‘ಕಾರ್ಟೂನು ಹಬ್ಬ’ದಲ್ಲಿ ಇಣುಕಿ ನೋಡಿದೆ..

ನಮ್ಮ ನಡುವಿನ ಮಹತ್ವದ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರು ಕುಂದಾಪುರದಲ್ಲಿ ಹಮ್ಮಿಕೊಳ್ಳುವ ‘ಕಾರ್ಟೂನು ಹಬ್ಬ’ಕ್ಕೆ ಈಗ 10 ವರ್ಷ.

ದೇಶದ ಎಲ್ಲೆಡೆಯಿಂದ ಕಾರ್ಟೂನಿಸ್ಟರು ಹಾಗೂ ಕಾರ್ಟೂನ್ ಪ್ರಿಯರು ಸದಾ ಉತ್ಸುಕತೆಯಿಂದ ಕಾಯುವ ಹಬ್ಬ ಇದು.

ಈ ಹತ್ತನೆಯ ವರ್ಷ ನೆರೆಯ ಹೊನ್ನಾವರದಿಂದ ಖ್ಯಾತ ರಂಗಕರ್ಮಿ, ‘ರಂಗ ಕೈರಳಿ’ ಕರ್ತೃ ಕಿರಣ್ ಭಟ್ ಭೇಟಿ ನೀಡಿದ್ದರು. ನಾಲ್ಕು ದಿನಗಳ ಈ ಉತ್ಸವದಲ್ಲಿ ಅವರು ಭಾಗವಹಿಸಿದ್ದು ಒಂದು ದಿನ ಮಾತ್ರ. ಅಂದಿನ ಅನುಭವಗಳನ್ನು ಅವಧಿ ಓದುಗರೊಂದಿಗೆ ಇಲ್ಲಿ ಹಂಚಿಕೊಂಡಿದ್ದಾರೆ.

ಕಿರಣ ಭಟ್, ಹೊನ್ನಾವರ

**

“Just doing your job is enough to get you in trouble”-
ಇಂದಿನ ದಿನಮಾನದ ಸ್ಥಿತಿಯನ್ನ ಒಂದೇ ವಾಕ್ಯದಲ್ಲಿ ಕಟ್ಟಿಕೊಡುವಂಥ ಪಂಚ್ ಲೈನ್ ನೊಂದಿಗೆ ಅಂದಿನ ಬೆಳಗಿನ ‘ಮಾಸ್ಟರ್ ಸ್ಟ್ರೋಕ್’ ನ್ನ ಎಳೆದವರು ‘ ಸೌಥ್ ಫಸ್ಟ್’ ನ ಕಾರ್ಯನಿರ್ವಾಹಕ ಸಂಪಾದಕಿ ಅನುಷಾ ರವಿ ಸೂದ್.

ನಾಡಿನ ಎರಡು ಪ್ರಮುಖ ವ್ಯಂಗ್ಯಚಿತ್ರಕಾರರನ್ನ ಎದುರಿಗೂ, ಇನ್ನಿಬ್ಬರನ್ನ ಆನ್ ಲೈನ್ ನಲ್ಲೂ ಇಟ್ಟುಕೊಂಡು ಮುಂದಿನ ಎರಡು ಗಂಟೆಗಳ ಕಾಲ ಅವರು ನಡೆಸಿಕೊಟ್ಟ ‘ಮಾಸ್ಟರ್ ಸ್ಟ್ರೋಕ್’ ನ ಬಿಸಿ ಬಿಸಿ ಚರ್ಚೆಗಳಿಗೆ ನಾವೆಲ್ಲ ಸಾಕ್ಷಿಗಳಾದೆವು.

ಇದು ನಡೆದದ್ದು ಕುಂದಾಪುರದ ಕಾರ್ಟೂನು ಹಬ್ಬದ ಎರಡನೆಯ ದಿನ.

‘ ಸಂಪಾದಕೀಯ ಕಾರ್ಟೂನ್’ ಗಳ ಹಿನ್ನೆಲೆಯಲ್ಲಿ ನಡೆದ ಇಂಥದೊಂದು ಚರ್ಚೆಯಲ್ಲಿ ನಮ್ಮ ಜೊತೆಗಿದ್ದವರು ‘ ಸೌಥ್ ಫಸ್ಟ್’ ನ ಸಂಪಾದಕೀಯ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ. ‘ಟೈಮ್ಸ್ ಆಫ್ ಇಂಡಿಯಾ’ ದ ಸಂದೀಪ್ ಅಧ್ವರ್ಯು, ‘ಡೆಕ್ಕನ್ ಹೆರಾಲ್ಡ್’ ನ ಸಾಜಿದ್ ಕುಮಾರ್, ಇಸ್ಮಾಯಿಲ್ ಲಹರಿ ಮತ್ತು ಸದ್ಯ ‘ಬಿಸಿನೆಸ್ ಇಂಡಿಯಾ’ ದ ಸಂಪಾದಕೀಯ ವ್ಯಂಗ್ಯಚಿತ್ರಕಾರರಾಗಿರುವ ಪಂಜು ಗಂಗೊಳ್ಳಿ.

ಚರ್ಚೆಗೆ ಸಾಕಷ್ಟು ಚೆನ್ನಾಗಿಯೇ ಸಿಧ್ಧರಾಗಿ ಬಂದ ಅನುಷಾ ತಮ್ಮ ನಿರರ್ಗಳವಾದ ಮಾತುಗಳು, ಚೇತೋಹಾರಿ ಶೈಲಿಯಿಂದ ಈ ಕಾರ್ಯಕ್ರಮವನ್ನು ಬಹು ಕಾಲ ನೆನಪಿಟ್ಟುಕೊಳ್ಳುವ ಕಾರ್ಯಕ್ರಮವಾಗಿಸಿಬಿಟ್ಟರು.

“ಕಾರ್ಟೂನಿಸ್ಟ್ ಆಗೋದಕ್ಕೆ ಮನೆಯೋರ್ನೆಲ್ಲ ಅದ್ಹೇಗೆ ಒಪ್ಪಿಸಿದ್ರಿ?” ಇನ್ನುವ ಸರಳ ಪ್ರಶ್ನೆಯೊಂದಿಗೆ ಕಾರ್ಯಕ್ರಮ‌ ಶುರು ಮಾಡಿದ ಅವರು ಹಂತ ಹಂತವಾಗಿ ಕಾರ್ಟೂನು ಜಗತ್ತಿನೊಳಗೆ ನಮ್ಮನ್ನು ಕರೆದುಕೊಂಡು ಹೋದ ರೀತಿ ಅನನ್ಯ.

  • ಸಂಪಾದಕರ ಜೊತೆ ನಿಮ್ಮ ಸಂಘರ್ಷಗಳೇನಾದರೂ ಇದ್ದವೇ?
  • ನೀವು ವಾಸಿಸ್ತಾ ಇರೋ ಸ್ಥಳ ನಿಮ್ಮ ಕೆಲಸದ ಮೇಲೆ ಪ್ರಭಾವ ಬೀರ್ತದೆಯೇ?
  • ಪ್ರತಿ ಕಾರ್ಟೂನುಗಳನ್ನ ಹೊಸದಾಗಿಯೇ ಶುರು ಮಾಡ್ತೀರಾ? ಅಥವಾ ನಿಮ್ಮದೇ ಫೈಲಿನ ಹಳೆಯ ಇಮೇಜ್ ಗಳನ್ನು ಉಪಯೋಗಿಸ್ತೀರಾ?
  • ಕಾರ್ಟೂನ್ ಮುಗಿಸೋಕೆ ಎಷ್ಟು ಸಮಯ ತಗೋತೀರಿ?
  • ಚಿತ್ರ ಬಿಡಿಸ್ತಾ ಇರೋವಾಗ ಯಾವಾಗಲಾದರೂ ‘ಬ್ಲಾಕ್’ ಆಗಿದ್ದೀರಾ? ಆಗಿದ್ರೆ ಆವಾಗ ಏನು ಮಾಡ್ತೀರಿ?
  • *ನೀವ್ಯಾಕೆ ಸರಕಾರದ ವಿರೋಧಿಗಳು?
  • *ಸರಕಾರವನ್ನ ಒಂದೆಡೆ ಇಡೋಣ: ಜನಸಾಮಾನ್ಯರ ಬದುಕು ನಿಮ್ಮ ಕಾರ್ಟೂನುಗಳಲ್ಲಿ ಅದ್ಹೇಗೆ ಚಿತ್ರಿತವಾಗ್ತದೆ?
  • ಕಾರ್ಟೂನಿಗರಿಗೆ ಸೋಷಿಯಲ್ ಮೀಡಿಯಾದಿಂದಾದ ಪ್ರಯೋಜನವೇನು?
  • ಇಂದಿನ ದಿನಗಳು ನಿಮ್ಮ ಪಾಲಿಗೆ ಹೇಗಿವೆ?
  • *ಟ್ರೋಲಿಂಗ್ ನ ಕುರಿತ ನಿಮ್ಮ ಅನುಭವಗಳೇನು?
  • ಈ ಕ್ಷಣ ನಿಮ್ಮೆದುರಿನ ಸವಾಲುಗಳೇನು?

  • ಇಂಥ ಹಲವಾರು ಮೌಲಿಕವಾದ ಪ್ರಶ್ನೆಗಳಿಗೆ ಕಲಾವಿದರು ನಿರರ್ಗಳವಾಗಿ ಉತ್ತರಿಸಿದರು. ಪಂಜು ಗಂಗೊಳ್ಳಿ, ಸತೀಶ್ ಆಚಾರ್ಯ 2024 ರ ಚುನಾವಣೆಯ ಕುರಿತಂತೆ ಸ್ಥಳದಲ್ಲಿಯೇ ಕಾರ್ಟೂನು ಬಿಡಿಸುತ್ತಲೇ ಚರ್ಚೆಯಲ್ಲಿ ಪಾಲ್ಗೊಂಡರು. ಹಿಂದಿನಿಂದ ಇಂದಿನವರೆಗೆ ವ್ಯಂಗ್ಯಚಿತ್ರಗಳು ನಡೆದು ಬಂದ ದಾರಿ, ತಾಂತ್ರಿಕ ಬೆಳವಣಿಗೆಗಳ ಕುರಿತೂ ಚರ್ಚೆ ನಡೆಯಿತು.
  • ‘ನಾವೀಗ ದೇಶದ್ರೋಹಿಗಳಾಗಿಬಿಟ್ಟಿದ್ದೇವೆ’ ಎಂದು ನೋವಿನಿಂದಲೇ‌ ಚರ್ಚೆ ಪ್ರಾರಂಭಿಸಿದ ಸತೀಶ್ ಆಚಾರ್ಯ ಸೋಷಿಯಲ್ ಮೀಡಿಯಾ ಕೂಡ ಈಗ ಕಾರ್ಟೂನುಗಳನ್ನು ಹತ್ತಿಕ್ಕುತ್ತಿರುವ ಕುರಿತೂ ಹೇಳಿದರು.
  • “ಈಗ ಕಲವಾರು ಕಡೆ ಕಾರ್ಟೂನುಗಳು ಕಾರ್ಟೂನಿಸ್ಟ್ ರಿಂದಲೂ ಅಲ್ಲ, ಸಂಪಾದಕರಿಂದಲೂ ಅಲ್ಲ. ಕೊನೆಯ ಪಕ್ಷ ಪತ್ರಕರ್ತರೂ ಅಲ್ಲದ ಇನ್ಯಾರಿಂದಲೋ ನಿರ್ಧರಿತವಾಗ್ತಿವೆ” ಎಂದವರು ಪಂಜು ಗಂಗೊಳ್ಳಿ.
  • “ವಿದ್ಯುನ್ಮಾನ ಸಂಪರ್ಕದ ಕಾರಣಗಳಿಂದಾಗಿ ಯಾವ ಮೂಲೆಯಲ್ಲಿದ್ದರೂ ಆ ಕ್ಷಣದ ಸುದ್ದಿಗಳಿಗೆ ಪ್ರತಿಕ್ರಿಯಾತ್ಮಕವಾದ ಕಾರ್ಟೂನುಗಳನ್ನ ರಚಿಸಬಹುದು” ಎಂದವರು ಸಾಜಿದ್.
  • ಹೇಗೆ ಒಂದಲ್ಲಾ ಒಂದು ಮಾಡುತ್ತ, ಪರೀಕ್ಷೆಗಳನ್ನು ಎದುರಿಸುತ್ತ, ಒಂದೂ ಸರಿಯಾಗಿ ಸಾಧ್ಯವಾಗದೇ ‘ನಾನೇ ಕಾರ್ಟೂನು ಆಗಿಬಿಟ್ಟಿದ್ದೆ’ ನಂತರ ಕಾರ್ಟೂನಿಸ್ಟ್ ಆದೆ ಅಂತ ನಗೆ ಚಟಾಕಿ ಹಾರಿಸಿದವರು ಸಂದೀಪ್.
  • ಐ ಪ್ಯಾಡ್ ನಲ್ಲಿ ಚಿತ್ರ ಬಿಡಿಸುತ್ತಿರುವಾಗ ಸತೀಶ್ ಆಚಾರ್ಯರು ಕೈಗೆ ಹಾಕಿಕೊಂಡಿದ್ದ ‘ ಸ್ವೆಟ್ ಪ್ಯಾಡ್’ ಗಮನ ಸೆಳೆಯಿತು. ಅದರ ಬಗ್ಗೆ ಜೋಕ್ ಮಾಡುತ್ತ ಸಂದೀಪ್ ಹೇಳಿದ ಮಾತು ಮಾರ್ಮಿಕವಾಗಿತ್ತು. “ಈಗ ಕಾರ್ಟೂನಿಸ್ಟ್ ರು ಎಷ್ಟು ಬೆವರುತ್ತಿದ್ದಾರೆಂದರೆ ಬರೇ ಕೈಗಲ್ಲ. ಇಡೀ ದೇಹಕ್ಕೂ ಸ್ವೆಟ್ ಪ್ಯಾಡ್ ಬೇಕು”

ಹೀಗೆ ಕಾರ್ಟೂನಿಸ್ಟ್ ರ ಇಂದಿನ ಸ್ಥಿತಿಗತಿಗಳ ಪರಿಚಯ ಮಾಡಿಸಿದ ಈ ಕಾರ್ಯಕ್ರಮ ನಿಜಕ್ಕೂ ಅಪರೂಪದ್ದಾಗಿತ್ತು.

ಅದೇ ಸಂಜೆ ಬಹುಮಾನ ವಿತರಣೆ ಕಾರ್ಯಕ್ರಮವಿತ್ತು. ಬೇರೆ ಬೇರೆ ವಯಸ್ಸಿನ‌ ಮಕ್ಕಳು ತುಂಬ ಸುಂದವಾಗಿ ರಚಿಸಿದ ಕಾರ್ಟೂನುಗಳ ಪ್ರದರ್ಶನವೂ ಇತ್ತು. ಮಕ್ಕಳ ಜೊತೆ ಅವರ ಮನೆಯವರನ್ನೂ ಕಾರ್ಟೂನು ರಚನೆಯ ಪ್ರಕ್ರಿಯೆಯಲ್ಲಿ ಸೇರಿಸಿಕೊಂಡಿದ್ದು ವಿಶೇಷ. ಡಾ.ಪಿ.ವಿ. ಭಂಡಾರಿ, ಮಮತಾ ರೈ ಬಹುಮಾನ ವಿತರಿಸಿ ಮಾತನಾಡಿದರು. ಊರಿಗೆ ಒಳಿತು ಮಾಡಿದವರಿಗೆ ಸನ್ಮಾನವೂ ಇತ್ತು. ಮಕ್ಕಳು ಅವರಿಗಿಂತಲೂ ದೊಡ್ಡ ಶೀಲ್ಡ್ ಗಳನ್ನು ಹಿಡಿದು ಸಂಭ್ರಮಿಸಿದರು.

ಕುಂದಾಪುರದ ಕಲಾಮಂದಿರದಲ್ಲಿ ನಡೆಯುತ್ತಿರೋ ಈ ಹಬ್ಬದಲ್ಲಿ ಪ್ರಸಿದ್ಧ ವ್ಯಂಗ್ಯಚಿತ್ರಕಾರರ ಕೃತಿಗಳನ್ನ ವ್ಯವಸ್ಥಿತವಾಗಿ ಪ್ರದರ್ಶಿಸಲಾಗಿತ್ತು.
ಪಂಜು ಗಂಗೊಳ್ಳಿ, ಸತೀಶ್ ಆಚಾರ್ಯ, ಚಂದ್ರಶೇಖರ ಶೆಟ್ಟಿ, ರಾಮಕೃಷ್ಣ ಹೇರ್ಳೆ, ರಕ್ಷಿತ್ ಸಸಿಹಿತ್ಲು, ಕೇಶವ ಸಸಿಹಿತ್ಲು, ಜಿ.ಭಾಸ್ಕರ ಕಲೈಕಾರ್, ಚಂದ್ರ ಗಂಗೊಳ್ಳಿ, ಅನನ್ಯ ಶೆಟ್ಟಿ, ಸುಬ್ರಹ್ಮಣ್ಯ ಎಂ.ಎನ್ ಮತ್ತು ಉದಯ ಗಾಂವ್ಕರ್ ರ ಕಲಾಕೃತಿಗಳಿದ್ದವು.

ಇದು ಕಾರ್ಟೂನು ಹಬ್ಬದ ದಶಮಾನೋತ್ಸವದ ವರ್ಷ‌. ಕುಂದಾಪುರ ಹಬ್ಬದ ಜೊತೆ ಜೊತೆಯಲ್ಲೇ ನಡೆಯುವ ಈ ಹಬ್ಬದಲ್ಲಿ ವ್ಯವಸ್ಥಿತವಾಗಿ ಕಾರ್ಯಕ್ರಮಗಳನ್ನ ಸಂಯೋಜಿಸಲಾಗಿತ್ತು. ನಮ್ಮದೇ ಕ್ಯಾರಿಕೇಚರ್ ಗಳನ್ನ ಮಾಡಿಸಿಕೊಳ್ಳಬಹುದಾದ ವ್ಯವಸ್ಥೆಯೂ ಇತ್ತು. ಸೆಲ್ಫೀ ಪಾಯಿಂಟ್ ನಲ್ಲಿ ಹಲವರು ನಿಂತು ಚಿತ್ರ ತೆಗೆಸಿಕೊಳ್ತಿದ್ದರು. ಕುಂದಾಪುರ ಹಬ್ಬದ ಸಂಭ್ರಮ ಇಲ್ಲೂ ಇತ್ತು. ನಾಲ್ಕು ದಿನಗಳ ಈ ಹಬ್ಬವನ್ನು ಕುಂ.ವೀರಭದ್ರಪ್ಪ, ಜಯಪ್ರಕಾಶ ಹೆಗ್ಡೆ ಉದ್ಘಾಟಿಸಿದರು.

‍ಲೇಖಕರು avadhi

December 14, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: