹತ್ವದ ಬಂಧವೊಂದಕ್ಕೆ ನಾಂದಿಯಾಯಿತು.

ಒಂದೆರೆಡು ದಿನಗಳ ನಂತರ ವಿರುದ್ಧ ದಿಕ್ಕಿನಲ್ಲಿ ಬೀಸಿದ ಗಾಳಿಯಲ್ಲಿ ಆ ಹೂವು ಹಿಂತಿರುಗಿ ಬಂದು ಆ ಮರವನ್ನು ಸೇರಿತ್ತು. ಹೂವು ಸೊರಗಿತ್ತು. ಇದನ್ನು ಕಂಡ ಆ ಮರಕ್ಕೆ ಬೇಸರವಾಯಿತು,ಪಕ್ಕದ ಮನೆಯ ಮರಕ್ಕೆ ಒಂದು ಪತ್ರ ಬರೆಯಿತು.‌

‘ ಡಿಯರ್ ಫೆಲೋ ಟ್ರೀ, ಗಾಳಿಗೆ ಸಿಕ್ಕು ಎಲೆಗಳೂ, ಹೂವುಗಳೂ ಉದುರುವುದು, ಹಾರಿ ಹೋಗುವುದು ಸಹಜ. ಹಾಗೆಂದ ಮಾತ್ರಕ್ಕೆ ನಾನು ಕಳಿಸಿದ ಹೂವೊಂದನ್ನು ನೀನು ಇಷ್ಟೊಂದು ಬೇಜವಬ್ದಾರಿಯಿಂದ ನೋಡಿಕೊಳ್ಳದೆ ಕಾಳಜಿ ತೋರಬಹುದಿತ್ತಲ್ಲವೆ ? ಗಾಳಿಯಲ್ಲಿ ಎಲ್ಲಾದರೂ ಹಾರಿ ಹೋಗಬಹುದಾಗಿದ್ದ ಆ ಹೂವನ್ನು ನಿನ್ನಲ್ಲಿಗೇ ಏಕೆ ಕಳುಹಿಸಿದ್ದೇನೆ ಹೇಳು ನೋಡೋಣ ? I love you . Will you return my love ? ‘ ಎಂದು ಬರೆದ ಪ್ರೇಮ ಪ್ರಪೋಸಲ್ ನ ಪತ್ರವನ್ನು ಅದೇ ಹೂವಿನ ಸಮೇತ ಎಲೆಯೊಂದರಲ್ಲಿಟ್ಟು‌ ಸುರಕ್ಷಿತವಾಗಿ ಅದನ್ನು ಮತ್ತೊಂದು ಹಿತ್ತಲಿನ ಮರಕ್ಕೆ ತಲುಪಿಸಿತು.

ಪತ್ರ ಓದಿದ ಇನ್ನೊಂದು ಮರದಲ್ಲಾದ ಪುಳಕವನ್ನು ಯಾರಿಗಾದರೂ ಅರ್ಥೈಸಲು ಸಾಧ್ಯವೆ ? ಪತ್ರ ಓದಿದ ತರುವಾಯ ಪಕ್ಕದ ಹಿತ್ತಲಲ್ಲಿದ್ದ ಮರವನ್ನೊಮ್ಮೆ ತುಂಟನಗೆಯೊಂದಿಗೆ ಇಣುಕಿ ನೋಡಿತು. ಕಳ್ಳನೋಟದೊಂದಿಗೆ ಇತ್ತಲೇ ತಿರುಗಿ ನಿಂತಿದ್ದ ಆ ಮರವೂ ಈ ನೋಟವನ್ನು ತಪ್ಪಿಸಿಕೊಳ್ಳಲು ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಬದಲಿಗೆ ತನ್ನ ಈ ಪ್ರಪೋಸ್ ಸಕ್ಸೆಸ್ ಆಗುವುದೋ ಇಲ್ಲವೋ ಎಂಬ ಚಿಂತೆಯಲ್ಲಿ ಕಾದು ನಿಂತಿತ್ತು. ಅದರ ನಿರೀಕ್ಷೆಯಂತೆ ಪಕ್ಕದ ಮನೆಯ ಹಿತ್ತಲಿನ ಮರದಿಂದ ಪತ್ರವೂ ಬಂತು. 

” ಡಿಯರ್ ಫೆಲೋ ಟ್ರೀ,  I am really sorry. ನೀನು ಕಳುಹಿಸಿದ ಪ್ರೇಮದೂತನನ್ನು ಗುರುತಿಸದೇ ಹೋದದ್ದಕ್ಕೆ ನನ್ನನ್ನು ಕ್ಷಮಿಸು. ನೀನು I love you ಎಂದದ್ದನ್ನು ಕಂಡು ನನಗೂ ಬಹಳ ಖುಷಿಯಾಯಿತು. ಎಷ್ಟು ವರ್ಷಗಳಿಂದ ಅಕ್ಕಪಕ್ಕದಲ್ಲೇ ಬೆಳೆಯುತ್ತಿರುವ ನಾವು ಒಮ್ಮೆಯೂ ಮಾತಾಡಿರಲಿಲ್ಲ.‌ ಈಗ ನಿನ್ನ ಪ್ರೇಮ ನಿವೇದನೆಯನ್ನು ಒಪ್ಪಿಕೊಳ್ಳುವ ಮೂಲಕ ನಮ್ಮ ಜೀವನದಲ್ಲಿ ಏನಾದರೂ ಬದಲಾವಣೆಗಳಾಗಿತ್ತವೆಯಾ ಎಂಬುದೂ ನನಗೆ ತಿಳಿದಿಲ್ಲ.‌

Will you return my love ? ಎಂದು ನೀನು ಕೇಳಿದ್ದೀಯ ಅಲ್ಲವೆ ? ಅದಕ್ಕೆ ಹೇಗೆ ಉತ್ತರಿಸಬೇಕೆಂಬುದೂ ನನಗೆ ಗೊತ್ತಿಲ್ಲ. ಆದರೆ I too love you ಎಂಬುದು ಅದಕ್ಕೆ ಉತ್ತರ ಎಂಬುದನ್ನು ನಾನು ಬಲ್ಲೆ. ನಮ್ಮಂತೆಯೇ ರಸ್ತೆಯ ಆ ಕಡೆ ಬೆಳೆದು ನಿಂತಿರುವ ಮರಗಳ ಕೆಳಗೆ ಮನುಷ್ಯರು ಆ ರೀತಿಯ ಮಾತುಗಳನ್ನಾಡುವುದನ್ನು ನಾನು ಅನೇಕ ಬಾರಿ ನೋಡಿದ್ದೇನೆ. ಆ ನೆನಪಿನಿಂದಲೇ ನಿನಗೆ ನಾನು ‘ I too love you ‘ ಎಂದು ಹೇಳುತ್ತೇನೆ.

ಈ ಪತ್ರ ತಲುಪಿದ ಕೂಡಲೆ ನಾವಿಬ್ಬರೂ ಪ್ರೇಮಿಗಳಾಗುತ್ತೇವೆ ಎಂಬ ವಿಷಯ ನೀಡುವ ರೋಮಾಂಚನದಲ್ಲಿ ನಾನಿದ್ದೇನೆ. ನಿನ್ನ ಪಾಲಿನ ಖುಷಿ ನಿನ್ನದು ” ಪ್ರೇಮವನ್ನು ಒಪ್ಪಿಕೊಂಡ ಪತ್ರ ಬರೋದು ಅದನ್ನು ಕಾಯುತ್ತಿರುವವರಿಗೆ ದೊರಕುವ ಆರಂಭಿಕ‌ ಅದೃಷ್ಟವೇ ಸರಿ. ತನ್ನ ಪ್ರೀತಿಯನ್ನು ಪಕ್ಕದ ಹಿತ್ತಲಿನಲ್ಲಿರುವ ಮರ ಒಪ್ಪಿಕೊಂಡಿದೆ ಎಂಬ ಆನಂದದಲ್ಲಿ ತೇಲತೊಡಗಿತ್ತು ಮತ್ತೊಂದು ಮರ. ಅಲ್ಲಿಂದ ಈ ಪತ್ರ ವ್ಯವಹಾರ ದಿನಂಪ್ರತಿ ನಡೆಯತೊಡಗಿತು.

ಒಂದು ಮರ ಮತ್ತೊಂದರ ಬಗ್ಗೆ  ಹೊಗಳಿ, ಕಿಚಾಯಿಸಿ ಬರೆಯೋದು, ಅದನ್ನು ಓದಿದ ಆ ಮರ ಮಾರುತ್ತರ ಬರೆಯೋದು , ಜೋರಾಗಿ ಗಾಳಿ ಬೀಸಿದಾಗ ಪರಸ್ಪರ ವಾಲಿಕೊಂಡು ಇಣುಕಿ ನೋಡೋದು ಅವುಗಳ ದಿನಚರಿಯಾಯಿತು. 

ಹರೆಯಕ್ಕೆ ಬಂದ ಡೇವಿಡ್ ಮತ್ತು ದಿಶಾ ಕೂಡ ಥೇಟ್ ಈ ಮರಗಳಂತೆ ಆಗಿಬಿಡುವ ಸೂಚನೆಗಳು ಕಂಡು ಬಂದವು. ಎರಡೂ ಮನೆಗಳ ಹಿಂಭಾಗದಲ್ಲಿದ್ದ ಸಣ್ಣ ಗಾರ್ಡನ್ ಗಳನ್ನು ಇಬ್ಬರೂ ನೀರೆರೆದು ಬೆಳೆಸುತ್ತಿದ್ದರು.‌ ಗಾರ್ಡನಿಂಗ್ ಕೆಲಸಕ್ಕೆಂದು ಹಿತ್ತಲಿಗೆ ಬಂದಾಗ ಸಾಕಷ್ಟು ಮಾತುಕತೆ ಅವರ ಮಧ್ಯೆ ನಡೆಯುತ್ತಿತ್ತು.

‘ಗಿಡಗಳಿಗೆ ನೀರುಗಳ ಜೊತೆ ಪ್ರೀತಿಯನ್ನು ಬೆರೆಸಿ ಆರೈಕೆ ಮಾಡಬೇಕು ಡೇವಿಡ್ ‘ ಎಂದು ದಿಶಾ ಆಗಾಗ ಹೇಳುತ್ತಿದ್ದರೆ, ‘ಮರಗಳ ಮೇಲೆ ತೋರುವ ಪ್ರೀತಿಯ ಜೊತೆ ಮನುಷ್ಯರ ಮನಸ್ಸಿನಲ್ಲಿರುವ ಪ್ರೀತಿಯನ್ನೂ ಗುರುತಿಸುವುದನ್ನು ನೀನು ಕಲಿ ದಿಶಾ ‘ ಎನ್ನುತ್ತಿದ್ದನು. ಅವಳು ನಗುತ್ತಿದ್ದಳು. ಇವನು ನಗಿಸುತ್ತಿದ್ದ.

ಮೈಮೇಲೆ ನೀರೆರಚುವುದು , ಮಧ್ಯಾಹ್ನ ಊಟವಾದ ಮೇಲೆ ಮನೆಯಲ್ಲಿ ಎಲ್ಲರೂ ಸಣ್ಣದೊಂದು ನಿದ್ದೆ ಮಾಡಿ ವಿಶ್ರಾಂತಿ ಪಡೆಯುತ್ತಿರುವಾಗ ಡೇವಿಡ್ ಮತ್ತು ದಿಶಾ ಎರಡೂ ಹಿತ್ತಲುಗಳಲ್ಲಿ ವಯೋಸಹಜ ಮಾತುಗಳನ್ನಾಡುತ್ತಾ,ಲಲ್ಲೆ ಹೊಡೆಯುತ್ತಿದ್ದರು. ಇವರ ಮಾತುಗಳನ್ನು ಕೇಳುತ್ತಾ ಆ ಮರಗಳ ಜೋಡಿಯೂ ಸ್ಪೂರ್ತಿ ಪಡೆಯುತ್ತಿತ್ತು.

 ಆದರೆ ಈ ಸಂತಸ ಬಹಳ‌ ದಿನಗಳು ಉಳಿಯಲಿಲ್ಲ. ಡೇವಿಡ್ ನೊಂದಿಗೆ ದಿಶಾಳ ಸಲುಗೆಯ ಮಾತುಗಳನ್ನು , ಅವರಿಬ್ಬರ ಚಲನವನಗಳನ್ನೂ ಗಮನಿಸಿದ ದಿಶಾಳ ಅಪ್ಪ ,  ತಮ್ಮ ಮನೆಯ ವರಾಂಡ ಮತ್ತು ಹಿತ್ತಲನ್ನು ಸೇರಿದಂತೆ ಮನೆಯ ಸುತ್ತ ಒಂದು ಕಾಂಪೌಂಡ್ ಕಟ್ಟಲು ನಿರ್ಧರಿಸಿದ. ಅದಕ್ಕಾಗಿ ಎರಡೂ ಮನೆಯವರ ಸ್ವತ್ತಿಗೆ ಕಾನೂನು ರೀತ್ಯ ಸೇರುವ ಜಾಗಗಳನ್ನೂ ಗುರುತಿಸಲಾಯಿತು.

ಇದನ್ನು ಗಮನಿಸಿದ ಆ ಮರಗಳು ಕ್ರಮವಾಗಿ ಡೇವಿಡ್ ಮತ್ತು ದಿಶಾರಿಗೆ ತಮ್ಮ ನಡುವಿನ ಪ್ರೇಮ ಸಂಬಂಧದ ಬಗ್ಗೆ ತಿಳಿಸಿದವು.‌ ಅನಾಯಾಸವಾಗಿ ನಡೆಯುತ್ತಿದ್ದ ನಮ್ಮಗಳ ಸಂಭಾಷಣೆ , ಪತ್ರ ವ್ಯವಹಾರಕ್ಕೆ ಈ ಕಾಂಪೌಂಡ್ ಅಡ್ಡಿಯಾಗುತ್ತದೆ ಹೇಗಾದರೂ ಮಾಡಿ ಇದನ್ನು ನಿರ್ಮಿಸದಂತೆ ತಡೆಯಿರಿ ಎಂದು ವಿನಂತಿಸಿಕೊಂಡವು. ಅದು ಸಾಧ್ಯವಿಲ್ಲ ಎಂಬುದು ಅವರಿಬ್ಬರಿಗೂ ತಿಳಿದಿತ್ತು .

ಹಾಗಾಗಿ ಅವರಿಬ್ಬರೂ ಈ ಬಗ್ಗೆ ಮಾತಾಡಿಕೊಂಡು ಕಾಂಪೌಂಡ್ ನಿರ್ಮಾಣವಾದ ಮೇಲೂ ಆ ಮರಗಳ ಪ್ರೇಮ ವ್ಯವಹಾರಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿ ಕೊಳ್ಳುವುದಾಗಿ ತಂತಮ್ಮ ಹಿತ್ತಲಿನ ಮರಗಳಿಗೆ ಭರವಸೆ ಕೊಟ್ಟರು.

ಕೊಟ್ಟ ಮಾತಿನಂತೆಯೇ ಇಬ್ಬರೂ ನಡೆದುಕೊಂಡರು. ಎರಡೂ ಮರಗಳು ಕೊಡುತ್ತಿದ್ದ ಪ್ರೇಮ ಪತ್ರಗಳನ್ನು , ಹೂವುಗಳನ್ನು , ಹಣ್ಣುಗಳನ್ನು ಅವುಗಳಿಂದ ಪಡೆದು ಅವರಿಬ್ಬರೂ ಮನೆಯವರ ಕಣ್ಣು ತಪ್ಪಿಸಿ ವಿನಿಮಯಿಸಿಕೊಂಡು ಆ ನಂತರ ಮರಗಳಿಗೆ ಅವುಗಳನ್ನು ತಲುಪಿಸುತ್ತಿದ್ದರು.

ಒಂದು ದಿನ ಕುತೂಹಲಕ್ಕೆಂದು ಮರಗಳ ಪ್ರೇಮ ಸಲ್ಲಾಪ ಹೇಗಿರಬಹುದೆಂದು ತಿಳಿಯಲು ಪತ್ರ ಒಡೆದು ಓದಿದ ಡೇವಿಡ್ ಗೆ, ‘ನಿನ್ನೆ ಸಂಜೆ ಮಳೆಯ ಜೊತೆ ಗಾಳಿಯೂ ವಿಪರೀತವಾಗಿ ಬಂತಲ್ಲ. ಆ ಗಾಳಿಯ ರಭಸವನ್ನು ತಾಳುವುದು ನಿನಗೆಷ್ಟು ಕಷ್ಟವಾಗಿರಬಹುದೆಂದು ನೆನೆದು ರಾತ್ರಿಯೆಲ್ಲ ನಿದ್ದೆಯೇ ಬರಲಿಲ್ಲ. ನೀನು ಸ್ವಲ್ಪ ದಷ್ಟಪುಷ್ಟವಾಗಿ ಬೆಳೀಬೇಕು’ ಎಂಬ ಸಾಲುಗಳು ಮನಸ್ಸಿಗೆ ನಾಟಿ ಬಿಟ್ಟವು.

ಅವತ್ತಿನಿಂದ ಎಲ್ಲಾ ಪತ್ರಗಳನ್ನು ಕದ್ದು ಓದ ತೊಡಗಿದ. ದಿಶಾ ಕೂಡ ಈ ಪತ್ರಗಳನ್ನು ಓದಲಾರಂಭಿಸಿದಳು. ದಿಶಾ ಓದಲಾರಂಭಿಸಿದ ನಂತರ ಡೇವಿಡ್ ಮರದ ಹೆಸರಿನಲ್ಲಿ ತಾನೇ ಕೆಲವು ಪತ್ರಗಳನ್ನು ಬರೆದ. ಅವಳೂ ಓದಿಕೊಂಡು ಅವುಗಳಿಗೆ ಉತ್ತರಗಳನ್ನೂ ಬರೆದಳು. ಹೀಗೇ ಮರಗಳ ಪ್ರೀತಿಯ ನೆಪದಲ್ಲಿ ಮನುಷ್ಯರ ಪ್ರೀತಿಯೂ ಚಿಗುರೊಡೆದಿತ್ತು . ಇನ್ನೇನು ಬೆಳೆದು ಹೆಮ್ಮರವಾಗಬೇಕನ್ನುವಷ್ಟರಲ್ಲಿ ಬುಡಕ್ಕೇ ಕೊಡಲಿಯೇಟು ಬಿತ್ತು … 

ದಿಶಾಳ ಮದುವೆ ದೂರದ ಸಂಬಂಧಿಕರೊಬ್ಬರೊಡನೆ ಎಂದು ನಿಶ್ಚಯವಾಯಿತು. ಇನ್ನು ನಾನು ಕಾಂಪೌಂಡಿನ ಆ ಕಡೆ ಪತ್ರ ರವಾನಿಸಲಾರೆ ಎಂದು ತನ್ನ ಹಿತ್ತಲಿನಲ್ಲಿದ್ದ ಪ್ರೇಮಿ ಮರಕ್ಕೆ ಅವಳು ಹೇಳಿದಳು. ಆ ಕಡೆ ಡೇವಿಡ್ ಕೂಡ ತನ್ನ ಅಸಾಹಯಕತೆಯನ್ನ ಮನೆಯ ಹಿಂದಿನ ಮರದ ಬಳಿ ನೋವಿನಿಂದ ಹೇಳಿಕೊಂಡ.

ಪ್ರವಾಹಕ್ಕೆ ಸಿಲುಕಿ ಏನೇನೋ ಬಿದ್ದು ಹೋಗುತ್ತವೆ ಈ ಕಾಂಪೌಂಡ್ ಒಂದು ಮುರಿದು ಬೀಳಬಾರದೆ ? ಎಂದು ಎಷ್ಟೋ ಬಾರಿ ತನ್ನಷ್ಟಕ್ಕೆ ತಾನೇ ಹೇಳಿಕೊಂಡ. ಅಂಥ ಪ್ರವಾಹ ಆ ಊರಿಗಿನ್ನು ಬಂದಂತೆ ಕಾಣುವುದಿಲ್ಲ. 

ಏಕೆಂದರೆ ; ದಿಶಾ ತವರಿಗೆ ಬಂದಾಗ ಹಿತ್ತಲಿನಲ್ಲಿ ಬಂದು ಕಾಯುತ್ತಾಳೆ; ಡೇವಿಡ್ ಬರೆದ ಒಂದೆರೆಡು ಪತ್ರಗಳನ್ನು ಕದ್ದು ತಾನೇ ಇಟ್ಟುಕೊಂಡಿದ್ದಳಲ್ಲ, ಅವುಗಳನ್ನು ಹರಿದು ಹಾಕಲಾಗದೆ ಅವನಿಗೇ ಹಿಂತಿರುಗಿಸೋಣ ಎಂದು. ಕಾಂಪೌಂಡಿನ ಆ ಕಡೆ ಡೇವಿಡ್, ತನ್ನ ಹೆಂಡತಿಯೊಂದಿಗೆ ತರಕಾರಿ ಗಿಡಗಳಿಗೆ ನೀರುಣಿಸುತ್ತಿರುವುದರ ಮಾತುಕತೆ ಸ್ಪಷ್ಟವಾಗಿ ಕೇಳಿಸುತ್ತದೆ.

ತವರಿನಿಂದ ವಾಪಸ್ಸು ಹೊರಡುವಾಗ ಮತ್ತೊಮ್ಮೆ ಹಿತ್ತಲಿಗೆ ಬರುತ್ತಾಳೆ. ಆದರೆ ಡೇವಿಡ್ ನ ಧ್ವನಿ ಅಲ್ಲಿ ಕೇಳಿಸುವುದಿಲ್ಲ. ಪತ್ರಗಳನ್ನು ಹಿಂತಿರುಗಿಸಲಾಗದೆ ತಾನು ಹಿಂದಿರುಗುತ್ತಾಳೆ. ಇದನ್ನೆಲ್ಲ ನೋಡುತ್ತ ಆ ಎರಡು ಮರಗಳೂ ಇವರಿಬ್ಬರಿಗಾಗಿ ಮರುಗುತ್ತವೆ. ವರ್ಷಾನಂತರದಲ್ಲಿ ಎತ್ತರಕ್ಕೆ ಬೆಳೆದ ಮರಗಳ ಪ್ರೇಮಕ್ಕೆ ಆ ಕಾಂಪೌಂಡ್ ಎಂದೂ ಅಡ್ಡಿಯಾಗಿಲ್ಲ. ಅವೀಗ ಡೇವಿಡ್ ಮತ್ತು ದಿಶಾ ಇಲ್ಲದೆಯೂ ಪ್ರೀತಿಸುತ್ತಲೇ ಇವೆ. ಆದರೆ ಕಾಂಪೌಂಡಿಗಿಂತ ಎತ್ತರಕ್ಕೆ ಬೆಳೆಯಲು ಡೇವಿಡ್ ಮತ್ತು ದಿಶಾ ಎಂಬಿಬ್ಬರು ಮನುಷ್ಯರಿಗೆ ಮಾತ್ರ ಸಾಧ್ಯವಾಗಿಲ್ಲ… 

ಕಥೆ ಓದಿ ಮುಗಿಸಿ ಪುಸ್ತಕ ಹಿಂತಿರುಗಿಸಿದ ನಾನು ಇದೆಂಥಾ ಅಸಂಗತ, ಅಪ್ರಸ್ತುತ ಪ್ರಸಂಗವೆಂದು ಯೋಚಿಸುತ್ತಿದ್ದೆ. ಅಷ್ಟರಲ್ಲಿ ಎದುರಿಗಿದ್ದವ.    ‘ಪಾಪ,‌ಡೇವಿಡ್ ಮತ್ತು‌ ದಿಶಾ ರಿಗೆ ಹಾಗಾಗಬಾರದಿತ್ತು‌ ಅಲ್ವೆ ? ‘ ಎಂದ. 

‘ ಹೌದು, ಡೇವಿಡ್ ಮತ್ತು ದಿಶಾ ಎಂಬೆರೆಡು ಮರಗಳು ಮನುಷ್ಯರ ಹಿತ್ತಲುಗಳಲ್ಲಿ ಸ್ವಚ್ಛಂದವಾಗಿ ಬೆಳೆಯಲಾರವು ‘ ಎಂದೆ. 
ಅವನಿಗೆ ನನ್ನ ಮಾತು ಗೊಂದಲವೆನಿಸಿರಬೇಕು. ನಿಂತಿದ್ದ ರೈಲಿನ ಕಿಟಕಿಯಲ್ಲಿ ಚಹಾ ಮಾರಲು ಬಂದ ಹುಡುಗನ ಬಳಿ ಅವನು ಚಹಾ ಕೊಂಡ. ನನ್ನ ತಲೆಯಲ್ಲಿ ಡೇವಿಡ್ ಮತ್ತು ದಿಶಾ ಎಂಬೆರೆಡು ಮರಗಳು ತೂಗುಯ್ಯಾಲೆ ಆಡತೊಡಗಿದವು…

October 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಗೀತಾ ಎನ್ ಸ್ವಾಮಿ

    ಫ್ಯಾಂಟಸಿ ಎನಿಸಿತು…,ಆದರೂ ಅಬ್ಸರ್ಡ್ ಪ್ಲೇ ರೀತಿಯಲ್ಲಿ ಹೊಸ ಹುಡುಕಾಟದ ಒಳನೋಟಗಳಿವೆ ಮಾವಲಿ ಸರ್.

    ಪ್ರತಿಕ್ರಿಯೆ
  2. ಗೀತಾ ಎನ್ ಸ್ವಾಮಿ

    ಮಾವಲಿ ಸರ್ ನನ್ನ ಮಗಳ ಮುಂದೆ ನಿಮ್ಮ ಅಂಕಣ ಓದ್ತಾ ಇದ್ದೆ. ನನ್ನ ಕೂಸು ಹೇಳ್ತು.. ಅಮ್ಮ ಮಾನ್ ಕಥಾ ಚಾಲ ಬಾಗುಂದಂಡಿ ಅಂತ…..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: