ನೂರು ವರ್ಷದ ನಿಶ್ಯಬ್ದ ಭಾಗ -3..

ತೆಲುಗು ಮೂಲ : ಓಲ್ಗಾ

ಅನುವಾದಕರು : ಎ ನಾಗಿಣಿ

 ‘ಮಾಧವಿಯ ಸಮಸ್ಯೆಯಿಂದ ಮನೆಯವರಿಗೆಲ್ಲಾ ತಲೆ ಚಿಟ್ಟು ಹಿಡಿದಿರಬೇಕಾದರೆ ನಿಮ್ಮ ಅಜ್ಜಿ ಕಥೆ ಏನು ಹೊಸದಾಗಿ’ ಸುಮಿತ್ರೆಯ ಗಂಡ ಚಕಿತನಾಗಿ ಕೇಳಿದ.

‘ಅದೇನೋ – ಈ ಮನೆಯಲ್ಲಿ ಯಾವತ್ತೂ ಕಂಡು ಕೇಳರಿಯದ ಘಟನೆಗಳೆಲ್ಲಾ ನಡಿತಿವೆ. ನಮ್ಮ ಅಜ್ಜಿ ಎಲ್ಲರೂ ಒಂದು ಕಡೆ ಸೇರಿ, ನಾನು ಮಾತಾಡಬೇಕು ಅಂದಾಗ ಅವಳ ಆರ್ಡರಿಂಗ್ ನೋಡಿ ನನಗೆ ಮೂರ್ಛೆ ಬಂದಂಗಾಯಿತು. ಯಾವುದೋ ಕೇಡಿನ ಸೂಚನೆ ಇದೆಲ್ಲಾ ಬನ್ನಿ ಈ ಮುದುಕಿ ಏನು ರಾಡಿ ಎಬ್ಬಿಸುವಳೋ’ ಸುಮಿತ್ರ ಗಂಡನಿಗೆ ಶರಟು ಕೈಗಿತ್ತಳು. ‘ಒಟ್ಟಿನಲ್ಲಿ ಮಾಧವಿ ಯಾವುದೋ ಕೆಳಜಾತಿಯ ಹುಡುಗನನ್ನು ಬಹುಶಃ ಮಾದರ ಜಾತಿಯವನನ್ನು ಪ್ರೀತಿಸಿರಬೇಕು. ನಾವು ಒಪ್ಪುವುದಿಲ್ಲವೆಂದು ಗೊತ್ತಾಗಿ ಹೇಗಾದರೂ ಮಾಡಿ ಹತ್ತು ಲಕ್ಷ ಲಪಟಾಯಿಸಬೇಕೆಂದು ಜಮೀನು, ಬೇಸಾಯ ಅಂತೆಲ್ಲಾ ಕತೆ ಕಟ್ಟತಾ ಇರಬಹುದೆಂದು ನನಗೆ ಅನುಮಾನ. ಈಗ ನಿಮ್ಮ ಅಜ್ಜಿಯ ಕತೆ ಏನಿರಬಹುದೋ. ರಜೆ ಬೇರೆ ಹಾಕಿ ಈ ಗಲಾಟೆಯಲ್ಲಿ ಸಿಕ್ಕಿಕೊಂಡೆ. ನನ್ನ ಕರ್ಮ…’ ಆತ ಗೊಣಗಲು ಶುರು ಮಾಡಿದರೆ ಬೇಗ ನಿಲ್ಲಿಸುವವನಲ್ಲ.

ಇವರಿಬ್ಬರೂ ನಡುಮನೆಗೆ ಬರುವಷ್ಟರಲ್ಲಿ ಚಂದ್ರಂ, ಮೋಹನ್ ಸತೀ ಸಮೇತರಾಗಿ ಒಂದೆಡೆ ಕೂತಿದ್ದರು. 

ರಾಮಲಕ್ಷ್ಮಿ,  ಚಲಪತಿ ಅವರ ಎದುರಿಗೆ ಕೂತು ಎಲ್ಲರನ್ನೂ ನೋಡುತ್ತಿದ್ದರು. ಕಲ್ಯಾಣಿ, ಮಾಧವಿ ಅಜ್ಜಿಯ ಎದುರಿಗಿದ್ದ ಸೋಫಾದಲ್ಲಿ ಕೂತಿದ್ದರು. ಸುಮಿತ್ರಾ ವೆಂಕಟರಾವ್ ದಂಪತಿಗಳು ಬಂದು ಕೂರುತ್ತಲೇ

‘ಹೂಂ – ಹೇಳು ಅಂದ ಚಲಪತಿ. ಅಲ್ಲಿಯತನಕ ಕಂಟ್ರೋಲು ಮಾಡಿಕೊಂಡಿದ್ದ ಅಸಹನೆಯನ್ನು ತೋರಗೊಡದ ಪ್ರಯತ್ನವನ್ನೂ ಮಾಡಲಿಲ್ಲ.

ವೆಂಕಾಯಮ್ಮ ಮಗನ ಕಡೆಗೆ, ಸೊಸೆಯ ಕಡೆಗೆ ಒಂದು ಬಾರಿ ನೋಟ ಎಸೆದು, ತಿರುಗಿ ಮೊಮ್ಮಕ್ಕಳನ್ನು ನೋಡಿ-

‘ಹೇಳತೀನಿ – ಇಷ್ಟು ದಿನ ನನ್ನ ಟೈಮಲ್ಲ ಅಂದುಕೊಂಡು ಬಾಯಿ ಮುಚ್ಚಿಕೊಂಡು ಸುಮ್ಮನಿದ್ದೆ. ಈ ದಿನ ನನ್ನ ಮೊಮ್ಮಗಳು ನನ್ನ ಬಾಯಿ ತೆರೆಸಿದಳು. ನನ್ನ ಅಮ್ಮನಿಂದ ಹಿಡಿದು ನನ್ನ ಮೊಮ್ಮಗಳ ತನಕ ಈ ನೂರು ವರ್ಷಗಳ ಕಥೆ ಎಲ್ಲಾನೂ ಹೇಳತೇನೆ.ʼ

ವೆಂಕಾಯಮ್ಮಳ ಕಂಚಿನ ಕಂಠ ಖಂಗನೆ ಮೊಳಗುತ್ತಿದ್ದರೆ ಆಕೆಗೆ ಮಾತೇ ಬರಲ್ಲ ಅಂದುಕೊಂಡಿದ್ದ ಮೊಮ್ಮಕ್ಕಳೆಲ್ಲಾ ಏಕ್ ದಮ್ ಬೆಕ್ಕಸ ಬೆರಗಾಗಿ ಒಬ್ಬರನ್ನೊಬ್ಬರು ನೋಡಿಕೊಂಡರು. 

ಚಲಪತಿರಾವ್ ಮಾತ್ರ-

‘ಈಗ ಯಾಕೆ ಈ ಪುರಾಣ ಎಲ್ಲಾ’ ಎಂದು ಎಗರಾಡಿದ. ಅಸಹನೆಯನ್ನು ಹದ್ದುಬಸ್ತಿನಲ್ಲಿಡುವ ಅಗತ್ಯ ಅವನಿಗಿಲ್ಲ.

ಮುದಿಯಾಕೆ ಮಗನೆಡೆಗೆ ತೀಕ್ಷ್ಣವಾಗಿ ನೋಡಿದಳು.

ʼನಲವತ್ತು ವರ್ಷಗಳಿಂದ ನಿಮ್ಮ ಪುರಾಣ ನಾನು ಕೇಳುತ್ತಿಲ್ಲವಾ? ಒಂದು ದಿವಸ ಎರಡು ತಾಸು ನನ್ನ ಪುರಾಣ ಕೇಳಿದರೆ ನಿನಗಾಗೋ ನಷ್ಟವೇನಿಲ್ಲ. ಪಿಟಕ್ಕೆನ್ನದೆ ಹೇಳುವುದು ಕೇಳಿ’.

ಆಕೆಯ ದನಿಯಲ್ಲಷ್ಟೇ ಅಲ್ಲ, ಆಕೆಯ ಮುಖದಲ್ಲೂ ಒಂದು ನಿಶ್ಚಯ.

ಎಲ್ಲರಿಗೂ ಸೀನ್ ಅರ್ಥವಾಯಿತು. ಆಕೆ ಹೇಳಬೇಕು ಅಂದುಕೊಂಡದ್ದು ಹೇಳುವಳು. ಅದು ಕೇಳದೆ ವಿಧಿಯಿಲ್ಲ.

ಸಂದರ್ಭ ಸಾವರಿಸಿಕೊಂಡು ಕೂತಿತು.

ಆಕೆಯ ಮಾತು ಭೂತವನ್ನು ವರ್ತಮಾನ ಮಾಡುತ್ತಾ- ವರ್ತಮಾನವನ್ನೇ ಭೂತವಾಗಿಸುತ್ತಾ-

‘ನನ್ನ ಅಮ್ಮನ ಹೆಸರು ಅಪ್ಪಮ್ಮ. ಗೊತ್ತು ತಾನೇ. ಕಟ್ಟುಮಸ್ತಾದ ಆಳು. ಬಿಗಿಯಾಗಿದ್ದಳು. ಆಕೆಯ ಕಂಠದ ಮುಂದೆ ನನ್ನ ಕಂಠ ಏನೇನೂ ಅಲ್ಲ. ಮನೆಯ ಹಿಂಬದಿಗೆ ಹೋಗಿ ಕೂಗು ಹಾಕಿದರೆ ಮೈಲಿ ದೂರದಲ್ಲಿ ಹೊಲದಲ್ಲಿದ್ದ ಕೆಲಸದಾಳುಗಳ ಕಿವಿಗೆ ಇಳಿಯಲೇ ಬೇಕು.

ನನ್ನ ಅಮ್ಮ ಮದುವೆಯಾಗಲೇ ಇಲ್ಲ! ಹಾಗೆ ಹೆದರಿ ಸಾಯಬೇಡಿ. ನಾನು ಆಕೆಗೆ ಸಾಕು ಮಗಳು. ಮದುವೆ ಆಗದೆ ಇದ್ದದ್ದು ಯಾಕೆ ಅಂದರೆ – ನನ್ನ ಅಮ್ಮನನ್ನು ಹಡೆದವನೆ ಅವಳ ಪಾಲಿಗೆ ಕಂಟಕವಾದ. ಅವನು ಸೇದೋಗ-

ಆ ದರಿದ್ರದವನು ಇಸ್ಪೀಟು ಸರದಾರ. ಆ ಇಸ್ಪೀಟಿನ ಹುಚ್ಚಿನಿಂದ ಇದ್ದ ಜಮೀನೆಲ್ಲಾ ನುಂಗಿ ಹಾಕಿದ. ಕಟ್ಟ ಕಡೆಯ ಆಸ್ತಿಯಾಗಿದ್ದ ನನ್ನ ಅಮ್ಮನನ್ನು ಹದಿನೈದು ರೂಪಾಯಿಗೆ ಮಾರಿಬಿಟ್ಟ.

ಈ ಸಂಗತಿ ಕಿವಿಗೆ ಬೀಳುತ್ತಲೇ ಅಜ್ಜಿಯ ಎದೆ ಬಡಿತ ನಿಂತು ಸತ್ತಳು.

ನನ್ನ ಅಮ್ಮನನ್ನು ಕೊಂಡುಕೊಂಡ ಸೋಮಯ್ಯನಿಗೆ ಆಗಲೇ ಅರವತ್ತು ತುಂಬಿದ್ದವು. ಹೆಣ್ಣು ಮಕ್ಕಳನ್ನು ಕೊಳ್ಳುವುದೂ, ಮಾರುವುದೂ ನಮ್ಮ ಕಾಲದಲ್ಲೂ ಇದ್ದಿಲ್ಲ. ಆಗಲೂ ‘ಮದುವೆ’ ಅಂತಲೇ ಅಂತಿದ್ದರು.

ಆ ಸೋಮಯ್ಯ ಎಂಟರ ವಯಸ್ಸಿನ ಅಮ್ಮನ ಕೊರಳಿಗೆ ತಾಳಿ ಬಿಗಿದ. 

ಆ..ಆ..ನನ್ನ ಅಮ್ಮ ಮದುವೆ ಆಗಿಲ್ಲ ಅಂದೆ ತಾನೇ – ಆ ಮದುವೆ ನನ್ನ ಅಮ್ಮ ಆಗಿದ್ದಾ?

ನನ್ನ ಅಮ್ಮನ ಅಪ್ಪ ಇದಾನಲ್ಲಾ – ಆ ಮೂದೇವಿ ಮತ್ತೆ ಆ ಸೋಮಯ್ಯ ಮಾಡಿಕೊಂಡರು. ಆ ಮದುವೆಯಾಗಿ ವರ್ಷ ಕಳೆಯುವದರೊಳಗೆ ಅವನು ಸತ್ತ. ಮದುವೆಯ ಹೊತ್ತಿಗೇ ಆತನಿಗೆ ಹೃದಯ ಕಾಯಿಲೆ ಇತ್ತು’.

ವೆಂಕಾಯಮ್ಮ ಆಯಾಸ ತೀರಿಸಿಕೊಳ್ಳಲೆಂಬಂತೆ ಮಾತು ನಿಲ್ಲಿಸಿದಳು. ಮಾಧವಿ ಎದ್ದು ಹೋಗಿ ಅಜ್ಜಿಗೆ ಕುಡಿಯಲು ನೀರು ತಂದುಕೊಟ್ಟು ಆಕೆಯ ಕುರ್ಚಿಯ ಪಕ್ಕದಲ್ಲೇ ನೆಲದ ಮೇಲೆ ಕೂತಳು.

‘ಆ ಸೋಮಯ್ಯನ ಮಕ್ಕಳು ತಂದೆಯ ಆಸ್ತಿಯನ್ನೆಲ್ಲಾ ಬಿಕರಿಯಾಗಿಸುತ್ತಿದ್ದಾಗ ಊರಿನ ಹಿರಿಯರು ಆ ಹುಡುಗಿಗೆ ಅನ್ಯಾಯ ಆಗಬಾರದೆಂದು ಹಟ ಹಿಡಿದರೆ ನಾವೇನೂ ಕಾಳಜಿ ಇಲ್ಲದವರಲ್ಲ ಅನ್ನುತ್ತಾ ಕೆಲಸಕ್ಕೆ ಬಾರದ ನಾಲ್ಕು ಎಕರೆ ಹೊಲವನ್ನು ಅಮ್ಮನ ಹೆಸರಿಗೆ ಮಾಡಿಸಿ ಮಿಕ್ಕದ್ದೆಲ್ಲಾ ಮಾರಿಕೊಂಡು ಪಟ್ಟಣ ಸೇರಿಕೊಂಡರು. ಅಮ್ಮ ವಾಸವಿದ್ದ ಮನೆಯೂ ದಕ್ಕಿತು. ಹತ್ತು ವರ್ಷಗಳಾದರೂ ತುಂಬದ ಪೋರಿ, ಹಿಂದೆ ಮುಂದೆ ಯಾರೂ ಇಲ್ಲ. ನೆರೆ ಹೊರೆಯ ಹೆಂಗಳೆಯರು ಆಸರೆಯಾದರು.

ಬಾಯಿ ಒಳ್ಳೆಯದಾದರೆ ಊರು ಒಳ್ಳೆಯದಾಗುತ್ತೆ ಅಂತಾರೆ. ಆ ಮಾತು ಸುಳ್ಳೇ ಆಗಿದ್ದರೆ ನಮ್ಮ ಅಮ್ಮ ಅಂದು ಹೇಗೆ ಬದುಕು ಕಟ್ಟುತ್ತಿದ್ದಳು?

ನಾಲ್ಕು ಎಕರೆಯನ್ನು ಒಂದು ದಾರಿಗೆ ತಂದು ಬೇಸಾಯ ಮಾಡಲು ಹತ್ತರ ಪೋರಿ ಟೊಂಕ ಕಟ್ಟಿ ನಿಂತಳು.

ನಾನು ಚಿಕ್ಕವಳಿದ್ದಾಗ ಅಮ್ಮ ತಾನು ಪಟ್ಟ ಪಾಡುಗಳನ್ನೆಲ್ಲಾ ಕತೆ ಕಟ್ಟಿ ಹೇಳುತ್ತಿದ್ದಳು.

ಮನೆ, ಹೈನು, ಹೊಲದ-ಕೆಲಸ- ಒಬ್ಬ ಕೆಲಸದಾಳನ್ನು ನೇಮಿಸಿಕೊಂಡು ತಾನೂ ಮೈಮುರಿದು ದುಡಿದು ಸಂಭಾಳಿಸಿಕೊಂಡು ಬಂದಳು.

ನನ್ನನ್ನು ಸಾಕಲು ಕೇಳುವ ಹೊತ್ತಿಗೆ ಅಮ್ಮನಿಗೆ ಇಪ್ಪತ್ತೈದರ ಹರಯ….ನಾಲ್ಕು ಎಕರೆಯ ಬಂಜರು ಭೂಮಿ ಹತ್ತು ಎಕರೆಗಳಷ್ಟು ಬೆಳೆ ಭೂಮಿಯಾಯಿತು.

ಬೆಳಿಗ್ಗೆ ಎದ್ದರೆ ಹೊಲದಲ್ಲೇ ಇರುತ್ತಿದ್ದಳು – ಸೀರೆಯ ನಾಲ್ಕೂ ನೆರಿಗೆ ಮೇಲಕ್ಕೆ ಸಿಕ್ಕಿಸಿ, ಸೆರಗು ಭುಜದ ಮೇಲಿಂದ ಮುಂದಕ್ಕೆ ತಂದು ಸೊಂಟದಲ್ಲಿ ಸಿಕ್ಕಿಸುತ್ತಿದ್ದಳು. ಚೆಂಗಾಯಿ ಪಂಚೆ ಆದರೇನು? ಮಡಿಯಾಗಿ ಹೂವಿನಂತಿತ್ತು.

ಮನೆಯ ಹೊರಗೆ, ಒಳಗೆ ಅಪ್ಪಮ್ಮನೆಂದರೇ ಎಲ್ಲರಿಗೂ ನಡುಕ. ಅಪ್ಪಮ್ಮನವರ ಮಾತೆಂದರೆ ಎಲ್ಲರೂ ವಿಧೇಯರೇ. ವಾರಕ್ಕೊಮ್ಮೆ ಬೇಟೆ ಹಾಕಿಸುತ್ತಿದ್ದಳು. ಬೇಟೆ ಅಂದರೆ ಗೊತ್ತಿಲ್ಲವಾ – ಹೋತವನ್ನು ಕೊಯ್ಯಿಸಿ ಮನೆಗೊಂದರಂತೆ ಮಾಂಸದ ಕುಂಪರಿ ಕಳಿಸುವುದು. ತಿಂಗಳಿಗೊಂದು ಬಾರಿಯಾದರೂ ಹಂದಿಯನ್ನು ಹಾಕಿಸುತ್ತಿದ್ದಳು. ಅಪ್ಪಮ್ಮನವರು ಕಳಿಸಿದ ಮಾಂಸದ ಕುಂಪರಿ ಎಂದರೆ ಒಂದು ಸಣ್ಣ ಪೀಸೂ ಕಡಿಮೆ ಇರಲ್ಲ. ಎರಡು ಪೀಸು ಹೆಚ್ಚಿರಲೇಬೇಕು’.

ವೆಂಕಾಯಮ್ಮ ತನ್ನ ಬಾಲ್ಯಕ್ಕೆ ಮರಳಿ ಮಾಂಸದ ಕುಂಪರಿಗಳನ್ನು ಮನೆ ಮನೆಗೆ ಹಂಚುತ್ತಿರುವಂತೆ ಸಂತೋಷಗೊಂಡು ನಗುತ್ತಿದ್ದಳು.

ಚಲಪತಿರಾವನಿಗಾದರೋ ಆ ಮುದುಕಿಯ ಬಾಯಿ ಮುಚ್ಚಬೇಕು, ಇದೆಲ್ಲಾ ಮರೆತು ಬಿಡುವ ಹಾಗೆ ಒಂದು ಸ್ಕಾಚ್ ಬಾಟಿಲ್ ಎತ್ತಿ ಕುಡಿಯಬೇಕೆಂಬ ಆಸೆ ಹುಟ್ಟುತ್ತಿತ್ತು. ರಾಮಲಕ್ಷ್ಮಿಗೆ ಅತ್ತೆಮ್ಮ ಈಗ ಯಾಕೆ ಈ ಪುರಾಣ ಬಿಚ್ಚುತ್ತಿರುವಳೋ ತೋಚದೆ ಕಸಿವಿಸಿಗೊಳ್ಳುತ್ತಿದ್ದಳು. ಅಳಿಯಂದಿರು ಇದ್ದಾರೆ ಮನೆಯಲ್ಲಿ – ಅವರಿಗೆ ಇಷ್ಟವಾದ ಅಡುಗೆ ಮಾಡಬೇಕು. 

ಮಿಕ್ಕವರು ಕೂಡ ಸಣ್ಣದೊಂದು ನೆಪ ಸಿಕ್ಕರೆ ಸಾಕು, ಅಲ್ಲಿಂದ ಜಾರಿಕೊಳ್ಳಲು ನೋಡುತ್ತಿದ್ದರು. ಅದ್ಯಾಕೋ ಫೋನಾದರೂ ಮೊಳಗುತ್ತಿಲ್ಲ.

ವೆಂಕಾಯಮ್ಮ ಮಾತಾಡುತ್ತಲೇ ಇದ್ದಳು.

ʼನಾನು ಚಿಕ್ಕವಳಿದ್ದಾಗ ಅಮ್ಮ ಕಣ್ಣೀರು ಹಾಕಿದ್ದು ನೋಡೇ ಇಲ್ಲ. ಯಾವಾಗಲೂ ನಗುತ್ತಲೇ ಇದ್ದಳು. ಹಣೆಯಲ್ಲಿ ಬೊಟ್ಟು ಇಲ್ಲದಿದ್ದರೆ ಏನಂತೆ ಮುಖದಲ್ಲಿ ಕಳೆ ಎದ್ದು ತುಳುಕುತ್ತಿತ್ತು.

ಹಗಲೆಲ್ಲಾ ಹೊಲದಲ್ಲಿ ಮೈಮುರಿದು ದುಡಿಯುತ್ತಿದ್ದಳು. ಮನೆಗೆ ಬಂದು ಬಿಸಿ ಬಿಸಿ ನೀರು ಹುಯ್ದುಕೊಂಡು ಕಣ್ಣಿ  ಮೊಸರು,  ಅನ್ನ ಉಂಡು ಗೊರಕೆ ಹೊಡೆದು ನಿದ್ದೆ ಹೋಗುತ್ತಿದ್ದಳು.

ಇನ್ನು ಹೊಲದ ಕೆಲಸಕ್ಕೆ ಬಂದರೆ – ಅವಳಿಗೆ ಗೊತ್ತಿಲ್ಲದ ಕೆಲಸವೇ ಇಲ್ಲ.

ಅಮ್ಮನೊಂದಿಗೆ ಹೊಲಕ್ಕೆ ಹೋಗುತ್ತಾ ಅಮ್ಮನ ಸೆರಗು ಹಿಡಿದು ಸುತ್ತುತ್ತಾ ಸುತ್ತುತ್ತಾ ನಾನೂ ಎಲ್ಲಾ ಕೆಲಸಗಳನ್ನು ಕಲಿತೆ.

‘ಅಪ್ಪಮ್ಮನ ಮಗಳು ಹೊಲದಿಂದ ಮನೆಗೆ ಮನೆಯಿಂದ ಹೊಲಕ್ಕೆ ಅದೇನು ಸುಂಟರಗಾಳಿ ಥರ ಸುತ್ತುತಾಳೆʼ ಅಂತಿದ್ದರು ಹೆಂಗಳೆಯರೆಲ್ಲ.

ಮದುವೆಯಾಗದೇ ನನ್ನ ಅಮ್ಮ ಯಾವ ಸುಖವೂ ಕಂಡಿಲ್ಲ ಅಂದುಕೊಳ್ಳಬೇಡಿ. ಆಕೆಯ ಸಂಬಂಧಗಳು, ವ್ಯವಹಾರಗಳೂ ಆಕೆಗಿದ್ದವು, ಅವೆಲ್ಲಾ ಅಚ್ಚುಕಟ್ಟಾಗಿ ನಿಭಾಯಿಸಿಕೊಳ್ಳುತಿದ್ದಳು. ಈ ಬಗ್ಗೆ ಯಾರೂ ಚಕಾರ ಎತ್ತುವುದಿರಲಿ, ಬಾಯಿ ಕೂಡಾ ಬಿಚ್ಚುತ್ತಿರಲಿಲ್ಲ.

ನಾನು ಮೈ ನೆರೆತ ನಂತರ ‘ಅಪ್ಪಮ್ಮಾ ಮಗಳ ಮದುವೆ ಯಾವಾಗಲೇ’ ಎಂದು ಹೆಂಗಳೆಯರೆಲ್ಲಾ ಕೇಳುತ್ತಿದ್ದರು.

‘ಆಂ? ಮಾಡಿಕೊಂಡು ನೀವು ಏನೇ ಸುಖ ಕಂಡಿದ್ದೀರಿ? ಬೆಳಿಗ್ಗೆ ಎದ್ದರೆ ಚಪ್ಪಲಿ ಏಟು, ಉಗಿಸಿಕೊಳ್ಳುವುದೇ ತಾನೇ’ ನನಗೆ,  ನನ್ನ ಮಗಳಿಗೆ ಆ ದೌರ್ಭಾಗ್ಯ ಇಲ್ಲ ಅಂತ ನಿಮಗೆ ಹೊಟ್ಟೆಕಿಚ್ಚೇನ್ರೇ’ ಅಂತಿದ್ದಳು.

‘ಸಾಕು ಮಾಡೇ! ಬೈಗುಳಾನೇ ಇರಲಿ, ಚಪ್ಪಲಿ ಏಟೇ ಇರಲಿ ಹೆಣ್ಣಾಗಿ ಹುಟ್ಟಿದ ಮೇಲೆ ಅನುಭವಿಸದೇ ವಿಧಿಯಿಲ್ಲ – ಪುಣ್ಯದೊಂದಿಗೆ ಪುರುಷ ಅಂತಾರೆ. ಅಳಿಯನ ಏಟಿಗೆ ಹೆದರಿ ಮಗಳಿಗೆ ಮದುವೆ ಮಾಡಲ್ಲವೇನೇ’ ಅಂತ ಅವರು ಕೇಳಿದರೆ

‘ಯಾಕೆ ಮಾಡಲ್ಲ – ನನ್ನ ಅಪ್ಪನ ಹಾಗೇ ನಾನೂ ಅವಳಿಗೆ ಮುದುಕನೊಬ್ಬನನ್ನು ತಂದು ಕಟ್ಟತೀನಿ. ಅವನು ಸತ್ತ ಮೇಲೆ ಅವಳೂ ನನ್ನ ಹಾಗೆ ರಾಣಿಯಾಗಿ ಬದುಕುವಳು’ ಎಂದು ಪಕಪಕ ನಗುತ್ತಿದ್ದಳು

‘ನೀನು ಎಲ್ಲರ ಹಾಗಲ್ಲಾ ಅಪ್ಪಮ್ಮಾ’ ಎಂದು ಎಲ್ಲರೂ ನಗುತ್ತಿದ್ದರು.

ನನ್ನ ಅಮ್ಮ ನಿಜವಾಗಲೂ ನನ್ನನ್ನು ಮುದುಕನಿಗೆ ಕಟ್ಟುವಳಾ ಅಂತ ನನಗೆ ಆತಂಕ ಆಗುತ್ತಿತ್ತು.

ನನ್ನ ಗೆಳತಿಯರೆಲ್ಲಾ ರೇಗಿಸುತ್ತಿದ್ದರು. 

ನನ್ನ ಹೆತ್ತವರ ಕಾಟ ತಾಳಲಾಗದೇ ಅಮ್ಮ ನನಗೆ ಮದುವೆ ಮಾಡಿದಳು. ಅವರದು ನಮ್ಮೂರೇ! ನಮಗಿಂತ ಬಡವ. ಅವನೇ ನಮ್ಮ ಮನೆಗೆ ಬಂದ.

ಅಂತೂ ತುಂಬಾ ವರ್ಷಗಳ ನಂತರ ಆ ಮನೆಗೆ ಒಬ್ಬ ಗಂಡಸು ಬಂದ. ನನಗೇ ಒಂಥರದ ಕಸಿವಿಸಿ. ಅಮ್ಮನಿಗೆ ಹೇಗಿತ್ತೋ-

ಆತ ಬಂದಾಗಿನಿಂದ ಅಮ್ಮನ ಅರ್ಧ ಬಲವೇ ಕುಂಗಿದಂತಾಯಿತು. ಅದುವರೆಗೆ ಗೊತ್ತಿಲ್ಲದ ಹೊಸ ಬೆಳೆಗಳನ್ನು ಹಾಕಿದ. ಅಮ್ಮ ಏನಯ್ಯಾ ಅಂದರೆ, 

‘ನಿನಗೇನು ಗೊತ್ತು. ನನಗೆ ಗೊತ್ತು’ ಅನ್ನುತಿದ್ದ.

ಹೊಸ ಬೆಳೆ ಎಂಬುದು ಮಾತಿಗಷ್ಟೇ. ಅವನಿಗೆ ಬೇಸಾಯವೇ ಗೊತ್ತಿಲ್ಲ. ಹೊಸ ಬೆಳೆಗಳ ಬೇಸಾಯ ಅಮ್ಮನಿಗೂ ಗೊತ್ತಿಲ್ಲ. ಅಮ್ಮ ತಾನಾಗಿ ಏನಾದರೂ ಮಾಡಿದರೆ ನಿನ್ನಿಂದಲೇ ಹಾಳಾಯಿತು ಅನ್ನುತಿದ್ದ. ಸುಮ್ಮನಿದ್ದರೆ ಕೆಲಸಗಳ್ಳಿ ಅನ್ನುತಿದ್ದ. ಕೆಲಸದಾಳುಗಳನ್ನು ನೇಮಿಸಿ ಟೌನಲ್ಲಿ ಅಲೆಯುತ್ತಿದ್ದ. 

ಅಮ್ಮ ಎಂದಾದರೂ ಏನಯ್ಯಾ ಇದೆಲ್ಲಾ ಎಂದು ಕೇಳಿದರೆ ಉರಿಗಣ್ಣು ಮಾಡಿಕೊಂಡು ನನ್ನನ್ನು ಮೂಳೆ ಮುರಿಯುವ ಹಾಗೆ ಹೊಡೆಯುತ್ತಿದ್ದ.

ನನ್ನನ್ನು ಹೊಡೆಯುವನೆಂಬ ಒಂದೇ ಕಾರಣಕ್ಕೆ ಯಾರಿಗೂ ಹೆದರದ ಅಮ್ಮ ಅಳಿಯನಿಗೆ ಹೆದರಿದ್ದಳು.

ಅಮ್ಮನಿಗೆ ಕ್ರಮೇಣ ಬೇಸಾಯ, ಮನೆ ಕೆಲಸ ಅಂದರೆ ಜುಗುಪ್ಸೆ ಬಂತು. ಅದನ್ನು ಕಣ್ಣು ಬಿಟ್ಟು ನೋಡುತ್ತಿದ್ದೆನೇ ಹೊರತು ನನಗೂ ಗಂಡಸಿನ ಎದುರು ಬಾಯಿ ಮುಚ್ಚಿ ಹೋಗುತ್ತಿತ್ತು.

ಗಂಡಸು ಇಲ್ಲದಾಗ ಅದೆಷ್ಟು ಧೈರ್ಯದಿಂದ ಇದ್ದೆವು! ಅವನು ಬರುವನೆಂದಾಗಲೇ ನಡುಕ ಶುರುವಾಗುತ್ತಿತ್ತು. ಬಾಯಿ ತೆರೆಯಲು ಮೊಂಡು ಹಟ ಮಾಡುತಿತ್ತು. ಅದೇನು ಜಾಡ್ಯವೋ!

ಅಮ್ಮನ ದನಿಯೆಲ್ಲಾ ಎಲ್ಲಿ ಅಡಗಿ ಹೋಯಿತೋ ಮೂಕಿಯಾಗಿಬಿಟ್ಟಳು. ನನ್ನ ನೋಡಿದಾಗಲೆಲ್ಲ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಿದ್ದಳು. ʼಮದುವೆ ಮಾಡಿ ನಿನ್ನ ಕೊರಳು ಕೊಯ್ದೆʼ ಅನ್ನುತಿದ್ದಳು. ಹಾಗೇ ಹತ್ತು ವರ್ಷ ಕಳೆದವು.

ಆ ಹತ್ತು ವರ್ಷಗಳಲ್ಲಿ ನನಗೆ ಮೂರು ಜನ ಗಂಡು ಮಕ್ಕಳು ಹುಟ್ಟಿ ಸತ್ತು ಹೋದವು. ಮಕ್ಕಳು ಬದುಕುತ್ತಿಲ್ಲವೆಂಬ ದಿಗಿಲು, ಅಳಿಯನ ಯಜಮಾನಿಕೆ.

ಕೊನೆಕೊನೆಗೆ ಅಮ್ಮನನ್ನು ಹೊಲಕ್ಕೆ ಹೆಜ್ಜೆ ಇಡಲೂ ಅವನು ಬಿಟ್ಟಿಲ್ಲ.

ಬೆಳೆಬೆಳೆಗೂ ನಷ್ಟ – ಸಾಲ ಏರುತ್ತ – ಅದನ್ನು ತೀರಿಸಲು ಹೊಲ ಕರಗುತ್ತಿದ್ದಿತು.

ಟೌನಲ್ಲಿ ಅವನು ಸಾಗಿಸುವ ವ್ಯವಹಾರಗಳ ಬಗ್ಗೆ ಕೇಳದಿದ್ದರೂ ಯಾರೋ ಒಬ್ಬರು ಬಂದು ಕಿವಿಗೆ ಹಾಕಿ ಹೋಗುತ್ತಿದ್ದರು. ಕೊನೆಗೆ ಹೊಲದ ದಿಗಿಲಿನಲ್ಲೇ ಅಮ್ಮ ಕಣ್ಣು ಮುಚ್ಚಿದಳು. ಐವತ್ತು ತುಂಬುವದರೊಳಗೇ ಬಂಗಾರದಂಥ ಹೆಣ್ಣು ಮಣ್ಣುಗೂಡಿಬಿಟ್ಟಳು.

ಅಮ್ಮ ಹೋದ ಒಂದು ವರ್ಷಕ್ಕೆ ಅನಿಸುತ್ತದೆ ನನ್ನ ಹೊಟ್ಟೆಗೆ ಇವನು ಬಿದ್ದ. ಹುಟ್ಟುತ್ತಲೇ ರೋಗಗಳಿಂದ ಹುಟ್ಟಿದ. ಹುಡುಗನಿಗೆ ಬರದ ರೋಗವಿಲ್ಲ. ಎಷ್ಟು ಹೈರಾಣಾಗಿದ್ದೆ! ಇವನು ಪಾರಾಗಿ ಹೇಗೋ ಬದುಕಿದ ಅಂತ ನಂಬಿಕೆ ಹುಟ್ಟಲು ಎಂಟು ವರ್ಷ ಹಿಡಿಯಿತು. ಇವನಿಗೆ ಗುಣವಾಗುವ ಹೊತ್ತಿಗೆ ಇವನ ಅಪ್ಪನಿಗೆ ಕ್ಷಯ ರೋಗ ಹಿಡಿಯಿತು. ಕೆಮ್ಮಿ, ಕೆಮ್ಮಿ ಎರಡು ವರ್ಷಗಳ ಕಾಲ ನನ್ನಿಂದ ಚಾಕರಿ ಮಾಡಿಸಿಕೊಂಡು, ಹೊಲ ಮಾರಿ, ಸಾಲ ಉಳಿಸಿ ಸತ್ತ. ನಂತರ ಎರಡೆಕರೆ ಹೊಲ, ಮನೆ ಈ ಮಗು  ನನಗೆ ಸ್ವಲ್ಪ ಉಸಿರಾಡುವ ಹಾಗಾಯಿತು.

ಎಲ್ಲಿಲ್ಲದ ಶಕ್ತಿ ಕೂಡಿ ಬಂತು. ಎರಡೆಕರೆ ಆದರೇನು ಹೊಲದಲ್ಲಿ ದುಡಿದು, ಒಂದು ಹೈನು ಸಾಕಿಕೊಂಡು ಬದುಕಲಾರೆನೇ? ಮಗುವನ್ನು ಸಾಕಲಾರೆನೇ?

ಆ ಮನೆಯಲ್ಲಿ ಒಂದು ಗಂಡಿನ ಪೀಡೆ ತೊಲಗಿತು ಎನ್ನುವಷ್ಟರಲ್ಲಿ ಇನ್ನೊಂದು ಪೀಡೆ ಬೆಳೆಯುತ್ತಲೇ ಇದೆ. ಗಂಡ ಸತ್ತರೂ ಹಗಲೆನ್ನದೆ ರಾತ್ರಿ ಎನ್ನದೆ ದುಡಿದು ಮಗನನ್ನು ಸಾಕಿದೆ. ಸಾಲ ತೀರಿಸಿದೆ. ಎರಡೆಕರೆ ಉಳಿಸಿದೆ. ನಾಲ್ಕು ಎಮ್ಮೆ ಕಟ್ಟಿದೆ. ಊರಲ್ಲಿ ಹೈಸ್ಕೂಲು ಆದ ನಂತರ ಅವನು ಈ ಹೈದರಾಬಾದಿಗೆ ಬಂದ. ‘ಎಂಥದೋ ನೌಕರಿ’ ಅಂದ. ಬೇಡ ಅಂದರೆ ಕೇಳ್ತಾನಾ? ನಾಲ್ಕು ವರ್ಷಗಳ ನಂತರ ‘ಯಾಪಾರ’ ಅಂದ.

‘ನಿನ್ನ ಕಷ್ಟ ನಿನಗೆ. ನನ್ನ ಕಷ್ಟ ನನಗೆʼ ಎಂದೆ.

‘ವ್ಯಾಪಾರಕ್ಕೆ ಬಂಡವಾಳ ಬೇಕು,  ಹೊಲ ಮಾರಬೇಕು ಅಂದ’. ನನ್ನ ಎದೆ ಒಡೆದು ಹೋಯಿತು. ಆ ಎರಡೆಕರೆಯಲ್ಲೇ ನನ್ನ ಜೀವ ನನ್ನವ್ವನ ಜೀವ ಉಳಿದಿದೆ, ಅದನ್ನು ಮಾರಿಕೊಂಡು ತಿಂದರೆ ನನ್ನ ಅವ್ವನನ್ನ ಮಾರಿಕೊಂಡ ಹಾಗೆಂದು ಹೇಳಿದೆ.  ಕೇಳಿದನಾ ಇವನು ಕಣ್ಣೀರು ಹಾಕಿದೆ. ಅವನು ಇನ್ನೂ ಹಟ ಹಿಡಿದ.

ಮನೆಯಲ್ಲಿ ಇದ್ದೂ ಊಟ ಮುಟ್ಟಿಲ್ಲ. ನಾನೂ ಉಂಡಿಲ್ಲ.

ಆತ ನನ್ನ ಮನೆಯಲ್ಲಿ ಉಪವಾಸ ಇದ್ದಾಗ ನಾನು ಹೇಗೆ ಉಣ್ಣಲಿ. ನಾನೂ ಉಂಡಿಲ್ಲ.

ಆದರೆ ಅವನು ಗಂಡು. ಹೆಣ್ಣು ಉಂಡಿಲ್ಲವಾದರೆ ಅದು ಸುದ್ದಿಯಲ್ಲ.

ಗಂಡಸು ಉಂಡಿಲ್ಲವೆಂಬ ಸುದ್ದಿ ಕೇಳಿ – ಊರೆಲ್ಲಾ ಆಡಿಕೊಂಡಿತು.

ಅವನೇ ಗೆದ್ದ. ಊರಲ್ಲಿ ರಾಮಪ್ಪಣ್ಣ, ಧರ್ಮಯ್ಯ ಭಾವ, ಸುಬ್ಬಯ್ಯ ಮಾವ, ಲಚ್ಚುವಯ್ಯ ತಾತ ಎಲ್ಲರೂ ಬಂದರು.

‘ಮಗ ವ್ಯಾಪಾರ ಮಾಡಿ ಗಳಿಸಿದರೆ ಇಂತಾ ಹತ್ತಾರು ಎಕರೆಗಳು ಕೊಂಡುಕೊಳ್ಳಬಹುದು. ಹೆಣ್ಣಾಗಿ ನಿನಗೆ ಈ ಹಟ ಸರಿಬರಲ್ಲ’ ಅಂದರು.

ʼಸತ್ಯವಾದ ಮಾತು. ಹಟ ಇರುವುದು ಗಂಡಸರಿಗಷ್ಟೇ ಅನಿಸುತ್ತದೆ. ಹೆಣ್ಣಾದ ನನಗೇಕೆ?ʼ

ಗಂಡಸರೆಲ್ಲ ಮೀಸೆ ತಿರುವಿಕೊಂಡು ನಗಬಹುದು.

ಇದ್ದ ಎರಡೆಕರೆಯೂ ಮಾರಿ, ನನಗೂ ಕೈಗಳಿವೆ ಅನ್ನುವುದೂ ಮರೆತು ನನ್ನೆದುರಿಗೇ ಆ ಹಣ ನನ್ನ ಮಗನ ಕೈಯ್ಯಲ್ಲಿ ಸುರಿದರು.

ನನ್ನ ಮಗ ‘ಅಮ್ಮಾ ಊಟ ಬಡಿಸು ಅಂದ’. ನಿಮಿಷಗಳಲ್ಲಿ ಕುದಿಸಿ ಹಾಕಿದೆ. ನಾನು ಬಡಿಸಿಕೊಳ್ಳುವ ಮೊದಲೇ ‘ಹೋಗಿ ಬರತೀನಿ’ ‘ಮತ್ತೆ ಬಂದು ನಿನ್ನ ಕರೆದುಕೊಂಡು ಹೋಗ್ತೀನಿ’ ಅಂದು ಹೋಗಿಯೇ ಬಿಟ್ಟ. 

ಆಮೇಲೆ ಅವನಿಗಿಷ್ಟವಾದ ಹೆಣ್ಣನ್ನೇ ಮದುವೆಯಾದ. ಚೆನ್ನಾಗಿಯೇ ಇದ್ದ. ಐದು ವರ್ಷಕ್ಕೆ ಮತ್ತೊಮ್ಮೆ ಬಂದ. ಅಷ್ಟೊತ್ತಿಗೆ ನಮ್ಮೂರು ಕೂಡ ಬದಲಾಯಿತು. 

ಭೂಮಿ, ಮನೆಯ ಜಾಗಗಳ ಬೆಲೆಗಳೂ ಹೆಚ್ಚಾದವು. ‘ವ್ಯಾಪಾರ ಎ ಕ್ಲಾಸಾಗಿದೆ. ಅದನ್ನು ಇನ್ನೂ ಬೆಳೆಸಬೇಕು. ಮನೆಗೆ ಒಳ್ಳೆಯ ದರ ಕುದುರಿದೆ. ಮಾರಿಕೊಂಡು ಹೋಗ್ತೀನಿ’ ಅಂದ. ‘ಇನ್ನು ಮೇಲೆ ನೀನು ನಮ್ಮೊಟ್ಟಿಗೇ’ ಅಂದ. ಅಗೋ ಆ ದಿನ ಮುಚ್ಚಿಹೋದ ನನ್ನ ಬಾಯಿ ಈ ದಿನದವರೆಗೂ ತೆರೆದುಕೊಂಡಿಲ್ಲ. ನನ್ನ ಜಮೀನು ಹೋಯಿತು. ನನ್ನ ಮನೆ ಹೋಯಿತು. ನಾನು ಹೆಣಕ್ಕೆ ಸಮ ಆದೆ.

ಈ ದಿನ ಇದೆಲ್ಲಾ ನನ್ನ ಸ್ವಯಾರ್ಜಿತ ಅಂತ ಇವ ಅಂದಾಗ ತಾಳಲಾಗದೇ ಈ ಕಥೆಯೆಲ್ಲಾ ಹೇಳಿದೆ. ಹೆಣ್ಣನ್ನು ಭೂಮಿಗೆ ದೂರ ಮಾಡಿ ನೀವು ಸೌಧಗಳನ್ನು ಕಟ್ಟಿದಿರಿ. ನನಗೆ ಈ ಸೌಧದಲ್ಲಿ ಸುಖವಿಲ್ಲ. ಅದು ನಿಮಗೆ ಗೊತ್ತಿಲ್ಲ. 

ಸೌಧಗಳಲ್ಲಿ, ಕಾರುಗಳಲ್ಲಿ, ಐಸು ಮಿಷನ್ನುಗಳಲ್ಲಿ ಸುಖ ಇದೆಯೆಂಬ ಭ್ರಮೆಯನ್ನು ಯಾರು ಹುಟ್ಟಿಸಿದರೋ ಕಾಣೆ, ಆ ಭ್ರಮೆಗೆ ಎದುರೇ ಇಲ್ಲದಂತಾಗಿದೆ‌.

ನೀವೆಲ್ಲಾ ಸುಖವಾಗಿದ್ದೀರೆಂದು ನನಗಂತೂ ಅನ್ನಿಸುತ್ತಿಲ್ಲ. ನಾನು ಮಾತನಾಡುವುದಿಲ್ಲವಾದರೂ ಎಲ್ಲಾ ಕೇಳಿಸಿಕೊಳ್ಳತೇನೆ.

ಈ ವ್ಯಾಪಾರದಲ್ಲಿ ರೂಪಾಯಿ ರೂಪಾಯಿಯಾಗಿಲ್ಲ, ನೂರು ರೂಪಾಯಿಯಾಯಿತು. ಹಾಗೆ ಆಗಿದ್ದು ನಿಮ್ಮ ಜಾಣತನ ಆಯಿತು.

ಅದೆಲ್ಲಾ ನನಗೆ ಬೇಕಿಲ್ಲ – ಸುಮ್ಮನಿರಲಾಗದೇ ಹೇಳಿದೆ.

ಇಷ್ಟು ವರ್ಷಗಳ ನಂತರ ನನ್ನ ಮೊಮ್ಮಗಳನ್ನು ನೋಡುತಿದ್ದರೆ ನಮ್ಮ ಅಪ್ಪಮ್ಮಳನ್ನು ನೋಡಿದ ಹಾಗೇ ಇದೆ.

ಅವಳಿಗೆ ಬೇಸಾಯ ಮಾಡಬೇಕೆಂಬ ಆಸೆ. ಈ ಕೊನೆಗಾಲದಲ್ಲಿ ನನಗೂ ಮಣ್ಣೆಂದರೆ ಇಷ್ಟ ಆಗತಾ ಇದೆ.

ನನ್ನ ಎರಡೆಕರೆ ಹೊಲದ ಹಣ, ಮನೆ ಮಾರಿದ ಹಣಕ್ಕೆ ಒಂದರ ಬಡ್ಡಿಯ ಲೆಕ್ಕ ಕಟ್ಟಿ ಕೊಡು.

ನಿನ್ನ ಪಾಪದ ಬಡ್ಡಿ ನಾನು ಕೇಳಲ್ಲ.

ಕೊಟ್ಟಿಲ್ಲವಾದರೆ ನಾನೂ ನನ್ನ ಮೊಮ್ಮಗಳೂ ಕೋರ್ಟಿಗೆ ಹೋಗುತೇವೆ.

ಕೊಟ್ಟೆಯಾದರೆ ನಾವಿಬ್ಬರೂ ಅವಳು ಕೊಳ್ಳುವ ಜಮೀನಿಗೆ ಹೋಗತೇವೆ.

ನಾನು ಆ ಮಣ್ಣಿನಲ್ಲಿ ಒಂದಾಗತೇನೆ.

ಹೆಣ್ಣಿಗೆ ಬೇಸಾಯ ಗೊತ್ತಿಲ್ಲವೆಂಬ ಮಾತು ಶುದ್ಧ ಸುಳ್ಳು. ಬೇಸಾಯ ಗೊತ್ತಿರುವುದೇ ಹೆಣ್ಣಿಗೆ. ಅವಳ ಕೈಯ್ಯಿಂದ ಬೇಸಾಯ ಕಿತ್ತುಕೊಂಡು, ಭೂಮಿ ಕಿತ್ತುಕೊಂಡು ಎಲ್ಲಾ ಸರ್ವನಾಶ ಮಾಡಿದ್ದೀರಿ.

ನನ್ನ ಮೊಮ್ಮಳಿಗೆ ಹಣ ಕೊಟ್ಟು ಬಿಡು.

ನಮ್ಮ ಅಪ್ಪಮ್ಮನನ್ನು ಮಾರಿದಾಗ ಅವಳ ಅವ್ವ ಬಾಯಿ ತೆರೆದಿಲ್ಲ. ಗಂಟಲೊಳಗಿನ ಮಾತು ಗಂಟಲಲ್ಲೇ ನುಂಗಿ ಸತ್ತಳು.

ನನ್ನ ಹೆತ್ತವರು ನನಗೆ ಮದುವೆ ಮಾಡಬೇಕೆಂದು ಹಟಕ್ಕೆ ಬಿದ್ದು ನನ್ನ ಕೊರಳಿಗೆ ತಾಳಿ ಬಿಗಿದಾಗ ಅಪ್ಪಮ್ಮ ಬಾಯಿ ಬಿಡಲಿಲ್ಲ.

ನನ್ನ ಕಟ್ಟಿಕೊಂಡವನು ನನ್ನನ್ನು ದನಕ್ಕೆ ಬಡಿದ ಹಾಗೆ ಬಡಿದು ಭೂಮಿಯನ್ನು ನಾಶ ಮಾಡಿದಾಗ  ಅಷ್ಟೊಂದು ಧೈರ್ಯವಂತೆಯಾದ ನಮ್ಮ ಅಪ್ಪಮ್ಮನೂ ಬಾಯಿ ತೆರೆದಿಲ್ಲ.

ನುಂಗಿಕೊಂಡು ನುಂಗಿಕೊಂಡು ಸತ್ತಳು.

ಇಷ್ಟು ವರ್ಷಗಳ ಕಾಲ ನಾನೂ ದನಿ ಎತ್ತದೇನೇ ಬಿದ್ದಿರುವೆ.

ಈ ದಿನ ನನ್ನ ಮೊಮ್ಮಗಳು ದನಿ ಎತ್ತಿದಳು. ಅವಳಿಗೆ ಧೈರ್ಯ ಬಂದಿದೆ.

ಅವಳ ಓದೋ, ನೋಡಿದ ಪ್ರಪಂಚವೋ ಯಾವುದೋ ಗೊತ್ತಿಲ್ಲ, ಅವಳು ಬಾಯಿ ತೆಗೆದಿದಾಳೆ.

ಗಂಡಸಿನ ಎದುರಿಗೆ ಬಾಯಿ ಬಿಡದಿದ್ದರೆ ಹೆಣ್ಣು ಮಾತ್ರವಲ್ಲದೆ ಇಡೀ ಭೂಮಿಯೇ ನಾಶ ಆಗುತ್ತೆ ಅನ್ನುವ ಸತ್ಯ ನನಗೂ ಅರ್ಥವಾಗಿದೆ.

ಇನ್ನೂ ನಾನು ಬಾಯಿ ಮುಚ್ಚಿಕೊಂಡಿರಲ್ಲ.

ನೂರು ವರ್ಷದ ಹಿಂದೆ ನಮ್ಮ ಅಪ್ಪಮ್ಮನನ್ನು ಮಾರಿದಾಗ ಬಿದ್ದು ಹೋಗಿದ್ದ ನಮ್ಮ ಅಜ್ಜಿಯ ದನಿಯೇ ಈ ದಿನ ತೆರೆಯಿತೆಂದು ಕಾಣುತ್ತದೆ.

ನಮ್ಮ ಮನೆಯಲ್ಲಿ ಗಂಡಿನ ಮದಕ್ಕೂ, ಹೆಣ್ಣಿನ ಮೌನಕ್ಕೂ ನೂರು ವರ್ಷ ತುಂಬಿವೆ.

‘ನಡಿಯವ್ವಾ – ಹೋಗೋಣ’ ಮಾಧವಿಯ ಹೆಗಲಿನ ಮೇಲೆ ಕೈ ಹಾಕಿದಳು ವೆಂಕಾಯಮ್ಮ.

ವೆಂಕಾಯಮ್ಮಳ ಮಡಿಲಲ್ಲಿ ತಲೆ ಇಟ್ಟು ಮಾಧವಿ ಬೋರೆಂದು ಅತ್ತಳು.

‘ಅಳಬೇಡವೇ ನನ್ನ ಬಂಗಾರ – ಈ ಅಳುವೇ ನಮ್ಮನ್ನು ಈ ಗತಿಗೆ ತಂದಿಟ್ಟದ್ದು. ಅಳಬೇಡ. ಏಳು, ಎದ್ದೇಳು.ʼ

ಈ ಮುದುಕಿಯೇ ಅವಳಿಗೆ ಬೇಕಾದ ಆಸರೆ ಎಂದು ಗೊತ್ತಾದ ಮಾಧವಿಗೆ ಇದುವರೆಗೆ ಇಲ್ಲದ ಧೈರ್ಯ ಬಂದಿತು.

ಅಜ್ಜಿಗೆ ಕೋಲು ಹಿಡಿಯಲು ಸಹಾಯ ಮಾಡಿದಳು.

ಕೋಲನ್ನು ತೆಗೆದುಕೊಳ್ಳುತ್ತಾ ಮಾಧವಿಯ ಮುಖ ನೋಡಿದ ವೆಂಕಾಯಮ್ಮಳಿಗೆ ಒಂದು ಕ್ಷಣ ತಾನು ಅಪ್ಪಮ್ಮಳಾಗಿ ಮಾಧವಿ  ತಾನಾದ ಹಾಗೆಯೂ ಮರು ನಿಮಿಷ ಮಾಧವಿಯೇ ಅಪ್ಪಮ್ಮಳಾಗಿಯೂ ಅನಿಸಿ ಆ ಮುದಿ ಜೀವದಲ್ಲೂ ಹುಮ್ಮಸ್ಸು, ಧೈರ್ಯ, ಸಂತೋಷ ಉಕ್ಕಿ ಬಂದವು.

ಮುಕ್ತಾಯ |

‍ಲೇಖಕರು Admin

November 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: