ಚಂದ್ರ ಸೌಗಂಧಿಕಾ ನೋಡಿದ ‘ಕಾದಲ್ ಕೋರ್ ‘

ಚಂದ್ರ ಸೌಗಂಧಿಕಾ

**

ಒರು ವಡಕ್ಕನ್ ವೀರಗಾಥ, ಪೊಂದನ್ ಮಾಡ, ವಾತ್ಸಲ್ಯಂ, ಒರು ಡೈರಿ ಕುರುಪ್ಪು ಹೀಗೆ ನೂರಾರು ಹಿಟ್ ಚಿತ್ರಗಳ ಸ್ಟಾರ್ ನಟ ಮಲಯಾಳಿಗರ ಹೃದಯ ಸಾಮ್ರಾಟ, ಎವರ್ ಗ್ರೀನ್ ಹೀರೋ, ಮಮ್ಮುಟ್ಟಿಯ 70 ರ ಹರೆಯದ ಮಾಗಿದ ಅಭಿನಯನವನ್ನು ನೋಡಬೇಕೆಂದರೆ ಇತ್ತೀಚೆಗೆ ಬಿಡುಗಡೆಯಾದ ‘ಕಾದಲ್ ಕೋರ್ ‘ಸಿನಿಮಾವನ್ನು ನೋಡಿ. ಈ ಮೇರು ನಟನಿಗೆ ಸರಿಸಾಟಿ ಎನ್ನುವಂತೆ ತಮಿಳು ನಟಿ ಜ್ಯೋತಿಕಾ ಓಮನಾ ತನ್ನ ಪಾತ್ರದಲ್ಲಿ ಕಣ್ಣುಗಳ ಮೂಲಕ ಅಭಿವ್ಯಕ್ತಿಸಿರುವ ಪರಿ ಹೃದಯವನ್ನು ತಟ್ಟುತ್ತದೆ. ಅಂತರಂಗವನ್ನು ಆರ್ದ್ರಗೊಳಿಸುತ್ತದೆ.

ಪ್ರೀತಿ ಎನ್ನುವುದು ಅವರವರ ಆಯ್ಕೆ. ಪ್ರೀತಿ ಎಲ್ಲಿಯೂ ಹುಟ್ಟಬಹುದು, ಪ್ರೀತಿಗೇಕೆ ಬಂಧನ, ಬಾಗಿಲು, ಹೊಸ್ತಿಲು, ಪ್ರೀತಿಗೇಕೆ ಲಿಂಗ ಬೇಧ? ಪ್ರೀತಿ ಎನ್ನುವುದನ್ನು ಮಾತುಗಳಲ್ಲಿ ಹಿಡಿದಿಡಲಾಗುವುದಿಲ್ಲ ಎನ್ನುವುದನ್ನು ಮಲಯಾಳಿ ನಿರ್ದೇಶಕ ಜೋ ಬೇಬಿ ತಮ್ಮ ಚಿತ್ರದಲ್ಲಿ ಹಿಡಿದಿಟ್ಟಿದ್ದಾರೆ. ಎರ್ನಾಕುಲಂ ಪ್ರದೇಶದಲ್ಲಿ ಚಿತ್ರೀಕರಣಗೊಂಡ ಸಾಮಾನ್ಯ ಪ್ರದೇಶದ ಈ ದೃಶ್ಯಗಳನ್ನ ಸುಂದರವಾಗಿ ಸೆರೆಹಿಡಿದವರು ಶಾಲು ಕೆ ಥೋಮಸ್.

ಮನೆ ಮಂದಿಯ ಸಮಾಜದ ಒತ್ತಡಕ್ಕಾಗಿ ಸಂಸಾರದ ವಂಶವೃಕ್ಷದ ಉಳಿವಿಗಾಗಿ ಅಂಜಿಕೆ, ಮಾನ, ಮರ್ಯಾದೆ, ಅಂತಸ್ತು, ಘನತೆ ಸಂಬಂಧವೆನ್ನುವ ಭಾವನಾತ್ಮಕ ಸಂಬಂಧಗಳಿಗೆ ಬಲಿಯಾಗಿ ಇನ್ನೊಂದು ಹೆಣ್ಣು ಜೀವವನ್ನು ಬಲಿಗೊಡದಿರಿ ಎನ್ನುವ ಅಪ್ಪಟ ಸಂದೇಶವು ಸಿನಿಮಾದಲ್ಲಿದೆ.

ನಿವೃತ್ತ ಬ್ಯಾಂಕ್ ನೌಕರ ಮ್ಯಾಥ್ಯೂ ಕುಟ್ಟಿ ಒತ್ತಾಯಕ್ಕೆ ಮಣಿದು ಓಮನಳನ್ನು ಮದುವೆಯಾಗುತ್ತಾನೆ. ಬಾಲ್ಯಕಾಲದಲ್ಲಿ ಜೀವನದಲ್ಲಿ ಆಕಸ್ಮಿಕ ವಾಗಿ “ಗೇ “ಬದುಕಿನಲ್ಲಿ ಆಸಕ್ತಿ ಹೊಂದಿದ ಮ್ಯಾಥ್ಯೂ ಕುಟ್ಟಿಗೆ ಸಂಸಾರಿಕ ಬದುಕಿನಲ್ಲಿ ಯಾವುದೇ ಆಸಕ್ತಿ ಇರುವುದಿಲ್ಲ. ಮದುವೆಯಾದ ಹೊಸದರಲ್ಲಿ ಪತ್ನಿಯ ಒತ್ತಡಕ್ಕಾಗಿ ಕೆಲಬಾರಿ ದೈಹಿಕ ಸಂಪರ್ಕ ಹೊಂದಿದ್ದ. ನಂತರ ಅವರಿಬ್ಬರು 18 ವರ್ಷಗಳ ಕಾಲ ಒಂದೇ ಮನೆಯೊಳಗೆ ಮರದ ಕೊರಡಿನಂತೆ ಜೀವಿಸುತ್ತಾರೆ . 17ರ ಹರೆಯದ ಮಗಳು ಉನ್ನತ ಶಿಕ್ಷಣಕ್ಕಾಗಿ ನಗರವನ್ನು ಸೇರಿರುತ್ತಾಳೆ. ಯಾವುದಕ್ಕೂ ಕೊರತೆ ಇಲ್ಲ. ಆದರೂ ಯಾಂತ್ರೀಕೃತ ಬದುಕು. ಕೇವಲ ಮೂವರು ಮಾತ್ರ ವಾಸಿಸುವ ದೊಡ್ಡ ಮನೆ. ಬಣಗುಡುವ ಬದುಕು. ನಿವೃತ್ತಿಯ ಬಳಿಕ ರಾಜಕೀಯದಲ್ಲಿ ಮ್ಯಾಥ್ಯೂ ತೊಡಗಿಸಿಕೊಳ್ಳಬೇಕೆಂದು ಊರವರ ಅಭಿಪ್ರಾಯ. ಅದರಂತೆ ಚುನಾವಣೆಯ ಒಂದಷ್ಟು ತಯಾರಿಗಳು ಕಣಕ್ಕಿಳಿಯುವಂತೆ ಪ್ರೇರಣೆಗಳು ನಡೆಯುತ್ತವೆ.

ಇದೇ ಸಮಯದಲ್ಲಿ ದಾಂಪತ್ಯದ 18ನೆಯ ವರ್ಷದಲ್ಲಿ ನನಗೆ ಗಂಡನಿಂದ ವಿಚ್ಛೇದನ ಬೇಕೆಂದು ಓಮನ ಕೋರ್ಟಿನ ಮರೆ ಹೋಗುತ್ತಾಳೆ. ಒಬ್ಬ ಮರ್ಯಾದಸ್ತ ಮನೆತನದ ಗೌರವಯುತ ಗಂಡಸನ್ನು ಕಟಕಟೆಗೆ ಎಳೆಯಬಾರದೆಂದು ಮಡದಿಯ ಮನವೊಲಿಸಲು ಸ್ಥಳಿಯ ‘ಫಾದರ್ ‘ ಮತ್ತು ಹಿರಿಯರು ವಿಫಲರಾಗುತ್ತಾರೆ. ಚುನಾವಣೆಯ ಈ ಸಂದರ್ಭದಲ್ಲಿ ವಿಚ್ಛೇದನದ ಮುಖ್ಯ ವಿಚಾರವನ್ನು ಮುನ್ನಡೆಗೆ ತಂದು ಹೇಗಾದರೂ ಮಾಡಿ ಮ್ಯಾಥ್ಯೂ ಕುಟ್ಟಿಯ ಮಾನ ಹರಾಜು ಹಾಕಬೇಕೆಂದು ವಿರೋಧ ಪಕ್ಷದ ಕಟ್ಟಾಳುಗಳು ಸಮಯ ಕಾಯುತ್ತಿರುತ್ತಾರೆ.

ಕೋರ್ಟಿನಲ್ಲಿ ಓಮನಳ ಆರೋಪವು ಗುರುತರವಾದದ್ದು. ತನ್ನ ಗಂಡ ನನ್ನೊಂದಿಗೆ ಯಾವುದೇ ರೀತಿಯ ಸಂಪರ್ಕವನ್ನು ಹೊಂದಿಲ್ಲ. ಭಾವನಾತ್ಮಕವಾಗಿಯೂ ನನ್ನೊಂದಿಗೆ ಜೀವಿಸುತ್ತಿಲ್ಲ. ನಾವು ಕಳೆದ 18 ವರ್ಷಗಳಲ್ಲಿ ಕೇವಲ ಬೆರಳೆಣಿಕೆಯ ದಿನಗಳಲ್ಲಿ ಮಾತ್ರ ಜೊತೆಯಾಗಿದ್ದೆವು. ದೈಹಿಕ ಸಂಪರ್ಕ ಹೊಂದಿದ್ದೆವು. ನನ್ನ ಹಟದಿಂದ ನಾನು ಮಗುವನ್ನು ಪಡೆದುಕೊಂಡೆ ಹೊರತು ಅವನ ಇಚ್ಛೆಯಿಂದ ಅಲ್ಲ. ನನ್ನನ್ನು ಕ್ಷಮಿಸಿ ನನಗೆ ಈಗ ಆತನಿಂದ ಬಿಡುಗಡೆ ಬೇಕಾಗಿದೆ. ಇದರಲ್ಲಿ ಯಾವುದೇ ಒಪ್ಪಂದ ಅಥವಾ ರಾಜಿಗೆ ನಾನು ಬದ್ಧಳಿಲ್ಲ ಎಂದು ನಿರ್ಧಾಕ್ಷಿಣ್ಯವಾಗಿ ನುಡಿಯುತ್ತಾಳೆ.

ಮುಂದೆ ಕೋರ್ಟಿನ ಮೂಲಕ ವಿಚ್ಛೇದನ ಪಡೆದು ಓಮನ ತವರು ಮನೆಗೆ ತೆರಳುತ್ತಾಳೆ. ರಾಜಕೀಯದ ವಿರೋಧ ಪಕ್ಷದ ಕಟ್ಟಾಳುಗಳು ಕಪೋಲ ಕಲ್ಪಿತ ಸುದ್ದಿಗಳನ್ನು ಹಬ್ಬಿಸಲು ವಿಫಲರಾಗುತ್ತಾರೆ. ಈ ನಡುವೆ ಕಥಾನಾಯಕನ ಜೊತೆಗಿದ್ದ ಭಾವನಾತ್ಮಕ ಜೀವಿ ಯಾರು ?.. ಇಷ್ಟು ವರ್ಷಗಳ ಕಾಲ ಪ್ರೇಮವನ್ನ ಪ್ರೀತಿಯನ್ನ ಜತನದಿಂದ ಕಾಪಿಟ್ಟು ಓಮನಾಳನ್ನು ಕಾಯುತ್ತಿದ್ದವನು ಯಾರು? ಗಂಡನ ಪ್ರೀತಿಯಿಂದ ವಂಚಿತಳಾದರೂ ತಂದೆಯ ಸ್ಥಾನದಲ್ಲಿ ದೊರೆತ ಮಾವನನ್ನು ಪ್ರೀತಿಯಿಂದ ಸಲಹುವ ಸೊಸೆಯ ಸಾಂಗತ್ಯದ ಪ್ರೇಮದ ಹಾದಿ ಯಾವುದು.? ಪ್ರೇಮದ ಭಾವಾರ್ಥಗಳನ್ನು ಉಕ್ತಿಗಳ ರೂಪದಲ್ಲಿ ತುಂಬಿರುವ ಬೈಬಲಿನ ವಾರ್ತೆಗಳನ್ನು ಮ್ಯಾಥ್ಯೂ ಪುಲಿಕನ್ ಸಂಗೀತ ನೀಡಿ ಹೇಗೆ ರೋಮಾಂಚನ ಮಾಡಿದ್ದಾರೆ ನೋಡಿ. ಕಾದಲ್ ಕೋರ್ ಸಿನಿಮಾದಲ್ಲಿ.

ಭಾರತ ದೇಶದಲ್ಲಿ ಮಡಿವಂತಿಕೆ ಮರ್ಯಾದೆ ಅಂಜಿಕೆಯಿಂದ ಮಾತನಾಡಲು ಹಿಂಜರಿಯುವ ‘ಗೇ ‘ಸಲಿಂಗ ಕಾಮದ ಕಾನೂನು ಭಾವನಾತ್ಮಕ ಭಾವಾರ್ಥದ ಒಳಗುಟ್ಟನ್ನು ಬೇಬಿ ಸುಂದರವಾಗಿ ರೂಪಿಸಿದ್ದಾರೆ.

ಸಲಿಂಗ ವಿವಾಹವು ಕಾನೂನಿಗೆ ವಿರುದ್ಧವಾದದ್ದು ಎಂದು ಇತ್ತೀಚಿಗೆ ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿರುವ ಕಾಲದಲ್ಲಿ ಪ್ರೀತಿ ಅವರವರ ಆಯ್ಕೆ ಎನ್ನುವ ಇಂತಹ ಸಿನಿಮಾಗಳು ಭಾವನಾತ್ಮಕವಾಗಿ ಬದುಕುವವರ ಹಾದಿಗೊಂದು ಹೊಸ ಬೆಳಕು. ಜಾತಿ ಧರ್ಮದ ‘ಬಾಸಿಂಗ’ವನ್ನು ಕಟ್ಟದೆಯೇ ಸಿನೆಮಾ ನೋಡಬೇಕು. ಜೀವನದ ಸಂಕೀರ್ಣತೆಯನ್ನು ಮನುಷ್ಯ ಸಂಬಂಧಗಳ ಭಾವ ತೀವ್ರತೆಗಳನ್ನು ಅರ್ಥಮಾಡಿಕೊಳ್ಳಲಾಗದವರಿಗೆ ಇಂತಹ ಸಿನಿಮಾಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಪೂರ್ವಾಗ್ರಹಗಳಿಲ್ಲದೆ ಸಿನಿಮಾವನ್ನು ಸ್ವೀಕರಿಸುವವರಿಗೆ ಇದು ಸದಾ ಕಾಲ ಕಾಡುವ ಚಿತ್ರ.

‍ಲೇಖಕರು avadhi

December 14, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Frank D Souza

    I have inspired by the review and able to inspire my family to watch this movie. Nicely written Chandra.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: