ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚನ್ನಪ್ಪ ಅಂಗಡಿ ಹೊಸ ಕವಿತೆ ‘ನೆಲ ತತ್ವ’

ಚನ್ನಪ್ಪ ಅಂಗಡಿ

**

ಒಬ್ಬರಿಗಿಂತ ಇಬ್ಬರು ಲೇಸು
ಅನ್ನುವ ಮುನ್ನ
ಕೈ ಬೆರಳೈದಾಗಿ ನೆನಪಿಸಿದವು
ಸಂಖ್ಯಾಬಲವೆಂದೋ ಅಸಂಖ್ಯವಾಗಿದೆ
ಕಲಿಗಾಲದಲಿ.

ಹೋಗುವ ಜೀವ ಬರುವ ಜೀವ
ಎರಡೂ ಸಜೀವ
ಕೇಳುವ ಕನಸಿನ ಸ್ಮೃತಿ
ನೋಡುವ ನನಸಿನ ಕೃತಿ
ಪ್ರಮಾಣು ಪ್ರಮಾಣು ಪ್ರಮಾಣು
ಸಾಪೇಕ್ಷತೆ.

ಅಂತರಂಗದಲಿ ಆಕಾಶ
ಬಹಿರಂಗದಲಿ ಭೂಮಿ
ಗ್ರಹ-ಗತಿಯಲಿ ಗಾಳಿ
ಬೆದೆಯುಕ್ಕಿ ಬೆಂಕಿ
ನೆರೆಬಂದ ನಿಡಿ ನೀರು
ಜಡಗೊಳ್ಳದೆಂದೂ ಸಕಲ ಪಡಿಪದಾರ್ಥ
ಒಡಲೊಳಗಿಂದ ಸಂಚಿತ ಕಾರ್ಯಕಾರಣಾರ್ಥ

ಬೆಳಗಾಗಿ ನಾನೆದ್ದು….
ಬಚ್ಚಲ ಮನೆಯಲ್ಲಿ
ಅದೂ ಇದೂ ಮಣ್ಣುಮಸಿ
ಯಂತ್ರಲೋಕದ ಅಂತರಂಗದಲಿ
ತಂತ್ರ ಮಂತ್ರದ ಹಮ್ಮುಬಿಮ್ಮು

ಬಿದ್ದೊಂದು ಗಳಿಗೆ ಸಹಿಸಿ ಸವೆದೇನು
ಮರಣಿಸುವಗೆ ಕರುಣೆಯ ಮಡಿಲಾಗಿ ನೀನು
ಹಿಡಿಜೀವಕ್ಕೆ ಹೆಚ್ಚು ಹೆಚ್ಚಿನ ಕನವರಿಕೆ
ಕೊಡಮಾಡಿ ಕೃಪೆಮಾಡಿ
ಜೀವ ನೀಡಿದವಳು ಹಡೆದವ್ವಗೆ
ಸಾವ ಬಾಗಿಲಲಿ ನನ್ನಿಯ ನಿನ್ನುಡುಗೆ

**

ಆಳದೊಳಗಿನುರಿಯ ಆಗಾಗ ಕಕ್ಕುತ
ಮೂಳೆ ಚಕ್ಕಳಗಳ ಒಮ್ಮೊಮ್ಮೆ ಕನಲಿಸುತ
ಕಣ್ಣು ಕಿಸಿದು ನೋಡಿ ಬಾಯ್ದೆರೆದು ಹಾಡಿ
ಪೂತಿನಿಯೆದೆಯೂಡಿಸಿ ಗುಡಿಸಿಬಿಡುವ ಮಾತಾಯೆ
ಮನದಾಳದ ಚಲನೆಯಲಿ ಲೆಕ್ಕಾಚಾರದ ತುಲನೆ
ಈ ನೆಲದ ತತ್ವದಲಿ

ನೀನಿರುವೆ ಸತ್ವದಲಿ
ಹಿಕ್ಕೆ-ಪುಕ್ಕ-ಬಿಕ್ಕು ದ್ರವ್ಯದಲಿ ಒಂದಾಗಿ
ಚೈತನ್ಯ ಬೀಜ ತೋಯಿಸಿ ಮಳೆಯೊಡೆದು
ದ್ಯಾವಾ ಪೃಥಿವಿ ಸಂಸಾರ ಮಾಡಿ ಫಲಾಫಲ ನೀಡಿ

ಅನ್ಯದೈವಕ್ಕೆಳೆಸುವ ಭವಿ ಗಣಂಗಳನ್ನು
ಮಣ್ಣು ತಾಗದೆ ಬೆಣ್ಣೆ ತಿನ್ನುವ ಕಡುಪಾಪಿಗಳನ್ನು
ಕಣ್ಣಿಟ್ಟು ಕಾಯೆ ಮಲಮಕ್ಕಳ ತಾಯೆ

ಮಡೆಗದ್ದೆ ಹುಡಿದಿಬ್ಬ ಖೋಟ ಖರಾಬು ಜಮೀನಿನಲ್ಲಿ
ತೋಟ ತರಿಯಲ್ಲಿ ಬೆಟ್ಟಗುಡ್ಡದ ಬರೆಯಲ್ಲಿ
ಮೆಕ್ಕಲಮಣ್ಣ ಹಕ್ಕಲದಲಿ ಹಳ್ಳದ ದಂಡೆಯಲಿ
ಗಾಂವಠಾಣ ಗೋಮಾಳ ಹುಲ್ಲುಗಾವಲಿನಲಿ
ಹೋಗಲಿ, ಕಾಡುಮೇಡು ಕಾನನ ಕುರುಚಲಿನಲಿ
ಎಲ್ಲಿಯಾದರೂ ನೆಲೆ ಕಾಣಿಸವ್ವ
ನಿನ್ನ ಮನೆತುಂಬ ಮಕ್ಕಳಿರಲವ್ವ.

‍ಲೇಖಕರು Admin MM

28 March, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading