
ತೇಜಶ್ರೀ ಹಾಸನ
ಅವಳಷ್ಟಕ್ಕೆ ಅವಳ ಮಾತು-
ತಲೆಕೆರೆದು ಒಮ್ಮೆ ಆಕಾಶ ನೋಡುತ್ತ,
ಮತ್ತೊಮ್ಮೆ ಸಣ್ಣ ಕಡ್ಡಿಯಲಿ ನೆಲವ ಗೀರುತ್ತ,
ಬೆರಳ ತುದಿಗೆ ಗೋಲಿ ಸಿಕ್ಕಿಸಿ ಹೊಡೆಯುತ್ತಿದ್ದುದ ನೆನಪಿಸುವಂತೆ
ಏನಕ್ಕೋ ಗುರಿ ನೆಟ್ಟ ಕಣ್ಣಲ್ಲಿ
ತುದಿಬೆರಳನ್ನೆಳೆದು ಬಿಗಿಯಾಗಿ
ಎದುರಿನ ಖಾಲಿಗೆ ಹೊಡೆಯುತ್ತ, ಅವಳು
ಮಾತನಾಡಿಕೊಳ್ಳುತ್ತಾಳೆ ತನ್ನಷ್ಟಕ್ಕೆ ತಾನೇ.
ಹೂದೋಟವೇ ಮೈಮೇಲೆ ಅರಳಿದಂತೆ
ಬಣ್ಣಬಣ್ಣದ ಹೂಗಳ ಅವಳ ಉದ್ದನೆ ಲಂಗ,
ಅದಕ್ಕೊಂದು ಬಿಳಿ ತುಂಬುದೋಳಿನ ಶರಟು.
ಯಾರು ತೊಡಿಸಿದ್ದೋ ಏನೋ?
-ಈ ಊರ ಗಾಳಿಯಲ್ಲಿ ಕರುಣೆ
ಇನ್ನೂ ಬದುಕಿದೆಯೆಂದು ಹೇಳುವಂತಿದೆ ಇದೆಲ್ಲ.
ಒಂದು ದಿನ, ಅವಳ ಉದ್ದನೆ ಕೂದಲು
ನೀಟಾಗಿ ಕತ್ತರಿಸಿ ಅವಳೀಗ ಬೇರೆಯೇ ಹುಡುಗಿ,
ಆ ಬಾಬುಕಟ್ಟಿನ ತಲೆಗೊಂದು ಕೆಂಪನೆ ರಿಬ್ಬನ್ನು,
ಇದು ಯಾವ ಲೋಕದ ಲೀಲೆ
ಈಗವಳು ಕಣ್ಣುಕುಕ್ಕುವ ಬಾಲೆ!
ಆಗೀಗ ಜಾಗ, ದಿಕ್ಕು ಬದಲಿಸುತ್ತ
ಅಲ್ಲೇ ಕೂತಿರುತ್ತಾಳೆ ಇಲ್ಲಾ ಮಲಗಿರುತ್ತಾಳೆ ಅವಳು
ಅದೇ ಚರ್ಚ್ ರಸ್ತೆಯಲ್ಲಿ ದಿನವೂ,
ಅದೇ ಅವಳ ವಿಳಾಸ:
‘ಇಲ್ಲಿ ಹುಟ್ಟಿದಳು ಈ ಚರ್ಚು ರಸ್ತೆಯಲ್ಲಿ
ಇಲ್ಲೇ ಬೆಳೆದಳು, ಇದೇ ಅವಳ ಕುರುಹು’
ಎನ್ನಬಹುದಾದಷ್ಟು ಪರಿಚಿತ ಆ ರಸ್ತೆಗೆ ಅವಳು,
ಅವಳಿಗೆ ಆ ರಸ್ತೆ.

ಇದ್ದಕ್ಕಿದ್ದಂತೆ ಒಂದು ದಿನ ಕಣ್ಮರೆಯಾದಳು ಅವಳು ಅಲ್ಲಿಂದ,
ಮೊದಮೊದಲು ಅವಳು ಕೂರುವ ಜಾಗ
ಆ ಮೂಲೆ, ರಸ್ತೆಯ ಈ ಕೋನ
ಎಲ್ಲ ಕಡೆ ಹೋಗುತ್ತ ಬರುತ್ತ ಹುಡುಕಿದರು ಜನ
ಎಲ್ಲಿಯೂ ಕಾಣಲಿಲ್ಲ ಅವಳು.
ದಿನ ಕಳೆದು ವಾರವಾಗಿ ತಿಂಗಳುಗಳು ಬಂದು
ಅವಳು ಉಳಿಸಿ ಹೋದ ಖಾಲಿ ಆ ರಸ್ತೆಯಲ್ಲಿ ಮಾಸುತ್ತಲಿರುವಾಗ
ಇದ್ದಕ್ಕಿದ್ದಂತೆ ಅವಳು ಮತ್ತೆ ಬಂದಳು ರಸ್ತೆಗೆ,
ಈಗವಳು ತುಂಬು ಬಸುರಿ.
ಮೈಮೇಲೆ ಅದೇ ಉದ್ದನೆ ಲಂಗ
ಅದರ ಮೇಲಿನ ಹೂಗಳ ಬಣ್ಣ ಮಾಸಿದೆ ಈಗ,
ಹರಿದಿದೆ ಬಿಳಿಯ ಬಣ್ಣದ ತುಂಬುದೋಳಿನ ಶರಟು ಅಲ್ಲಿಲ್ಲಿ,
ಲಂಗ, ಶರಟಿನ ಮೇಲೆಲ್ಲ ರಕ್ತದ ಕಲೆಗಳು ಸೇರಿಕೊಂಡಿವೆ ಹೊಸತಾಗಿ.
ಈಗಲೂ ಅವಳು ಮಾತನಾಡಿಕೊಳ್ಳುತ್ತಾಳೆ
ತನ್ನಷ್ಟಕ್ಕೆ ತಾನೇ.






ಹೊಸ ಸ್ವರೂಪದ ಅವಧಿ ಸೊಗಸಾಗಿದೆ