ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದ್ರಿಕಾ ಹೆಗಡೆ ಹೊಸ ಕವಿತೆ – ನಡುರಾತ್ರಿಯ ಸದ್ದುಗಳು…

ಚಂದ್ರಿಕಾ ಹೆಗಡೆ

ನಟ್ಟ ನಡುರಾತ್ರಿಯಲ್ಲಿ
ಎಲ್ಲೋ ಯಾರೋ ಚೀತ್ಕರಿಸಿದ ಸದ್ದು
ಆರ್ತನಾದ…..ಅಸಹಾಯ ರೋದನ..
ಚೀರಿ..ಚೀರಿ….
ಸಹಾಯಕ್ಕಾಗಿ ಮೊರೆಯಿಡುವ ದ್ವನಿ
ಮುಚ್ಚಿದ ಕಿವಿಯನೂ ದಾಟಿ ಕೇಳುತಿದೆ
ರಕ್ತ ಹರಿಯುವ ಸದ್ದು

ಧಡಕ್ಕನೆ ಎಚ್ಚರವಾಗುತ್ತದೆ
ಛೇ ! ಎಂತಹ ಕೆಟ್ಟ ಕನಸು !

ತೆರೆದ ಕಿಟಕಿಯ ಆಚೆ
ತಣ್ಣಗೆ ಮಲಗಿದೆ ರಾತ್ರಿ
ನೀರವ …. ಮೌನ….
ಮುಸುಗಿಕ್ಕಿದೆ ಆಕಾಶ
ತಮ್ಮ ಪಾಡಿಗೆ ತಾವು
ಕಣ್ಮುಚ್ಚಿ ಸುಮ್ಮನಿವೆ ಚುಕ್ಕಿಗಳು
ಮುಖ ಮುಚ್ಚಿ ಕುಳಿತಿದ್ದಾನೆ ಚಂದ್ರ
ಕಣ್ಣೀರಾಗಿದೆ ಬೆಳದಿಂಗಳು.
ತಂಗಾಳಿಯೂ ನಿಟ್ಟುಸಿರಿಡುತಿದೆ

ತಲ್ಲಣಿಸುತ್ತಲೇ ಮತ್ತೆ ನಿದ್ರೆಗೆ ಜಾರುತ್ತೇನೆ.

ಕಣ್ತೆರೆದಾಗ
ಮುಗುಳ್ನಗುತ್ತಿದೆ ಬೆಳಗು
ಅರಳುವ ಹೂವು… ಹಕ್ಕಿಗಳ ಚಿಲಿಪಿಲಿ
ಎಳೆ ಬಿಸಿಲು
ಶಾಲೆಗೆ ಹೊರಟ ಕಂದಮ್ಮಗಳ ಕಲರವ
ಓಡಾಡುವ ವಾಹನಗಳು
ಅಂಬಾ ಎನ್ನುವ ಹಸು
ಹಾಲು ಮಾರುವ ಹೆಂಗಸರು
ಬೀದಿ ತುಂಬಾ ಲವಲವಿಕೆ
ಓಡೋಡುತ್ತಲೇ ಪೇಪರ್ರು ಹಾಕುತ್ತಾನೆ ಹುಡುಗ.

ಬಿಸಿ ಬಿಸಿ ಟೀ ಹೀರಿ ಹಗುರಾಗಿ
ಪತ್ರಿಕೆ ಬಿಡಿಸುತ್ತೇನೆ
ಬೆಚ್ಚಿಬೀಳುತ್ತೇನೆ ಮತ್ತೆ
ಮುಖಪುಟದಲ್ಲಿಯೇ ಇದೆ
ರಾತ್ರಿ ಕೇಳಿದ ಸದ್ದು !
ಅದೇ ಚೀತ್ಕಾರ…. ಆರ್ತನಾದ…
ಒಡಲ ಸೀಳುವ ದ್ವನಿ…..
ಒಳ ಪುಟದ ತುಂಬೆಲ್ಲಾ
ಮೆತ್ತಿ ಕೊಂಡಿದೆ
ಕೆಂಪು ನೆತ್ತರಿನ ಕಲೆ !

‍ಲೇಖಕರು Admin

2 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading