ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದ್ರಿಕಾ ಹೆಗಡೆ ಕವಿತೆ- ಹನುಮಕ್ಕನ ಮೂಗುತಿ…

ಚಂದ್ರಿಕಾ ಹೆಗಡೆ

ಮಸೆದ ಕುಡುಗೋಲು ಹಿಡಿದ ಕೈ ಬೀಸುತ್ತಾ
ನೆರಿಗೆಯೆತ್ತಿ ಸಿಕ್ಕಿಸಿ, ಸೆರಗು ಬಿಗಿದು
ಮುಖದ ತುಂಬಾ ನಗು ತುಳುಕಿಸಿ
ಚಟಪಟನೆ ನಡೆಯುತ್ತಿದ್ದಾಳೆ ಹನುಮಕ್ಕ
ಹೊಲ ಕೊಯ್ಯಲು
ಬೆಳಗಿನ ಎಳೆ ಬಿಸಿಲಿಗೆ ಫಳ್ಳೆಂದು ಹೊಳೆದ
ಅವಳ ಮೂಗುತಿಯ ಮಿಂಚಿಗೆ
ಮರುಳಾದ ಸೂರ್ಯ
ಬಂದು ಕುಳಿತುಬಿಟ್ಟಿದ್ದಾನೆ ಅವಳ ಮೂಗುತಿಯ ಹರಳೊಳಗೆ !

ಜೊತೆಯಲ್ಲಿ ಬರುತ್ತಿರುವ
ಕೆಂಪಮ್ಮ ಲಕ್ಷಮ್ಮರದು ಏನು ಮಾತು , ಏನು ನಗು
ಹೊಲ ಕೊಯ್ಯುವ ಸಂಭ್ರಮ ಹೆಜ್ಜೆಯೊಳಗೆ.
ಹೆಗಲ ಮೇಲಿನ ಟುವಾಲು ಕೊಡವಿ
ತಲೆಗೆ ಸುತ್ತುತ್ತಾ ನಾಗಣ್ಣನಾಡುವ ನಗೆಚಾಟಿಕೆ ಮಾತುಗಳಿಗೆ
ನಗುತ್ತಾ ನಾಚುತ್ತಾ ಸಾಗುವಾಗ
ಹಕ್ಕಿಗಳೂ ಹಾರಿ ಬರುತಿವೆ ಹೊಲಕ್ಕೆ ಕಾಳು ಹೆಕ್ಕಲು
ಹೊಳೆವ ಮೂಗುತಿಯ ಜಾಡು ಹಿಡಿದು ಹನುಮಕ್ಕನ ಹಿಂದೆ.

ಉದ್ದಾನು ಉದ್ದದ ರಸ್ತೆಯೊಂದು ಬಾಯಿ ಕಳೆಯುತ್ತಾ ಬಂತು
ನಗರದ ಕಡೆಯಿಂದ
ನುಂಗು ನುಂಗುತ್ತಾ
ಹೊಲ ಮನೆ ಹಸಿರು ಹಳ್ಳಿಗಳನು
ಢರ್ರೆಂದು ತೇಗುತ್ತಾ ಮುಂದೆ ಮುಂದೆ ಸಾಗಿದ
ಹೆದ್ದಾರಿಯ ಆಸುಪಾಸೆಲ್ಲಾ ಈಗ
ಭಾರೀ ಕಟ್ಟಡಗಳು, ಫ್ಲೈ ಓವರುಗಳು
ಮಾಲ್, ಮೆಟ್ರೋ ಅಪಾರ್ಟ್ ಮೆಂಟ್ಗಳು …..

ತಂಪು ಗಾಜನ್ನೇರಿಸಿ
ರಿಯಾ ದಿಯಾ ರೋಹನ್ ವಿಹಾನರು
ಭರ್ ಭರ್… ಎಂದು ಕಾರುಗಳಲ್ಲಿ ಹೋಗುವಾಗ.
ಉರಿ ಬಿಸಿಲಿನಲ್ಲಿ
ತಮ್ಮದೇ ಊರಿನ ರಸ್ತೆ ದಾಟಲಾರದೇ
ಕಂಗಾಲಾಗಿ ನಿಂತಿದ್ದಾರೆ ಕೆಂಪಮ್ಮ ಲಕ್ಷಮ್ಮರು
ತಲೆಗೆ ಕಟ್ಟಿದ ಟುವಾಲು ಕಿತ್ತೆಸೆದು
ಶಿಸ್ತಾಗಿ ಯೂನಿಫಾರ್ಮ್ ತೊಟ್ಟು ನಾಗಣ್ಣ
ಸೂಪರ್ ಮಾರ್ಕೆಟ್ ಗೇಟು ಕಾಯುತ್ತಿದ್ದಾನೆ.

ಟ್ರಾಫಿಕ್ ಜಾಮಿನಿಂದ ಗಿಜಿಗುಡುವ
ಸರ್ಕಲ್ಲಿನ ಮಧ್ಯದಲ್ಲಿ
ಎಲ್ಲೋ ಬಿದ್ದುಹೋದ ತನ್ನ ಮೂಗುತಿ
ಹುಡುಕುತ್ತಿದ್ದಾಳೆ ಹನುಮಕ್ಕ.
ಕಳೆದು ಹೋದ ಮೂಗುತಿಯ ಹರಳು
ಹುಡುಕಿ ಸಾಕಾದ ಸೂರ್ಯ
ಅಲ್ಲೇ ಎತ್ತರದ ಐ ಟಿ ಕಟ್ಟಡದ ಹೊಳೆಯುವ ಗಾಜಿಗೆ
ತಲೆ ಚಚ್ಚಿಕೊಂಡಿದ್ದಾನೆ.

‍ಲೇಖಕರು Admin

29 December, 2022

4 Comments

  1. ಸುಬ್ರಾಯ ಮತ್ತೀಹಳ್ಳಿ.

    ಪುಟ್ಟಕ್ಕನ ಹೈ ವೇ, ಸಿನಿಮಾವನ್ನು ನೆನಪಿಸುವ ಪ್ರಸ್ತುತ ಕವನ, ಗ್ರಾಮಗಳು ನಗರದ ರಾಕ್ಷಸ ಒಡಲಲ್ಲಿ ಕರಗಿ, ರಕ್ತವಾಗಿ ಹರಿಯುವ ಕ್ರೂರ ವಾಸ್ತವವನ್ನು ಪರಿಣಾಮಕಾರಿಯಾಗಿ ಚಿತ್ರಿಸಿದೆ. ಸೂರ್ಯ ಖುಷಿಯಲ್ಲಿ ಕುಳಿತು ನಲಿಯುತ್ತಿದ್ದ, ಮೂಗುತಿ ಕಳೆದು ಹೋಗಿದೆ. ಬಹುಮಹಡಿ ಗಾಜಿಗೆ ಸೂರ್ಯ ತಲೆ ಚಚ್ಚಿಕೊಳ್ಳುವ ರೂಪಕ ಮನಕಲಕುತ್ತದೆ. ಧನ್ಯವಾದಗಳು ಚಂದ್ರಿಕಾ.

    • Chandrika hegade

      ಧನ್ಯವಾದಗಳು

  2. prathibha nandakumar

    ತುಂಬಾ ಚೆನ್ನಾಗಿದೆ

    • Chandrika hegade

      ಧನ್ಯವಾದಗಳು ಮೇಡಂ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading