ಚಾಂದ್ ಪಾಷ ಎಂಬ ಕವಿಚಂದ್ರನ ಪುಸ್ತಕಕ್ಕೆ ಮಮತಾ ಸಾಗರ ಬರೆದ ಮುನ್ನುಡಿ…

ಮಮತಾ ಸಾಗರ

ಇದೀಗ  ನಾನಿದನ್ನು ಬರೆಯುತ್ತಾ ಕೂತಿರುವಾಗ, ಅಮೇರಿಕಾದಲ್ಲಿ ಟ್ರಮ್ಪ್  ಸೋತಿದ್ದಾನೆ. ಕವಿ ವರವರ ರಾವ್ ಇನ್ನು ಜೈಲಿನಲ್ಲಿದ್ದಾರೆ. ನಾನು ಭಾಗವಹಿಸಿದ ಈಜಿಪ್ಟಿನ ತಂತಾ ಪೊಯೆಟ್ರಿ ಫೆಸ್ಟಿವಲ್ಲಿನ ಈ ವರ್ಷದ ಸಂಚಿಕೆಯಲ್ಲಿ ಕವಿತೆಯನ್ನೋದಿದ ಇಸ್ಲಾಂ ನವ್ವಾರ್ ಹಾಗೂ ಅಮೀನಾ ಅಬ್ದಲ್ಲಾಹ್ ಎಂಬ ಇಬ್ಬರು ಯುವ ಕವಿಗಳು, ತಮ್ಮ ಕವಿತೆಗಳ ಮೂಲಕ ಧರ್ಮದ್ರೋಹವನ್ನು ಎಸಗಿದ್ದಾರೆಂದು ಈಜಿಪ್ಟಿನ ಉಗ್ರ ಬಲಪಂಥೀಯ ಫ್ಯಾಸಿಸ್ಟ್ ಗುಂಪುಗಳು ಬಂದೂಕು ಹಿಡಿದು ಅವರನ್ನು ಹುಡುಕಿಕೊಂಡು ಹೊರಟಿದೆ.

‘ಚಿತ್ರ ಚಿಗುರುವ ಹೊತ್ತು’, ಈ ಹೊತ್ತಿನ ಕವಿತೆಗಳನ್ನೊಳಗೊಂಡ ಸಂಕಲನ. ಮಂಡಿಯೂರಿ ತಲೆಬಾಗಿ ಒಂದಷ್ಟು ಪ್ರೀತಿ ಬಿತ್ತಲು ಹೊರಟ ಕವಿ ಚಾಂದ್ ಪಾಷನ ಈ ಕವಿತೆಗಳನ್ನು ರಾಜಕೀಯ ಪ್ರೇಮಕವಿತೆಗಳೆಂದು ಕರೆಯ ಬಯಸುತ್ತೇನೆ ನಾನು. ಧರ್ಮಾಧರ್ಮದ ರಾಜಕೀಯ ವಹಿವಾಟಿಗೆ ಈ ಕವಿತೆಗಳು ಸ್ಪಂದಿಸುತ್ತವೆ. ಉತ್ತರವಾಗಿ ಕೆಲವೊಮ್ಮೆ, ಪ್ರಶ್ನೆಯಾಗಿ ಕೆಲವೊಮ್ಮೆ. ಗಂಡು-ಹೆಣ್ಣಿನ ಪ್ರೀತಿ ಇಲ್ಲಿ ಕೇವಲ ಪ್ರೀತಿ ಮಾತ್ರವೇ ಅಲ್ಲ. ಅದೊಂದು ಬಯಸಿದ ಸ್ಥಿತಿ. ಸಾಧ್ಯವಾಗಬೇಕಾದ ಸಂಬಂಧ – ‘ಧರ್ಮದಲ್ಲಿ ಹಲಾಲ್ ಆಗದ ಪ್ರೇಮ’.

ಈ ದೇಶದಲ್ಲಿ ವ್ಯಕ್ತಿಗಳ ಹೆಸರು, ಭಾಷೆ ಇತ್ಯಾದಿಗಳು ಅವರ ಜಾತಿ ಧರ್ಮಗಳ ಅಸ್ಮಿತೆಗಳನ್ನು ನಿರ್ದೇಶಿಸುತ್ತಿರುವ ಈ ಸಂದರ್ಭದಲ್ಲಿ ಚಾಂದ್ ತನ್ನ ಕವಿತೆಗಳಲ್ಲಿ ಬಹಳ ನಾಜೂಕಾಗಿ ಇಸ್ಲಾಮಿನ ಉಲ್ಲೇಖಗಳನ್ನು ಬಳಸುವುದರಿಂದ, ನಿರಂತರವಾಗಿ ಅನಾವಶ್ಯಕವಾಗಿ ಪ್ರಶ್ನೆಗೊಳಗಾಗುತ್ತಿರುವ ಮುಸ್ಲಿಂ ಅಸ್ಮಿತೆಯ ಪರ ನಿಂತು ನೋಡಲು ಸಾಧ್ಯವಾಗುವ ದೃಷ್ಟಿಕೋನವೊಂದನ್ನು ಕವಿ ಓದುಗರಿಗೆ ಒದಗಿಸುತ್ತಾನೆ. ದವಾ, ದುವಾ, ಹರಾಮ್, ಕಫನ್, ಹೀಗೆ ಅಲ್ಲಲ್ಲಿ ಇಣುಕುವ ದಿನಬಳಕೆಯ ಪದಗಳು ಹೊಸದೊಂದು ಸೊಗಡನ್ನು ಕವಿತೆಗಳಲ್ಲಿ ತರುತ್ತವೆ.

ಬಲಪಂಥೀಯ ಹಿಂದೂ ಹಾಗು ಇಸ್ಲಾಂ ಫ್ಯಾಸಿಸಮ್ಮಿಗೆ ಸ್ಪಂದಿಸಿದ ಹಲವಾರು ಕವಿತೆಗಳು ಇಲ್ಲಿವೆ. ಒಂದೆಡೆಗೆ ‘ನನ್ನ ಬಿರಿಯಾನಿಯೂ, ನಿನ್ನ ಮೊಸರನ್ನವೂ’ ಕುಲದ ಸಂಕೇತಗಳಾಗಿ ಲವ್ ಜಿಹಾದಿನ ಹಣೆಪಟ್ಟಿಗಳನ್ನೂ ನಿರಾಕರಿಸಿದರೆ, ಮತ್ತೊಂದೆಡೆಗೆ ಈ ದೇಶದಲ್ಲಿ ನಡೆದ ಲಿಂಚಿಂಗುಗಳ ನೆನಪ ಮಾಡಿಸುತ್ತವೆ. ಇಲ್ಲಿ ಬರುವ ಪ್ರೇಯಸಿ ಸದಾ ಮೌನವಾಗಿರುವವಳು. ನೀಲಾಕಾಶದ ನಿಹಾರಿಕೆಗಳ ನಡುವೆ ಅವಳ ಅಳು ಸಿಕ್ಕುತ್ತದೆ. ಮುದ ಮಧುರ ಅನುಭವವಾಗಿ ಲೈಂಗಿಕತೆ ಮೈದಳೆದರೂ, ನೋವಕಳೆ ಕೀಳಲಾಗದ್ದು.

ಸಿಎಎ ಗೆ ಉತ್ತರವಾಗಿ ದಾಖಲು ಬಡೇಸಾಬನ ಅಂಗಡಿಯಲ್ಲಿ ಬಿಟ್ಟ ಹರಕಲು ಬಟ್ಟೆಯಾಗುತ್ತದೆ. ಮಹಾತ್ಮಗಾಂಧಿಯ ಸಾವ ಸಂಭ್ರಮಿಸಿದ ಕೀಳು ಮನಸಿನ ರಾಜಕಾರಣಿಗಳ ಬಗ್ಗೆ, ವಾಟ್ಸಾಪ್ ಯೂನಿವರ್ಸಿಟಿಯ ಟ್ರಾಲಿಂಗುಗಳ ಬಗ್ಗೆ ಕವಿತೆಗಳಲ್ಲಿ ಉಲ್ಲೇಖವಿದೆ. ‘ಕೊಂದ ಗೌರಿಯನು ಹೂಳಲಿಲ್ಲ ನಾವು ಬಿತ್ತಿದ್ದೇವೆ, ನೆಲದ ತುಂಬಾ ಅವಳದೇ ನಗುಮೊಗದ ಹೂವು’ ಅನ್ನುವ ಭರವಸೆಯೂ ಇದೆ.

ಕವಿಚಂದ್ರನ ಕವಿತೆ ಕಟ್ಟುವ ಕಾಯಕವನ್ನು ಗಮನಿಸುತ್ತಾ ಬಂದಿದ್ದೇನೆ. ಕನ್ನಡದ ಅವತರಣಿಕೆಗಳನ್ನು ಸುಂದರವಾಗಿ ಕವಿತೆಯಲ್ಲಿ ಒಳಗೊಳ್ಳುವ ಕುಶಲತೆ ಈ ಕವಿಗಿದೆ. ‘ನಿರ್ಲಜ್ಜೇಶ್ವರನ ನೀಲಾಕಾಶದ ನೀಲಿ ಹೂವು’, ‘ನಕ್ಷತ್ರದ ನೆರಳ ನುಂಗಿದ ಮೀನು ಗಾಳಿಯಲಿ ಹಾರುವ ಕನಸ ಕಂಡಿದೆ’, ‘ಮುಗಿಲ ಚಂದ್ರನಿಗೊಂದು ಮೀಸೆ ಬರೆದು, ತಾರೆಗೆ ಸೀರೆ ಉಡಿಸುವಾಸೆ’… ಹೀಗೆ ಕೆಲವು ಗುನುಗು ಹತ್ತುವ ಸಾಲುಗಳ ಕವಿತೆಗಳಿವೆ ಈ ಸಂಕಲನದಲ್ಲಿ.

ಗೋರಿ/ಸಾವು, ತೊಟ್ಟಿಲು/ಹುಟ್ಟು, ದೀಪ/ಕತ್ತಲು, ಎಲೆ/ಬೇರು, ನಕ್ಷತ್ರ/ಚಂದ್ರ, ಪ್ರಕೃತಿಯ ಉಲ್ಲೇಖಗಳು ಪದೇ ಪದೇ ಯುಗಳದ್ವಯಗಳಾಗಿ, ಪ್ರತಿಮೆ ಪ್ರತೀಕಗಳಾಗಿ ವಿವಿಧ ರೀತಿಯಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ. ನಮಾಜ್ ಒಂದು ಬಹುಮುಖ್ಯ ಪ್ರತಿಮೆಯಾಗಿ ಸಂಕಲನಾದುದಕ್ಕೂ ಮಂಡಿಯೂರುತ್ತಾ, ಪ್ರೀತಿ ಬಿತ್ತುತ್ತಾ, ಪ್ರೇಮಕ್ಕೆ ಶರಣಾಗುತ್ತಾ, ಹೊಸ ಹೊಳಹ ನೀಡುತ್ತದೆ.

ಕವಿತೆ ಬರೆಯುವುದು ಕಷ್ಟದ ಕೆಲಸ. ಬರೆದರೂ, ಕವಿತೆ ಬರೆವ ಕಾಯಕವನ್ನು ಜೀವಂತವಾಗಿ ಉಳಿಸಿಕೊಳ್ಳುವುದು ಇನ್ನೂ ಕಷ್ಟದ ಕೆಲಸ. ತಮ್ಮ ಕಾಲಘಟ್ಟದ ಆಗು ಹೋಗುಗಳಿಗೆ ಕಣ್ಣು, ಕಿವಿ, ಮನಸ್ಸನ್ನು ತೆರೆದಿಟ್ಟುಕೊಂಡು ಸೂಕ್ಷ್ಮ ಸಂವೇದನೆಗಳನ್ನು ರೂಢಿಸಿಕೊಂಡು, ಹಿಂಸೆಗುತ್ತರವಾಗಿ ಪ್ರೀತಿ ಹಂಚುವ ಕವಿತೆಗಳನ್ನು ಕಟ್ಟುವುದು ಕೆಲವರಿಗೆ ಮಾತ್ರವೇ ಸಾಧ್ಯ. ಅದನ್ನು ಕಲಿತು ರೂಢಿಸಿಕೊಳ್ಳದ ಹೊರತು, ಈ ವಿಂಗಡಿತ ಕ್ರೂರ ಸಮಾಜದಲ್ಲಿ ಎಷ್ಟೇ ಕವಿತೆ ಹೊಸೆಹೊಸೆದು ಹಾಕಿದರೂ ಅದಕ್ಕೆ ಯಾವ ಅರ್ಥವೂ ಇಲ್ಲ.

ಸಂಗಾತ ಪುಸ್ತಕ ಪ್ರಕಾಶನವು ಆಯೋಜಿಸಿದ ಚಿ. ಶೀನಿವಾಸರಾಜು ಕಾವ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆದ ನನ್ನ ವಿದ್ಯಾರ್ಥಿ, ಚಾಂದ್ ಪಾಷನಿಗೆ ನನ್ನ ಪ್ರೀತಿಪೂರ್ವಕ ಅಭಿನಂದನೆಗಳು. ‘ಚಿತ್ರ ಚಿಗುರುವ ಹೊತ್ತು’, ಸಂಕಲನಕ್ಕೆ ಮುನ್ನುಡಿಯನ್ನು ಅಭಿಮಾನದಿಂದ ಬರೆದಿರುತ್ತೇನೆ.

ಹೆಚ್ಚೆಚ್ಚು  ಕವಿತೆಗಳನ್ನು ಬರೆದು ಕವಿಚಂದ್ರನು ಪ್ರಖರವಾಗಿ ಬೆಳಗಲಿ ಎಂದು ಹಾರೈಸುತ್ತೇನೆ.

‍ಲೇಖಕರು Avadhi

December 7, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: