ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದ್ರಿಕಾ ಹೆಗಡೆ ಕವಿತೆ- ಧನ್ಯವಾದ…

ಚಂದ್ರಿಕಾ ಹೆಗಡೆ

ನಾನು ಪ್ರೀತಿಸುತ್ತೇನೆ
ನನ್ನ ವಾಶಿಂಗ್ ಮಶೀನನ್ನು
ರಾಶಿ ರಾಶಿ ಬಟ್ಟೆಗಳಿದ್ದರೂ
ಚೂರೂ ಗೊಣಗದೆ ತೊಳೆದುಬಿಡುತ್ತದೆ
ಅದನ್ನು ಕಂಡು
ನನ್ನ ಸೊಂಟ ಬೆನ್ನು ತೋಳುಗಳು
ಸಂತೋಷದಿಂದ ನರ್ತಿಸುತ್ತವೆ.

ನಾನು ಪ್ರೀತಿಸುತ್ತೇನೆ
ನನ್ನ ಮಿಕ್ಸಿಯನ್ನು ಕೂಡಾ
ನನ್ನಮ್ಮ ಅತ್ತೆಯಂದಿರು ಇಡೀ ದಿನ
ಒರಳಲ್ಲಿ ರುಬ್ಬುತಿದ್ದುದನ್ನು
ಕ್ಷಣಾರ್ಧದಲ್ಲಿ ರುಬ್ಬಿಕೊಡುತ್ತದೆ
ನನ್ನ ಕೈಗಳು ಖುಷಿಯಾಗಿ ಕವಿತೆ ಬರೆಯುತ್ತವೆ.

ನನ್ನ ಗ್ಯಾಸ್ ಸ್ಟೋವನ್ನೂ ನಾನು
ಪ್ರೀತಿಸುತ್ತೇನೆ
ಕಟ್ಟಿಗೆಯ ಒಲೆ ಹಚ್ಚಿ ಬೆಂಕಿಯೂದಿ
ಇಡೀ ದಿನ ಹೊಗೆಯಲ್ಲಿ ಕುರುಡಾಗುವುದನ್ನು
ಅದು ತಪ್ಪಿಸುತ್ತಿದೆ
ನನ್ನ ಕಣ್ಣುಗಳೀಗ
ಅಡಿಗೆಮನೆಯ ಕಿಟಕಿಯಾಚೆಗೂ
ಬಹುದೂರ ನೋಡುತ್ತವೆ.

ಎಲ್ಲಕ್ಕಿಂತ ಹೆಚ್ಚಾಗಿ
ನಾನು ಪ್ರೀತಿಸುತ್ತಿದ್ದೇನೆ
ನನ್ನ ನ್ಯಾಪ್ ಕಿನ್ ಗಳನ್ನು
ಕೊಳಕು ವಾಸನೆಯ ಬಟ್ಟೆಗಳಿಂದ
ನನ್ನ ಬಗ್ಗೆ ನಾನೇ ಅಸಹ್ಯಿಸಿಕೊಳ್ಳುವುದನ್ನು
ಅದೀಗ ತಪ್ಪಿಸಿಬಿಟ್ಟಿದೆ.
ನನ್ನ ಕಾಲುಗಳೀಗ ಆ ದಿನಗಳಲ್ಲೂ
ಆತ್ಮವಿಶ್ವಾಸದಿಂದ ನಡೆಯುತ್ತಿವೆ.

ಧನ್ಯವಾದಗಳನ್ನು ಹೇಳಬಯಸುತ್ತೇನೆ ನಾನು
ಈ ಎಲ್ಲವನ್ನೂ ಕಂಡುಹಿಡಿದ ಮಹಾನುಭಾವರಿಗೆ
ಮತ್ತು
ಇನ್ನೂ ಕಂಡು ಹಿಡಿಯಲೆಂದು ಬಯಸುತ್ತೇನೆ…

ಕಾದಿರಿಸಿದ್ದೇನೆ
ಕೊನೆಯಲ್ಲಿ ಒಂದು ಧನ್ಯವಾದವನ್ನು,
ನನ್ನಂತಹ ಒಬ್ಬ ಹೆಣ್ಣು
ಮತ್ತು ನನ್ನ ಹೆಣ್ಣುಮಕ್ಕಳು
ನಟ್ಟನಡುರಾತ್ರಿಯ ಕತ್ತಲಲ್ಲೂ
ಭಯವಿಲ್ಲದೇ ನಡೆಯುವಂತಹ
ಒಂದು ಬೆಳಕಿನ ದಾರಿಯನ್ನು
ಕಂಡುಹಿಡಿಯುವಂತವರಿಗಾಗಿ.

‍ಲೇಖಕರು Admin

19 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading