ಗೋವಿಂದ ಹೆಗಡೆ
ತೀರದ ತಿಳಿವಿನ ಕುತೂಹಲವೇ ಕಾರಂತರೆಂದರೆ
ಕೊನೆಯಿರದ ಕನ್ನಡದ ಕೈಂಕರ್ಯವೇ ಕಾರಂತರೆಂದರೆ
ದೇಶ ದೇಶಗಳ ಸುತ್ತಿ ಕೋಶ ಓದುತ್ತ ಹೋದವರು
ಎಲ್ಲ ‘ಕನ್ನಡಿಸುವ’ ತುರ್ತು- ಹಂಬಲವೇ ಕಾರಂತರೆಂದರೆ
ಚೋಮ ದುಗ್ಗಿ ಕುಡಿಯರನ್ನು ನಮ್ಮೆದೆಗೆ ತಂದವರು
ಎಲ್ಲ ದಮನಿತರ ಘನತೆಯ ಸ್ವರವೇ ಕಾರಂತರೆಂದರೆ

ಹುಚ್ಚು ಮನಸ್ಸಿಗೆ ಎಷ್ಟು ಮುಖಗಳು ಹೇಳು ಗೆಳೆಯ,
ಇರುವನ್ನು ಬೆಳಗುವ ನಿತ್ಯ ಎಚ್ಚರವೇ ಕಾರಂತರೆಂದರೆ
‘ಪಡೆದುದಕ್ಕಿಂತ ಕೊಟ್ಟಿದ್ದು ಹೆಚ್ಚಾಗಬೇಕು, ಬಾಳಲ್ಲಿ’
ಬದುಕನ್ನು ಪೊರೆಯುವ ದಿವ್ಯ ಮಂತ್ರವೇ ಕಾರಂತರೆಂದರೆ
ಪರಿಧಿಯನ್ನು ವಿಸ್ತರಿಸುತ್ತ ನಡೆದರಿವರು ‘ಜಂಗಮ’
ಅಳತೆಯ ಪಟ್ಟಿಗೆ ನಿಲುಕದ ಜೀವವೇ ಕಾರಂತರೆಂದರೆ






0 Comments