ಆ ಪುಸ್ತಕದ ಹೆಸರೇ ನನ್ನನ್ನು ಇನ್ನಿಲ್ಲದಂತೆ ಸೆಳೆಯಿತು. ಜಯನಗರ ಕಾಂಪ್ಲೆಕ್ಸ್ ನ ಬೀದಿ ಅಂಗಡಿಯಲ್ಲಿ ನನ್ನ ಮಗಳು ಟ್ವಿಲೈಟ್, ವ್ಯಾಂಪೈರ್ ಡೈರೀಸ್ ಮಾದರಿಯ ಪುಸ್ತಕಗಳನ್ನು ಹುಡುಕುತ್ತಿದ್ದಳು. ಅಂಥ ಪುಸ್ತಕಗಳು ಮತ್ತು ಸಿಡ್ನಿ ಶೆಲ್ಡನ್ ಥರದ ಲೇಖಕರ ಕಾದಂಬರಿಗಳು ಹಾಗೂ ಈಚಿನ ಟ್ರೆಂಡ್ ಆದ ವ್ಯಕ್ತಿತ್ವ ವಿಕಸನದ ಪುಸ್ತಕಗಳನ್ನ ಹೊರತುಪಡಿಸಿ ಬೇರಾವ ಪುಸ್ತಕಗಳೂ ಕಾಣದ್ದರಿಂದ ನಾನು ಒಂದು ಬಗೆಯ ಅನ್ಯಮನಸ್ಕತೆಯಿಂದ ನಿಂತಿದ್ದೆ. ಮಗಳು ಪುಸ್ತಕವೊಂದನ್ನು ಕೈಗೆತ್ತಿ ಕೊಂಡಾಗ ಆ ಪುಸ್ತಕ ಕಂಡಿತು: ‘The Railway Children.’ ಅರೆ, ಈ ಹೆಸರಿನ ಪುಸ್ತಕವೂ ಇದೆಯೇ ಎಂಬ ಆಶ್ಚರ್ಯದಿಂದ ಕೈಗೆತ್ತಿಕೊಂಡೆ. ನೀಲಿ ಕ್ಯಾಲಿಕೋ ಜ್ಯಾಕೆಟ್ ನ ಸುಮಾರು ಇನ್ನೂರು ಪುಟಗಳ ಪುಸ್ತಕ. Children’s classics ಮಾಲಿಕೆಯಲ್ಲಿ ಪ್ಯಾರಗನ್ ಪ್ರಕಾಶನದಿಂದ ಬಂದದ್ದು. ಲೇಖಕರ ಹೆಸರು ಇ. ನೆಸ್ಬಿಟ್ (E. Nesbit). ನೀಲಿ ಹೊದಿಕೆಯ ಮೇಲಿನ ಹೊಂಬಣ್ಣದ ಅಕ್ಷರಗಳು ಹೊಳೆಯುತ್ತಿದ್ದರೂ ಹಲವು ಅಕ್ಷರಗಳ ಆ ಕೃತಿ ಕಾಲದ ಹೊಡೆತಕ್ಕೆ ಸಿಕ್ಕಿ ಮುರುಕಾಗಿದ್ದವು. ಒಳಗೆ ಹಾಳೆಗಳು ಕೂಡ ಮಸುಕಾಗಿದ್ದವು. ಮೊದಲ ಪುಟದಲ್ಲಿಯೇ ಶಾಲಾ ಮಕ್ಕಳು ಬರೆದಂತೆ ಕಾಣುತ್ತಿದ್ದ ಆರ್ ಮೃದುಲಾ, ಎರಡನೆಯ ಪುಟದಲ್ಲಿ ಮೆಘಲ. ಬಹುಶಃ ಯಾರಿಗಾದರೂ ಟೆಕ್ಸ್ಟ್ ಬುಕ್ ಆಗಿತ್ತೇನೋ. ಪುಸ್ತಕ ಬೀದಿಯಲ್ಲಿಯೇ ನಾಲ್ಕಾರು ವರ್ಷಗಳಿಂದ ಬದುಕಿದಂತಿತ್ತು. ಅದನ್ನು ನೋಡಿ ನನ್ನ ಮಗಳು ‘ಯಾವ ಕಾಲದ ಪುಸ್ತಕಾನಪ್ಪ’ ಎಂದು ನಸುನಕ್ಕಳು.
‘ಕಳೆದ ಶತಮಾನದ್ದು’ ಎಂದು ನಾನು ನಕ್ಕೆ. ೧೯೦೬ರಲ್ಲಿ ಪ್ರಕಟವಾದ ಪುಸ್ತಕದ ೧೯೯೩ರ ಮುದ್ರಣ ನನ್ನ ಕೈಯಲ್ಲಿತ್ತು. ಹೀಗೆ ಕೊಂಡು ತಂದ ಪುಸ್ತಕವನ್ನು ಕೂಡಲೇ ಓದುವುದು ನನ್ನ ಅಭ್ಯಾಸ. ಆದರೆ ಅದೇಕೋ ಈ ಪುಸ್ತಕ ತಂದಾಗಿನಿಂದ ಇದನ್ನು ಓದಲು ದಿನಗಟ್ಟಲೆ ಪುರುಸೊತ್ತೇ ಸಿಗಲಿಲ್ಲ. ಮೊನ್ನೆ ಗುಡ್ ಫ್ರೆಡೆ ದಿನ ಓದಲೇಬೇಕೆಂದು ಹಠ ತೊಟ್ಟು ಓದಲಾರಂಭಿಸಿದೆ. ಈ ರೈಲ್ವೆ ಮಕ್ಕಳು ನನ್ನಂತ ರೈಲ್ವೆ ಮಕ್ಕಳಲ್ಲ ಅಂದರೆ ರೈಲ್ವೆ ಕುಟುಂಬಕ್ಕೆ ಸೇರಿದವರಲ್ಲ. ಅಪ್ಪ-ಅಮ್ಮನೊಂದಿಗೆ ಲಂಡನ್ ನಲ್ಲಿ ವಾಸಿಸುತ್ತಿದ್ದ ಮಕ್ಕಳು. ಹಿರಿಯವಳು ರೋಬರ್ಟಾ, ಮಧ್ಯದವನು ಪೀಟರ್, ಕಡೆಯವಳು ಫಿಲಿಸ್. ಕ್ರಮವಾಗಿ ಹನ್ನೆರಡು, ಹತ್ತು, ಎಂಟು ವರ್ಷದ ಮಕ್ಕಳು. ಎಲ್ಲ ನವ ನಾಗರೀಕ ಸೌಲಭ್ಯಗಳು ಲಭ್ಯವಿದ್ದ ಮನೆಯಲ್ಲಿ ವಾಸ. ಮನೆಗೆ ಹತ್ತಿರವಿದ್ದ ಉತ್ತಮ ಶಾಲೆಯಲ್ಲಿ ಓದು. ಅಪ್ಪನಿಗೆ ಸರ್ಕಾರದ ವಿದೇಶಾಂಗ ಕಚೇರಿಯಲ್ಲಿ ಕೆಲಸ. ಮನೆಯಲ್ಲಿ ಆಳುಕಾಳುಗಳಿದ್ದರೂ ಹೊರಗೆ ಸುತ್ತುವ ಗೀಳಿಗೆ ಬೀಳದೆ ಮಕ್ಕಳನ್ನ ತೀವ್ರ ಅನುರಕ್ತಿಯಿಂದ ಬೆಳೆಸುತ್ತಿದ್ದ ಅಮ್ಮ. ಮಕ್ಕಳ ಆಟ ಮುಗಿಯುತ್ತಿದ್ದಂತೆ ಸಂಜೆ ಅವುಗಳ ಓದು- ಬರಹಕ್ಕೆ ನೆರವಾಗುವಳು. ಮಕ್ಕಳು ಶಾಲೆಗೇ ಹೋಗಿದ್ದಾಗ ಬಿಡುವಿನ ಸಮಯದಲ್ಲಿ ಮಕ್ಕಳಿಗಾಗಿ ಸುಂದರವಾದ ಕಥೆಗಳನ್ನ ಕವನಗಳನ್ನ ಬರೆದು ಸಂಜೆಯ ಚಹಾದ ವೇಳೆಯಲ್ಲಿ ಅವನ್ನು ಓದಿ ಮಕ್ಕಳನ್ನು ರಂಜಿಸುತ್ತಿದ್ದವಳು. ಬಯಸಿದ್ದನ್ನೆಲ್ಲ ಪಡೆಯುತ್ತಿದ್ದ ಅದೃಷ್ಟವಂತ ಮಕ್ಕಳು.
ಅಂದು ಸಂಜೆ ಅಪ್ಪನೂ ಮನೆಗೆ ಬಂದಿದ್ದಾನೆ. ಮೂರು- ನಾಲ್ಕು ದಿನದ ಕಚೇರಿ ಓಡಾಟ ಮುಗಿಸಿ. ಮಕ್ಕಳಿಗೆ ಸಂಭ್ರಮ. ಮೂವರೂ ಅಪ್ಪ- ಅಮ್ಮನೊಂದಿಗೆ ಖುಷಿಯಾಗಿ ಆಡುತ್ತಿದ್ದಾರೆ. ಆಗ ಬಾಗಿಲು ತಟ್ಟಿದ ಶಬ್ದ. ‘ಯಾರೋ ಬಂದಿದ್ದಾರೆ, ಅವರನ್ನು ಲೈಬ್ರರಿಯಲ್ಲಿ ಕೂರಿಸಿದ್ದೇನೆ ನಿಮ್ಮನ್ನು ನೋಡಬೇಕಂತೆ’- ಕೆಲಸದವಳು ಬಂದು ಹೇಳಿದಳು. ‘ಯಾರೋ ಚಂದಾವಸೂಲಿಯವರಿರಬೇಕು ಕೂಡಲೇ ಕಳಿಸಿ ಬನ್ನಿ – ಅಮ್ಮ ಪಿಸುನುಡಿದಳು.
ಆದರೆ ಬಂದವರು ಬೇಗ ಹೊರಡಲೇ ಇಲ್ಲ. ಅಪ್ಪ ಮತ್ತು ಆ ಅಪರಿಚಿತರ ನಡುವೆ ಏನೋ ವಾಗ್ವಾದ ಬೇರೆ ನಡೆಯುತ್ತಿದ್ದ ಹಾಗಿತ್ತು. ಯಕ್ಷಣಿ ಕಥೆಯೊಂದನ್ನ ಹೇಳುತ್ತಿದ್ದ ಅಮ್ಮ ಮತ್ತು ಕೇಳುತ್ತಿದ್ದ ಮಕ್ಕಳ ಕಿವಿಗಳಿಗೆ ಆ ಶಬ್ದ ಕೇಳುತ್ತಿತ್ತು. ಅಷ್ಟರಲ್ಲಿ ‘ಮೇಡಂ ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಕೆಲಸದವಳು ಅಮ್ಮನನ್ನ ಕರೆದಳು. ‘ಮೇಡಂ, ಏನೋ ಕೆಟ್ಟ ಸುದ್ದಿ ಇದ್ದಂತಿದೆ, ಯಜಮಾನರ ಮುಖ ನೋಡಲಾಗುತ್ತಿಲ್ಲ..’ ಕೆಲಸದವಳು ಯಾವುದಕ್ಕೂ ಸಿದ್ದವಾಗಿರಿ ಎಂದು ಅಮ್ಮನಿಗೆ ಹೇಳಿದಳು.
ಸ್ವಲ್ಪ ಹೊತ್ತಿನ ನಂತರ ಹೊರಗೆ ಕಾರೊಂದು ಬಂದ ಶಬ್ದ. ನಂತರ ಬಾಗಿಲು ಮುಚ್ಚಿದ ಸದ್ದು. ಅಮ್ಮ ಒಳ ಬಂದಳು. ಆಕೆಯ ಮುಖ ಬಿಳಿಚಿಕೊಂಡಿತ್ತು. “ಮಲಗುವ ಸಮಯವಾಯ್ತು ಹೋಗಿ ಮಕ್ಕಳೇ’ ಎಂದು ಆಕೆ ನುಡಿದರೆ ಕಿರಿಯವಳಾದ ಫಿಲಿಸ್ “ಕಥೆ ಅರ್ಧಕ್ಕೆ ನಿಲ್ಲಿಸಿಬಿಟ್ಟೆ. ಅಲ್ಲದೆ ಅಪ್ಪ ಮನೆಗೆ ಬಂದಿರುವುದರಿಂದ ಇವತ್ತು ತಡವಾಗಿ ಮಲಗಲು ಹೇಳಿದ್ದೆ” ಎಂದಳು. “ಹೌದು ಆದರೆ ಅಪ್ಪ ಯಾವುದೋ ವ್ಯವಹಾರದ ಮೇಲೆ ಅವರೊಂದಿಗೆ ಹೊರಗೆ ಹೋಗಿದ್ದಾರೆ” ರುತ್, ಮಕ್ಕಳನ್ನ ಮಲಗಿಸು ಎಂದು ಅಮ್ಮ ಸ್ವಲ್ಪ ಒರಟಾಗಿ ಹೇಳಿದಳು. ಮಕ್ಕಳು ಮುಂದೆ ಬಂದು ಅಮ್ಮನನ್ನ ತಬ್ಬಿಕೊಂಡು ಗುಡ್ ನೈಟ್ ಹೇಳಿದರು. ಹಿರಿಯವಳಾದ ರೋಬರ್ಟಾ “ಅಮ್ಮ ಏನೂ ಕೆಟ್ಟ ಸುದ್ದಿ ಇಲ್ಲ ತಾನೇ ಸಾವಿನ ಸುದ್ದಿ ಅಲ್ಲ, ಆಲ್ವಾ” ಎಂದು ಅಮ್ಮನ ಕಿವಿಯಲ್ಲಿ ಮೆಲುದನಿಯಲ್ಲಿ ನುಡಿದಳು. “ಇಲ್ಲ, ಇಲ್ಲ ಅಂಥದ್ದೇನಿಲ್ಲ ಹೊರಡಿ, ಹೊರಡಿ” ಎನ್ನುತ್ತಾ ಗ್ಯಾಸ್ ಆರಿಸಲು ಅಡುಗೆ ಮನೆಯತ್ತ ಹೋದಳು.
“ನನ್ನನ್ನ ಏನೂ ಕೇಳಬೇಡ ನನಗೇ ಸುಳ್ಳು ಹೇಳೊಕ್ಕೆ ಬರಲ್ಲ. ನಿಮಗೆ ಒಂದೆರಡು ದಿನದಲ್ಲಿ ಗೊತ್ತಾಗುತ್ತೆ…” ಪಿಟರ್ ಗೆ ರುತ್ ಹೇಳುತ್ತಿದ್ದ ಮಾತು ಅಮ್ಮನ ಕಿವಿಗೂ ಬಿಟ್ಟು. ಅಂದು ಮಧ್ಯರಾತ್ರಿಯ ಸಮಯದಲ್ಲಿ ಅಮ್ಮ ಮಕ್ಕಳ ಕೊನೆಗೆ ಬಂದು ಮೂವರೂ ಮಕ್ಕಳನ್ನೂ ಮುದ್ದಿಸಿ ಚುಂಬಿಸಿದಳು. ರೋಬರ್ಟಾಗೆ ಎಚ್ಚರವಾಯ್ತು.ಆದರೆ ಅಮ್ಮನ ಬಿಕ್ಕು ಕೇಳಿ ಆಕೆ ಮೇಲೇಳಲಿಲ್ಲ. ಅವಳು ಅಳುತ್ತಿರುವುದನ್ನ ನಾವು ನೋಡುವುದು ಅಮ್ಮನಿಗೆ ಇಷ್ಟವಿಲ್ಲ ಅಂದುಕೊಂದವಳು ಏನೂ ಮಾತಾಡದೆ ಹಾಗೆ ಮಲಗಿದಳು.
ಮರುದಿನ ಮುಂಜಾನೆ ಮಕ್ಕಳು ಬ್ರೆಕ್ ಫಾಸ್ಟ್ ಗಾಗಿ ಬಂದಾಗ ಅಲ್ಲಿ ಅಮ್ಮ ಇರಲಿಲ್ಲ.
‘ಅಮ್ಮ ಸಿಟಿಗೆ ಹೋಗಿದ್ದಾರೆ’- ರುತ್ ಹೇಳಿದಳು.
“ಏನೋ ಸಮಸ್ಯೆಯಾಗಿದೆ, ನಿಮಗೆ ಇಷ್ಟರಲ್ಲೇ ಗೊತ್ತಾಗುತ್ತೆ’ ಅಂತ ರುತ್ ರಾತ್ರಿ ಹೇಳಿದಳು
“ನೀನು ಅವಳನ್ನು ಕೇಳಿದೆಯಾ”
“ಹೌದು, ನೀವು ಅಮ್ಮನ ಬಗ್ಗೆ ಕೇರ್ ಮಾಡದೆ ಹೋಗಿ ಮಲಗಿ ಬಿಟ್ಟರೆ? ನಿಮ್ಮಂತಿರಲು ಮನಸ್ಸು ಒಪ್ಪಲಿಲ್ಲ ”
“ಅಮ್ಮ ನಮ್ಮ ಬಳಿ ಹೇಳದಿದ್ದಾಗ ಅಂಥ ವಿಷಯಗಳ ಬಗ್ಗೆ ಸೇವಕರನ್ನ ಕೇಳುವುದು ತಪ್ಪು”
“ಹೌದು ಅಕ್ಕ ಹೇಳುವುದು ಸರಿ”
‘ನೀನು ಬಿಡಮ್ಮ ಮಿಸ್ ಗುಡ್ಡಿ, ಗುಡ್ಡಿ’
“ನಾನೇನು goody ಅಲ್ಲ. ರೊಬರ್ಟಾ ಹೇಳಿದ್ದು ಸರಿ ಅನ್ನಿಸಿತು ಹೇಳಿದೆ”
“ಅವಳು ಹೇಳುವುದು ಯಾವಾಗಲೂ ಸರಿ-ಅವಳ ಪ್ರಕಾರ”
“ಪ್ಲೀಸ್ ಬೇಡ ಇಂಥ ಸಣ್ಣ ವಿಚಾರಕ್ಕೆಲ್ಲ ಜಗಳ ಆಡೋದು ಬೇಡ”
“ಎಲ್ಲ ಶುರು ಮಾಡಿದವರು ಯಾರು”
“ನಾನೇ”
“ಸರಿ ಮತ್ತೆ”-ದಿಗ್ವಿಜಯ ಸಾಧಿಸಿದವನಂತೆ ಪೀಟರ್ ಮೇಜು ಬಡಿದ.
ಆದರೆ ಇಂಥ ಪೀಟರ್ ಶಾಲೆಗೆ ಹೊರಟಾಗ ಸಪ್ಪಗಿದ್ದ ರೊಬರ್ಟಾ ಬಳಿ ಬಂದು cheer up ಎಂದು ಬೆನ್ನು ತಟ್ಟಿದ.
ಮಕ್ಕಳು ಮಧ್ಯಾಹ್ನದ ಉಟಕ್ಕೆ ಬಂದಾಗ ಅಮ್ಮ ಇನ್ನೂ ಸಿಟಿಯಿಂದ ಬಂದಿರಲಿಲ್ಲ, ಸಂಜೆ ಟೀ ಸಮಯದಲ್ಲಿಯೂ. ಅಮ್ಮ ಮನೆಗೆ ಬಂದಾಗ ರಾತ್ರಿಯಾಗಿತ್ತು. ಸುಸ್ತಾಗಿ ಬಾಡಿ ಹೋಗಿದ್ದಳು. ಬಂದವಳೇ ಈಸಿಚೇರಿನ ಮೇಲೆ ಕುಸಿದಳು. ಫಿಲಿಸ್ ಅಮ್ಮನ ಹ್ಯಾಟ್ ನ ಪಿನ್ ಗಳನ್ನ ತೆಗೆದಳು. ರೂಬರ್ತಾ ಅವಳ ಕೈಯಿಂದ ಗ್ಲೌಸ್ ಅನ್ನ ಹೊರತೆಗೆದಳು. ಅಷ್ಟರಲ್ಲಿ ಪೀಟರ್ ಅಮ್ಮನ ಶೂಗಳನ್ನ ಬಿಚ್ಚಿ ವೆಲ್ವೆಟ್ ಚಪ್ಪಲಿಗಳನ್ನ ತೊಡಿಸಿದ. ಅಮ್ಮನ ಹಣೆಗೆ ತೈಲವನ್ನ ಮೃದುವಾಗಿ ಸವರಿದಳು.
“ನನ್ನ ಪ್ರೀತಿಯ ಪುಟಾಣಿಗಳೇ ನಿಮಗೊಂದು ವಿಷಯ ತಿಳಿಸಬೇಕು: ನಿನ್ನೆ ರಾತ್ರಿ ಬಂದಿದ್ದರಲ್ಲ ಆ ಅಪರಿಚಿತರು, ತುಂಬಾ ಕೆಟ್ಟ ಸುದ್ದಿ ತಂದಿದ್ದರು. ಅಪ್ಪ ಕೆಲವು ದಿನಗಳು ಮನೆಯಿಂದ ಹೊರಗೆ ಇರಬೇಕಾಗುತ್ತೆ. ನನಗೇ ಆ ಬಗ್ಗೆ ಟೆನ್ಶನ್ ಆಗಿದೆ. ನೀವು ನನಗೆ ಸಹಾಯ ಮಾಡಬೇಕು. ನಾನು ಹೊರಗೆ ಹೋದಾಗ-ನಾನು ತುಂಬಾ ಹೊತ್ತು ಮನೆ ಆಚೆಯೇ ಇರಬೇಕಾಗುತ್ತದೆ. ಅಂಥ ಸಮಯದಲ್ಲಿ ನೀವು ಪರಸ್ಪರ ಜಗಳ ಆಡಬಾರದು. ನಿಮ್ಮ ಪಾಡಿಗೆ ಓದಿಕೊಂಡು, ಆಟ ಆಡಿಕೊಂಡು ಒಳ್ಳೆಯ ಮಕ್ಕಳಂತಿರಬೇಕು”
“ಇಲ್ಲಪ್ಪ ನಾವು ಯಾವತ್ತೂ ಜಗಳ ಆಡಲ್ಲ” – ಮಕ್ಕಳೆಲ್ಲ ಒಟ್ಟಾಗಿ ಹೇಳಿದರು.
“ಮತ್ತೆ ಇನ್ನೊಂದು ಮಾತು. ನೀವು ಈ ಬಗ್ಗೆ ನನ್ನ ಹತ್ತಿರವಾಗಲೀ, ಬೇರೆಯವರ ಬಳಿಯಾಗಲೀ ಏನನ್ನೂ ಕೇಳಬಾರದು”
“ಸಾರಿ ಅಮ್ಮ ನಾನು ನಿನ್ನೆ ರಾತ್ರಿ ಈ ಬಗ್ಗೆ ರುತ್ ಳನ್ನು ಕೇಳಿಬಿಟ್ಟೆ”
“ಏನು ಹೇಳಿದಳು”
‘ಇಷ್ಟರಲ್ಲೇ ಗೊತಾಗುತ್ತೆ ಎಂದಳು”
“ನಿಮಗೆ ಅದು ತಿಳಿಯುವ ಅವಶ್ಯಕತೆ ಇಲ್ಲ. ವ್ಯವಹಾರದ ವಿಚಾರ ನಿಮಗೆ ತಿಳಿಯಲ್ಲ ಆಲ್ವಾ”
“ಹೌದು. ಆದರೆ ಅಮ್ಮಾ, ಅಪ್ಪ ಸರ್ಕಾರಿ ಕೆಲಸದಲ್ಲಿ ಇರೋದಲ್ವಾ, ಸರ್ಕಾರದ ವಿಚಾರಾನ?”
“ಹುಂ, ಸರಿ ಮಕ್ಕಳೇ ಮಲಗುವ ಸಮಯ ಆಯ್ತು ನಡೀರಿ, ಏನೂ ಚಿಂತಿಸಬೇಡಿ ಎಲ್ಲಾ ಒಳ್ಳೇದೆ ಆಗುತ್ತೆ”
“ಹಾಗಿದ್ದರೆ ಅಮ್ಮ ನೀನು ಏನೂ ಯೋಚಿಸಬೇಡ we will all ಬೇ as good as gold” – ಇಲ್ಲಿಯವರೆಗೂ ಸುಮ್ಮನಿದ್ದ ಪುಟಾಣಿ ಫಿಲಿಪ್ ನುಡಿದಳು.
ಮಲಗಲು ಹೋಗುವಾಗ ಪೀಟರ್ ರೋಬರ್ಟಾಳಿಗೆ ಹೇಳಿದ: “ನೀನು ಯಾವಾಗಲೂ ಹೇಳ್ತಿದ್ದೆಯಲ್ಲ ‘ಜೀವನ ಡಲ್ ಆಗಿದೆ. ಕಥೆ ಕಾದಂಬರಿಗಳಲ್ಲಿ ಆಗೋ ಥರ ನಮ್ಮ ಲೈಫ್ ಲ್ಲಿ ಏನೂ ಆಗ್ತಿಲ್ಲ’ ಅಂತ… ಈಗ ಆಗಿದೆ ನೋಡು!”
“ಆದರೆ ಅಮ್ಮನನ್ನ ದುಃಖಕ್ಕೆ ತಳ್ಳುವಂಥದ್ದು ಏನಾದರೂ ಆಗಬೇಕೆಂದು ನಾನು ಬಯಸಿರಲಿಲ್ಲ” – ರೂಬರ್ಟಾ ನೋವಿನಿಂದ ನುಡಿದಳು.
******
ಪರಿಸ್ಥಿತಿ ಬದಲಾಗಲಿಲ್ಲ. ಅಮ್ಮ ಬಹುಪಾಲು ಸಮಯ ಮನೆಯ ಹೊರಗೆ ಇರುತ್ತಿದ್ದಳು. ಮಕ್ಕಳನ್ನು ನೋಡಿಕೊಳ್ಳಲು ಅವರ ದೊಡ್ಡಮ್ಮ ಬಂದಳು. ಒಮ್ಮೆ ಪೀಟರ್ ಏನೋ ತಮಾಷೆ ಮಾಡಿದಾಗ ಸಿಟ್ಟಿಗೆದ್ದ ರುತ್ “ಏಯ್ ನೀನು ಸರಿಯಾದ ಬುದ್ಧಿ ಕಲಿಯದಿದ್ದರೆ ಉದ್ಧಾರ ಆಗಲ್ಲ… ನಿಮ್ಮ ಅಪ್ಪ ಇರೋ ಜಾಗಕ್ಕೇ ಹೋಗುತ್ತಿಯ” ಎಂದಳು. ರಾತ್ರಿ ಅಮ್ಮ ಮನೆಗೆ ಬಂದಾಗ ರೊಬರ್ಟಾ ಇದನ್ನೇ ಮುಗ್ಧವಾಗಿ ಅಮ್ಮನಿಗೆ ವರದಿ ಒಪ್ಪಿಸಿದಳು. ಮರುದಿನವೇ ಅಮ್ಮ ರುತ್ ಳನ್ನ ಹೊರಗಟ್ಟಿದಳು. ಅಂದೇ ಹಾಸಿಗೆ ಹಿಡಿದ ಅಮ್ಮನನ್ನ ನೋಡಲು ಡಾಕ್ಟರ್ ಬಂದಾಗ ಮಕ್ಕಳೆಲ್ಲ ಅಮ್ಮನ ಸುತ್ತ ಕುಳಿತು ಬಿಕ್ಕಿ ಬಿಕ್ಕಿ ಅತ್ತರು.
ಮೂರು ದಿನಗಳ ನಂತರ ಸುಧಾರಿಸಿಕೊಂಡ ಅಮ್ಮ ಕೆಳಗಿಳಿದು ಬಂದು ಮಕ್ಕಳೊಂದಿಗೆ ತಿಂಡಿ ತಿನ್ನುತ್ತಾ “ಈಗ ಎಲ್ಲ ಇತ್ಯರ್ಥವಾಯ್ತು ಮಕ್ಕಳೇ. ನಾವು ಈ ಮನೆ ಖಾಲಿ ಮಾಡುತ್ತಿದ್ದೇವೆ. ಬಹುದೂರ ಹೋಗುತ್ತಿದ್ದೇವೆ. ತುಂಬಾ ಸುಂದರವಾದ ಸ್ಥಳ, ವಿಶಾಲವಾದ ಮನೆ, ತೋಟ, ಸನಿಹದಲ್ಲೇ ರೈಲ್ವೆ ಸ್ಟೇಶನ್ . ಅದೊಂದು ಪುಟ್ಟ ಊರು.” ಅಂದು ರಾತ್ರಿಯೇ ಹೊಸ ಜಾಗಕ್ಕೆ, ಹೊಸ ಮನೆಗೆ, ದೂರ ದೂರಿಗೆ ಎಲ್ಲರೂ ಹೊರಟರು.
ಹೀಗೆ ಬಂದು ಇಂಗ್ಲಂಡಿನ ಹಳ್ಳಿಗಾಡಿನ ಒಂದು ರೈಲ್ವೆ ಸ್ಟೇಶನ್ ಬಳಿ ಇದ್ದ Three Chimenies ಎಂಬ ಮನೆಯಲ್ಲಿ ಬೀಡುಬಿಟ್ಟರು. ಒಬ್ಬ ಸ್ಟೇಶನ್ ಮಾಸ್ತರ್, ಒಬ್ಬ ಪೋರ್ಟರ್, ಒಂಭತ್ತು – ಹದಿನೈದರ ಟ್ರೇನಿನ ಒಬ್ಬ ಪ್ರಯಾಣಿಕ (The old Gentleman) ಅರೆ ಪ್ರಜ್ಞಾವಸ್ಥೆಯಲ್ಲಿ ರೈಲ್ವೆ ನಿಲ್ದಾಣದಲ್ಲಿ ಸಿಕ್ಕ ಸೆಪಾನ್ಸ್ಕಿ ಎಂಬ ರಷ್ಯನ್ ಲೇಖಕ- ಈ ಪಾತ್ರಗಳೊಂದಿಗೆ ಮೂವರು ಮಕ್ಕಳು ರೈಲ್ವೆ ಜಗತ್ತಿನಲ್ಲಿ ವಿಹರಿಸುವುದರೊಂದಿಗೆ, ತಂದೆಗಾಗಿ ಕಾಯುವುದರೊಂದಿಗೆ ಕಥೆ ಮುಂದುವರಿಯುತ್ತದೆ.
******
ಇದನ್ನು ಓದಿ ಮುಗಿಸಿದ ನಂತರ ಬರೆದವನ ಬಗ್ಗೆ ತಿಳಿದುಕೊಳ್ಳೋಣ ಎಂದರೆ ಕಾದಂಬರಿಯಲ್ಲಿ ಯಾವ ಮಾಹಿತಿಯೂ ಇರಲಿಲ್ಲ. ಲೇಖಕನೋ, ಲೇಖಕಿಯೋ ಎಂಬುದೂ ತಿಳಿಯಲಿಲ್ಲ. ನಂತರ ನೆಟ್ ನಲ್ಲಿ ನೋಡಿದರೆ ಪರಮಾಶ್ಚರ್ಯಾವಾಯ್ತು. ‘The Railway Children’ ೧೯೦೬ ರಲ್ಲಿ ಪ್ರಕಟವಾದಾಗಿನಿಂದ ಇಲ್ಲಿಯವರೆಗೆ ‘Out of Print’ ಆಗಿಲ್ಲವಂತೆ’. ಅಂದರೆ ಕೃತಿ ಅಷ್ಟೊಂದು ಮರು ಮುದ್ರಣಗಳನ್ನು ಕಂಡಿದೆ. ಇದೊಂದು ಮಕ್ಕಳ ಕ್ಲಾಸಿಕ್ ಅಷ್ಟೇ ಅಲ್ಲ. ಈ ಕೃತಿಯನ್ನು ಆಧರಿಸಿ ಬಿಬಿಸಿ ದೂರದರ್ಶನ ಮೂರು ಬಾರಿ ಪ್ರತ್ಯೇಕ ಧಾರಾವಾಹಿಗಳನ್ನ ನಿರ್ಮಿಸಿದೆ. ಬಿಬಿಸಿ ರೇಡಿಯೋ ನಾಟಕವನ್ನ ಪ್ರಸಾರ ಮಾಡಿದೆ. ವಿಭಿನ್ನ ಸಿನೆಮಾಗಳು ಬಂದಿವೆ. ಇದನ್ನು ಬರೆದ ಲೇಖಕಿ ಎಡಿತ್ ಟ್ ನೆಸ್ಬಿಟ್ ಹ್ಯಾರಿ ಪಾಟರ್ ನ ಸೃಷ್ಟಿಕರ್ತೆ ರೌಲಿಂಗ್ ಗಿಂತ ಒಂದು ಶತಮಾನ ಮೊದಲೇ ಬ್ರಿಟಿಷ್ ಮಕ್ಕಳಿಗೆ ಮಾಟ, ಮಂತ್ರದ ಯಕ್ಷಿಣಿ ಲೋಕವನ್ನ ಪರಿಚಯಿಸಿದವಳು. ಮಿಗಿಲಾಗಿ ಆಕೆ ಸೃಷ್ಟಿಸಿರುವ ಮೂರು ಮಕ್ಕಳ ರೈಲ್ವೆ ಜಗತ್ತು ಮೋಹಕವಾದದು.
ನಾನು ನೋಡಿದ ಹಿಂದಿನ ದಿನವಷ್ಟೇ ಮಾಹಿತಿಗಳು (last modified on 23rd April 2011 at 20.02) update ಆಗಿದ್ದವು. ನನಗೇ ಈ ಬಗ್ಗೆ ತಿಳಿದಿರಲಿಲ್ಲ, ಅಷ್ಟೆ!








0 Comments