ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡ್‌ ರಿಟರ್ನ್ಡ್ – ಟ್ರಾಫಿಕ್ ಮತ್ತು ಪೊಲೀಸ್…

ಬರಹದ ಹಿನ್ನೆಲೆ
1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ ಅಲ್ಲಿನ ಬದುಕಿನ ಬಗ್ಗೆಯೂ ತಿಳಿದುಕೊಳ್ಳುವ ಅವಕಾಶ ದೊರೆಯಿತು. ಅವಧಿ ಮುಗಿಸಿ 1997ರಲ್ಲಿ ನಮ್ಮ ದೇಶಕ್ಕೆ ಹಿಂದಿರುಗಿ ಬಂದಾಗ ಸ್ವಾಭಾವಿಕವಾಗಿಯೇ ಅಲ್ಲಿನ ಅನುಭವದ ಹಿನ್ನೆಲೆ ಇಲ್ಲಿನ ಬದುಕನ್ನು ಮೊದಲಿಗಿಂತ ತುಸು ವಿಭಿನ್ನ ದೃಷ್ಟಿಯಲ್ಲಿ ನೋಡುವಂತೆ ಮಾಡಿತ್ತು.

ಬರವಣಿಗೆಯಲ್ಲಿ ಆಗಲೇ ಎರಡು ಮೂರು ದಶಕಗಳ ಕೃಷಿ ಮಾಡಿದ್ದ ನನಗೆ ಆ ಅನಿಸಿಕೆಗಳನ್ನು ಕೂಡಲೇ ಬರಹ ರೂಪಕ್ಕೆ ಇಳಿಸಬೇಕೆನಿಸಿದರೂ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿ ಬಂದ ಕಾರಣದಿಂದ ಉಂಟಾದ ಸಮಯದ ಕೊರತೆಯ ಜೊತೆಗೆ ಸಹಜ ಉದಾಸೀನವೂ ಸೇರಿ ಈ ಕೆಲಸ ಮುಂದೆ ಹೋಗುತ್ತಲೇ ಇತ್ತು. ಅನಿಸಿಕೆಗಳು ಬರಹ ರೂಪ ಪಡೆಯಲು ಹತ್ತು ವರ್ಷಗಳೇ ಬೇಕಾದುವು. ಅಂತೂ 2009ನೇ ಇಸವಿಯಲ್ಲಿ ನಾನು ಸರ್ವೀಸಿನಿಂದ ನಿವೃತ್ತಿಯಾಗುವವರೆಗೆ ಕಾಯಬೇಕಾಯ್ತು. 2010 -11ರಲ್ಲೇ ಬರೆದರೂ ಅದನ್ನು ಪ್ರಕಟಿಸುವ ಆತುರವನ್ನೇನೂ ತೋರಿಸದ್ದರಿಂದ ಹಸ್ತಪ್ರತಿ ಹಾಗೆಯೇ ಉಳಿದು ಹೋಗಿತ್ತು. 

4

ಟ್ರಾಫಿಕ್ ಮತ್ತು ಪೊಲೀಸ್


ಮಜ ಬೂತಾದ ನಿಸ್ಸಾನ್ ಕಾರನ್ನು ಡ್ರೈವ್ ಮಾಡಿಕೊಂಡು ಕಿಂಗ್ಸ್ ಬರಿ ಹೈನಲ್ಲಿ ಹೋಗುತ್ತಿದ್ದೆ. ಜೀಬ್ರಾ ಕ್ರಾಸಿಂಗ್‌ನಲ್ಲಿ ದಾಟಲೆಂದು ಅರ್ಧ ರಸ್ತೆಯನ್ನು ಕ್ರಮಿಸಿ ಬಂದಿದ್ದ ಪೋಲೀಸಿನವನಿಗೆ ಅನುವು ಮಾಡಿಕೊಡುವ ಸಲುವಾಗಿ ಕಾರನ್ನು ನಿಲ್ಲಿಸಿದ್ದೆ. ಸೀದಾ ಹೋಗುತಿದ್ದ ಆ ಮಹಾಶಯ ಒಮ್ಮೆಲೇ ತಿರುಗಿಬಂದವ `ಗುಡ್ ಮಾರ್ನಿಂಗ್ ಸರ್’ ಎಂದಿದ್ದ. ನನ್ನ ಒಳ್ಳೆತನವನ್ನು ಗುರುತಿಸಿದನಲ್ಲ ಎಂದು ಒಳಗೊಳಗೇ ಬೀಗುತ್ತ ಗಂಭೀರವಾಗಿ ಅವನ ಸೆಲ್ಯೂಟನ್ನು ಸ್ವೀಕರಿಸಿ ನಾನೂ `ಗುಡ್ ಮಾರ್ನಿಂಗ್’ ಎಂದಿದ್ದೆ.

ನನ್ನ ಮರು ನಮಸ್ಕಾರವನ್ನು ತೆಗೆದುಕೊಂಡು ವಾಪಾಸು ಹೋಗುವುದು ಬಿಟ್ಟು ಅವ ತೆರೆದ ಗಾಜಿನೊಳಗೆ ಕೈತೂರಿಸುತ್ತ ಏನಾಗುತ್ತಿದೆಯೆಂದು ತಿಳಿಯುವುದರೊಳಗೆ ಸೀಟ್ ಬೆಲ್ಟನ್ನು ಎಳೆದು ಕೊಡುತ್ತ `ದಯವಿಟ್ಟು ಧರಿಸಿಕೊಳ್ಳಿ’ಎಂದು ಬಹಳ ವಿನೀತನಾಗಿ ಹೇಳಿ ಹೋಗಿಯೇ ಬಿಟ್ಟಿದ್ದ ನನ್ನ ಬೀಗಿದ್ದ ಮುಖ ಕಪ್ಪಿಡುತ್ತಿದ್ದುದನ್ನು ನೋಡುವುದಕ್ಕೂ ಕಾಯದೆ.

ಇನ್ನೊಮ್ಮೆ ಅಷ್ಟು ಬಳಕೆಯಿಲ್ಲದ ಸೆಂಟ್ರಲ್ ಲಂಡನ್ ರಸ್ತೆಗಳಲ್ಲಿ ಅಲ್ಲಿನ ಅರಿವು ಚನ್ನಾಗಿದ್ದ ಒಬ್ಬರ ಕಾರನ್ನು ಹಿಂಬಾಲಿಸುತ್ತ ಹೋಗುತ್ತಿದ್ದೆ. ಲಕ್ಷ÷್ಯವೆಲ್ಲ ಅವರ ಕಾರಿನ ಮೇಲೆ. ಸ್ವಲ್ಪದರಲ್ಲಿ ತಪ್ಪಿದರೂ ಆ ಸೆಂಟ್ರಲ್ ಲಂಡನ್ನಿನ ರಸ್ತೆಗಳಲ್ಲಿ ನಾವು ಕಂಗಾಲು. ಹಾಗಾಗಿ ಅವರನ್ನು ಹಿಂಬಾಲಿಸುವ ಗಡಿಬಿಡಿಯಲ್ಲಿ ಬಸ್ ಲೇನ್ ಎಂಬುದನ್ನೂ ಗಮನಿಸದೆ ಡ್ರೈವ್ ಮಾಡಿಕೊಂಡು ಹೋಗುತ್ತಿದ್ದೆ. ಎಲ್ಲಿಂದಲೋ ಪ್ರತ್ಯಕ್ಷನಾಗಿದ್ದ ಬಿಳೀ ಡ್ರೆಸ್ ಹಾಕಿದ್ದ ಬಿಳೀ ಪೋಲೀಸ್! ಹೆಂಡತಿ ಮಕ್ಕಳು ಜತೆಯಲ್ಲಿಯೇ ಇದ್ದರು ಮತ್ತು ಅವನನ್ನು ನೋಡಿ ತೀರಾ ಹೆದರಿಯೂ ಹೋಗಿದ್ದರು. ಆದರೆ ಅವ ಹತ್ತಿರ ಬಂದವ ಶಾಂತವಾಗಿಯೆ ಕೇಳಿದ್ದ
`ಏನು ಮಾಡುತ್ತಿದ್ದೀರಿ..’
ನಾನೆಂದಿದ್ದೆ `ಬಸ್ ಲೇನಿನಲ್ಲಿ ಡ್ರೈವ್ ಮಾಡುತ್ತಿದ್ದೇನೆ’
‘ಅದು ತಪ್ಪೆಂದು ಗೊತ್ತಿಲ್ಲವೆ ನಿಮಗೆ’ ಅವನ ಮರು ಪ್ರಶ್ನೆ.
`ಹೌದು ಗೊತ್ತಿದೆ ಆದರೆ ಮುಂದಿನ ಕಾರನ್ನು ಫಾಲೋ ಮಾಡುವ ಗಡಿಬಿಡಿಯಲ್ಲಿ ಗಮನಿಸಲಿಕ್ಕೆ
ಆಗಲಿಲ್ಲ’
`ಎಲ್ಲಿಂದ ಬರುತ್ತಿದ್ದೀರಿ..’
`ಕಿಂಗ್ಸ್ ಬರಿಯಿಂದ’
`ಓ.ಕೆ. ಈಗ ಹೋಗಿ. ಇನ್ನು ಮುಂದೆ ಹೀಗೆ ಮಾಡಬೇಡಿ’.
ಬದುಕಿದೆಯಾ ಬಡಜೀವವೇ ಎಂದು ಅಲ್ಲಿಂದ ಒಂದೇ ಓಟ ಹೊಡೆದಿದ್ದೆ.



ಸೀಟ್ ಬೆಲ್ಟ್ ಕಟ್ಟಿಕೊಳ್ಳದೆ ಕಾರಿನಲ್ಲಿ ಕುಳಿತುಕೊಳ್ಳುವುದು ಬಸ್ ಲೇನಿನಲ್ಲಿ ಡ್ರೈವ್ ಮಾಡುವುದು ಸಿಗ್ನಲ್ ಜಂಪ್ ಮಾಡುವುದು ಇವೆಲ್ಲಾ ಅಪರಾಧಗಳು. ಯಾರೂ ಉದ್ದೇಶಪಟ್ಟು ಈ ಕಾನೂನುಗಳನ್ನು ಉಲ್ಲಂಘಿಸುವುದಿಲ್ಲ. ಹಾಗೆ ಅಕಸ್ಮಾತ್ ಉಲ್ಲಂಘಿಸಿದರೆ ಪ್ರತಿಯೊಂದು ತಪ್ಪಿಗೂ ಒಂದೊಂದು ಪೆನಾಲ್ಟಿ ಪಾಯಿಂಟು. ಹಾಗೆ ಪೆನಾಲ್ಟಿ ಪಾಯಿಂಟುಗಳ ಸಂಖ್ಯೆ ೯ಕ್ಕೆ ಮುಟ್ಟಿತೆಂದರೆ ಅದು ತನ್ನಿಂದ ತಾನೇ ಹತ್ತಾಗುತ್ತದೆ ಮತ್ತು ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತದೆ. ಕುಡಿದು ಡ್ರೈವ್ ಮಾಡಿದರಂತೂ ಒಂದೇ ಸಲಕ್ಕೆ ಐದು ಪೆನಾಲ್ಟಿ ಪಾಯಿಂಟುಗಳು ಮತ್ತು ಎರಡೇ ಸಲಕ್ಕೆ ಡ್ರೈವಿಂಗ್ ಲೈಸೆನ್ಸ್ ಕ್ಯಾನ್ಸೆಲ್. ಇಂಗ್ಲಂಡಿನಂತಹ ದೇಶದಲ್ಲಿ ಡ್ರೈವಿಂಗ್ ಲೈಸನ್ಸ್ ಕಳೆದುಕೊಂಡ ಮೇಲೆ ಇದ್ದೂ ಸತ್ತಂತೆ.

ಆದರೆ ಅದೇ ಇಂಡಿಯಾಕ್ಕೆ ಬಂದ ಹೊಸತರಲ್ಲಿ ಬೆಂಗಳೂರಿನ ಬೇಗಮ್ ಮಹಲ್ ರಸ್ತೆಯಲ್ಲಿ ಲಾರಿಯೊಂದರ ಬಲ ಭಾಗದಲ್ಲಿ ಹೋಗುತ್ತಿದ್ದಾಗ ಫಕ್ಕನೆ ಸಿಗ್ನಲ್ ಬಂದು ಆ ದೊಡ್ಡ ಲಾರಿ ನಿಂತಾಗ ಬೇರೆ ದಾರಿಯೇ ಇಲ್ಲದೆ ನಾನೂ ಕಾರನ್ನು ನಿಲ್ಲಿಸಲೇಬೇಕಾಗಿ ಬಂತು. ಲಾರಿಯವ ಮುಂದಿನವರನ್ನು ಯಾರನ್ನೋ ತಪ್ಪಿಸಲು ಬಲಕ್ಕೆ ವಾಲಿದ್ದ. ಹಾಗಾಗಿ ಹಿಂದೆಯೂ ಹೋಗಲಾರದೆ ಮುಂದೆಯೂ ಹೋಗಲಾರದೆ ತುಸುವೇ ಹಳದಿ ಗೆರೆಯ ಮೇಲೆ ನನ್ನ ಕಾರಿನ ಬಲ ಟಯರು ತಗಲುವಂತೆ ನಿಲ್ಲಿಸಿದ್ದೆ. `ಕ್ರಾಸ್ ಮಾಡಿಲ್ಲವಲ್ಲ. ಅದೂ ನನ್ನ ತಪ್ಪೇನೂ ಇಲ್ಲ. ಆ ಟ್ರೈಲರ್ ಲಾರಿಯವನ ಅಜಾಗ್ರತೆಯಿಂದಾಗಿ ನಾನು ಸಿಕ್ಕಿಬಿದ್ದದ್ದು’ ಎಂದು ಎಷ್ಟು ಹೇಳಿದರೂ ಕೇಳದ ಪೋಲೀಸ್ ಎಸ್.ಐ. ನನ್ನ ಇಂಗ್ಲಂಡಿನ ಡ್ರೈವಿಂಗ್ ಲೈಸನ್ಸ್ ತೋರಿಸಿದರೂ ಒಪ್ಪಿರಲಿಲ್ಲ. ನೂರು ರೂಪಾಯಿ ದಂಡವನ್ನು ಪೀಕಿಸಿಯೇ ಬಿಟ್ಟಿದ್ದ. ಮತ್ತೆರಡು ದಿನಗಳಿಗೆ ಅದೇ ದಾರಿಯಲ್ಲಿ ಎಚ್ಚರಿಕೆಯಿಂದ ಡ್ರೈವ್ ಮಾಡುತ್ತ ಹೋದರೆ ಅಲ್ಲಿ ಹಳದಿ ಗೆರೆಯೇ ನಾಪತ್ತೆ. ಜತೆಗೇ ಕಳ್ಳನಂತೆ ಗೋಡೆಯಡ್ಡ ನಿಂತು ಕಾಯುತ್ತಿರುತ್ತಿದ್ದ ಪೋಲೀಸ್ ಇನ್‌ಸ್ಪೆಕ್ಟರು ಸಹ.

ಕೆಲ ವರ್ಷಗಳ ಹಿಂದೆ ಈಗಿನ ಚೆನ್ನೈ ಆಗಿನ್ನೂ ಮದ್ರಾಸ್ ಆಗಿದ್ದ ಕಾಲ. ನನ್ನ ಹಿರಿಯ ಸಹೋದ್ಯೋಗಿಯೊಬ್ಬರೊಂದಿಗೆ ಸಾಂತೋಮ್ ಹೈ ವೇ ನಲ್ಲಿ ಅಡ್ಯಾರ್ ಕಡೆಗೆ ಡ್ರೈವ್ ಮಾಡಿಕೊಂಡು ಹೋಗುತ್ತಿದ್ದೆ. ಅದೊಂದು ಸರ್ಕಲ್ಲಿನಲ್ಲಿ(ಆ ಸರ್ಕಲ್ಲಿನ ಹೆಸರು ನೆನಪಿಲ್ಲ) ಸಿಗ್ನಲ್ ಕ್ಲಿಯರಾಗಿತ್ತು. ಪಕ್ಕದಲ್ಲಿ ಕುಳಿತಿದ್ದ ಅವರು ಹೋಗಿ ಹೋಗಿ ಎಂದು ಗಡಿ ಬಿಡಿ ಮಾಡುತ್ತಿದ್ದರೂ ನಿಧಾನವಾಗಿ ಮುಂದುವರಿಯುತ್ತಿದ್ದೆ. ಬಲ ಭಾಗದ ರಸ್ತೆಯಿಂದ ಸೀದಾ ಕೆಂಪು ದೀಪವನ್ನು ನೋಡುತ್ತ ನೋಡುತ್ತ ಒಬ್ಬ ಸೈಕಲ್ ಸವಾರ ಬಂದವನು ನಾನು ತಪ್ಪಿಸುವುದರೊಳಗೆ ಕಾರಿನ ಬಂಪರಿಗೆ ಸೈಕಲನ್ನು ಹೊಡೆಸಿ ಬಿದ್ದು ಬಿಟ್ಟಿದ್ದ. ಕಾರು ನಿಲ್ಲಿಸಿದ್ದೆ.

ಟ್ರಾಫಿಕ್ ಪೋಲೀಸ್ ಸಿಗ್ನಲನ್ನು ಕಂಟ್ರೋಲ್ ಮಾಡುವುದನ್ನು ಬಿಟ್ಟು ಓಡಿ ಬಂದಿದ್ದ. ಹಾಗೆ ಬಂದವ ಮೊದಲು ಮಾಡಿದ ಕೆಲಸ `ಸಾರ್ ಒಂದೈವತ್ತು ಕೊಟ್ಟು ಮುಗಿಸಿಬಿಡಿ..’ ಬಿದ್ದ ಹುಡುಗನನ್ನು ಎತ್ತಲು ಹೋಗಲಿಲ್ಲ. ಸೈಕಲ್ಲಿನ ಸುದ್ದಿಗೂ ಹೋಗಲಿಲ್ಲ. ನನಗೆ ಸಿಟ್ಟು ಬಂದಿತ್ತು. `ಅಲ್ಲಯ್ಯ ನೀನು ಸಿಗ್ನಲ್ ಮೂಲಕ ಟ್ರಾಫಿಕ್ ಕಂಟ್ರೋಲು ಮಾಡುವವನು. ನೀನೇ ನೋಡಿದ್ದೀಯ.

ಕೆಂಪು ದೀಪ ಬಂದ ಎಷ್ತು ಹೊತ್ತಿನ ನಂತರ ಅವನು ಇತ್ತ ಬಂದಿದ್ದಾನೆ’ `ಹೌದು ಸಾರ್, ತಪ್ಪೇನೋ ಅವನದ್ದೇ. ಆದರೆ ಅವನು ಬಡವ. ಕೊಡಿ ಸಾರ್. ಸೈಕಲ್ ಬೇರೆ ಮುದ್ದೆಯಾಗಿದೆ’ ಇನ್ನೂ ಚರ್ಚೆ ಮಾಡುತ್ತ ನಿಂತರೆ ಬೇಡಿಕೆಯ ಮೊತ್ತ ಹೆಚ್ಚಾಗಬಹುದೆಂದು ಹೆದರಿ ಐವತ್ತು ತೆತ್ತು ಜಾಗ ಖಾಲಿ ಮಾಡಿದ್ದೆ! ಅಷ್ಟರಲ್ಲಿ ಮೈ ಕೊಡವಿ ಎದ್ದ ಹುಡುಗ ಯಾರೋ ತುಳಿದು ಸರಿ ಮಾಡಿದ್ದ ಸೈಕಲ್ಲನ್ನು ಹತ್ತಿ ಹೊರಡಲು ಅಣಿಯಾದವನನ್ನು ಪೋಲೀಸ್ ಪಕ್ಕಕ್ಕೆ ಕರೆದಿದ್ದ. ಜತೆಯಲ್ಲಿದ್ದ ಹಿರಿಯರು ಆಫೀಸರು ಅನುಭವದ ಮಾತು ಹೇಳಿದ್ದರು `ಒಂದೈದಾದರೂ ಆ ಹುಡುಗನಿಗೆ ಸಿಕ್ಕಿದರೆ ಅವನ ಪುಣ್ಯ’ ಎಂದು. `ಹಾಂ..’ ಎಂದು ನಾನು ಬಾಯಿ ತೆರೆದರೆ `ಮತ್ತೇನು ಆ ದುಡ್ಡೆಲ್ಲ ಆ ಪೋಲೀಸಿನವನಿಗೆ’ ಎಂದೂ ಸೇರಿಸಿದ್ದರು.

ಇದು ಸುಮಾರು ಹದಿನೈದು ವರ್ಷಗಳ ಹಿಂದೆ ನಾನು ಕರ್ನಾಟಕದಿಂದ ಬಡ್ತಿ ಹೊಂದಿ ಮದ್ರಾಸಿಗೆ ಹೋದ ಹೊಸದರಲ್ಲಿ. ಈಗ ಪರಿಸ್ಥಿತಿಯೇನಾದರೂ ಬದಲಾಗಿದೆಯೆಂದು ಅನ್ನಿಸುತ್ತಿಲ್ಲ ನನಗೆ. ಆದರೆ ನಾನು ಮಾತ್ರ ಬುದ್ಧಿವಂತನಾಗಿದ್ದೇನೆ ಮತ್ತು ಅಂತಹ ಸಂದರ್ಭದಲ್ಲಿ ಎದುರಿನವರಿಗಿಂತ ಸ್ವರವನ್ನು ದೊಡ್ಡದು ಮಾಡಲು ಕಲಿತಿದ್ದೇನೆ.

ಇನ್ನು ಮುಂದಿನ ವಾರಕ್ಕೆ |

‍ಲೇಖಕರು Avadhi

December 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: