ಶೋಭಾ ಹಿರೇಕೈ ಗಡಿಯೂರಿನ ನೆನಪು- ಅಮ್ಮಾ ಎಂದ ಆ ಧ್ವನಿ ನನ್ನ ನಿರ್ಧಾರವನ್ನೇ ಬದಲಿಸಿತ್ತು.

3

ಈ ಲೇಖನದ ಮೊದಲ ಭಾಗ – ನನ್ನೊಂದಿಗೆ ಕನ್ನಡ ಕೂಡಾ ಅನಾಥವಾದಂತೆನಿಸಿತ್ತು…

ಎರಡನೆಯ ಭಾಗ – ಕೊನೆಯದಾಗಿ ಉಡಿ ತುಂಬಿದ್ದು ಈ ಕನ್ನಡದ ಮಗಳಿಗೇ…

ಶೋಭಾ ಹಿರೇಕೈ ಕಂಡ್ರಾಜಿ


ಸೆಪ್ಟೆಂಬರ್ ತಿಂಗಳ ಜೋರು ಮಳೆ.. ನಾವು ನೌಕರಿ ಸೇರಿ ತಿಂಗಳ ಮೇಲೆ ಹದಿನೈದು ದಿನಗಳಾಗಿದ್ದವಷ್ಟೆ.. ಮಲೆನಾಡಿನ ನಾನು ಮಳೆಗೆ ಹೆದರುವ ಪೈಕಿ ಅಲ್ಲ. ನಾನು ತುಂಬಾ ಹೆದರುತ್ತಿದ್ದದ್ದು ಅಲ್ಲಿಯ ಆ ಊರಿನ ಕಣಿವೆಯಿಂದ ಬರುವ ಮಂಜಿನ ಹೊಗೆ, ಅದರೊಂದಿಗೆ ಬರುವ ಗಾಳಿ ಮತ್ತದರ ಸದ್ದಿಗೆ.

ನಾನಿರುವುದು ಒಂದು ಕಣಿವೆಯೂರು ಸಹ. ಊರಿನ ಹಿಂಬಾಗದ ಹಿತ್ತಲಿನ ತುತ್ತ ತುದಿಯೇ ಆಳ ಕಣಿವೆಯ ಪ್ರದೇಶ. ಒಂದು ದಿನ ಹೀಗೆ ಬಂದು ಹಾಗೇ ನೋಡಿ ಹೋಗುವ ಪ್ರವಾಸಿಗರೋ.. ಈ ಊರಿನ ಕಣಿವೆಯೆಂಬ ಸುಂದರಿಗೆ ಸೋಲಲೇಬೇಕು. ಆದರೆ ಸದಾ ಥಂಡಿ ಎನ್ನುವ ನನಗೋ ಅಲ್ಲಿಯ ವಾತಾವರಣ ಕ್ಕೆ ಹೊಂದಿಕೊಳ್ಳುವುದು ಕೂಡಾ ಒಂದು ಸವಾಲೇ ಆಗಿತ್ತು‌. ಆಳ ಕಣಿವೆಯು ತನ್ನ ಉಸಿರನ್ನು ಉಸ್ಸೆಂದು ನನ್ನ ಮುಖಕ್ಕೆ ಊದಿದಂತಾಗಿ ಒಮ್ಮೊಮ್ಮೆ ಉಸಿರು ಕಟ್ಟುವ ಅನುಭವ ನನಗೆ.

ಅಲ್ಲಿಯ ಮಳೆಗಾಲದ ನೋಟ ಹೇಗಿತ್ತೆಂದರೆ, ಹತ್ತು ಹದಿನೈದು ಮಾರಿನಾಚೆ ನಿಂತವರ ಮುಖ ಸಹ ಪರಸ್ಪರರಿಗೆ ಕಾಣದಂತೆ, ಮಬ್ಬು ಚಿತ್ರದಲ್ಲಿ ಮುಖ ನೋಡಿಕೊಂಡಂತೆ ಕಾಣುತಿತ್ತು. ಇಡೀ ದಿನ ಸುರಿಯುವ ಮಳೆ, ಅಬ್ಬರಿಸುವ ಗಾಳಿ ಒಂದು ಅವ್ಯಕ್ತ ಆತಂಕವನ್ನು ಸೃಷ್ಟಿಸುತ್ತಿತ್ತು.

ಅಲ್ಲಿಯ ವಾತಾವರಣಕ್ಕೆ ಹೊಂದದ ನನ್ನ ದೇಹದ ಮೊದಲ ಪ್ರತಿರೋಧ ನನ್ನ ಮುಖದ ಮೇಲಾಯಿತು. ಮುಖವೇ ಇದ್ದಕ್ಕಿದ್ದ ಹಾಗೇ ಊದಿಕೊಳ್ಳತೊಡಗಿತ್ತು. ನಾಲ್ಕು ದಿನ ನೋಡಿ ಅಲ್ಲೇ ಐದು ಕಿಮೀ ದೂರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಪಾಸಣೆಗೆ ಹೋದರೆ ಅಲ್ಲಿಯ ವೈದ್ಯರು ನನ್ನ ಆಹಾರ ಪದ್ದತಿಯ ಮಾಹಿತಿ ಪಡೆದು ನೀವು ರಾಗಿಯನ್ನು ಬಳಸಲೇ ಬೇಡಿ.. ಅಂದು ಬಿಟ್ಟರು. ನನಗೋ ದಿನ ಬೆಳಿಗ್ಗೆ ಅನಾಯಾಸವಾಗಿ ಸಿಗುವ ಮರಾಠಿ ಆಯಿಯ ರಾಗಿ ರೊಟ್ಟಿ ತಪ್ಪಿಸಿಕೊಳ್ಳಲು ಮನಸಿರಲಿಲ್ಲ.. ಉಪ್ಪಿಟ್ಟು ಅವಲಕ್ಕಿ ಮೊದಲೇ ಆಗದು ನನಗೆ. ಹೊಟ್ಟೆಯ ಚಿಂತೆಯಲ್ಲಿ ಮನೆಗೆ ಬಂದು ರಾಗಿಯ ವಿಷಯವನ್ನು ಹೇಳದೆ ಸುಮ್ಮನೆ ಇದ್ದು ಬಿಟ್ಟೆ.

ಅಲ್ಲಿ ಮುಂಜಾನೆಯ ಉಪಹಾರವಾಗಿ ರಾಗಿ ರೊಟ್ಟಿ ಮತ್ತು ಅದಕ್ಕೆ ಸಾಮಾನ್ಯವಾಗಿ ಒಣ ಮೀನಿನ ಚಟ್ನಿ ಮಾಡುತಿದ್ದರು. ಬೆಂಕಿಯಲ್ಲಿ ಸುಟ್ಟ ಒಣ ಮೀನನ್ನು ಚೆನ್ನಾಗಿ ತೊಳೆದು, ಸಣ್ಣ ಹೆಚ್ಚಿಟ್ಟುಕೊಂಡು, ನಮ್ಮ ಕಡೆ ಔಷಧಿ ಅರೆಯುವ ಕಲ್ಲಿನಂಥ ಕಲ್ಲಲ್ಲಿ ಸುಟ್ಟ ಹಸಿ ಮೆಣಸನ್ನು ಸರಿಯಾಗಿ ಅರೆದು, ಬಾಳೆ ಎಲೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಚಮಚದಷ್ಟು ಎಣ್ಣೆ ಸುರಿದು,ಎಲ್ಲವನ್ನು ಸುತ್ತಿ ಪೊಟ್ಟಣದ ರೀತಿಯಲ್ಲಿ ಮಡಚಿ, ಅದನ್ನು ಕಾದ ಹಂಚಿನ ಮೇಲಿಟ್ಟು , ಸಣ್ಣ ಉರಿಯಲ್ಲಿ ಬೇಯಿಸಿ, ರಾಗಿ ರೊಟ್ಟಿಯ ಜೊತೆಗೆ ತಿಂದರೆ ಅದರ ರುಚಿಯೇ ಬೇರೆ. ಮೊದ ಮೊದಲು ದಪ್ಪನೆಯ ಕಪ್ಪನೆಯ ರಾಗಿ ರೊಟ್ಟಿ ನನ್ನ ಮನೆಯ ಅಕ್ಕಿ ರೊಟ್ಟಿಯಂತೆ ರುಚಿಸದ ಕಾರಣ ಬೇಡ ಎಂದು ಬಿಡುತಿದ್ದೆ. ಆದರೆ ಅದರ ಜೊತೆಗೆ ಯಾವಾಗ ಈ ಹಸಿಮೆಣಸಿನ ಒಣಮೀನಿನ ಚಟ್ನಿ ರುಚಿ ಗೊತ್ತಾಯಿತೋ… ಡಾಕ್ಟರ್ ಸಲಹೆ ಕೂಡಾ ಪಾಲಿಸಲು ಮರೆತೆ ಬಿಟ್ಟೆ.

ವಾರ ಕಳೆದು ಮತ್ತೆ ಹದಿನೈದು ದಿನವಾದರೂ ಮುಖದ ಬಾವು ಇಳಿಯದೇ, ಬಿಟ್ಟು ಬಿಟ್ಟು ಜ್ವರವೂ ಶುರುವಾದ ಕಾರಣ ಖಾನಾಪುರದ ಸರಕಾರಿ ತಾಲೂಕಾ ಆಸ್ಪತ್ರೆಗೆ ಹೋಗುವುದು ಅನಿವಾರ್ಯ ವಾಯಿತು ನನಗೆ. ಅಲ್ಲೋ ನನ್ನ ನೋಡಿ, ಏನು ಎಂಥ ಎಲ್ಲ ವಿಚಾರಿಸಿದವರೇ …. “ಒಹ್ ಅಲ್ಲಿಂದ ಬಂದವರೇನ್ರಿ.. ಅಂದರೆ ಇದು ಮಲೇರಿಯಾ ಜ್ವರನೇ ಇರಬೇಕ್ರಿ ಅಂದವರೇ ರಕ್ತ ತಪಾಸಣೆಗೆ ಚೀಟಿ ಬರೆದೇ ಬಿಟ್ರು. ಪುಣ್ಯಾತ್ಮರು ಜ್ವರ ಇದೆಯೋ ಇಲ್ಲವೋ ಅನ್ನುವುದನ್ನು ನೋಡಲಿಲ್ಲ. ನನ್ನ ಪುಣ್ಯಕ್ಕೆ ಅದು ಅಂತಹ ಸಮಸ್ಯೆ ಏನೂ ಆಗಿರಲಿಲ್ಲ. ಸಹಜ ಜ್ವರವೆಂದು ನನ್ನ ರಕ್ತದ ರಿಪೋರ್ಟ್ ನೋಡಿದ ಮೇಲೆ ನಾನು ಸಮಾಧಾನಗೊಂಡೆ.

ಅದರೆ ಮುಖ ಬಾಯುವುದು ಮಾತ್ರ ಹೋಗುತ್ತಿರಲಿಲ್ಲ. ಬಂದು ಒಂದೇ ತಿಂಗಳಾಗಿದೆ ವಾತಾವರಣಕ್ಕೆ ಹೊಂದುವುದು ಸ್ವಲ್ಪ ದಿವಸ ಬೇಕೆಂದು ನನಗೆ ನಾನೇ ಸಮಾಧಾನ ಪಟ್ಟುಕೊಂಡರೂ…. ಅಷ್ಟರೊಳಗಾಗಲೇ ಚೌತಿ ಹಬ್ಬ ಬಂದು ಒಂದೆರಡು ದಿನದ ಮಟ್ಟಿಗೆ ರಜೆ ಹಾಕಿ, “ನಮ್ಮಕಡೆಯ ಡಾಕ್ಟರ್ ಸಲಹೆ ಪಡೆದರಾಯಿತು, ಇಲ್ಲಿ ಡಾಕ್ಟರ್ ಗಳಿಗೂ ಸರಿ ಕನ್ನಡ ಬರುವುದಿಲ್ಲ “ಎಂದು ಗೊಣಗಾಡಿ ಸರ್ ಕಡೆ ದಮ್ಮಯ್ಯ ಹಾಕಿ ಒಂದು ಎಕ್ಟ್ರಾ ರಜೆ ಹಾಕಿ ಊರಿನ ಬಸ್ಸು ಹತ್ತಿದ್ದೆ. ನಂತರ ಗೊತ್ತಾಯಿತು ಅಲ್ಲಿರುವ ನನ್ನ ಎಲ್ಲಾ ಗೆಳತಿಯರು ಒಂದು ದಿನ ಹೆಚ್ಚಿಗೆ ರಜೆಯನ್ನು ಮನವಿಯ ಮೇರೆಗೆ ಪಡೆದು ಹೊರಟಿದ್ದರು. (ನಾವು ಸೇರಿ ಎರಡು ತಿಂಗಳಾದ್ದರಿಂದ ೩ ದಿನದ ರಜೆ ಸಿಗುತ್ತಿರಲಿಲ್ಲ. )

ಪಗಾರ ಆಗಿರಲಿಲ್ಲ. ಬರಿಗೈಲಿ ಬರುವುದು, ಮತ್ತೆ ಅಪ್ಪ, ಅಣ್ಣನ ಬಳಿಯೇ ದುಡ್ಡು ಕೇಳುವುದು ಇದೆಲ್ಲಾ ಮನಸ್ಸಿನೊಳಗಿನ ದು:ಖವಾದರೂ… ಮನೆಗೆ ಬರುವ ಸಂಭ್ರಮ ಸಡಗರ ಬಸ್ಸಿನಲ್ಲಿ ಪಕ್ಕ ಕುಳಿತವರಿಗೂ ಗೊತ್ತಾಗುತಿತ್ತು. ಮೊದಲು ಮಾತು ಬಂದ ಮಗುವಿನ ಹೆಮ್ಮೆಯಂತೆ… ನನ್ನ ಕನ್ನಡವನ್ನು ಬಾಯ್ತುಂಬ ಮಾತಾಡಿ, ಹಬ್ಬ ಮುಗಿಸಿ, ಔಷದೋಪಚಾರ ಮುಗಿಸಿಕೊಂಡು ಮತ್ತೆ ಮರಾಠಿ ಊರಿಗೆ ಹೋಗುವುದರೊಳಗೆ ನಮಗೆ (ಅಲ್ಲಿ ಹೊಸದಾಗಿ ಸೇರಿದ ಎಲ್ಲಾ ಶಿಕ್ಷಕಿಯರಿಗೆ) ಒಂದು ಶಾಕ್ ಕಾದಿತ್ತು.

ಝೆಡ್ ಪಿ ಮೆಂಬರ್ ಎಂದುಕೊಂಡು ಒಬ್ಬ ವ್ಯಕ್ತಿ ಶಾಲೆಗೆ ಬಂದು ಹೋಗಿದ್ದು, ಮತ್ತೂ ಈ ಭಾಗದ ಎಲ್ಲಾ ಶಾಲೆಯಲ್ಲೂ ಹೊಸದಾಗಿ ಬಂದ ಎಲ್ಲಾ ಶಿಕ್ಷಕಿಯರು ರಜೆಯ ಮೇಲೆ ಹೋಗಿರುವುದು… ರಜೆಯೇ ಇಲ್ಲದೆ ಒಂದೇ ದಿನ ಹೆಚ್ಚಿಗೆ ಆದರೂ ಹೇಗೆ ರಜೆ ಕೊಟ್ಟಿರಿ… ಕಾರಣ ಕೊಡಿರಿ ಎಂದು ಆ ಗಡಿ ಭಾಗದ ಎಲ್ಲಾ ಮುಖ್ಯ ಶಿಕ್ಷಕರನ್ನು ಗಡಗಡಿಸಿ ಹೋದ ಸುದ್ದಿ ಮುಖ್ಯ ಶಿಕ್ಷಕರಿಂದ ತಿಳಿಯಿತು. ಮತ್ತೂ ನಿದ್ದೆಗೆಡಿಸಿ ಆತಂಕ ಪಡಿಸಿದ ಸುದ್ದಿಯೆಂದರೆ ಅದೇ ವ್ಯಕ್ತಿ ಮತ್ತೆ ಶಾಲೆಗೆ ವಿಸಿಟ್ ಕೊಡುವುದಾಗಿ ಹೇಳಿ ಹೋದದ್ದು.

ನಮಗೋ ಶಾಲೆಯ ಕಡೆಗೆ ಯಾರೇ ಬಂದರೂ ಆ ದಿನ ಬಂದು ಹೋದವರೇ ಇರಬೇಕು ಎಂದು ಗುಮಾನಿ. ನಾಲ್ಕೈದು ದಿನ ಕಳೆದಿರಬೇಕು ಗುಮಾನಿ ನಿಜ ಮಾಡುವಂತೆ ಒಂದು ವ್ಯಕ್ತಿ ಶಾಲೆ ಕಡೆ ಬಂದಿತು. . ಎಲ್ಲಾ ವಿಷಯ ತಿಳಿದುಕೊಂಡ ಆ ವ್ಯಕ್ತಿ, ನಮ್ಮ ಜಿಲ್ಲೆಯಿಂದ ಹೊಸದಾಗಿ ಬಂದ, ಕೇವಲ ಶಿಕ್ಷಕಿಯರಿರುವ ಶಾಲೆಗೆ ಮಾತ್ರ ಹೋಗಿ ಬಂದ ವಿಷಯ ತಿಳಿದು ನನಗೂ ಮತ್ತು ನಮ್ಮ ಮುಖ್ಯಗುರುಗಳಿಗೂ… ಜಿಲ್ಲಾ ಪಂಚಾಯತಿಯ ಹೊಸ ಸದಸ್ಯರ ಬಗ್ಗೆಯೇ ಗುಮಾನಿ ಬಂದಿತ್ತು.

ಅದಾಗಿ ಹದಿನೈದು ದಿನ ಆಗಿತ್ತಷ್ಟೇ…. ರಾತ್ತಿ ಹನ್ನೊಂದಾಗಿರಬೇಕು ನಾನು ಮಲಗಿದ್ದೆ. ಆಯಿ ಬಂದು ನನ್ನ ಎಬ್ಬಿಸಿ “ಬಾಯಿ ತುಮ್ಹಾಲಾ ಮಂದಿರ್ ಕಡೆ ಬೊಲವ್ಲಾ ಲಗ್ಲೆ.” ಎಂದಾಗ ನಾನೋ ಕಂಗಾಲು. ಈ ರಾತ್ರಿ ಯಾಕೆ ದೇವಸ್ಥಾನಕ್ಕೆ ಬರಲು ಹೇಳುತ್ತಿದ್ದಾರೆ. ಮನೆಯಿಂದ ಫೋನ್ ಬಂದಿರಬಹುದಾ? ಅಥವಾ ಏನಾದರೂ ತಪ್ಪಾಗಿರಬಹುದಾ ನನ್ನಿಂದ? ಎಂದುಕೊಂಡೇ ನಾನು ದೇವಾಲಯದ ಕಡೆ ಹೊರಟೆ. ಜೊತೆಗೆ ನಾನಾ ಇದ್ದರು. ಎಲ್ಲಾ ನ್ಯಾಯ ನಿರ್ಣಯಗಳು ಅಲ್ಲಿ ದೇವಾಲಯದ ಎದುರೇ ಆಗುತ್ತಿದ್ದುದರಿಂದ…… ನನ್ನ ಕಾಲುಗಳು ಹೆದರಿಕೆಯಿಂದ ಹೆಜ್ಜೆಯನ್ನು ಕಿತ್ತಿಡಲಾರದಷ್ಟು ಭಾರವಾಗಿ ಹೇಗೋ ದೇವಾಲಯ ತಲುಪಿದ್ದೆ.

ಹೋಗಿ ನೋಡಿದರೆ ಜೀಪಿನಿಂದ ಒಬ್ಬನನ್ನು ಹೊರಕ್ಕೆ ದೂಡಿ , ಮುಖ ಮುಸುಡಿ ನೋಡದೆ ರಪರಪನೆ ಬಾರಿಸುತ್ತಾ , “ಬಾಯಿ ತುಮ್ಚಾ ಶಾಳೆಲಾ ತೇನಿಚ್ ಆಲೇಲಾ ಕಾಯ್? (ಬಾಯಿ ಹೇಳಿ ಆ ದಿನ ಶಾಲೆಗೆ ಬಂದವನು ಇವನೇನಾ) ಎನ್ನುತ್ತಾ ಒಂದೇ ಸಮನೆ ಎಲ್ಲರೂ ಗೌಜಿ, ಗಲಾಟೆಯಲ್ಲಿ ತೊಡಗಿದಾಗ.. ನನಗೋ ಕನಸಲ್ಲಿ ಎದ್ದು ಬಂದು ಅವರ ಮುಂದೆ ನಿಂತಂತೆ!!. ಸುತ್ತ ಕಣ್ಣಾಡಿಸಿದೆ ಎಲ್ಲಾ ಶಿವಸೇನೆಯ ಕಾರ್ಯಕರ್ತರು ಎಂದು ಅವರ ವೇಷ ಭೂಷಣ ಹೇಳುತಿತ್ತು. ಗಾಬರಿಯಾದೆ.. ಅವರು ತಳ್ಳಿದ ಆ ಮನುಷ್ಯ…. ಸುಳ್ಳು ಹೇಳಿಕೊಂಡು ಹೊಸ ಶಿಕ್ಷಕಿಯರಿಗೆಲ್ಲಾ ಮೋಸ ಮಾಡಲೆಂದೇ ಬಂದಿದ್ದ ವ್ಯಕ್ತಿಯಿರಬಹುದೇ ಎಂದು ಅವರ ಮಾತಿನಿಂದ ಅರ್ಥವಾಯಿತು. ಈಗಾಗಲೇ ಸಾಯುವಷ್ಡು ಪೆಟ್ಟು ತಿಂದು ಆಗಲೋ ಈಗಲೋ ಸಾಯುವಂತೆ ಆಗಿದ್ದ. ಅದಲ್ಲದೆ ಆತ ಅಯ್ಯೋ ಅಮ್ಮ ಎಂದು ಕನ್ನಡದಲ್ಲಿಯೇ ಕೂಗುತ್ತಿದ್ದ. ನಾನು ಆತನ ಮುಖ ನೋಡಿದೆ…. ಹೊಡೆತ ತಿಂದು ಹಣ್ಣಾಗಿದ್ದರಿಂದ ಗುರುತು ಹಿಡಿಯಲು ಆಗಲಿಲ್ಲ. ಮತ್ತೆ ಮತ್ತೆ ನೋಡಿದೆ. ಹೌದು ಅದೇ ವ್ಯಕ್ತಿಯಾಗಿದ್ದ ಆತ. ಆದರೆ ನನಗೋ ಆತನ ಮುಖಕ್ಕಿಂತ ಆತನ ಧ್ವನಿಯೇ ಕೇಳುತ್ತಿತ್ತು.

ಅಯ್ಯೋ..ಅಮ್ಮ ಎಂದಾಗ ನನ್ನ ನಿರ್ಧಾರವೇ ಬದಲಾಗಿ ಹೋಯ್ತು.. ನಾನೇ ಪೆಟ್ಟು ತಿಂದಂತೆ ಚೀರುವಂತಾಯಿತು. ಅದೂ ಅಲ್ಲದೆ ನನ್ನ ಹೇಳಿಕೆಯಿಂದ.. ಒಂದು ಜೀವ ಹೋಗಿ ಬಿಟ್ಟರೆ ಎಂದು ಗಾಬರಿಯಾಗಿ ” ಇಲ್ಲ ನಂಗೆ ಗುರುತು ಹಿಡಿಯಲು ಆಗುತ್ತಿಲ್ಲ “ಎಂದುಬಿಟ್ಟೆ. ಮತ್ತೆ ಅದೇ ಜೀಪಿಗೆ ಅವನನ್ನು ಹೇರಿಕೊಂಡ ಜೀಪು ಹೊರಟು ಹೋಯಿತು.

ನಾಲ್ಕೈದು ದಿನ ಬಿಟ್ಟು ಮೀಟಿಂಗ್ನಲ್ಲಿ ನಮ್ಮ ಜಿಲ್ಲೆಯ ಶಿಕ್ಷಕಿಯರೆಲ್ಲಾ ಸೇರಿದಾಗ ಇದೇ ದೊಡ್ಡ ಸುದ್ದಿ. “ನಮಗೆ ಯಾಕೆ ಬೇಕು ಉಸಾಪರಿ, ನಾವಿಲ್ಲಿ ಡ್ಯೂಟಿ ಮಾಡಬೇಕಲ್ಲ… ಮೊದಲೇ ನಾವೆಲ್ಲ ಅನಾಥರು ಇಲ್ಲಿ. ಒಂದಿನ ಹಿಗ್ಗಾ ಮುಗ್ಗ ಹೊಡೆದು ಹೋದರೆ.. ಆಮೇಲೆ ದಿನಾ ನಮ್ಮ ರಕ್ಷಣೆಗೆ ಯಾರು? ಹ್ಯಂಗೂ ಅವನು ನಮ್ಮ ಸುದ್ದಿಗೆ ಇನ್ನು ಬರೋದಿಲ್ಲ ಅನ್ನಿಸ್ತು. ಅದಕ್ಕೆನಾವು ಗುರುತು ಸಿಗಲಿಲ್ಲಾ ಅಂದೆವು” ಎಂದು ಕೆಲವು ಗೆಳತಿಯರು ಹೇಳಿದರು. ನಾನು ಸಹ ಅದೇ ಕಾರಣ ಕೊಟ್ಟೆ ಅವರ ಮುಂದೆ. ಕೆಲವು ಶಿಕ್ಷಕಿಯರು ಅವನನ್ನು ಗುರುತು ಹಿಡಿದು ಧೈರ್ಯವಾಗಿ ಸತ್ಯ ಹೇಳಿರುವದು ಗೊತ್ತಾಯಿತು.

ಆದರೆ ನನಗೋ..
“ಅಮ್ಮಾ…. ಎಂದ ಆತನ ಕನ್ನಡದ ಧ್ವನಿ ನನ್ನ ನಿರ್ಧಾರವನ್ನು ಬದಲಿಸಿ ಬಿಡ್ತು ಕಣ್ರೆ” ಎಂದು ಕೊನೆಗೂ ಹೇಳಲಾಗಲಿಲ್ಲ .

‍ಲೇಖಕರು avadhi

December 14, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: