ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಹಾದ ಕಪ್ ಹಿಡಿದ ಕೈ ನಡುಗಿ..

ಬಿಸಿ ಚಹಾ

ಶ್ರೀದೇವಿ ಕೆರೆಮನೆ

ಬಸ್ ನಿಲ್ದಾಣದ ಹೊಟೆಲ್ ನಲ್ಲಿ
ಕುಳಿತ ನಮ್ಮೆದರು ಇದ್ದದ್ದು
ಬರೀ ಬೈ ಟೂ ಚಹಾ
ಆದರೆ ಮನದೊಳಗೆ ಅಪ್ಪಳಿಸುವ
ಸುನಾಮಿಯ ಅಲೆಗಳು ಸಾವಿರ

ನಿನ್ನ ಕಣ್ಣೊಳಗೆ ಪ್ರಜ್ವಲಿಸುತ್ತಿರುವ ಜ್ವಾಲಾಮುಖಿ
ಚಿಮ್ಮುವ ಕಿಡಿಗಳು ಅಲೆ ಅಲೆಯಾಗಿ
ಆವರಿಸಿಕೊಳ್ಳುತ್ತ ನನ್ನನ್ನೂ ಸುಡುತ್ತಿವೆ
ಮೈ ಬೆಚ್ಚಗಾಗಿ ಸುತ್ತಲಿನ ಬಿಸಿಗಾಳಿ
ಒಮ್ಮೆಲೆ ತಂಪಾಗಿ ಮೈ ನಿತ್ರಾಣವಾಗುತ್ತಿದೆ

 

ಚಹಾದ ಕಪ್ ಹಿಡಿದ ಕೈ ನಡುಗಿ
ತುಳುಕಿದ ಚಹಾದೊಳಗೂ ನಿನ್ನದೇ ಉನ್ಮಾದ
ಬಿಸಿಗೆ ತಟ್ಟನೆ ಹಿಂತೆಗೆದುಕೊಂಡ ಕೈಯ್ಯನ್ನು
ಹಿಡಿದು ಕೊಂಡ ನಿನ್ನ ಬೆರಳುಗಳಿಗೂ
ಕಡಲೊಳಗಿನ ಸುಳಿಯ ಸೆಳೆತ
ನದಿಯನ್ನು ಬೆಸಗೊಳ್ಳುವ ಅದಮ್ಯ
ಬಯಕೆ

ಸೋಕಿದ ಕಿರು ಬೆರಳಿಗೂ ನೂರು ಉನ್ಮಾದ
ಬಿಸಿಯಾದ ನಿಟ್ಟುಸಿರೊಳಗೆ ಚಹಾ ಕಪ್ಪಿನ ಬಿರುಗಾಳಿ
ಕಣ್ಣ ಗೊಂಬೆಯ ಒಳಗೆ ಬೇಟದ ಸುಖ ಅದಾಗಲೇ
ಹೆಪ್ಪುಗಟ್ಟುತ್ತ ಅಮಲೇರುತ್ತಿದೆ

ನಾನೋ ನಿನ್ನ ಕಣ್ಣೊಳಗೆ ಇಣುಕಲಾಗದೆ
ಎದುಗಿರುವ ಚಹಾ ಕಪ್ಪಿಂದ ಅಲೆ ಅಲೆಯಾಗಿ
ಏಳುವ ಹಬೆಯನ್ನೇ ದಿಟ್ಟಿಸುತ್ತಿದ್ದೇನೆ
ಸಂಜೆಯ ಬಸ್ಸೂ ತಪ್ಪಿ ಹೋಗಿದ್ದು
ನಮ್ಮ ಮೈ ಮರೆವಿನ ಅಪರಾಧವೋ
ಅಥವಾ ಇಬ್ಬರೊಳಗೂ ಹೆಡೆಯೆತ್ತಿದ
ಬುಸುಗುಡುವ ಅಂತರ್ಯದ ಬಯಕೆಯೋ

ಬೈಟೂ ಚಹಾ ಟೇಬಲ್ ಮೇಲೇ ಇದೆ.
ಮೈಯ್ಯೊಳಗೇ ಬಿಸಿ ಚಹಾ ಕುದಿಯುತ್ತ
ಒಬ್ಬರನ್ನೊಬ್ಬರು ಸೆಳೆವ ಸ್ವಾದ ಹೊಮ್ಮುತ್ತಿದೆ

 

‍ಲೇಖಕರು admin

12 March, 2017

1 Comment

  1. shrivatsadesai

    ತುಳುಕಿದ ಚಹದಲ್ಲೇ ಅರ್ಧವಲ್ಲ ಪೂರ್ತಿ ಸುನಾಮಿ ಕಂಡ ಶ್ರೀದೇವಿಯವರೇ ಸುಂದರವಾಗಿದೆ, ನಿಮ್ಮ ಕವನ! ಅಲ್ಲಿಯೇ ಮಾತಾಡುತ್ತಿರಿ, ಬೆಳಿಗ್ಗಿನ ಬಸ್ಸು ಬರುವ ವರೆಗೆ!.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading