ಚಹಾ ಪುರಾಣ…

ಗುಂಡುರಾವ್ ದೇಸಾಯಿ

 ಅದೇನೋ ಮೇ ೨೧ ಚಹಾ ದಿನವಂತೆ ಗೊತ್ತಿರಲಿಲ್ಲ…ಬೆಳಿಗ್ಗೆ ಬೆಳಿಗ್ಗೆ ಕನಸಲ್ಲಿ ಸಕ್ಕರಿ, ಹಾಲು, ಚಹಾಪುಡಿ ಓಡಾಡಕತಿದವು. ನಿತ್ಯವೂ ಚಂದದ ಕನಸು ಕಾಣುತಿದ್ದ ನನಗ ’ಇವೇನು ಖೋಡಿ ಇವತ್ತು ಚಹಾಪುಡಿ ಸಕ್ಕರಿ ಬಂದು ಕಾಡಕತಾವ’ ಅಂತ ಅನಕೊಂಡೆ… ’ಗುಗ್ಗು ನಾನು’ ಎಂದು ಅರ್ಥೈಸಿಕೊಂಡವೊ? ಏನೊ? ಕಪ್ಪು ಸಾಸರ್‌ನೂ ಬಂದವು…. ’ಹೂಂ ಹೂಂ… ಅಧಮ, ಅಧಮ, ಕೃತಘ್ನ’  ಎಂದು ಚೀರಿದ ಆ ವಸ್ತುಗಳು ಗ್ಯಾಸ ಹಚ್ಚಿ ಪಾತ್ರೆಯನ್ನಿಟ್ಟು ಚಹಾ ಮಾಡುವ ವಿಧಾನ ತಿಳಿಸಕತಿದ್ವು… ಬರಿ ಫೈವ್ ಸ್ಟಾರ್ ಹೋಟಲ್ ನಲ್ಲಿ ಪಾರ್ಟಿ ಮಾಡುವ ಕನಸು ಬೀಳುತ್ತಿದ್ದ ನನಗೆ ’ಇವತ್ತೇನು ಅಸಹ್ಯ ಚಹಾದ್ದು ಕನಸು ಬಿದ್ದದ’ ಎಂದಿದ್ದೆ ತಪ್ಪಾಯ್ತೇನೊ…? ಕನಸಿನ್ಯಾಗ ಕೊತಕೊತ ಕುದಿಯುವ ಆ ಚಹಾ ಪಾತ್ರೆನೆ  ಮೇಲೆ ಹಾರತಾ ಬಂದು ಮುಖದ ಮೇಲೆ ಚೆಲ್ಲಿದಂಗಾತು. ಅಮ್ಮಾ…..! ಎಂದು ಒದರಿ ಎದ್ದು ನೋಡತೀನಿ…ಪುಣ್ಯ ವಾಸ್ತವವಲ್ಲ.

ಬೆಳಿಗ್ಗೆ ಎದ್ದು….. ಬ್ರೆಶ್ ಮಾಡಿದ ಕೂಡಲೆ ’ಚಹಾ ಮಾಡೆ’ ಅಂದೆ. ನನ್ನವಳಿಂದ ನೋ ಸೌಂಡ್! ಎಲ್ಲ ಕಡೆ ಹುಡುಕಾಡಿದೆ…ಮನ್ಯಾಗ ಇರಲಿಲ್ಲ. ನಾನೇ ಮಾಡಿಕೊಂಡರಾಯಿತೆಂದು ಗ್ಯಾಸ ಹಚ್ಚಲಿಕ್ಕೆ ಹೋಗ್ತಿನಿ…. ಹತ್ತತಾ ಇಲ್ಲ! ಒದ್ದಾಡಿ ಒದ್ದಾಡಿ ಹಚ್ಚಿದೆ…ನೀರು ಕಾಯಿಸಲಿಟ್ಟೆ. ಚಹಾಪುಡಿ ಸಿಗುತಿಲ್ಲ…ಕೋಪ ನೆತ್ತಿಗೇರಿತ್ತು..ಬೆಳಿಗ್ಗೆ ಎದ್ದು ಚಹಾ ಕುಡಿಯದೆ ಒಂದು ಕೆಲಸ ಮಾಡೋ ಜಾಯಮಾನದವಲ್ಲ. ಈಕಿ ಇರಲಾರದಕ್ಕ, ಸ್ಟವ್ ಗೊಳಾಡಿಸಿದದಕ, ಹ್ಯಾಂಗರ ಮಾಡಿ ಚಹಾ ಮಾಡಬೇಕಂತ ಯತ್ನಿಸಿದರೂ ಚಹಾಪುಡಿ ಸಿಗಲಾರರದದಕ. ಬ್ರಹಾಂಡ ಕೋಪನ ಬಂತು. ಮಕ್ಕಳು ಎದ್ದಿರಲಿಲ್ಲ. ಹೊರಗೆ ಹೋಗಿ ಕುಡಿಯೋಣ ಎಂದು ಸರ್ಕಲ್‌ನಲ್ಲಿ ಇರೋ ನಮ್ಮ ಶೆಟ್ರ ಹೋಟಲ್‌ಗೆ ಹೋದರೆ ಅವನು ಬಂದು ಮಾಡಿದ್ದ. ಮನೆಗೆ ಬಂದೆ ನಿರಾಶೆಯ ಭರದಲ್ಲಿ. ಈಕಿನೂ ಬಂದಿದ್ಲು… ಎಲ್ಲಿ ಹಾಳಾಗಿ ಹೋಗಿದ್ದಿ? ಬೆಳಿಗ್ಗೆ ಚಹಾ ಇರಲ್ಲ ಅಂದ್ರ ನಡಿಯಲ್ಲ ಅಂತ ಗೊತ್ತಿಲ್ಲ ನಿನಗ……ಎಂದೆ

ಏನ್ರಿ ಅಷ್ಟು ಜೋರು ಮಾಡಕತೀರಿ. ನಾನು ನೀರು ತರೋಕೆ ಹೋಗಿದ್ದೆ. ಒಂದು ದಿವಸ ಮಾಡಿಕೊಂಡು ಕುಡಿದ್ರ ಕೈ ಸವಿಯುತ್ತಾ? ಎಂದು ಮರು ಉತ್ತರಿಸಿದಳು. ಎದ್ದಿರುವ ಟೈಮೆ  ಸರಿ ಇಲ್ಲ, ಮುಂದುವರೆಸೋದು ಬೇಡ ಅನಕೊಂಡು ಪ್ರೀತಿಯಿಂದ ’ಚಹಾ ಮಾಡೆ?’ ಎಂದು ಕೇಳಿ ಬೆಳಿಗ್ಗೆ ನಡೆದದ್ದನ್ನು ಹೇಳಿದಾಗ ಅಯ್ಯುಯ್ಯ್ಯೊ? ಶಾಂತಂಪಾಪಂ ಶಾಂತಂಪಾಪಂ!  ಆಚಾರ್ಯರನ್ನು ಕೇಳೊಣ ನಡಿರಿ…! ಏನು ಕಾದಿದೆಯೋ? ಸುಡಸುಡಾ ಚಹಾ ಮುಖದ ಮೇಲಿ ಬಿದ್ದಿದೆ ಎಂದ್ರೆ…..ಎಲ್ಲೆರ ಆಸಿಡ್ ಗಿಸಿಡ್ ಬೀಳಬಹುದೇನೋ? ಎಂದು ಗಾಬರಿಯಾಗುತ್ತಿದ್ದನ್ನು ನೋಡಿ ಅಯ್ಯೊ! ಒಳ್ಳೆ ಹೇಳಿದೆನಪ ಈಕೆಗೆ? ಎಂದು ಹಣೆ ಹಣೆ ಬಡಕೊಂಡೆ..

ಮೊದಲು ಚಹಾ ಮಾಡು ಆಮೇಲೆ ಆಚಾರ್ಯರನ್ನು ಕೇಳೋಣ ಎನ್ನುತ್ತಿರುವಾಗಲೆ  ಮಾಡಿಕೊಂಡು ಬಂದು ಕೈಗೆ ಕೊಟ್ಟಳು. ಈಕಿ ಮಾಡುವ ಚಹಾ ಮುಂದೆ ಎಲ್ಲವೂ ಎಡ. ಚಹಾ ಕುಡದೆ, ಆದರೆ ಯಾಕೋ ನಿತ್ಯದ ಚಹಾದಂತಿರಲಿಲ್ಲ… ’ಏನೇ..ಇದು ಕಲಗಚ್ಚು ಇದ್ದ ಹಾಗಿದೆ’ ಅಂತ ಬಯ್ಯಬೇಕೆನ್ನುವಷ್ಟರಲ್ಲಿ ಫೇಸಬುಕ್ನಲ್ಲಿ..ವ್ಯಾಟ್ಸಪ್ ನಲ್ಲಿ, ಇನಸ್ಟಗ್ರಾಂ ನಲ್ಲಿ, ಟೆಲಿಗ್ರಾಂನಲ್ಲಿ ’ಚಹಾ ದಿನದ ಶುಭಾಶಯಗಳು’ ಅಂತ ಯಾರ‍್ಯಾರೋ ವಿಶ್ ಮಾಡಿದ್ದು ಮೊಬೈಲ್ ಸ್ಕ್ರೀನ್ ಮೇಲೆ ಬರತಿದ್ವು. ಅದರಳಗಿನಿಂದ  ಚಹಾ ಗ್ಲಾಸು ಹೊರಗೆ ಬಂದು ಮುಂಡೆದೆ ಮುಂಡೆದೆ ಈಗಲಾದ್ರೂ ಅರ್ಥ ಆಯಿತಾ? ಅಂತು..
ಏನು? ಎಂದೆ
ಇವತ್ತು ಬೆಳಿಗ್ಗೆ ಬೆಳಿಗ್ಗೆ ಕನಸಲ್ಲಿ ಕಾಡಿದ್ದಕ್ಕೆ ಕಾರಣವೇನು ಅಂತ ..?
ಓಹೊ ಇವತ್ತು ಚಹಾ ದಿನನಾ..ಇವತ್ತೇನು ಡೇಟು? ಮೇ೨೧..ಹ್ಞಾಂ…!ಹೌದು ಯಾವಗಿನಿಂದ ಆರಂಭವಾಯಿತು..? ನಾನು ಹುಟ್ಟಿದಾಗಿನಿಂದ ಇಂತಹ ದಿನ ಅದ ಅಂತ ಗೊತ್ತೆ ಇಲ್ಲಲ..?ಎಂದೆ

ಇಡಿಯಟ್…. ನಿತ್ಯ ಕುಡಿಯೋರಿಗಂತೂ ಬುದ್ಧಿ ಇಲ್ಲ ಯಾರೊ ಪುಣ್ಯಾತ್ಮರು ನಮ್ಮ ಹೆಸರಲ್ಲಿ ’ಡೇ’ ಸೆಲೆಬ್ರೇಶನ್ ಮಾಡುತಿದ್ದಾರೆ. ನೀನಂತೂ ಮಾಡಲಿಲ್ಲ..ಮಾಡೋರನ್ನ ಫಾಲೋ ಮಾಡಕಾಗಲ್ಲ..ನಿನ್ನ ಹಣೆ ಬರಹದಾಗಂತೂ ನಾನು ಬಿಟ್ರ ಗತಿಯಿಲ್ಲ. ಯಾರ‍್ಯಾರೊ ಬಗ್ಗೆ ಬರಿತಿರಿ ನಾವು ನಿಮಗ ಲೆಕ್ಕಕ್ಕ ಇಲ್ಲ ಎಂದಾಗ ಬುದ್ಧಗ ಜ್ಞಾನೋದಯ ಆದಂಗ ನನಗೂ ’ಆಯ್ಯೋ ಹೌದಲ! ಚಹಾದ ಬಗ್ಗೆ ನನಗೆ ಬರಿಯೋಕೆ ಆಗಿಲ್ಲ’ ಎನ್ನುವ ನೋವು ಆಯ್ತು. ನಾನು ಸ್ವಾರಿ ಹೇಳಿ ’ಬರಿತಿನಪಾ’ ಅಂದಾಗಲೆ ಕನಸಲ್ಲಿ ಮೇಲೆ ಬಿದ್ದಿದ್ದ ಸುಡ-ಸುಡ ಚಹಾ ಹಿಂದಕ್ಕ ಹೋದಂಗ ಆಗಿದ್ದು…ಕ್ರಿಕೇಟ್ ನಲ್ಲಿ ವಿಕೆಟ್ ಬಿದ್ದಾಗ ರಿಪ್ಲೇ ತೋರಿಸಿದಾಂಗ. ಫಿಲ್ಮನಲ್ಲ್ಲಿ ಪ್ಲಾಶ್‌ಬ್ಯಾಕಿಗೆ ಹೋದಂಗ!

ಕತ್ತಲು ಕರಗಿ ಬೆಳಕು ಹರಿಯುವ ನಸುಕು ಹೊತ್ತಿನಲ್ಲಿ ಎಲ್ಲರೂ ಬಯಸೋದು…ಹೋಟೆಲ್‌ನವ, ಅಂಗಡಿ ಆರಂಭಿಸಿದ ಕೂಡಲೆ ಮೊದಲು ಇಳಿಸೋದು ಚಹಾವನ್ನೆ…!  ಪ್ರಯಾಣ ಮಧ್ಯದಲ್ಲಿ  ಸ್ವಲ್ಪ ವಿರಾಮಕ್ಕಾಗಿ ಗಾಡಿ ನಿಲ್ಲಿಸೋದು ಚಹಾ ಕುಡಿಯೋದಕ್ಕಾಗಿಯೇ. ತರಬೇತಿ, ಸಭೆ, ಮಾತುಕತೆ  ಯಾವುದೇ ಇರಲಿ ನಡುವೆ ವಿರಾಮದಲ್ಲಿ ಚಹಾವೇ ರಿಲ್ಯಾಕ್ಸ ನೀಡುವ ಔಷಧಿ. ಮನೆಯಲ್ಲಿ ಬಂದ ಅತಿಥಿಗಳಿಗೆ ಸತ್ಕರಿಸೋದು ಚಹಾ ಮೂಲಕವೆ. ಮದುವೆ ಮುಂಜಿ ಏನೇ ಸಮಾರಂಭವಿರಲಿ ಮೊದಲಿಗೆ ಆಪೇಕ್ಷಿಸುವುದ ಇದನ್ನೇ. ಒಂದು ಹೋಟಲ್‌ಗೆ ಹೋದ ಮೇಲೆ ಸ್ನೇಹಿತರನ್ನ ಬಂಧುಗಳನ್ನ ಅಥವಾ ಯಾರನ್ನಾದರೂ ಸಂಬೋಧಿಸೋದು ’ಚಹಾಕುಡಿಯೋಣ ಬನ್ನಿ’ ಎಂದೆ. ಆಕಸ್ಮಾತ ಏನೇ ತಿಂದರೂ ಕುಡಿದರೂ ಕೊನೆಗೆ ಚಹಾ ಬೇಕು…ಅದರಲ್ಲಿ ಚೂಡಾ ಮಂಡಾಳು ಖಾರಾ ಭಜಿ ಮಿರ್ಚಿ ತಿಂದಾಗಲಂತೂ ಚಹಾ ಕುಡಿಯದಿದ್ದರೆ ಏನೊ ಕಳೆದುಕೊಂಡಂತೆ.

ಚಹಾ ಎನ್ನುವುದು ಇಂದು ನಿನ್ನೆಯದಲ್ಲ. ಹಿಂದೆ ಮನೆಗಳಲ್ಲಿ ದೊಡ್ಡ ದೊಡ್ಡ ಕಿತ್ಲಿಗಳು ಒಲೆಯ ಮೇಲೆ ದಿನಪೂರ್ತಿ ಜೀವಂತವಾಗಿರುತ್ತಿದ್ದವು.. ನೀರು ಕುಡಿದಂತೆ ಕುಡಿಯುವ ಜನಗಳು ಇದ್ದರು, ಈಗಲೂ ಇದ್ದಾರೆ. ನಮ್ಮವ್ವ ಚಹಾದ ಹುಳ…೮೫ ವರ್ಷದಾಟಿದ್ದರೂ…..ಇನ್ನೂ ಗಟ್ಟಿಗಿತ್ತಿ…ಸಿಟ್ಟು ಬಂದರೆ ನಾಲ್ಕು ದಿನ ಉಪವಾಸ ಬಿದ್ದುಬಿಡೋಳು..ಆದರೆ ಆ ಸಿಟ್ಟಿನಲ್ಲೂ  ಬದುಕಿಸೋದು ಅವಳು ನಿತ್ಯ ಆರೇಳು ಸಾರಿ ಕುಡಿಯುವ ಚಹಾ. ಶುಗರ್ ಬಂದರೂ ಬಿಡದ ವ್ಯಾಮೋಹ ಚಹಾದ್ದು..ಕೆಟ್ಟು ಕಹಿಯಾಗಿರುವ ಶುಗರ್ ಲೆಸ್ ಚಹಾವನ್ನು ’ವಾಹ್ ವಾಹ್’ ಎಂದು ಕುಡಿಯವುದನ್ನು ನೋಡಿದಾಗ..ಎಂತಹ ಆನಂದವೆನಿಸುತ್ತದೆ.

ಚಹಾವಿಲ್ಲದ ದಿನ ಊಹಿಸಿಕೊಳ್ಳುವುದು ಕಷ್ಟ. ಅತಿ ಹೆಚ್ಚು ಕೆಲಸ ಮಾಡಿದರೆ, ದಣಿದಾಗ, ತಲೆ ನೋವು ಬಂದಾಗ, ಬ್ಯಾಸರಾದಾಗ, ಒತ್ತಡದಲ್ಲಿರುವಾಗ ರಿಫ್ರೇಶ್ ಆಗಲು ಚಹಾ ಬೇಕೇ ಬೇಕು. ನಾನಂತೂ ಕಂಪ್ಯೂಟರ್ ಮುಂದೆ ಕುಳಿತರೆ, ಓದಲು ಕುಳಿತರೆ ಇವಳಿಗೆ ಎಲ್ಲಿಲ್ಲದ ತೊಂದರೆ… ಮುಗಿಯವುದರೊಳಗಾಗಿ ಮೂರುನಾಲ್ಕು ಸಾರಿ ಉತ್ತೇಜಕ ಪಾನೀಯ ಬೇಕು. ಒಂದು ವೇಳೆ ರಜಾ ಬಂದರಂತೂ ಇವಳು ಹೆದರಿಬಿಡುತ್ತಾಳೆ. ಖರ್ಚಾಗುವ ಹಾಲು ಚಹಾಪುಡಿ ಸಕ್ಕರೆ ಬಗ್ಗೆ ಅಲ್ಲ…! ತಿಂಗಳಾದ ಮೇಲೆ ಎರಡು ಸಾವಿರ ರೂಪಾಯಿ ಹಾಲಿನ ಬಿಲ್ಲು ಕೊಡುವಾಗ ನನ್ನ ಪ್ರತಿಕ್ರಿಯೆ ಕಂಡು.

ಹೆಣ್ಣು ನೋಡುವ ಶಾಸ್ತ್ರದಲ್ಲಿ ಒಳ್ಳೆ ಮೀಡಿಯೇಟರ್ ಈ ಚಹಾನೆ… ಚಹಾದ ರುಚಿಗೆ ಮಾರು ಹೋಗಿ ಮದುವೆ ಕುದರಿದ ಉದಾಹರಣೆಗಳಿಗೆ ಲೆಕ್ಕ ಇಲ್ಲ. ಎಲ್ಲಿ ಚಹಾ ಫೇಲಾತೊ ಚಂದದ ಹುಡುಗಿ ಇದ್ದರೂ ’ಅಡುಗೆ ಮಾಡಲು ಬರಲಿಕ್ಕಿಲ್ಲ’ ಎನ್ನುವ ಅನುಮಾನದಿಂದ ಕ್ಯಾನ್ಸಲ್ ಆಗಿರುವ ಕಥೆಗಳು ಇವೆ. ಹಾಗೆ ನೋಡಿದರೆ ನೋಡುವ ಶಾಸ್ತ್ರದಲ್ಲ್ಲಿ ಆ ಹೆಣ್ಣು ಮಾಡಿರುವ ಸಾಧ್ಯತೆಗಳೆ ಇರೋಲ್ಲ.  ಒಂದು ಹೆಣ್ಣಿನ ಮದುವೆಯನ್ನು ನಿರ್ಧರಿಸುವ ಶಕ್ತಿ ಯಕಶ್ಚಿತ್ ಚಹಾಕ್ಕಿದೆ ಎಂದರೆ….ಅದು ಸಣ್ಣ ಮಾತೆ?

ಇಡಿ ಪ್ರಪಂಚದಲ್ಲಿ ಸರಾಸರಿ ಒಬ್ಬ ವ್ಯಕ್ತಿಗೆ  ಒಂದು ಕೆ.ಜಿಯಷ್ಟು ಅತಿ ಹೆಚ್ಚು ಚಹಾಪುಡಿ ಬಳಸುವ ದೇಶ ನಮ್ಮದು.. ಇರಬಹುದು, ಚಹಾ ಇಲ್ಲದ ಯಾವುದೆ ಕಾರ್ಯಕ್ರಮಗಳು ನಮ್ಮಲ್ಲಿ ಆರಂಭವಾಗುವುದಿಲ್ಲ ಅಥವಾ ಮುಕ್ತಾಯವಾಗುವುದಿಲ್ಲ. ಸ್ನೇಹವನ್ನು ಬಂಧುತ್ವವನ್ನು ವಿಶ್ವಾಸವನ್ನು ಬೆಸೆಯುವ ಪಾನೀಯ ಚಹಾ.. ಮನೆಗೆ ಬಂದ ಹೆಣ್ಣುಮಕ್ಕಳಿಗೆ ಕೊಡುವ ಕುಂಕುಮದಂತೆ ಗಂಡಸರಿಗೆ ಚಹಾ… ಬಂದವರಿಗೆ ಬರಿ ನೀರು ಕೊಟ್ಟು ಕಳಿಸಿ ’ಮನಿಗೆ ಹೋದ್ರ ಹಣೆಬರಹಕ್ಕ ಒಂದು ಕಪ್ ಚಹಾ ಕುಡಸಲ್ಲ.. ಅವನದೇನು ಹೇಳತಿರಿ’ ಎಂದು ನಿಮ್ಮ ಬಗ್ಗೆ ಬಿಟ್ಟಿಯಾಗಿ ಊರ ತುಂಬೆಲ್ಲ ಹೆಸರು ಪ್ರಚಾರ ಆಗಿರುತ್ತದೆ. ನಮ್ಮ ಮುಖ್ಯಗುರುಗಳೊಬ್ಬರು ಕೆಟ್ಟ ಜಿಪುಣಾಗ್ರೇಸರು. ಶಾಲೆಗೆ ಭೇಟಿ ಕೊಡುವ ಅಧಿಕಾರಿಗಳಿಗೆ ಯಾಕೆ ಚಹಾ ಕುಡಿಸಬೇಕು? ಎಂಬುದು ಅವರ ಭಾವ. ನಾನು ’ಅವರು ಮನೆಗೆ ಬಂದ ಅತಿಥಿಗಳು ಇದ್ದ ಹಾಗೆ… ಸೌಜನ್ಯಗೋಸ್ಕರವಾದರೂ ತರಸಬೇಕು ಸರ್’ ಎಂದೆ. ಅವರು ಕ್ಯಾರೆ ಅನ್ನಲಿಲ್ಲ. ಚಹಾಪ್ರಿಯ ಆ ಅಧಿಕಾರಿಗಳು ಎಲ್ಲಾ ಸರಿ ಇದ್ದರೂ ತಪ್ಪು ಕೆದುಕಿ ಕೆದುಕಿ ರಿಪೋರ್ಟ ಬರೆದು ಕಛೇರಿ ಅಲೆಯುವಂಗ ಮಾಡಿದ್ರು. ನಾವು ತರಿಸಬೇಕೆಂದಿದ್ದರೂ ಮುಖ್ಯಗುರುಗಳ ಕೋಪಕ್ಕೆ ಗುರಿಯಾಗುವೆವು ಎನ್ನುವ ಭಯದಲ್ಲಿದ್ದ ನಮಗೂ ಚಹಾ ತರಸದ ಎಫೆಕ್ಟ್ ಕಛೇರಿಗೆ ಅಲೆಯುವಂತೆ ಮಾಡಿತ್ತು.

ಒಂದರ್ಥದಲ್ಲಿ ಚಹಾ ವೆಜಟೇರಿಯನ್ ವೈನ್ ಇದ್ದಹಾಗೆ… ನಗಬೇಡಿ, ಯೋಚಿಸಿ ಹೇಳಿ.. ಚಹಾದಲ್ಲಿ ಅಲ್ಪಪ್ರಮಾಣದಲ್ಲಿ ’ಕೆಫಿನ್ ಇದೆ’ ಅದು ಅಪಾಯಕಾರಿ ಎಂದರೂ ಹೆಂಡ ಕುಡಿದು ಸತ್ತವರಿದ್ದಾರೆ ಚಹಾ ಕುಡಿದು ಸತ್ತವರುಂಟೆ….? ಎಂತಹ ರಾಷ್ಟ್ರಪತಿಗಳು, ಮುಖ್ಯಮಂತ್ರಿಗಳು ಪ್ರಶಸ್ತಿ ಸತ್ಕಾರ ನೀಡುವ ಅಥವಾ ಬೇರೆ ದೇಶಗಳ ಅತಿಥಿಗಳನ್ನು ಗೌರವಿಸುವ ಸಂದರ್ಭದಲ್ಲಿ ಟೀಪಾರ್ಟಿ ಹಮ್ಮಿಕೊಳ್ಳುತ್ತಾರೆ.. ಅದು ಅದಕ್ಕೆ ಕೊಟ್ಟ ಗೌರವ ತಾನೆ..? ಇತ್ತೀಚಿಗೆ ಕೆಲವು ವರ್ಷಗಳಿಂದ ಮಾನ್ಯ ಪ್ರಧಾನಿಯವರು ’ಚಾಯಪೇ ಚರ್ಚಾ’ ಎನ್ನುವ ರೇಡಿಯೊ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ ಅಂದರೆ……ಚಹಾವನ್ನು ಅಂಡರ್ ಎಸ್ಟೀಮೇಟ್ ಮಾಡುವುದು ತಪ್ಪಲ್ಲವೇ?

ಇಂತಹ ಚಹಾದಲ್ಲಿ ಎಷ್ಟು ಬಗೆಗಳು….? ಲಿಸ್ಟ ಕೇಳಿ ಗಾಬರಿಯಾಗಬೇಕು! ಗ್ರೀನ್, ಬ್ಲಾಕ್, ವೈಟ್, ಹರ್ಬಲ್,ಮಸಾಲ, ಲೆಮನ್, ಡಾರ್ಲಿಂಗ,  ಜಿಂಜರ್, ನೀಲಗಿರಿ, ಮೀಟರ್, ಇರಾನಿ, ತಂದೂರಿ   ಮೊದಲಾದ ಮೂವತ್ತಕ್ಕಿಂತಲೂ ಹೆಚ್ಚು ಬಗೆಯ ಟೀಗಳು ಅರ್ಥಾತ ಚಹಾಗಳು ಇಂದು ಜಗತ್ತನ್ನ ಆಳತಿವೆ. ಹಿಂದಕ್ಕೆಲ್ಲ ಹೋಟೆಲ್‌ನಲ್ಲಿ ಉಪಹಾರಗಳಿಗೆ ಮಹತ್ವ ಇತ್ತು. ಚಹಾಗೆ ಅಷ್ಟಕಷ್ಟೆ ಸ್ಥಾನ. ಯಾವಾಗಲೋ  ಸೋಸಿದ ಚಹಾ ಅನ್ನೆ ಕೊಡುತ್ತಿದ್ದರು. ಅದೆಲ್ಲ ಔಟ್ ಡೇಟ್ ಆಗಿದೆ.  ಈಗ ಚಹಾಗಳಿಗಾಗಿಯೇ ಪ್ರತ್ಯೇಕ ರೋಡ್ ಸೈಡ್ ಸ್ಟ್ಯಾಂಡ್ಗಳಾಗಿವೆ. ಅಂಗಡಿಗಳಾಗಿವೆ. ಚಹಾದ್ದೆ ಆದ ’ಚಾಯ್ ತಲಬ್, ಟೀ ಮಚ್ಚಾ, ಕರವೀರ ಚಹಾ, ಜಾಗರ್, ಗುಲ್ಫಿ, ಚಾಯವಾಲಾ,’ ಮೊದಲಾದ  ಪ್ರಾಂಚೇಸಿಗಳು ಸಣ್ಣ ಊರುಗಳಿಗೂ ಹರಡಿಕೊಳ್ಳುತ್ತಿವೆ. ದೇಶದಾದ್ಯಂತ ಸಾವಿರಾರು ಕೋಟಿ ವ್ಯವಹಾರದ ಉದ್ಯಮವಾಗಿ ಬೆಳೆದಿದೆ..

ನಮ್ಮ ಕಲ್ಯಾಣ ಕರ್ನಾಟಕದ ಭಾಗದಲ್ಲಿ ’ಜ್ಯೂಸ್ ಅಂಗಡಿ’, ’ಐಸಕ್ರಿಮ್ ಅಂಗಡಿ’, ಹೋಟೆಲನ್ನೂ ಮಾಡಿ ಹಾಳಾದವರಿದ್ದಾರೆ ಟೀ ಮಾರಿ ಹಾಳಾದವರು ಇಲ್ಲವೆ ಇಲ್ಲ…. ಬೀಚಿಯವರು ಹೇಳೊ ಹಾಂಗ ನಮ್ಮಲ್ಲಿ ಎರಡೆ ಕಾಲ ’ಬೇಸಿಗೆ ಕಾಲ, ಅತಿ ಬೇಸಿಗೆ ಕಾಲ’ ಇಂತಹ ಬೇಸಿಗೆಯ  ವೈಭವದ ಬಿಸಿಲಿನಲ್ಲಿ ತುಂಬು ತುಳುಕುವುದು ಜ್ಯೂಸ್ ಅಂಗಡಿಗಳಲ್ಲ… ಟೀ ಅಂಗಡಿಗಳೆ…! ಅಂತಹ ಹಾಟ್ ಸಮಯದಲ್ಲೂ ತಂಪು ಬೇಕು ಎಂದು ಯೋಚಿಸುವುದೆ ಇಲ್ಲ… ಸೂರ್ಯ ನಿಗಿ ನಿಗಿ ಕೆಂಡದಾಂಗ ಆಗಿ ನೆತ್ತಿಮ್ಯಾಗ ಭರತನಾಟ್ಯ ಮಾಡತಿದ್ರೂ ಈ ತಂಬೆಳಕಿನಲ್ಲ್ಲೂ ಚಹಾನೆ  ಬೇಕು, ಅದೂ ಸುಡುತಿರಲೇಬೇಕು. ಜೊತಿಗೆ  ಸಿಗರೇಟ್ ಸೇದೊದು ಬೇರೆ..

ನನಗೂ ಚಹಾಕ್ಕೂ ಎಲ್ಲಿಲ್ಲದ ನಂಟು.. ಚಹಾಬಿಟ್ಟರೆ ಬದುಕಿಲ್ಲ ಎನ್ನುವಷ್ಟು ನನಗೆ ಅದರೊಂದಿಗೆ ಬಾಂಧವ್ಯ.. ಅದು ಜೀನ್ಸ್ ಮೂಲಕ ಬಂದಿದೆಯೇನೋ ಗೊತ್ತಿಲ್ಲ..? ನಿನ್ನ ಹೆಣ್ಣು ತಾತನ ಆಸ್ತಿಯಲ್ಲ ಬರಿ ಸಕ್ಕರಿ ಚಹಾಪುಡಿಗಾಗಿಯೆ ಹೋಯ್ತು.. ನೀನು ಅದ ರಕ್ತದವ ಅಷ್ಟು ಕುಡಿಬ್ಯಾಡವೋ? ಎಂದು ನಮ್ಮಪ್ಪ ಬಯ್ತಿದ್ದ… ಅದನ್ನು ನೆನೆಸಿಕೊಂಡಾಗಲೆಲ್ಲ…. ನಮ್ಮ ತಾಯಿಯ ತವರು ಮನೆಯವರು ಕಳೆದುಕೊಂಡ ಅಪಾರ ಪ್ರಮಾಣದ ಆಸ್ತಿ ನೋಡಿ ಕನಿಕರವಾಗುತ್ತದೆ.. ನಾನು ಕುಡಿಯವುದು ಬಿಡಬೇಕು ಎಂದು ನಿರ್ಧಾರ ಮಾಡುತ್ತೇನೆ….. ಅವತ್ತಿನ ಪೂರ್ತಿ! ಮರುದಿನದಿಂದ ಯಥಾಪ್ರಕಾರ…. ತೀರ್ಥ ಸೇವನೆ ಸಾಂಗೋಪಾಂಗವಾಗಿ ನಡೆದಿರುತ್ತದೆ. ಒಂದು ರೀತಿ ಹೆಂಡಗುಡುಕರ ತರಹದ ’ಚಹಾಕುಡುಕ’ ಅನ್ನಿ.

ಬಾಲ್ಯದಾಗ ಒಂದು ಮದುವೆಗೆ ಹೋಗಿದ್ದೆ. ಮನೆಯಲ್ಲಿ ನೀರು ಚಹಾ ಮಾಡತಿದ್ರು. ಅಂದಿನ ಆರ್ಥಿಕ ಪರಸ್ಥಿತಿಗೆ ಅನಿವಾರ್ಯ ಇತ್ತು. ಅಲ್ಲಿ ಗಟ್ಟಿ ಹಾಲಿನಿಂದ ಮಾಡಿದ ಚಹಾ ಕೇಳಬೇಕೆ….? ಬರೋಬ್ಬರಿ ತಂಬಿಗೆಗಿಂತ ಹೆಚ್ಚು ಕುಡಿದು ಬಿಟ್ಟಿದ್ದೆ…! ಕುಡಿಯುವಾಗ ಏನಾಗದಿದ್ದರೂ ರಾತ್ರಿ ಹೊಟ್ಯಾಗಿಂದು ಕೇಳಬೇಕಲ್ಲ…..? ಕೆಳಭಾಗದಿಂದ ಪಂಪಸೆಟ್ ಹಚ್ಚಿ ಹೊಡೆದ ಹಾಗೆ ಹೊಟ್ಟೆ ಝಾಡಿಸಿದ್ದೆ ಝಾಡಿಸಿದ್ದು..ಮರುದಿನ ಫುಡ್ ಪಾಯಜನ್‌ನಿಂದ ಮನೆಯಲಿ ನಾಲ್ಕೈದು ಮಂದಿ ಆಸ್ಪತ್ರೆಗೆ ಅಡ್ಮಿಟ್ ಆದಾಗ ನಾನು ಆ ಲೆಕ್ಕದಲ್ಲಿ ಉಳಕೊಂಡಿದ್ದೆ…ನಿಜವಾದ ಕಾರಣ ಗೊತ್ತಾಗಿದ್ದರೆ!

ಇನ್ನೊಮ್ಮೆಯೂ ಹರ್ನಿಯಾ ಕಾರಣದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿ ಅಡ್ಮಿಟ್ ಆಗಿ ಮನೆಗೆ ಬಂದಾಗ, ಮಾತಾಡಿಸಲು ಬಂದವರಿಗಾಗಿ ಮಾಡುತ್ತಿದ್ದ ಚಹಾವನ್ನು ಅವರು ಕುಡಿಯುವಾಗ ’ನೀವು ಕುಡಿಯಿರಿ ಒಬ್ಬರೆ ಹೇಗೆ ಕುಡಿಯೋದು?’ ಎಂದು ಎಲ್ಲರೂ ಒತ್ತಾಯಿಸುತ್ತಿದ್ದ ಪರಿಣಾಮವಾಗಿ  ಪಿತ್ತ ಜಾಸ್ತಿ ಆಗಿ…. ಲೋಕವೇ ತಿರುಗುವಂತಹ ತಲೆಸುತ್ತು… ಬಂದು ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿ… ಲೈಫನಲ್ಲಿ ಚಹಾ ಕುಡಿಯಬಾರದೆಂದು ಆ ಕ್ಷಣದಲ್ಲಿ ನಿರ್ಣಯಿಸಿದರೂ….. ಆರಾಮದ ಮೇಲೆ ಮತ್ತೆ ಮೊರೆಹೋಗುವ ಡ್ರಗ್ಸ್ ಅಡಿಟರಂತೆ ಮರಳ ಶರಣಾಗಿದ್ದು ಸುಳ್ಳಲ್ಲ.

ಇಂತಪ್ಪ ವರ್ಣಿಸಿದ  ಚಹಾದ ಉಗಮ ನೋಡಕೋದ್ರೆ ಹೊಟ್ಟೆ ಉರಿಲಿಕ್ಕೆ  ಸ್ಟಾರ್ಟ ಆಗುತ್ತದೆ.. ಚಹಾದ ಬರ್ಥ ಪ್ಲೇಸ್ ಈಗಾಗಲೆ ಮೂರು ವರ್ಷದಿಂದ ಕಾಡುತ್ತಿರುವ ಕರೋನಾದ ಮೂಲ ಸ್ಥಳವೇ…!  ಚೀನಿ ಮಂದಿ, ಏನಾ ಮಾಡಲಿ ಅಟ್ರಾಕ್ಟ ಆಗೋಂಗಾ ಮಾಡತಾರ. ಕರೋನಾ ಅದು  ವೈರಸ್ಸು. ಅಲಕ್ಷ ಮಾಡಿದ್ರ ಸಾಯಸೊತನಕ ಬಿಡಲ್ಲ. ಆದರೆ ಚಹಾ ಒಂದು ವೈರಸ್ ತರಹನ ಅನ್ನಿ. ಚಟ ಅಂಟಿಕೊಂಡ್ರ ಸಾಯೋವರೆಗೂ ಬಿಡೊಕಾಗಲ್ಲ.

ಚೈನಾದ ಶೆನ್ನಾಂಗ ಎನ್ನುವವನು ಚೈನಾದ ಪುರಾಣ ಕಾಲದ ರಾಜ. ಅವನೊಬ್ಬ ಕೃಷಿ ಸಂಶೋಧಕ ಹಾಗೂ ವೈದ್ಯ.. ಕ್ರಿ.ಪೂ ೨೭೦೦ರಲ್ಲಿ ಕುಡಿಯುವ ನೀರನ್ನು ಕುದಿಸುತ್ತಿದ್ದಾಗ ಅದರಲ್ಲಿ ಎರಡು ಎಲೆಗಳು ಬಿದ್ದು ನೀರನ್ನು ಕಂದುಬಣ್ಣಕ್ಕೆ ತಿರುಗಿಸಿದವಂತೆ.  ಕುತೂಹಲದಿಂದ ಕುಡಿದಾಗ ಅವನಲ್ಲಿ ಒಂದು ಬಗೆಯ ಚೈತನ್ಯ ಬಂತಂತೆ… ಅದನ್ನು ಅವನು ಮುಂದೆ ಅಭಿವೃದ್ಧಿ ಪಡಿಸಿದ ಎಂಬ ಮಾತಿದೆ…  ಹದಿನೆಂಟನೆ ಶತಮಾನದಲ್ಲಿ ಚೈನಾದ ಚಹಾ ಬೆಳೆಯ ಪ್ರಾಬಲ್ಯವನ್ನು ಮುರಿಯಲೆಂದೆ ಬ್ರಿಟೀಷರು….ಚಹಾ ಬೆಳೆಯಲೂ ಪೂರಕವಾದ ನಮ್ಮ ನೆಲದ ಆಸ್ಸಾಂ ಕಣಿವೆಗಳಲ್ಲಿ ಚಹಾದ ಕೃಷಿಯನ್ನು ಆರಂಭಿಸಿದರು ಎನ್ನುವ ಮಾತು ಇದೆ. ಅಲ್ಲಿಂದಲೇ ಆಧಿಕೃತವಾಗಿ ಚಹಾ ಭಾರತವನ್ನು ಪ್ರವೇಶಿಸಿತು ಎನ್ನುವುದಾದರೂ ಅದನ್ನು ಪೂರ್ಣವಾಗಿ  ನಂಬಲಿಕ್ಕಾಗದು. ಕಷಾಯ ಕುಡಿಯುವ ಸಂಪ್ರದಾಯ ಅನಾದಿ ಕಾಲದಿಂದಲೂ ನಮ್ಮಲ್ಲಿ ಇದೆ…. ಐತಿಹ್ಯಗಳ ಪ್ರಕಾರ ಗೌತಮ ಬುದ್ಧ ಮೊದಲ ಬಾರಿಗೆ ಚಹಾ ಸೇವಿಸಿದನೆಂಬ ಪ್ರತೀತಿ ಇದೆ. ಅದೇನೆ ಇರಲಿ ’ಕೆಮಿಲಿಯಾ ಸಿನೆನ್ಸಿಸ್’  ಎನ್ನುವ ಕಾಡು ಸಸ್ಯದ ಪೇಯವನ್ನು ಔಷಧಿ ರೂಪದಲ್ಲಿ ಕೊಡುತ್ತಿದ್ದ ಬಗೆಗೆ ನಮ್ಮ ಆಯುರ್ವೇದದಲ್ಲಿ ಉಲ್ಲೇಖವಿದೆ. ಎಲೆಗಳನ್ನು ಕುದಿಸಿಕೊಂಡು ಕುಡಿಯುವ ಪದ್ದತಿ ನಿಜವಾದ ಚಹಾ ಪದ್ದತಿ… ಆದರೆ ಬ್ರಿಟೀಷರ ಅವಧಿಯಲ್ಲಿ ಅದಕ್ಕೆ ಹಾಲು ಸೇರಿಸಿ ಕುಡಿಯುವ ಪದ್ದತಿ ತಂದರು. ಈಗ ಅದು ಜನಜನಿತವಾಗಿದೆ…

ಬಾಲ್ಯದಲ್ಲಿ ಟಿವಿಯಲ್ಲಿ ಬರುತ್ತಿದ್ದ ಜಾಹಿರಾತೊಂದರಲ್ಲಿ ಮಲೆಯಾಳಿ ನಟ ಮೋಹನ್‌ಲಾಲ್  ಚಂದಾಗಿ ’ಉಯರಂ ಕೂಡುಂದೋರುಂ ಚಾಯಯುಡೆ ಸ್ವಾದಂ ಕೂಡುಂ’ ಎಂದು ಹೇಳುತ್ತಿದ್ದರು.  ಆ ಚಹಾ ಜಾಹಿರಾತನ್ನು ಊರು ಹೊಡೆದಿದ್ದ ನನಗೆ ಅರ್ಥ ಗೊತ್ತಾಗಿದ್ದು ಕಳೆದ ಎರಡು ವರ್ಷಗಳ ಹಿಂದೆ ಕೊಚ್ಚಿಗೆ ಪ್ರವಾಸಕ್ಕೆ ಹೋದಾಗ ನನಗೂ ಮಲಯಾಳಿ ಬರುತ್ತದೆ ಎಂದು  ಬಟ್ಲರ್ ಭಾಷೆಯಲ್ಲಿ ಕೊಚ್ಚಿಕೊಂಡಿದ್ದೆ. ಅದರ ಅರ್ಥ  ’ಎತ್ತರ ಹೆಚ್ಚಾದಂತೆ ಚಹಾದ ರುಚಿಯೂ ಹೆಚ್ಚಾಗುತ್ತದೆ’ ಎಂದು ಮಿತ್ರರೊಬ್ಬರು ಹೇಳಿದ್ದ ನೆನಪು. ಅದಕ್ಕೆ ಪೂರಕವಾಗಿ ಆಸ್ಸಾಂ ಕಣಿವೆಗಳಲ್ಲಿ, ಡಾರ್ಜಲಿಂಗ್, ನೀಲಗಿರಿ ಬೆಟ್ಟಗಳಲ್ಲಿ, ನಮ್ಮ ಪಶ್ಚಿಮ ಘಟ್ಟಗಳಲ್ಲಿ ಬೆಳೆಯುವ ಚಹಾದ ಬಗೆಗೆ ಚಹಾಪುಡಿ ತಯಾರಿಕಾ ಕಂಪನಿಗಳು ’ನಮ್ಮದು ಹೆಚ್ಚು ಸ್ವಾದ.. ನಮ್ಮದು ಹೆಚ್ಚು ಸ್ವಾದ’ ಎಂದು ಪೈಪೋಟಿ ನಡೆಸುವವೇನೊ? ಬಲ್ಲವರು ಹೆಳಬೇಕಷ್ಟೆ…..  

ಚಹಾ ಜಾಹಿರಾತುಗಳಲ್ಲೂ ಎಂತಹ ವೈವಿದ್ಯ….. ತಬಲಾ ಮಾಂತ್ರಿಕ ಝಾಕೀರ್ ಹುಸೇನ್ ಸೊಗಸಾಗಿ ತಬಲ ಬಾರಿಸುತ್ತಾ ’ವಾಹ್ ತಾಜ್’ ಎನ್ನುತ್ತಾನೆ ನನಗೆ ಸ್ಪೂರ್ತಿ ಎನ್ನುವಂತೆ… ಇನ್ನೊಂದರಲ್ಲಿ ರೂಪದರ್ಶಿಯೊಬ್ಬಳು ’ಬಣ್ಣ, ರುಚಿ, ಶಕ್ತಿ’ ಎಲ್ಲವೂ ಇದರಲ್ಲಿದೆ ಎಂದು ಚಹಾವನ್ನು ಬಿಂಬಿಸುತ್ತಾಳೆ…. ಮತ್ತೊಂದರಲ್ಲಿ ಟಿ.ವಿ ನೋಡುತ್ತ ಕುಳಿತಿದ್ದ ಸೊಸೆ ನೋಡಿ ಅತ್ತೆ ಬೈಯ್ಯುತ್ತಿರುವಾಗಲೆ ಚಹಾ ಕುಡಿದು ಎನರ್ಜಿ ಬಂದು ಅತ್ತೆ ಚಾಳಿಸು ಒರೆಸಿಕೊಂಡು ಹಾಕಿಕೊಳ್ಳುವುದರೊಳಗಾಗಿ ಕೆಲಸ ಮಾಡಿ ಮುಗಿಸಿ ವಿಸ್ಮಯ ಹುಟ್ಟಿಸುತ್ತಾಳೆ. ಇನ್ನೂ ಕೆಲವು ಜಾಹಿರಾತುಗಳಲ್ಲಿ  ’ಚಹಾ ಪೀಯೆ ಅಪನಾಪನ್ ಬಡಾಯಿಯೆ’ ’ತೊಡಾಸ ವಕ್ತ ಚುರಾಕೆ ರಖೊ’ ’ರಿಶತೊಮೆ ಗರ್ಮಾಹಟ್ ಲಾಯೆ’ ಅನ್ನುವಂತಹ ಕಾವ್ಯಾತ್ಮಕ ಸಾಲುಗಳು ಕೇಳಿಸುತ್ತವೆ.  ಇತ್ತಿಚಿಗೆ ವಿಭಿನ್ನ ಧರ್ಮಗಳ ನಡುವೆ ಬಾಂಧವ್ಯ ಬೆಸೆಯುವ, ತೃತೀಯ ಲಿಂಗಿಗಳ ಬಗ್ಗೆ ಗೌರವ ಮೂಡಿಸುವ, ಗಂಡಹೆಂಡರಲ್ಲಿ ಬಾಂಧವ್ಯ ಬೆಸೆಯುವ, ಚಹಾ ಜಾಹಿರಾತುಗಳು ಗಮನ ಸೆಳೆಯುತ್ತಿವೆ. ಹಲವು ಜಾಹಿರಾತುಗಳು  ಪ್ರಚಾರ ವಿಭಿನ್ನವಾಗಿ ಮಾಡಿದರೂ ಚಹಾದ ರುಚಿ ನೀರು, ಸಕ್ಕರಿ, ಚಹಾಪುಡಿ, ಹಾಲು ಹಾಕಿ ಕುದಿಸಿದರಷ್ಟೆ ಆಗೊಲ್ಲ, ಮಾಡುವ ಕೈಗಳ ಮೇಲಿರುತ್ತದೆ ಎಂಬುದಂತೂ ಅಂತಿಮ ಸತ್ಯ. ಚಹಾದ ವೆರಾಟಿ  ಅವರವರ ಭಾವ ಬಕುತಿಯಂತೆ…

ಚಹಾದ ಬಗ್ಗೆ ಅನೇಕರು ಕಥೆಗಳನ್ನು ಬರೆದಿದ್ದಾರೆ ಪದ್ಯಗಳನ್ನು ಗೀಚಿದ್ದಾರೆ.. ಚಹಾ ಟೈಟಲ್ ಮ್ಯಾಲಿನ ಸಾಕಷ್ಟು ಪುಸ್ತಕಗಳು ಬಂದಿವೆ. ಬೀಚಿಯವರ ಕೃತಿ ’ಆರದ ಚಹಾ’ ಸಿದ್ಧಲಿಂಗ ಪಟ್ಟಣಶೆಟ್ಟಿಯವರ  ’ಚಹಾದ ಜೋಡಿ ಚುಡಾದಂಗ’ ಪ್ರಸಿದ್ಧ ಅಂಕಣ.

ಚಹಾ ಕ್ಯಾಲೋರಿ ಇಳಿಸುತ್ತದೆ, ಸಂಧಿವಾತ, ಸೋರಿಯಾಸಿಸ್, ಹೃದಯ ಸಂಬಂಧಿ ಕಾಯಿಲೆ ಬರದಂತೆ ನೋಡಿಕೋಳ್ಳುತ್ತದೆ. ಹಾಗೆ ಹೀಗೆ ಎನ್ನುವ ಲಾಭಗಳು ಇವೆ ಎಂದರೂ ಆಸಿಡಿಟಿ ಮಾಡುತ್ತೆ ಎಂದು ಚಹಾವನ್ನು ದ್ವೇಷಿಸುವವರು ಇದ್ದಾರೆ. ಏನೇ ಇರಲಿ ಚಹಾ ಹಲವರಿಗೆ ಅನಿವಾರ್ಯತೆಗಳಲ್ಲಿ ಒಂದು. ಊಟ ನಾಷ್ಟ ಇರದಿದ್ದರೂ ಚಹಾ ಇದ್ದರೆ ಅದರ ಗತ್ತೆ ಬೇರೆ..ಸ್ವಲ್ಪ ಪೆಟ್ರೋಲ್ ಇದ್ರೂ ಕಿ.ಮಿ ಓಡುವ  ಬೈಕನಂಗೆ…. ಎರಡು ತಾಸು ಊಟವನ್ನು ಮುಂದಕ್ಕೆ ಹಾಕುವ ಶಕ್ತಿ ಇದೆ. ಅಂದ ಹಾಗೆ ನನಗೂ ಬಹಳ ಹೊತ್ತು ಆಯ್ತು ಚಹಾ ಸೇವಿಸದೆ…ಬರಲೇ….?

‍ಲೇಖಕರು Admin

November 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: